ಪ್ರಚಲಿತ
ತಿಮ್ಮಣ್ಣ ಭಾಗ್ವತ್
ವಿದೇಶಿ ನೀತಿಯ ಕುರಿತು ವಿಪಕ್ಷಗಳು ನೀಡುವ ಹೇಳಿಕೆಗಳು ದೇಶದ ಹಿತಾಸಕ್ತಿ ಗಳನ್ನು ರಕ್ಷಿಸಲು ಸರಕಾರಕ್ಕೆ ಸಹಾಯಕವಾಗುವಂತಿರಬೇಕು. ಈ ಕುರಿತು ಸರಕಾರ ಮತ್ತು ವಿಪಕ್ಷಗಳು ಕೂಡಿ ರಚನಾತ್ಮಕ ಕಾರ್ಯತಂತ್ರವನ್ನು ರೂಪಿಸಬೇಕಾಗುತ್ತದೆ. “ರಾಜಕೀಯ ಪಕ್ಷಗಳು ಪರಸ್ಪರ ವಿರೋಧಿಗಳಿರಬಹುದು, ಆದರೆ ಶತ್ರುಗಳಲ್ಲ" ಎಂದು ಇನ್ನೊಬ್ಬ ಪ್ರಖರ ಸಂಸದೀಯ ಪಟುವಾಗಿದ್ದ ಸುಷ್ಮಾ ಸ್ವರಾಜ್ ಹೇಳಿದ್ದರು. ಮಹಾಭಾರತದಲ್ಲಿ ಚಿತ್ರಸೇನ ಗಂಧರ್ವನಿಂದ ದುರ್ಯೋಧನನ್ನು ಬಿಡಿಸಲು ಭೀಮಾರ್ಜುನರನ್ನು ಕಳಿಸುವಾಗ ‘ನಾವು ನೂರೈವರು’ ಎಂದು ಯುಧಿಷ್ಠಿರ ಹೇಳಿದ ಮಾತುಗಳು ಸಾರ್ವಕಾಲಿಕವಾಗಿ ಅನ್ವಯವಾಗುತ್ತದೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಸಂಸತ್ ಅಧಿವೇಶನದಲ್ಲಿ ಮಾತನಾಡುತ್ತಾ “ಪ್ರಧಾನಿಯವರು ದೇಶವನ್ನು ಅಮೆರಿಕಕ್ಕೆ ಮಾರಿ ದ್ದಾರೆ" ಎಂಬ ಗಂಭೀರ ಆರೋಪ ಮಾಡಿದ್ದಾರೆ. ದೇಶದ ಆರ್ಥಿಕತೆಯ ಮೇಲೆ ದೀರ್ಘ ಕಾಲೀನ ಗಂಭೀರ ಪರಿಣಾಮ ಬೀರಬಲ್ಲ ವ್ಯಾಪಾರ ಒಪ್ಪಂದದ ವಿಷಯದಲ್ಲಿ ದೇಶದ ಕುರಿತು ಕಾಳಜಿಯಿರುವ ಪ್ರತಿಯೊಬ್ಬರೂ ಯೋಚಿಸುವುದು ಸಹಜವೇ ಆಗಿದೆ. ಅದರಲ್ಲೂ ವಿರೋಧ ಪಕ್ಷದ ನಾಯಕರಿಗೆ ಹೆಚ್ಚಿನ ಜವಾಬ್ದಾರಿಯಿರುತ್ತದೆ. ಆ ಕಾರಣಕ್ಕೆ ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಎತ್ತಿ ಸರಕಾರದ ಹಾಗೂ ದೇಶದ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದು ಸೂಕ್ತವೇ ಆಗಿದೆ. ಆದರೆ ಅವರು ಚರ್ಚೆಗೆ ವಿಷಯವನ್ನು ಎತ್ತಿಕೊಳ್ಳುವಾಗ ಅನುಸರಿಸಿದ ಕ್ರಮ ಹಾಗೂ ಬಳಸಿದ ಭಾಷೆ, ಅವರು ಹೊಂದಿರುವ ಸ್ಥಾನದ ಘನತೆಗೆ ಖಂಡಿತವಾಗಿಯೂ ತಕ್ಕುದಾಗಿರಲಿಲ್ಲ. ಭಾರತದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಸಂಸತ್ತಿನಲ್ಲಿ ಯಾವುದೇ ರಚನಾತ್ಮಕ ಚರ್ಚೆ ನಡೆಸುವ ಮನಸ್ಥಿತಿ ಯಲ್ಲಿಲ್ಲ.
ಅಧಿವೇಶನಗಳಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆಗಳೇ ನಡೆಯುತ್ತಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಎರಡನೇ ಅವಧಿ ಪ್ರಾರಂಭವಾದ ಲಾಗಾಯ್ತು ಅವರು ಸುಂಕವನ್ನು ವ್ಯಾಪಾರಿ ದೃಷ್ಟಿಗಿಂತ ಹೆಚ್ಚಾಗಿ ಅಮೆರಿಕದ ಭೌಗೋಳಿಕ/ರಾಜಕೀಯ ಹಿತಾಸಕ್ತಿಯ ಅಸ್ತ್ರವಾಗಿ ಬಳಸುತ್ತಿದ್ದಾರೆ. ಫೆಬ್ರವರಿ 2025ರಲ್ಲಿ ಮೋದಿಯವರು ಅಮೆರಿಕ ಕ್ಕೆ ಭೇಟಿ ನೀಡಿದಾಗ ಎರಡು ದೇಶಗಳ ನಡುವಿನ ಬಾಂಧವ್ಯವು ತುಂಬಾ ಸುಧಾರಿಸುವ ಆಶಾಭಾವ ಮೂಡಿತ್ತು; ಆದರೆ ಮೋದಿ ತಮ್ಮ ಉತ್ತಮ ಸ್ನೇಹಿತ ಎನ್ನುತ್ತಲೇ, ಉಕ್ರೇನ್ ಯುದ್ಧ ಮತ್ತು ರಷ್ಯಾದಿಂದ ಇಂಧನ ಖರೀದಿಯ ವಿಷಯವನ್ನು ತಳಕು ಹಾಕಿಕೊಂಡು ಭಾರತಕ್ಕೆ 50 ಪ್ರತಿಶತ ಸುಂಕ ವಿಧಿಸುವ ಬೆದರಿಕೆಯನ್ನು ಟ್ರಂಪ್ ಒಡ್ಡಿದರು.
ಪಹಲ್ಗಾಮ್ ದುರಂತದ ನಂತರದ ಬೆಳವಣಿಗೆಗಳು ‘ಅಮೆರಿಕವು ಭಾರತದ ಸ್ನೇಹಿತ’ ಎಂಬ ಭಾವನೆಯನ್ನು ದೂರಮಾಡಿದವು. ಅಮೆರಿಕಕ್ಕೆ ಭೇಟಿ ನೀಡಬೇಕೆಂಬ ಟ್ರಂಪರ ‘ಸೂಚನೆ’ ಯನ್ನು ಮೋದಿಯವರು ನಯವಾಗಿ ತಿರಸ್ಕರಿಸಿದ್ದೂ ಆಯಿತು. ಇವೆಲ್ಲವುಗಳ ನಡುವೆ ಯೂ ಭಾರತದ ವಾಣಿಜ್ಯ ಸಚಿವಾಲಯದ ತಂಡ ಮತ್ತು ಅಮೆರಿಕದ ಜತೆಗಿನ ವ್ಯಾಪಾರ ಒಪ್ಪಂದದ ಕುರಿತಾದ ಸಂಧಾನ ಮಾತುಕತೆಗಳು ನಡೆದೇ ಇದ್ದವು.
