ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶ್ರೀಕೃಷ್ಣ ಕೆಳಗಿಳಿದ ಕೂಡಲೇ ಹೊತ್ತಿ ಉರಿದ ಅರ್ಜುನನ ರಥ

ಅರ್ಜುನನಿಗೆ ಸ್ವಲ್ಪ ಗೊಂದಲವಾದರೂ ಕೃಷ್ಣನ ಮಾತಿಗೆ ಎದುರಾಡದೆ ಅತ್ಯಂತ ವಿಧೇಯತೆ ಯಿಂದ ತನ್ನ ಅಸ್ತ್ರಗಳನ್ನು ತೆಗೆದುಕೊಂಡು ರಥದಿಂದ ಕೆಳಗೆ ಇಳಿದ. ನಂತರ ಕೃಷ್ಣನು ತನ್ನ ಬಾರುಕೋಲು, ಕಡಿವಾಣಗಳನ್ನು ಅಲ್ಲಿಯೇ ಬಿಟ್ಟು ರಥದಿಂದ ಕೆಳಕ್ಕೆ ಧುಮುಕಿದನು. ಆಗ ಎಲ್ಲರೂ ನೋಡುತ್ತಿದ್ದಂತೆ ಆ ಬಂಗಾರದ ರಥವು ಇದ್ದಕ್ಕಿದ್ದಂತೆ ಹತ್ತಿಕೊಂಡು ಉರಿದು ಕ್ಷಣ ಮಾತ್ರದಲ್ಲಿ ಬೂದಿಯಾಯಿತು.

ಒಂದೊಳ್ಳೆ ಮಾತು

rgururaj628@gmail.com

ಮಹಾಭಾರತದ ಯುದ್ಧವು ಮುಗಿದ ಮೇಲೆ ಪಾಂಡವರು ತಮ್ಮ ಪಾಳೆಯಕ್ಕೆ ಹೋಗದೇ ಶತ್ರು ಪಾಳೆಯದ ಕಡೆಗೆ ಮುಖ ಮಾಡಿದರು. ಯುದ್ಧದ ನಿಯಮದ ಪ್ರಕಾರ, ಅವರು ಶತ್ರುಗಳ ಪಾಳೆಯ ಕ್ಕೆ ಹೋಗಬೇಕಾದುದರಿಂದ ಎಲ್ಲರೂ ಅಮಿತೋತ್ಸಾಹದಿಂದ ಪಾಂಚಜನ್ಯ ಮುಂತಾದ ಶಂಖ ಗಳನ್ನು ಊದುತ್ತಾ ಕೌರವರ ಪಾಳೆಯದ ಕಡೆಗೆ ಹೊರಟರು.

ಎಲ್ಲರಿಗಿಂತ ಮುಂದಿದ್ದ ಕೃಷ್ಣಪಾಂಡವರನ್ನೆಲ್ಲ ತನ್ನ ಮುಂದಾಳತ್ವದಲ್ಲೇ ಕರೆದುಕೊಂಡು ಹೋಗುತ್ತಿದ್ದನು. ದುರ್ಯೋಧನನ ಪಾಳೆಯವನ್ನು ತಲುಪುತ್ತಿದ್ದಂತೇ ಎಲ್ಲರೂ ತಮ್ಮ ತಮ್ಮ ರಥಗಳಿಂದ ಕೆಳಕ್ಕೆ ಇಳಿದರು.

ನಿಯಮದ ಪ್ರಕಾರ ಸಹಜವಾಗಿ ಸಾರಥಿ ಕೆಳಕ್ಕೆ ಇಳಿದ ಮೇಲೆ ಒಡೆಯ ಇಳಿಯುವುದು ವಾಡಿಕೆ. ಹೀಗೆ ಎಲ್ಲಾ ಸಾರಥಿಗಳೂ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಜಗತ್ಪಾಲಕ ಶ್ರೀಕೃಷ್ಣ ಮಾತ್ರ ಕೆಳಗೆ ಇಳಿಯದೇ ರಥದಲ್ಲೇ ಕುಳಿತುಕೊಂಡು ಅರ್ಜುನನ ಕಡೆ ತಿರುಗಿ, ‘ನೀನು ನಿನ್ನ ಗಾಂಡೀವವನ್ನೂ, ಬತ್ತಳಿಕೆಯನ್ನೂ ತೆಗೆದುಕೊಂಡು ರಥದಿಂದ ಕೆಳಗೆ ಇಳಿ’ ಎಂದನು.

