ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಟಿಕ್-ಟಿಕ್‌ ಕಾಲ ಕಳೆದಂತೆ ಹಳತು ಹೊಸತಾಗುವ ಮಾಯೆ !

ಅಜ್ಜನ ವಾಚಿಗೆ ಒಂದು ಸಮಸ್ಯೆ ಇತ್ತು. ಮಳೆಗಾಲದಲ್ಲಿ ಅದರ ಗ್ಲಾಸಿನ ಒಳಗಡೆ ತೆಳ್ಳನೆಯ ತೇವ ಕಟ್ಟು ತ್ತಿತ್ತು. ನಿತ್ಯ ಸಂಜೆ, ಶಾಲೆ ಮುಗಿಸಿ ಬಂದ ಮೇಲೆ, ಕೀಲಿ ಕೊಟ್ಟು ಬಚ್ಚಲು ಮನೆಯ ಸೌದೆ ಒಲೆಯ ಹತ್ತಿರ ಅರ್ಧಗಂಟೆ ಇಡಬೇಕಿತ್ತು. ಶಾಖಕ್ಕೆ ಒಳಗಿನ ನೀರು ಆವಿಯಾಗಿ ಗಾಜು ಹೊಸ ವಾಚಿನಂತೆ ಸ್ಪಷ್ಟವಾಗು ತ್ತಿತ್ತು.

ಶಿಶಿರಕಾಲ

ಕೈ ಗಡಿಯಾರಗಳ ಬಗ್ಗೆ ಮೊದಲಿನಿಂದಲೂ ನನಗೆ ಅದೇನೋ ಒಂದು ವಿಚಿತ್ರ ಸೆಳೆತ. ನನ್ನ ಮೊದಲ ವಾಚು ಅಜ್ಜನದು. ಕಪ್ಪು ಬಣ್ಣದ ಎಚ್‌ಎಂಟಿ ವಾಚು. ಅಜ್ಜ ತೀರಿಕೊಂಡ ನಂತರ ಅಜ್ಜಿ ನೆನಪಿಗೆಂದು ಇಟ್ಟುಕೊಂಡದ್ದನ್ನು ಹೇಗೋ ಒಪ್ಪಿಸಿ ಎಗರಿಸಿದ್ದೆ ಎಂದು ಅಸ್ಪಷ್ಟ ನೆನಪು. ಆಗಿನ್ನೂ ಮೂರ್ನಾಲ್ಕನೇ ಕ್ಲಾಸು. ವಾಚಿನ ಡಯಲ್ ನನ್ನ ಸಪೂರ ಮಣಿಕಟ್ಟಿಗಿಂತ ಆಚೆ ಬರುತ್ತಿತ್ತು. ಉದ್ದನೆಯ ಬೆಲ್ಟ್‌ʼನ ತುದಿ ಎರಡನೆಯ ಸುತ್ತು ದಾಟಿ ಡಯಲ್‌ನಿಂದಾಚೆ ಎರಡು ಇಂಚು ಚಾಚುತ್ತಿತ್ತು. ವಾಚು ನನ್ನ ಕೈ ಅಳತೆ, ದೇಹದ ಅಳತೆ ಎರಡಕ್ಕೂ ಹೊಂದಿಕೆಯಾಗುತ್ತಿರಲಿಲ್ಲ.

ಫಕ್ಕನೆ ಗೋಡೆಗಡಿ ಯಾರವನ್ನೇ ಕಟ್ಟಿಕೊಂಡಿದ್ದನೋ ಎಂಬ ದೃಷ್ಟಿ ಗೊಂದಲ! ನೋಡಿದವರು ಕೈ ನೋವು ಬರುವುದಿಲ್ಲವೇನೋ? ಎಂದು ಕೇಳಿದಾಗಲೆಲ್ಲ ಅದರ ಭಾರ ನೆನಪಾಗಿ ಕೈನೋವು ಬರುತ್ತಿತ್ತು. ಆದರೂ ವಾಚ್ ಕಟ್ಟಿ ಅದರ ಪ್ರಕಾರ ದೊಡ್ಡವರಂತೆ ಬದುಕುವುದು ಬದುಕಿನ ಮುಂಬಡ್ತಿಯಂತೆ ಅನಿಸಿದ್ದು ಸುಳ್ಳಲ್ಲ. ಅಲ್ಲಿಯ ವರೆಗೆ ಹಸಿವೆ, ನಿದ್ರೆ, ಆಟ, ಸೂರ್ಯಾಸ್ತ ಇವುಗಳ ಅಣತಿಯಂತೆ ನಡೆಯುತ್ತಿದ್ದ ಬಾಲ್ಯದ ದಿನಚರಿಗೆ ಅಜ್ಜನ ವಾಚು ಒಂದಿಷ್ಟು ಜವಾಬ್ದಾರಿಯ ಭಾರವನ್ನು ಹೇರಿತ್ತು.

