ಮನಿಮೈಂಡೆಡ್
ಇರಾನ್ ಯುದ್ಧ ಆರಂಭವಾದ ಬಳಿಕ ದಿಢೀರ್ ಉದ್ಭವಿಸಿರುವ, ಆಘಾತಕಾರಿ ಇಂಧನ ಬಿಕ್ಕಟ್ಟನ್ನು ಎದುರಿಸಲು ಭಾರತ ಈಗ ನಡೆಸುತ್ತಿರುವ ತುರ್ತು ಪರಿಹಾರ ಕ್ರಮಗಳು ಮತ್ತು ದೀರ್ಘಾವಧಿಯ ಯೋಜನೆಗಳು ನಿಜಕ್ಕೂ ಅಧ್ಯಯನಯೋಗ್ಯ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗೂ ಅವರ ಮನವಿಗೆ ಕೋಟ್ಯಂತರ ಮಂದಿ ಏಕೆ ಸ್ಪಂದಿಸುತ್ತಾರೆ ಎಂಬುದು ಮನದಟ್ಟಾಗುತ್ತದೆ.
ನೋಡಿ, ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್‌ಜಿ) ಮತ್ತು ರಸಗೊಬ್ಬರ ಆಮದನ್ನು ತಗ್ಗಿಸಲು ಕೇಂದ್ರ ಸರಕಾರವು 37500 ಕೋಟಿ ರುಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ. ಇದನ್ನು ‘ಕೋಲ್ ಗ್ಯಾಸಿಫಿಕೇಶನ್’ ಎನ್ನುತ್ತಾರೆ. ಏನಿದು? ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಲಭ್ಯವಿದೆ.
ಕಲ್ಲಿದ್ದಲನ್ನು ನೇರವಾಗಿ ಸುಡುವ ಬದಲು, ಅದನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಅನಿಲ ರೂಪಕ್ಕೆ ಪರಿವರ್ತಿಸಬಹುದು. ಅಂಥ ತಂತ್ರಜ್ಞಾನಕ್ಕೆ ಕೋಲ್ ಗ್ಯಾಸಿಫಿಕೇಶನ್ ಎನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ ಸಿನ್ ಗ್ಯಾಸ್ ತಯಾರಿಸಬಹುದು. ಅದನ್ನು ಇಂಧನವಾಗಿ ಬಳಸಬಹುದು. ಇಂಧನ ಭದ್ರತೆ ಮತ್ತು ವಿದೇಶಿ ವಿನಿಮಯ ಉಳಿತಾಯಕ್ಕೆ ಪ್ರಯೋಜನ ಕಾರಿ. ಇಂಥ ಹಲವಾರು ಪರ್ಯಾಯ ಕ್ರಮಗಳನ್ನು ಭಾರತ ಜಾರಿಗೊಳಿಸುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ- ಇಸ್ರೇಲ್ ನಡುವಣ ಯುದ್ಧದಿಂದ ಜಗತ್ತಿನ ಬಹುತೇಕ ದೇಶಗಳ ಮೇಲೆ ಒಂದಿಂದು ಬಗೆಯಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗಿದೆ. ತೈಲ ಸಂಪದ್ಭರಿತ ಕೊಲ್ಲಿ ರಾಷ್ಟ್ರಗಳಿಗೆ ತೈಲ ಸರಬರಾಜು ಮಾಡಲು ಹಾರ್ಮುಜ್ ಜಲಸಂಧಿಯ ಕಂಟಕ ಸೃಷ್ಟಿಯಾಗಿದ್ದರೆ, ತೈಲವನ್ನು ಆಮದು ಮಾಡಿಕೊಳ್ಳುವ ಏಷ್ಯಾ ಮತ್ತು ಯುರೋಪಿನ ದೇಶಗಳಿಗೆ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಇಡೀ ಜಗತ್ತಿಗೆ ತೈಲ ದರ ಏರಿಕೆಯ ಬಿಸಿ ತಟ್ಟಿದೆ.
ಇದನ್ನೂ ಓದಿ: Keshava Prasad B Column: ಚುನಾವಣೆ ಗೆಲ್ಲಲು ಆಮಿಷಗಳ ಕಂತೆ, ಯಾರಿಗೂ ಇಲ್ಲ ಚಿಂತೆ !