ಇದನ್ನೂ ಓದಿ: Thimmanna Bhagwat Column: ರಾಜ್ಯಪಾಲರ ಭಾಷಣ: ವಿವಾದವಿಲ್ಲದಿದ್ದರೆ ಯಾವತ್ತಿಗೂ ಭೂಷಣ
ಇತರ ದೇಶಗಳ ಜತೆಗಿನ ಸಂಬಂಧಕ್ಕಿಂತ ಅಮೆರಿಕದ ಜತೆಗಿನ ದ್ವಿಪಕ್ಷೀಯ ಸಂಬಂಧ ಯಾವುದೇ ದೇಶಕ್ಕೆ ವಿಶಿಷ್ಟವಾಗಿರುತ್ತದೆ. ಅಮೆರಿಕದ ಬಲಾಢ್ಯ ಆರ್ಥಿಕತೆ, ಅಂತಾ ರಾಷ್ಟ್ರೀಯ ವಿಷಯಗಳಲ್ಲಿ ಅದರ ಪ್ರಾಬಲ್ಯ, ಅಸಾಧಾರಣ ಮಿಲಿಟರಿ ಮತ್ತು ತಾಂತ್ರಿಕ ಸಾಮರ್ಥ್ಯ ಹಾಗೂ ಆ ದೇಶದಲ್ಲಿ ಯುವಕರಿಗೆ ಲಭಿಸುವ ಶಿಕ್ಷಣ ಮತ್ತು ಉದ್ಯೋಗಾವಕಾಶ ಇವೆಲ್ಲ ಇದಕ್ಕೆ ಕಾರಣ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಡಾಲರ್‌ನ ಪ್ರಾಬಲ್ಯವು ಅಮೆರಿಕದ ಆರ್ಥಿಕ ಪ್ರಾಬಲ್ಯಕ್ಕೆ ಪೂರಕ. ಇನ್ನೊಂದು ಬಲಾಢ್ಯ ರಾಷ್ಟ್ರವಾದ ಚೀನಾದಿಂದ ಒದಗಬಹುದಾದ ಅಪಾಯ ಹಾಗೂ ನೆರೆರಾಷ್ಟ್ರಗಳ ವಿಷಯದಲ್ಲಿನ ಆ ದೇಶದ ಹಸ್ತಕ್ಷೇಪ ತಪ್ಪಿಸಲು ಅಮೆರಿಕಕ್ಕೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿಯಿದೆ.
ಅಮೆರಿಕದ ವಿದೇಶಾಂಗ ಹಾಗೂ ಮಿಲಿಟರಿ ನೀತಿಯನ್ನು ನಿಯಂತ್ರಿಸುವ ಸಮಾನಾಂತರ ಶಕ್ತಿಯಾದ ‘ಡೀಪ್ ಸ್ಟೇಟ್’ ಸಜ್ಜಿಕೆಯು ಯಾವುದೇ ರಾಷ್ಟ್ರದಲ್ಲಿ ರಾಜಕೀಯ ತುಮುಲ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಂಥ ರಾಷ್ಟ್ರದ ಜತೆ ಒಪ್ಪಂದ ಮಾಡಿ ಕೊಳ್ಳುವುದು ಅಮೆರಿಕಕ್ಕೆ ಅನಿವಾರ್ಯವಲ್ಲ; ಆದರೆ ಭಾರತಕ್ಕೆ ಅಮೆರಿಕದ ಜತೆಗಿನ ಉತ್ತಮ ಸಂಬಂಧ ಅಗತ್ಯ.
ಈ ಎಲ್ಲ ಕಾರಣಗಳಿಂದಾಗಿ ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡದೆ ಸಮಗ್ರ ದ್ವಿಪಕ್ಷೀಯ ಸಂಬಂಧಗಳ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ. ಭಾರತದ ಹಿತರಕ್ಷಣೆ ಎಂದರೆ ಈ ಎಲ್ಲ ಅಂಶಗಳ ಕುರಿತಾದ ಭಾರತದ ಹಿತರಕ್ಷಣೆಯೆಂದು ಅರ್ಥೈಸುವ ಪ್ರಬುದ್ಧತೆ ಎಲ್ಲರಿಗೂ ಬೇಕು.
ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತೆ ದೇಶದ ಪ್ರಧಾನಿಯವರ ಮೇಲೆ ಅತಿಯಾದ ಒತ್ತಡವಿತ್ತು. ಆದರೆ ಅದು ಅವರು ಹೇಳಿದ ಅರ್ಥದಲ್ಲಲ್ಲ. ದೇಶದ ಹಿತಾಸಕ್ತಿ ಯನ್ನು ರಕ್ಷಿಸುವ ಜತೆಗೆ ‘ದೊಡ್ಡಣ್ಣ’ ಅಂದರೆ ಅಮೆರಿಕ (ಕೇವಲ ಟ್ರಂಪ್ ಅಲ್ಲ) ಅತಿ ಯಾಗಿ ಕೋಪಿಸಿಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು.
ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ಪಿಯೂಷ್ ಗೋಯಲ್ ನೇತೃತ್ವದ ತಂಡದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇದು ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ತೋರಿದ ಸಂಯಮವು ವೃತ್ತಿಪರತೆಯ ಉತ್ತಮ ಉದಾಹರಣೆ ಎಂದರೆ ಅದು ಉತ್ಪ್ರೇಕ್ಷೆ ಯಲ್ಲ.
ಟ್ರಂಪರ ವಿಶಿಷ್ಟ ಶೈಲಿಯ ಮೌಖಿಕ ಅಥವಾ ಕೃತಿಗಳ ಚಿತಾವಣೆಗಳಿಗೆ ಯಾವುದೇ ಆತುರದ ಪ್ರತಿಕ್ರಿಯೆ ನೀಡದೆ ದೇಶದ ಪ್ರಧಾನಿ ಹಾಗೂ ವಾಣಿಜ್ಯ ಮತ್ತು ವಿದೇಶಾಂಗ ಸಚಿವಾಲಯಗಳು ತೋರಿಸಿದ ಪ್ರಬುದ್ಧ ನಡವಳಿಕೆ ಇಡೀ ಪ್ರಹಸನವನ್ನು ಯಶಸ್ವಿಯಾಗಿ ನಿರ್ವಹಿಸಲು ಕಾರಣವಾಯಿತು.
ಪ್ರಧಾನಿಯವರು ವೈಯಕ್ತಿಕ ಕಾರಣಗಳಿಗೆ ಒತ್ತಡದಲ್ಲಿದ್ದದ್ದು ನಿಜವಾಗಿದ್ದರೆ ಅಥವಾ ಅವರು ದೇಶವನ್ನು ಮಾರಲು ಹೊರಟಿದ್ದರೆ, ಇಲ್ಲವೆ ನಿಜಕ್ಕೂ ‘ನರೆಂದರ್ ಸರೆಂಡರ್’ ಆಗಿದ್ದರೆ, ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥರನ್ನು ಕೂಡಿಕೊಂಡು ಟ್ರಂಪರ ಜತೆ ಭೋಜನ ಸವಿಯಬಹುದಿತ್ತು.
ಅಮೆರಿಕದ ರಾಷ್ಟ್ರೀಯ ದಿನದ ಆಚರಣೆಗೆ ಮುಖ್ಯ ಅತಿಥಿಯಾಗಿ ಹೋಗಬಹುದಿತ್ತು. ಮತ್ತು ಅಲ್ಲೇ ಟ್ರಂಪರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಬಹುದಿತ್ತು. ಒಪ್ಪಂದದ ಕುರಿತು ಒಂದು ವರ್ಷದವರೆಗೆ ಮಾತುಕತೆ ನಡೆಸುವ ಅಗತ್ಯವೇ ಇರುತ್ತಿರಲಿಲ್ಲ. ಅವರು ಹಾಗೆ ಆತುರ ತೋರಲಿಲ್ಲ. ಬದಲಾಗಿ ಅವರು ಅಮೆರಿಕದ ಇಚ್ಛೆಗೆ ವಿರುದ್ಧವಾಗಿ ರಷ್ಯಾ, ಚೀನಾ, ಬ್ರೆಝಿಲ್‌ನಂಥ ರಾಷ್ಟ್ರಗಳನ್ನೊಳಗೊಂಡ ‘ಬ್ರಿಕ್ಸ್’ ಒಕ್ಕೂಟದ ಸಮ್ಮೇಳನ ದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿದರು.
