ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಹೀಗೊಬ್ಬ ಅಪರೂಪದ ರಾಜಕಾರಣಿ ಕಥೆ !

ಅಧಿಕಾರಿಗಳು ಹಾಗೂ ಅವರ ವಾಹನಗಳ ದಂಡನ್ನು ನೋಡಿ ಮನೆಯ ಮಾಲೀಕ ಅವಾಕ್ಕಾದ. ತನ್ನ ಮನೆಯಲ್ಲಿ ಬಾಡಿಗೆಗೆ ಇರುವ ವೃದ್ಧರು ಬೇರಾರೂ ಅಲ್ಲ, ಅವರೇ ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದಾ ಎಂಬುದು ಅರಿವಾಗಿ ತನ್ನನ್ನು ಕ್ಷಮಿಸುವಂತೆ ಆತ ನಂದಾ ಅವರ ಕಾಲು ಹಿಡಿದ. ಸರಕಾರಿ ನಿವಾಸ ಮತ್ತು ಅನ್ವಯವಾಗುವ ಸವಲತ್ತುಗಳನ್ನು ಪಡೆಯುವಂತೆ ಅಧಿಕಾರಿಗಳು ಗುಲ್ಜಾರಿಲಾಲ್ ನಂದಾ ಅವರನ್ನು ವಿನಂತಿಸಿಕೊಂಡರು.

Roopa Gururaj Column: ಹೀಗೊಬ್ಬ ಅಪರೂಪದ ರಾಜಕಾರಣಿ ಕಥೆ !

-

ಒಂದೊಳ್ಳೆ ಮಾತು

ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ 94ರ ಹರೆಯದ ವೃದ್ಧರೊಬ್ಬರು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ ಮನೆಯ ಮಾಲೀಕ ಅವರನ್ನು ಮನೆಯಿಂದ ಹೊರ ಹಾಕಿದ್ದ. ಆ ವೃದ್ಧರ ಬಳಿಯಿದ್ದುದು ಒಂದು ಹಳೆಯದಾದ ಕಬ್ಬಿಣದ ಮಂಚ, ಒಂದೆರಡು ಅಲ್ಯುಮಿನಿಯಂ ತಟ್ಟೆ, ಪ್ಲಾಸ್ಟಿಕ್ ಬಕೆಟ್ಟು, ಹರಿದ ಹಾಸಿಗೆ-ಹೊದಿಕೆ. ಇವಿಷ್ಟನ್ನೂ ಮನೆಯ ಮಾಲೀಕ ರಸ್ತೆಯಲ್ಲಿ ಎಸೆದಿದ್ದ.

‘ಸ್ವಲ್ಪ ಸಮಯ ಕೊಡಿ’ ಎಂದು ಆ ವೃದ್ಧರು ಮನೆಯ ಮಾಲೀಕನನ್ನು ಬೇಡಿಕೊಳ್ಳತೊಡಗಿದರು. ಸುತ್ತ ನೆರೆದಿದ್ದ ಜನರಿಗೂ ವೃದ್ಧರ ಬಗ್ಗೆ ಕರುಣೆಯುಂಟಾಗಿ, ಕೆಲವು ದಿನಗಳವರೆಗೆ ಇರುವುದಕ್ಕೆ ಆ ವೃದ್ಧರಿಗೆ ಕಾಲಾವಕಾಶ ನೀಡುವಂತೆ ಮನೆಯ ಮಾಲೀಕನನ್ನು ಕೇಳಿಕೊಂಡರು. ಆತ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಾಸಿಗೆ, ಮಂಚ ಇತ್ಯಾದಿ ಗಳನ್ನು ಜನರು ಮತ್ತೆ ಮನೆಯೊಳಗೆ ತಂದಿಟ್ಟರು.