ಇದು ಜಗತ್ತನ್ನು ಮತ್ತೊಂದು ಆರ್ಥಿಕ ಹಿಂಜರಿತಕ್ಕೆ ಸಿಲುಕಿಸಲಿದೆಯೇ ಎಂಬ ಆತಂಕವೂ ಉಂಟಾಗಿದೆ. ಏಕೆಂದರೆ ಹಣದುಬ್ಬರ ಅಥವಾ ಬೆಲೆ ಏರಿಕೆಯ ಬಿಸಿ ಈಗಾಗಲೇ ತಟ್ಟಿದೆ.
ಭಾರತದಲ್ಲಿ 2026ರ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ 8.3 ಪರ್ಸೆಂಟ್‌ಗೆ ಏರಿಕೆಯಾಗಿದೆ. ಕಚ್ಚಾ ತೈಲ ದರ ಏರಿಕೆಯೇ ಇದಕ್ಕೆ ಪ್ರಮುಖ ಕಾರಣ. ಉತ್ಪಾದನೆಯ ವೆಚ್ಚ ದಿನೇದಿನೇ ಜಾಸ್ತಿಯಾಗುತ್ತಿದೆ. ಲಾಜಿಸ್ಟಿಕ್ಸ್ ದುಬಾರಿಯಾಗುತ್ತಿದೆ. ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಬ್ರೆಂಟ್ ಕಚ್ಚಾ ತೈಲ ದರ 70 ಡಾಲರ್‌ನಿಂದ 105 ಡಾಲರ್‌ಗೆ ಜಿಗಿದಿದೆ.
ಹೀಗಿದ್ದರೂ, ಕೇಂದ್ರ ಸರಕಾರವು ಪೆಟ್ರೋಲ-ಡೀಸೆಲ್ ಮತ್ತು ದೇಶೀಯ ಅಡುಗೆ ಅನಿಲ ದರವನ್ನು ಏರಿಸಿಲ್ಲ. ಆದರೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಪ್ರಕಾರ ಭಾರತದ ಒಟ್ಟಾರೆ ಆರ್ಥಿಕ ಪರಿಸ್ಥಿತಿಯ ಬುನಾದಿ ಸುಭದ್ರ ವಾಗಿದೆ.
ಹೀಗಿದ್ದರೂ, ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆ ದೀರ್ಘಾವಧಿಗೆ ಮುಂದುವರಿದರೆ ಸವಾ ಲಾಗಿ ಪರಿಣಮಿಸಬಹುದು. ಹೀಗಿದ್ದರೂ, ಭಾರತಕ್ಕೆ ವಿಪತ್ತಿನಲ್ಲಿಯೂ ಕೆಲವು ಅವಕಾಶ ಗಳು ಸೃಷ್ಟಿಯಾಗಿದೆ. ಜತೆಗೆ ಇಂಧನ ಸಮಸ್ಯೆಗೆ ದೀರ್ಘಾವಧಿಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳಿಗೂ ಕೇಂದ್ರ ಸರಕಾರ ಚಾಲನೆ ನೀಡಿದೆ. ಅವುಗಳಲ್ಲಿ ಕೆಲವನ್ನು ನೋಡೋಣ.
ಮೊದಲನೆಯದಾಗಿ ಇರಾನ್- ಅಮೆರಿಕ ಸಂಘರ್ಷದ ಪರಿಣಾಮವಾಗಿ ಒಂದು ಕಡೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ. ಮತ್ತೊಂದು ಕಡೆಯಲ್ಲಿ, ಭಾರತದ ಇಂಧನ ಮತ್ತು ವಿದ್ಯುತ್ ವಲಯದ ಕಂಪನಿಗಳ ಷೇರು ದರದಲ್ಲಿ ಗಣನೀಯ ಏರಿಕೆಯಾಗಿದೆ. ನಿಫ್ಟಿ ಎನರ್ಜಿ ಇಂಡೆಕ್ಸ್ʼನ ಮಾರುಕಟ್ಟೆ ಬಂಡವಾಳ ಮೌಲ್ಯವು 3 ಲಕ್ಷ ಕೋಟಿ ರುಪಾಯಿಗೆ ವೃದ್ಧಿಸಿದೆ.
ವಿದೇಶಿ ಹೂಡಿಕೆದಾರರು ವಿದ್ಯುತ್ ಉತ್ಪಾದನೆ ಮತ್ತು ಸಾಗಣೆ ವಲಯದ ಕಂಪನಿಗಳ ಸ್ಟಾಕ್ಸ್ʼಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಅದಾನಿ ಪವರ್ ಮತ್ತು ಬಿಎಚ್ʼಇಎಲ್ ನಂತಹ ಕಂಪನಿಗಳ ಷೇರುಗಳ ದರದಲ್ಲಿ ಇತ್ತೀಚಿಗೆ ಗಣನೀಯ ಏರಿಕೆ ದಾಖಲಾಗಿದೆ.