ಅಜ್ಜನ ವಾಚಿಗೆ ಒಂದು ಸಮಸ್ಯೆ ಇತ್ತು. ಮಳೆಗಾಲದಲ್ಲಿ ಅದರ ಗ್ಲಾಸಿನ ಒಳಗಡೆ ತೆಳ್ಳನೆಯ ತೇವ ಕಟ್ಟುತ್ತಿತ್ತು. ನಿತ್ಯ ಸಂಜೆ, ಶಾಲೆ ಮುಗಿಸಿ ಬಂದ ಮೇಲೆ, ಕೀಲಿ ಕೊಟ್ಟು ಬಚ್ಚಲು ಮನೆಯ ಸೌದೆ ಒಲೆಯ ಹತ್ತಿರ ಅರ್ಧಗಂಟೆ ಇಡಬೇಕಿತ್ತು. ಶಾಖಕ್ಕೆ ಒಳಗಿನ ನೀರು ಆವಿಯಾಗಿ ಗಾಜು ಹೊಸ ವಾಚಿನಂತೆ ಸ್ಪಷ್ಟವಾಗುತ್ತಿತ್ತು.

ಇದನ್ನೂ ಓದಿ: Shishir Hegde Column: ಅವಳಿಗೆ ಇಡ್ಲಿ ಇಷ್ಟ, ಆದರೆ ಪಾತ್ರೆ ತೊಳೆಯೋದು ಕಷ್ಟ!

ಅದೊಂದು ದಿನ, ಒಲೆಯ ಸೌದೆಯ ತುದಿಯಲ್ಲಿ ವಾಚ್ ಒಣಗಿಸಲು ಇಟ್ಟು ಬಂದಿದ್ದೆ. ಕೆಲವು ಸೌದಿಯನ್ನು ಸುಡುವಾಗ ಅದರ ಹಿಂದೆ ಒಂದು ಬಿಸಿಯಾದ ಸುಡುವ ಹೀಣು ಬರುತ್ತದೆ ನೋಡಿರ ಬಹುದು. ಅದು ವಾಚಿಗೆ ತಾಗಿ, ಅದೊಂದು ದಿವ್ಯ ಘಳಿಗೆಯಲ್ಲಿ ಅಜ್ಜನ ವಾಚಿನ ಬೆಲ್ಟು ಸುಟ್ಟು ಹೋಯಿತು.

ಹಣೆಬರಹವೇ! ಆ ವಾಚಿನ ಅಜ್ಜನ ನೆನಪಿನ ಜೊತೆ ಈಗ ನನ್ನದೂ ಒಂದು! ಪ್ರಾಣಾಪಾಯದಿಂದ ಬಚಾವಾದ ವಾಚನ್ನು ಅಜ್ಜಿಗೆ ಮರಳಿಸಿ ತಪ್ಪೊಪ್ಪಿಗೆ ಇತ್ಯಾದಿ ಸಲ್ಲಿಸಿ ಕೇಸ್ ಖುಲಾಸೆ ಮಾಡಿ ಕೊಂಡದ್ದಾಯ್ತು. ಯಾಕೋ ‘ಟೈಮೇ’ ಸರಿ ಇಲ್ಲ ಎಂದು ಕೈಗಡಿಯಾರದ ಉಸಾಬರಿ ಅಲ್ಲಿಗೇ ಬಿಟ್ಟದ್ದಾಯ್ತು!

ಕುಮಟೆಯ ಬಸ್ ಇಳಿದು ಶಾಲೆಗೆ ನಡೆದು ಹೋಗುವ ಮಾರ್ಗದಲ್ಲಿಯೇ ಒಂದು ಕೈಗಡಿಯಾರದ ಅಂಗಡಿಯಿತ್ತು. ಅಲ್ಲಿ ಮೂರು ಹೊಸ ನಮೂನೆಯ ವಾಚುಗಳು ಇತ್ತೀಚೆಗೆ ಬಂದಿದ್ದವು. ಮೊದಲ ನೆಯದು ಒತ್ತಿದ ಕೂಡಲೇ ‘ಕೋಳಿ ಕೂಗುವ’ ವಾಚು. ಎರಡನೆಯದು ಇಷ್ಟಗಲದ ಜಾಗದಲ್ಲಿಯೇ ನೂರೆಂಟು ಬಟನ್- ಕ್ಯಾಲ್ಕುಲೇಟರ್ ಇರುವ ವಾಚು, ಇನ್ನೊಂದು ಟಿವಿ ರಿಮೋಟ್ ಕಂಟ್ರೋಲ್ ವಾಚು. ನಾನು ಗೆಳೆಯ ಪ್ರತಿ ದಿನ ನಡೆದು ಹೋಗುವಾಗಲೆಲ್ಲ ಈ ಮೂರು ವಾಚುಗಳು ಕಣ್ಣು ಕುಕ್ಕುತ್ತಿದ್ದುವು. ಅಲಾರಾಂ ಆದಾಗ ಕೋಳಿ ಕೂಗುವ ವಾಚು ಕಡಿಮೆ ದುಡ್ಡಿನದು.

