ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?

ಬಹುತೇಕ ರಾಜ್ಯಗಳು ಜನಪ್ರಿಯ ಯೋಜನೆಗಳ ಜಾರಿಯ ಭರದಲ್ಲಿ ಸಾಲದ ಬಲೆಗೆ ಸಿಲುಕಿವೆ. ಕೇಂದ್ರಸರಕಾರವೂ ಇದಕ್ಕೆ ಹೊರತಲ್ಲ. ಕೇಂದ್ರದ ಸಾಲ ಪ್ರಮಾಣ 200 ಲಕ್ಷ ಕೋಟಿಯ ಸಮೀಪ ತಲುಪಿದ್ದು ಸಾಲದ ಮೇಲಿನ ಬಡ್ಡಿ ಪಾವತಿಯೇ ಬಜೆಟ್‌ನ ಬಹು ದೊಡ್ಡ ಪಾಲನ್ನು ನುಂಗಿ ಹಾಕುತ್ತಿದೆ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕಾರ, ಜನರ ಕಲ್ಯಾಣವನ್ನು ಸಾಧಿಸುವುದು ಸರಕಾರದ ಪ್ರಮುಖ ಕರ್ತವ್ಯ. ಆದರೆ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಯೋಜನೆಗಳ ಹಂಚಿಕೆ ಜನರ ತೆರಿಗೆ ಹಣದ ದುರುಪಯೋಗ.

Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?

-

ಲೋಕಮತ

ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮೊತ್ತದ ಹಣವನ್ನು ಮೀಸಲಿಡುತ್ತಿರುವುದರಿಂದ, ಶಾಸಕರು ಕೇಳುತ್ತಿರುವ ಹೊಸ ರಸ್ತೆ ಅಥವಾ ಮೂಲಸೌಕರ್ಯದ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗ್ಯಾರಂಟಿ ಯೋಜನೆಗಳ ರೂವಾರಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಬಹಿರಂಗವಾಗಿ ಒಪ್ಪಿಕೊಂಡಿ ದ್ದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಈ ಹೇಳಿಕೆಯನ್ನು ಉಲ್ಲೇಖಿಸಿ, ‘ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದೆ. ಅಭಿವೃದ್ಧಿ ಕೆಲಸಗಳಿಗೆ ಒಂದು ರೂಪಾಯಿ ಹಣವಿಲ್ಲ ಎಂದು ಸ್ವತಃ ಉಪಮುಖ್ಯಮಂತ್ರಿಗಳೇ ಒಪ್ಪಿಕೊಳ್ಳುತ್ತಿರುವುದು ರಾಜ್ಯದ ದುರ್ದೈವ’ ಎಂದು ಅವರು ಸದನದಲ್ಲಿ ವಾಗ್ದಾಳಿ ನಡೆಸಿದ್ದರು.

ಅಶೋಕ್ ಮಾತಿಗೆ ‘ನಿಮ್ಮ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳು ಬೇಡ ಎಂದು ಹೇಳಲು ನೀವು ಸಿದ್ಧರಿದ್ದೀರಾ’ ಎಂದು ಡಿಕೆಶಿ ಮರು ಸವಾಲು ಹಾಕಿದ್ದರು. ಅಲ್ಲಿಗೆ ಈ ವಾಕ್ಸಮರ ತಣ್ಣಗಾಗಿತ್ತು. ‘ಅಭಿವೃದ್ಧಿಯನ್ನು ಬದಿಗಿಟ್ಟು ಜನರನ್ನು ಮರಳು ಮಾಡುವ ಯೋಜನೆ, ನಮಗೂ ಬೇಡ, ನಿಮಗೂ ಬೇಡ’ ಎಂದು ಖಡಕ್ಕಾಗಿ ಉತ್ತರಿಸುವ ಧೈರ್ಯವನ್ನು ಪ್ರತಿಪಕ್ಷ ಬಿಜೆಪಿ ತೋರಿಸಲಿಲ್ಲ.

ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಈಗ ಚುನಾವಣೆ ಕೇವಲ ಜನಪ್ರತಿನಿಧಿಗಳ ಆಯ್ಕೆಯ ಪ್ರಕ್ರಿಯೆಯಾಗಿ ಉಳಿದಿಲ್ಲ, ಅವು ಭರವಸೆಗಳ ಮತ್ತು ಉಚಿತ ಕೊಡುಗೆಗಳ ಸ್ಪರ್ಧೆಯಾಗಿ ಬದಲಾಗಿದೆ. ಎಲ್ಲ ಪಕ್ಷಗಳ ಚುನಾವಣೆ ಪ್ರಣಾಳಿಕೆಯಲ್ಲೂ ಈಗ ಅಭಿವೃದ್ಧಿ ಯೋಜನೆಗಳ ಪ್ರಸ್ತಾಪಕ್ಕಿಂತ ಉಚಿತ ಯೋಜನೆಗಳು ಆದ್ಯತೆ ಪಡೆದಿವೆ. ಪ್ರತಿಪಕ್ಷಗಳ ಉಚಿತ ಯೋಜನೆಯನ್ನು ಕಟುವಾಗಿ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ, ಬಿಹಾರ ಚುನಾವಣೆಗೆ ಮುನ್ನ ಎನ್‌ಡಿಎ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರ್ಜರಿ ಉಚಿತ ಯೋಜನೆ ಗಳನ್ನು ಕೊಂಡಾಡಿದ್ದರು.

ಇದನ್ನೂ ಓದಿ: Lokesh Kayarga Column: ಡಿಜಿಟಲ್ ಯುಗದ ʼಡೆಡ್ಲಿʼ ಮಕ್ಕಳು !

ಪಕ್ಷ ಯಾವುದೇ ಇರಲಿ, ಇನ್ನು ಮುಂದೆ ಚುನಾವಣೆ ಗೆಲ್ಲಲು ಉಚಿತ ಸ್ಕೀಮುಗಳು ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ರಾಜ್ಯ ಇಲ್ಲವೇ ದೇಶದ ಆರ್ಥಿಕತೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ ಗ್ಯಾರಂಟಿ ಸ್ಕೀಮ್ ಎಂಬ ಹುಲಿ ಸವಾರಿಗೆ ಎಲ್ಲರೂ ಸಜ್ಜಾಗಿದ್ದಾರೆ. ಹುಲಿ ಏರಿದ ಮೇಲೆ ಸವಾರಿ ಮಾಡಲೇಬೇಕು. ಇಲ್ಲವಾದರೆ ಅದು ಸವಾರನನ್ನೇ ಬಲಿ ಪಡೆಯುತ್ತದೆ. ರಾಜಕೀಯ ಪಕ್ಷಗಳ ಕಥೆಯೂ ಈಗ ಇದೇ ಆಗಿದೆ. ಜನರ ಜೇಬನ್ನು ನೇರವಾಗಿ ತುಂಬಿಸುವ ಯೋಜನೆಗಳ ಹೊರತು ಚುನಾವಣೆ ಗೆಲ್ಲುವುದು ಅಸಾಧ್ಯ ಎನ್ನುವ ಮನಸ್ಥಿತಿ ರಾಜಕೀಯ ಪಕ್ಷಗಳಲ್ಲಿದೆ. ಅಧಿಕಾರವೇ ಮುಖ್ಯ. ಇದಕ್ಕಾಗಿ ಯಾವ ಹಾದಿ ತುಳಿದರೂ ತಪ್ಪಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ರಾಜಕೀಯ ನಾಯಕರು ಪಕ್ಷಾತೀತವಾಗಿ ‘ನಗದು ಕೊಡುಗೆ’ ಮತ್ತು ಉಚಿತ ಯೋಜನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಪೈಪೋಟಿಗೆ ಬಿದ್ದಿದ್ದಾರೆ.

ಜನಪ್ರಿಯ ಯೋಜನೆಗಳ ರಾಜಕೀಯ ಪರಂಪರೆ ಇಂದು ನಿನ್ನೆಯದಲ್ಲ. ಇದರ ಬೇರುಗಳು ದಶಕಗಳ ಹಿಂದಿನವು. ಉಚಿತ ಕೊಡುಗೆಗಳನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಲು ಆರಂಭಿಸಿದ್ದು ತಮಿಳುನಾಡು. 1960ರಲ್ಲಿ ಕೆ.ಕಾಮರಾಜ್ ಅವರು ಆರಂಭಿಸಿದ ಬಿಸಿ ಯೂಟ ಯೋಜನೆಯನ್ನು 1982ರಲ್ಲಿ ಅಂದಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ರಾಜ್ಯಮಟ್ಟಕ್ಕೆ ವಿಸ್ತರಿಸಿದರು.

