Keshava Prasad B Column: ಚುನಾವಣೆ ಗೆಲ್ಲಲು ಆಮಿಷಗಳ ಕಂತೆ, ಯಾರಿಗೂ ಇಲ್ಲ ಚಿಂತೆ !
ಭಾರತದ ರಾಜಕೀಯ ರಂಗದಲ್ಲಿ ಉಚಿತ ಕೊಡುಗೆಗಳು ಮತ್ತು ಆಮಿಷಗಳನ್ನು ಘೋಷಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಸುಲಭವಾಗಿ ಹೇಗೆ ಏರಬಹುದು? ಎಂಬುದಕ್ಕೆ ಕಳೆದ ಹಲವು ದಶಕ ಗಳಿಂದಲೂ ಪ್ರಯೋಗಶಾಲೆಯಂತಿರುವ ರಾಜ್ಯ ಯಾವುದಾದರೂ ಇದ್ದರೆ ಅದು ನಿಸ್ಸಂದೇಹವಾಗಿ ತಮಿಳುನಾಡು.
-
ಮನಿ ಮೈಂಡೆಡ್
ತಮಿಳುನಾಡಿನ ಪ್ರಾಚೀನ ದೇವಾಲಯಗಳ ಅತ್ಯುನ್ನತ ಗೋಪುರಗಳು, ಸಾವಿರಾರು ವರ್ಷ ಹಿಂದಿನ ಅಣೆಕಟ್ಟೆ, ಕೆರೆ-ಕೊಳಗಳು, ಅಲ್ಲಿನ ವೈವಿಧ್ಯಮಯ ಕಾರ್ಖಾನೆಗಳು ಸಮಸ್ತ ಭಾರತೀಯರಿಗೇ ಹೆಮ್ಮೆಯನ್ನು ಮೂಡಿಸುತ್ತದೆ. ಚೋಳರ ಕಾಲದಲ್ಲಿ, ವಿಶೇಷವಾಗಿ 9 ರಿಂದ 13ನೇ ಶತಮಾನದ ತನಕ ತಮಿಳುನಾಡಿನಲ್ಲಿ ಸುಸಜ್ಜಿತವಾದ ನೌಕಾಪಡೆ ಇತ್ತು.
ಸಮುದ್ರದಲ್ಲಿ ಚೋಳರ ಪ್ರಾಬಲ್ಯ ಎಷ್ಟಿತ್ತೆಂದರೆ ಬಂಗಾಳ ಕೊಲ್ಲಿಯನ್ನು ಚೋಳರ ಕೆರೆ ಎಂದು ಕರೆಯಲಾಗುತ್ತಿತ್ತು. ರಾಜೇಂದ್ರ ಚೋಳ ತನ್ನ ಬೃಹತ್ ನೌಕಾಪಡೆಯನ್ನು ಸಮುದ್ರದಾಚೆಗಿನ ಶ್ರೀ ವಿಜಯ ಸಾಮ್ರಾಜ್ಯಕ್ಕೆ (ಇಂದಿನ ಇಂಡೊನೇಷ್ಯಾ, ಮಲೇಷ್ಯಾ ಮತ್ತು ಸುಮಾತ್ರಾ) ಕಳಿಸಿ, ದಂಡೆತ್ತಿ ಅಲ್ಲಿನ ರಾಜರುಗಳನ್ನು ಸೋಲಿಸಿ ವ್ಯಾಪಾರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಿದ್ದ. ಕೇವಲ ನೌಕಾಪಡೆಯನ್ನು ಕಟ್ಟಿದ್ದು ಮಾತ್ರವಲ್ಲ, ಪ್ರಾಚೀನ ತಮಿಳರ ಎಂಜಿನಿಯರಿಂಗ್ ಕೌಶಲ ಇಂದಿಗೂ ವಿಸ್ಮಯಕಾರಿಯಾಗಿದೆ!
ಯಾವುದೇ ಆಧುನಿಕ ಯಂತ್ರೋಪಕರಣಗಳು, ಕ್ರೇನುಗಳು ಇಲ್ಲದೆಯೇ ತಾಂಜಾವೂರಿನ ಬೃಹತ್ ದೇವಾಲಯವನ್ನು ಹೇಗೆ ಕಟ್ಟಿದರು ಎಂಬುದು ಈಗಲೂ ನಿಗೂಢ. ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿ. ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿ ಕಳನೈ ಎಂಬ ಪ್ರಾಚೀನ ಅಣೆಕಟ್ಟೆ ಇದೆ. ಇದನ್ನು 1800 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಿಸಲಾಗಿತ್ತು.
ಇಂದಿಗೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ! ಬ್ರಿಟಿಷರು ಇದನ್ನೊಮ್ಮೆ ನವೀಕರಣ ಮಾಡಿದ್ದರು ಅಷ್ಟೇ. ಆದರೆ ನೀರಾವರಿಗೆ ಇಂದಿಗೂ ಅಣೆಕಟ್ಟೆ ಬಳಕೆಯಲ್ಲಿರುವುದು ವಿಶೇಷ. ಅಭಿವೃದ್ಧಿಪರ ಯೋಜನೆಗಳು ಶಾಶ್ವತವಾಗಿ ಜನೋಪಕಾರಿಯಾಗಿರುತ್ತವೆ ಎಂಬುದಕ್ಕೆ ಇದು ನಿದರ್ಶನ.ಆದರೆ ಸ್ವಾತಂತ್ರ್ಯಾನಂತರ ಅಲ್ಲಿ ಡಿಎಂಕೆ ಮತ್ತು ಇತರ ದ್ರಾವಿಡ ಪಕ್ಷಗಳು ಪರಿಚಯಿಸಿದ ಪುಕ್ಕಟೆ ಯೋಜನೆಗಳು ಕೆಟ್ಟ ಚಾಳಿಯಾಗಿ ಹರಡಿರುವುದು ದುರ್ದೈವವೇ ಸರಿ.
ಇದನ್ನೂ ಓದಿ: Keshava Prasad B Column: ಬ್ಯಾಂಕ್ ಸೇವೆ ಹೇಗಿರಬೇಕು ? ಜನ ಯಾವುದನ್ನು ಮರೆಯುವಂತಿಲ್ಲ?
ಭಾರತದ ರಾಜಕೀಯ ರಂಗದಲ್ಲಿ ಉಚಿತ ಕೊಡುಗೆಗಳು ಮತ್ತು ಆಮಿಷಗಳನ್ನು ಘೋಷಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಸುಲಭವಾಗಿ ಹೇಗೆ ಏರಬಹುದು? ಎಂಬುದಕ್ಕೆ ಕಳೆದ ಹಲವು ದಶಕಗಳಿಂದಲೂ ಪ್ರಯೋಗಶಾಲೆಯಂತಿರುವ ರಾಜ್ಯ ಯಾವುದಾದರೂ ಇದ್ದರೆ ಅದು ನಿಸ್ಸಂದೇಹವಾಗಿ ತಮಿಳುನಾಡು.
ಆಮ್ ಆದ್ಮಿಯ ಕೇಜ್ರಿವಾಲರೂ ಇದರಿಂದ ಉತ್ತೇಜಿತರಾಗಿ ದಿಲ್ಲಿಯಲ್ಲಿ ಜಾರಿಗೊಳಿಸಿದ್ದರು. ನಟ ಜೋಸೆ- ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಇವೆಲ್ಲಕ್ಕೂ ಕಲಶಪ್ರಾಯ ದಂತೆ ಭರ್ಜರಿ ಪುಕ್ಕಟೆ ಸ್ಕೀಮುಗಳನ್ನು ಘೋಷಿಸಿ, ಇತಿಹಾಸ ನಿರ್ಮಿಸಿದ್ದಾರೆ. ಉಳಿದ ದ್ರಾವಿಡ ಪಕ್ಷಗಳನ್ನು ಬೆಚ್ಚಿಬೀಳಿಸಿದ್ದಾರೆ. ಉದಾಹರಣೆಗೆ ಮಹಿಳೆಯರಿಗಾಗಿ ಟಿವಿಕೆಯ ಪುಕ್ಕಟೆ ಸ್ಕೀಮ್‌ಗಳ ವೈಭವವನ್ನು ನೋಡಿ!