ಆ ಮಾರ್ಗವಾಗಿ ಹಾದು ಹೋಗುತ್ತಿದ್ದ ವರದಿಗಾರನೊಬ್ಬ ಇಷ್ಟೂ ಘಟನೆಯನ್ನು ನೋಡಿದ ಮತ್ತು ಒಂದಿಷ್ಟು ಫೋಟೋಗಳನ್ನೂ ಆತ ತೆಗೆದುಕೊಂಡ. ವೃದ್ಧರೊಬ್ಬರ ಮೇಲೆ ಈ ರೀತಿಯ ದೌರ್ಜನ್ಯ ನಡೆದಿದ್ದನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬ ಆಲೋಚನೆಯೇ ಇದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

ಅಂತೆಯೇ, ಪತ್ರಿಕಾಲಯಕ್ಕೆ ತೆರಳಿದ ಆತ ಘಟನೆಯನ್ನು ವಿವರವಾಗಿ ಬರೆದು, ‘ಕ್ರೂರಿ ಮನೆ ಮಾಲೀಕನಿಂದ ವೃದ್ಧರ ಮೇಲೆ ಅನ್ಯಾಯ!’ ಎಂಬ ಶೀರ್ಷಿಕೆಯನ್ನು ಆ ಬರಹಕ್ಕೆ ನೀಡಿದ. ಕೆಲ ಹೊತ್ತಿನ ನಂತರ ಆ ಬರಹವನ್ನು ಪತ್ರಿಕೆಯ ಸಂಪಾದಕರಿಗೆ ನೀಡಿದ. ಆ ಬರಹ ಮತ್ತು ಜತೆಗಿದ್ದ ಫೋಟೋಗಳನ್ನು ನೋಡಿ ಅರೆಕ್ಷಣ ಗರಬಡಿದವರಂತೆ ಕೂತ ಸಂಪಾದಕರು ಆ ವರದಿಗಾರನನ್ನು ಕರೆದು, “ಈ ಫೋಟೋದಲ್ಲಿರುವ ವೃದ್ಧರ ಪರಿಚಯ ನಿನಗಿದೆಯೇ?" ಎಂದು ಕೇಳಿದರು.

ಇಲ್ಲ ಎನ್ನುವಂತೆ ವರದಿಗಾರ ತಲೆ ಅಲ್ಲಾಡಿಸಿದ. ಸಂಪಾದಕರು ಏನೂ ಹೇಳದೆ ಸುಮ್ಮನಾದರು. ಮರುದಿನ ಅವರ ಪತ್ರಿಕೆಯಲ್ಲಿ, ‘ಭಾರತದ ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ದಯನೀಯ ಸ್ಥಿತಿಯಲ್ಲಿ!’ ಎಂಬ ದಪ್ಪಕ್ಷರಗಳ ತಲೆಬರಹದಡಿ ಆ ಲೇಖನವು ಮುಖಪುಟದಲ್ಲೇ ಪ್ರಕಟ ಗೊಂಡಿತ್ತು.

ಆ ವರದಿಯಲ್ಲಿ, ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದಾ ಅವರು ಅಹಮದಾಬಾದಿನಲ್ಲಿ ಮನೆಯ ಮಾಲೀಕನಿಗೆ ಬಾಡಿಗೆ ನೀಡಲು ಶಕ್ಯವಿಲ್ಲದ ಪರಿಸ್ಥಿತಿ, ಅವರ ಹಾಸಿಗೆಯನ್ನು ಮನೆ ಮಾಲೀಕನು ಬೀದಿಗೆ ಎಸೆದಿದ್ದು ಮುಂತಾದ ವಿವರಗಳಿರುತ್ತವೆ. ಮಾತ್ರವಲ್ಲದೆ, ‘ಇಂದು ಒಂದೇ ಸಲ ಆರಿಸಿ ಬಂದವರು ಕೂಡ ಕೋಟ್ಯಧಿಪತಿಗಳಾಗುವುದಿದೆ; ಆದರೆ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮತ್ತು ಸಾಕಷ್ಟು ವರ್ಷಗಳ ಕಾಲ ಕೇಂದ್ರದಲ್ಲಿ ಮಂತ್ರಿಯಾಗಿದ್ದ ವ್ಯಕ್ತಿಯ ಬಳಿ ಸ್ವಂತದ್ದು ಅಂತ ಒಂದು ಮನೆಯೂ ಇಲ್ಲ’ ಎಂದು ಬರಹದಲ್ಲಿ ವಿಶದೀಕರಿಸಲಾಗಿತ್ತು (ವಾಸ್ತವವಾಗಿ, ಗುಲ್ಜಾರಿ ಲಾಲ್ ನಂದಾ ಅವರಿಗೆ ಪ್ರತಿ ತಿಂಗಳೂ 500 ರುಪಾಯಿ ಭತ್ಯೆಯ ಲಭ್ಯತೆಯಿತ್ತು; ಆದರೆ ಅದನ್ನು ಪಡೆಯಲು ತಾವು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಹೇಳಿ ನಂದಾ ಅವರು ಅದನ್ನು ನಿರಾಕರಿಸಿದ್ದರು. ನಂತರ ಅವರ ಕೆಲವು ಗೆಳೆಯರು, “ನೀವು 500 ರುಪಾಯಿ ಭತ್ಯೆಯನ್ನು ನಿರಾಕರಿಸಿದರೆ, ಹೊಟ್ಟೆಗೆ ಏನು ಮಾಡುವಿರಿ?" ಎಂದೆಲ್ಲಾ ತಿಳಿ ಹೇಳಿ, ಆ ಭತ್ಯೆಯನ್ನು ಅವರು ಸ್ವೀಕರಿಸುವ ಹಾಗೆ ನೋಡಿಕೊಂಡಿದ್ದರು). ಆ ವರದಿ ಪ್ರಕಟವಾದ ಮರುದಿನವೇ ಕೇಂದ್ರ ಸರಕಾರದ ಉನ್ನತಾಧಿಕಾರಿಗಳು ನಂದಾ ಅವರು ವಾಸಿಸುತ್ತಿದ್ದ ಮನೆಗೆ ಧಾವಿಸಿದರು.

