ವಿಶ್ವರಂಗ
ಬಾಲಿವುಡ್‌ನಲ್ಲಿ ತಮ್ಮ ಮಕ್ಕಳಿಗೇ ಪಟ್ಟ ಕಟ್ಟುತ್ತಾರೆ. ಅವರಿಗೆ ಮಾತನಾಡಲು ಬರಲಿ ಬಿಡಲಿ, ಅವರು ಸ್ಟಾರ್‌ಗಳಾಗಬೇಕು. ಕಷ್ಟಪಡದೆ ಮಿತಿಮೀರಿದ ಹಣವನ್ನ ಸಂಗ್ರಹಿಸಿದ ಈ ತಾರೆಯರು ಒಂದಲ್ಲ ಒಂದು ಬಾರಿ ಹೆಚ್ಚು ಓದಿದವರ ಬಗ್ಗೆ ಲೇವಡಿ ಮಾಡುವುದನ್ನ ನೀವು ಕೇಳಿರುತ್ತೀರಿ. ನಿಜಜೀವನದಲ್ಲೂ ಮತ್ತು ತೆರೆಯ ಮೇಲಿನ ಬದುಕಿಗೂ ಲವಲೇಶವೂ ಸಾಮ್ಯತೆಯಿಲ್ಲದೆ ಇವರನ್ನ ನಾವು ಪೂಜಿಸುತ್ತೇವೆ.
ಇದೇನಿದು, ಲೇಖನದ ಹೆಸರು ಬಾಸ್ಟರ್ಡ್ಸ್ ಆಫ್ ಬಾಲಿವುಡ್? ಎಂದು ಹುಬ್ಬೇರಿಸುವ ಮುಂಚೆ ಹೇಳಿಬಿಡುತ್ತೇನೆ. ಇದು ನಾನು ಹೇಳಿದ್ದಲ್ಲ. ನೆಟ್ ಫ್ಲಿಕ್ಸ್ ನಲ್ಲಿ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರ ನಿರ್ದೇಶನದಲ್ಲಿ ಬಂದಿರುವ ಒಂದು ವೆಬ್ ಸಿರೀಸ್.
ಇವತ್ತಿನ ಕಾಲಘಟ್ಟದಲ್ಲಿ ಇಂಗ್ಲಿಷ್ ವೆಬ್ ಸಿರೀಸ್‌ಗಳು ಸಭ್ಯವಾಗಿರುತ್ತವೆ. ಹಿಂದಿ ವೆಬ್ ಸಿರೀಸ್ ಎಂದ ತಕ್ಷಣ ಅತ್ಯಂತ ಕೆಟ್ಟ ಪದಗಳ ಬಳಕೆ, ಬೇಕಿಲ್ಲದ ಅಶ್ಲೀಲತೆ ತುರುಕುವುದು ಬಹಳ ಸಹಜ ಎನ್ನುವಂತಾಗಿದೆ. ಬಾಸ್ಟರ್ಡ್ಸ್ ಆಫ್ ಬಾಲಿವುಡ್ ಎನ್ನುವ ವೆಬ್ ಸಿರೀಸ್ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ಬಾಲಿವುಡ್ ಮಂದಿಯಲ್ಲಿ ನಡೆಯುವ ಒಳಜಗಳ, ದ್ವೇಷ, ಕಿತ್ತಾಟ, ಪೈಪೋಟಿ, ಎಲ್ಲಕ್ಕಿಂತ ಮುಖ್ಯ ವಾಗಿ ಸಮಯ ಸಾಧಕತನವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಗೆದ್ದವರಿಗಷ್ಟೇ ಮರ್ಯಾದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಇಲ್ಲಿ ಬೇರುಬಿಟ್ಟಿರುವ ನೆಪೋಟಿಸಂ ಬಗ್ಗೆ ಕೂಡ ಮಾತು ಬಂದುಹೋಗುತ್ತದೆ. ನೆಪೋಟಿಸಂ ತಪ್ಪು ಅಥವಾ ಸರಿ ಎನ್ನುವುದರ ಬಗ್ಗೆ ಚರ್ಚೆಯಾಗುವುದಿಲ್ಲ. ಅದಿರುವುದು ಸತ್ಯ ಎನ್ನುವುದನ್ನು ತೋರಿಸಲಾಗಿದೆ.