ಕ್ಯಾಲ್ಕುಲೇಟರ್ ವಾಚ್ ಇದ್ದರೆ ಗಣಿತ ಕ್ಲಾಸು, ಪರೀಕ್ಷೆಯಲ್ಲಿ ಹಲಕಟಗಿರಿ ಮಾಡಬಹುದು. ಯಾವುದೇ ಟಿವಿಗೆ ರಿಮೋಟ್ ಕಂಟ್ರೋಲ್ ಆಗಬಲ್ಲ ಚಿಕ್ಕ ವಾಚು ಪ್ರಯೋಜನವೇನು? ಹೇಗಾ ದರೂ ಮಾಡಿ ಆ ಕ್ಯಾಲ್ಕುಲೇಟರ್ ವಾಚು ಖರೀದಿಸಬೇಕು ಎಂದು ನಿರ್ಧರಿಸಿದೆವು. ಒಂದು ದಿನ ಗೆಳೆಯ ಇದ್ದಕ್ಕಿದ್ದಂತೆ ರಿಮೋಟ್ ಕಂಟ್ರೋಲ್ ವಾಚ್ ಕೈಯಲ್ಲಿ ಕಟ್ಟಿಕೊಂಡದ್ದು ಬಂದು ತೋರಿಸಿದ! ಅವನು ಅಜ್ಜನ ಮನೆಯಲ್ಲಿರುತ್ತಿದ್ದರಿಂದ ಒಂದೆರಡು ತಿಂಗಳ ಪಾಕೆಟ್ ಮನಿ ಒಮ್ಮೆಲೇ ಸಿಕ್ಕಿಬಿಡುತ್ತಿತ್ತು. ಹಾಗಾಗಿ ಆ ವಾಚ್ ಖರೀದಿಸಿ ತಂದಿದ್ದ. ನನಗೆ ಆಗಲೇ ಗೊತ್ತಾದದ್ದು, ಈ ಮನುಷ್ಯನ ಅವಶ್ಯಕತೆ ಬೇರೆಯೇ ಇತ್ತು ಎಂದು.

61 ಋ

ಅಜ್ಜನ ಮನೆಯಲ್ಲಿ ಅಕ್ಕಂದಿರ ಜೊತೆ ಇರುತ್ತಿದ್ದರಿಂದ ಟಿವಿ ರಿಮೋಟ್ ಅವನ ಕೈಗೆ ಸಿಗುತ್ತಿರಲಿಲ್ಲ. ಹಾಗಾಗಿ ಚ್ಯಾನೆಲ್ ಬದಲಿಸುವ, ವಾಲ್ಯೂಮ್ ಹೆಚ್ಚು ಕಡಿಮೆ ಮಾಡುವ, ಆನ್-ಆಫ್ ಮಾಡುವ ಚಿಕ್ಕ ರಿಮೋಟ್ ಉಳ್ಳ ವಾಚು ಅವನಿಗೆ ಗಣಿತದ ಮಾರ್ಕ್ಸ್‌ʼಗಿಂತ ಮುಖ್ಯವಾದದ್ದು ಕಂಡು ಸಿಟ್ಟು ಬಂತು! ಸ್ನೇಹಿತ ಈ ವಾಚಿನ ಬಗ್ಗೆ ಅಜ್ಜನ ಮನೆಯಲ್ಲಿ ಹೇಳಿರಲಿಲ್ಲ. ಸುಮ್ಮನೆ ಎಲ್ಲರೂ ಟಿವಿ ನೋಡುವಾಗ ಒಮ್ಮೆಲೆ ಬಂದ್ ಮಾಡಿಬಿಡುವುದು, ವಾಲ್ಯೂಮ್ ಹೆಚ್ಚು ಮಾಡುವುದು ಇತ್ಯಾದಿ ಪುಂಡುತನ. ಇದನ್ನು ತಿಂಗಳುಗಟ್ಟಲೆ ಮಾಡಿzನೆ. ಅವರ ಮನೆಯಲ್ಲಿ ಯಾರಿಗೂ ಹೀಗೊಂದು ಸಾಧ್ಯತೆಯ ಅಂದಾಜೂ ಇಲ್ಲ. ‌

ಅವನ ಮಾವನಂತೂ ಟಿವಿ ಹಾಳಾಗಿ ಹೋಗಿದೆ, ಮನಸೋ ಇಚ್ಛೆ ವ್ಯವಹರಿಸುತ್ತದೆ ಎಂದು ತಲೆ ಬಿಸಿ ಮಾಡಿಕೊಂಡುಬಿಟ್ಟಿದ್ದರು. ಒಮ್ಮೆ ನಾನು ನೆಂಟರ ಮನೆಗೆ ಹೋಗುವಾಗ ಆ ವಾಚನ್ನು ಸ್ನೇಹಿತನಿಂದ ‘ಕೈ-ಗಡ’ ಪಡೆದಿದ್ದೆ.

ದೃಶ್ಯ- ನೆಂಟರ ಮನೆ. ಆಗ ಝೀ ಟಿವಿಯಲ್ಲಿ ವಾರಕ್ಕೊಮ್ಮೆ ‘ಝೀ ಹಾರರ್ ಶೋ’ ಎಂಬ ಭೂತ ದೆವ್ವದ ಧಾರಾವಾಹಿ ಬರುತ್ತಿತ್ತು. ಮುಂದೆ ಹಾರರ್ ಶೋ, ನನ್ನ ಕೈಯಲ್ಲಿ ರಿಮೋಟ್ ಕಂಟ್ರೋಲ್ ವಾಚು!! ಬಾಕಿ ಊಹಿಸಿಕೊಳ್ಳಿ. ಪುಣ್ಯ ಆ ದಿನ ಟಿವಿಯಲ್ಲಿಯ ಭೂತಸಂಚಾರವನ್ನು ಕಂಡು ಅಲ್ಲಿದ್ದ ಯಾರಿಗೂ ಹಾರ್ಟ್ ಅಟ್ಯಾಕ್ ಆಗಲಿಲ್ಲ. ಅಪ್ಪ ಮುಲ್ಕಿ ಪರೀಕ್ಷೆಯ ಮೊದಲು ಒಂದು ವಾಚು ತೆಗೆಸಿಕೊಟ್ಟರು.