ಉದಾಹರಣೆಗೆ ಅದಾನಿ ಪವರ್ ಷೇರಿನ ದರ 2025ರ ನವೆಂಬರ್ 14ರಂದು 153 ರುಪಾಯಿ ಇತ್ತು. (6 ತಿಂಗಳಿನ ಹಿಂದೆ) ಈಗ ಅಂದರೆ 2026ರ ಮೇ 14ಕ್ಕೆ 223 ರುಪಾಯಿಗೆ ಹೆಚ್ಚಳ ವಾಗಿದೆ. 45 ಪರ್ಸೆಂಟ್ ಏರಿಕೆಯಾಗಿರುವುದನ್ನು ಗಮನಿಸಬಹುದು. ಬಿಎಚ್‌ಇಎಲ್ ಕಂಪನಿಯ ಷೇರು ದರ 6 ತಿಂಗಳಿನ ಹಿಂದೆ 280 ರುಪಾಯಿಯಷ್ಟಿದ್ದರೆ, 2026ರ ಮೇ 14ರಂದು 408 ರುಪಾಯಿಗೆ ಏರಿತ್ತು. 45 ಪರ್ಸೆಂಟ್ ಹೆಚ್ಚಳವಾಗಿದೆ. ಇದು ಭಾರತದ ಇಂಧನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ರಚನಾತ್ಮಕ ಪರಿವರ್ತನೆಯ ಹೊಸ ಅಧ್ಯಾಯ ವನ್ನೂ ಬಿಂಬಿಸಿದೆ!
ಹೌದು! ಜಿಯೊಪಾಲಿಟಿಕ್ಸ್ ಆಘಾತಗಳ ಪರಿಣಾಮವಾಗಿ ದೇಶದ ವಿದ್ಯುತ್ ಉತ್ಪಾದನೆ ಮತ್ತು ಸಾಗಣೆ ವಲಯದ ಕಂಪನಿಗಳ ಷೇರುಗಳ ದರ ಏರುಗತಿಯಲ್ಲಿದೆ. ಎನ್‌ಎಸ್ʼ ಡಿಎಲ್‌ನ ಅಂಕಿ ಅಂಶಗಳ ಪ್ರಕಾರ 2026ರ ಏಪ್ರಿಲ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು 5557 ಕೋಟಿ ರುಪಾಯಿಗಳನ್ನು ಪವರ್ ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಸಾಮಾನ್ಯವಾಗಿ ಏಪ್ರಿಲ್-ಮೇನಲ್ಲಿ ತಾಪಮಾನ ಹೆಚ್ಚುವುದರಿಂದ ವಿದ್ಯುತ್‌ಗೆ ಬೇಡಿಕೆ ಯೂ ಹೆಚ್ಚುತ್ತದೆ. ಆದರೂ ಈ ಸಲ ವ್ಯಾಪಕ ಹೂಡಿಕೆಯೂ ಕಂಡು ಬಂದಿದೆ. ಹೀಗಾಗಿ ಅದಾನಿ ಪವರ್, ಬಿಎಚ್‌ಇಎಲ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸಲ್ಯೂಷ, ಹಿಟಾಚಿ ಎನರ್ಜಿ ಇಂಡಿಯಾ, ಸುಜ್ಲಾನ್, ಎನ್‌ಟಿಪಿಸಿ ಗ್ರೀನ್ ಎನರ್ಜಿ, ಎನ್‌ಎಲ್ಸಿ ಇಂಡಿಯಾ ಷೇರುಗಳ ದರ ಏರಿಕೆಯನ್ನು ಗಮನಿಸಬಹುದು.