ಇದನ್ನೂ ಓದಿ: Rangaswamy Mookanahalli Column: ಯಾವುದು ಮುಖ್ಯ...ಹಣವಾ ಅಥವಾ ಮರ್ಯಾದೆಯಾ ?
ಕಳೆದ ಎರಡು ದಶಕದಿಂದ ಬಾಲಿವುಡ್ ಭಾರತೀಯತೆಯನ್ನು ಇನ್ನಿಲ್ಲದಂತೆ ಕಲುಷಿತಗೊಳಿಸಿ ಬಿಟ್ಟಿದೆ. ಇಲ್ಲಿ ಎಲ್ಲವೂ ಓಕೆ, ಸಬ್ ಕುಚ್ ಚಲ್ತಾ ಹೈ ಎನ್ನುವ ರೀತಿಯಲ್ಲಿ ತೋರಿಸುತ್ತ ಬಂದರು. ಒಂದು ತಲೆಮಾರಿನವರು ಇದನ್ನು ಸಹಜವೆನ್ನುವಂತೆ ಒಪ್ಪಿಕೊಂಡು ಬಿಟ್ಟರು.
ಸಮಾಜದಲ್ಲಿನ ಮಡಿವಂತಿಕೆ ಅದ್ಯಾವಾಗ ಮಾಯವಾಯ್ತು ಗೊತ್ತಾಗಲೇ ಇಲ್ಲ. ದೃಶ್ಯ ಮಾಧ್ಯಮ ಅತ್ಯಂತ ಶಕ್ತಿಶಾಲಿ ಮಾಧ್ಯಮ. ಅದನ್ನು ಬಳಸಿಕೊಂಡು ನಮ್ಮ ದೇಶದ ಬಗ್ಗೆ ಜನತೆಯಲ್ಲಿ ಹೆಮ್ಮೆ ಬರುವಂಥ ಕೆಲಸವನ್ನು ಬಾಲಿವುಡ್ ಮಾಡಬಹುದಿತ್ತು. ಆದರೆ ಅಲ್ಲಿನ ಜನ ಅವರೇ ಒಪ್ಪಿ ಹೆಸರಿಟ್ಟಿರುವ ವೆಬ್‌ಸಿರೀಸ್ ಜನ. ದೇಶ, ಸಂಸ್ಕಾರ ಇತ್ಯಾದಿಗಳು ಅವರಿಗೆ ಬೇಕಿಲ್ಲ.
ಅನಿದ್ದರೂ ಪ್ರತಿ ಶುಕ್ರವಾರದ ಲಾಭ, ನಷ್ಟದ ಚಿಂತೆಯಷ್ಟೆ. ಬಾಲಿವುಡ್ ನಮ್ಮ ದೇಶದ ಅಸ್ಮಿತೆಯನ್ನ ನಾಶ ಮಾಡುವ ಎಲ್ಲಾ ಕಾರ್ಯದಲ್ಲಿ ತೊಡಗಿದೆ. ಉದಾಹರಣೆ ನೋಡಿ- ಬಾಯ್-ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಇರುವುದು ಅತಿ ಸಾಮಾನ್ಯ; ಹೀಗೆ ಇಲ್ಲದವರು ಹಳ್ಳಿಮುಕ್ಕರು ಎನ್ನುವ ಭಾವನೆಯನ್ನು ಅದು ನಮ್ಮ ಯುವ ಜನತೆಯಲ್ಲಿ ಬಲವಾಗಿ ಬಿತ್ತಿದೆ.