ಉಪನಯನದಲ್ಲಿ ಉಡುಗೊರೆಯಾಗಿ ವಾಚು ಬಂತು. ನಂತರ ಯಾವುದೋ ಸ್ಪರ್ಧೆಯಲ್ಲಿ ಗೆದ್ದನೆಂದು ವಾಚು ಕೊಟ್ಟರು. ಪ್ರೇಯಸಿ ವಾಚು ಉಡುಗೊರೆಯಾಗಿ ಕೊಟ್ಟಳು. ಮೊದಲ ಸಂಬಳ ದಲ್ಲಿ ವಾಚು ಖರೀದಿಸಿದ್ದಾಯಿತು.

ಪ್ರತೀ ಬಾರಿ ವಾಚು ಬದಲಿಸಿದಾಗ, ಹೊಸ ವಾಚು ಕೈಗೇರಿದಾಗ ನಾನು ಇನ್ಯಾವುದೋ ವ್ಯಕ್ತಿಯಾಗಿ ಬದಲಾದಂತೆ. ಅಬ್ಬಾ, ಈಗ ಯೋಚಿಸಿದರೆ ಈ ವಾಚುಗಳು ಗಂಟೆ ಮಾತ್ರ ಹೇಳಿದ್ದು ಅಲ್ಲವೇ ಅಲ್ಲ!! ಆಪಲ್ ಸ್ಮಾರ್ಟ್ ವಾಚ್ ಬಿಡುಗಡೆಯಾದ ಮಾರನೆಯ ದಿನವೇ ಖರೀದಿಸಿ ಧರಿಸಿದಾಗ ನಾನು ಮಾನವನಿಗೆ ದೂರ ಯಂತ್ರಮಾನವನಿಗೆ ಹೆಚ್ಚಿಗೆ ಹತ್ತಿರವೇನೋ ಅನಿಸಿದ್ದು ಸುಳ್ಳಲ್ಲ. ಮೊಬೈಲ್ ಇಲ್ಲದ ಕಾಲದಲ್ಲಿ ಜೇಮ್ಸ್ ಬಾಂಡ್ ವಾಚಿನಲ್ಲಿಯೇ ಫೋನ್ ಮಾಡುವುದನ್ನು ಕಂಡು ಗೊತ್ತಿತ್ತು. ಇದು ಕೇವಲ ಕೈಗಡಿಯಾರ ಅಲ್ಲ- ಸ್ಮಾರ್ಟ್ ವಾಚ್! ಅದಕ್ಕೆ ಅದರದೇ ಬುದ್ಧಿವಂತಿಕೆ ಬೇರೆ ಇದೆ! ‌

ಕೇವಲ ಸಮಯ ಹೇಳಿ ಸುಮ್ಮನಿರುವುದಿಲ್ಲ. ಎಷ್ಟು ಹೆಜ್ಜೆ ಹಾಕಿದೆ, ಎದೆಬಡಿತ, ನಿದ್ರೆ, ಇಸಿಜಿ ಎಲ್ಲವನ್ನೂ ಲೆಕ್ಕ ಇಡುತ್ತದೆ. ಕೆಲವೊಮ್ಮೆ ಹೆಂಡತಿಯಂತೆ, ನನ್ನ ಬಗ್ಗೆ ನನಗಿಂತ ಇದಕ್ಕೇ ಜಾಸ್ತಿ ಗೊತ್ತು. ನನಗಿಂತ ಜಾಸ್ತಿ ನನ್ನ ಮೇಲಿನ ಕಾಳಜಿ! ಜಾಸ್ತಿ ಹೊತ್ತು ಒಂದೇ ಕಡೆ ಕೂತರೆ ಎಚ್ಚರಿಸು ತ್ತಿತ್ತು. ಸೋಫಾ ಬಿಸಿ ಮಾಡಿದ್ದು ಸಾಕು, ಏಳು, ಎಲ್ಲಿಗಾದರೂ ಹೊರಡು ಎನುತ್ತಿತ್ತು. ಟೆನ್ಷನ್ ಆದಾಗ ಹೃದಯ ಬಡಿತ ಹೆಚ್ಚಿದರೆ ಎಚ್ಚರಿಸಿ ಇನ್ನಷ್ಟು ಕಳವಳ ಮತ್ತು ಹೃದಯ ಬಡಿತಕ್ಕೆ ಕಾರಣವಾಗುತ್ತದೆ.

