ಬಸವ ಮಂಟಪ
ರವಿ ಹಂಜ್
ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆಗೊಳಗಾದವರು ಕ್ರಮೇಣವಾಗಿ ತಮ್ಮಂತೆಯೇ ಸಂಕೀರ್ಣತೆಗೊಳಗಾದ ಸಹಸಂಕೀರ್ಣಿಗರನ್ನು ಅಥವಾ ಸಹ ಸಂಕೀರ್ಣ ಗುಂಪುಗಳ ಸಂಗವನ್ನು ಬಯಸಿ ಸಂಘ ಕಟ್ಟಿಕೊಳ್ಳುತ್ತಾರೆ" ಎಂದು ಮನಃಶಾಸ್ತ್ರವು ಹೇಳಿರುವುದನ್ನು ಹಿಂದಿನ ಅಂಕಣ ದಲ್ಲಿ ಓದಿದ್ದೀರಷ್ಟೇ. ಅದನ್ನು ಸಾಬೀತುಪಡಿಸಲೆಂಬಂತೆ ಇಮ್ಮಡಿ ಶಿವಬಸವ ಸ್ವಾಮಿಗಳು ಈ ಸಂಕೀರ್ಣ ತೆಗೊಳಗಾದ ಇನ್ನೋರ್ವ ಸಂಶೋಧಕ ಟಿ.ಎಚ್.ಎಂ. ಸದಾಶಿವಯ್ಯ ಎಂಬ ವಿದ್ವಾಂಸ ರನ್ನು ಆತು ಕೊಂಡು ತಮ್ಮ ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲುವು’ ಕೃತಿಯಲ್ಲಿ ಶ್ರೀಕರ ಭಾಷ್ಯವನ್ನು ಖೊಟ್ಟಿ ಗ್ರಂಥ ಎಂದಿದ್ದಾರೆ.
ಈ ಮಾನಸಿಕ ಸಂಕೀರ್ಣತೆಗೊಳಗಾದ ಆರಂಭದಲ್ಲಿ ಏಕಾಂಗಿಯಾಗಿ ಸಿದ್ಧಾಂತ ಶಿಖಾಮಣಿಗೆ ಮಸಿ ಬಳಿದ ಶ್ರೀಗಳು, ಶ್ರೀಕರ ಭಾಷ್ಯಕ್ಕೆ ಮಸಿ ಬಳಿಯುವ ಹೊತ್ತಿಗೆ ತಮ್ಮಂಥ ಸಂಕೀರ್ಣಿಗರನ್ನು ಆತು ಕೊಂಡಿರುವುದು ಸುಸ್ಪಷ್ಟವಾಗಿ ಇವರ ಉಲ್ಬಣಿಸಿದ ಸಂಕೀರ್ಣತೆಗೆ ಭಾಷ್ಯ ಬರೆದಿದೆ.
ಇಲ್ಲಿ ಟಿ.ಎಚ್.ಎಂ.ಸದಾಶಿವಯ್ಯನವರು ಇದೇ ‘ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆ’ಗೆ ಒಳಗಾದ ಹಿನ್ನೆಲೆಯನ್ನು ಗಮನಿಸೋಣ. ಶ್ರೀ ಎಂ.ಶಿವಕುಮಾರಸ್ವಾಮಿಗಳು ಡಾ.ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳ ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲುವು- ಅದಕ್ಕೆ ಉತ್ತರ’ ಲೇಖನದಲ್ಲಿ, “ಶ್ರೀ ಸಿದ್ಧಾಂತ ಶಿಖಾಮಣಿಯ ಉಖಗಳು ಶ್ರೀಕರಭಾಷ್ಯದಲ್ಲಿ ಬರುತ್ತವೆ ಯೆಂದು ಶ್ರೀಕರಭಾಷ್ಯದ ಕಾಲದ ಬಗ್ಗೆ ನಾವೆ ಪ್ರಸ್ತಾಪಿಸಿರುವುದು ನಿಜ.
ಶ್ರೀ ಸ್ವಾಮಿಗಳು ತಮ್ಮ ಗ್ರಂಥದ ‘ಮೊದಲ ಮಾತಿ’ನಲ್ಲಿ ’ಹಿರಿಯ ವಿದ್ವಾಂಸರೊಬ್ಬರು ಶಿವಸುತರ ಲೇಖನಗಳನ್ನು ನೋಡುವಂತೆ ಸೂಚಿಸಿದರು. ಶ್ರೀಕರಭಾಷ್ಯಕ್ಕೆ ಸಂಬಂಧಿಸಿದ ‘ಶಿವಸುತ’ರ ಲೇಖನ ಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ravi Hunj Column: ಅರ್ಥಹೀನವಾಗಿ ಬಡಬಡಿಸಿ ಬೂದಿಯಲ್ಲಿ ಹೊರಳಾಡುತ್ತಿರುವ ಜಾಮದಾರರು...!
ಇದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷೇಪಿಸಲು ಅವರಿಗೆ ಮೂಲ ಸ್ಪೂರ್ತಿ ಎಲ್ಲಿಂದ ದೊರೆಯಿತು ಎಂಬುದು ತಿಳಿದು ಬಂತು. ನನಗಂತೂ ‘ಶಿವಸುತ’ ಎಂದರೆ ಯಾರೆಂಬುದು ಮೊದಲು ಗೊತ್ತಾಗಲಿಲ್ಲ. ಶ್ರೀ ಸ್ವಾಮಿಗಳ ಗ್ರಂಥದಿಂದಲೇ ನನಗೆ ‘ಶಿವಸುತ’ ರಹಸ್ಯನಾಮಭಾಜರು ‘ಶ್ರೀ ಸದಾಶಿವಯ್ಯನವರು’ ಎಂದು ತಿಳಿದುಬಂತು.
ತೆಲಗಿ ಹರಪನಹಳ್ಳಿ ಮಠದ (ಟಿ.ಎಚ್.ಎಂ.) ಸದಾಶಿವಯ್ಯನವರ ಬಗ್ಗೆ ನನಗೆ ಗೊತ್ತಾದದ್ದು ದಾವಣಗೆರೆಯಿಂದ ಪ್ರಕಟವಾದ ‘ವೀರಶೈವದರ್ಶನ’ ಎಂಬ ಪುಸ್ತಕವನ್ನು ಓದಿದಾಗ. ಆ ಪುಸ್ತಕ ದಲ್ಲಿ ಅವರು ವೀರಶೈವದ ಹುಟ್ಟನ್ನು ವೇದಾಗಮಗಳಲ್ಲಿ ಹುಡುಕುವ ಮತ್ತು ಹುಡುಕಿ ನಿರಾಶ ರಾಗುವ ವ್ಯರ್ಥ ಪ್ರಯತ್ನಗಳನ್ನು ಅಲ್ಲಗಳೆದು, 12ನೇ ಶತಮಾನದಲ್ಲಿ ವೀರಶೈವ ಧರ್ಮವಿಪ್ಲವವು ವಿಜೃಂಭಿಸಿ ಆ ಕ್ರಾಂತಿ ಪ್ರವಾಹದಲ್ಲಿ ಸನಾತನ ಶೈವಧರ್ಮದ ಶಾಖೆಗಳೆ ಮಿಳಿತವಾಗಿ ಹೋದವು ಎಂದಿತ್ಯಾದಿಯಾಗಿ ಪ್ರತಿಪಾದಿಸಿದ್ದಾರೆ. ಅದರ ಮಥಿತಾರ್ಥವೆಂದರೆ ವೀರಶೈವ ಮತವು ಬಸವಾದಿ ಶರಣರಿಂದ ಆರಂಭವಾಯಿತು ಎಂಬುದು.
ಪಂಚಪೀಠಗಳನ್ನು ಸ್ಥಾಪಿಸಿದ ಜಗದ್ಗುರು ಪಂಚಾ ಚಾರ್ಯರು ವೀರಶೈವ ಮತದ ಸ್ಥಾಪಕರಲ್ಲ ಎಂದು ಹೇಳುವುದು ಅವರ ಉದ್ದೇಶ. ಆ ಪುಸ್ತಕವನ್ನು ಓದಿದಾಗ ಶ್ರೀ ರಂಭಾಪುರಿ ಪೀಠದ ಪರಂಪರೆ ಯನ್ನು (ವೀರಗೋತ್ರ, ಪಡ್ಡಿಡಿ ಸೂತ್ರ) ಹೇಳಿಕೊಳ್ಳುವ ಒಂದು ಮಠಕ್ಕೆ ಸೇರಿದ ವ್ಯಕ್ತಿ ಹೀಗೆ ಬರೆದಿದ್ದಾರಲ್ಲ ಎಂದು ದಿಗ್ಭ್ರಮೆಯುಂಟಾಯಿತು. ಆಗ ನಮ್ಮ ತಂದೆಯವರಲ್ಲಿ ಈ ಪುಸ್ತಕ ಮತ್ತು ಅದರ ಕರ್ತೃವಿನ ಬಗ್ಗೆ ಪ್ರಸ್ತಾಪಿಸಿದೆ.
