Shashidhara Halady Column:ಸೀ.ಸ್ಟೌ. ಅಡುಗೆ ಗೊತ್ತೇ ನಿಮಗೆ !
ಶಾಖದಿಂದ ಬೇಯುವ ಅಡುಗೆಗೆ ಸೌದೆ ಒಲೆಯ ಶಾಖವಾದರೇನು, ಗ್ಯಾಸ್ ಅಥವಾ ವಿದ್ಯುತ್ ಒಲೆಯ ಶಾಖವಾದರೇನು, ಒಟ್ಟಿನಲ್ಲಿ ಬೆಂದರಾಯಿತು, ರುಚಿ ಅದೇ ತಾನೆ ಎಂದು ನಾವು ಪ್ರಶ್ನಿಸುವುದರಲ್ಲಿ ಲಾಜಿಕ್ ಇದೆ. ಆದರೂ, ಅದೇಕೋ, ಇಂದಿಗೂ ದಾವಣಗೆರೆ ಬೆಣ್ಣೆ ದೋಸೆ ಮೊದಲಾದ ತಿನಿಸುಗಳನ್ನು ಸೌದೆ ಒಲೆಯಲ್ಲಿ ಮಾಡಿ ತಿಂದರೆ, ಭಾರೀ ರುಚಿ ಎಂಬ ಅಭಿಪ್ರಾಯ, ಬೆಂಗಳೂರಿನಂತಹ ನಗರದಲ್ಲೂ ಇದೆ!
-
ಶಶಿಧರ ಹಾಲಾಡಿ
ಎಲ್ಲಾ ಹಳ್ಳಿಗಳಲ್ಲೂ ಸೀಮೆ ಎಣ್ಣೆ ನಿರಾತಂಕವಾಗಿ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಅಂದಿನ ರಾಜಕಾರಣಿಗಳು ಭಾಷಣ ಮಾಡುತ್ತಿದ್ದರು; ಇಂದು ಅದೇ ರೀತಿ ಗ್ಯಾಸ್ ಕೊರತೆ ಆಗದಂತೆ ನೋಡುಕೊಳ್ಳುತ್ತೇವೆ ಎಂಬ ಆಶ್ವಾಸನೆ ದೊರಕುತ್ತಿದೆ!
ಮನೆಯ ಸುತ್ತಲೂ ಮರಗಳು, ಒಂದು ಫರ್ಲಾಂಗ್ ನಡೆದರೆ ಕಾಡು, ಈ ರೀತಿ ಹಸಿರಿನ ಸಿರಿಯೇ ತುಂಬಿಕೊಂಡಿದ್ದ ಹಳ್ಳಿಯೊಂದರಲ್ಲಿ ವಾಸವಿದ್ದ ನನಗೇಕೆ ಸೀಮೆ ಎಣ್ಣೆ ಸ್ಟೌ (ಸೀ.ಸ್ಟೌ) ಬಳಸಿ ಮಾಡುವ ಅಡುಗೆಯ ಉಸಾಬರಿ ಎಂದು ನೀವು ನನ್ನನ್ನು ಪ್ರಶ್ನಿಸಬಹುದು. ನಿಮ್ಮ ಪ್ರಶ್ನೆಯಲ್ಲಿ ಸತ್ಯಾಂಶ ಉಂಟು - ನಮ್ಮ ಹಳ್ಳಿ ಮನೆಯ ಸುತ್ತಲೂ ಮರಗಿಡಗಳು ತುಂಬಿದ ಜಾಗ, ಎದುರು ಗದ್ದೆ; ಆದ್ದರಿಂದ ಸೌದೆಗೆ ಅಭಾವವಿಲ್ಲ. ಆದರೆ, ರಸ್ತೆಗೆ ದೂರ ಇದ್ದುದರಿಂದ ಅಲ್ಲಿ ಅಡುಗೆಗೆ ಸೌದೆ ಒಲೆ ಅನಿವಾರ್ಯ ಮತ್ತು ಅದೇ ಪ್ರಧಾನ. ವಿಶೇಷದ ಅಡುಗೆಗೂ ಸೌದೆಯ ಒಲೆಯ ಬಳಕೆ. ಈಚೆಗೆ ಪೇಟೆಯ ಕೆಲವು ಹೋಟೆಲಿನವರು ‘ನಾವು ಸೌದೆ ಒಲೆಯಲ್ಲಿ ಪದಾರ್ಥ ತಯಾರಿಸುತ್ತೇವೆ, ಆದ್ದರಿಂದ ನಮ್ಮಲ್ಲಿ ತಿನಿಸಿನ ರುಚಿ ಜಾಸ್ತಿ’ ಎಂದು ಬೋರ್ಡ್ ಬರೆದಿರುವುದನ್ನು ನೀವು ನೋಡಿರಬಹುದು!
