ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಹಂಸ-ಡಿಭಂಕರ ಸಂಹಾರ ಮಾಡಿದ ಕೃಷ್ಣನ ಯುಕ್ತಿ

ಶಿವನ ವರವನ್ನು ಪಡೆದು ಅಜೇಯರಾಗಿದ್ದ ಹಂಸ ಮತ್ತು ಡಿಂಭಕರಂಥ ದುಷ್ಟರನ್ನು ಶ್ರೀಕೃಷ್ಣ ತನ್ನ ಅದ್ಭುತ ಲೀಲೆಯಿಂದ ಸಂಹರಿಸಿ, ದೂರ್ವಾಸರಂಥ ಋಷಿಮುನಿಗಳನ್ನು ಕಾಯುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದ. ಕೆಲವೊಮ್ಮೆ ಅಟ್ಟಹಾಸದಿಂದ ನಮ್ಮ ಮುಂದೆ ಕೆಟ್ಟತನದಲ್ಲಿ ಮೆರೆಯುವ ಅನೇಕರನ್ನು ನೋಡಿದಾಗ ‘ಇವರಿಗೆ ಭಗವಂತನ ಭಯ ಇಲ್ಲವೇ?’ ಎಂದು ಯೋಚಿಸುವಂತಾಗುತ್ತದೆ.

ಹಂಸ-ಡಿಭಂಕರ ಸಂಹಾರ ಮಾಡಿದ ಕೃಷ್ಣನ ಯುಕ್ತಿ

-

ಒಂದೊಳ್ಳೆ ಮಾತು

ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆಗಾಗಿ ಅವತರಿಸಿದನು. ಕಂಸ, ಜರಾಸಂಧರಂಥ ಪ್ರಬಲ ಶತ್ರುಗಳ ನಡುವೆ, ಶಿವನ ವರಪ್ರಸಾದದಿಂದ ಅಜೇಯ ರಾಗಿದ್ದ ಹಂಸ ಮತ್ತು ಡಿಂಭಕ ಎಂಬ ಸಹೋದರರ ಅಟ್ಟಹಾಸ ಮಿತಿಮೀರಿತ್ತು.

ಸಾಳ್ವ ದೇಶದ ರಾಜ ಬ್ರಹ್ಮದತ್ತನಿಗೆ ಪರಮೇಶ್ವರನ ಅನುಗ್ರಹದಿಂದ ಜನಿಸಿದವರೇ ಹಂಸ ಮತ್ತು ಡಿಂಭಕ. ಇವರು ಬೆಳೆದು ದೊಡ್ಡವರಾದ ಮೇಲೆ ಶಿವನನ್ನು ಕುರಿತು ಘೋರ ತಪಸ್ಸು ಮಾಡಿದರು. ಶಿವನು ಪ್ರತ್ಯಕ್ಷನಾದಾಗ, “ನಮಗೆ ಎಂದಿಗೂ ಸೋಲಾಗಬಾರದು, ದಿವ್ಯಾಸ್ತ್ರ ಗಳು ಲಭಿಸಬೇಕು ಮತ್ತು ನಿನ್ನ ಇಬ್ಬರು ಪ್ರಮಥ ಗಣಗಳು ನಮಗೆ ರಕ್ಷಕರಾಗಿರಬೇಕು" ಎಂದು ವರ ಪಡೆದರು. ಈ ಅಪ್ರತಿಮ ಶಕ್ತಿಯಿಂದಾಗಿ ಅವರು ಯಾರ ಕೈಗೂ ಸಿಗದಷ್ಟು ಬಲಾಢ್ಯರಾದರು.