ಮೊಬೈಲ್ ಫೋನ್‌ನದೇ ಒಂದು ಚಿಕ್ಕ ತುಂಡು. ಆಹಾ, ಎಂಥಾ ಸೌಲಭ್ಯ! ಪದೇ ಪದೆ ಮೊಬೈಲ್ ಕೈಗೆತ್ತಿಕೊಳ್ಳಬೇಕಾಗಿಲ್ಲ, ಆರೋಗ್ಯದ ಮೇಲೂ ಒಂದು ನಿಗಾ ಇಟ್ಟಂತಾಗುತ್ತದೆ. ಮೊದಲೆಲ್ಲ ನನ್ನ ಮತ್ತು ಸ್ಮಾರ್ಟ್ ವಾಚಿನ ಸಂಬಂಧ ಅನ್ಯೋನ್ಯವಾಗಿಯೇ ಇತ್ತು. ಕಾಲ ಕಳೆದಂತೆ ಅದರ ಅಸಲಿ ಯತ್ತು ಗೊತ್ತಾದದ್ದು. (ಕೆಲವರಿಗೆ ಹೆಂಡತಿಯ ವಿಷಯದಲ್ಲೂ ಹಾಗಾದರೆ ಅದು ಕಾಕತಾಳೀಯ.) ಮೊಬೈಲ್ ನಿಂದ ಸ್ವಲ್ಪ ದೂರ ಪಡೆಯೋಣವೆಂದರೆ ಎರಡನೆಯ ಹರಗಣವನ್ನು ಕೈಗೆ ಕಟ್ಟಿಕೊಂಡಂತೆನಿಸತೊಡಗಿತು. ಇಮೇಲ್, ವಾಟ್ಸಆಪ್, ಫೇಸ್ಬುಕ್, ಇನ್‌ಸ್ಟಾಗ್ರಾಂ ಒಂದೇ ಎರಡೇ. ಯಾಕೋ ಮಣಿಕಟ್ಟಿನ ಅಳತೆಯನ್ನು ವಾಚು ಮೀರಿಬಿಟ್ಟಿದೆ ಎನಿಸಿತೊಡಗಿತು.

ಸ್ಮಾರ್ಟ್ ವಾಚಿನ ಬುದ್ಧಿವಂತಿಕೆ ಕಿರಿಕಿರಿಯೆನಿಸತೊಡಗಿತು. ಈಗ ನಾಲ್ಕು ವರ್ಷದಿಂದ ಯಾವುದೇ ಸ್ಕ್ರೀನ್ ಇಲ್ಲದ ಹೆಲ್ತ್ ಬ್ಯಾಂಡ್ ಧರಿಸುತ್ತೇನೆ. ಅದು ಇಡೀ ದಿನ ತೆಪ್ಪಗೆ ನನ್ನ ಆರೋಗ್ಯದ ವಿವರ ಸಂಗ್ರಹಿಸುತ್ತದೆ. ಈಗ ಕೈಗಡಿಯಾರದ ಅವಶ್ಯಕತೆ ಇದೆಯೇ? ಗಡಿಯಾರ ಎಡೆಯೂ ಕಾಣಸಿಗುತ್ತದೆ. ಇಲ್ಲವೇ ಕೈಯಲ್ಲಿ ಮೊಬೈಲ್. ಯಾವುದೂ ಇಲ್ಲವೆಂದರೆ ಪಕ್ಕದಲ್ಲಿ ಯಾರನ್ನೋ ಟೈಮ್ ಎಷ್ಟು ಎಂದು ಕೇಳುತ್ತೇನೆ. ತೀರಾ ಇತ್ತೀಚಿನವರೆಗೂ ಸಹಜವಾಗಿದ್ದ ಪ್ರಶ್ನೆಯೊಂದು ಅಪ್ರಸ್ತುತವಾದದ್ದು ಪುನಃ ಅವರ ಎದುರಾಗಿ ಕೆಲವರು ಗಾಬರಿ ಮತ್ತು ಆಶ್ಚರ್ಯದಿಂದಲೇ ಉತ್ತರಿಸುತ್ತಾರೆ.

ಕೆಲ ತಿಂಗಳ ಹಿಂದೆ ಭಾರತಕ್ಕೆ ಬಂದಾಗ ಕುಮಟೆಯ ಆ ಹಳೆಯ ವಾಚಿನ ಅಂಗಡಿ ಇನ್ನೂ ಹಾಗೆಯೇ ಇರುವುದು ಕಂಡು ಶಬ್ದಕ್ಕೆ ಸಿಗದ ಭಾವವೊಂದು ನನ್ನನ್ನು ಅನುದ್ದೇಶ ಆ ಅಂಗಡಿಯ ಒಳಗೆ ಕರೆದೊಯ್ದು ನಿಲ್ಲಿಸಿತ್ತು. ಅಂಗಡಿಯೆಂದರೆ ಕಟ್ಟಡದ ಮೆಟ್ಟಿಲ ಕೆಳಗಡೆಯ ಚಿಕ್ಕ ಕೋಣೆ. ಮಾಲಕ ಎದ್ದು ನಿಂತರೆ ಸಿಮೆಂಟ್ ಮೆಟ್ಟಿಲ ಒಳ ಆಯ ತಲೆಗೆ ತಾಗುತ್ತದೆ.

