ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shishir Hegde Column: ಅವಳಿಗೆ ಇಡ್ಲಿ ಇಷ್ಟ, ಆದರೆ ಪಾತ್ರೆ ತೊಳೆಯೋದು ಕಷ್ಟ!

ನನ್ನ ಅಜ್ಜಿಯ ಮನೆ ತುಂಬು ಕುಟುಂಬ. ಮನೆಯಲ್ಲಿ ನಿತ್ಯ ಬೆಳಗ್ಗಿನ ಉಪಹಾರಕ್ಕೆ ಮನೆ ಜನರೇ ಎಂಟು ಹತ್ತು. ಜೊತೆಯಲ್ಲಿ ಭತ್ತದ ಗz ಹೂಟಿ, ನೆಟ್ಟಿ, ಕೊಯ್ಲು ಇತ್ಯಾದಿ ಇರುವಾಗ ಕೃಷಿ ಕಾರ್ಮಿಕರು. ಹದಿನೈದಿಪ್ಪತ್ತು ಜನರಿಗೆ ದೋಸೆ ಮಾಡಿ ಬಡಿಸುವುದೆಂದರೆ ಒಪ್ಪತ್ತಿನ ಕೆಲಸ. ತಡವಾಗಿಬಿಡುತ್ತದೆ. ಹಾಗಾಗಿ ಅಂತಹ ದಿನಗಳಲ್ಲಿ ಅಜ್ಜಿ ‘ಶೆಖೆ ಹಿಟ್ಟು’ (ಉಡುಪಿ ಕಡೆ ಮಾಡುವ ಒಂದು ಬಗೆಯ ಇಡ್ಲಿ) ಮಾಡುತ್ತಿದ್ದಳು.

ಅವಳಿಗೆ ಇಡ್ಲಿ ಇಷ್ಟ, ಆದರೆ ಪಾತ್ರೆ ತೊಳೆಯೋದು ಕಷ್ಟ!

-

ಶಿಶಿರಕಾಲ

‘ನಾಳೆ ಬೆಳಿಗ್ಗೆ ತಿಂಡಿಗೆ ಏನು ಮಾಡಬೇಕು?’ ಎಲ್ಲಾ ಗೃಹಿಣಿಯರಿಗೂ ನಿತ್ಯ ಭೂತದಂತೆ ಎದುರಾ ಗುವ ಪ್ರಶ್ನೆ ಇದು! ಇದಕ್ಕೆ ಉತ್ತರ ಸಿಕ್ಕ ನಂತರವೇ ರಾತ್ರಿಯ ಮನಃಶಾಂತಿ. ಇಡ್ಲಿ ಅಥವಾ ದೋಸೆಗೆ ಹಿಂದಿನ ದಿನ ಬೆಳಿಗ್ಗೆಯೇ ನೆನೆಸಿ, ಸಂಜೆ ಬೀಸಿಟ್ಟುಕೊಂಡಾಗ ಸಮಸ್ಯೆ ಇಲ್ಲ. ಆದರೆ ದೋಸೆ ಮಾಡಿಕೊಂಡರೆ ಬೆಳಿಗ್ಗೆ ನಿಂತು ಅದನ್ನು ಎರೆಯಬೇಕು. ಇಡ್ಲಿ ಇದ್ದದ್ದರ ವಾಸಿ. ಸ್ವಲ್ಪ ಆರಾಮು. ಒಂದೇ ಹೊಡೆತಕ್ಕೆ ಮನೆಯವ ರಿಗೆಲ್ಲ ತಿಂಡಿ ಆಗಿಬಿಡುತ್ತದೆ.

ಇನ್ನು ನೆಂಟರಿಷ್ಟರು ಮನೆಗೆ ಬಂದಾಗ, ಬೆಳಗಿನ ಉಪಾಹಾರಕ್ಕೆ ಜಾಸ್ತಿ ಜನರಿದ್ದಾಗ ಇಡ್ಲಿ ಮಾಡಿ ಕೊಂಡರೆ ಸೂಕ್ತ. ಆದರೆ, ಈ ಇಡ್ಲಿಯದೊಂದು ಸಮಸ್ಯೆ ಇದೆ. ಅಸಲಿಗೆ ಸಮಸ್ಯೆ ಇಡ್ಲಿಯದಲ್ಲ, ಈ ಇಡ್ಲಿ ಪಾತ್ರೆಗಳದ್ದು. ‘ಇಡ್ಲಿ ಅಟ್ಟು’ (ಬೇಯಿಸುವ ಪಾತ್ರೆ), ತಟ್ಟೆ, ಅಚ್ಚು, ಮುಚ್ಚಳ- ಮೊದಲಾದ ಇಡ್ಲಿ ಪಾತ್ರೆಗಳ ಪರಿವಾರ.