ಶಾಖದಿಂದ ಬೇಯುವ ಅಡುಗೆಗೆ ಸೌದೆ ಒಲೆಯ ಶಾಖವಾದರೇನು, ಗ್ಯಾಸ್ ಅಥವಾ ವಿದ್ಯುತ್ ಒಲೆಯ ಶಾಖವಾದರೇನು, ಒಟ್ಟಿನಲ್ಲಿ ಬೆಂದರಾಯಿತು, ರುಚಿ ಅದೇ ತಾನೆ ಎಂದು ನಾವು ಪ್ರಶ್ನಿಸುವುದರಲ್ಲಿ ಲಾಜಿಕ್ ಇದೆ. ಆದರೂ, ಅದೇಕೋ, ಇಂದಿಗೂ ದಾವಣಗೆರೆ ಬೆಣ್ಣೆ ದೋಸೆ ಮೊದಲಾದ ತಿನಿಸುಗಳನ್ನು ಸೌದೆ ಒಲೆಯಲ್ಲಿ ಮಾಡಿ ತಿಂದರೆ, ಭಾರೀ ರುಚಿ ಎಂಬ ಅಭಿಪ್ರಾಯ, ಬೆಂಗಳೂರಿನಂತಹ ನಗರದಲ್ಲೂ ಇದೆ!
ನಮ್ಮ ಹಳ್ಳಿಯಲ್ಲಿ, ನಮ್ಮ ಬಾಲ್ಯದಲ್ಲಿ ಯಾವಾಗಲೂ ಸೌದೆ ಒಲೆಯ ಅಡುಗೆ ಆಗಿದ್ದುದರಿಂದ ರುಚಿರುಚಿ ಯಾಗಿ ಇರುತ್ತಿತ್ತು ಎಂದು ವಾದಿಸಲು, ಪೇಟೆ ಹೋಟೆಲುಗಳ ಇಂತಹ ಜಾಹೀರಾತನ್ನು ಉದಾಹರಿಸ ಬಹುದು. ನಿಜ, ನಮ್ಮ ಹಳ್ಳಿಯಲ್ಲಿ ಸೀಮೆಎಣ್ಣೆ ಸ್ಟೌವ್ (ಸೀ.ಸ್ಟೌ.) ಬಳಕೆ ಕಡಿಮೆಯೇ ಇತ್ತು! ಆದರೂ ನನ್ನ ಮತ್ತು ಸೀ.ಸ್ಟೌ. ಬಾಂಧವ್ಯ ಬಹುಕಾಲದ್ದು ಎಂಬುದಂತೂ ನಿಜ. ಈ ಬಾಂಧವ್ಯವು ಪ್ರವರ್ಧಮಾನಕ್ಕೆ ಬಂದದ್ದು ನಾನು ಊರು ಬಿಟ್ಟು, ವೃತ್ತಿಯನ್ನು ಅರಸುತ್ತಾ, ಬಯಲು ಸೀಮೆಯ ಹಳ್ಳಿಯಾದ ಕಣಕಟ್ಟೆಗೆ ಬಂದ ನಂತರ. ಕಾಲೇಜು ಓದುವಾಗ ರೂಮ್ ಮಾಡಿಕೊಂಡು ಒಂದೆರಡು ವರ್ಷ ಸೀ.ಸ್ಟೌ. ಬಳಸಿದ್ದರೂ, ಆಗ ನಾವು ರೂಮಿನಲ್ಲಿದ್ದ ಮೂವರು ಅಡುಗೆ ಕೆಲಸವನ್ನು ಸಮಾನವಾಗಿ ಹಂಚಿಕೊಂಡು ಅಡುಗೆ ಮಾಡುತ್ತಿದ್ದುದರಿಂದ, ಸೀ.ಸ್ಟೌ. ಜೊತೆ ವಿಶೇಷ ಬಾಂಧವ್ಯ ಬೆಳೆದಿರಲಿಲ್ಲ.