ಜಿಎಸ್‌ಟಿ ದರಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ, ‘ಟ್ರಂಪರ ಹೆಚ್ಚುವರಿ ಸುಂಕದ ಬೆದರಿಕೆಗೆ ದೇಶ ಬಗ್ಗುವುದಿಲ್ಲ’ ಎಂಬ ಪರೋಕ್ಷ ಸಂದೇಶ ನೀಡಿದರು. ಇಂಗ್ಲೆಂಡ್, ಯುಎಇ, ಫ್ರಾನ್ಸ್, ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಯಿತು.
ಅಮೆರಿಕದ ಜತೆಗಿನ ಕೆಲವು ರಕ್ಷಣಾ ಸಾಮಗ್ರಿ ಒಪ್ಪಂದವನ್ನು ರದ್ದು ಪಡಿಸಲಾಯಿತು. ಚೀನಾದ ಜತೆಗಿನ ಸಂಬಂಧ ಸುಧಾರಣೆಗೂ ಕ್ರಮ ಕೈಗೊಳ್ಳಲಾಯಿತು. ಅಮೆರಿಕದ ಜತೆಗೆ ಈಗ ಆಗಿರುವ ಒಪ್ಪಂದವು ಈ ಎಲ್ಲ ಉಪಕ್ರಮಗಳ ಅಂತಿಮ ಫಲಿತಾಂಶ.
ಇನ್ನೂ ಔಪಚಾರಿಕ ಪ್ರಕ್ರಿಯೆ ಪೂರ್ಣವಾಗದ ಈ ಒಪ್ಪಂದದಲ್ಲಿ ಭಾರತದ ಕೃಷಿ ಮತ್ತು ಔದ್ಯೋಗಿಕ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಸ್ವತಃ ಪ್ರಧಾನಿ ಯವರಲ್ಲದೆ, ವಾಣಿಜ್ಯ ಸಚಿವರು ಸಂಸತ್ತಿನಲ್ಲಿ ಹಾಗೂ ಸಂಸತ್ತಿನ ಹೊರಗೆ ತಮ್ಮ ಅಧಿಕೃತ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ ಇದು ‘ಮುಳ್ಳುಗಳೇ ಇಲ್ಲದ ಗುಲಾಬಿ ಗಿಡ’ ಎಂದಲ್ಲ. ವಾಸ್ತವದಲ್ಲಿ ಮುಳ್ಳೇ ಇಲ್ಲದ ಗುಲಾಬಿ ಗಿಡ ಎಲ್ಲೂ ಇಲ್ಲ. ಅಮೆರಿಕದಂಥ ದೇಶ ತನ್ನ ಎಲ್ಲಾ ಹಿತಾಸಕ್ತಿಗಳನ್ನು ಬದಿಗೊತ್ತಿ ಭಾರತಕ್ಕೆ ಈ ಒಪ್ಪಂದವನ್ನು ಹರಿವಾಣದಲ್ಲಿಟ್ಟು ಉಡುಗೊರೆಯಾಗಿ ನೀಡಿದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಈ ಒಪ್ಪಂದದ ಕೆಲವು ಅಂಶಗಳು ಗೊಂದಲಗಳಿಂದ ಕೂಡಿವೆ.
