ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರ ಫಲ

ನಿನ್ನಿಂದ ಮೋಕ್ಷ ಪಡೆದ ಈ ‘ಕಲಹಾ’ ಸ್ತ್ರೀಯು ಆಗ ಕೈಕೇಯಿಯಾಗಿ ಜನ್ಮತಾಳಿ, ದೇವಕಾರ್ಯಾ ರ್ಥವಾಗಿ ರಾವಣ ಸಂಹಾರಕ್ಕೆ ಕಾರಣಳಾಗುತ್ತಾಳೆ. ನಿನ್ನ ಕಾರ್ತಿಕ ಮಾಸದ ವ್ರತದ ಅರ್ಧಪುಣ್ಯ ದಿಂದಲೇ ಇಷ್ಟೊಂದು ಫಲ ಪಡೆದ ನೀನು, ಪೂರ್ತಿ ಕಾರ್ತಿಕ ಮಾಸದ ಪುಣ್ಯದ ಮಹಿಮೆಯಿಂದ ಎಷ್ಟು ಫಲ ಗಳಿಸುವೆ ಎಂದು ಊಹಿಸಲು ಸಾಧ್ಯವಿಲ್ಲ" ಎಂದು ಶ್ಲಾಘಿಸಿದರು.

ಒಂದೊಳ್ಳೆ ಮಾತು

ಹಿಂದೆ ಧರ್ಮದತ್ತನೆಂಬ ಸಾತ್ವಿಕ ಬ್ರಾಹ್ಮಣನಿದ್ದನು. ಕಾರ್ತಿಕ ಮಾಸ ಬಂದಿತು. ಏಕಾದಶಿಯ ವ್ರತಾಚರಣೆಯ ಮರುದಿನ ದ್ವಾದಶಿಯಂದು ಸೂರ್ಯೋದಯಕ್ಕೂ ಮೊದಲೇ ಸ್ನಾನಾದಿಗಳನ್ನು ಮುಗಿಸಿ ಆತ ವಿಷ್ಣು ದೇವಾಲಯಕ್ಕೆ ಹೊರಟನು. ಆಗ ಭೀಕರ ರೂಪದ ರಾಕ್ಷಸಿ ಎದುರಾಗಿ ಬಂದು ಗರ್ಜಿಸಿದಳು.

ಬ್ರಾಹ್ಮಣನಿಗೆ ಒಂದು ಕ್ಷಣ ಹೆದರಿಕೆಯಾದರೂ ಧೈರ್ಯ ತಂದುಕೊಂಡು ತಾನಿಟ್ಟುಕೊಂಡಿದ್ದ ಕಲಶದಲ್ಲಿದ್ದ ತುಳಸಿ ತೀರ್ಥವನ್ನು ರಾಕ್ಷಸಿಯ ಮೇಲೆ ಎರಚಿದನು. ತೀರ್ಥದ ನೀರು ತಾಕಿದೊಡನೆ ರಾಕ್ಷಸಿಯ ಭಯಂಕರ ರೂಪ ನಾಶವಾಗಿ, ಬ್ರಾಹ್ಮಣನಿಗೆ ನಮಸ್ಕರಿಸಿ, ತನ್ನ ಪೂರ್ವಜನ್ಮದ ವೃತ್ತಾಂತವನ್ನು ಹೇಳತೊಡಗಿದಳು: “ನಾನು ಹಿಂದಿನ ಜನ್ಮದಲ್ಲಿ ‘ಕಲಹಾ’ ಎಂಬ ಹೆಸರಿನಿಂದ ಸೌರಾಷ್ಟ್ರ ದೇಶದ ಬ್ರಾಹ್ಮಣ ಪತ್ನಿಯಾಗಿದ್ದೆ. ಕಠೋರವಾದ ನಡೆ-ನುಡಿಗಳಿಂದಲೇ ಸದಾ ದುರ್ಮಾರ್ಗದಲ್ಲಿ ನಡೆದೆ. ಪತಿಯು ನನ್ನ ಕಾಟವನ್ನು ಸಹಿಸಲಾಗದೆ ಇನ್ನೊಂದು ಮದುವೆ ಯಾಗಲು ನಿರ್ಧರಿಸಿದನು. ಈ ವಿಷಯ ತಿಳಿದು ನಾನು ಆತ್ಮಹತ್ಯೆ ಮಾಡಿಕೊಂಡೆ.

