ಲೋಕಮತ
ಯಾರಿಗೂ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ !
ಅಂದು ಪುರಂದರದಾಸರು ಹಾಡಿದ್ದನ್ನು ಇಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪರಿಸ್ಥಿತಿಗೆ ಹೋಲಿಸಬಹುದು. ಅದರಲ್ಲೂ ಎರವಲು ಆಧಾರದಲ್ಲಿ (contract basis ) ಕೆಲಸ ಮಾಡುವ ಕಾರ್ಪೋರೇಟ್ ಉದ್ಯೋಗಿಗಳ ವಿಚಾರದಲ್ಲಿ ದಾಸರ ಮಾತು ಪದೇ ಪದೆ ನಿಜವಾಗುತ್ತಿದೆ. ಕೃತಕ ಬುದ್ಧಿಮತ್ತೆ, ಅಟೋಮೇಶನ್, ಆರ್ಥಿಕ ಹಿಂಜರಿತದ ನೆಪದಲ್ಲಿ ಪಿಂಕ್ ಸ್ಲಿಪ್ ಪಡೆದು ಪ್ರತಿ ತಿಂಗಳು ಮನೆಗೆ ಮರಳುತ್ತಿರುವ ಸಾವಿರಾರು ಲಕ್ಷಾಂತರ ಐಟಿ ಉದ್ಯೋಗಿಗಳಂತು ಗೊತ್ತಿದ್ದೋ, ಗೊತ್ತಿಲ್ಲದೆಯೋ ದಾಸರ ಮಾತುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಭಾರತದ ಅದರಲ್ಲೂ ಕರ್ನಾಟಕದ ಮಧ್ಯಮ ವರ್ಗದ ಜನರ ಕನಸುಗಳಿಗೆ ರೆಕ್ಕೆ ನೀಡಿದ್ದ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದಲ್ಲಿ ಇಂದು ಕೃತಕ ಬುದ್ಧಿಮತ್ತೆಯೆಂಬ ಸುನಾಮಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಇದರ ಜತೆಗೆ ಡೊನಾಲ್ಡ್ ಟ್ರಂಪ್ ಹುಚ್ಚು ಆಡಳಿತಗಾರನ ಹೊಸ ವಲಸೆ ನೀತಿ, ಯುದ್ಧದಾಹ ಮತ್ತು ವಿಸ್ತರಣಾವಾದಿ ಮನಸ್ಥಿತಿ ಇಡೀ ಜಗತ್ತನ್ನು ಕತ್ತಲೆಯ ಕೂಪ ದತ್ತ ತಳ್ಳುತ್ತಿದೆ. ಅಮೆರಿಕ ಮಾತ್ರವಲ್ಲ ಇಡೀ ಜಗತ್ತಿನ ಕಾರ್ಪೋರೇಟ್ ವಲಯ ಈ ಸರಣಿ ದಾಳಿ ಗಳಿಂದ ತತ್ತರಿಸಿದೆ. ಅಂತಿಮವಾಗಿ ಈ ಸ್ಥಿತ್ಯಂತರಗಳು ನಮ್ಮೆಲ್ಲರ ಬದುಕನ್ನೂ ತಟ್ಟಿವೆ.
ಇದನ್ನೂ ಓದಿ: Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?