ಮೊದಲು ಈ ಚಿಕ್ಕ ಅಂಗಡಿಯೊಳಗೆ ಹೊಕ್ಕುವುದೆಂದರೆ ಎಡೆ ಟಿಕ್, ಟಿಕ್ ಶಬ್ದ. ನಿಮಿಷದ ಮುಳ್ಳು ಹನ್ನೆರಡಕ್ಕೆ ಬಂತೆಂದರೆ ಚಿತ್ರವಿಚಿತ್ರ ಗಡಿಯಾರಗಳ ಕೂಕ್-ಕೂಕ್, ಡಿಂಗ್-ಡಾಂಗ್ ಸದ್ದು. ದೇವಸ್ಥಾನದಲ್ಲಿ ಮಂಗಳಾರತಿ, ಜಾಗಟೆ ಸದ್ದಿನಂತೆ ಇಲ್ಲಿ ಗಂಟೆಗೊಮ್ಮೆ ವಾದ್ಯಮೇಳ, ಹಗಲಿರುಳು. ಸಮಯ ಸರಿದು ಹೋಗುವುದು ಕಾಣಿಸುತ್ತಿತ್ತು, ಕೇಳಿಸುತ್ತಿತ್ತು, ಅನುಭವಕ್ಕೆ ಬರುತ್ತಿತ್ತು. ಆದರೆ ಈಗ ಸಮಯ ಸರಿಯುವುದೇ ನಿಂತು ಹೋದ ಯಾವುದೋ ಕೋಣೆಯೊಳಗೆ ಹೊಕ್ಕಂತೆ. ಮಾರಾಟ ವಾಗದ ಹೊಸ ವಾಚುಗಳು ಅದಾಗಲೇ ನೆನಪಿನ ತುಂಡುಗಳಾಗಿ ಬಿಟ್ಟಿವೆ. ‌

‘ಆಗೀಗ ವಾಚಿನ ಬ್ಯಾಟರಿ ಹಾಕಿಸಿಕೊಳ್ಳಲು ನಿಮ್ಮ ಹಾಗೆ ಹಳ್ಳಿ ಕಡೆಯಿಂದ ಒಂದಿಷ್ಟು ಜನರು ಬರುತ್ತಾರೆ. ಈಗಿನ ಹುಡುಗರದ್ದು ಏನಿದ್ದರೂ ಸ್ಮಾರ್ಟ್ ವಾಚು. ವಾಚಿನ ರಿಪೇರಿ ಕೆಲಸವೇ ಇಲ್ಲ’ ಎಂದು ಅಂಗಡಿ ಯಾತ ಹೇಳಿದಾಗ time is no more ticking ಈಗಿನ ಸಮಯ ಟಿಕ್-ಟಿಕ್ ಎನ್ನುವುದಿಲ್ಲ ಎಂದೆನಿಸಿತು. ಮಾಲ್‌ಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಕೈ-ಗಡಿಯಾರದ ಅಂಗಡಿ ಗಳನ್ನು ಒಳ ಹೊಕ್ಕದೆ ಮುಂದೆ ಹಾದು ಹೋಗುವುದು ನನಗೆ ಇವತ್ತಿಗೂ ಕಷ್ಟ. ಎಷ್ಟೆಂದರೆ, ನನ್ನವಳಿಗೆ ಸೀರೆ ಅಂಗಡಿ ದಾಟಿದಷ್ಟು!

ಬೆಂಗಳೂರಿನ ವಾಚಿನ ಅಂಗಡಿಯೊಂದರಲ್ಲಿ ಎಚ್ ಎಂಟಿ ವಾಚು ಬಹಳ ಗಮನಸೆಳೆಯಿತು. ಅತ್ಯಂತ ಇಷ್ಟವಾದದ್ದು ಅದರೊಳಗಿನ ‘ಗಂಡಭೇರುಂಡ’ ಚಿಹ್ನೆ. ಅದೇನೋ ಈ ಚಿಹ್ನೆಯೆಂದರೆ ಮೊದಲಿನಿಂದಲೂ ಸೆಳೆತ. ಈ ವಾಚು ಖರೀದಿಸಬೇಕು, ಪುನಃ ವಾಚು ಧರಿಸುವುದು ಆರಂಭಿಸುತ್ತೇನೆ ಎಂದು ಹೆಂಡತಿಯ ಹತ್ತಿರ ಹೇಳಿದೆ. ಅವಳು ಕಿಸಕ್ಕನೆ ನಕ್ಕು ಮಗಳತ್ತ ಹೊರಳಿ ನೋಡಿದಳು. ‘ನೀನು ವಾಚು ಹಾಕುವುದು ಅಷ್ಟೇ ಇದೆ’ ಎಂದು ಹೇಳುತ್ತಲೇ ಅವಳೊಂದು ಚಂದದ ವಾಚು ಕೈಗೆತ್ತಿಕೊಂಡಳು.

ಅಮ್ಮನ ಜೊತೆ ಅಂಗಡಿಗೆ ಹೋದಾಗ ವಾಚು ಬೇಕೆಂದು ಹಠ ಮಾಡಿ, ಅಮ್ಮ ಕೊಡಿಸದೇ ಹೋದ ‘ನಾಸ್ಟಾಲ್ಜಿಯಾ’ ಪುನಃ ನೆನಪಾಗಿ ‘ಈ ಗಂಡು ಜನ್ಮವೇ ಇಷ್ಟೇ?’ ಎಂದೆಲ್ಲ ಯೋಚನೆ ಬಂತು. ಅವಳು ನನ್ನ ವಾಚಿನ ಬಿಲ್ ಪಾವತಿಸಿ ‘ಬನ್ನಿ’ ಎಂದು ಹೇಳಿದಾಗಲೇ ನಾನು ಇಹಕ್ಕೆ ಬಂದದ್ದು! ಸ್ನೇಹಿತರ ಮಗಳು ಮೇಘನಾ, ಕಾಲೇಜು ಓದುತ್ತಿರುವವಳು ಇತ್ತೀಚೆಗೆ ಭಾರತಕ್ಕೆ ಹೋದಾಗ ಅದೇ ಎಚ್‌ಎಂಟಿ ವಾಚ್ ಒಂದನ್ನು ಖರೀದಿಸಿ ತಂದಿದ್ದಳು. ಅವಳು ಅಮೆರಿಕಾದಲ್ಲಿಯೇ ಹುಟ್ಟಿ ಬೆಳೆದ ಜೆನ್-ಝೀ!