ಇದನ್ನೂ ಓದಿ: Roopa Gururaj Column: ನಂಬುವುದಾದರೆ ಸಂಪೂರ್ಣ ನಂಬು ಎನ್ನುವ ಶ್ರೀಕೃಷ್ಣ

ಸದಾ ಕೃಷ್ಣನೇ ಮೊದಲು ಇಳಿದು ನಿಂತರ ಅರ್ಜುನನಿಗೆ ಇಳಿಯಲು ಅನುವು ಮಾಡಿಕೊಡು ತ್ತಿದ್ದದ್ದು ರೂಢಿ. ಆದರೆ ಈ ದಿನ ಕೃಷ್ಣನು ಹೀಗೇಕೆ ವರ್ತಿಸುತ್ತಿದ್ದಾನೆ ಎಂದು ಅರ್ಜುನನಿಗೆ ಅರ್ಥವಾಗಲಿಲ್ಲ. ಅದೂ ಗಾಂಢೀವ, ಬತ್ತಳಿಕೆ ಎಲ್ಲವನ್ನೂ ತೆಗೆದುಕೊಳ್ಳಲು ಬೇರೆ ಹೇಳಿದ್ದಾನೆ.

ಅರ್ಜುನನಿಗೆ ಸ್ವಲ್ಪ ಗೊಂದಲವಾದರೂ ಕೃಷ್ಣನ ಮಾತಿಗೆ ಎದುರಾಡದೆ ಅತ್ಯಂತ ವಿಧೇಯತೆ ಯಿಂದ ತನ್ನ ಅಸ್ತ್ರಗಳನ್ನು ತೆಗೆದುಕೊಂಡು ರಥದಿಂದ ಕೆಳಗೆ ಇಳಿದ. ನಂತರ ಕೃಷ್ಣನು ತನ್ನ ಬಾರುಕೋಲು, ಕಡಿವಾಣಗಳನ್ನು ಅಲ್ಲಿಯೇ ಬಿಟ್ಟು ರಥದಿಂದ ಕೆಳಕ್ಕೆ ಧುಮುಕಿದನು. ಆಗ ಎಲ್ಲರೂ ನೋಡುತ್ತಿದ್ದಂತೆ ಆ ಬಂಗಾರದ ರಥವು ಇದ್ದಕ್ಕಿದ್ದಂತೆ ಹತ್ತಿಕೊಂಡು ಉರಿದು ಕ್ಷಣ ಮಾತ್ರದಲ್ಲಿ ಬೂದಿಯಾಯಿತು.

ನಡೆದ ಘಟನೆಯನ್ನು ನೋಡಿ ಅರ್ಜುನನಂತೂ ನಡುಗಿ ಬಿಟ್ಟನು, ಭಯ ಮತ್ತು ಆಶ್ಚರ್ಯಗಳಿಂದ ಕೃಷ್ಣನ ಕಡೆಗೆ ನೋಡಿದನು. ‘ಕೃಷ್ಣ, ಇದೇನಿದು ನಾನು ನೋಡುತ್ತಿರುವುದು, ನನಗೆ ನಂಬಲಿಕ್ಕೇ ಆಗುತ್ತಿಲ್ಲ. ಅಗ್ನಿಯಿಂದ ನಮಗೆ ಕೊಡಲ್ಪಟ್ಟು, ಅತ್ಯಂತ ಶಕ್ತಿಯುತವಾದ, ಇದುವರೆಗೂ ನಮಗೆ ಆಶ್ರಯವಾದ ಈ ರಥವು, ಇದ್ದಕ್ಕಿದ್ದಂತೆ ಹೊತ್ತಿ ಉರಿದು ಬೂದಿಯಾಯಿತಲ್ಲ? ಅದೂ ನೀನು ಓಡಿಸುತ್ತಿದ್ದ ಈ ರಥವು ಸುಟ್ಟು ಬೂದಿಯಾಗುವುದು ಎಂದರೇನು? ನನಗೆ ಒಂದೂ ಅರ್ಥವಾಗು ತ್ತಿಲ್ಲ’ ಎನ್ನುತ್ತ ತನ್ನ ಗೊಂದಲವನ್ನು ವ್ಯಕ್ತಪಡಿಸಿದನು.