ಋಷಿಮುನಿಗಳ ಮೇಲೆ ದೌರ್ಜನ್ಯ

ಅಧಿಕಾರದ ಮದದಿಂದ ಹಂಸನು ಋಷಿಮುನಿಗಳಿಗೆ ತೊಂದರೆ ನೀಡತೊಡಗಿದನು. ಬ್ರಾಹ್ಮಣ ಯುವಕರು ತಪಸ್ಸು ಮಾಡುವುದನ್ನು ತಡೆಯಲು ಅವರಿಗೆ ಬಲವಂತವಾಗಿ ವಿವಾಹ ಮಾಡಿಸಿ ಸಂಸಾರ ಹೂಡುವಂತೆ ಮಾಡುತ್ತಿದ್ದನು. ಒಮ್ಮೆ ದೂರ್ವಾಸ ಮುನಿಗಳ ಆಶ್ರಮಕ್ಕೆ ನುಗ್ಗಿ ಅವರ ಶಿಷ್ಯರನ್ನು ಅಪಹರಿಸಿ, ಕುಟೀರಗಳಿಗೆ ಬೆಂಕಿ ಹಚ್ಚಿದನು. ಇದನ್ನು ತಡೆಯಲು ಹೋದ ಡಿಂಭಕನ ಮಾತಿಗೂ ಹಂಸ ಓಗೊಡಲಿಲ್ಲ. ದೂರ್ವಾಸರು ಕೋಪ ಗೊಂಡರೂ, ಶಿವನ ವರದ ಬಲವಿದ್ದ ಕಾರಣ ಹಂಸನನ್ನು ನೇರವಾಗಿ ಶಪಿಸಲಾಗದೆ ಶ್ರೀಕೃಷ್ಣನ ಮೊರೆ ಹೋದರು.

ಇದನ್ನೂ ಓದಿ: Roopa Gururaj Column: ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಂತ್ರವೆಂಬ ಮನದ ರಕ್ಷಾಕವಚ

ಶ್ರೀಕೃಷ್ಣನ ತಂತ್ರ ಮತ್ತು ಯುದ್ಧ

ಕೃಷ್ಣನು ದೂರ್ವಾಸರನ್ನು ಸಮಾಧಾನಪಡಿಸಿ, “ಅವರಿಗೆ ಶಿವನ ವರವಿದೆ, ಅವರನ್ನು ಯುದ್ಧಕ್ಕಿಂತ ಹೆಚ್ಚಾಗಿ ತಂತ್ರದಿಂದಲೇ ಮುಗಿಸಬೇಕು, ಕಾಲ ಸನ್ನಿಹಿತವಾಗಿದೆ" ಎಂದು ಭರವಸೆ ನೀಡಿದನು. ಇತ್ತ ಹಂಸನು ರಾಜಸೂಯ ಯಾಗ ಮಾಡಲು ನಿರ್ಧರಿಸಿ, ಕೃಷ್ಣ ನಿಂದಲೇ ಕಪ್ಪ ಪಡೆಯಬೇಕೆಂದು ಹಠ ಹಿಡಿದು ಡಿಂಭಕನನ್ನು ಕಳುಹಿಸಿದನು. ಕೃಷ್ಣನು ಕಪ್ಪ ಕೊಡಲು ನಿರಾಕರಿಸಿ ಯುದ್ಧಕ್ಕೆ ಸಿದ್ಧನಾದನು.

ರಣರಂಗದಲ್ಲಿ ಕೃಷ್ಣ, ಬಲರಾಮ ಮತ್ತು ಸಾತ್ಯಕಿ ಒಂದು ಕಡೆ ಇದ್ದರೆ, ಹಂಸ-ಡಿಂಭಕರ ಜತೆ ಹಿಡಿಂಬಾಸುರನಂಥ ರಾಕ್ಷಸರು ಸೇರಿದ್ದರು. ಬಲರಾಮನು ಇತರ ರಾಕ್ಷಸರನ್ನು ಚದುರಿಸಿದಾಗ, ಕೃಷ್ಣನು ಹಂಸನನ್ನು ಗುರಿಯಾಗಿಸಿಕೊಂಡು ವೈಷ್ಣವಾಸವನ್ನು ಹೂಡಿ ದನು.

ಅಸ್ತ್ರಕ್ಕೆ ಹೆದರಿ ಓಡಿದ ಹಂಸನು ಯಮುನಾ ನದಿಯ ಕಾಳಿಂಗ ಮಡುವಿಗೆ ಧುಮುಕಿದನು. ಕೃಷ್ಣನು ಅವನನ್ನು ನೀರಿನ ಆಳಕ್ಕೆ ತಳ್ಳಿದಾಗ, ಅಲ್ಲಿ ಹಂಸನು ಧೃತರಾಷ್ಟ್ರ ಎಂಬ ವಿಷಪೂರಿತ ಹಾವಿನ ಬಾಯೊಳಗೆ ಸಿಲುಕಿ ನಂತರ ಸಾವಿರಾರು ವರ್ಷಗಳು ಅ ಬಂಧಿ ಯಾಗಿರಬೇಕಾಯಿತು.