ಪ್ರತಿ ತಿಂಗಳು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2500 ರುಪಾಯಿ ನೇರ ನಗದು ವರ್ಗಾವಣೆ. ರಾಜ್ಯಾದ್ಯಂತ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಅಡುಗೆ ಅನಿಲ ಸಿಲಿಂಡರ್ ಉಚಿತ. ಬಡ ಕುಟುಂಬದ ವಧುವಿಗೆ ಮದುವೆಯ ಸಂದರ್ಭದಲ್ಲಿ 8 ಗ್ರಾಮ್ ಚಿನ್ನ (ಒಂದು ಗ್ರಾಮ್‌ಗೆ 1 ಲಕ್ಷದ 10 ಸಾವಿರ ರುಪಾಯಿ ದರ ಇದೆ), ರೇಷ್ಮೆ ಸೀರೆ ಉಚಿತ, ಮಗು ಜನಿಸಿದಾಗ ಚಿನ್ನದ ಉಂಗುರ, ಬೇಬಿ ವೆಲ್ಕಂ ಕಿಟ್ ಸಿಗಲಿದೆ.
ಉಳಿದಂತೆ ಪ್ರತಿ ಮನೆಗೆ ಮಾಸಿಕ 200 ಯುನಿಟ್ ಉಚಿತ ವಿದ್ಯುತ್, ಹಿರಿಯ ನಾಗರಿಕರು, ವಿಧವೆ ಯರು, ವಿಕಲಚೇತನರಿಗೆ 3000 ರುಪಾಯಿ ಪಿಂಚಣಿ, ರೈತರಿಗೆ ಸಾಲ ಮನ್ನಾ, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಹೀಗೆ ಲಿಸ್ಟ್ ಇನ್ನೂ ದೊಡ್ಡದಿದೆ.
ಚುನಾವಣೆಯನ್ನು ಗೆಲ್ಲಲು ಆಮಿಷಗಳೇ ಈಗ ಪಕ್ಷಗಳಿಗೆ ಸುಲಭದ ತಂತ್ರವಾಗಿದೆ. ಏನಾದರೂ ಆಗುವುದಿದ್ದರೆ ಗೆದ್ದ ನಂತರ ನೋಡೋಣ ಎಂಬ ಹುಂಬತನ. ಇವುಗಳ ದೂರಗಾಮಿ ಪರಿಣಾಮ ಗಳ ಬಗ್ಗೆ ಯೋಚಿಸಲು ಯಾವುದೇ ಪಕ್ಷಗಳಿಗೆ ಈಗ ಪುರುಸೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಯವರು ಹಿಂದಿನಿಂದಲೂ ಇಂಥಾ ಆಮಿಷಗಳನ್ನು ಬಲವಾಗಿ ಖಂಡಿಸುತ್ತಿದ್ದರು.
‘ರೇವಡಿ ಸಂಸ್ಕೃತಿ’ ಒಳ್ಳೆಯದಲ್ಲ, ದೇಶದ ಅಭಿವೃದ್ಧಿಗೆ ಅತ್ಯಂತ ಮಾರಕ ಎನ್ನುತ್ತಿದ್ದರು. ಆದರೆ ಚುನಾವಣೆಯ ತಂತ್ರಗಾರಿಕೆಯ ವಿಚಾರಕ್ಕೆ ಬಂದಾಗ ಬಿಜೆಪಿ ಕೂಡ ಆಮಿಷಗಳನ್ನು ಒಡ್ಡಿದೆ. ಚುನಾವಣೆ ಸಮೀಪದಲ್ಲಿರುವಾಗ ನೇರ ನಗದು ವರ್ಗಾವಣೆಯನ್ನು ಹೆಚ್ಚಿಸುವುದು ಮತ್ತೊಂದು ತಂತ್ರ. ಬಿಹಾರದಲ್ಲಿ ಎನ್‌ಡಿಎ ಎಲೆಕ್ಷನ್ ಹತ್ತಿರವಿದ್ದಾಗ 75 ಲಕ್ಷ ಮಹಿಳೆಯರಿಗೆ ತಲಾ 10000 ರುಪಾಯಿಗಳನ್ನು ವಿತರಿಸಿತ್ತು.
ಮಹಿಳೆಯರ ಉದ್ಯಮಶೀಲತೆ ಹೆಚ್ಚಿಸಲು ಇದು ಸಹಾಯಕ ಎಂದು ಸಮರ್ಥಿಸಿಕೊಳ್ಳಲಾಗಿತ್ತು. ಆದರೆ ಈ ವಿಚಾರದಲ್ಲಿ ತಮಿಳುನಾಡಿನ ಪಕ್ಷಗಳು ಎಲ್ಲಕ್ಕಿಂತ ಒಂದು ಕೈ ಮೇಲು. ಡಿಎಂಕೆ ಇತ್ತೀಚಿನ ಅಸೆಂಬ್ಲಿ ಚುನಾವಣೆಗೆ ಮುನ್ನ 1.31 ಕೋಟಿ ಮಹಿಳೆಯರಿಗೆ 5000 ರುಪಾಯಿಗಳನ್ನು ವಿತರಿಸಿತ್ತು.