ನಮ್ಮ ತಂದೆಯವರು (ಜಗಲೂರು ತಾಲೂಕು ಅಸಗೋಡು ಮಠದ ಚನ್ನಯ್ಯನವರು. ಹರಪನ ಹಳ್ಳಿ ಹಯಾತ್ ಸಾಹೇಬರಲ್ಲಿ ಜ್ಯೋತಿಷ್ಯವನ್ನು ಕಲಿತವರು) ಶ್ರೀ ಟಿ.ಎಚ್.ಎಂ. ಸದಾಶಿವಯ್ಯ ನವರ ಬಗ್ಗೆ ಹೇಳಿದ್ದು ನನಗೆ ನೆನಪಿದೆ. ಹಿಂದಿನ ವರ್ಷ ಒಮ್ಮೆ ಧಾರವಾಡದಲ್ಲಿ ಅಕಸ್ಮಾತ್ ಪುಸ್ತಕ ದ ಅಂಗಡಿಯೊಂದಕ್ಕೆ ಹೋಗಿದ್ದಾಗ ಅಲ್ಲಿ ಭಾರತೀಯ ವಿದ್ಯಾಭವನದಿಂದ ಪ್ರಕಾಶಿತವಾದ ಶ್ರೀ ಸದಾಶಿವಯ್ಯನವರ A Discourse on Veerasaivism ಎಂಬ ಪುಸ್ತಕವನ್ನು ಕೊಂಡುಕೊಂಡೆ. ಅದರಲ್ಲಿ ನನಗೆ ಇನ್ನೊಂದು ದಿಗ್ಭ್ರಮೆ ಕಾಯ್ದುಕೊಂಡಿತ್ತು.
ಈ ಪುಸ್ತಕದಲ್ಲಿ ‘ವೀರಶೈವದರ್ಶನ’ದಿಂದ ಅಭಿವ್ಯಕ್ತವಾದ ‘ದರ್ಶನ’ಕ್ಕೆ ಸಂಪೂರ್ಣವಾಗಿ ವಿರುದ್ಧ ವಾದ ಅಭಿಪ್ರಾಯದ ದರ್ಶನವಾಯಿತು. ನಮ್ಮ ತಂದೆಯವರ ಮಾತು ಮತ್ತೊಮ್ಮೆ ಜ್ಞಾಪಕಕ್ಕೆ ಬಂತು. ನಾನು ಮೊದಲು ಓದಿದ್ದ ಪುಸ್ತಕ 1959ರ ಭಾಷಣದ ಮುದ್ರಿತ ರೂಪ. ಅನಂತರ ಓದಿದ ಇಂಗ್ಲಿಷ್ ಪುಸ್ತಕ 1922ರಲ್ಲಿ ಮಾಡಿದ ಭಾಷಣದ ಮುದ್ರಿತ ರೂಪ.
1922ರ ಭಾಷಣದಲ್ಲಿ ಶ್ರೀಕರಭಾಷ್ಯವನ್ನು ಆಧಾರವಾಗಿಟ್ಟುಕೊಂಡು ವೀರಶೈವ ಮತವು ಅವೈದಿಕ ವಲ್ಲ, ಅದಕ್ಕೆ ವೇದೋಪನಿಷತ್ತುಗಳೇ ಆಧಾರಗಳೆಂದು ಸಾಧಿಸಿದ ಅವರು 1959ರ ಭಾಷಣದಲ್ಲಿ ಅದನ್ನೇ ಕಟುವಾಗಿ ವಿರೋಧಿಸಿದ್ದಾರೆ.
1922ರಲ್ಲಿ ಪಂಚಪೀಠಗಳ ಪರಂಪರೆಯನ್ನು ಗೌರವದಿಂದ ಉಖಿಸಿದ ಅವರು 1959ರ ಭಾಷಣದಲ್ಲಿ ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ತಾಳಿದ್ದಾರೆ. ನನಗೆ ನನ್ನ ತಂದೆಯವರು ಶ್ರೀ ಸದಾಶಿವ ಯ್ಯನವರ ಬಗ್ಗೆ ಹೇಳಿದ ವಿಚಾರವೂ ವಿದ್ವಾನ್ ಎಂ.ಜಿ. ನಂಜುಂಡಾರಾಧ್ಯರು ಹೇಳಿದ ವಿಚಾರವೂ ಒಂದೇ. ಶ್ರೀ ಸದಾಶಿವಯ್ಯನವರು ಶ್ರೀ ರಂಭಾಪುರಿ ಪೀಠಕ್ಕೆ ಅಭ್ಯರ್ಥಿಯಾಗಿದ್ದರು. ಅವರು ಆಯ್ಕೆ ಯಾಗದೇ ಇದ್ದುದರಿಂದ ಹತಾಶರಾಗಿ ಈ ರೀತಿ ಶ್ರೀಕರಭಾಷ್ಯ ಮತ್ತು ರೇಣುಕಾದಿ ಪಂಚಾ ಚಾರ್ಯರ ಬಗೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದೇ ಆ ವಿಚಾರ.