ಇಡ್ಲಿ ಬೇಯಿಸಿದ ನಂತರ ಅವುಗಳನ್ನು ಸಿಂಕಿನೊಳಗೆ ತೊಳೆಯಲು ಹೊಂದಿಸಿಟ್ಟು, ನೀರಿನಲ್ಲಿ ಬಹಳ ಹೊತ್ತು ನೆನೆಸಿಟ್ಟು, ತೊಳೆದು, ಒಣಗಿಸಿ ಒಳಸೇರಿಸಿಡುವ ಪ್ರಕ್ರಿಯೆ ಇದೆಯಲ್ಲ, ಅದು ಎಲ್ಲಾ ಗೃಹಿಣಿಯ ರಿಗೂ ಎಲ್ಲಿಲ್ಲದ ಕಿರಿಕಿರಿಯ ಕೆಲಸ. ನಾನು ಈ ವಿಷಯದ ಮೇಲೆ ಯಾವುದೇ ಸರ್ವೇ ಮಾಡಿಲ್ಲ, ಅಥವಾ ರಿಸರ್ಚ್ ಪೇಪರ್, ವೈeನಿಕ ಸಾಕ್ಷ ಇಟ್ಟು ಇದನ್ನು ಹೇಳುತ್ತಿಲ್ಲ. ಆದರೆ ಎಲ್ಲಾ ಗೃಹಿಣಿಯರಿಗೂ, ಇಡ್ಲಿ ಪಾತ್ರೆಯೆಂದರೆ ಅದೇನೋ ಒಂದು ಅಸಹನೆ ಇದೆ ಮತ್ತು ಅದು ಸಾರ್ವತ್ರಿಕ ಎನ್ನುವುದಂತೂ ಸತ್ಯ!!

ಇದನ್ನೂ ಓದಿ: Shishir Hegde Column: ಪ್ರಕರಣ ಸಿಬಿಐಗೆ ಕೊಟ್ಟ ತಕ್ಷಣ ನ್ಯಾಯ ಬದುಕಿ ಬಿಡುತ್ತದೆಯೇ ?

ಯಾವುದೇ ಸಮಯದಲ್ಲಿ ಗೃಹಿಣಿಯ ಸಹನೆಗೂ- ಅಡುಗೆ ಮನೆಯ ಸಿಂಕಿನಲ್ಲಿ ತುಂಬಿದ ಪಾತ್ರೆಯ ಮಟ್ಟಕ್ಕೂ ನೇರ ಸಂಬಂಧವಿದೆ ಎನ್ನುವುದು ಸೂಕ್ಷ್ಮ ಗಂಡಂದಿರಿಗಷ್ಟೇ ತಿಳಿದಿರುತ್ತದೆ. ಆದರೆ ಆ ಪ್ರಜಾತಿ ಕಡಿಮೆ ಇರುವುದರಿಂದ ಇದು ಜಾಸ್ತಿ ಜನರಿಗೆ ಗೊತ್ತಿಲ್ಲದ ವಿಚಾರ. ತೊಳೆಯುವ ಪಾತ್ರೆ ಮತ್ತು ನಲ್ಲಿಯ ಅಂತರ ಕಡಿಮೆಯಾದಂತೆ, ಪಾತ್ರೆಗಳು ಸಿಂಕಿನಲ್ಲಿ ಗೋಪುರವಾದಂತೆ ಅಡುಗೆಮನೆ ಯ ಅವಳ ಸಹನೆ ಮಟ್ಟ ಅಷ್ಟು ತಗ್ಗುತ್ತದೆ. Inversely proportional. ವ್ಯುತ್ಕ್ರಮಾನುಪಾತ. ಅಂತಹ ಸಂದರ್ಭದಲ್ಲಿಯೇ ಗಂಡು ಜೀವಿ ಲೋಟವನ್ನೋ, ಚಮಚವನ್ನೋ ಅನವಶ್ಯ ಬಳಸಿ ಆ ಸಿಂಕಿನೊಳಗೆ ಹಾಕಿದರೆ ಅವಳಿಗೆ ಮುಡಿಕಟ್ಟುವಷ್ಟು ಕೋಪ ಬರುತ್ತದೆ.

ಹೀಗಿರುವಾಗ, ಬೆಳ್ಳಂಬೆಳಿಗ್ಗೆ ಇಡ್ಲಿ ಪಾತ್ರೆಗಳ ವಿಚಿತ್ರ ಆಕಾರಗಳಿಂದ ಸಿಂಕ್ ಹೇಗೆ ಹೇಗೋ ತುಂಬಿ ಹೋದರೆ ರಗಳೆ ಅನಿಸುವುದು ತಪ್ಪೇ? ಕೆಲವು ಗೃಹಿಣಿಯರಿಗಂತೂ ಇಡ್ಲಿ ಬೀಸಿಕೊಂಡ ರಾತ್ರಿಯೇ, ಬೆಳಿಗ್ಗೆ ಇಡ್ಲಿ ಪಾತ್ರೆ ತೊಳೆಯುವ ಕನಸು ಬಿದ್ದು, ಆತಂಕವಾಗುತ್ತದಂತೆ!

ನನ್ನ ಅಜ್ಜಿಯ ಮನೆ ತುಂಬು ಕುಟುಂಬ. ಮನೆಯಲ್ಲಿ ನಿತ್ಯ ಬೆಳಗ್ಗಿನ ಉಪಹಾರಕ್ಕೆ ಮನೆ ಜನರೇ ಎಂಟು ಹತ್ತು. ಜೊತೆಯಲ್ಲಿ ಭತ್ತದ ಗದ್ದೆ ಹೂಟಿ, ನೆಟ್ಟಿ, ಕೊಯ್ಲು ಇತ್ಯಾದಿ ಇರುವಾಗ ಕೃಷಿ ಕಾರ್ಮಿಕರು. ಹದಿನೈದಿಪ್ಪತ್ತು ಜನರಿಗೆ ದೋಸೆ ಮಾಡಿ ಬಡಿಸುವುದೆಂದರೆ ಒಪ್ಪತ್ತಿನ ಕೆಲಸ. ತಡವಾಗಿಬಿಡುತ್ತದೆ. ಹಾಗಾಗಿ ಅಂತಹ ದಿನಗಳಲ್ಲಿ ಅಜ್ಜಿ ‘ಶೆಖೆ ಹಿಟ್ಟು’ (ಉಡುಪಿ ಕಡೆ ಮಾಡುವ ಒಂದು ಬಗೆಯ ಇಡ್ಲಿ) ಮಾಡುತ್ತಿದ್ದಳು.