ತನ್ನ ಪ್ರಾಣಪ್ರಿಯ ಅಣ್ಣ ಕಾಣೆಯಾದದ್ದನ್ನು ಕಂಡು ಡಿಂಭಕನು ಶೋಕಸಾಗರದಲ್ಲಿ ಮುಳುಗಿದನು. ಅಣ್ಣನಿಲ್ಲದ ಬಾಳು ತನಗೆ ಬೇಡವೆಂದು ನಿರ್ಧರಿಸಿದ ಅವನು, ಕೃಷ್ಣನ ಸಮ್ಮುಖದ ತನ್ನ ಶಿರವನ್ನು ತಾನೇ ಕತ್ತರಿಸಿಕೊಂಡು ಪ್ರಾಣತ್ಯಾಗ ಮಾಡಿದನು. ಕೃಷ್ಣನು ಅವನನ್ನು ತಡೆಯಲಿಲ್ಲ, ಏಕೆಂದರೆ ಅಣ್ಣನ ಸಾವಿನ ಸೇಡಿಗಾಗಿ ಡಿಂಭಕನು ಮುಂದೆ ಮತ್ತಷ್ಟು ಕ್ರೂರನಾಗುವ ಸಾಧ್ಯತೆಯಿತ್ತು.

ಹೀಗೆ ಶಿವನ ವರವನ್ನು ಪಡೆದು ಅಜೇಯರಾಗಿದ್ದ ಹಂಸ ಮತ್ತು ಡಿಂಭಕರಂಥ ದುಷ್ಟ ರನ್ನು ಶ್ರೀಕೃಷ್ಣ ತನ್ನ ಅದ್ಭುತ ಲೀಲೆಯಿಂದ ಸಂಹರಿಸಿ, ದೂರ್ವಾಸರಂಥ ಋಷಿಮುನಿ ಗಳನ್ನು ಕಾಯುವ ಮೂಲಕ ಧರ್ಮಸಂಸ್ಥಾಪನೆ ಮಾಡಿದ. ಕೆಲವೊಮ್ಮೆ ಅಟ್ಟಹಾಸದಿಂದ ನಮ್ಮ ಮುಂದೆ ಕೆಟ್ಟತನದಲ್ಲಿ ಮೆರೆಯುವ ಅನೇಕರನ್ನು ನೋಡಿದಾಗ ‘ಇವರಿಗೆ ಭಗವಂತನ ಭಯ ಇಲ್ಲವೇ?’ ಎಂದು ಯೋಚಿಸುವಂತಾಗುತ್ತದೆ.

ಸತ್ಯದ ಹಾದಿಯಲ್ಲಿ ನಡೆಯುವವರಿಗೆ ಕಷ್ಟ ಜಾಸ್ತಿ ಎಂತಲೂ ಅನಿಸುತ್ತದೆ. ಆದರೆ ಭಗವಂತನಿಗೆ ಯಾವಾಗ, ಎಲ್ಲಿ, ಯಾರಿಗೆ, ಹೇಗೆ ಬುದ್ಧಿ ಕಲಿಸಬೇಕು ಎನ್ನುವ ವಿಷಯ ಚೆನ್ನಾಗಿ ತಿಳಿದಿದೆ. ಅದನ್ನು ದೂರದೃಷ್ಟಿಯಿಂದ ನೋಡಲಾಗದ ನಮಗೆ ಕೆಲವೊಮ್ಮೆ ಅಪನಂಬಿಕೆಗಳು ಮೂಡಿ ಖಿನ್ನತೆ ಕಾಡುವುದು ಸಹಜ. ಆದರೆ ತನ್ನನ್ನು ನಂಬಿದವರನ್ನು ಭಗವಂತ ಎಂದಿಗೂ ಕೈಬಿಡುವುದಿಲ್ಲ. ಪುರಾಣದ ಈ ಕಥೆಗಳು ಇಂಥ ನಂಬಿಕೆಗಳನ್ನು ನಮ್ಮಲ್ಲಿ ಮತ್ತೆ ಮತ್ತೆ ಗಟ್ಟಿಗೊಳಿಸುತ್ತಾ ಹೋಗುತ್ತವೆ.