ತಮಿಳುನಾಡಿನಲ್ಲಿ 1967ರ ವಿಧಾನಸಭೆ ಚುನಾವಣೆ ಸಂದರ್ಭ ಡಿಎಂಕೆ ಸ್ಥಾಪಕರಾದ ಸಿಎನ್ ಅಣ್ಣಾದುರೈ ಅವರು, ರೇಷನ್ ಅಂಗಡಿಗಳಲ್ಲಿ 1 ರುಪಾಯಿಗೆ ಅಕ್ಕಿ ನೀಡುವುದಾಗಿ ಘೋಷಿಸಿದ್ದರು. ಆಗ ರಾಜ್ಯದಲ್ಲಿ ಭೀಕರ ಬರಗಾಲವಿದ್ದರಿಂದ ಜನರ ಮೇಲೆ ಪ್ರಭಾವ ಬೀರಿತ್ತು. ಇದರ ಪರಿಣಾಮ ಡಿಎಂಕೆಯು ಕಾಂಗ್ರೆಸ್ ಅನ್ನು ಸೋಲಿಸಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು.
ಅಣ್ಣಾ ದೊರೈ ಮುಖ್ಯಮಂತ್ರಿಯಾದರು. ಚುನಾವಣೆಯಲ್ಲಿ ಗೆದ್ದ ಬಳಿಕ ಕೆಲಕಾಲ ನಡೆಸಿ ಬಳಿಕ ಸ್ಥಗಿತಗೊಳಿಸಿದರು. ಎಐಎಡಿಎಂಕೆ ಸ್ಥಾಪಕ ಎಂಜಿ ರಾಮಚಂದ್ರನ್ 1982ರಲ್ಲಿ ಐತಿಹಾಸಿಕ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದರು. ಇದರ ಉದ್ದೇಶ ಅರ್ಥಪೂರ್ಣವಾಗಿತ್ತು. ಬಡ ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಹಕಾರಿಯಾಯಿತು.
2006ರಲ್ಲಿ ಡಿಎಂಕೆ ಉಚಿತ ಟಿವಿ, 2 ರುಪಾಯಿಗೆ ಕೆಜಿ ಅಕ್ಕಿ, ಉಚಿತ ವಿದ್ಯುತ್, ಗ್ಯಾಸ್, ಸಾಲ ಮನ್ನಾ ಘೋಷಿಸಿತು. 2011ರಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳು ಪೈಪೋಟಿಗೆ ಬಿದ್ದು ಮಿಕ್ಸರ್, ಗ್ರೈಂಡರ್, ಲ್ಯಾಪ್‌ಟಾ, ಯುನಿಫಾರ್ಮ್ಸ್, ಕೇಬಲ್ ಟಿವಿ ಕೊಟ್ಟವು.
2013ರಲ್ಲಿ ಅಮ್ಮಾ ಕ್ಯಾಂಟೀನ್ ಬಂತು. ಬಡವರು, ಜನ ಸಾಮಾನ್ಯರಿಗೆ ತಾತ್ಕಾಲಿಕ ನೆರವು ನೀಡು ವುದು ಸ್ವಾಗತಾರ್ಹ. ಆದರೆ ಇದರಿಂದ ದೂರಗಾಮಿಯಾಗಿ ರಾಜ್ಯಗಳ ಬೊಕ್ಕಸಕ್ಕೆ ಹೊರೆಯಾಗು ತ್ತದೆ. ಸಾಲ ಹೆಚ್ಚುತ್ತದೆ. ಅಭಿವೃದ್ಧಿ ಪರ ಯೋಜನೆಗಳು ಹಿಂದುಳಿಯುತ್ತವೆ. ತಮಿಳುನಾಡು ಸರಕಾರದ ಸಾಲ 2026ರ ವೇಳೆಗೆ 9.52 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ.
