Roopa Gururaj Column: ಭಜಗೋವಿಂದಂ, ಭಜಗೋವಿಂದಂ ಗೋವಿಂದಂ ಭಜ ಮೂಡಮತೇ
ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿ ನಗರದಲ್ಲಿ ಸಂಚರಿಸುತ್ತಿದ್ದರು. ಕಾಶಿಯು ಜ್ಞಾನ ಮತ್ತು ಮೋಕ್ಷದ ಕೇಂದ್ರವೆಂದು ಪ್ರಸಿದ್ಧವಾದ ಸ್ಥಳ. ಅಲ್ಲಿನ ಗಲ್ಲಿ ಗಲ್ಲಿಗಳಲ್ಲಿ ವೇದ, ಶಾಸ್ತ್ರ, ವ್ಯಾಕರಣ ಪಠಣದ ಧ್ವನಿಗಳು ಸದಾ ಕೇಳಿಸುತ್ತಿದ್ದವು. ಆ ಸಂದರ್ಭದಲ್ಲಿ ಶಂಕರಾಚಾ ರ್ಯರ ಕಣ್ಣಿಗೆ ಒಂದು ದೃಶ್ಯ ಬಿತ್ತು
-
ಒಂದೊಳ್ಳೆ ಮಾತು
ಭಾರತದ ಧಾರ್ಮಿಕ-ದಾರ್ಶನಿಕ ಪರಂಪರೆಯಲ್ಲಿ ಆದಿ ಶಂಕರಾಚಾರ್ಯರು ಅಪ್ರತಿಮ ಸ್ಥಾನ ವನ್ನು ಹೊಂದಿದ್ದಾರೆ. ಅವರು ಅದ್ವೈತ ವೇದಾಂತದ ಮಹಾನ್ ಪ್ರಚಾರಕರು. ಆದರೆ ತತ್ತ್ವಶಾಸ್ತ್ರದ ಗಂಭೀರತೆಯೊಂದಿಗೆ ಅವರ ಹೃದಯದಲ್ಲಿ ಆಳವಾದ ಭಕ್ತಿ ಮತ್ತು ಕರುಣೆ ಸಹ ಹರಿದು ಹೋಯಿತು. ಆ ಭಕ್ತಿಯ ಸ್ಪೂರ್ತಿಯಿಂದ ಹುಟ್ಟಿದ ಮಹಾಕೃತಿಯೇ ‘ಭಜ ಗೋವಿಂದಂ’.
ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿ ನಗರದಲ್ಲಿ ಸಂಚರಿಸುತ್ತಿದ್ದರು. ಕಾಶಿಯು ಜ್ಞಾನ ಮತ್ತು ಮೋಕ್ಷದ ಕೇಂದ್ರವೆಂದು ಪ್ರಸಿದ್ಧವಾದ ಸ್ಥಳ. ಅಲ್ಲಿನ ಗಲ್ಲಿ ಗಲ್ಲಿಗಳಲ್ಲಿ ವೇದ, ಶಾಸ್ತ್ರ, ವ್ಯಾಕರಣ ಪಠಣದ ಧ್ವನಿಗಳು ಸದಾ ಕೇಳಿಸುತ್ತಿದ್ದವು. ಆ ಸಂದರ್ಭದಲ್ಲಿ ಶಂಕರಾಚಾ ರ್ಯರ ಕಣ್ಣಿಗೆ ಒಂದು ದೃಶ್ಯ ಬಿತ್ತು. ವಯಸ್ಸಾದ ಒಬ್ಬ ಪಂಡಿತನು ಕುಳಿತುಕೊಂಡು, ತುಂಬಾ ಉತ್ಕಟತೆಯಿಂದ ವ್ಯಾಕರಣದ ನಿಯಮಗಳನ್ನು ಪಠಿಸುತ್ತಿದ್ದನು.