ಇದನ್ನೂ ಓದಿ: Shashidhara Halady Column: ಮನೆಯ ಸುತ್ತಮುತ್ತ ಮುದ ನೀಡುವ ಮರಗಳು !
ನಾನು ಒಬ್ಬನೇ ರೂಮ್ ಮಾಡಿಕೊಂಡು ಕಣಕಟ್ಟೆಗೆ ಬಂದ ಕೂಡಲೆ, ಸೀ.ಸ್ಟೌ.ನೊಂದಿಗೆ ದೀರ್ಘ ಬಾಂಧವ್ಯಕ್ಕೆ ಅಡಿಪಾಯ ಬಿತ್ತು! ನಾನು ವೃತ್ತಿ ನಿರ್ವಹಿಸುತ್ತಿದ್ದ ಕಟ್ಟಡದ ಮೇಲ್ಭಾಗದಲ್ಲಿದ್ದ ಒಂದು ಕೊಠಡಿಯನ್ನು ಬ ಆಡಿಗೆಗೆ ಹಿಡಿದು, ಅಲ್ಲೇ ತಂಗಿದೆನಾ, ನಾನೇ ಅಡುಗೆ ಮಾಡುವುದು ಎಂದು ನಿರ್ಧರಿಸಿದನಾ, ಒಂದು ಸೀ.ಸ್ಟೌ. ತಂದು ರೂಮಿನ ಸೀ.ಸ್ಟೌ. ಅಡುಗೆ ಗೊತ್ತೇ ನಿಮಗೆ!
ಎಲ್ಲಾ ಹಳ್ಳಿಗಳಲ್ಲೂ ಸೀಮೆ ಎಣ್ಣೆ ನಿರಾತಂಕವಾಗಿ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಅಂದಿನ ರಾಜಕಾರಣಿಗಳು ಭಾಷಣ ಮಾಡುತ್ತಿದ್ದರು; ಇಂದು ಅದೇ ರೀತಿ ಗ್ಯಾಸ್ ಕೊರತೆ ಆಗದಂತೆ ನೋಡುಕೊಳ್ಳುತ್ತೇವೆ ಎಂಬ ಆಶ್ವಾಸನೆ ದೊರಕುತ್ತಿದೆ!
ಒಂದು ಮೂಲೆಯನ್ನು ಅಡುಗೆ ಮನೆಯನ್ನಾಗಿ ಉಪಯೋಗಿಸತೊಡಗಿದೆನಾ, ಆಗ ಶುರುವಾಯಿತು ನೋಡಿ ಸೀ.ಸ್ಟೌ. ಮತ್ತು ನನ್ನ ಬಾಂಧವ್ಯ. ಆ ಊರಿನಲ್ಲಿ ಬಾಡಿಗೆಗೆ ಲಭ್ಯವಿದ್ದ ಅದೊಂದೇ ಕೊಠಡಿಯನ್ನು ಸಹೋದ್ಯೋಗಿಗಳ ಸಹಾಯದಿಂದ ಬಾಡಿಗೆಗೆ ಪಡೆದು, ನನ್ನ ವಸ್ತುಗಳನ್ನು ಸ್ಥಳಾಂತರಿಸಿ, ನೀಲಿ ಜ್ವಾಲೆ ನೀಡುವ ದಪ್ಪ ಬತ್ತಿಯ, ಸುಧಾರಿತ ಮಾದರಿ ಎನಿಸಿದ್ದ ಒಂದು ಸೀ.ಸ್ಟೌ. ಅನ್ನು (ಅದರ ಹೆಸರು ರವಿ ವಿಕ್ ಸ್ಟೌ!) ತಂದು ರೂಮಿನ ಅಗ್ನಿ ಮೂಲೆಯಲ್ಲಿ ಪ್ರತಿಷ್ಠಾಪಿಸಿ ಒಂದು ಮುಂಜಾನೆ ಅಡುಗೆ ಆರಂಭಿಸಿಯೇ ಬಿಟ್ಟೆ.