ಇದನ್ನು ಇಮ್ಮಡಿ ಶಿವಬಸವ ಸ್ವಾಮಿಗಳು ‘ನಿರಾಧಾರ ಸತ್ಯದೂರವಾದ ಆರೋಪ’ವೆಂದು ಅಲ್ಲ ಗಳೆದಿದ್ದಾರೆ. ಈ ವಿಚಾರ ನಿರಾಧಾರವೂ ಅಲ್ಲ, ಸತ್ಯದೂ ರವೂ ಅಲ್ಲ. ಏಕೆಂದರೆ ಶ್ರೀ ಸದಾಶಿವಯ್ಯ ನವರ ಜೀವನ ಚರಿತ್ರೆಯನ್ನು ಬರೆದ ಡಾ.ಬಸವರಾಜ ಮಲಶೆಟ್ಟಿ ಅವರು ನಮೂದಿ ಸಿದ ಪ್ರಸಂಗವು ಇದಕ್ಕೆ ಆಧಾರವಾಗಬಲ್ಲದು: ಸದಾಶಿವಯ್ಯನವರು ಇನ್ನೂ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಒಂದು ಘಟನೆ ನಡೆಯಿತು.
ಅವರ ದೊಡ್ಡಪ್ಪ ಶಿವರುದ್ರಶಾಸ್ತ್ರಿಗಳು ಧಾರ್ಮಿಕ ಸ್ವಭಾವದವರೆಂಬುದನ್ನು ಈ ಮೊದಲೇ ಹೇಳಿದೆ. ಅವರಿಗೆ ಸದಾಶಿವಯ್ಯನವರ ಮೇಲೆ ವಿಶೇಷ ಅಕ್ಕರೆ. ಚೈತನ್ಯದ ಚಿಲುಮೆಯಂತಿರುವ ಈ ಹುಡುಗನನ್ನು ಬಾಳೇಹೊನ್ನೂರು ಪೀಠಕ್ಕೆ ಜಗದ್ಗುರುವನ್ನಾಗಿ ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತು. ಇದಕ್ಕೆ ದಾವಣಗೆರೆಯ ಹನಗವಾಡಿ ಮುರಿಗೆಪ್ಪನವರು ಬೆಂಬಲವಾಗಿ ನಿಂತರು.
ಸದಾಶಿವಯ್ಯನವರನ್ನು ಕರೆದುಕೊಂಡು ಬಾಳೆಹೊನ್ನೂರಿಗೆ ಹೋಗಿಬಂದರು. ಆದರೆ ಅವರ ಆಶೆ ನೆರವೇರಲಿಲ್ಲ. ನಿರಾಶೆ, ಅಪಮಾನ ಎರಡೂ ಆದವು. ಇದು ಸದಾಶಿವಯ್ಯನವರ ಮನಸ್ಸಿನ ಮೇಲೆ ಪರಿಣಾಮ ಮಾಡದೇ ಇರಲಿಲ್ಲ. ಅವರು ಮುಂದೆ ಜೀವನದುದ್ದಕ್ಕೂ ಗುರುಪೀಠಗಳ ಬಗ್ಗೆ ಅಸಹನೆ ಯಿಂದ ನಡೆದುಕೊಂಡುದಕ್ಕೆ ಇದೇ ಮೂಲ ಕಾರಣವಾಯಿತು (ಟಿ.ಎಚ್.ಎಂ. ಸದಾಶಿವಯ್ಯ ನವರು, ವೀರಶೈವ ಪುಣ್ಯಪುರುಷ ಸಾಹಿತ್ಯ ರತ್ನಮಾಲೆ-66, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ). ಅದೇ ರೀತಿ ವಿದ್ವಾನ್ ಎಂ.ಜಿ.ನಂಜುಂಡಾರಾಧ್ಯರು, ‘1922ರಲ್ಲಿ ಪುಟ್ಟಣ್ಣಶೆಟ್ಟರ ನೇತೃತ್ವದ ಆಯ್ಕೆ ಸಮಿತಿಯಿಂದ’ (ಪು. 122) ಅವರು ಆಯ್ಕೆಯಾಗಲಿಲ್ಲ ಎಂಬಲ್ಲಿ ವರ್ಷದ ಟಿ.ಎಚ್.ಎಂ. ಮಾಹಿತಿಯಲ್ಲಿ ವ್ಯತ್ಯಾಸವಿದೆ.
ಆದರೆ ಸದಾಶಿವಯ್ಯನವರು ಶ್ರೀ ರಂಭಾಪುರಿ ಪೀಠಕ್ಕೆ ಅಭ್ಯರ್ಥಿಯಾಗಿದ್ದುದು ನಿಜ. ಅವರು ಆಯ್ಕೆ ಯಾಗದೆ ಹೋದ ಹತಾಶೆಯಿಂದ ಹಾಗೆ ವಿರೋಧವನ್ನು ಜೀವನವೆ ಸಾಧಿಸಿದ್ದೂ ನಿಜ (ಆಗ ಆಯ್ಕೆ ಯಾಗಿ ಪೀಠಕ್ಕೆ ಬಂದವರು ಹಿರೇಹಾಳು ಹಿರೇಮಠದ ಪಂ. ಸದಾಶಿವ ಶಾಸ್ತ್ರಿಗಳು; ಅವರು ದಿನಾಂಕ 22-11-1925ರಂದು ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರೆಂಬ ಹೆಸರಿನಿಂದ ಪೀಠಾಧಿಪತಿಗಳಾದರು)" ಎನ್ನುತ್ತಾರೆ.