ಯಮದೂತರು ಕರೆದೊಯ್ದು ಯಮನ ಮುಂದೆ ನಿಲ್ಲಿಸಿದರು. ಯಮನ ಆಣತಿಯಂತೆ ಚಿತ್ರಗುಪ್ತನು ನನ್ನ ಕರ್ಮದ ಲೆಕ್ಕಾಚಾರವನ್ನು ನೋಡಿ, ‘ಪ್ರಭು, ಇವಳು ಬದುಕಿದ್ದಾಗ ಒಂದೂ ಒಳ್ಳೆಯ ಕೆಲಸವನ್ನು ಮಾಡಿಲ್ಲ. ಈಕೆ ಆತ್ಮಹತ್ಯೆಯನ್ನು ಮಾಡಿಕೊಂಡ ಕಾರಣ, ಮೇಕೆ, ಹಂದಿ, ಬೆಕ್ಕಿನಂತೆ ವಿವಿಧ ಪ್ರಾಣಿಗಳ ರೂಪದಲ್ಲಿ ಜನ್ಮತಾಳಿ, ಕೆಲವು ಕಾಲ ನೀರಿಲ್ಲದೆ ಕಳೆದು, ಆನಂತರ ನೂರು ಜನ್ಮ ತಾಳಬೇಕು’ ಎಂದನು.

ಇದನ್ನೂ ಓದಿ: Roopa Gururaj Column: ಹೀಗೊಬ್ಬ ಅಪರೂಪದ ರಾಜಕಾರಣಿ ಕಥೆ !

ಆ ಪ್ರಕಾರವಾಗಿ, ಇಷ್ಟೂ ಜನ್ಮಗಳನ್ನು ಕಳೆದು ಈಗ ರಾಕ್ಷಸಿ ಜನ್ಮವನ್ನು ತಾಳಿದ್ದೆ. ಬ್ರಾಹ್ಮಣೋ ತ್ತಮರೇ, ನೀವು ಹಾಕಿದ ತುಳಸಿ ಜಲದಿಂದ ನನಗೆ ಪೂರ್ವಜನ್ಮದ ಸ್ಮರಣೆ ಬಂದಿದ್ದು, ನಿಮ್ಮ ದರ್ಶನ ಭಾಗ್ಯ ಒದಗಿದೆ. ಕೃಪೆ ಮಾಡಿ ನನ್ನ ಈ ಯಾತನಾಮಯವಾದ ಶರೀರದಿಂದ ಬಿಡುಗಡೆ ಮಾಡಿಸಿ" ಎಂದು ಪ್ರಾರ್ಥಿಸಿದಳು.

ಬ್ರಾಹ್ಮಣನು ಆ ರಾಕ್ಷಸಿಯ ವೃತ್ತಾಂತವನ್ನು ಸಂಪೂರ್ಣ ಆಲಿಸಿದ. ಧರ್ಮಾಧರ್ಮಗಳ ಸೂಕ್ಷ್ಮ ವನ್ನು ಅರಿತಿದ್ದ ಅವನು, “ಹೇ ಸ್ತ್ರೀಯೇ, ಈಗಿನ ಜನ್ಮದಿಂದ ನಿನ್ನ ಮುಕ್ತಿಯಾಗಲು ತೀರ್ಥ ಸ್ನಾನ-ದಾನ-ವ್ರತ-ಪೂಜಾದಿಗಳನ್ನು ನೀನು ಮಾಡಬೇಕು. ಆದರೆ ಈ ಪ್ರೇತ ಶರೀರದಿಂದ ಇವುಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ, ನಾನು ಇಷ್ಟು ವರ್ಷಗಳು ಮಾಡಿದ ಶಿವ ಮತ್ತು ವಿಷ್ಣುವಿನ ಪೂಜೆ, ಕಾರ್ತಿಕ ಸ್ನಾನದ ದೀಪಾರಾಧನೆಯಿಂದ ದಕ್ಕಿದ ಪುಣ್ಯಸಂಗ್ರಹವನ್ನೆಲ್ಲ ನಿನಗೆ ಧಾರೆ ಎರೆಯುವೆ. ಅದರಿಂದ ನಿನ್ನ ಮೂರು ಜನ್ಮಗಳ ಕರ್ಮ ಪರಿಹಾರ ಆಗುತ್ತದೆ ಮತ್ತು ಮೋಕ್ಷ ದೊರಕುತ್ತದೆ" ಎಂದನು.

ನಂತರ ಬ್ರಾಹ್ಮಣನು ಪ್ರೇತಕ್ಕೆ ಮಂತ್ರಜಲ ವನ್ನು ಪ್ರೋಕ್ಷಿಸಿ, ಕಾರ್ತಿಕ ಮಾಸದ ಪುಣ್ಯವನ್ನು
ಅದಕ್ಕೆ ಧಾರೆ ಎರೆದನು. ಇದರಿಂದಾಗಿ ಪ್ರೇತಾತ್ಮ ಜನ್ಮವು ನಾಶವಾಗಿ ತೇಜೋಮಯವಾದ ದಿವ್ಯ
ರೂಪ ಬಂದಿತು. ಆಕೆ ಕೃತಜ್ಞತೆಯಿಂದ ಬ್ರಾಹ್ಮಣನಿಗೆ ಅನೇಕ ಬಾರಿ ನಮಸ್ಕರಿಸಿದಳು. ಆಕೆಯನ್ನು
ಕರೆದೊಯ್ಯಲು ಆಕಾಶಮಾರ್ಗದಲ್ಲಿ ವಿಮಾನ ಸಹಿತರಾಗಿ ಇಬ್ಬರು ದೂತರು ಬಂದರು.