ಭಾರತಕ್ಕೆ ಹೋದಾಗ ಅಜ್ಜಿಯ ಹಳೆಯ ಪೆಟಾರಿ, ಮರದ ಪೆಟ್ಟಿಗೆ, ತಾಮ್ರದ ಚೊಂಬು, ಒಂದಿಷ್ಟು ಕವಡೆ ಇತ್ಯಾದಿಯನ್ನೆಲ್ಲ ಹೊತ್ತು ತಂದಿದ್ದಳು. ಜೊತೆಯಲ್ಲಿ ಎಚ್‌ಎಂಟಿ ವಾಚ್! ಅವಳು ಆ ಯಾವುದೇ ವಸ್ತು ಬಳಸಿದವಳೇ ಅಲ್ಲ. ಅದು ಕರಳು ಬಳ್ಳಿಯ ಸೆಳೆತ. ನನಗೆ ಅದು ಅರ್ಥವಾಯಿತು. ಆದರೆ ವಾಚ್ ಖರೀದಿಸಿ ತಂದದ್ದು ಬಹಳ ವಿಚಿತ್ರವೆನಿಸಿತು.

ಏಕೆಂದರೆ ಅವಳು ನನ್ನ ಹಾಗೆ ಹಿಂದೆ ಎಚ್‌ಎಂಟಿ ವಾಚ್ ಧರಿಸಿ ದವಳಲ್ಲ. ಕುಮಟೆಯ ಎರಡು ಮೊಬೈಲ್ ಅಂಗಡಿಯ ನಡುವೆ ನಿಂತ ಕೈಗಡಿಯಾರದ ಅಂಗಡಿಯಂತೆ ಅವಳ ಕೈಯಲ್ಲಿನ ಎಚ್‌ಎಂಟಿ ವಾಚು ಅಲ್ಲಿ ಹೊಂದಿಕೆಯೇ ಆಗುವುದಿಲ್ಲವೆನಿಸಿ ಅವಳಲ್ಲಿ ಕೇಳಿದೆ. I wanted to have a piece on me which is from India, Karnataka and genuinely Indian.

ಭಾರತದ, ಕರ್ನಾಟಕದ, ಭಾರತೀಯವಾದ ಚಿಕ್ಕ ತುಂಡು ಸದಾ ನನ್ನ ಜೊತೆ ಇರಬೇಕೆಂದೆನಿಸಿ ಇದನ್ನು ತಂದೆ ಎಂದಳು. ಮಣ್ಣಿನ ಸೆಳೆತ ಸಾವಿರಾರು ಮೈಲಿಯಾಚೆಯ ಅನ್ಯ ನೆಲದಲ್ಲಿ ತಲೆಮಾರು ದಾಟುವುದು ಕಂಡಾಗಲೆಲ್ಲ ಹೆಮ್ಮೆ- ನೆಮ್ಮದಿಯೆನಿಸುತ್ತದೆ. ನಾಸ್ಟಾಲ್ಜಿಯಾ ಎಂದರೆ ಹಿಂದೆ ನಮ್ಮಲ್ಲಿ ಇದ್ದದ್ದನ್ನು ಕಳೆದುಕೊಂಡದ್ದನ್ನು ನೆನಪಿಸಿಕೊಳ್ಳುವುದು ಅಲ್ಲವೇ? ನಾನೀಗ ಹಳೆಯ ಕೊಡಾಕ್ ರೀಲ್ ಕ್ಯಾಮರಾ ವನ್ನು ನೆನಪಿಸಿಕೊಂಡರೆ ಅದು ನಾಸ್ಟಾಲ್ಜಿಯಾ. ಆದರೆ ಇದು ಹಾಗಲ್ಲ. ನಮ್ಮ ಮನೆಯಂದು ಮದ್ದು ಅರೆಯುವ ಸಾಧಾರಣ ಕಲ್ಲು ಗುಂಡು ಇದೆ.

ಬಹುಶಃ ನಾಲ್ಕೆ ದು ತಲೆಮಾರು ದಾಟಿ ಬಂದಿರಬಹುದು. ಆದರೆ ಮುತ್ತಜ್ಜನ ಕಾಲದ್ದು ಎಂದರೆ ಆ ಕಲ್ಲು ಗುಂಡು ಕೂಡ ವಿಶೇಷವೆನಿಸುತ್ತದೆ. ಏಕೆಂದರೆ ಅದು ಕೇವಲ ವಸ್ತುವಾಗಿ ಉಳಿದಿಲ್ಲ. ಅದೆಷ್ಟೋ ನೆನಪುಗಳು ಅವುಗಳ ಜೊತೆ ಬಸಿದುಕೊಂಡಿವೆ. ಒಂದು ಮಜವೆಂದರೆ ನಮಗೆ ಆ ಯಾವ ನೆನಪಿನ ಅರಿವು ಕೂಡ ಇಲ್ಲ. ಇದನ್ನು Borrowed Nostalgia ಎನ್ನುತ್ತಾರೆ- ಎರವಲು ಪಡೆಯುವ ನಮ್ಮದಲ್ಲದ ನೆನಪು. ಒಟ್ಟಾರೆ ನಮಗೆ ಎಲ್ಲದೂ, ಹಳೆಯದು ಕೂಡ ಹೊಸತನದ ಅನುಭವ ಕೊಡಬಲ್ಲದು!