ಕಚ್ಚಾ ತೈಲ ದರ ಏರಿಕೆಯಿಂದಾಗಿ ತೈಲ ವಲಯದ ಎಕ್ʼಪ್ಲೊರೇನ್ ಮತ್ತು ಪ್ರೊಡಕ್ಷನ್ ಕಂಪನಿಗಳು, ಅಂದರೆ ತೈಲ ನಿಕ್ಷೇಪಗಳನ್ನು ಶೋಧಿಸುವುದು, ತೈಲೋತ್ಪಾದನೆ, ಸಂಸ್ಕರಣೆ, ನೈಸರ್ಗಿಕ ಅನಿಲ ಉತ್ಪಾದನೆಯ ಕಂಪನಿಗಳ ಷೇರುಗಳ ದರಗಳು ಚೇತರಿಸಿವೆ. ಅವುಗಳಿಗೆ ನಗದು ಹರಿವು ಹೆಚ್ಚುತ್ತಿದೆ. ಎನರ್ಜಿ ಷೇರುಗಳು ಹಣದುಬ್ಬರದ ಎದುರು ಹೆಡ್ಜ್ ಆಗಿಯೂ ಬೇಡಿಕೆ ಪಡೆಯುತ್ತಿವೆ.
ತೈಲ, ಅನಿಲ ಮಾರಾಟದಲ್ಲಿ ಲಾಭ ಗಳಿಸುವ ಕಂಪನಿಗಳು ಅದನ್ನು ನವೀಕರಿಸ ಬಹುದಾದ ಇಂಧನಗಳು, ಗ್ರೀನ್ ಹೈಡ್ರೋಜನ್, ಬ್ಯಸಟರಿ ಸ್ಟೋರೇಜ್ ಮತ್ತು ಟ್ರಾನ್ಸ್ʼ ಮಿಶನ್ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿವೆ. ಜಾಗತಿಕ ಹೂಡಿಕೆ ಕಂಪನಿಗಳು ಪವರ್ ಟ್ರಾನ್ಸ್ʼಮಿಶನ್ ಮತ್ತು ಹೈ ವೋಲ್ಟೇಜ್ ಪವರ್ ಎಕ್ವಿಪ್ ಮೆಂಟ್ ಉತ್ಪಾದನೆಯಲ್ಲಿ ಆದಾಯ ಹೆಚ್ಚಳವಾಗಿರುವುದನ್ನು ಗುರುತಿಸಿವೆ.
ಎಸ್‌ಬಿಐ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಸನ್ನಿ ಅಗ್ರವಾಲ್ ಹೀಗೆನ್ನುತ್ತಾರೆ- ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ʼಗೆ 100 ಡಾಲರ್ ಗಡಿ ದಾಟಿರುವುದರಿಂದ ಪ್ರಮುಖ ತೈಲ ಕಂಪನಿಗಳಾದ ಒಎನ್‌ಜಿಸಿ, ಆಯಿಲ್ ಇಂಡಿಯಾ ಮುಂತಾದವುಗಳಿಗೆ ಲಾಭವಾಗುತ್ತಿರು ವುದು ಸ್ಪಷ್ಟ.
ಸರಕಾರವು ದೇಶೀಯವಾಗಿ ತೈಲ ನಿಕ್ಷೇಪಗಳ ಶೋಧ ಮತ್ತು ಉತ್ಪಾದನೆಯಲ್ಲಿ ತೊಡಗಿಸಿ ಕೊಳ್ಳುವ ಕಂಪನಿಗಳು ಸರಕಾರಕ್ಕೆ ನೀಡಬೇಕಾದ ರಾಯಲ್ಟಿಯನ್ನು ಇಳಿಸಿರುವುದರಿಂದ ಅವುಗಳಿಗೆ ಅನುಕೂಲಕರವಾಗಿದೆ. ಒಂದು ವೇಳೆ ಸರಕಾರವು ಪೆಟ್ರೋಲ್-ಡೀಸೆಲ್ ದರ ವನ್ನು ಏರಿಸಿದರೆ ಎಚ್‌ಪಿಸಿಎಲ, ಬಿಪಿಸಿಎಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊ ರೇಷನ್ ಷೇರುಗಳ ದರ ಏರಿಕೆಯಾಗುವ ಸಾಧ್ಯತೆ ಇದೆ.
ಎರಡನೆಯದಾಗಿ ಕೇಂದ್ರ ಸರಕಾರವು ಗಲ ರಾಷ್ಟ್ರಗಳಿಂದ ನೇರವಾಗಿ ಪೈಪ್‌ಲೈನ್ ಮೂಲಕ ಗ್ಯಾಸ್ ಅನ್ನು ನಿರಂತರವಾಗಿ ತರಿಸಿಕೊಳ್ಳಲು ಯೋಜನೆ ಹಮ್ಮಿಕೊಂಡಿದೆ. ಅರಬ್ಬಿ ಸಮುದ್ರದ ಆಳದಲ್ಲಿ 20000 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಪೈಪ್ʼಲೈನ್ ಅಳವಡಿಸಿ, ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿಕೊಂಡು ನಿರಾತಂಕವಾಗಿ ಅನಿಲವನ್ನು ತರಿಸಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.