ಹೀಗೆ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಜತೆ ಬ್ರೇಕ್-ಅಪ್ ಮಾಡಿಕೊಳ್ಳುವುದು ಕೂಡ ಅತಿ ಸಾಮಾನ್ಯ. ಮದುವೆಗೆ ಮುಂಚಿನ ಹೆಣ್ಣು ಗಂಡಿನ ಸಂಬಂಧ ತಪ್ಪೇನೂ ಅಲ್ಲ. ಲಿವಿಂಗ್ ರಿಲೇಶನ್ ಕೂಡ ಇಂದು ಸಾಮಾನ್ಯ, ಅದರಲ್ಲಿ ಮಡಿವಂತಿಕೆಯೇನು? ಎಂದು ಉಲ್ಟಾ ಸಮಾಜವನ್ನೇ ಪ್ರಶ್ನಿಸುವ ಸನ್ನಿವೇಶದ ಚಿತ್ರಗಳು. ಹೆಣ್ಣನ್ನ ಅತ್ಯಂತ ಕೆಟ್ಟದಾಗಿ ಕುಣಿಸುವುದು,
ಉಪಭೋಗದ ವಸ್ತು ಎನ್ನುವಂತೆ ತೋರಿಸುವುದು ಕೂಡ ಅತ್ಯಂತ ಸಾಮಾನ್ಯವಾಗಿದೆ. ಹೀಗೆ ಗಮನಿಸುತ್ತಾ ಹೋಗಿ ಯಾವುದು ಭಾರತೀಯತೆಯ ದೋತ್ಯಕ ಎಂದು ನಂಬಲಾಗಿತ್ತೋ ಅಂಥ ಎಲ್ಲಾ ನಂಬಿಕೆಗಳನ್ನ ಜೊಳ್ಳು ಎಂದು ಆಡಿಕೊಂಡು ನಗಲಾಗುತ್ತದೆ. ಹಳೆಯ ದಾರಿಯಲ್ಲಿರು ವವರನ್ನ ಔಟ್ ಆಫ್ ಫ್ಯಾಷನ್ ಅಥವಾ ಕೆಲಸಕ್ಕೆ ಬಾರದವ ಎನ್ನುವಂತೆ ಹೀಗಳೆಯಲಾಗುತ್ತದೆ.
ಒಂದು ಜನತೆಯನ್ನ ಭಾರತೀಯತೆಯಿಂದ ದೂರ ಮಾಡಿ ಬದುಕಲು ಏನು ಮಾಡಿದರೂ ತಪ್ಪಿಲ್ಲ, ಇತರರನ್ನ ಕೊಂದಾದರೂ ಸರಿಯೇ ನಾವು ಬದುಕಿದರೆ ಸಾಕು ಎನ್ನುವ ಪಾಠವನ್ನ ಬಾಲಿವುಡ್ ಹೇಳಿಕೊಡುತ್ತಿದೆ. ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ನಲ್ಲಿ ಇವುಗಳ ಕಥನವಿದೆ. ಅವರು ಮಾಡುತ್ತಿರು ವುದು ತಪ್ಪು ಎನ್ನುವುದರ ಅರಿವಾಗಿದೆ. ‘ನಾವು ಬಾಸ್ಟರ್ಡ್ಸ್’ ಎಂದು ಅವರನ್ನೇ ಅವರು ಕರೆದು ಕೊಳ್ಳುವ ದಾಷ್ಟಿಕತೆ ತೋರಿದ್ದಾರೆ. ಒಟ್ಟಾರೆ ಇಲ್ಲಿ ಇಷ್ಟವಾದದ್ದು ಕೇವಲ ಈ ಒಂದಂಶ ಮಾತ್ರ!
2021ರ ಅಕ್ಟೋಬರ್‌ನಲ್ಲಿ, ಅಂದರೆ ಸರಿಯಾಗಿ ನಾಲ್ಕು ವರ್ಷದ ಹಿಂದೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ಸ್ ನೊಂದಿಗೆ ಸಿಕ್ಕಿಬಿzಗ ಈ ಕೇಸ್ ಬಹಳ ದಿನ ನಿಲ್ಲುವುದಿಲ್ಲ. ಆರ್ಯನ್ ಖಾನ್ ನಿಧಾನವಾಗಿ ಜನಮನ್ನಣೆ ಗಳಿಸಿಕೊಳ್ಳುತ್ತಾರೆ ಎನ್ನುವ ಭವಿಷ್ಯವನ್ನು ಬರೆದು ಹಾಗೇ ಇಟ್ಟುಕೊಂಡಿದ್ದೆ. ಏಕೆಂದರೆ ಇಂಥ ಭವಿಷ್ಯವಾಣಿಯನ್ನು ನುಡಿಯಲು ನಾವೇನೂ ತತ್ವಜ್ಞಾನಿ ಯಾಗಬೇಕಾದ ಅಥವಾ ಕಾಲಜ್ಞಾನಿಯಾಗಬೇಕಾದ ಅವಶ್ಯಕತೆಯಿಲ್ಲ.