ಆಮ್ ಆದ್ಮಿ, ಕಾಂಗ್ರೆಸ್ ಎಂಬ ಭೇದವಿಲ್ಲದೆ ಎಲ್ಲ ಪಕ್ಷಗಳೂ ಆಮಿಷಗಳನ್ನು ಮುಂದಿಟ್ಟು ಮತ ಯಾಚಿಸಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಮ್‌ಗಳು ದೇಶಾದ್ಯಂತ ಸುದ್ದಿಯಾಗಿತ್ತು. ಈಗ ನಟ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷದ ಸರದಿ. ಇರುವುದರಲ್ಲಿ ಬಿಜೆಪಿ ಮಾತ್ರ ಅಭಿವೃದ್ಧಿ ರಾಜಕಾರಣವನ್ನು ಜನರ ಮುಂದಿಡುತ್ತದೆ.
ಪ್ರಧಾನಿಯವರ ಯಾವುದೇ ಭಾಷಣವನ್ನು ಆಲಿಸಿ, ದೇಶದ ಅಭಿವೃದ್ಧಿಯ ವಿಚಾರ ಇಲ್ಲದೆ ಮುಗಿಯುವುದಿಲ್ಲ. ಫ್ರೆಂಚ್ ತತ್ತ್ವಜ್ಞಾನಿ ರುಸ್ಸೋ ಒಮ್ಮೆ ಹೀಗೆಂದಿದ್ದ- ‘ಮತದಾರರು ಸಂಸತ್ ಸದಸ್ಯರ ಆಯ್ಕೆಯ ಚುನಾವಣೆಯ ವೇಳೆ ಮಾತ್ರ ಸ್ವತಂತ್ರರು. ಸಂಸತ್ತಿನ ಸದಸ್ಯರ ಆಯ್ಕೆ ಮುಕ್ತಾಯವಾದ ಬಳಿಕ ಜನರು ಗುಲಾಮರು.’
ಇದು ತಮಿಳುನಾಡು ಮತ್ತು ಇತರ ಕೆಲ ರಾಜ್ಯಗಳ ಚುನಾವಣೆಗಳಲ್ಲಿ ರಿಯಾಲಿಟಿ ಆಗಿದೆ. ಅಭ್ಯರ್ಥಿ ಗಳು ಖರ್ಚು ಮಾಡುವ ಕೋಟ್ಯಂತರ ಹಣವನ್ನು ಗೆದ್ದ ಬಳಿಕ, ಹೇಗಾದರೂ ಮಾಡಿ ಮರು ವಸೂಲು ಮಾಡಬೇಕಾದ ಹೂಡಿಕೆಯಾಗಿ ಪರಿಗಣಿಸುತ್ತಾರೆ.
ತಮಿಳುನಾಡಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಕೆಲ ತಿಂಗಳುಗಳ ಹಿಂದೆ ಯಷ್ಟೇ, ರಾಜ್ಯ ಸರಕಾರಗಳಿಗೆ ಎಚ್ಚರಿಸಿತ್ತು. ಚುನಾವಣೆಗೆ ಮುನ್ನ ಈ ರೀತಿ ಉಚಿತ ಕೊಡುಗೆ ಗಳನ್ನು ಘೋಷಿಸುವುದರಿಂದ ಭವಿಷ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ನಯಾಪೈಸೆ ಉಳಿಯದು ಎಂದು ಕಳವಳ ವ್ಯಕ್ತಪಡಿಸಿತ್ತು.
‘ಭಾರತದಲ್ಲಿ ಎಂಥಾ ಸಂಸ್ಕೃತಿಯನ್ನು ರಾಜಕೀಯ ಪಕ್ಷಗಳು ಬೆಳೆಸುತ್ತಿವೆ? ನೀವು ಬೆಳಗ್ಗೆ ಉಚಿತ ಆಹಾರದಿಂದ ಆರಂಭಿಸಿ ಸೈಕಲ, ವಿದ್ಯುತ್, ನೇರ ನಗದು, ಚಿನ್ನ ಎಂದು ವಿಸ್ತರಿಸಿದರೆ ಕಥೆ ಏನು? ಸಾಮಾಜಿಕ ಕಲ್ಯಾಣ ಯೋಜನೆಯ ಭಾಗವಾಗಿ ಅಶಕ್ತರಿಗೆ ನೆರವು ನೀಡುವುದು ಸರಿ. ಆದರೆ ಆರ್ಥಿಕ ವಾಗಿ ದುರ್ಬಲರು-ಶ್ರೀಮಂತರು ಎಂಬ ವ್ಯತ್ಯಾಸವೇ ಇಲ್ಲದೆ ಉಚಿತ ಕೊಡುಗೆಗಳನ್ನು ಬೇಕಾಬಿಟ್ಟಿ ವಿತರಿಸಿದರೆ ಹೇಗೆ? ರಾಜ್ಯ ಸರಕಾರದ ಆದಾಯದಲ್ಲಿ ಕನಿಷ್ಠ 25 ಪರ್ಸೆಂಟ್‌ನಷ್ಟು ಹಣವನ್ನಾ ದರೂ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದರು.