ಒಟ್ಟು 40000 ಕೋಟಿ ರುಪಾಯಿ ವೆಚ್ಚದ ಪ್ಲಾನ್ ಇದಾಗಿದೆ. ಒಮಾನ್‌ನಿಂದ ಗುಜರಾತ್ ಕರಾವಳಿಗೆ 7 ವರ್ಷದಲ್ಲಿ ಪೈಪ್ ಲೈನ್ ನಿರ್ಮಾಣವಾಗುವ ನಿರೀಕ್ಷೆ ಇದೆ. ಗೇಲ್, ಇಂಜಿನಿ ಯರ್ಸ್ ಇಂಡಿಯಾ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ ಈ ಸಂಬಂಧ ವಿಸ್ತೃತ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಇಕನಾಮಿಕ್ ಟೈಮ್ಸ್ ತಿಳಿಸಿದೆ.
ದಿಲ್ಲಿ ಮೂಲದ ಸೌತ್ ಏಷ್ಯಾ ಗ್ಯಾಸ್ ಎಂಟರ್ಪ್ರೈಸಸ್ ಈ ಯೋಜನೆ ಬಗ್ಗೆ ಸರಕಾರದ ಗಮನ ಸೆಳೆದಿತ್ತು. ದಿನಕ್ಕೆ 31 ಎಂಎಂಎಸ್ಸಿಎಂಡಿ (ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಸ್ ಪರ್ ಡೇ) ನೈಸರ್ಗಿಕ ಅನಿಲವನ್ನು ತರಿಸಿಕೊಳ್ಳಬಹುದು.
ಹಾರ್ಮುಜ್ ಜಲಸಂಧಿಯ ಅವಲಂಬನೆಯೂ ಇಲ್ಲಿ ಇರುವುದಿಲ್ಲ. ಏಕೆಂದರೆ ಒಮಾನ್ ನಿಂದ ನೇರವಾಗಿ ಗುಜರಾತ್‌ಗೆ ಪೈಪ್‌ಲೈನ್‌ನಲ್ಲಿ ಪೂರೈಕೆಯಾಗಲಿದೆ. 2025ರಲ್ಲಿ ಭಾರತದ ಮೂರನೇ ಎರಡರಷ್ಟು ಎಲ್ʼಎನ್‌ಜಿಯು (ದ್ರವೀಕೃತ ನೈಸರ್ಗಿಕ ಅನಿಲ) ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳಲ್ಲಿ ಬರುತ್ತಿತ್ತು.
ಫೆಬ್ರವರಿ 28ಕ್ಕೆ ಇರಾನ್ ಯುದ್ಧ ಆರಂಭವಾದ ಬೆನ್ನ ಹಾರ್ಮುಜ್ ಜಲಸಂಧಿ ಬಂದ್ ಆಯಿತು. ಹಡಗುಗಳ ಸಂಚಾರಕ್ಕೆ ತಡೆ ಉಂಟಾಯಿತು. ಆಗ ಜಾಗತಿಕ ಮಟ್ಟದಲ್ಲಿ ಎಲ್‌ಎನ್‌ಜಿ ಪೂರೈಕೆ ಅಸ್ತವ್ಯಸ್ತವಾಯಿತು. ಹಾಗೂ ದರ ಏರಿಕೆಯಾಯಿತು. ಹೀಗಾಗಿ ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ, ಗಲ್ಫ್ ರಾಷ್ಟ್ರಗಳಿಂದ ಎಲ್ಎನ್‌ಜಿ ತರಿಸಿಕೊಳ್ಳಲು ಪೈಪ್‌ಲೈನ್ ಅಳವಡಿಸುವ ಯೋಜನೆ ನಿರ್ಣಾಯಕವಾಗಿದೆ.
ಈ ಪೈಪ್‌ಲೈನ್ ಯೋಜನೆಯ ಕನಸು ನನಸಾದರೆ, ಭವಿಷ್ಯದ ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ಅವಲಂಬನೆ ಕಡಿಮೆಯಾಗಲಿದೆ. ಕೇವಲ ಒಮಾನ್ ಮಾತ್ರವಲ್ಲದೆ ಯುಎಇ, ಸೌದಿ ಅರೇಬಿಯಾ, ಟರ್ಕೆಮೆನಿಸ್ತಾನ್‌ನಿಂದಲೂ ಅನಿಲವನ್ನು ತರಿಸಿಕೊಳ್ಳಬಹುದು.