ಇದು ಕೇವಲ ಕಲ್ಯಾಣ ಯೋಜನೆಯಾಗಿ ಉಳಿಯದೆ, ಅವರನ್ನು ಜನಪ್ರಿಯತೆಯ ತುತ್ತ ತುದಿಯಲ್ಲಿ ಕೂರಿಸಿತು. ಪ್ರತಿಯಾಗಿ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರು ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ಮತ್ತು ಉಚಿತವಾಗಿ ಬಣ್ಣದ ಟಿವಿ ನೀಡುವುದಾಗಿ ಘೋಷಿಸಿ ದರು. ಇದು ಭಾರತೀಯ ರಾಜಕೀಯದಲ್ಲಿ ಒಂದು ದೊಡ್ಡ ಮೈಲಿಗಲ್ಲಾಯಿತು. ಅಲ್ಲಿಂದ ಮುಂದೆ ಮಿಕ್ಸಿ, ಗ್ರೈಂಡರ್, ಲ್ಯಾಪ್‌ಟಾಪ್, ಸೈಕಲ್‌ಗಳ ಹಂಚಿಕೆ ಒಂದು ಸಂಪ್ರದಾಯವಾಗಿ ಬೆಳೆಯಿತು.

Screenshot_4 ಋ

ಆಂಧ್ರಪ್ರದೇಶದಲ್ಲಿ ಎಂಜಿಆರ್ ಮಾದರಿಯನ್ನು ಅನುಸರಿಸಿದ ಎನ್‌ಟಿಆರ್ ತಮ್ಮ ಮುಖ್ಯಮಂತ್ರಿ ಗಾದಿಯನ್ನು ಭದ್ರಪಡಿಸಿಕೊಂಡರು. ಅವರು ಘೋಷಿಸಿದ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ಯೋಜನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಯೋಜನೆಗಳು ಎಂಜಿಆರ್ ಮತ್ತು ಎನ್‌ಟಿಆರ್ ಅವರನ್ನು ಬಡವರ ಕಣ್ಣಲ್ಲಿ ದೈವತ್ವ ಕ್ಕೇರಿಸಿದವು. ನಂತರ ದಕ್ಷಿಣದ ಬಹುತೇಕ ರಾಜ್ಯಗಳು ಉಚಿತ ಅಕ್ಕಿ ಯೋಜನೆಯನ್ನು ಜಾರಿಗೊಳಿಸಿದವು.

2005ರಲ್ಲಿ ಯುಪಿಎ ಸರಕಾರ ಜಾರಿಗೆ ತಂದ 100 ದಿನಗಳ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜನರಿಗೆ ನೇರವಾಗಿ ನಗದು ವರ್ಗಾವಣೆ ಮಾಡುವ ಪರಂಪರೆ ಆರಂಭವಾಯಿತು. ಮೋದಿ ಸರಕಾರವೂ ‘ಪಿಎಂ ಕಿಸಾನ್’ ಹೆಸರಲ್ಲಿ ನಗದು ವರ್ಗಾವಣೆ ಯೋಜನೆ ಆರಂಭಿ ಸಿತು. ಸಮಾಜವಾದಿ ಚಿಂತನೆಯಿಂದ ಆರಂಭವಾದ ಈ ಯೋಜನೆಗಳೆಲ್ಲವೂ ದೇಶದ ಬಡವರು, ರೈತರು ಮತ್ತು ಗ್ರಾಮೀಣರ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದು ಸುಳ್ಳಲ್ಲ.

ಆದರೆ ಕರ್ನಾಟಕ ಸರಕಾರ ಆರಂಭಿಸಿದ ಪಂಚ ಗ್ಯಾರಂಟಿ ಯೋಜನೆಗಳು ಜನಪ್ರಿಯ ಯೋಜನೆಗಳ ವ್ಯಾಖ್ಯಾನವನ್ನು ಬದಲಿಸಿವೆ. ಇಡೀ ಸರಕಾರವೇ ಈಗ ಗ್ಯಾರಂಟಿ ಸ್ಕೀಮುಗಳ ನಡುವೆ ಗಿರಕಿ ಹೊಡೆಯುತ್ತಿದೆ. ಮೊನ್ನೆ ಮಂಡಿಸಿರುವ 2026-27ರ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗಳಿಗಾಗಿ 51,286 ಕೋಟಿ ರು. ಮೀಸಲಿಡಲಾಗಿದೆ. ಅಂದರೆ ರಾಜ್ಯದ ಒಟ್ಟು ವೆಚ್ಚದ ಶೇ. 12ರಷ್ಟು ಭಾಗ ಈ ಯೋಜನೆಗೆ ವ್ಯಯವಾಗಲಿದೆ.