ಹೀಗೆ ಪೀಠಾಧಿಕಾರದ ಅವಕಾಶ ನಿರಾಕರಣೆಯ ಟಿ.ಎಚ್.ಎಂ.ಸದಾಶಿವಯ್ಯನವರಲ್ಲಿ ‘ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆ’ಯನ್ನುಂಟು ಮಾಡಿ ಮಾನಸಿಕ ತಜ್ಞರು ನಿರೂಪಿಸಿದಂತೆ ಬೆಳೆದು ಹೆಮ್ಮರವಾಗಿ ಅವರು ಜೀವನ ಪರ್ಯಂತ ನಿರಾಕರಿಸಿದವರನ್ನು ದ್ವೇಷಿಸುತ್ತಲೇ ಸಾಗಿದರು. ಅದಕ್ಕೆ ಸಾಕ್ಷಿಯೆಂಬಂತೆ ಶ್ರೀ ಎಂ.ಶಿವಕುಮಾರ ಸ್ವಾಮಿಗಳು ತಮ್ಮ ಲೇಖನದಲ್ಲಿ ಮುಂದು ವರಿಯುತ್ತಾ, “ಮಾಹಿತಿಗಳನ್ನು ಕೆದಕಿ ಕೆದಕಿ, ಸಿಕ್ಕ ಅಂತೆಕಂತೆ ಮಾಹಿತಿಗಳಿಗೆ ತಮ್ಮ ವಕೀಲಿ ಬುದ್ಧಿಯಿಂದ ರೂಪಕೊಟ್ಟು ನಿರೂಪಿಸಿದ ಉದ್ದೇಶಪೂರ್ವಕ ಜಿದ್ದಿನಿಂದ ಕಸರತ್ತು ಮಾಡಿ ಸಾಕ್ಷಿಗಳನ್ನು ಸೃಷ್ಟಿಸಿ, ತಮ್ಮದನ್ನು ಸಾಧಿಸುವ ಕಲೆ ವಕೀಲರಾಗಿದ್ದ (ನ್ಯಾಯಾಧೀಶರೂ ಆಗಿದ್ದ) ಸದಾಶಿವಯ್ಯ ನವರಿಗೆ ಕರಗತವಾಗಿತ್ತು ಎಂದು ಬೇರೆ ಹೇಳಬೇಕೇ?" ಎಂದು ಸದಾಶಿವಯ್ಯನವರ ವಾದಕ್ಕೆ ಪಾಟಿಸವಾಲು ಹಾಕುತ್ತಾರೆ.
ಹಾಗೆಯೇ ತಮ್ಮ ವಾದವನ್ನು ಮುಂದುವರಿಸುತ್ತಾ, “ಶ್ರೀ ಸದಾಶಿವಯ್ಯನವರು ಒಂದು ಸಮ್ಮೇಳನ ಕ್ಕೆ ಹೋಗಿದ್ದಾಗ, ಅಲ್ಲಿಗೆ ಬಂದಿದ್ದ ಆರಾಧ್ಯ ಬ್ರಾಹ್ಮಣರೋರ್ವರ ಮುಖದಿಂದ ಅವರಿಗೆತೆಲುಗು ದೇಶದ ಆರಾಧ್ಯಬ್ರಾಹ್ಮಣರಲ್ಲಿ ಶ್ರೀಕರಭಾಷ್ಯದ ಬಗ್ಗೆ ತರ್ಕ ವಿತರ್ಕಗಳು ಸುಮಾರು ೩೫ ವರ್ಷ ಗಳಿಂದ ನಡೆಯುತ್ತಿರುವವೆಂದೂ ಬಹುಜನ ಪಂಡಿತರು ಈ ಭಾಷ್ಯವು ನೂತನವಾಗಿ ಕಲ್ಪಿಸ ಲ್ಪಟ್ಟಿರುವುದೆಂದು ಅಭಿಪ್ರಾಯಪಟ್ಟಿರುವರೆಂದೂ ತಿಳಿದು ಬಂದಿತು.