61 ಒಕ

ಅಜ್ಜಿಯ ಮನೆಯದು ಸಿಲೆಂಡರಿನಷ್ಟು ದೊಡ್ಡದಾದ ಇಡ್ಲಿ ಅಟ್ಟು. ಅಷ್ಟು ಜನರಿಗೆ ಆಗಬೇಕಲ್ಲ. ಅವಳು ‘ಶೆಖೆ ಹಿಟ್ಟು’ ಮಾಡಿದ ನಂತರ ಆ ಪಾತ್ರೆಗಳನ್ನು ಮನೆಯಿಂದ ಸ್ವಲ್ಪ ದೂರದಲ್ಲಿರುವ ಕೆರೆಯಿಂದ ಹೊರ ಹರಿಯುವ ತೊರೆಯಲ್ಲಿ ಚಿಕ್ಕದೊಂದು ಕಲ್ಲು ಹೇರಿ, ನೆನೆಸಿಟ್ಟು ಬರುತ್ತಿದ್ದಳು.

ತೋಡಿನ ಮೀನುಗಳು ಅಳಿದುಳಿದ ಇಡ್ಲಿ ತುಣುಕುಗಳನ್ನು ಪಾತ್ರೆಯಿಂದ ಕುಕ್ಕಿ ಹೆಕ್ಕಿ ತಿನ್ನಲು ಮುತ್ತಿಕೊಳ್ಳುತ್ತಿದ್ದುವು. ಮಧ್ಯಾಹ್ನವಾಗುವಾಗ ಮೀನುಗಳಿಗೆ ಹೊಟ್ಟೆ ತುಂಬಿರುತ್ತಿತ್ತು, ಇಡ್ಲಿ ಪಾತ್ರೆಗಳು ಚೆನ್ನಾಗಿ ನೆನೆದಿರುತ್ತಿತ್ತು. ತೆಂಗಿನ ಕಾಯಿಯ ಜಗಟು, ಮಸಿ ಇಂಗಾಳ, ಹುಳಸೆ ಹಣ್ಣು, ಸ್ವಲ್ಪ 501 ಬಾರ್ ಬಟ್ಟೆಯ ಸೋಪು ಬಳಸಿ ಗಸಗಸ ತಿಕ್ಕಿ, ಸ್ವಚ್ಛ ಮಾಡುತ್ತಿದ್ದಳು. ಅಷ್ಟಾಗಿ ಆ ಎಲ್ಲಾ ಇಡ್ಲಿ ಪಾತ್ರೆಯ ಸಂಸಾರವನ್ನು ಮನೆಗೆ ತಂದು ಒಣಗಿಸಿ ಇಡುವಾಗ ಅಜ್ಜಿಗೆ ಮಧ್ಯಾಹ್ನ ವಾಗುತ್ತಿತ್ತು.

ಅಜ್ಜಿ ‘ನಾಳೆ ಇಡ್ಲಿ ಮಾಡ್ಕಂಡಿದೆ ಮಗಾ’ ಎಂದು ಮಲಗುವ ಮುನ್ನ ಹೇಳುವಾಗ- ಅವಳಲ್ಲಿ ಏನೋ ಸಮಾಧಾನವೇ ಇತ್ತೆನಿಸುತ್ತದೆ. ಆದರೂ ಇಡ್ಲಿ ಅಟ್ಟು ತೋಡಿನಲ್ಲಿ ತೊಳೆಯುವಾಗ ಸ್ವಲ್ಪ ಅಸಹನೆ ಯಿಂದಲೇ ಮುತ್ತುವ ಪುಟ್ಟ ಮೀನುಗಳನ್ನು ಕಾಲ್ಕೆಡವಿ ಓಡಿಸಿಕೊಳ್ಳುತ್ತಿದ್ದಳು. ಈ ಇಡ್ಲಿ ಪಾತ್ರೆ ಮತ್ತು ಹೆಣ್ಣಿನ ಸಂಬಂಧ ಪುರಾತನವೇ ಇರಬಹುದು. ಕೆಲವು ಕೆಲಸಗಳೇ ಹಾಗೆ. ಕೆಲಸದ ಒಂದು ಚಿಕ್ಕ ಭಾಗ ಮಾಡಲು ಅದೇನೋ ಒಂದು ರೀತಿಯ ರಗಳೆ, ತಿರಸ್ಕಾರದ ಭಾವ. ಮಾಡಿ ಮುಗಿಸಲು ಹೆಚ್ಚಿನ ಹೊತ್ತು ಬೇಡ. ಕೆಲಸ ಮುಗಿಸಿದ ಮೇಲೆ ಹಾಯೆನಿಸುತ್ತದೆ, ಖುಷಿಯಾಗುತ್ತದೆ, ಸಮಾಧಾನವಾಗುತ್ತದೆ, ನಿರಮ್ಮಳವೆನಿಸುತ್ತದೆ. ಆದರೆ ಅದನ್ನು ಮಾಡಲು ಮಾತ್ರ ಏನೋ ಆಲಸ್ಯ, ಒಂದು ಕಿರಿಕಿರಿ, ಬೇಸರ ಅಥವಾ ಬೋರು.