ನಮ್ಮ ಜನರೂ ಅಷ್ಟೇ, ಉಚಿತವಾಗಿ ಸಿಗುವುದಿದ್ದರೆ ಬೇರೆ ಎಲ್ಲ ಕೆಲಸಗಳನ್ನೂ ಬಿಟ್ಟು ಹೊರಡು ತ್ತಾರೆ. ಉದಾಹರಣೆಗೆ ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾದ ಬಳಿಕ ಸಾರ್ವಜನಿಕ ಸಾರಿಗೆ ಬಸ್‌ಗಳು, ಬಸ್ ನಿಲ್ದಾಣಗಳಲ್ಲಿ ಜನಸಂದಣಿಯ ರಗಳೆ ಹೆಚ್ಚಿದೆ. ಕಾರಣ ವೇನು ಎಂದು ಯಾರನ್ನು ಕೇಳಿದರೂ, ಟಿಕೆಟ್ ಉಚಿತದ ಎಫೆಕ್ಟ್ ಎಂಬ ಉತ್ತರ ಸಿಗುತ್ತದೆ. ಫ್ರೀ ಸ್ಕೀಮ್‌ಗಳಿಂದ ವೆಚ್ಚ ಹೆಚ್ಚುತ್ತದೆ. ಆದರೆ ಗುಣಮಟ್ಟ ಕಳಪೆಯಾಗುತ್ತದೆ.
ಸರಕಾರಗಳಿಗೆ ಬಂಡವಾಳ ವೆಚ್ಚಕ್ಕೆ ಕೊರತೆಯಾಗುತ್ತದೆ. ಸಾಲದ ಹೊರೆಯೂ ಏರುತ್ತದೆ. ಆಗ ರಾಜ್ಯ ಸರಕಾರಗಳೂ ನಾನಾ ಬಗೆಯ ಹೊಸ ತೆರಿಗೆಯನ್ನು ವಿಧಿಸುವ ಮೂಲಕ ಮತ್ತೆ ಜನರನ್ನು ಕಾಡಿಸುತ್ತವೆ.
ಕೆಲ ರಾಜ್ಯಗಳಲ್ಲಿ ಆದಾಯ ಹೆಚ್ಚಿರಬಹುದು. ಜಿಎಸ್‌ಟಿ ಕಲೆಕ್ಷನ್ ಕೂಡ ಸಮೃದ್ಧವಾಗಿರಬಹುದು. ಆದರೆ ಎಲ್ಲ ರಾಜ್ಯಗಳಿಗೂ ಒಟ್ಟಾರೆ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ ಅನಿವಾರ್ಯ ವಾಗಿರುತ್ತದೆ. ಆಸ್ಪತ್ರೆ, ಶಾಲೆ, ಕಾಲೇಜು, ರಸ್ತೆಗಳು, ನೀರಾವರಿಯ ಅವಶ್ಯಕತೆ ಇರುತ್ತದೆ.
ಅವುಗಳಿಗೆ ಬದಲು ಉಚಿತ ಸ್ಕೀಮ್‌ಗಳಿಗೆ ವಿತರಿಸಿದರೆ ಹೇಗೆ? ತಮಿಳುನಾಡಿನಲ್ಲಿ ಉಚಿತ ಕೊಡುಗೆ ಗಳ ಮೂಲಕ ಇಲ್ಲಿಯವರೆಗೆ ಅಧಿಕಾರದ ಗದ್ದುಗೆಯನ್ನು ಪರ್ಯಾಯದಂತೆ ಏರುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಈ ಸಲ ಮತದಾರರು ಭಾರಿ ಆಘಾತ ಕೊಟ್ಟಿದ್ದಾರೆ.