ನಂತರ ಅವರಿಗೆ ಸಿಕಂದರಾಬಾದಿನಲ್ಲಿದ್ದ ಶ್ರೀ ಪಂಡಿತಸ್ವಾಮಿ ಎಂಬುವವರು ಶ್ರೀಕರಭಾಷ್ಯವನ್ನು ಸಿದ್ಧಮಾಡಿ ತಮ್ಮ ಕೂಟಸ್ಥನಾದ ಆದಿ ಶ್ರೀಪತಿ ಪಂಡಿತರ ಹೆಸರಿನಲ್ಲಿ ಪ್ರಕಟಿಸಿದರು ಎಂದು ತಿಳಿದುಬಂದಿತು, ವಿರೋಧ ಪಕ್ಷದ ಶ್ರೀ ಮುದಿಗೊಂಡ ನಾಗಲಿಂಗಶಾಸಿಗಳ ‘ಶೈವಭಾಷ್ಯ ನಿರ್ಣಯ’ ಎಂಬ ಉಪನ್ಯಾಸದಿಂದ (ಅದರ ಪ್ರತಿ ಎಲ್ಲಿದೆಯೋ ಗೊತ್ತಿಲ್ಲ) ಮೇಲ್ಕಂಡ ಅಭಿಪ್ರಾಯದ ವಿರುದ್ಧ ವಾಗಿ ಶ್ರೀ ಚೌಗುಂಟಿ ಸೀತಯ್ಯ ಶಾಸ್ತ್ರಿಗಳು ‘ಶೈವಸೂತ್ರ ಭಾಷ್ಯ ನಿರ್ಣಯ’ ಎಂಬ ಲೇಖನ ದಲ್ಲಿ ‘ಪಂಡಿತ ಸ್ವಾಮಿಗಳು ಹನ್ನೆರಡು ಸಾವಿರ ರುಪಾಯಿಗಳನ್ನು ಖರ್ಚು ಮಾಡಿ ಅನೇಕ ಪುಸ್ತಕ ಭಂಡಾರಗಳನ್ನು ಅನ್ವೇಷಿಸಿ ಈ ಗ್ರಂಥವನ್ನು ತೆಗೆದರಾಗಲಿ, ವಿಲುಪ್ತ ಸ್ಥಳಗಳಲ್ಲಿ ಮಿತಪಾಂಡಿತ್ಯ ವಂತರಿಂದ ಸಂಸ್ಕರಿಸಿದ್ದರಿಂದ ಪ್ರಸ್ತುತವಾದ ಸಂಸ್ಕರಣಗಳೇ ಶಲ್ಯಪ್ರಾಯಗಳಾಗಿ ಕಂಡುಬರುತ್ತವೆ’ಎಂದಿದ್ದಾರೆ (ಇದೂ ಎಲ್ಲಿ ಮುದ್ರಿತವಾಗಿದೆಯೋ ಗೊತ್ತಿಲ್ಲ).
ಒಟ್ಟಿನಲ್ಲಿ ಆಂಧ್ರದ ಆರಾಧ್ಯಬ್ರಾಹ್ಮಣರಲ್ಲಿ ಕೆಲವರು ನೀಲಕಂಠ ಭಾಷ್ಯವೇ ಪ್ರಮಾಣವೆಂದೂ ಮತ್ತೆ ಕೆಲವರು ಶ್ರೀಕರಭಾಷ್ಯವೇ ಪ್ರಮಾಣವೆಂದೂ ವಾದಿಸುತ್ತಿದ್ದ ಎರಡು ಪಂಗಡಗಳಲ್ಲಿ ಎದ್ದ ವಿವಾದದಲ್ಲಿ ಒಂದು ಪಕ್ಷದವರು ಶ್ರೀಕರಭಾಷ್ಯವನ್ನು ವಿವಿಧ ಪುಸ್ತಕ ಭಂಡಾರಗಳಲ್ಲಿ ಹುಡುಕಿ ಹೊರ ತೆಗೆದ ಶ್ರೀ ಪಂಡಿತ ಸ್ವಾಮಿಗಳೆಂಬುವರ ಕೆಲವು ಪಂಡಿತರ ಸಹಾಯದಿಂದ ಅದನ್ನು ಸೃಷ್ಟಿಸಿದರು ಎಂಬ ವಾದವನ್ನು ಗಟ್ಟಿಗೊಳಿಸುತ್ತಾ ಹೋದುದನ್ನು ಕಾಣುತ್ತೇವೆ.
ಅದು ಶ್ರೀ ಸದಾಶಿವಯ್ಯನವರಿಗೆ ಬಹಳ ದೊಡ್ಡ ಆಧಾರವಾಗಿ ಪರಿಣಮಿಸಿತು. ಶ್ರೀ ಸೀತಯ್ಯ ಶಾಸ್ತ್ರಿಗಳು ಹೇಳಿದಂತೆ ದೊರೆತ ಪ್ರಾಚೀನ ಕೃತಿಯ ಸ್ಥಿತಿಯೂ ಹಾಗೇ ಇತ್ತು; ಅದರಲ್ಲಿ ಎಷ್ಟೋ ಭಾಗಗಳು ವಿಲುಪ್ತವಾಗಿದ್ದವು; ಕೆಲವು ಪಂಡಿತರು ಸೇರಿ ಅದರ ಸಂಸ್ಕರಣವನ್ನು ಮಾಡಬೇಕಾಗಿ ಬಂದಿತ್ತು. ಆ ಸಂಸ್ಕರಣಗಳು ಮೂಲ ಆಚಾರ್ಯನ ಆಶಯಕ್ಕೆ ವಿರುದ್ಧವೆಂಬ ಭಾವನೆಯನ್ನೂ ಬಿತ್ತುವುದು ಸಾಧ್ಯವಾಯಿತು.