ಸರಕಾರಿ ನೌಕರರ ವೇತನ, ಪಿಂಚಣಿ ಸಾಲದ ಮೇಲಿನ ಬಡ್ಡಿ ಪಾವತಿಯನ್ನು ಸೇರಿಸಿದರೆ ದೈನಂದಿನ ಖರ್ಚುಗಳಿಗೆ ಸರಕಾರ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಜೆಟ್ ಪ್ರಸ್ತಾಪದ ಪ್ರಕಾರ ರಾಜ್ಯ 22,957 ಕೋಟಿ ರು. ಆದಾಯದ ಕೊರತೆಯನ್ನು ಎದುರಿಸುತ್ತಿದೆ. ರಾಜ್ಯದ ಒಟ್ಟು ಸಾಲ ಮತ್ತು ಜಿಡಿಪಿ ಅನುಪಾತವು ಹೆಚ್ಚುತ್ತಿದ್ದು ಸಾಲದ ಪ್ರಮಾಣ 8 ಲಕ್ಷ ಕೋಟಿಗಳ ಆಸುಪಾಸಿನಲ್ಲಿದೆ.

ಈ ಪರಿಸ್ಥಿತಿಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಹಣ ಮೀಸಲಿಡುವುದು ಸವಾಲಿನ ಕೆಲಸ. ಬಜೆಟ್‌ನಲ್ಲಿ ಎಲ್ಲ ಯೋಜನೆಗಳನ್ನು ಹೆಸರಿಸಿ ಒಂದಷ್ಟು ಅನುದಾನ ಮೀಸಲಿಡಬಹುದೇ ಹೊರತು ಕಾಲ ಮಿತಿಯಲ್ಲಿ ಯಾವುದೇ ಯೋಜನೆ ಪೂರ್ಣ ಗೊಳಿಸಲು ಸಾಧ್ಯವಿಲ್ಲ.

ಆರ್ಥಿಕ ತಜ್ಞರ ಪ್ರಕಾರ, ಒಂದು ರುಪಾಯಿಯನ್ನು ರಸ್ತೆ ಅಥವಾ ಸೇತುವೆ ನಿರ್ಮಾಣಕ್ಕೆ ಬಳಸಿದರೆ ಅದು ಆರ್ಥಿಕತೆಗೆ ಎರಡೂವರೆ ಪಟ್ಟು ಲಾಭ ನೀಡುತ್ತದೆ. ಆದರೆ, ಅದೇ ಹಣವನ್ನು ಉಚಿತವಾಗಿ ಹಂಚಿದರೆ ಅದರ ಮೌಲ್ಯ 0.90 ಪೈಸೆಗಿಳಿಯುತ್ತದೆ. ಸಿಎಂ ಸಿದ್ದರಾಮಯ್ಯ ಅವರ ಪ್ರಕಾರ ಗ್ಯಾರಂಟಿ ಮೂಲಕ ನೀಡಲಾದ ಹಣವು ಮರಳಿ ರಾಜ್ಯದ ಆರ್ಥಿಕ ಬೆಳವಣಿಗೆಗೆ, ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ದೂರಗಾಮಿ ನೆಲೆಯಲ್ಲಿ ರಾಜ್ಯವು ಕೈಗೊಳ್ಳಬೇಕಾದ ಯೋಜನೆಗಳಿಗೆ, ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗದೇ ಹೋದರೆ ಕರ್ನಾಟಕದ ಬೆಳವಣಿಗೆ ಕುಂಠಿತವಾಗಲಿದೆ.