ಎಣ್ಣೆಗೆ ಭಾರೀ ಡಿಮ್ಯಾಂಡ್
ಆ ಸೀ.ಸ್ಟೌ.ಗೆ ಅಗತ್ಯವಿದ್ದ ಸೀಮೆಎಣ್ಣೆಯನ್ನು ಹೊಂಚುವುದೇ ಆಗಿನ ದಿನಗಳಲ್ಲಿ ದೊಡ್ಡ ಸಾಹಸ. ಇದು 1980ರ ದಶಕದ ಮಾತು. ನಮ್ಮ ದೇಶದಲ್ಲಿ ಆಗ ಅಡುಗೆ ಮಾಡಲು, ಸೀಮೆ ಎಣ್ಣೆಗೆ ಭಾರಿ ಡಿಮ್ಯಾಂಡ್ ಮತ್ತು ಸದಾಕಾಲ ಅದರ ಕೊರತೆ. ಆಗ ದೇಶಾದ್ಯಂತ ಕೋಟಿಗಟ್ಟಲೆ ಜನ ಸೀಮೆಎಣ್ಣೆ ಸ್ಟೌ ಬಳಸಿಯೇ ಅಡುಗೆ ಮಾಡುತ್ತಿದ್ದರು. ಈಗಿನ ದಿನಗಳಲ್ಲಿ ಅಡುಗೆ ಅನಿಲ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸರಕಾರದವರು ಆಶ್ವಾಸನೆ ನೀಡುತ್ತಿರುವ ರೀತಿಯಲ್ಲೇ, ಆಗಿನ ಕಾಲದ ರಾಜಕಾರಣಿಗಳು ತಮ್ಮ ಭಾಷಣದಲ್ಲಿ ‘ಯಾವುದೇ ಹಳ್ಳಿಯಲ್ಲೂ ಸೀಮೆಎಣ್ಣೆ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಆಶ್ವಾಸನೆ ನೀಡುತ್ತಿದ್ದರು.
ಬಡವರಿಗೆ ಮತ್ತು ಜನಸಾಮಾನ್ಯರಿಗೆ ಸೀಮೆಎಣ್ಣೆ ದೊರಕುವಂತೆ ಮಾಡಲು ಸರಕಾರವು ಸಬ್ಸಿಡಿ ದರದಲ್ಲಿ ಹಳ್ಳಿ ಹಳ್ಳಿಗೆ ಸೀಮೆಎಣ್ಣೆಯನ್ನು ತಲುಪಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ನಡೆಸುತ್ತಿತ್ತು. ಆದರೆ, ನನ್ನ ಬಳಿ ಆರಂಭದಲ್ಲಿ ಪಡಿತರ ಚೀಟಿ ಇರಲಿಲ್ಲವಲ್ಲ! ಪಡಿತರ ಚೀಟಿ ಇಲ್ಲದೆ ಸೀಮೆಎಣ್ಣೆ ಖರೀದಿಸಲು ಒಂದು ಪರಿಹಾರವೂ ಇತ್ತು. ಕಾಳಸಂತೆಯಲ್ಲಿ ಸೀಮೆಎಣ್ಣೆ ಎಲ್ಲಾ ಕಡೆ ದೊರಕುತ್ತಿತ್ತು; ಬೆಲೆ ಮಾತ್ರ ಜಾಸ್ತಿ.