ಭಾರತದಲ್ಲಿ ಹಣಬಲ, ಹೆಸರಿನ ಬಲವಿದ್ದಾಗ ಇದು ಅತ್ಯಂತ ಸಾಮಾನ್ಯ, ಸಹಜ. ಹೀಗಾಗದೆ ಇದ್ದಿದ್ದರೆ ಮಾತ್ರ ಅದು ಅಸಹಜ. ಬನ್ನಿ ನಾಲ್ಕು ವರ್ಷ ಹಿಂದಕ್ಕೋಗೋಣ. ಏನಾಯ್ತು ಸ್ವಲ್ಪ ನೋಡೋಣ. ಡ್ರಗ್ಸ್ ಸೇವಿಸುವುದು, ಕೊಂಡುಕೊಳ್ಳುವುದು ಭಾರತದಲ್ಲಿ ಅಪರಾಧ.
ಡ್ರಗ್ಸ್ ಸೇವಿಸಿ ಸಿಕ್ಕಿ ಬಿದ್ದರೆ, ಜತೆಗೆ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಖರೀದಿ ಮಾಡಿದ ಸಾಕ್ಷಿ ಸಮೇತ ಸಿಕ್ಕರೆ ಭಾರತದಲ್ಲಿ ಕನಿಷ್ಠ 14 ವರ್ಷ ಜೈಲಿಗೆ ಹೋಗುವ ಸಂಭವ ಹೆಚ್ಚು. ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮತ್ತು ಖರೀದಿ ಎರಡೂ ವಿಷಯದಲ್ಲೂ ಸಿಕ್ಕಿ ಬಿದ್ದಿದ್ದಾನೆ.
ಸಾಲದಕ್ಕೆ ಕಳೆದ ನಾಲ್ಕು ವರ್ಷದಿಂದ ಚರಸ್ ಸೇವನೆಯಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಅದನ್ನ ವಿಡಿಯೋ ಮಾಡಿಕೊಳ್ಳಲಾಗಿದೆ. ಈ ವಿಷಯ ಮೀಡಿಯಾಗಳಿಗೆ ಕೂಡ ಸಾಕಷ್ಟು ಆಹಾರವಾಗಿದೆ. ಹೊಸ ವಿಷಯ ಏನೆಂದರೆ, ಆತ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಖರೀದಿಯನ್ನ ಡಿಜಿಟಲ್ ಪೇಮೆಂಟ್ ಮೂಲಕ ಖರೀದಿಸಿದ್ದಾನೆ. ಅದಕ್ಕೆ ಬಲವಾದ ಸಾಕ್ಷಿಗಳು ಕೂಡ ಸಿಕ್ಕಿವೆ. ಈಗ ಅದನ್ನ ಇಲ್ಲವೆನ್ನಲು ಬರುವುದಿಲ್ಲ.
ಹೀಗಾಗಿ ಆರ್ಯನ್ ಕನಿಷ್ಠ 14 ವರ್ಷವಾದರೂ ಜೈಲಿಗೆ ಹೋಗುವುದು ಹೆಚ್ಚು ಕಡಿಮೆ ನಿಕ್ಕಿ. ಒಂದು ಕೆ.ಜಿ. ತನಕ ಸಣ್ಣ ಪ್ರಮಾಣವೆಂದು ಪರಿಗಣಿಸಲಾಗುತ್ತದೆ. ಆ ನಂತರ 20 ಕೆ.ಜಿ.ವರೆಗೆ ದೊಡ್ಡ ಪ್ರಮಾಣವೆಂದು, ಆ ನಂತರ ಕಮರ್ಷಿಯಲ್ ಕ್ರಿಯೆಗಳಿಗೆ ಶೇಖರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಆರು ತಿಂಗಳಿಂದ ೧೦ ವರ್ಷ, ೨೦ ವರ್ಷಗಳವರೆಗೂ ಜೈಲು ಶಿಕ್ಷೆ, ಜತೆಗೆ ೧೦ ಸಾವಿರದಿಂದ ಲಕ್ಷದವರೆಗೆ ಜುಲ್ಮಾನೆ ಕೂಡ ಇರುತ್ತದೆ.
ನಿಮಗೆ ನೆನಪಿರಲಿ, ಜಗತ್ತಿನ ಹಲವು ಮುಸ್ಲಿಂ ದೇಶಗಳಲ್ಲಿ ಡ್ರಗ್ಸ್ ಸೇವನೆಯನ್ನ ‘ಆಕ್ಟ್ ಅಗೈನ್ಸ್ಟ್ ಗಾಡ್’- ದೇವರ ವಿರುದ್ಧದ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ತೀರಾ ಇತ್ತೀಚಿನವರೆಗೆ ಮರಣ ದಂಡನೆಯನ್ನ ನೀಡುತ್ತಿದ್ದರು. ಇಂದಿಗೆ ಅದು ಕಡಿಮೆಯಾಗಿದೆ. ಆದರೆ ಮರಣದಂಡನೆ ವಿಧಿಸ ಬಾರದು ಎನ್ನುವ ನಿಯಮವೇನಿಲ್ಲ.