ಈ ಕಾರಣಗಳಿಂದ ಶ್ರೀಕರಭಾಷ್ಯವು ಪ್ರಾಚೀನ ಶ್ರೀಪತಿ ಪಂಡಿತರ ಕೃತಿಯಲ್ಲವೆಂದು ಸಾಧಿಸುವ ಪಕ್ಷಕ್ಕೆ ಬಲ ಬಂತು. ಇಲ್ಲಿ ಶ್ರೀ ಸ್ವಾಮಿಗಳು ಗಟ್ಟಿಸಂಶೋಧನೆ ಮಾಡಿ ಶ್ರೀಕರಭಾಷ್ಯದಲ್ಲಿನ ನೂರಾರು ಸೂತ್ರಗಳಿಗೆ (ಸರಿಯಾಗಿ 148ಕ್ಕೆ) ಶ್ರೀಭಾಷ್ಯದ ಭಾಗಗಳನ್ನು ಅಕ್ಷರಶಃ ಪೂರ್ಣವಾಗಿ ಅಥವಾ ಭಾಗಶಃ ತೆಗೆದುಕೊಂಡಿದ್ದಾರೆ ಎಂದು ತೋರಿಸಿರುವ ವಿಷಯಕ್ಕೆ ಹಿನ್ನೆಲೆಯನ್ನು ಶ್ರೀ ಸೀತಯ್ಯ ಶಾಸ್ತ್ರಿಗಳ ಮಾತಿನಲ್ಲಿ ಕಾಣಬಹುದು.
ಶ್ರೀ ಸ್ವಾಮಿಗಳೇ ಗುರುತಿಸಿರುವಂತೆ ಎರಡನೇ ಅಧ್ಯಾಯದ ಎರಡನೆಯ ಪಾದದಿಂದ ಮಾತ್ರ ಸೇರ್ಪಡೆಯಾಗಿರುವುದು. ಅದರಲ್ಲಿ ಬರುವ ವಿಷಯಗಳು ಬೌದ್ಧ, ಜೈನ, ಸಾಂಖ್ಯ, ವೈಶೇಷಿಕ, ನ್ಯಾಯ ಮೊದಲಾದ ದರ್ಶನಗಳ ಸಿದ್ಧಾಂತಗಳ ಖಂಡನೆಗೆ ಸಂಬಂಧಪಟ್ಟವುಗಳು. ಶ್ರೀ ಸೀತಯ್ಯ ಶಾಸ್ತ್ರಿಗಳು ಹೇಳಿದಂತೆ ವಿಲುಪ್ತ ಭಾಗಗಳನ್ನು ಪೂರೈಸಲು ಸ್ವತಃ ಅಸಮರ್ಥರಾಗಿದ್ದ ‘ಮಿತ ಪಾಂಡಿತ್ಯವಂತ’ರು ಬೇರೆ ಭಾಷ್ಯದಿಂದ ಆ ಭಾಗಗಳನ್ನು ಸೇರಿಸಿದ್ದಾರೆ. ಆದ್ದರಿಂದ ಶ್ರೀಕರಭಾಷ್ಯವು ಪ್ರಾಚೀನ (ಅಂದರೆ ಬಸವಪೂರ್ವದ) ಶ್ರೀಪತಿ ಪಂಡಿತರು ಬರೆದಿದ್ದಲ್ಲ ಎಂದು ಸಾರಾಸಗಟಾಗಿ ನಿರಾಕರಿಸುವುದು ಸರಿಯಲ್ಲ.
ಅವರ ಪ್ರಾಚೀನ ಕೃತಿಯು ಕಾಲದ ಉಪಟಳಕ್ಕೆ ಒಳಗಾಗಿ ತುಟಿತವಾಗಿತ್ತು, ಕೆಲವು ಭಾಗಗಳೇ ಲುಪ್ತವಾಗಿದ್ದವು, ಅವುಗಳನ್ನು ಇತ್ತೀಚಿನ ಪಂಡಿತರು ಬೇರೆ ಭಾಷ್ಯದಿಂದ ಆಯ್ದು ಪೂರೈಸುವು ದಲ್ಲದೆ ಕೆಲವು ಸಂಸ್ಕರಣಗಳನ್ನೂ ಎಲ್ಲಾ ಪ್ರಕ್ರಿಯೆಯಲ್ಲಿ ಪೂರ್ವಾಪರ ವಿರೋಧಗಳೂ ಆಗಿವೆ ಯೆಂಬುದನ್ನು ಒಪ್ಪಬೇಕು.