ಆಸ್ತಿ ತೆರಿಗೆ, ಅಬಕಾರಿ ತೆರಿಗೆ, ಸೆಸ್, ನೋಂದಣಿ ಶುಲ್ಕ, ವಿದ್ಯುತ್ ಶುಲ್ಕ, ನೀರಿನ ಶುಲ್ಕ ಏರಿಕೆಗಳ ಬಳಿಕವೂ ರಾಜ್ಯದ ಆದಾಯ ಕೊರತೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರೇ, ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಮಾರ್ಚ್ 2026ರ ವರದಿಯ ಪ್ರಕಾರ, ಸುಮಾರು 37ಕ್ಕೂ ಹೆಚ್ಚು ದೊಡ್ಡ ಹಾಗೂ ಮಧ್ಯಮ ಗಾತ್ರದ ನೀರಾವರಿ ಯೋಜನೆಗಳು ಹಣದ ಕೊರತೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದ ಕುಂಟುತ್ತಾ ಸಾಗಿವೆ.

ಇದರಲ್ಲಿ ಹೆಚ್ಚಿನವು 10ರಿಂದ 100 ಕೋಟಿ ವೆಚ್ಚದ ಸಣ್ಣ ನೀರಾವರಿ ಯೋಜನೆಗಳು. ಕೇವಲ 10 ರಿಂದ 50 ಕೋಟಿ ರು. ವೆಚ್ಚದ ಕಾರಣಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದ ನೂರಾರು ಕಾಮಗಾರಿಗಳು ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಆರೋಪವಿದೆ.

ರಾಜ್ಯದಲ್ಲಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತವೇ ಸುಮಾರು 20,000 ಕೋಟಿಗೂ ಹೆಚ್ಚು ಇದೆ ಎಂದು ಅಂದಾಜಿಸಲಾಗಿದೆ. ಸರಕಾರ ‘ಬಿಲ್ ಪಾವತಿ’ ಮಾಡದ ಕಾರಣ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಬಜೆಟ್‌ನಲ್ಲಿ ಸಾಂಕೇತಿಕವಾಗಿ ಹಣ ಮೀಸಲಿಟ್ಟ ಸಾವಿರಕ್ಕೂ ಹೆಚ್ಚು ಸಣ್ಣ ಯೋಜನೆಗಳನ್ನು ಕೈ ಬಿಡಲು ಇಲ್ಲವೇ ವಿಲೀನ ಗೊಳಿಸಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗವೇ ಶಿಫಾರಸು ಮಾಡಿದೆ.

ಇನ್ನೊಂದೆಡೆ ಸರಕಾರ ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿದ್ದ ಯೋಜನೆಗಳ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳಲು ಮುಂದಾಗಿದೆ. ಇದು ಮುಂದೆ ಎಲ್ಲಿಗೆ ಸಾಗಲಿದೆ ಎನ್ನುವುದು ನಾಯಕರಿಗೆ, ಅಧಿಕಾರಿಗಳಿಗೆ ತಿಳಿಯದ ವಿಚಾರವಲ್ಲ. ಆದರೆ ಗ್ಯಾರಂಟಿ ಎಂಬ ಹುಲಿಯನ್ನು ಏರಿದವರು ಈಗ ಸವಾರಿ ಮಾಡಲೇಬೇಕಿದೆ.