ಅಂತಾರಾಷ್ಟ್ರೀಯ ಟೆಕ್ ದೈತ್ಯ ಒರಾಕಲ್ ಜಾಗತಿಕವಾಗಿ 30,000 ಉದ್ಯೋಗಿಗಳನ್ನು ವಜಾ ಗೊಳಿಸಲು ನಿರ್ಧರಿಸಿರುವುದು ಕೇವಲ ಒಂದು ಕಂಪನಿಯ ಆರ್ಥಿಕ ಶಿಸ್ತಿನ ಕ್ರಮವಲ್ಲ; ಬದಲಾಗಿ ಇದು ಮುಂಬರುವ ಆರ್ಥಿಕ ಸುನಾಮಿಯ ಮುನ್ಸೂಚನೆ. ಈ ಒಂದು ಕಂಪನಿಯ ನಿರ್ಧಾರದಿಂದ ಭಾರತವೊಂದರಲ್ಲೇ 12,000 ಮಂದಿ ಬೀದಿ ಪಾಲಾಗಿದ್ದಾರೆ. ಐಟಿ ವಲಯದಿಂದ ಬಂದಿರುವ 2026ರ ಆರಂಭಿಕ ವರದಿಗಳು ಬೆಚ್ಚಿ ಬೀಳಿಸುವಂತಿವೆ. ಕಳೆದ ಮೂರು ತಿಂಗಳುಗಳಲ್ಲಿ 90 ಸಾವಿರ ಕ್ಕೂ ಹೆಚ್ಚು ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಪ್ರತಿದಿನ ಸರಾಸರಿ 936 ಮಂದಿ ತಮ್ಮ ಉದ್ಯೋಗದ ಗುರುತಿನ ಚೀಟಿಯನ್ನು ಕಚೇರಿಯಲ್ಲೇ ಬಿಟ್ಟು ಹೊರಬರುತ್ತಿದ್ದಾರೆ.
ಈ ‘ಲೇ ಆಫ್’ ಐಟಿ ಉದ್ಯೋಗಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ‘ಉದ್ಯೋಗ ಕಡಿತ’ ಸಾಮಾನ್ಯವಾಗಿದೆ. ಕೇವಲ ಮೂರೂವರೆ ದಶಕಗಳ ಹಿಂದೆ, ಒಬ್ಬ ವ್ಯಕ್ತಿಗೆ ಉದ್ಯೋಗ ಸಿಕ್ಕಿತು ಎಂದರೆ ಆತನ ಬದುಕಿಗೆ ಶಾಶ್ವತ ಆಸರೆ ಸಿಕ್ಕಿದೆ ಎಂದು ಅರ್ಥೈಸಲಾಗುತ್ತಿತ್ತು. ಬಿಗಿಯಾದ ಕಾರ್ಮಿಕ ಕಾನೂನುಗಳು ಉದ್ಯೋಗಿಗಳ ಪರವಾಗಿದ್ದವು. ಸರಕಾರಿ ಉದ್ಯೋಗದಂತೆ ಖಾಸಗಿ ವಲಯದಲ್ಲೂ ’ಉದ್ಯೋಗ ಭದ್ರ’ ಎಂಬ ಭಾವನೆ ಇತ್ತು. ಆದರೆ ಜಾಗತೀಕರಣದ ಬಳಿಕ ಉದ್ಯೋಗದ ಸ್ವರೂಪ ಬದಲಾಗಿದೆ. ಖಾಸಗಿರಂಗದ ಉದ್ಯೋಗಿಗಳು ಆತ್ತ ಕಾರ್ಮಿಕನೂ ಅಲ್ಲದ, ಮ್ಯಾನೇಜ್ ಮೆಂಟ್‌ನ ಭಾಗವೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಈ ನೆಲದ ಕಾರ್ಮಿಕ ಕಾನೂನುಗಳನ್ನು ಪಾಲಿಸುವುದು ಬಿಡಿ, ಇಲ್ಲಿನ ಸರಕಾರಗಳನ್ನೇ ಲೆಕ್ಕಿಸುವುದಿಲ್ಲ. ಕಾರ್ಪೋರೇಟ್ ಜಗತ್ತಿನ ‘ಹೈರ್ ಅಂಡ್ ಫೈರ್’ ಎಂಬ ಕರುಣೆಯಿಲ್ಲದ ನೀತಿಗೆ ನಮ್ಮ ಯುವ ಸಮೂಹವೂ ಒಗ್ಗಿಕೊಂಡಿದೆ.
