Rahul Gandhi: ಪಾಕ್ ಗುಂಡಿನ ದಾಳಿಯಿಂದ ಅನಾಥರಾಗಿರುವ 22ಮಕ್ಕಳನ್ನು ದತ್ತು ಪಡೆದ ರಾಹುಲ್ ಗಾಂಧಿ!
ಗಡಿಯಾಚೆಗಿನ ಸಂಘರ್ಷದಲ್ಲಿ ತಮ್ಮ ಹೆತ್ತವರನ್ನು ಅಥವಾ ಕುಟುಂಬದ ಪೋಷಕರನ್ನು ಕಳೆದುಕೊಂಡ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಯ ನಂತರ ಅನೇಕರು ಅನಾಥರಾಗಿದ್ದರು, ಈ ಮಕ್ಕಳ ಶಿಕ್ಷಣದ ಖರ್ಚು ವೆಚ್ಚವನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಯವರೇ ಭರಿಸಲಿದ್ದಾರೆ.


ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಗಡಿಯಾಚೆಗಿನ ಸಂಘರ್ಷದಲ್ಲಿ ತಮ್ಮ ಹೆತ್ತವರನ್ನು ಅಥವಾ ಕುಟುಂಬದ ಪೋಷಕರನ್ನು ಕಳೆದುಕೊಂಡ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಯ ನಂತರ ಅನೇಕರು ಅನಾಥರಾಗಿದ್ದರು, ಈ ಮಕ್ಕಳ ಶಿಕ್ಷಣದ ಖರ್ಚು ವೆಚ್ಚವನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಯವರೇ ಭರಿಸಲಿದ್ದಾರೆ. ಆ ಮಕ್ಕಳು ಪದವಿಯನ್ನು ಪೂರ್ಣಗೊಳಿಸುವವರೆಗೆ ಹಣಕಾಸಿನ ಬೆಂಬಲ ನೀಡಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣವನ್ನು ಅಡೆತಡೆಯಿಲ್ಲದೆ ಮುಂದುವರಿಸಬಹುದೆಂದು ಖಚಿತಪಡಿಸಿಕೊಳ್ಳಲು ಈ ವಾರ ಮೊದಲ ಕಂತು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಪೂಂಚ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಂಧಿಯವರು ಸ್ಥಳೀಯ ಪಕ್ಷದ ನಾಯಕರನ್ನು ಪೀಡಿತ ಮಕ್ಕಳ ಪಟ್ಟಿಯನ್ನು ಸಂಗ್ರಹಿಸಲು ಕೇಳಿಕೊಂಡರು. ತರುವಾಯ, ಸಮೀಕ್ಷೆಯನ್ನು ನಡೆಸಿ, ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಕ್ಕಳ ಹೆಸರುಗಳನ್ನು ಅಂತಿಮಗೊಳಿಸಲಾಯಿತು. ತಮ್ಮ ಭೇಟಿಯ ಸಮಯದಲ್ಲಿ, ಗಾಂಧಿಯವರು ಕ್ರೈಸ್ಟ್ ಪಬ್ಲಿಕ್ ಶಾಲೆಯಲ್ಲಿ ಶೆಲ್ ದಾಳಿಯಲ್ಲಿ ಮಡಿದ 12 ವರ್ಷದ ಅವಳಿ ಮಕ್ಕಳಾದ ಉರ್ಬಾ ಫಾತಿಮಾ ಮತ್ತು ಜೈನ್ ಅಲಿ ಅವರ ಸಹಪಾಠಿಗಳನ್ನು ಭೇಟಿಯಾದರು. ಮಕ್ಕಳೊಂದಿಗೆ ಮಾತನಾಡಿದ ಅವರು ಕೆಲವು ಸಾಂತ್ವನದ ಮಾತುಗಳನ್ನು ಸಹ ಹೇಳಿದರು.
ಈ ಸುದ್ದಿಯನ್ನೂ ಓದಿ: National Herald Case: ನ್ಯಾಶನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್
"ನನಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನೀವು ನಿಮ್ಮ ಪುಟ್ಟ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ. ಅದರ ಬಗ್ಗೆ ನನಗೆ ತುಂಬಾ ವಿಷಾದವಿದೆ. ಈಗ, ನೀವು ಸ್ವಲ್ಪ ಅಪಾಯ ಮತ್ತು ಸ್ವಲ್ಪ ಭಯಭೀತರಾಗಿದ್ದೀರಿ, ಆದರೆ ಚಿಂತಿಸಬೇಡಿ; ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಇದು ಕೊನೆಯಾಗಬೇಕಾದರೆ ನೀವೆಲ್ಲಾ ಕಷ್ಟಪಟ್ಟು ಓದಿ ಉನ್ನತಮಟ್ಟಕೇರಬೇಕು ಎಂದಿದ್ದರು.
ಆಪರೇಷನ್ ಸಿಂದೂರ್
ಈ ವರ್ಷ ಏಪ್ರಿಲ್ 22 ರಂದು 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಆಪರೇಷನ್ ಸಿಂದೂರ್ ಅನ್ನು ನಡೆಸಲಾಯಿತು. ಪ್ರತೀಕಾರವಾಗಿ, ಭಾರತವು ಪಾಕಿಸ್ತಾನ ಆಕ್ರಮಿತ-ಕಾಶ್ಮೀರ ಮತ್ತು ಪಾಕಿಸ್ತಾನದಾದ್ಯಂತ ಒಂಬತ್ತು ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು 100 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿತ್ತು. ಮೇ 7 ರ ಕಾರ್ಯಾಚರಣೆಯ ನಂತರ, ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮಕ್ಕೆ ಸಹಿ ಹಾಕಿದ್ದವು.