ಚಟ್ನಿ ಬೀಸುವುದು ಸುಲಭ, ಆದರೆ ಮಿಕ್ಸರ್ ಪಾತ್ರೆ ತೊಳೆಯುವುದು ಕಷ್ಟ. ಬಚ್ಚಲು ಮನೆಯ ಡ್ರೈನ್‌ನಲ್ಲಿ ಸಿಕ್ಕಿರುವ ಕೂದಲನ್ನು ತೆಗೆದು ಎಸೆಯುವುದು, ಬಚ್ಚಲ ನೆಲ ತೊಳೆಯುವುದು, ಫ್ರಿಜ್ ಸ್ವಚ್ಛ ಮಾಡುವುದು, ಅಡುಗೆಯ ನಂತರ ಗ್ಯಾಸ್ ಸ್ಟೋವ್ ಸ್ವಚ್ಛ ಮಾಡುವುದು, ಕಿಟಕಿ ಧೂಳು ಹೊಡೆಯುವುದು, ಹಾಸಿಗೆಯ ಬೆಡ್ ಶೀಟ್ ಬದಲಿಸುವುದು, ವಾಶ್ ಬೇಸಿನ್ ಸ್ವಚ್ಛ ಮಾಡುವುದು.

ವಾಷಿಂಗ್ ಮಶೀನ್ ತೊಳೆಯುವ ದೊಡ್ಡ ಕೆಲಸವನ್ನು ಮಾಡಿರುತ್ತದೆ, ಅದನ್ನು ತೆಗೆದು ಒಣಗಿಸಿ, ಆಮೇಲೆ ಮಡಿಸಿ ಇಡುವುದಿದೆಯಲ್ಲ, ಅದು ಕೆಟ್ಟ ರಗಳೆ. ಅದರೊಳಗೆ ನಾಲ್ಕಾರು ವಿಚ್ಛೇದಿತ ಸೋಕ್ಸ್‌ʼಗಳನ್ನು ಜೋಡಿ ಮಾಡುವುದು, ರಿಪಿರಿಪಿ. ಗಂಡಸರಿಗೆ- ಹೆಂಗಸರಿಗೆ ಎಂದು ಪ್ರತ್ಯೇಕವಿಲ್ಲ. ಕಾರಿನೊಳಗೆ ಏಳು ವರ್ಷ ಹಳೆಯ ಮಂಗಳಪತ್ರ, ಎರಡು ವರ್ಷ ಹಿಂದಿನ ಸಾಮಾನು ಚೀಟಿ, ರಶೀದಿ, ವಾಯ್ದೆ ಮುಗಿದ ಇನ್ಶುರೆ ಪ್ರತಿ ಇತ್ಯಾದಿ. ಕಾರೆಂಬುದು ಕಸದ ಗಾಡಿಯಂತಾಗಿರುತ್ತದೆ, ಕಸ ನಮ್ಮ ಜೊತೆಯ ಓಡಾಡುತ್ತಿರುತ್ತದೆ.

ಕಿರಿಕಿರಿಯೆನಿಸುತ್ತಿರುತ್ತದೆ. ಆದರೆ ಹೆಚ್ಚಾಗಿ ಕಾರನ್ನು ನಿಭಾಯಿಸುವ ಗಂಡು ಜೀವಿಗಳಿಗೆ ಅದನ್ನು ಎಸೆಯಲು ಅದೇ ಆಲಸ್ಯ. ಮನೆಯಿಂದ ಹೊರಡುವಾಗ ಹೋಗುವ ಗಡಿಬಿಡಿ, ಬಂದಾಗ ಮನೆ ಮುಟ್ಟಿ ಮುಖ ತೊಳೆಯುವ ಗಡಿಬಿಡಿ. ಹಾಗಾಗಿ ಕೆಲವೊಮ್ಮೆ ತಿಂದು ಬಿಟ್ಟ ಚಾಕಲೇಟ್ ಕಾಗದ ವರ್ಷಗಟ್ಟಲೆ ನೂರಾರು ಕಿಲೋಮೀಟರ್ ಓಡಾಡಿಬಿಡುತ್ತದೆ. ಆದರೆ ಇಂತಹ ಶಿಲ್ಕಾಗಿ ಕಾಡುವ ಕೆಲಸಗಳನ್ನು ಮಾಡಿ ಮುಗಿಸಿದರೆ, ಆ ಕ್ಷಣವೇ ಆಹ್ಲಾದಕರ ಭಾವ. ಭಾರವನ್ನು ಕೆಳಗಿಳಿಸಿಟ್ಟ ಅನುಭವ. ಕಾರಿನಿಂದ ಕಸವನ್ನು ತೆಗೆದುಹಾಕಿದ ಮೇಲೆ ನಮ್ಮದೇ ಹಳೆಯ ಕಾರು ಮರುಜೀವ ಪಡೆದಂತೆನಿಸುತ್ತದೆ.