ಒರಾಕಲ್ ಆಗಲಿ, ಮೈಕ್ರೋಸಾಫ್ಟ್ ಆಗಲಿ, ನಮ್ಮದೇ ನೆಲದ ಇನ್ಫೋಸಿಸ್ ಅಥವಾ ಟಿಸಿಎಸ್ ಆಗಲಿ ರಾತ್ರೋರಾತ್ರಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರೆ ಸರಕಾರ ಮೂಕ ಪ್ರೇಕ್ಷಕನಾಗಿ ನೋಡುವುದರ ಹೊರತು ಬೇರೇನೂ ಮಾಡಲಾಗದು. ಈ ಕಂಪನಿಗಳೂ ಅಷ್ಟೇ, ಜಗತ್ತಿನ ಯಾವು ದೋ ಮೂಲೆಯಲ್ಲಿ ನಡೆಯುವ ವಿದ್ಯಮಾನಗಳು, ತಾಂತ್ರಿಕ ಜಗತ್ತಿನ ಆವಿಷ್ಕಾರಗಳು ಕಂಪನಿಯ ಭವಿಷ್ಯವನ್ನು ಉಜ್ವಲಗೊಳಿಸಬಹುದು, ಇಲ್ಲವೇ ಮಂಕಾಗಿಸಬಹುದು. ಅದರಲ್ಲೂ ಅಮೆರಿಕದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯೂ ಐಟಿ ಕಂಪನಿಗಳ ಪಾಲಿಗೆ ನಿರ್ಣಾಯಕ ಎನಿಸುತ್ತವೆ.
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದಾಗ ಬಹುತೇಕ ಭಾರತೀಯ ಐಟಿ ಉದ್ಯೋಗಿಗಳು ಸಂಭ್ರಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ‘ಆಪ್ತ ಗೆಳೆಯ’ ಭಾರತೀಯ ಉದ್ಯೋಗಿಗಳ ಪರ ನಿಲುವು ಹೊಂದಬಹುದು. ಗ್ರೀನ್ ಕಾರ್ಡ್ ವೀಸಾ ಸುಲಭವಾಗಿ ಸಿಗಬಹು ದೆಂದು ಯೋಚಿಸಿದವರಿಗೆ ಆಘಾತ ಕಾದಿತ್ತು. ತನ್ನ ಎರಡನೇ ಅವಧಿಯಲ್ಲಿ ‘ಆಕ್ರಮಣಕಾರಿ ರಾಷ್ಟ್ರೀಯವಾದಿ ನೀತಿ’ ಪ್ರದರ್ಶಿಸುತ್ತಿರುವ ಟ್ರಂಪ್, ಜಗತ್ತನ್ನು ಮೂರನೇ ಮಹಾಯುದ್ಧಕ್ಕೆ ತಳ್ಳಲು ಹೊರಟ ಮತ್ತೊಬ್ಬ ಹಿಟ್ಲರ್‌ನಂತೆ ಕಾಣುತ್ತಿದ್ದಾರೆ.
ಅಮೆರಿಕವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವುದರಿಂದ, ಅಲ್ಲಿನ ಆಂತರಿಕ ನೀತಿಗಳು ಜಾಗತಿಕ ಉದ್ಯೋಗ ಮಾರುಕಟ್ಟೆಯನ್ನು ನಿರ್ಧರಿಸುತ್ತವೆ. ಅಮೆರಿಕದ ಪರಿಷ್ಕೃತ ವಲಸೆ ನೀತಿಗಳು, ಮುಖ್ಯವಾಗಿ ಹೆಚ್-1ಬಿ ವೀಸಾ ಕುರಿತ ಕಠಿಣ ನಿಯಮಗಳು ಭಾರತೀಯ ಐಟಿ ವೃತ್ತಿಪರರಿಗೆ ದೊಡ್ಡ ಹೊಡೆತ ನೀಡಿದೆ. ‘ಅಮೆರಿಕನ್ನರಿಗೇ ಉದ್ಯೋಗ’ ಎಂಬ ಟ್ರಂಪ್ ಧೋರಣೆಯಿಂದ ಹೊರ ಗುತ್ತಿಗೆ ಪ್ರಕ್ರಿಯೆ ಕಠಿಣವಾಗಿದೆ. ಹೊಸ ಸುಂಕ ನೀತಿ, ಕೃತಕ ಬುದ್ಧಿಮತ್ತೆ ಮತ್ತು ಅಟೊಮೇಶನ್ ಬಿರುಗಾಳಿ ಗೆ ದೈತ್ಯ ಕಂಪನಿಗಳ ಲಾಭಾಂಶ ಕುಸಿಯತೊಡಗಿದೆ. ಈ ಕಂಪನಿಗಳು ವೆಚ್ಚ ಕಡಿತಕ್ಕಾಗಿ ತಮ್ಮದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಅನಿವಾರ್ಯತೆಗೆ ಸಿಲುಕಿವೆ.
