ಒಂದೊಳ್ಳೆ ಮಾತು
ಆನಂದ್ ಮಲ್ಲಿಗವಾಡ ಅವರು ಮೂಲತಃ ಹಾವೇರಿ ಜಿಯ ಒಂದು ಪುಟ್ಟ ಹಳ್ಳಿಯವರು. ಹಳ್ಳಿಯ ಕೆರೆ, ಹಸಿರು ನೋಡಿ ಬೆಳೆದ ಅವರಿಗೆ ಸಾವಿರ ಕೆರೆಗಳ ಊರು ಬೆಂಗಳೂರಿನ ಕಲುಷಿತ, ಕಟ್ಟಡಗಳ ಅಡಿಯಲ್ಲಿ ಹೂತು ಹೋದ ಕೆರೆಗಳನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು.
2017ರ ಸುಮಾರಿಗೆ ಅವರು ಒಂದು ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಆದರೆ, ಅವರ ಮನಸ್ಸು ಮಾತ್ರ ಬತ್ತಿ ಹೋದ ಕೆರೆಗಳ ಬಗ್ಗೆಯೇ ಯೋಚಿಸುತ್ತಿತ್ತು. ‘ಸರಕಾರ ಬರಲಿ, ಯಾರಾದರೂ ಮಾಡಲಿ ಎಂದು ಕಾಯುವ ಬದಲು, ನಾನೇ ಏಕೆ ಮಾಡ ಬಾರದು?’ ಎಂಬ ಪ್ರಶ್ನೆ ಅವರಲ್ಲಿ ಮೂಡಿತು.
ಅವರ ಮೊದಲ ಗುರಿ ಬೆಂಗಳೂರಿನ ಆನೇಶ್ವರ ಪಾಳ್ಯದ ಬಳಿಯ ‘ಕ್ಯಾಲಸನಹಳ್ಳಿ ಕೆರೆ’. ಆ ಕೆರೆ ಸಂಪೂರ್ಣವಾಗಿ ಒಣಗಿ, ಹೂಳು ತುಂಬಿ, ಮುಳ್ಳಿನ ಗಿಡಗಳಿಂದ ಆವೃತವಾಗಿತ್ತು. ಆನಂದ್ ಅವರು ಯಾವುದೇ ಆಧುನಿಕ ಯಂತ್ರಗಳಿಗಿಂತ ಹೆಚ್ಚಾಗಿ ಪ್ರಕೃತಿಯ ನಿಯಮ ಗಳನ್ನೇ ನಂಬಿದರು.
ಅವರು ಸಿಮೆಂಟ್ ಅಥವಾ ಕಾಂಕ್ರೀಟ್ ಬಳಸದೆ, ಕೇವಲ ಸ್ಥಳೀಯ ಮಣ್ಣು ಮತ್ತು ಕಲ್ಲುಗಳನ್ನು ಬಳಸಿ ಕೆರೆಯನ್ನು ಪುನರ್ ನಿರ್ಮಿಸಲು ಯೋಜಿಸಿದರು. ಹಗಲು-ರಾತ್ರಿ ಎನ್ನದೆ ಕೆರೆಯಲ್ಲಿ ನಿಂತು ಹೂಳು ತೆಗೆಯುವ ಕೆಲಸ ಮಾಡಿದರು.
ಇದನ್ನೂ ಓದಿ: Roopa Gururaj Column: ಹಂಸ-ಡಿಭಂಕರ ಸಂಹಾರ ಮಾಡಿದ ಕೃಷ್ಣನ ಯುಕ್ತಿ
ಕಂಪನಿಯ ಕೆಲಸದ ನಂತರ ಸಿಗುವ ಸಮಯವನ್ನೆಲ್ಲ ಕೆರೆಗಾಗಿ ಮೀಸಲಿಟ್ಟರು. ಕೇವಲ 45 ದಿನಗಳಲ್ಲಿ, ಅತಿ ಕಡಿಮೆ ವೆಚ್ಚದಲ್ಲಿ ಆ ಕೆರೆಗೆ ಹೊಸರೂಪ ನೀಡಿದರು. ಮೊದಲ ಮಳೆ ಬಂದಾಗ ಕೆರೆ ತುಂಬಿದ್ದನ್ನು ನೋಡಿ ಊರ ಜನರಿಗೆ ಆಶ್ಚರ್ಯವಾಯಿತು. ಅಷ್ಟೇ ಅಲ್ಲ ಸುತ್ತಮುತ್ತಲಿನ ಬತ್ತಿದ್ದ ಬಾವಿಗಳಲ್ಲಿ ನೀರು ಉಕ್ಕಿದಾಗ ಆನಂದ್ ಅವರ ಕಣ್ಣಲ್ಲಿ ಆನಂದ ಭಾಷ್ಪವಿತ್ತು.
ಕೆರೆಗಳನ್ನು ಉಳಿಸುವ ಹಾದಿ ಸುಲಭವಾಗಿರಲಿಲ್ಲ. ಭೂಮಾಫಿಯಾ ಮತ್ತು ಇತರರಿಂದ ಅವರಿಗೆ ಬೆದರಿಕೆಗಳು ಬಂದವು. ಆದರೆ ಆನಂದ್ ಅಳುಕಲಿಲ್ಲ. ತಮ್ಮ ಇಡೀ ಉಳಿತಾಯ ವನ್ನು ಕೆರೆಗಳಿಗಾಗಿ ವ್ಯಯಿಸಿದರು, ಅಂತಿಮವಾಗಿ ತಮ್ಮ ಕೆಲಸಕ್ಕೂ ರಾಜೀನಾಮೆ ನೀಡಿ ಪೂರ್ಣಾವಧಿಯಾಗಿ ಕೆರೆಗಳ ರಕ್ಷಣೆಗೆ ಇಳಿದರು.