ಇನ್ನೂ ಅಂತಿಮವಾಗದ ಅಥವಾ ಅಂತಿಮಗೊಳ್ಳುವಾಗ ಬದಲಾವಣೆಗೆ ಅವಕಾಶವಿರುವ ಕೆಲವು ಷರತ್ತುಗಳು ಇರಬಹುದು. ಸಂಸತ್ತಿನ ಒಳಗೆ ಅಥವಾ ಹೊರಗೆ ಚರ್ಚಿಸುವಾಗ ಆ ಎಲ್ಲ ಅಂಶಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ಎತ್ತಿ ಹೇಳುವ ಜಾಣ್ಮೆ ಮತ್ತು ಪ್ರಬುದ್ಧತೆಯನ್ನು ಸಂಸತ್ ಸದಸ್ಯರು ಹೊಂದಿರಬೇಕು.
ಅಟಲ್ ಬಿಹಾರಿ ವಾಜಪೇಯಿಯವರಂಥ ಸಂಸದೀಯ ಪಟು ವಿರೋಧ ಪಕ್ಷದ ನಾಯಕ ರಾಗಿದ್ದರೆ ಬಹುಶಃ ಇಂಥ ಚರ್ಚೆಯನ್ನು ನಿರೀಕ್ಷಿಸಬಹುದಿತ್ತು. ಕೇವಲ ಇಬ್ಬರೇ ಸಂಸತ್ ಸದಸ್ಯರನ್ನೊಳಗೊಂಡ ವಿರೋಧ ಪಕ್ಷವಿದ್ದಾಗಲೂ ವಾಜಪೇಯಿಯವರ ಧ್ವನಿ ಕ್ಷೀಣ ವಾಗಿರಲಿಲ್ಲ. ಅವರ ಮಾತುಗಳಲ್ಲಿ ಹತಾಶೆಯ ಭಾವನೆ ಇರಲಿಲ್ಲ. ಲೋಕಸಭೆಯಲ್ಲಿ ಅವರಿಗೆ ಗೌರವ ಕಡಿಮೆಯಾಗಿರಲಿಲ್ಲ.
ವಿದೇಶಿ ನೀತಿಯ ಕುರಿತು ವಿರೋಧ ಪಕ್ಷಗಳು ನೀಡುವ ಹೇಳಿಕೆಗಳು ದೇಶದ ಹಿತಾಸಕ್ತಿ ಗಳನ್ನು ರಕ್ಷಿಸಲು ಸರಕಾರಕ್ಕೆ ಸಹಾಯಕವಾಗುವಂತಿರಬೇಕು. ಈ ಕುರಿತು ಸರಕಾರ ಮತ್ತು ವಿರೋಧ ಪಕ್ಷಗಳು ಕೂಡಿ ರಚನಾತ್ಮಕ ಕಾರ್ಯತಂತ್ರವನ್ನು ರೂಪಿಸಬೇಕಾಗುತ್ತದೆ.
“ರಾಜಕೀಯ ಪಕ್ಷಗಳು ಪರಸ್ಪರ ವಿರೋಧಿಗಳಿರಬಹುದು, ಆದರೆ ಶತ್ರುಗಳಲ್ಲ" ಎಂದು ಇನ್ನೊಬ್ಬ ಪ್ರಖರ ಸಂಸದೀಯ ಪಟುವಾಗಿದ್ದ ಸುಷ್ಮಾ ಸ್ವರಾಜ್ ಹೇಳಿದ್ದರು. ಮಹಾಭಾರತ ದಲ್ಲಿ ಚಿತ್ರಸೇನ ಗಂಧರ್ವನಿಂದ ದುರ್ಯೋಧನನ್ನು ಬಿಡಿಸಲು ಭೀಮಾರ್ಜುನರನ್ನು ಕಳಿಸುವಾಗ ‘ನಾವು ನೂರೈವರು’ (ವಯಮ್ ಪಂಚಾಧಿಕಂ ಶತಂ) ಎಂದು ಯುಧಿಷ್ಠಿರ ಹೇಳಿದ ಮಾತುಗಳು ಸಾರ್ವಕಾಲಿಕವಾಗಿ ಅನ್ವಯವಾಗುತ್ತವೆ.