ಆಗ ಶ್ರೀಕೃಷ್ಣನು ನಗುತ್ತ, ‘ಅರ್ಜುನ, ಈ ರಥವು ಭೀಷ್ಮ, ದ್ರೋಣ, ರಾಧೇಯ ಮುಂತಾದವರು ಪ್ರಯೋಗಿಸಿದ ಅನೇಕಾನೇಕ ಅಸ್ತ್ರಗಳಿಗೆ ಎದೆಯೊಡ್ಡಿ ನಿಂತಿತ್ತು. ಅವರ ಬ್ರಹ್ಮಾಸ್ತ್ರಗಳನ್ನೂ ಸಹಿಸಿಕೊಂಡಿತ್ತು. ಅಶ್ವತ್ಥಾಮನ ದಿವ್ಯಾಸ್ತ್ರವನ್ನು ಕೂಡ ಎದುರಿಸಿದೆ. ಅದರ ಅರ್ಥ ಇಷ್ಟೇ , ಕುರುಕ್ಷೇತ್ರದ ಯುದ್ಧ ಸಮಯದಲ್ಲಿ ಬಿಡದಂತೆ ಈ ರಥವು ಅವರೆಲ್ಲರ ಕೋಪಕ್ಕೆ ಶಾಪಕ್ಕೆ ಗುರಿಯಾಗಿದೆ.

ಇವರೆಲ್ಲರ ಶಾಪಗಳಿಂದ ಅದು ಎಂದೋ ನಾಶವಾಗಬೇಕಾಗಿತ್ತು. ಆದರೆ ನಾನು ಅದರಲ್ಲಿ ಕುಳಿತು ಕೊಂಡಿರುವುದರಿಂದ ಅದು ಇನ್ನೂ ನಾಶವಾಗದೇ ಉಳಿದಿತ್ತು. ಈಗ ನಿನ್ನ ಗುರಿಯನ್ನು ಸಾಧಿಸಿರುವುದರಿಂದ ರಥಕ್ಕೆ ಇನ್ನು ಕೆಲಸವಿಲ್ಲ ಅದು ನಾಶವಾಗಲೇ ಬೇಕಿತ್ತು. ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುಗಳೂ ತಮ್ಮ ತಮ್ಮ ಕಾರ್ಯಗಳನ್ನು ಸಾಧಿಸಿದ ಮೇಲೆ ನಾಶವಾಗಲೇಬೇಕು.

ಆ ರೀತಿಯಲ್ಲಿ ಈ ರಥಕ್ಕೆ ತನ್ನ ಕಾರ್ಯ ಸಾಧನೆಯಾಗಿರುವುದರಿಂದ ಅದು ನಾಶವಾಗಿದೆ. ನಿನಗಿಂತ ಮೊದಲು ನಾನೇನಾದರೂ ರಥದಿಂದ ಕೆಳಕ್ಕೆ ಇಳಿದಿದ್ದರೆ, ಆ ರಥದೊಂದಿಗೆ ನೀನೂ ಬೂದಿಯಾಗಿ ಹೋಗುತ್ತಿದ್ದೆ. ಅದಕ್ಕಾಗಿಯೇ ನಾನು ನಿನಗೆ ಮೊದಲು ಕೆಳಗೆ ಇಳಿ ಎಂದು ಹೇಳಿದುದು’ ಎಂದನು ಮುಗುಳ್ನಗುತ್ತಾ.

ಶ್ರೀ ಕೃಷ್ಣನ ಅನಂತಾನಂತ ಶಕ್ತಿಗೆ ಅರ್ಜುನ ಮತ್ತೊಮ್ಮೆ ನಮಿಸಿ ಕೃತಜ್ಞತೆಯನ್ನು ಅರ್ಪಿಸಿದನು. ಭಗವಂತನ ಆಶೀರ್ವಾದ ಎಲ್ಲಿಯವರೆಗೂ ನಮ್ಮ ಮೇಲಿರುತ್ತದೋ ಅಲ್ಲಿಯವರೆಗೆ ಎಂತಹ ದುಷ್ಟ ಶಕ್ತಿಗಳು ಕೂಡ ನಮಗೆ ಕೆಡುಕುಂಟು ಮಾಡಲು ಸಾಧ್ಯವಾಗದು. ಎಂದಿಗೆ ನಾವು ಸ್ವಯಂಕೃತ ಅಪರಾಧಗಳಿಂದ ಭಗವಂತನ ಕೃಪೆಯನ್ನು ಕಳೆದುಕೊಳ್ಳುತ್ತೇವೋ ಅಂದಿಗೆ ಒಂದು ಹುಲ್ಲು ಕಡ್ಡಿಯ ಏಟು ಕೂಡ ನಮಗೆ ಮರಣ ಸದೃಶವಾಗುತ್ತದೆ.

ರೂಪಾ ಗುರುರಾಜ್

View all posts by this author