ಇದರೊಂದಿಗೆ ಇರಾನ್‌ನ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟು ಟ್ರಂಪ್ ಆರಂಭಿಸಿದ ಕೊಲ್ಲಿ ಯುದ್ಧ, ಅಮೆರಿಕದ ನಿಯಂತ್ರಣಕ್ಕೂ ಸಿಗದೆ ಮುಂದುವರಿಯುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆಯು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಸಾರಿಗೆ, ಉತ್ಪಾದನೆ ಮತ್ತು ಸೇವಾ ವಲಯಗಳ ವೆಚ್ಚ ದುಪ್ಪಟ್ಟಾಗಿದೆ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಹೂಡಿಕೆ ಮಾಡಿದ್ದ ಕಂಪನಿಗಳು ನಷ್ಟ ಅನುಭವಿಸಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಲಕ್ಷಕ್ಕೂ ಭಾರತೀಯರು ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದಾರೆ.
ಈ ಸಂಕಷ್ಟದ ಕಾಲ ಮತ್ತೊಮ್ಮೆ ಕೋವಿಡ್ ಕಾಲದ ದುಸ್ಥಿತಿಯನ್ನು ನೆನಪಿಸುತ್ತಿದೆ. ಇನ್ಫೋಸಿಸ್, ಟಿಸಿಎಸ್, ವಿಪ್ರೋದಂತಹ ದೈತ್ಯ ಕಂಪನಿಗಳಿಂದ ಹಿಡಿದು ನವೋದ್ಯಮಗಳವರೆಗೆ ಎಲ್ಲೆಡೆ ಕಡಿತದ ಪರ್ವ ಶುರುವಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆಯಂತಹ ನಗರಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಯುವಕ, ಯುವತಿಯರಲ್ಲಿ ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ. ಈ ನಡುವೆ ನಿನ್ನೆ, ಮೊನ್ನೆವರೆಗೆ ಕೈ ತುಂಬಾ ವೇತನ ಪಡೆಯುತ್ತಿದ್ದವರು ರಾತ್ರೋರಾತ್ರಿ ಕೆಲಸ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದಾರೆ. ತಮ್ಮ ಸಂಸಾರದ ಖರ್ಚು, ಮನೆ ಸಾಲ, ಕಾರು ಸಾಲಗಳ ಕಂತು ಕಟ್ಟಲಾಗದೆ ಮಧ್ಯಮ ವರ್ಗದ ಸಾವಿರಾರು ಕುಟುಬಗಳು ಅಕ್ಷರಶ: ಬೀದಿಗೆ ಬಿದ್ದಿವೆ.