ಇಷ್ಟೆಲ್ಲದರ ಮಧ್ಯದಲ್ಲಿ ರಾಮಾನುಜರ ಮತವನ್ನು ‘ಅವೈದಿಕ ಮತ’ವೆಂದು ಕರೆಯುವಷ್ಟು ದೀರ್ಘಕ್ಕೆ ಹೋಗಿರುವುದನ್ನು ‘ಸ್ವಮತವೇ ವೈದಿಕ’ವೆಂದು ತೋರಿಸುವ ಉತ್ಸಾಹದಲ್ಲಿ ಆಗಿರುವ ಅತಿರೇಕವೆಂದು ಭಾವಿಸಬೇಕು. ಪ್ರಸ್ತುತ ಅನೇಕ ಹಸ್ತಪ್ರತಿಗಳ ಆಧಾರದ ಮೇಲೆ 1936ರಲ್ಲಿ ಶ್ರೀ ಹಯವದನರಾಯರಿಂದ, 1977ರಲ್ಲಿ ವಿದ್ವಾನ್ ಎಂ.ಜಿ.ನಂಜುಂಡಾರಾಧ್ಯರಿಂದ ಸಂಪಾದಿಸಲ್ಪಟ್ಟು ಪ್ರಕಟವಾದ ಶ್ರೀಕರ ಭಾಷ್ಯದಲ್ಲಿ ಅನೇಕ ಸೇರ್ಪಡೆಗಳೂ ಸಂಸ್ಕರಣಗಳೂ ಆಗಿದ್ದರೂ ಅದರ ಮೂಲಕರ್ತೃ ಶ್ರೀಪತಿ ಪಂಡಿತರೇ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ.
ಅದರ ಮೂಲಕರ್ತೃ ಶ್ರೀಪತಿ ಪಂಡಿತರು ಎಂಬುದಕ್ಕೆ ಕೆಳಗೆ ಕೊಟ್ಟ ಆಧಾರಗಳನ್ನೂ ಪರಿಗಣಿಸ ಬಹುದು: ಪಾಲ್ಕುರಿಕೆ ಸೋಮನಾಥರು ಶ್ರೀಪತಿಪಂಡಿತಾರಾಧ್ಯರನ್ನು (ಆಂಧ್ರದ) ಪಂಡಿತತ್ರಯ ರಲ್ಲಿ ಮೊದಲಿನವರೆಂದು ವರ್ಣಿಸುತ್ತಾ ಅವರು ಬ್ರಹ್ಮವಾದಿಗಳ ಮತವನ್ನು ಖಂಡಿಸಿ, ಹರಭಕ್ತಿ ಯನ್ನು ನೆಲೆಗೊಳಿಸಿದರೆಂದು ಸ್ತುತಿಸಿದ್ದಾರೆ: ‘ಕಡು ನರ್ಥಿನುತ್ಪತ್ತಿಕರ್ತನಾ ಬ್ರಹ್ಮವಡಿ ಬ್ರಹ್ಮಮನು ಬ್ರಹ್ಮವಾದುಲಂ ದ್ರುಂಚಿ ಹರಭಕ್ತಿಯುತ್ಪತ್ತಿಕಧಿಪತಿ ನಾಂಗಂ ಬರಗೆಂದಾಂ ದೊಲ್ಲಿ ಶ್ರೀಪತಿ ಪಂಡಿತಯ್ಯ’ (ಪಂಡಿತಾರಾಧ್ಯ ಚರಿತ್ರ, ಪು. ೭).
ಇಲ್ಲಿ ಅದೈತ ಬ್ರಹ್ಮವಾದಿಗಳ ಮತವನ್ನು ಒಣ (ವಡಿ) ಬ್ರಹ್ಮನ ವಿಷಯವೆಂದು ಖಂಡಿಸಿ (ದ್ರುಂಚಿ) ಶಿವಭಕ್ತಿ ಮೂಲಕವಾದ ಶಿವಾನ್ವಿತ ಮತವನ್ನು ಸ್ಥಾಪಿಸಿದ ಕೀರ್ತಿ ಶ್ರೀಪತಿ ಪಂಡಿತರಿಗೆ ಸಲ್ಲುತ್ತದೆ ಎಂದು ಸೋಮನಾಥನು ಸೂಚಿಸಿzನೆ. ಶ್ರೀಕರ ಭಾಷ್ಯದಲ್ಲಿ ಬಂದಿರುವ ವಿಷಯ ಕೂಡ ಅದೈತದ ಖಂಡನೆ ಮತ್ತು ಶಿವಾತದ (ವಿಶೇಷಾದ್ವತದ) ಮಂಡನೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)