ಕಪಾಟನ್ನು ಸ್ವಚ್ಛ ಮಾಡಿದ ಮೇಲೆ ಮೂರ್ನಾಲ್ಕು ದಿನ ಬಾಗಿಲು ತೆರೆದಾಗಲೆಲ್ಲ ಖುಷಿಯಾಗುತ್ತದೆ. ಹರಡಿದ ಚಪ್ಪಲಿ ಸ್ಟ್ಯಾಂಡ್ ನ ಚಪ್ಪಲಿಗಳನ್ನು ಸರಿಯಾಗಿ ಜೋಡಿಸಿಟ್ಟಾಗ ಮನಸ್ಸಿನೊಳಗೂ ಸ್ವಲ್ಪ ಜಾಗ ಖಾಲಿಯಾದಂತೆನಿಸುತ್ತದೆ. ‘ಇನ್ನು ಮುಂದೆ ಹೀಗೆಯೇ ಇಂತಹ ಕೆಲಸಗಳನ್ನು ಅಲ್ಲಲ್ಲಿಯೇ ಮುಗಿಸಿ ಕೊಂಡುಬಿಡಬೇಕು’ ಎಂದು ಪ್ರತಿಜ್ಞೆ ಮಾಡಬೇಕೆನಿಸುತ್ತದೆ. ಆ ಭಾವ ಎಷ್ಟು ಹೊತ್ತು-ದಿನ ಉಳಿಯುತ್ತದೆ ಎನ್ನುವುದು ಬೇರೆ ಪ್ರಶ್ನೆ. ಆದರೆ ಆ ಕ್ಷಣದಲ್ಲಿ ಮಾತ್ರ ನಮಗೆ- ‘ನಾವು ನಮ್ಮ ಜೀವನವನ್ನು ಬಹಳ ಚೆನ್ನಾಗಿ ನಿರ್ವಹಿಸುತ್ತಿದ್ದೇವೆ’ ಎಂಬ ಭಾವ ಹುಟ್ಟಲು ಅಷ್ಟೇ ಸಾಕು.

ಮನೆಗೆಲಸವಿರಬಹುದು, ಅಥವಾ ಯಾವುದೇ ಚಿಕ್ಕಪುಟ್ಟ ಕೆಲಸಗಳಿರಬಹುದು, ಯಾರೂ ಅದನ್ನು ದ್ವೇಷಿಸುವುದಿಲ್ಲ. ಇಲ್ಲಿ ನಮ್ಮೆಲ್ಲರ ಸಮಸ್ಯೆ ಆ ಚಿಕ್ಕದೇ ಆದ ಕೆಲಸವನ್ನು ಶುರುಮಾಡುವುದು. ಆರಂಭಿಸು ವುದೇ ಸವಾಲು. ಒಣಗಿಸಿದ ಬಟ್ಟೆಯನ್ನು ಮಡಿಸಿಡಲು ಶುರುಮಾಡಿದ ಮೇಲೆ ಅದು ಬೇಗನೆ ಮುಗಿದು ಹೋಗುತ್ತದೆ. ಬೆಳಿಗ್ಗೆ ಹೊರ ಹೋಗುವ ಬಟ್ಟೆ ಧರಿಸಿ ಷೂ ಕಟ್ಟಿದಮೇಲೆ ವಾಕಿಂಗ್ ಆಗಿಬಿಡುತ್ತದೆ. ಆದರೆ ಗೇಟಿನಿಂದ ಹೊರ ಬೀಳುವಲ್ಲಿಯವರೆಗಿನ ಪ್ರಮೇಯವೇ ಕಷ್ಟ.

ಎಲ್ಲಾ ಕಾರ್ಯಗಳಲ್ಲೂ- ಇಂಥದ್ದೊಂದು ಕೆಲಸ ಮಾಡಬೇಕಲ್ಲ ಎಂದು ಯೋಚಿಸುವ ಆ ಯೋಚನೆ ಯನ್ನು ದಾಟಿ ನಿಲ್ಲುವುದೇ ನಿಜವಾದ ಸವಾಲಿನ ಕೆಲಸ. ನಮಗೆಲ್ಲರಿಗೂ ಅಷ್ಟೇ- ಗಡಿಬಿಡಿಯಿಲ್ಲದ, ಆ ಕ್ಷಣದಲ್ಲಿ ಅನಿವಾರ್ಯವೆನಿಸದ ಕೆಲಸ ಮಾಡಲು ಮೊದಲು ಮನಸ್ಸಾಗ ಬೇಕು. ಅದಕ್ಕೊಂದು ಮೂಡ್ ಬರಬೇಕು. ಅದ್ಯಾವುದೋ ಅಗೋಚರ, ಕಾಲ ಕೂಡಿ ಬಂದಾಗ ಅದೆಲ್ಲಿಯೋ ಅವ್ಯಕ್ತದಿಂದ ನಮ್ಮೊಳಗೆ ಪ್ರಕಟವಾಗಿಬಿಡುವ ಪ್ರೇರಣೆ, ಮೂಡ್ ಎಂಬ ಮಾಯೆಯ ನಿರೀಕ್ಷೆ! ಆದರೆ ಇಂದು ಸೂಕ್ಷ ವಿದೆ. ಆ ಮೂಡ್ ಎನ್ನುವುದು ಇಂತಹ ಕೆಲಸಗಳಿಗೆ ಯಾವತ್ತೂ ಎಂದೂ ಬರುವುದೇ ಇಲ್ಲ. ನನಗಂತೂ ಹಾಗೆ.

ಇಂತಹ ಚಿಕ್ಕ ಕೆಲಸವನ್ನು ಆಗೀಗ ಮುಂದೂಡಿರುತ್ತೇವಲ್ಲ ಅದು ಕೊನೆಗೊಂದು ದಿನ, ಕ್ಷಣ ಈಡೇರುವುದು ಯಾವಾಗ ಮತ್ತು ಹೇಗೆ? ಒಂದು ಕ್ಷಣ ನಿಂತು- ನಿನ್ನೆ ಮೊನ್ನೆ ಮುಗಿಸಿದ ಇಂತಹ ಕೆಲಸ ವೊಂದನ್ನು ನೆನಪಿಸಿಕೊಳ್ಳಿ. ಒಂದೋ ಆ ಕೆಲಸ ಮುಗಿಸಲೇ ಬೇಕಾದ ಅನಿವಾರ್ಯತೆ ಎದುರಾದಾಗ ಮಾಡಿರುತ್ತೀರಿ. ಇಲ್ಲವೇ, ಯಾವುದೋ ಒಂದು ಕ್ಷಣದಲ್ಲಿ ಆ ಚಿಕ್ಕ ಕೆಲಸವನ್ನು ಜಾಸ್ತಿ ಯೋಚಿಸದೆ ಕೈಗೆತ್ತಿಕೊಂಡಿರುತ್ತೀರಿ, ಆಗ ಅದು ಮುಗಿದಿರುತ್ತದೆ.