ಉದ್ಯೋಗ ಕಳೆದುಕೊಳ್ಳುವುದು ಕೇವಲ ಆರ್ಥಿಕ ನಷ್ಟವಲ್ಲ, ಅದು ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಭಾರತದಂತಹ ದೇಶದಲ್ಲಿ ಉದ್ಯೋಗವು ಸಾಮಾಜಿಕ ಗೌರವದ ಸಂಕೇತವೂ ಹೌದು. ಇದ್ದಕ್ಕಿದ್ದಂತೆ ಕೆಲಸ ಹೋದಾಗ ಯುವಜನತೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದು ಕೌಟುಂಬಿಕ ಕಲಹ ಮತ್ತು ಸಾಮಾಜಿಕ ಅಸ್ಥಿರತೆಗೂ ಕಾರಣವಾಗುತ್ತಿದೆ. ದಶಕಗಳ ಕಾಲ ಒಂದು ಸಂಸ್ಥೆಗೆ ತನ್ನ ಶ್ರಮ, ಸಮಯ ಮತ್ತು ಬುದ್ಧಿವಂತಿಕೆಯನ್ನು ಧಾರೆ ಎರೆದ ಅನುಭವಿ ಉದ್ಯೋಗಿ ಏಕಾಏಕಿ ಬೀದಿಗೆ ಬಿದ್ದಾಗ, ಅದು ಕೇವಲ ಆ ವ್ಯಕ್ತಿಯ ಆರ್ಥಿಕ ಕುಸಿತವಲ್ಲ, ಬದಲಿಗೆ ಒಂದು ಸಾಮಾಜಿಕ ಮತ್ತು ಮಾನಸಿಕ ದುರಂತ. ಅಮೆರಿಕದ ಕಂಪನಿಯಲ್ಲಿ ಕೆಲಸ ಕಳೆದುಕೊಂಡು ಬೆಂಗಳೂರಿಗೆ ಮರಳಿದ್ದ ಟೆಕ್ಕಿ ಕುಟುಂಬ ಆತ್ಮಹತ್ಯೆಗೆ ಶರಣಾದ ಇತ್ತೀಚಿನ ಘಟನೆ ನಮ್ಮ ಮುಂದಿರುವ ಸಣ್ಣ ಉದಾಹರಣೆ.
ಭಾರತೀಯ ಐಟಿ ವಲಯದಲ್ಲಿ ಸುಮಾರು 60 ಲಕ್ಷ ಮಂದಿ ನೇರ ಉದ್ಯೋಗಗಳಲ್ಲಿದ್ದಾರೆ. ಅಮೆರಿಕವೊಂದರಲ್ಲೇ ಸುಮಾರು 10 ರಿಂದ 12 ಲಕ್ಷ ಭಾರತೀಯ ಐಟಿ ವೃತ್ತಿಪರರು ದುಡಿಯು ತ್ತಿದ್ದಾರೆ. ತಜ್ಞರ ಪ್ರಕಾರ, ಐಟಿ ವಲಯದಲ್ಲಿ ಸೃಷ್ಟಿಯಾಗುವ ಪ್ರತಿ ಒಂದು ನೇರ ಉದ್ಯೋಗವು ಸುಮಾರು 3 ರಿಂದ 4 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಈ ಲೆಕ್ಕಾಚಾರದಂತೆ ಭಾರತದಲ್ಲಿ ಸುಮಾರು 1.5 ಕೋಟಿಯಿಂದ 2 ಕೋಟಿ ಜನರು ಪರೋಕ್ಷವಾಗಿ ಐಟಿ ವಲಯವನ್ನು ಅವಲಂಬಿಸಿ ದ್ದಾರೆ. ಅಂದರೆ ಮೂರರಿಂದ ನಾಲ್ಕು ಕೋಟಿ ಕುಟುಂಬಗಳು ನೇರವಾಗಿ ಐಟಿ ವಲಯವನ್ನು ಆಶ್ರಯಿಸಿವೆ. ಇಲ್ಲಿ ನಡೆಯುವ ಸಣ್ಣ ಬದಲಾವಣೆ ಕೂಡ ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಕೋವಿಡ್ ನಂತರದಲ್ಲಿ ಸುಮಾರು 7 ಲಕ್ಷದಿಂದ 8 ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಜಾಗತಿಕವಾಗಿ ನಡೆಯುವ ಪ್ರತಿ ಲೇ-ಆಫ್‌ನಲ್ಲೂ ಸುಮಾರು ಶೇ. 15ರಿಂದ ಶೇ. 20ರಷ್ಟು ಭಾರತೀಯರೇ ಇರುತ್ತಾರೆ ಎಂದು ಅಂದಾಜಿಸಲಾಗಿದೆ. ಭಾರತದ ಒಳಗಿನ ಐಟಿ ಕಂಪನಿ ಗಳು ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 1.5 ಲಕ್ಷದಿಂದ 2 ಲಕ್ಷ ಮಂದಿ ನೇರವಾಗಿ ಕೆಲಸ ಕಳೆದುಕೊಂಡಿದ್ದಾರೆ.