ಅವರ ನಿಸ್ವಾರ್ಥ ಸೇವೆಯನ್ನು ಕಂಡ ಕಾರ್ಪೊರೇಟ್ ಕಂಪನಿಗಳು ಅವರ ಸಹಾಯಕ್ಕೆ ಬಂದವು. ಇಂದು ಆನಂದ್ ಮಲ್ಲಿಗವಾಡ ಅವರು 35ಕ್ಕೂ ಹೆಚ್ಚು ಕೆರೆಗಳಿಗೆ ಜೀವ ನೀಡಿzರೆ. ಅವರು ಕೇವಲ ಹೂಳೆತ್ತುವುದಿಲ್ಲ, ಬದಲಿಗೆ ಕೆರೆಯ ಸುತ್ತ ಸಾವಿರಾರು ಗಿಡಗಳನ್ನು ನೆಟ್ಟು ಅದೊಂದು ಸುಂದರ ‘ಜೀವವೈವಿಧ್ಯ ತಾಣ’ವಾಗುವಂತೆ ಮಾಡುತ್ತಾರೆ. ಅವರ ಈ ಕೆಲಸ ದಿಂದಾಗಿ ಸಾವಿರಾರು ಹಕ್ಕಿಗಳು ಮತ್ತೆ ಬೆಂಗಳೂರಿನ ಕೆರೆಗಳತ್ತ ಮುಖ ಮಾಡಿವೆ.
ಆನಂದ್ ಮಲ್ಲಿಗವಾಡ ಅವರು ಆಧುನಿಕ ಯುಗದ ಭಗೀರಥ. ಕೇವಲ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಪ್ರಕೃತಿಯಲ್ಲಿ ಎಂಥ ಅದ್ಭುತವನ್ನು ಸೃಷ್ಟಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ. ಅತಿ ಕಡಿಮೆ ಸಮಯದಲ್ಲಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಕೆರೆಗಳನ್ನು ಪುನರುಜ್ಜೀವನಗೊಳಿಸಿದಕ್ಕಾಗಿ ಇವರ ಹೆಸರು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ.
‘ದಿ ಹಿಂದೂ’, ‘ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು, ಇವರ ‘ಕ್ಯಾಲಸನಹಳ್ಳಿ ಕೆರೆ’ಯ ಜೀಣೋದ್ಧಾರ ಮತ್ತು ‘ಸ್ಯಾಂಡ್ ಪ್ರೋಗ್ರಾಮ’ಗಳ ಬಗ್ಗೆ ಸವಿಸ್ತಾರ ವಾದ ವರದಿಗಳನ್ನು ಪ್ರಕಟಿಸಿವೆ. ‘ಬಿಬಿಸಿ’ ಮತ್ತು ‘ಅಲ್ ಜಜೀರಾ’ದಂಥ ಅಂತಾ ರಾಷ್ಟ್ರೀಯ ಮಾಧ್ಯಮಗಳು ಇವರನ್ನು The Lake Man of India ಎಂದು ಕರೆದು ವಿಶೇಷ ಲೇಖನಗಳನ್ನು ಪ್ರಕಟಿಸಿವೆ.
ಆನಂದ್ ಮಲ್ಲಿಗವಾಡ ಅವರು ತಮ್ಮ ಕೆರೆ ಸಂರಕ್ಷಣೆಯ ಮಾದರಿಯನ್ನು TEDx ವೇದಿಕೆ ಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಸರಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಇವರ ಕಾರ್ಯಕ್ಕೆ ಅಧಿಕೃತವಾಗಿ ಅನುಮತಿ ನೀಡಿ, ಅನೇಕ ಕೆರೆಗಳ ಜವಾಬ್ದಾರಿಯನ್ನು ಇವರಿಗೆ ವಹಿಸಿವೆ.
2024-25ರ ಅವಧಿಯಲ್ಲಿ ಇವರು ಕೇಂದ್ರ ಸರಕಾರದ ವಿವಿಧ ಪರಿಸರ ಸಂಬಂಧಿತ ಸಮಿತಿಗಳಲ್ಲೂ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ನದಿಗಳು ಮತ್ತು ಕೆರೆಗಳು ಕೇವಲ ನೀರಿನ ಮೂಲಗಳಲ್ಲ, ಅವು ಭೂಮಿಯ ರಕ್ತನಾಳಗಳು. ಸೃಷ್ಟಿಗೆ ಪ್ರತಿಯಾಗಿ ನಾವು ಏನನ್ನೂ ನೀಡಬೇಕಿಲ್ಲ, ಕೇವಲ ಸೃಷ್ಟಿಯ ಸಮತೋಲನವನ್ನು ಹಾಳುಮಾಡ ದಿದ್ದರೆ ಸಾಕು. ಪರ್ಯಾವರಣ ಸಂರಕ್ಷಣೆಯ ಇಂಥ ನಿದರ್ಶನಗಳು ನಮಗೆಲ್ಲ ಪ್ರೇರಣೆ ಯಾಗಲಿ...