ಅವರದ್ದೇ ಅಸವನ್ನು ಬಳಸಿದ ಹೊಸ ನಟ ಜೋಸೆಫ್ ವಿಜಯ್ ಗೆದ್ದಿದ್ದಾರೆ. ಒಂದುವೇಳೆ ವಿಜಯ್ ಕೂಡ ಅಭಿವೃದ್ಧಿಯನ್ನು ಕಡೆಗಣಿಸಿದರೆ ಮತ್ತೆ ಹೊಸ ಬದಲಾವಣೆಯಾದರೂ ಅಚ್ಚರಿಯಿಲ್ಲ. ದಿಲ್ಲಿಯಲ್ಲೂ ಉಚಿತ ವಿದ್ಯುತ್, ನೀರು, ಬಸ್ ಪ್ರಯಾಣದಂಥ ಪುಕ್ಕಟೆ ಯೋಜನೆಗಳನ್ನು ಕೊಟ್ಟಿದ್ದರೂ, 2025ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಸೋತು ಹೋಗಿತ್ತು.
ಹತ್ತು ವರ್ಷಗಳಿಂದ ಆಡಳಿತದಲ್ಲಿದ್ದ ಕೇಜ್ರಿವಾಲರ ಪಕ್ಷದ ವಿರುದ್ಧ ಜನರ ಅಸಮಾಧಾನ ಹೆಚ್ಚಿತ್ತು. ದಿಲ್ಲಿಯ ರಸ್ತೆಗಳ ದುಸ್ಥಿತಿ, ಪರಿಸರ ಮಾಲಿನ್ಯ, ಕುಡಿಯುವ ನೀರಿನ ಕೊರತೆ, ಭ್ರಷ್ಟಾಚಾರ ಪ್ರಕರಣಗಳು ನಿರಾಸೆಗೊಳಿಸಿತ್ತು. ಹೀಗಾಗಿ ಅಭಿವೃದ್ಧಿಯನ್ನು ಕಡೆಗಣಿಸಿ, ಕೇವಲ ಉಚಿತಗಳನ್ನು ಘೋಷಿಸಿದರೆ ಕ್ರಮೇಣ ಮತದಾರ ಎಚ್ಚೆತ್ತುಕೊಂಡು ಮನೆಗೆ ಕಳಿಸುತ್ತಾನೆ ಎನ್ನುವುದಕ್ಕೆ ದಿಲ್ಲಿ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳ ಎಲೆಕ್ಷನ್ ರಿಸಲ್ಟ್ ತಾಜಾ ಉದಾಹರಣೆಯಾಗಿದೆ.
ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿಯವರೂ ಲಕ್ಷ್ಮೀ ಭಂಡಾರ್, ಬಾಂಗ್ಲಾರ್ ಯುವ ಶಕ್ತಿ, ಎಲ್ಲರಿಗೂ ಪಕ್ಕಾ ಮನೆ, ನೀರು ಘೋಷಿಸಿದ್ದರೂ, ಸ್ವಕ್ಷೇತ್ರ ಭವಾನಿಪುರದ ಪರಾಭವ ಗೊಂಡಿದ್ದಾರೆ. ಅಂದರೆ ಪಶ್ಚಿಮ ಬಂಗಾಳದ ಮತದಾರರು ತಾತ್ಕಾಲಿಕ ಲಾಭಕ್ಕಿಂತ ರಾಜ್ಯದ ದೀರ್ಘಕಾಲೀನ ಹಿತಾಸಕ್ತಿ, ಆಂತರಿಕ ಭದ್ರತೆ, ಉದ್ಯಮಸ್ನೇಹಿ ಸರಕಾರಕ್ಕೆ ಒತ್ತು ನೀಡಿದರು.
ಯುವಜನರು ಕೆಲವು ಸಾವಿರ ರುಪಾಯಿ ಚಿಲ್ಲರೆಯ ನಿರುದ್ಯೋಗ ಭತ್ಯೆಗಿಂತ, ಉದ್ಯಮ ಮತ್ತು ಕೈಗಾರಿಕೀಕರಣದ ಭರವಸೆ ನೀಡಿದ್ದ ಬಿಜೆಪಿಯ ಭರವಸೆಗೆ ಮತ ನೀಡಿದರು.