ಪಡಿತರ ಚೀಟಿಯಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ ಎಷ್ಟು ಸೀಮೆಎಣ್ಣೆ ಕೊಡಬಹುದು ಎಂದು ನಿಗದಿ ಮಾಡುತ್ತಿದ್ದರು, ಅದರ ಬೆಲೆ ಮಾತ್ರ ಬಹಳ ಎಂದರೆ ಬಹಳ ಕಡಿಮೆ. ನಾನು ಕೆಲವೊಮ್ಮೆ ನಾಲ್ಕಾರು ಲೀಟರ್ ಸೀಮೆ ಎಣ್ಣೆಯನ್ನು ಹೆಚ್ಚಿನ ಬೆಲೆ ಕೊಟ್ಟು ತರಿಸಿಕೊಂಡರೆ ನಾಲ್ಕಾರು ವಾರಕ್ಕೆ ಸಾಕಾಗುತ್ತಿತ್ತು. ಆದರೆ ಕಣಕಟ್ಟೆ ಎಂಬ ಆ ಹಳ್ಳಿಯ ಜನರು ಬಹಳ ಸಹೃದಯರು; ಹೊರ ಊರಿನಿಂದ ಬಂದಿದ್ದ ಉದ್ಯೋಗಿಗಳಿಗೆ ಆ ಊರಿನಲ್ಲಿ ಬಹಳ ಗೌರವ. ನನ್ನ ಬಳಿ ಪಡಿತರ ಚೀಟಿ ಇಲ್ಲದೆ ಇದ್ದರೂ ಒಮ್ಮೊಮ್ಮೆ ನನಗೆ ಸಬ್ಸಿಡಿ ಬೆಲೆಯಲ್ಲೇ ಸಾಕಷ್ಟು ಸೀಮೆ ಎಣ್ಣೆ ದೊರಕುತ್ತಿತ್ತು. ಸೀ.ಸ್ಟೌ. ಬಳಸಿ ನಾನೊಬ್ಬನೇ ನಾಲ್ಕು ವರ್ಷ ನಳಪಾಕ ಮಾಡಿದೆ.
ಪ್ರತಿದಿನದ ಮೆನು ಮಾತ್ರ ಒಂದೇ ರೀತಿ : ಅನ್ನ, ಮೊಸರು, ಆಗಾಗ ಸಾರು. ನಾನು ಕೆಲಸಕ್ಕೆ ಸೇರಿ ಐದನೇ ವರ್ಷದಲ್ಲಿ ನನ್ನ ಮದುವೆ ಯಾದ ನಂತರ ಸಂಸಾರದ ಜವಾಬ್ದಾರಿ ಹೆಗಲಿಗೇರಿತು. ಅಕ್ಕಿ, ಬೇಳೆ, ತರಕಾರಿ ಮೊದಲಾದವುಗಳನ್ನು ತರುವುದರ ಜೊತೆಗೆ ಪ್ರತಿದಿನದ ಅಡುಗೆಗೆ ಸೀಮೆಎಣ್ಣೆ ಹೊಂಚುವುದು ಮತ್ತೂ ದೊಡ್ಡ ಕೆಲಸವಾಯಿತು!
ಲಾರಿ ಬಂದಿಲ್ಲ!
ಇಸವಿ 1988 ಇರಬಹುದು; ಪಡಿತರ ವ್ಯವಸ್ಥೆಯ ಮೂಲಕ ವಿತರಿಸುವ ಸೀಮೆಎಣ್ಣೆ ಹಲವು ವಾರಗಳ ಕಾಲ ಆ ಊರಿಗೆ ಸರಬರಾಜಾಗಲೇ ಇಲ್ಲ. ಕೇಳಿದರೆ ‘ಸೀಮೆ ಎಣ್ಣೆ ಲಾರಿ ಬಂದಿಲ್ಲ’ ಎಂಬ ಸಿದ್ಧ ಉತ್ತರ. ಇತ್ತ ಕಾಳಸಂತೆಯಲ್ಲಿ ದೊರಕುವ ಸೀಮೆಎಣ್ಣೆ ಸಹಾ ನಿಧಾನವಾಗಿ ಅಂತರ್ಧಾನವಾಯಿತು. ಅಂತಹ ಸಣ್ಣ ಊರುಗಳಲ್ಲಿ, ಇವೆರಡಕ್ಕೂ ಗಾಢವಾದ ಸಂಬಂಧವಿತ್ತು!