ಇದು ಕರ್ನಾಟಕವೊಂದರ ಕಥೆಯಲ್ಲ. ಬಹುತೇಕ ರಾಜ್ಯಗಳು ಜನಪ್ರಿಯ ಯೋಜನೆಗಳ ಜಾರಿಯ ಭರದಲ್ಲಿ ಸಾಲದ ಬಲೆಗೆ ಸಿಲುಕಿವೆ. ಕೇಂದ್ರಸರಕಾರವೂ ಇದಕ್ಕೆ ಹೊರತಲ್ಲ. ಕೇಂದ್ರದ ಸಾಲ ಪ್ರಮಾಣ 200 ಲಕ್ಷ ಕೋಟಿಯ ಸಮೀಪ ತಲುಪಿದ್ದು ಸಾಲದ ಮೇಲಿನ ಬಡ್ಡಿ ಪಾವತಿಯೇ ಬಜೆಟ್‌ನ ಬಹು ದೊಡ್ಡ ಪಾಲನ್ನು ನುಂಗಿ ಹಾಕುತ್ತಿದೆ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕಾರ, ಜನರ ಕಲ್ಯಾಣವನ್ನು ಸಾಧಿಸುವುದು ಸರಕಾರದ ಪ್ರಮುಖ ಕರ್ತವ್ಯ. ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುವುದು ಈ ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ಬರುತ್ತದೆ. ಆದರೆ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಯೋಜನೆಗಳ ಹಂಚಿಕೆ ಜನರ ತೆರಿಗೆ ಹಣದ ದುರುಪಯೋಗ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಇತ್ತೀಚೆಗೆ ಅತಾರ್ಕಿಕ ಉಚಿತ ಕೊಡುಗೆಗಳ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದೆ. ರಾಜ್ಯಗಳು ಆದಾಯದ ಕೊರತೆಯನ್ನು ಎದುರಿಸುತ್ತಿದ್ದರೂ ಸಹ, ಚುನಾವಣಾ ಲಾಭಕ್ಕಾಗಿ ಹಣವನ್ನು ಬೇಕಾಬಿಟ್ಟಿ ಹಂಚುತ್ತಿವೆ. ಇದು ಪ್ರಾಮಾಣಿಕ ತೆರಿಗೆದಾರರಿಗೆ ಮಾಡುವ ದ್ರೋಹ ಎಂದು ಕೋರ್ಟ್ ಹೇಳಿದೆ. ತೆರಿಗೆ ಹಣವನ್ನು ಸ್ಕೂಟಿ, ಬಟ್ಟೆ ಅಥವಾ ನಗದು ಹಂಚಲು ಬಳಸುವ ಬದಲು ರಸ್ತೆ, ಆಸ್ಪತ್ರೆ ಮತ್ತು ಶಾಲೆಗಳ ನಿರ್ಮಾಣಕ್ಕೆ ಏಕೆ ಬಳಸು ತ್ತಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಶ್ರೀಮಂತರು ಮತ್ತು ಬಡವರ ನಡುವೆ ವ್ಯತ್ಯಾಸ ಮಾಡದೆ ಎಲ್ಲರಿಗೂ ಉಚಿತವಾಗಿ ನೀಡುವುದು ಮತ ತುಷ್ಟೀಕರಣವಲ್ಲದೆ ಮತ್ತೇನೂ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು ಈ ಸಂಬಂಧ ನಿಯಮಗಳನ್ನು ರೂಪಿಸು ವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಎಲ್ಲ ಉಚಿತ ಯೋಜನೆಗಳೂ ಕೆಟ್ಟದ್ದಲ್ಲ. ಅತ್ಯಂತ ಬಡತನದಲ್ಲಿರುವ ಕುಟುಂಬಗಳಿಗೆ ಉಚಿತ ರೇಷನ್ ಅಥವಾ ಸಣ್ಣ ಪ್ರಮಾಣದ ನಗದು ವರ್ಗಾವಣೆ ಅವರ ಜೀವನಮಟ್ಟ ವನ್ನು ಸುಧಾರಿಸುತ್ತದೆ. ಆದರೆ ‘ಸರ್ವರಿಗೂ ಉಚಿತ’ ಕೊಡುಗೆಗಳು ಮತ್ತು ನೈಜ ಜನ ಕಲ್ಯಾಣದ ನಡುವೆ ಸ್ಪಷ್ಟ ರೇಖೆ ಇರಬೇಕು. ಸರಕಾರಗಳು ಮತದಾರರನ್ನು ಸೆಳೆಯಲು ಬೊಕ್ಕಸದ ಹಣವನ್ನು ಲಂಚದ ಮಾದರಿಯಲ್ಲಿ ಹಂಚುವಂತಾಗಬಾರದು. ಕೇಂದ್ರ ಮತ್ತು ರಾಜ್ಯಗಳು ತಮ್ಮ ಆದಾಯದ ಕನಿಷ್ಠ ಶೇ.25ರಷ್ಟು ಪಾಲನ್ನು ಕೇವಲ ಮೂಲ ಸೌಕರ್ಯಕ್ಕೆ ಬಳಸಬೇಕು ಎಂಬ ನಿಯಮವನ್ನು ಪಾಲಿಸಬೇಕಾದ ಅಗತ್ಯವಿದೆ. ನಮ್ಮ ನೆರೆ ರಾಷ್ಟ್ರಗಳ ಆರ್ಥಿಕ ಬಿಕ್ಟಟ್ಟು ನಮಗೆ ಪಾಠವಾಗಬೇಕು.