ಯಾರಿಗೂ ಇವತ್ತು ಟಾಯ್ಲೆಟ್ ಸ್ವಚ್ಛ ಮಾಡಿಬಿಡಬೇಕು ಎಂದು ‘ಮೂಡ್’ ಬಂದು ಬಿಡುವುದಿಲ್ಲ. ಅಂತಹ ಮೂಡ್ ಬರೋದು ಒಳ್ಳೆಯ ಲಕ್ಷಣವೂ ಅಲ್ಲ. ಇಂತಹ ಬಹುತೇಕ ಕೆಲಸಗಳು ಯಾವತ್ತೂ ಇದನ್ನೊಂದು ಮಾಡಬೇಕಲ್ಲ ಎಂದು ಯೋಚಿಸಿದರೆ ಕೈಗೆತ್ತಿಕೊಳ್ಳಲು ಆಗುವುದಿಲ್ಲ. -ಕ್ಕನೆ ಶುರುಮಾಡಿ ಬಿಡಬೇಕು- ಆಗ ಅಷ್ಟೇ ಫಕ್ಕನೆ ಮುಗಿದುಬಿಡುತ್ತದೆ. ‘2 ಸೆಕೆಂಡ್ ರೂಲ’-ಎರಡು ನಿಮಿಷದ ನಿಯಮ ಎಂದೊಂದಿದೆ. ಯಾವುದೇ ಕೆಲಸವನ್ನು ಜಾಸ್ತಿ ಯೋಚಿಸದೆ ಮೊದಲ ಎರಡು ನಿಮಿಷ ಮಾಡಿ ಬಿಡಬೇಕಂತೆ. ಕೆಲಸ ಆರಂಭಿಸಿದ ಮೇಲೆ ಪ್ರೇರಣೆ ತಾನಾಗಿಯೇ ಬರು ತ್ತದೆ. ಪ್ರೇರಣೆ ಎಂದರೆ ಮನಸ್ಸಿನ ತಡೆಯನ್ನು ದಾಟಲು ಮಾಡುವ ಆ ಅರೆಕ್ಷಣದ ಧೈರ್ಯವೇ ಇರಬೇಕು !

ನಮ್ಮೆಲ್ಲರ ಬದುಕಿನಲ್ಲೂ ಬಂತು, ಮಾಡಬೇಕಾದ ದೊಡ್ಡ ಕೆಲಸಗಳ ಪಟ್ಟಿಗಿಂತ ಚಿಕ್ಕಪುಟ್ಟ ಕೆಲಸಗಳ ರಾಶಿಯ ತೂಕವೇ ಜಾಸ್ತಿ. ಇವು ಸಿಂಕಿನ ಪಾತ್ರೆಯ ರಾಶಿಯಂತೆ. ಈ ಚಿಕ್ಕಪುಟ್ಟ ಕೆಲಸಗಳನ್ನು ಹಾಗೆಯೇ ಬಿಡುವುದರ ಇನ್ನೊಂದು ಸಮಸ್ಯೆಯೆಂದರೆ ಅವುಗಳನ್ನು ನೆನಪಿನಲ್ಲಿಟ್ಟು ಕೊಂಡಿರಬೇಕಾಗುತ್ತದೆ. ಪಟ್ಟಿ ಬೆಳೆದಂತೆ ನೆನಪಿನಲ್ಲಿಡುವುದು ಕಷ್ಟವಾಗುತ್ತದೆ.

ಎಲ್ಲಿ ನೋಡಿದರೂ ಆಗ ಕೆಲಸವೇ ಕಾಣಿಸಲು ಶುರುವಾಗಿಬಿಡುತ್ತದೆ. ಈ ಪಟ್ಟಿ ಬೆಳೆಯುವುದೆಂದರೆ ಅಡುಗೆ ಮನೆಯ ಸಿಂಕಿನಲ್ಲಿ ಪಾತ್ರೆಗಳು ತುಂಬಿದಂತೆ. ಇಂದಿನ ಲೇಖನದ ಉದಾಹರಣೆಗಳನ್ನು ಕಂಡ ನಿಮಗೆ ಇವೆಲ್ಲ ಹೆಚ್ಚಿನದು ಸ್ತ್ರೀ ಕೇಂದ್ರಿತ, ಮನೆಗೆಲಸಕ್ಕೆ ಸಂಬಂಧಿಸಿದ್ದು ಎಂದೆನಿಸ ಬಹುದು. ಆದರೆ ಹಾಗಲ್ಲ.