ಪಡಿತರ ವ್ಯವಸ್ಥೆಯ ಸೀಮೆಎಣ್ಣೆ ಆ ಊರಿನ ಖಾಸಗಿ ಅಂಗಡಿಗೂ ಗುಪ್ತವಾಗಿ ಸರಬರಾಜಾಗುವುದು ಎಂದು ಕೆಲವರು ಗುಸುಗುಸು ಮಾತನಾಡಿದ್ದನ್ನು ಸಹ ಕೇಳಿದ್ದೆ. ಒಟ್ಟಿನಲ್ಲಿ ಅದೊಂದೆರಡು ವಾರ ಸೀಮೆಎಣ್ಣೆ ನಮಗೆ ಸಿಗಲಿಲ್ಲ. ಮನೆಯಲ್ಲಿದ್ದ ಸ್ಟಾಕ್ ಪೂರ್ತಿ ಖಾಲಿ. ಹಾಗಂತ ಊಟ ಮಾಡದೇ ಇರೋದಕ್ಕೆ ಆಗುತ್ತಾ? ಒಂದೆರಡು ದಿನ ನನ್ನ ಮಡದಿ ಸೌದೆ ಎಲೆಯಲ್ಲಿ ಅಡುಗೆ ಮಾಡಲು ಪ್ರಯತ್ನಿಸಿ, ಹೊಗೆಯಿಂದಾಗಿ, ಬೇಸತ್ತು ಹೋದಳು.
ಹೊಟೆಲ್ಗಳಿಂದ ತರಿಸೋಣ ಎಂದರೆ, ಉತ್ತಮ ಊಟ ಒದಗಿಸುವ ಹೊಟೇಲುಗಳೇ ಅಲ್ಲಿರಲಿಲ್ಲ! ಈ ತೀವ್ರ ಅನಾನುಕೂಲದ ಸ್ಥಿತಿ ಕಂಡು, ಮರುದಿನವೇ 10 ಲೀಟರ್ ಪ್ಲಾಸ್ಟಿಕ್ ಕ್ಯಾನ್ ಹಿಡಿದು ಬೆಳಗ್ಗೆ ಬೇಗನೆ ಬಾಡಿಗೆ ಸೈಕಲ್ನಲ್ಲಿ ಹೊರಟು, ಆರೆಂಟು ಕಿಲೋಮೀಟರ್ ದೂರದಲ್ಲಿರುವ ದೊಡ್ಡ ಮೇಟಿಕುರ್ಕೆಗೆ ಹೋಗಿ, ಅಲ್ಲೊಂದು ಖಾಸಗಿ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಸೀಮೆಎಣ್ಣೆಯನ್ನು, ಸ್ವಲ್ಪ ಜಾಸ್ತಿ ಬೆಲೆಕೊಟ್ಟು ತಂದೆ. ನಮ್ಮ ಮನೆಯ ಸೀ.ಸ್ಟೌ. ಪುನಹ ನೀಲಿ ಜ್ವಾಲೆ ಸೂಸಿತು, ಅನ್ನ ಸಾಂಬಾರು ತಯಾರಾಯಿತು. ಅದಾಗಿ ಕೆಲವು ಸಮಯದಲ್ಲಿ ಕಣಕಟ್ಟೆ ಯಿಂದ ಮೂರು ಕಿ. ಮೀ. ದೂರದ ಪಂಚನಹಳ್ಳಿಯಲ್ಲಿ ಒಬ್ಬರು ಸೀಮೆಯನ್ನು ವ್ಯಾಪಾರವನ್ನು ಹೊಸದಾಗಿ ಶುರು ಮಾಡಿದರು.