‘ಡುಕ್ರಿಂಕರಣೇ ಡುಕ್ರಿಂಕರಣೇ’ ಎಂದು ಅವನು ಪುನರುಚ್ಚರಿಸುತ್ತಿದ್ದನು. ಅವನ ಕೂದಲು ಬೆಳ್ಳಗಾ ಗಿತ್ತು, ದೇಹ ಕಂಪಿಸುತ್ತಿತ್ತು, ಜೀವನದ ಅಂತಿಮ ಹಂತದಲ್ಲಿದ್ದರೂ ಅವನ ಮನಸ್ಸು ಇನ್ನೂ ಶಬ್ದ ಜ್ಞಾನದ ಸಿಕ್ಕಿಹಾಕಿಕೊಂಡಿತ್ತು. ಆತ್ಮeನ, ಭಕ್ತಿ ಅಥವಾ ಭಗವಂತನ ಸ್ಮರಣೆಯ ಕಡೆಗೆ ಅವನ ಮನಸ್ಸು ಹೋಗಿರಲಿಲ್ಲ.
ಇದನ್ನೂ ಓದಿ: Roopa Gururaj Column: ಭಗವದ್ಗೀತಾ ಪಠಣದ ಮಹತ್ವ
ಈ ದೃಶ್ಯ ಶಂಕರಾಚಾರ್ಯರ ಹೃದಯವನ್ನು ತುಂಬಾ ಕಲಕಿತು. ಅವರು ತಿರಸ್ಕಾರದಿಂದಲ್ಲ, ಆದರೆ ಅಪಾರ ಕರುಣೆಯಿಂದ ಆ ವೃದ್ಧನ ಕಡೆಗೆ ನೋಡಿದರು. ಶಂಕರಾಚಾರ್ಯರು ಮೃದುಸ್ವರ ದಲ್ಲಿ, ಅಪರಿಮಿತ ಭಾವುಕತೆಯಿಂದ ಈ ಶ್ಲೋಕವನ್ನು ಉಚ್ಚರಿಸಿದರು:
“ಭಜ ಗೋವಿಂದಂ, ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ
ಡುಕ್ರಿಂಕರಣೇ ||’.
ಇದರ ಅರ್ಥ ಹೀಗಿದೆ: ಓ ಮೂಢ ಮನಸ್ಸೇ, ಗೋವಿಂದನನ್ನು ಭಜಿಸು. ಮರಣವು ಸಮೀಪಿಸಿದಾಗ, ವ್ಯಾಕರಣದ ನಿಯಮಗಳು ನಿನ್ನನ್ನು ರಕ್ಷಿಸಲಾರವು. ಈ ಶ್ಲೋಕವು ಆ ವೃದ್ಧನಿಗಷ್ಟೇ ಅಲ್ಲ, ಅಲ್ಲಿದ್ದ ಎಲ್ಲರಿಗೂ ಹಾಗೂ ಮುಂದಿನ ಪೀಳಿಗೆಗಳಿಗೂ ಬೋಧನೆಯಾಗಿ ಪರಿಣಮಿಸಿತು.
ಜೀವನದ ಅಂತಿಮ ಗುರಿ ಕೇವಲ ಪಾಂಡಿತ್ಯವಲ್ಲ, ಭಗವಂತನ ಸ್ಮರಣೆ ಮತ್ತು ಆತ್ಮಜ್ಞಾನವೇ ಸತ್ಯ ಎನ್ನುವುದನ್ನು ಶಂಕರಾಚಾರ್ಯರು ಸ್ಪಷ್ಟಪಡಿಸಿದರು. ಈ ಒಂದು ಶ್ಲೋಕದಿಂದ ಪ್ರೇರಿತರಾದ ಶಂಕರಾಚಾರ್ಯರ ಶಿಷ್ಯರು ತಮ್ಮದೇ ಶ್ಲೋಕಗಳನ್ನು ಅದಕ್ಕೆ ಸೇರಿಸಿದರು. ಹೀಗೆ ಭಜ ಗೋವಿಂದಂ ಎಂಬ ಸ್ತೋತ್ರವು ರೂಪುಗೊಂಡಿತು.
ಒಟ್ಟು 31 ಶ್ಲೋಕಗಳ ಈ ಕೃತಿ, ಜೀವನದ ಕ್ಷಣಿಕತೆಯನ್ನು, ಐಶ್ವರ್ಯದ ಅಸ್ಥಿರತೆಯನ್ನು, ಯೌವ ನದ ನಾಶವನ್ನು ಮತ್ತು ಮೋಹ- ಮಮಕಾರಗಳ ಬಂಧನವನ್ನು ಮನಮುಟ್ಟುವಂತೆ ವರ್ಣಿಸು ತ್ತದೆ. ಧನ, ಯೌವನ, ಕುಟುಂಬ, ಸ್ನೇಹ- ಈ ಎಲ್ಲವೂ ಕಾಲದ ಮುಂದೆ ನಿಲ್ಲಲಾರವು ಎಂಬ ಸಂದೇಶವನ್ನು ಈ ಸ್ತೋತ್ರದಲ್ಲಿ ಪುನಃಪುನಃ ಹೇಳಲಾಗುತ್ತದೆ.