ಎಲ್ಲರಿಗೂ ಅವರವರದೇ ಆದ ಇಡ್ಲಿ ಅಟ್ಟುಗಳು ಇರುತ್ತವೆ. ಮಕ್ಕಳ ಶಿಕ್ಷಣಕ್ಕೆಂದು ಸೇವಿಂ‌ಗ್ಸ್, ಜೀವ ವಿಮೆ, ಆರೋಗ್ಯ ತಪಾಸಣೆ, ಯಾವುದೋ ಒಂದು ಚಿಕ್ಕ ಚರ್ಮದ ಸಮಸ್ಯೆ, ಹಲ್ಲಿನ ಹುಳುಕು, ವಿಲ್ ಮಾಡಿಡುವುದು, ಯಾವುದೋ ಒಂದು ಮನಸ್ತಾಪ, ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಹೀಗೆ ಅಸಂಖ್ಯ ಚಿಕ್ಕಪುಟ್ಟ ಕೆಲಸಗಳನ್ನು ನಾವೆಲ್ಲರೂ ಮುಂದೂಡುತ್ತಲೇ ಇರುತ್ತೇವೆ. ‌

ಇದು ಮನುಷ್ಯ ಸಹಜ ಗುಣ. ಇದಕ್ಕೆ ಗಂಡು- ಹೆಣ್ಣು, ವಯಸ್ಸು ಎಂಬ ಯಾವ ಬೇಧಭಾವವೂ ಇಲ್ಲ. ಈಗೀಗ ಎಲ್ಲರೂ ಡೋಪಮೈನ್ ಬಗ್ಗೆ ಮಾತನಾಡುತ್ತಿರುತ್ತಾರೆ. ಅದೇ ಭಾಷೆಯಲ್ಲಿ ಇದನ್ನು ಹೇಳುವುದಾದರೆ- ನಮ್ಮೆದುರಿಗೆ ಚಿಕ್ಕ ಕೆಲಸ/ ಚಿಕ್ಕ ಕಷ್ಟ ಎದುರಾದಾಗ ಡೋಪಮೈನ್ ಅತ್ಯಲ್ಪ ಪ್ರಮಾಣದಲ್ಲಿ, ಸ್ವಲ್ಪವೇ ಸ್ವಲ್ಪ ಉತ್ಪಾದನೆಯಾಗುತ್ತದಂತೆ.

ಒಂದು ಕ್ಷಣ ಬಿಟ್ಟುಬಿಟ್ಟರೆ ಮನಸ್ಸಿನ ಮುಂದೂಡುವ ಸಬೂಬು, ಕಾರಣಗಳು ಇತ್ಯಾದಿ ಶುರುವಾಗಿ ಬಿಡುತ್ತದೆ. ಆ ಕೆಲಸವನ್ನು ಮಾಡದಿರುವುದೇ ಸುಖವೆನಿಸಿಬಿಟ್ಟರೆ ಅದು ಇನ್ನೊಂದು ವಿರುದ್ಧದ ಪ್ರೇರಣೆ, ಅದು ಗೆಲ್ಲುತ್ತದೆ. ಮನೆಗೆಲಸವೆಂದಲ್ಲ, ಆಫೀಸಿನ, ಹೊರ ಕೆಲಸಗಳಲ್ಲೂ ಹಾಗೆಯೇ, ಚಿಕ್ಕಪುಟ್ಟ ಕೆಲಸಗಳ ದೊಡ್ಡ ಪಟ್ಟಿಯನ್ನೇ ನಾವು ಹೊತ್ತು ತಿರುಗುತ್ತಿರುತ್ತೇವೆ. ವೈಯಕ್ತಿಕ ಸಂಬಂಧಗಳಲ್ಲೂ ಅಷ್ಟೇ- ಯಾರಿಗೋ ಫೋನ್ ಮಾಡುವ, ಧನ್ಯವಾದ ಹೇಳುವ, ಕ್ಷಮೆ ಕೇಳುವ- ಇತ್ಯಾದಿ ವಿಷಯಗಳಲ್ಲಿ. ಈ ಚಿಕ್ಕ ಕೆಲಸಗಳ ವ್ಯಾಪ್ತಿ ಅರಿವಿಗೆ ಬಾರದಂತೆ ಇಡೀ ಬದಕನ್ನು ಆವರಿಸಿರುತ್ತದೆ.

ಪಟ್ಟಿ ಬೆಳೆದಂತೆ ಭಾರವೂ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಾ ಹೋಗುತ್ತದೆ. ಪರೀಕ್ಷೆಗೆ ಓದುವ ಮಕ್ಕಳು ಓದು ಶುರುಮಾಡುವುದನ್ನು ಮುಂದೂಡುವುದಕ್ಕೂ, ದೊಡ್ಡವರು ಹೊಸ ವೃತ್ತಿಗೆ ಅರ್ಜಿ ಸಲ್ಲಿಸುವುದನ್ನು ಮುಂದೂಡುವುದಕ್ಕೂ ಜಾಸ್ತಿ ಭಾವವ್ಯತ್ಯಾಸವಿಲ್ಲ. ಸಂಸ್ಕೃತದಂದು ಉಕ್ತಿಯಿದೆ. ‘ಷಡ್ದೋಷಾಃ ಪುರುಷೇಣೇಹ ಹಾತವ್ಯಾ ಭೂತಿಮಿಚ್ಛತಾ | ನಿದ್ರಾ ತಂದ್ರಾ ಭಯಂ ಕ್ರೋಧಃ ಆಲಸ್ಯಂ ದೀರ್ಘಸೂತ್ರತಾ’ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಬಯಸುವ ವ್ಯಕ್ತಿ ಅತಿಯಾದ ನಿದ್ರೆ, ಜಡತ್ವ, ಭಯ, ಕೋಪ, ಆಲಸ್ಯ ಮತ್ತು ಕೆಲಸಗಳನ್ನು ಮುಂದೂಡುವ ಸ್ವಭಾವ- ಈ ಆರು ದೋಷಗಳನ್ನು ತ್ಯಜಿಸಬೇಕು. ಆದರೆ ನಿಜ ಜೀವನದಲ್ಲಿ ಈ ‘ಮುಂದೂಡುವ ಸ್ವಭಾವವನ್ನು’ ಮೀರಿ ನಿಲ್ಲುವುದೇ ಮೊದಲಿನೆಲ್ಲವುದಕ್ಕಿಂತ ಕಷ್ಟ.