ಪಡಿತರ ವ್ಯವಸ್ಥೆಯಲ್ಲಿ ದೊರಕುವ ಎಣ್ಣೆಗಿಂತ ಬೆಲೆ ಸ್ವಲ್ಪ ಜಾಸ್ತಿ; ಆದರೆ ಬೇಕಾದಷ್ಟು ಸಿಗುತ್ತಿತ್ತು, ಅದೇ ನೆಮ್ಮದಿ. ಎರಡೆರಡು ಕ್ಯಾನುಗಳಲ್ಲಿ ಸೀಮೆಎಣ್ಣೆ ಖರೀದಿಸಿ ಸ್ಟಾಕ್ ಇಟ್ಟುಕೊಳ್ಳಲು ಆರಂಭಿಸಿದ ಮೇಲೆ, ಆ ಹಳ್ಳಿಯಲ್ಲಿ ನಮ್ಮ ಸಂಸಾರದ ಅಡುಗೆಯ ಕೆಲಸ ನಿರಾತಂಕವಾಗಿ ಸಾಗಿತ್ತು. ಸ್ನಾನಕ್ಕೆ ನೀರು ಬಿಸಿ ಮಾಡಲು, ಎಂತಿದ್ದರೂ ತೆಂಗಿನ ಸಿಪ್ಪೆಯ ಒಲೆಯ ಬಳಕೆ ಇತ್ತಲ್ಲ.
ನೀಲಿ ಬಣ್ಣದ ಎಣ್ಣೆ!
ಆಗಿನ ದಿನಗಳಲ್ಲಿ ಹೆಚ್ಚು ಸಬ್ಸಿಡಿ ನೀಡಿ, ಹಳ್ಳಿ ಹಳ್ಳಿಗೂ ಸೀಮೆ ಎಣ್ಣೆ ಸರಬರಾಜು ಮಾಡುವುದು ಸರಕಾರದ ಆದ್ಯತೆಯ ಕರ್ತವ್ಯ! ಇಲ್ಲವಾದರೆ, ಗಲಾಟೆ ಆಗುವ ಸಾಧ್ಯತೆ. ಅತಿ ಕಡಿಮೆ ದರದಲ್ಲಿ ಸರಕಾರವು ಹಳ್ಳಿ ಹಳ್ಳಿಗೆ ಸೀಮೆಎಣ್ಣೆಯನ್ನು ಸರಬರಾಜು ಮಾಡುತ್ತಿದ್ದರೂ, ಕಾಳಸಂತೆಯ ಮಾರಾಟ ಇದ್ದೇ ಇತ್ತು. ಸಬ್ಸಿಡಿ ರೂಪದಲ್ಲಿ ಸರಕಾರ ಸರಬರಾಜು ಮಾಡಿದ ಸೀಮೆಯನ್ನು ಕದ್ದುಮುಚ್ಚಿ ದುಪ್ಪಟ್ಟು ಬೆಲೆಗೆ ಮಾರುವ ಪದ್ಧತಿ. ಇದನ್ನು ತಪ್ಪಿಸಲು ಸರಕಾರಗಳು ವಿತರಿಸುವ ಸೀಮೆಎಣ್ಣೆಗೆ ನೀಲಿ ಬಣ್ಣವನ್ನು ಬೆರೆಸಲು ಆರಂಭಿಸಲಾಯಿತು.
ಕೆಲವು ವರ್ಷಗಳ ಕಾಲ ನಮ್ಮ ದೇಶದಲ್ಲಿ ನೀಲಿ ಸೀಮೆಎಣ್ಣೆ ಮತ್ತು ಬಿಳಿ ಸೀಮೆಎಣ್ಣೆ ಎರಡು ರೀತಿಯ ಸೀಮೆಎಣ್ಣೆ ದೊರಕುತ್ತಿತ್ತು! ಇದನ್ನೆಲ್ಲಾ ಹೇಳಿದರೆ ಈಗಿನ ಯುವಜನತೆ, ಜೆನ್ ಜೀ ಆಶ್ಚರ್ಯಪಟ್ಟಾರು. ಅಡುಗೆ ಅನಿಲದ ಲಭ್ಯತೆ ಆಗ ಅಷ್ಟೊಂದು ದುರ್ಲಭವೇ ಎಂದು ವಿಸ್ಮಯ ಪಟ್ಟಾರು! ನಾನು ಬಯಲು ಸೀಮೆಯ ಆ ಹಳ್ಳಿಯಲ್ಲಿ ಇರುವ ಸಮಯದಲ್ಲಿಯೇ, ಆ ಊರಿಗೆ ಹೊಸದಾಗಿ ಅಡುಗೆ ಅನಿಲ ವಿತರಣೆ ಮಾಡುವ ವ್ಯವಸ್ಥೆಯ ಕುರಿತು ಚರ್ಚೆ ನಡೆಯುತ್ತಿತ್ತು; ಅಂದರೆ ಬೇರೆ ಊರಿನಿಂದ ತಂದು ಕೊಡಲು ಸಾಧ್ಯವೇ ಎಂದು ಕೆಲವು ಯುವ ಉತ್ಸಾಹಿಗಳು, ನಮ್ಮನ್ನೆಲ್ಲಾ ವಿಚಾರಿಸುತ್ತಿದ್ದರು.