ಹತ್ತಾರು ವರ್ಷ ಜೈಲುಶಿಕ್ಷೆಯಂತೂ ಪಕ್ಕಾ. ನಮ್ಮಲ್ಲಿ ಎಲ್ಲದಕ್ಕೂ ಪರ-ವಿರೋಧ ಶುರು. ಆದರೆ ಗಮನಿಸಿ, ಇಂಥ ವಿಷಯದಲ್ಲಿ ಪರ ಎನ್ನುವ ಪ್ರಶ್ನೆಯ ಉದ್ಭವಿಸಬಾರದು. ಮಾಡಿರುವುದು ಮಣ್ಣು ತಿನ್ನುವ ಕೆಲಸ, ಅದಕ್ಕೆ ತಕ್ಕ ಶಿಕ್ಷೆಯಾಗಲಿ ಬಿಡಿ. ಇಲ್ಲ ಸ್ವಾಮಿ, ಹೇಳಿ ಕೇಳಿ ಅವರೆ ಬಾಲಿವುಡ್ ಮಂದಿ, ಇವತ್ತು ಅವನ ಮಗ!
ನಾಳೆ ನನ್ನ ಮಗ ಅಥವಾ ಮಗಳ ಹೆಸರು ಬರುವುದಿಲ್ಲ ಎನ್ನುವ ಗ್ಯಾರಂಟಿ ಏನು? ಅದಕ್ಕೇ ಸುನಿಲ್ ಶೆಟ್ಟಿಯಂಥ ವ್ಯಕ್ತಿ- ಆರ್ಯನ್ ಖಾನ್ ಬಚ್ಚ , ಅಂದರೆ ಮಗು ಎನ್ನುತ್ತಾನೆ. ಹೃತಿಕ್, ಸಲ್ಮಾನ್, ದೇಶಭಕ್ತಿಯ ಪಾಠ ಹೇಳುವ ರವೀನಾ ಟಂಡನ್ ಎಲ್ಲರೂ ಶಾರುಖ್‌ನ ಮಗನ ಬೆಂಬಲಕ್ಕೆ ನಿಲ್ಲುತ್ತಾರೆ.
ಬಾಲಿವುಡ್‌ನಲ್ಲಿ ಇರುವುದು ನೆಪೋಟಿಸಂ, ಅಲ್ಲೇನಿದ್ದರೂ ತಮ್ಮ ಮಕ್ಕಳಿಗೇ ಪಟ್ಟ ಕಟ್ಟುತ್ತಾರೆ. ಅವರಿಗೆ ಮಾತನಾಡಲು ಬರಲಿ ಅಥವಾ ಬಿಡಲಿ, ಅವರು ಸ್ಟಾರ್‌ಗಳಾಗಬೇಕು. ಕಷ್ಟಪಡದೆ ಮಿತಿ ಮೀರಿದ ಹಣವನ್ನ ಸಂಗ್ರಹಿಸಿದ ಈ ತಾರೆಯರು ಒಂದಲ್ಲ ಒಂದು ಬಾರಿ ಹೆಚ್ಚು ಓದಿದವರ ಬಗ್ಗೆ ಕೇವಲವಾಗಿ, ಲೇವಡಿ ಮಾಡುವ ಮಾತುಗಳನ್ನ ಆಡುವುದನ್ನ ಕೂಡ ನೀವು ಕೇಳಿರುತ್ತೀರಿ.
ನಿಜಜೀವನದಲ್ಲೂ ಮತ್ತು ತೆರೆಯ ಮೇಲಿನ ಬದುಕಿಗೂ ಲವಲೇಶವೂ ಸಾಮ್ಯತೆಯಿಲ್ಲದೆ ಇವರನ್ನ ನಾವು ಪೂಜಿಸುತ್ತೇವೆ. ಅವರಿಗೆ ಪಿತ್ತ ನೆತ್ತಿಗೇರಿ ‘ನಮ್ಮನ್ನ ಬಿಟ್ಟರೆ ಇನ್ನ್ಯಾರಿಲ್ಲ’ ಎನ್ನುವ ಉಮೇದು ಬೆಳೆಸಿಕೊಳ್ಳುತ್ತಾರೆ. ಮೂಲದಲ್ಲಿ ಬಾಲಿವುಡ್ ಒಂದು ದೊಡ್ಡ ಗ್ಯಾಂಗ್, ಅಲ್ಲಿ ದುಡ್ಡೇ ದೊಡ್ಡಪ್ಪ. ಅವರಲ್ಲಿ ಒಗ್ಗಟ್ಟಿದೆ. ಒಡೆದು, ಹಂಚಿಹೋಗುವುದು ಕೇವಲ ಜನಸಾಮಾನ್ಯ ಮಾತ್ರ.