ಅಂತೆಯೇ ಭಕ್ತಿ, ವೈರಾಗ್ಯ ಮತ್ತು ಜ್ಞಾನದಿಂದ ಮಾನವನು ಮುಕ್ತಿಯನ್ನು ಪಡೆಯಬಲ್ಲನೆಂಬ ಆಶಯವನ್ನೂ ಅದು ನೀಡುತ್ತದೆ.
ಅದ್ವೈತ ತತ್ತ್ವವನ್ನು ಸಾರಿದ ಶಂಕರಾಚಾರ್ಯರು, ಭಕ್ತಿಯ ಮಾರ್ಗವನ್ನೂ ಅಷ್ಟೇ ಮಹತ್ವ ದ್ದೆಂದು ಪ್ರತಿಪಾದಿಸಿದವರು. ಅವರ ಪ್ರಕಾರ ಜ್ಞಾನ ಮತ್ತು ಭಕ್ತಿ ಪರಸ್ಪರ ವಿರೋಧಿಗಳಲ್ಲ; ಅವು ಒಂದೇ ನಾಣ್ಯದ ಎರಡು ಮುಖಗಳು. ಅವರ ಭಜ ಗೋವಿಂದಂ ಈ ಸಂಗತಿಯನ್ನು ಅತ್ಯಂತ ಸರಳ ವಾಗಿ, ಜನಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸುತ್ತದೆ.
ಅಂತಿಮವಾಗಿ, ಭಜ ಗೋವಿಂದಂ ನಮ್ಮೆಲ್ಲರಿಗೂ ನೀಡುವ ಸಂದೇಶ ಏನೆಂದರೆ, ಜೀವನ ಅಲ್ಪ ಕಾಲಿಕ. ಅಹಂಕಾರ, ಆಸೆ, ಪಾಂಡಿತ್ಯ ಎಲ್ಲವೂ ಕ್ಷಣಿಕ. ಆದರೆ ಗೋವಿಂದನ ಭಜನೆ, ಸ್ಮರಣೆ ಮತ್ತು ಆತ್ಮಜ್ಞಾನ ಮಾತ್ರ ಶಾಶ್ವತ. ಅದೇ ಮಾನವನನ್ನು ಸಂಸಾರದ ಬಂಧನದಿಂದ ಮುಕ್ತಿಗೊಳಿ ಸುವ ದಾರಿ.
ಈ ಕಥೆ ಇನ್ನು ಸಾವಿರ ವರ್ಷಗಳು ಕಳೆದರೂ ಕೂಡ ಸದಾ ಪ್ರಸ್ತುತವಾಗೇ ಉಳಿಯುತ್ತದೆ. ಮನುಷ್ಯ ರಾಗಿ ನಾವು ಎಷ್ಟೇ ಅಭಿವೃದ್ಧಿ ಹೊಂದಿದರೂ, ಜ್ಞಾನ ಪಡೆದು ಸೂರ್ಯ ಚಂದ್ರ, ಮಂಗಳ, ಬುಧ ಇತರ ಗ್ರಹಗಳನ್ನ ಮುಟ್ಟಿ ಬಂದರೂ ನಮ್ಮಲ್ಲಿ ಅಹಂಕಾರ ಮನೆ ಮಾಡಿದ್ದರೆ ಮುಕ್ತಿ ಎಂದಿಗೂ ಸಾಧ್ಯವಿಲ್ಲ. ಭಗವಂತನೊಂದಿಗೆ ಅನುಸಂಧಾನ, ಸಮರ್ಪಣಾ ಭಾವ ಆತ್ಮಜ್ಞಾನ ಮಾತ್ರ ನಮ್ಮ ಆತ್ಮ ಸಾಕ್ಷಾತ್ಕಾರಕ್ಕೆ ದಾರಿ.