ಭಾರತದ ಒಟ್ಟು ಐಟಿ ಉದ್ಯೋಗಿಗಳಲ್ಲಿ ಸುಮಾರು ಮೂರನೇ ಒಂದರಷ್ಟು ಮಂದಿ ಬೆಂಗಳೂರಿ ನಲ್ಲಿದ್ದಾರೆ. ಹೀಗಾಗಿ, ಕೆಲಸ ಕಳೆದುಕೊಂಡವರಲ್ಲಿ ಕರ್ನಾಟಕದವರೇ ಸಿಂಹಪಾಲು. ಇತ್ತೀಚಿನ ವರದಿಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 5,000ಕ್ಕೂ ಹೆಚ್ಚು ಐಟಿ ಕಂಪನಿಗಳು ಬಾಗಿಲು ಮುಚ್ಚಿವೆ. ಕೆಲಸ ಕಳೆದುಕೊಂಡವರಲ್ಲಿ 10-15 ವರ್ಷ ಅನುಭವವಿರು ವವರು ಹೆಚ್ಚು ಸಂತ್ರಸ್ತರಾಗಿದ್ದಾರೆ.
ಜಾಗತಿಕ ವಿದ್ಯಮಾನಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದಿರಬಹುದು, ಆದರೆ ನಮ್ಮ ಆರ್ಥಿಕ ನೀತಿಗಳು ನಮ್ಮ ನಿರ್ಧಾರ. ‘ಹೈರ್ ಅಂಡ್ ಫೈರ್’ ಎಂಬುದು ಕಂಪನಿಗಳ ಲಾಭಕ್ಕೆ ಪೂರಕ ವಾಗಿರಬಹುದು, ಆದರೆ ಅದು ಮಾನವೀಯತೆಯ ದೃಷ್ಟಿಯಿಂದ ಮಾರಕ. ಕೃತಕ ಬುದ್ಧಿಮತ್ತೆ ಮತ್ತು ಆಟೊಮೇಷನ್‌ನ ಅಬ್ಬರದ ನಡುವೆ ಮಾನವ ಸಂಪನ್ಮೂಲವನ್ನು ಕೇವಲ ‘ವೆಚ್ಚ’ ಎಂದು ಪರಿಗಣಿಸುವ ಕಂಪನಿಗಳ ಧೋರಣೆಯೂ ಬದಲಾಗಬೇಕಿದೆ. ಸರಕಾರ, ಕಾರ್ಪೋರೇಟ್ ಕಂಪನಿ ಗಳು ಮನಬಂದಂತೆ ಉದ್ಯೋಗಿಗಳನ್ನು ತೆಗೆಯದಂತೆ ಕಟ್ಟುನಿಟ್ಟಾದ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕು.
ಹೂಡಿಕೆಯನ್ನು ಆಕರ್ಷಿಸುವುದಷ್ಟೇ ಸರಕಾರದ ಕೆಲಸವಲ್ಲ. ಕೆಲಸ ಕಳೆದುಕೊಂಡ ನುರಿತ ಉದ್ಯೋಗಿಗಳಿಗೆ ಮರು-ತರಬೇತಿ ನೀಡುವ ಮತ್ತು ಅವರ ಹಿತರಕ್ಷಣೆ ಮಾಡುವ ನೀತಿಗಳನ್ನು ರೂಪಿಸಬೇಕು. ಉದ್ಯೋಗ ಕಳೆದುಕೊಂಡವರಿಗೆ ಸಾಂತ್ವನ ಹೇಳುವ, ನಿರುದ್ಯೋಗ ಭತ್ಯೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವತ್ತ ನಮ್ಮ ಸರಕಾರಗಳು ಯೋಚಿಸಬೇಕಾಗಿದೆ.