ಆಧುನಿಕ ಜೀವನ ಬಹುತೇಕ ಕೆಲಸಗಳನ್ನು ಸುಲಭಗೊಳಿಸಿದೆ. ಆದರೆ ಬದುಕನ್ನು ನಾವು ಕಷ್ಟವೆಂದು ಕೊಂಡಿರುವ ಪ್ರಮಾಣ ಮಾತ್ರ ತಗ್ಗಿಲ್ಲ. ಪ್ರತಿಯೊಂದು ಕೆಲಸದಲ್ಲಿರುವ ಕಿರಿಕಿರಿ, ಅಡಚಣೆಗಳನ್ನು ಕಡಿಮೆ ಮಾಡಿಕೊಳ್ಳುತ್ತಲೇ ನಾವು ಆಧುನಿಕಗೊಂಡಿದ್ದೇವೆ. ಆಹಾರ ಮನೆ ಬಾಗಿಲಿಗೇ ಬರುತ್ತದೆ. ಶಾಪಿಂಗ್ ಮಾಡಲು ಮೊಬೈಲ್‌ನಲ್ಲಿ ಕೆಲವೇ ಬಾರಿ ಟ್ಯಾಪ್ ಮಾಡಿದರೆ ಸಾಕು. ಬಟ್ಟೆಗಳನ್ನು ಯಂತ್ರವೇ ತೊಳೆದು ಕೊಡುತ್ತದೆ. ಫೋನ್‌ಗಳು ಪಾಸ್‌ವಡ್ ಗಳನ್ನು ನೆನಪಿಟ್ಟುಕೊಳ್ಳುತ್ತವೆ.

ಆಪ್‌ಗಳು ನಮ್ಮ ಅಪಾಯಿಂಟ್ ಮೆಂಟ್‌ಗಳನ್ನು ನೆನಪಿಸುತ್ತವೆ. ಮನರಂಜನೆ ನಮಗೆ ಪಾಯಿಖಾನೆ ಯಲ್ಲೂ ಲಭ್ಯ. ನಾವು ಅನುಕೂಲಕ್ಕೆ ನಾವು ಎಷ್ಟರಮಟ್ಟಿಗೆ ಒಗ್ಗಿಕೊಂಡಿದ್ದೇವೆ ಎಂದರೆ, ಚಿಕ್ಕ ನಾವೇ ಮಾಡಿಕೊಳ್ಳಬೇಕಾದ ಕೆಲಸಕ್ಕೆ ಕೆಲಸದವರು ಬೇಕು. ಚಿಕ್ಕ ಕೆಲಸಗಳೆಡೆಗೆ ಸಾಮೂಹಿಕ ವಾಗಿಯೇ ನಮ್ಮೆಲ್ಲರ ಸಹನೆಯ ಮಟ್ಟ ತಗ್ಗಿದೆ. ಯಾರಿಗೂ ಈ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದಲ್ಲ. ಎಲ್ಲರೂ ಸಾವಿರ ಕಷ್ಟದ ಕೆಲಸಗಳನ್ನು ಮಾಡಬಲ್ಲರು. ಆದರೆ ಬೇಸರ ತರಿಸುವ, ಅಷ್ಟೇನೂ ಇಷ್ಟವಾಗದ, ಪದೇಪದೆ ಮಾಡಬೇಕಾದ ಕೆಲಸದತ್ತ ಕ್ರಮೇಣ ನಮ್ಮೆಲ್ಲರ ಸಹನೆ ಕ್ಷೀಣಿಸುತ್ತಲೇ ಇದೆ.

ಯಾವುದೇ ಕೆಲಸ ತಕ್ಷಣಕ್ಕೆ ಸಂತೋಷ ನೀಡದದಿದ್ದರೆ ಆಮೇಲೆ ಮಾಡಿದರಾಯ್ತು ಎಂದೆನಿಸು ವುದು ಸಹಜವಾಗಿದೆ. ನನಗೂ ಕೂಡ. ಇಂತಹ ಆಲಸ್ಯ ಎದುರಾಗಿ, ಮಾಡಬೇಕಾದ ಕೆಲಸದ ಪಟ್ಟಿ ಆಗೀಗ ಬೆಳೆದು ಎಲ್ಲರಿಗೂ ಚಿಕ್ಕದೊಂದು ತಲೆಬಿಸಿಯನ್ನುಂಟುಮಾಡುತ್ತದೆ. ನಾನು ಈ ಮೂರು ವಾಕ್ಯವನ್ನು ನನ್ನ ಡೆಸ್ಕಿನಲ್ಲಿ ಬರೆದು ಅಂಟಿಸಿಕೊಂಡಿದ್ದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.

  1. You don't need to feel like doing it. You only need to begin. 2. Start. Motivation will catch up. 3. The life you want is hidden inside the things you keep postponing. ಕೆಲಸ ವನ್ನು ಮಾಡಬೇಕಲ್ಲ ಎಂದು ಯೋಚಿಸಬಾರದು, ಶುರುಮಾಡಿಬಿಡಬೇಕು. ಆರಂಭಿಸಿದ ಮೇಲೆ ಪ್ರೇರಣೆ ಹುಟ್ಟಿಕೊಳ್ಳುತ್ತದೆ. ನಾವು ಮುಂದೂಡುತ್ತಿರುವ ಕೆಲಸಗಳ ಆಚೆಯೇ ನಾವು ಬಯಸಿದ ಬದುಕು ಕೂತಿರುವುದು. ಚಿಯರ್ಸ್.