ತನ್ನ ನೆಚ್ಚಿನ ಸ್ಟಾರ್ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ, ಕೊನೆಗೆ ಐಪಿಎಲ್ ಟೀಮ್ ಹೆಸರಿನಲ್ಲಿ ಹೋಳಾಗುವುದು ಜನಸಾ ಮಾನ್ಯ. ಇವನನ್ನ ಬಳಸಿಕೊಂಡು ದೊಡ್ಡ ಮಟ್ಟದ ಹಣವನ್ನ ಮಾಡುವ ಅವರ ಜೀವನ ಕೂಡ ಅತ್ಯಂತ ನಿಕೃಷ್ಟವಾಗಿದೆ ಎಂದು ಈಗಾಗಲೇ ಸಾಬೀತಾಗಿದೆ.
ಬದುಕನ್ನ ಹಂತ ಹಂತವಾಗಿ ಕಟ್ಟಿಕೊಳ್ಳಬೇಕು. ಆಗ ಅದಕ್ಕೂ ಒಂದು ಬೆಲೆ. ಕಷ್ಟ ಪಡದೆಯೇ ಅಪ್ಪ-ಅಮ್ಮನ ದುಡ್ಡಿನಲ್ಲಿ ಎಲ್ಲವೂ ಸಿಕ್ಕರೆ ಅದರಲ್ಲಿ ಮಜಾ ಸಿಗುವುದಿಲ್ಲ. ಅದಕ್ಕೆ ಮಜಾ ಹುಡುಕಿ ಹೊರಡುತ್ತಾರೆ, ಇರಲಿ.
‘ಶಾರುಖ್‌ನ ಬೆಂಬಲಿಸಿದ ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳನ್ನ ನೆನಪಲ್ಲಿ ಇಟ್ಟುಕೊಳ್ಳಿ, ಅವರ ಚಿತ್ರ ನೋಡಬೇಡಿ, ಅವರಿಗೆ ಬುದ್ಧಿ ಕಲಿಸಿ’ ಎನ್ನುವ ಬುದ್ಧಿ ಹೇಳುವ ಕೆಲಸಕ್ಕೆ ನಾನು ಹೋಗುವುದಿಲ್ಲ. ಏಕೆಂದರೆ ‘ಪಬ್ಲಿಕ್ ಮೆಮೊರಿ ಇಸ್ ವೆರಿ ಶಾರ್ಟ್’ ಎನ್ನುವ ಸತ್ಯ ನನಗೆ ತಿಳಿದಿದೆ. ಅದಕ್ಕೂ ಮಿಗಿಲಾಗಿ ಅವರಿಗೆ ತಿಳಿದಿದೆ. ಶಾರುಖ್ ತನ್ನೆ ಶಕ್ತಿಯನ್ನ ಬಳಸುತ್ತಾನೆ. ಅತಿ ಕಡಿಮೆ ಸಜಾ ಕೊಡಿಸುವಲ್ಲಿ ಸಫಲನಾಗುತ್ತಾನೆ.
ಜೈಲಿನಲ್ಲಿ ಮಗ ಪಟ್ಟ ಯಾತನೆಯನ್ನ ಕಥೆಯನ್ನಾಗಿಸಿ ಅವನನ್ನೇ ಹೀರೋ ಆಗಿಸಿ ಫಿಲಂ ತೆಗೆಯುತ್ತಾನೆ. ನಾವು 32 ದಂತಗಳನ್ನ ಕಿಸಿದುಕೊಂಡು ನೋಡಿ ಕೃತಾರ್ಥರಾಗುತ್ತೇವೆ. ಹೀಗೆ ಒಬ್ಬ ಆಚರಿಸಿ ಮುಂದಿನ ೀಳಿಗೆಯ ಅರಾಧ್ಯ ದೈವವಾಗುತ್ತಾನೆ. ಏನ್ರೀ, ನೀವು ಇಷ್ಟ ಬಂದ ಹಾಗೆ ಬರೀತಾ ಇದ್ದೀರಾ? ನಾವೇನು ಅಷ್ಟು ನಾಲಾಯಕ್ಕಾ? ಎನ್ನುವ ಪ್ರಶ್ನೆ, ಆಕ್ರೋಶ ನಿಮ್ಮಲ್ಲಿ ಉಂಟಾಗಿದ್ದರೆ ಕ್ಷಮೆ ಇರಲಿ.