ಅವಿವೇಕಿಗಳು ಹಾಗೂ ರಾಜಕೀಯ ವಿರೋಧಿಗಳು ಮಾತ್ರ ಪ್ರಧಾನಿ ನರೇಂದ್ರ ಮೋದಿ ಯವರ ವಿದೇಶ ಪ್ರವಾಸವನ್ನು ಟೀಕಿಸಬಲ್ಲರು. ವಾಸ್ತವವಾಗಿ ಮೋದಿಯವರು ದೇಶದ ಹಿತಾಸಕ್ತಿಗೆ ಸಂಬಂಧಿಸಿದಂತೆ ವಿದೇಶಗಳಿಗೆ ತೆರಳುತ್ತಾರೆಯೇ ಹೊರತು, ವೈಯಕ್ತಿಕ ಕಾರಣಗಳಿಗಂತೂ ಅಲ್ಲ. ಅಂಥ ಒಂದೇ ಒಂದು ನಿದರ್ಶನವೂ ಸಿಗುವುದಿಲ್ಲ.
ಉದಾಹರಣೆಗೆ 2026ರ ಮೇ 15ರಂದು ಅಬುದಾಭಿಯಲ್ಲಿ ಯುಎಇಯ ಅಧ್ಯಕ್ಷ ಮಹಮ್ಮದ್ ಬಿನ್ ಝಯೀದ್ ಅಲ್ ಮಹ್ಯನ್ ಅವರನ್ನು ಮೋದಿ ಭೇಟಿಯಾಗಲಿದ್ದಾರೆ. ಅದೂ ಕೂಡ ಯುರೋಪಿನ ಪ್ರವಾಸದ ನಡುವೆ ಮೂರು ಗಂಟೆಗಳ ಅವಧಿಗೆ ಯುಎಇ ಭೇಟಿ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ಎರಡು ಮಹತ್ವದ ಒಪ್ಪಂದಗಳಿಗೆ ಅಂಕಿತ ಬೀಳುವ ನಿರೀಕ್ಷೆ ಇದೆ.
ಅದೇನೆಂದರೆ- ಅಡುಗೆ ಅನಿಲ ಅಥವಾ ಎಲ್ಪಿಜಿ ಪೂರೈಕೆಗೆ ಸಂಬಂಧಿಸಿ ಮತ್ತು ವ್ಯೂಹಾ ತ್ಮಕ ಪೆಟ್ರೋಲಿಯಂ ಸಂಗ್ರಹಾಗಾರಕ್ಕೆ ಸಂಬಂಧಿಸಿ. ದೇಶದ ಇಂಧನ ಭದ್ರತೆಗೆ ಇದು ಸಹಕಾರಿಯಾಗಲಿದೆ. ಪ್ರಸ್ತುತ ಭಾರತದ 40 ಪರ್ಸೆಂಟ್ ಎಲ್‌ಪಿಜಿಯನ್ನು ಯುಎಇ ಸರಬರಾಜು ಮಾಡುತ್ತಿದೆ.
ಮಂಗಳೂರಿನಲ್ಲಿರುವ ತೈಲ ಸಂಗ್ರಹಾಗಾರಕ್ಕೆ ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲವನ್ನು ಯುಎಇ ನೀಡಿದೆ. ಅದೇ ರೀತಿ ಮೋದಿಯವರು ಮೇ 15-20ರ ತನಕ ನೆದರ್ಲೆಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ತೆರಳಲಿದ್ದಾರೆ. ಅಲ್ಲೂ ತಣ್ಣನೆಯ ವಿಹಾರಾರ್ಥ ಹೋಗುತ್ತಿಲ್ಲ. ಭಾರತ-ಯುರೋಪ್ ಮುಕ್ತ ವ್ಯಾಪಾರ ಒಪ್ಪಂದವನ್ನು ಕಾರ್ಯಗತ ಗೊಳಿಸುವ ಸಲುವಾಗಿ ತೆರಳುತ್ತಿದ್ದಾರೆ. ಇದರಿಂದ ಗ್ರೀನ್ ಟೆಕ್ನಾಲಜಿ, ಎಐ, ಡಿಫೆನ್ಸ್ ಸಹಕಾರ ವಲಯದಲ್ಲಿ ಭಾರತಕ್ಕೆ ಅನುಕೂಲವಾಗಲಿದೆ.