ಅಧಿಕಾರಿಗಳು ಹಾಗೂ ಅವರ ವಾಹನಗಳ ದಂಡನ್ನು ನೋಡಿ ಮನೆಯ ಮಾಲೀಕ ಅವಾಕ್ಕಾದ. ತನ್ನ ಮನೆಯಲ್ಲಿ ಬಾಡಿಗೆಗೆ ಇರುವ ವೃದ್ಧರು ಬೇರಾರೂ ಅಲ್ಲ, ಅವರೇ ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದಾ ಎಂಬುದು ಅರಿವಾಗಿ ತನ್ನನ್ನು ಕ್ಷಮಿಸುವಂತೆ ಆತ ನಂದಾ ಅವರ ಕಾಲು ಹಿಡಿದ. ಸರಕಾರಿ ನಿವಾಸ ಮತ್ತು ಅನ್ವಯವಾಗುವ ಸವಲತ್ತುಗಳನ್ನು ಪಡೆಯುವಂತೆ ಅಧಿಕಾರಿಗಳು ಗುಲ್ಜಾರಿಲಾಲ್ ನಂದಾ ಅವರನ್ನು ವಿನಂತಿಸಿಕೊಂಡರು. ಆದರೆ ಅದನ್ನು ಅಷ್ಟೇ ನಯವಾಗಿ ನಿರಾಕರಿಸಿದ ನಂದಾ, ತಮ್ಮ ಕೊನೆಯ ಉಸಿರು ಇರುವವರೆಗೂ ಓರ್ವ ಸಾಮಾನ್ಯ ನಾಗರಿಕನಂತೆ ಬದುಕು ಸಾಗಿಸಿದರು.

1997ರಲ್ಲಿ ಅವರಿಗೆ ‘ಭಾರತ ರತ್ನ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ನೂರು ವರ್ಷ ತುಂಬಲು ಕೇವಲ ಆರು ತಿಂಗಳಿರುವಾಗ 1998ರಲ್ಲಿ ನಂದಾ ಅವರು ಇಹಲೋಕವನ್ನು ತ್ಯಜಿಸಿ ದರು. ನಾಲ್ಕು ತಲೆಮಾರಿಗಾಗುವಷ್ಟು ಹಣ ಮತ್ತು ಆಸ್ತಿಯನ್ನು ಕೂಡಿಡುವ ಇಂದಿನ ಕೆಲ ರಾಜಕೀಯ ನಾಯಕರನ್ನು ನೋಡಿದಾಗ, ಗುಲ್ಜಾರಿಲಾಲ್ ನಂದಾ ಅವರಂಥ ನಾಯಕರೂ ಇದ್ದುದು ಅಚ್ಚರಿ ಮೂಡಿಸುತ್ತದೆ, ಜತೆಗೆ ಹೆಮ್ಮೆಯನ್ನೂ ಉಂಟುಮಾಡುತ್ತದೆ. ಇಂಥವರಿಗೆ ನಾವು ಗೌರವವನ್ನು ಸಲ್ಲಿಸಬೇಕಲ್ಲವೇ?