‘ಮೇರಾ ತೂ ತೀನ್ ಸೊ ದಸ್ ಕ ಪೂಲ್ ಮಾಲಾ ಹೈ, ಔರ್ ಬಾಕಿ ಹೈ’ ಎನ್ನುವ ಸಂಜಯ್ ದತ್ತ ಬೇಡವೆಂದರೂ ನೆನಪಿಗೆ ಬರುತ್ತಾನೆ. ಅವನನ್ನೇ ಒಪ್ಪಿಕೊಂಡ ಸಮಾಜವಲ್ಲವೆ ನಮ್ಮದು? ಪಾಪ ನೀವು ನಾಲಾಯಕ್ಕಲ್ಲ ಬಿಡಿ. ನನಗೆ ನೆನಪಿಗೆ ಬಂದಿತು ಬರೆದೆ ಅಷ್ಟೆ. ಆರ್ಯನ್ ಇನ್ನೊಬ್ಬ ಸಂಜು, ಸಲ್ಮಾನ್, ಸೂರಜ್ ಪಂಚೋಲಿ ಆಗದಿರಲಿ. ಕನಿಷ್ಠ ಆರ್ಯನ್‌ಗಾದರೂ ಶಿಕ್ಷೆ ಸಿಗಲಿ.
ಇವತ್ತಿನ ಸನ್ನಿವೇಶಕ್ಕೆ ಬರೋಣ: ಶಾರುಖ್‌ನ ಮಗ ಆರ್ಯನ್‌ಗೆ ಹೆಚ್ಚು ಶಿಕ್ಷೆಯಾಗಿಲ್ಲ. ಆತ ಆರಾಮಾಗಿ ನಿರ್ದೇಶನಕ್ಕೆ ಇಳಿದಿದ್ದಾನೆ. ಇಲ್ಲೂ ಆತ, ತನ್ನನ್ನು ಅಂದಿನ ದಿನದಲ್ಲಿ ಡ್ರಗ್ಸ್ ನೊಂದಿಗೆ ಹಿಡಿದ ಅಧಿಕಾರಿಯನ್ನು ಬಫೂನನಂತೆ ಚಿತ್ರಿಸಿದ್ದಾನೆ. ಈ ದೇಶದಲ್ಲಿ ಲಕ್ಷಾಂತರ ಜನ ಡ್ರಗ್ಸ್ ಸೇವಿಸುತ್ತಾರೆ. ಎಲ್ಲರನ್ನೂ ಹಿಡಿಯಲು ಸಾಧ್ಯವೇ? ನನ್ನನ್ನು ಮಾತ್ರ ಹಿಡಿದರು.
ಏಕೆಂದರೆ ನಾನು ಪ್ರಸಿದ್ಧ ವ್ಯಕ್ತಿಯ ಮಗ. ಹೆಸರು, ಹಣ ಮಾಡಿಕೊಳ್ಳುವ ಉದ್ದೇಶ ಅಧಿಕಾರಿಯದು, ಹೀಗಾಗಿ ನಾನು ಸಿಕ್ಕಿಬಿದ್ದೆ. ಉಳಿದಂತೆ ಡ್ರಗ್ಸ್ ತೆಗೆದುಕೊಳ್ಳುವುದು ಮಹಾಪರಾಧವೇನಲ್ಲ ಎನ್ನು ವಂತೆ ಚಿತ್ರಿಸಿದ್ದಾರೆ. ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವುದು ಇದಕ್ಕೇ ಇರಬೇಕು. ಎಷ್ಟಾದರೂ ಅವರೇ ಕರೆದುಕೊಳ್ಳುವಂತೆ ಅವರು ಬಾಸ್ಟರ್ಡ್ಸ್ ಆಫ್ ಬಾಲಿವುಡ್ ಮಂದಿ ನೋಡಿ!