ಮಾನ್ಯ ವಿರೋಧ ಪಕ್ಷದ ನಾಯಕರು ಒಪ್ಪಂದದ ಅನೇಕ ಪ್ರಮುಖ ಅಂಶಗಳ ಕುರಿತು ಪ್ರಶ್ನಿಸಬಹುದಿತ್ತು. ಉದಾಹರಣೆಗೆ ರಷ್ಯಾದಿಂದ ಕಡಿಮೆ ದರದಲ್ಲಿ ಲಭ್ಯವಿರುವ ಇಂಧನ ಖರೀದಿ ಕಡಿತ- ತಪ್ಪಿದರೆ ಪುನಃ ಶೇ.25ರಷ್ಟು ಹೆಚ್ಚಿನ ಸುಂಕ, ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಸರಕು ಖರೀದಿ, ಪಶು ಆಹಾರಗಳಿಗೆ ಬಳಸುವ ಧಾನ್ಯಗಳು, ಸೋಯಾಬೀನ್ ಮತ್ತು ಇತರ ಕೃಷಿ ಉತ್ಪನ್ನಗಳ ಆಮದು, ತಳಿ ಮಾರ್ಪಡಿಸಿದ ಬೆಳೆಗಳು (ಎI ಇಟmo), ವ್ಯಾಪಾರೇತರ ವಿಷಯಗಳು ಮುಂತಾದ ಅನೇಕ ಅಂಶಗಳು, ಚೀನಾ ಮತ್ತು ಬ್ರೆಝಿಲ್‌ಗಿಂತ ಮೊದಲು ಶೇ.18ರ ಸುಂಕಕ್ಕೆ ಒಪ್ಪಿದ್ದೇಕೆ? ಭಾರತ ವಿಧಿಸುವ ಪ್ರತಿಸುಂಕ ವೇನು? ಈ ಎಲ್ಲ ವಿಷಯಗಳ ಕುರಿತು ಸಮಗ್ರ ಮಾಹಿತಿ ಪಡೆದು ಆರ್ಥಿಕ ಲಾಭಾಲಾಭಗಳ ಅಂಕಿ-ಅಂಶಗಳನ್ನು ಲೋಕಸಭೆಯಲ್ಲಿ ಪ್ರಸ್ತುತ ಪಡಿಸುವ ಮೂಲಕ ರಚನಾತ್ಮಕ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕಿತ್ತು.
ಅಗತ್ಯವಿದ್ದಲ್ಲಿ, ದೇಶದ ಹಿತಾಸಕ್ತಿಗೆ ವಿರುದ್ಧವಾಗಬಹುದಾದ ಅಂಶಗಳ ರದ್ದತಿಗೆ ಒತ್ತಾಯ ಮಾಡಬೇಕಿತ್ತು, ಠರಾವು ಮಂಡಿಸಬಹುದಿತ್ತು. ಆ ಮೂಲಕ ದೇಶದ ಜನತೆಯಲ್ಲಿರ ಬಹುದಾದ ಗೊಂದಲಗಳಿಗೆ ಸ್ಪಷ್ಟೀಕರಣ ದೊರೆಯುತ್ತಿತ್ತು. ಅಂಥ ಚರ್ಚೆಗಳನ್ನು ನಡೆಸಲು ಆರ್ಥಿಕತೆ, ವಿದೇಶಿ ನೀತಿ ಹಾಗೂ ವ್ಯಾಪಾರಿ ಒಪ್ಪಂದಗಳ ಸಂಕೀರ್ಣತೆಗಳ ಕುರಿತು ಆಳವಾದ ಅಧ್ಯಯನ ಅಗತ್ಯ.