ಅಲ್ಲಿಂದ ಸುಮಾರು 25 ಕಿ.ಮೀ. ದೂರದ ಅರಸೀಕೆರೆಯಲ್ಲಿ ಅಡುಗೆ ಅನಿಲ ವಿತರಿಸುವ ಏಜೆನ್ಸಿ ಇತ್ತು; ಅಲ್ಲಿಗೆ ನಾನು ಒಂದೆರಡು ಬಾರಿ ಅರ್ಜಿ ಗುಜರಾಯಿಸಿ, ಸದಾ ಎಲೆ ಅಡಕೆ ತಿನ್ನುವ ಆ ಮಾರಾಟಮಳಿಗೆ ವ್ಯವಸ್ಥಾಪಕನ ವ್ಯಂಗ್ಯಭರಿತ ಆಶ್ವಾಸನೆ ಪಡೆದು, ಪೆಚ್ಚು ಮೋರೆ ಹಾಕಿಕೊಂಡು ಹಿಂದಿರುಗಿದ್ದೆ. ನಾವಿದ್ದ ಆ ಹಳ್ಳಿಯನ್ನು ತೊರೆದು ಬೇರೆ ಊರಿಗೆ ಹೋದ ನಂತರ, ಹಲವು ವರ್ಷಗಳ ನಂತರ ಅಲ್ಲಿ ಅಡುಗೆ ಅನಿಲ ವಿತರಿಸುವ ಏಜೆನ್ಸಿ ಆರಂಭವಾಯಿತು ಎಂದು ಕೇಳ್ಪಟ್ಟೆ. ಈಗ ಹೆಚ್ಚು ಕಡಿಮೆ ಎಲ್ಲಾ ಹಳ್ಳಿಗಳಲ್ಲೂ ಅಡುಗೆ ಅನಿಲ ಸುಲಭವಾಗಿ ಸಿಗುವುದರಿಂದ, ದಿನನಿತ್ಯದ ಅಡುಗೆಗಾಗಿ ಸೀ. ಸ್ಟೌ. ಗೊಡವೆ ಇಲ್ಲ, ಸೀಮೆಎಣ್ಣೆ ತರುವ ಕೆಲಸವೂ ಇಲ್ಲ. ಅಸಲು, ಎಷ್ಟೋ ಊರುಗಳಲ್ಲಿ ಈಗ ಸೀಮೆಎಣ್ಣೆಯೇ ಸಿಗುವುದಿಲ್ಲ!
ಅಡುಗೆ ಮನೆಯ ಜವಾಬ್ದಾರಿ ಹೊತ್ತವರಿಗೆ ನೆಮ್ಮದಿ; ಈಗಿನ ತಲೆಮಾರಿನ ಜನರಿಗೆ ನಿರಾತಂಕವಾಗಿ ಅಡುಗೆ ಅನಿಲ ಸಿಗುವುದರಿಂದ, ನಾವು ಈಗ ಇರುವುದು ಸುಭಿಕ್ಷ ಕಾಲ ಎಂದು ನನ್ನ ಅಂಬೋಣ. ನೀಮಗೇನನ್ನಿಸುತ್ತದೆ?