ಇದು ಮೂಲದ ಗುರುತಿನ ಸೆಳೆತವೇ. ಇತ್ತೀಚೆ ಅಕ್ಕ ಸಮ್ಮೇಳನಕ್ಕೆ ಹೋದಾಗ ಚರ್ಚೆಯೊಂದರಲ್ಲಿ ಭಾಗವಹಿಸಿದ್ದರ ಬಗ್ಗೆ ಬರೆದಿದ್ದೆ. ಚರ್ಚೆ ಮುಗಿಸಿ ಶಾಲು ಹೊದೆಸುವಾಗ ಕೈಯಂದು ಚೀಲ ಕೊಟ್ಟಿದ್ದರು. ಅದನ್ನು ಏನೆಂದೂ ನೋಡದೇ ಸೂಟ್ಕೇಸ್‌ನಲ್ಲಿಟ್ಟು ಮರೆತುಬಿಟ್ಟಿದ್ದೆ. ಸುಮಾರು ದಿನದ ನಂತರ ನೆನಪಾಗಿ ಚಿಕ್ಕ ಪೆಟ್ಟಿಗೆ ತೆರೆದು ನೋಡುತ್ತೇನೆ- ಅದೇ ಗಂಡಭೇರುಂಡ ಗುರುತಿನ ಎಚ್‌ಎಂಟಿ ವಾಚು!

ಸಮ್ಮೇಳನಕ್ಕೆ ಬರುವಾಗ ಕೈಗಾರಿಕಾ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನೆನಪಿನ ಕಾಣಿಕೆ ಯಾಗಿ ಕೊಡಲು ಇದನ್ನು ತಂದು ಕೊಟ್ಟಿದ್ದಂತೆ. ಅದೇನೇ ಇರಲಿ, ಸತ್ಯ ಹೇಳುತ್ತೇನೆ, ನನಗೆ ಅಷ್ಟೇ ಭಾರದ ಚಿನ್ನ ಕೊಟ್ಟಿದ್ದರೂ ಅಷ್ಟು ಖುಷಿಯಾಗುತ್ತಿರಲಿಲ್ಲ.

ಲಾಟರಿ ಸಂಭ್ರಮ. ನನ್ನವಳಿಗೆ ತೋರಿಸಿದಾಗ ಇದೆಲ್ಲ ಎಲ್ಲಾ ಗ್ರಹಗತಿಗಳನ್ನು ಮೊದಲೇ ಲೆಕ್ಕ ಹಾಕಿಯೇ ಆ ದಿನ ಬೆಂಗಳೂರಿನಲ್ಲಿ ವಾಚು ಖರೀದಿಸಲು ಬಿಡದಿದ್ದದ್ದಂತೆ! ಈಗ ಸಿಕ್ಕಿದೆಯಲ್ಲ- ಎಷ್ಟು ದಿನ ಧರಿಸುತ್ತೀಯಾ ನೋಡುತ್ತೇನೆ ಎಂದು ಲೆಕ್ಕ ಶುರುಮಾಡಿದ್ದಾಳೆ. ಈಗ ಮತ್ಯಾಕೋ ಎಚ್‌ಎಂಟಿ ವಾಚು ಹಗುರವೆನಿಸುತ್ತಿದೆ. ವಾಚನ್ನು ನೋಡುವಾಗ ವಾಚಿನ ಹಿನ್ನೆಲೆಯಲ್ಲಿ ನನ್ನ ಅಜ್ಜನ ಮಣಿಕಟ್ಟು ಕೂಡ ಹೀಗೆಯೇ ಇತ್ತೇನೋ ಎಂದೆನಿಸುತ್ತದೆ.

ಮುಖ್ಯವಾಗಿ ಭಾರತದ ತುಂಡೊಂದು ನನ್ನ ಜೊತೆ ಸದಾ ಅಂಟಿಕೊಂಡೇ ಇರುವ ಭಾವ ಖುಷಿ ಕೊಡುತ್ತಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕೈಗಡಿಯಾರ ಪುನಃ ಟಿಕ್ ಟಿಕ್ ಎಂಬ ಶಬ್ದ ಮಾಡುತ್ತಿದೆ. ಡಿಜಿಟಲ್ ವಾಚುಗಳಲ್ಲಿ, ಮೊಬೈಲ್‌ಗಳಲ್ಲಿ ಸಮಯ ಸರಿಯುವಾಗ ಸzಗುವುದೇ ಇಲ್ಲ. ಈಗ ಸಮಯ ಕಳೆಯುವ ಕಾಲದ ಶಬ್ದ ಕೇಳಿಸುತ್ತದೆ. ಸಮಯವನ್ನಷ್ಟೇ ಹೇಳುವ ವಾಚು ಹಾಯೆನಿಸು ತ್ತಿದೆ! ನಾನೇಕೋ ಬೇಗ ಒಂದು ಸುತ್ತು ಹಾಕಿಬಂದನೇನೋ ಎಂದೆನಿಸುತ್ತಿದೆ

ಶಿಶಿರ್‌ ಹೆಗಡೆ

View all posts by this author