ಬಹುಶಃ ರಾಹುಲ್ ಗಾಂಧಿಯವರು ಕೈಗೊಂಡ ಏಕತಾ ಯಾತ್ರಾ, ಸಂವಿಧಾನ್ ಬಚಾವೊ, ವೋಟ್ ಚೋರಿ ಮುಂತಾದ ಯಾವ ಅಭಿಯಾನಗಳಲ್ಲೂ ಅಂಥ ಅಧ್ಯಯನ, ವಿಶ್ಲೇಷಣೆ ಯ ಪ್ರಬುದ್ಧತೆ ಇರಲಿಲ್ಲ. ಹಾಗಾಗಿ ಅವರು ಮಾಡಿದ ಆಪಾದನೆಗಳನ್ನು ಜನರು ಗಂಭೀರ ವಾಗಿ ಪರಿಗಣಿಸಲಿಲ್ಲ.
ಹಾಗೆ ನೋಡಿದರೆ ಈ ಒಪ್ಪಂದ ಮಾಡಿಕೊಳ್ಳುವ ಮೂಲಕ ಪ್ರಧಾನಿ ಮೋದಿಯವರಿಗೆ ತಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಈ ಒಪ್ಪಂದದ ಕುರಿತು ಪ್ರೌಢ ಚರ್ಚೆ ನಡೆಸಿ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದರೆ ರಾಹುಲ್ ಗಾಂಧಿಯವರ ಕುರಿತು ದೇಶದ ಜನರಿಗೆ ಗೌರವ ಮೂಡುತ್ತಿತ್ತು.
ಅವರಿಗೆ ಪ್ರಚಾರವೂ ದೊರೆಯುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅದು ಅವರ ಕರ್ತವ್ಯ ಕೂಡಾ. ಆದರೆ ಇಂಥ ಅವಕಾಶವನ್ನು ಅವರು ಕಳೆದುಕೊಂಡರು. ಬದಲಾಗಿ ಲೋಕಸಭೆಯ ಪ್ರಸಕ್ತ ಅಧಿವೇಶನದಲ್ಲಿ ಒಟ್ಟಾರೆ ಯಾಗಿ ಅವರು ವ್ಯವಹರಿಸಿದ ರೀತಿಯು ಸಂಸದೀಯ ಪರಂಪರೆಗೆ ವಿರುದ್ಧವಾದುದಾಗಿತ್ತು.
ಕಾಂಗ್ರೆಸ್ ನಂಥ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರಿಗೆ ಅಗತ್ಯವಾಗಿ ಇರಬೇಕಾದ ಪ್ರಬುದ್ಧತೆ ಅವರಲ್ಲಿ ಕಾಣಲಿಲ್ಲ. ದೇಶಕ್ಕೆ ಒಂದು ಸಧೃಢವಾದ ವಿರೋಧ ಪಕ್ಷದ ಹಾಗೂ ಉತ್ತಮ ವಿಪಕ್ಷ ನಾಯಕರ ಅಗತ್ಯವಿದೆ. ಅಂಥ ನಾಯಕರು ಇರದಿದ್ದಲ್ಲಿ ಆಳುವ ಪಕ್ಷ ನಿರಂಕುಶವಾಗಿ ವರ್ತಿಸಿ, ಸರ್ವಾಧಿಕಾರಿ ಧೋರಣೆ ಹೊಂದುವ ಅಪಾಯವಿದೆ.
ಕಾಂಗ್ರೆಸ್‌ನಲ್ಲಿ ಅಂಥ ಅನೇಕ ನಾಯಕರು ಇಲ್ಲವೆಂದಲ್ಲ. ಆದರೆ ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ. ಮಾನ್ಯ ರಾಹುಲ್ ಗಾಂಽಯವರಿಗೇ ಹೆಚ್ಚಿನ ಓವರ್‌ಗಳನ್ನು ನೀಡಲಾಗುತ್ತಿದೆ. ವೈಡ್ ಬಾಲ್‌ಗಳಿಗೆ ಬ್ಯಾಟ್ ಬೀಸದೇ ರನ್ ಸಿಗುತ್ತವೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಕಾಂಗ್ರೆಸ್ ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸ ಬೇಕಿದೆ.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ
ನಿವೃತ್ತ ಎಜಿಎಂ)