ಒಬ್ಬ ದೂತನು ಆಕೆಯನ್ನು ವಿಮಾನದಲ್ಲಿ ಕೂರಿಸಿದನು, ಅಪ್ಸರೆಯರು ಮತ್ತು ದೇವತಾ ಸೀಯರು
ಆದರೋಪಚಾರಗಳಿಂದ ಬರಮಾಡಿಕೊಂಡರು. ಬಂದ ದೂತರಿಬ್ಬರೂ ಧರ್ಮದತ್ತನಿಗೆ ಕೈ ಮುಗಿದು, “ಹೇ ಬ್ರಾಹ್ಮಣೋತ್ತಮ, ದೀನರಿಗೆ ದಯೆ ತೋರಿಸುವವನೂ, ದೈವಭಕ್ತನೂ ಆದ ನೀನು ಇಂಥ ಕೆಟ್ಟ ಹೆಂಗಸಿಗೂ ನಿನ್ನ ಕಾರ್ತಿಕ ಮಾಸದ ಮಹಿಮಾನ್ವಿತ ಪುಣ್ಯವನ್ನು ಧಾರೆಯೆರೆದು, ಇವಳನ್ನು ಪಾಪಗಳಿಂದ ಮುಕ್ತಿಗೊಳಿಸಿದೆ.

ಈ ಪುಣ್ಯಫಲದಿಂದ ನಿನಗೆ ವೈಕುಂಠ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ. ಹಾಗೆ ವೈಕುಂಠ
ಲೋಕದಲ್ಲಿ ನಿನ್ನ ಪುಣ್ಯ ಮುಗಿದಬಳಿಕ, ತ್ರೇತಾಯುಗದಲ್ಲಿ ಸೂರ್ಯವಂಶದಲ್ಲಿ ‘ದಶರಥ’ ಚಕ್ರವರ್ತಿಯಾಗಿ ಜನಿಸಿ, ಶ್ರೀಮನ್ನಾರಾಯಣನನ್ನು ಮಗನನ್ನಾಗಿ ಪಡೆಯುವೆ.

ನಿನ್ನಿಂದ ಮೋಕ್ಷ ಪಡೆದ ಈ ‘ಕಲಹಾ’ ಸ್ತ್ರೀಯು ಆಗ ಕೈಕೇಯಿಯಾಗಿ ಜನ್ಮತಾಳಿ, ದೇವಕಾರ್ಯಾ ರ್ಥವಾಗಿ ರಾವಣ ಸಂಹಾರಕ್ಕೆ ಕಾರಣಳಾಗುತ್ತಾಳೆ. ನಿನ್ನ ಕಾರ್ತಿಕ ಮಾಸದ ವ್ರತದ ಅರ್ಧಪುಣ್ಯ ದಿಂದಲೇ ಇಷ್ಟೊಂದು ಫಲ ಪಡೆದ ನೀನು, ಪೂರ್ತಿ ಕಾರ್ತಿಕ ಮಾಸದ ಪುಣ್ಯದ ಮಹಿಮೆಯಿಂದ ಎಷ್ಟು ಫಲ ಗಳಿಸುವೆ ಎಂದು ಊಹಿಸಲು ಸಾಧ್ಯವಿಲ್ಲ" ಎಂದು ಶ್ಲಾಘಿಸಿದರು.

ಇದನ್ನು ಕೇಳಿದ ಬ್ರಾಹ್ಮಣನು ತುಂಬಾ ಆಶ್ಚರ್ಯಚಕಿತನಾಗಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಎಂಥದೇ ಸಂದರ್ಭದಲ್ಲೂ ಮತ್ತೊಬ್ಬರ ಮೇಲೆ ನಾವು ತೋರುವ ದಯೆ, ಕರುಣೆ ಇವುಗಳಿ ಗಿಂತ ಮಿಗಿ ಲಾದ ಪುಣ್ಯ ಇನ್ಯಾವುದೂ ಇಲ್ಲ. ಜತೆಗೆ ಕಾರ್ತಿಕ ಮಾಸದಲ್ಲಿ ದಿನವೂ ಸಂಜೆ ಮುಂಬಾಗಿಲಲ್ಲಿ, ತುಳಸಿಯ ಮುಂದೆ, ದೇವರ ಮುಂದೆ ದೀಪ ಹಚ್ಚಿ ಭಗವಂತನ ಕೃಪೆಗೆ ಪಾತ್ರ ರಾಗೋಣ.

ರೂಪಾ ಗುರುರಾಜ್

View all posts by this author