ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gururaj Gantihole Column: ಅನ್ನದಿಂದ ಉದ್ಯಮವರೆಗೆ ಹಬ್ಬಿರುವ ಸಿಎಫ್‌ʼಟಿಆರ್‌ಐ: ಇದು ಭಾರತದ ಭವಿಷ್ಯ !

ಮೈಸೂರಿನ ಹೆಮ್ಮೆಯ ಸಂಸ್ಥೆಯಾದ ಸಿಎಫ್‌ʼಟಿಆರ್‌ಐ ಹಲವಾರು ಸಂಶೋಧನಾ ವಿಭಾಗ ಗಳನ್ನು ಹೊಂದಿದೆ. ಇಲ್ಲಿ ವಿವಿಧ ವಿಶೇಷ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಪ್ರಮುಖ ವಾಗಿ, ಧಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ, ಅಕ್ಕಿ, ಗೋಧಿ, ಜೋಳ, ಸಜ್ಜೆ ಮುಂತಾದ ಧಾನ್ಯಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ಗುಣಮಟ್ಟ ಸುಧಾರಣೆ ಕುರಿತ ಪ್ರಯೋಗ ಗಳು ನಡೆಯುತ್ತವೆ.

ಅನ್ನದಿಂದ ಉದ್ಯಮವರೆಗೆ ಹಬ್ಬಿರುವ ಸಿಎಫ್‌ʼಟಿಆರ್‌ಐ: ಇದು ಭಾರತದ ಭವಿಷ್ಯ !

-

ಗಂಟಾಘೋಷ

ಕರಾವಳಿ, ಮಲೆನಾಡಿನ ಅಡಕೆಹಾಳೆ ತಟ್ಟೆ ದೇಶದಾಚೆಗೆ ಮಾರುಕಟ್ಟೆ ವಿಸ್ತರಿಸಿಕೊಂಡು ದಶಕಗಳೇ ಸಂದಿವೆ. ಅಡಕೆ ಬೆಳೆಗಾರರು ತಮ್ಮ ತೋಟದಲ್ಲಿ ವ್ಯರ್ಥವಾಗುತ್ತಿದ್ದ ಹಾಳೆ ಯನ್ನು ಸಂಗ್ರಹಿಸಿ ಒಂದೇ ಒಂದು ಯಂತ್ರ ಇಟ್ಟುಕೊಂಡು ವಿರಾಮದ ಸಮಯದಲ್ಲಿ ಮನೆಯ ಪುರುಷರು, ಮಹಿಳೆಯರು ಉಪಕಸುಬಾಗಿ ತಟ್ಟೆ ತಯಾರಿಸುತ್ತಿದ್ದರು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಸೀಸನ್‌ನಲ್ಲಿ ಭಾರಿ ಬೇಡಿಕೆ ಇರುವ ಹಾಳೆ ತಟ್ಟೆಗಳದ್ದು ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಸದ್ಯ ಈ ಉದ್ದಿಮೆಗೆ ಬರೋಬ್ಬರಿ 50 ವರ್ಷ ತುಂಬುತ್ತಿದೆ. ಇಂಥ ಅದ್ಭುತ ಅನ್ವೇಷಣೆಗಳನ್ನು ಮಾಡಿದ್ದು ನಮ್ಮ ಮೈಸೂರಿನ ಸಿಎಫ್‌ʼಟಿಆರ್‌ಐ ಎಂಬುದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ!

ಈ ರೀತಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ಸುಮಾರು 780 ವಸ್ತುಗಳನ್ನು ಅದು ಸಂಶೋಧನೆ ಮಾಡಿದೆ. 1978ಕ್ಕೂ ಮೊದಲು ಮೈಸೂರಿನ ಸಿಎಫ್‌ʼಟಿಆರ್‌ಐನಲ್ಲಿ ಬಾಳೆಎಲೆ ಮತ್ತು ಮುತ್ತುಗದ ಎಲೆಯಿಂದ ದೊನ್ನೆ ತಯಾರಿಸ ಲಾಗುತ್ತಿತ್ತು.

ಇಲ್ಲಿಂದ ಮಾದರಿ ಯಂತ್ರವನ್ನು ಕೊಂಡೊಯ್ದು, ಅಡಕೆ ಹಾಳೆಯಿಂದ ತಟ್ಟೆ ತಯಾರಿಸುವ ಯಂತ್ರವನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ ಚಿಕ್ಕದಾಗಿ ಆರಂಭಿಸಿದ ಈ ಉದ್ಯಮ ಅಗಾಧವಾಗಿ ಬೆಳೆದ ಇತಿಹಾಸ ಹೊಂದಿದೆ.

ಇದನ್ನೂ ಓದಿ: Gururaj Gantihole Column: ನಾಗರಿಕ ಸೇವಾ ಸುಧಾರಣೆ: ಮರುರಚನೆಗೆ ಕಾಲ ಬಂದಿದೆಯೇ ?

ಭಾರತ ಸರಕಾರದ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಲಿ ಸಂಸ್ಥೆಗಾಗಿ 1950ರ ಅಕ್ಟೋಬರ್‌ನಲ್ಲಿ ಮೈಸೂರು ನಗರದ ರಾಜಕುಮಾರಿ ಚೆಲುವಾಂಬಾ ಅವರು ತಮ್ಮ ಅರಮನೆಯನ್ನೇ ಬಿಟ್ಟುಕೊಟ್ಟರು. ವಿಶಾಲವಾದ ಅರಮನೆ ಜಾಗದಲ್ಲಿ ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಕೈಗೊಳ್ಳಲು ಈ ಸಂಸ್ಥೆಯನ್ನು ಸ್ಥಾಪಿಸ ಲಾಯಿತು.

ಮೈಸೂರು ನಗರದ ವೈಜ್ಞಾನಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ CSIR- Central Food Technological Research Institute (ಸಿಎಫ್‌ʼಟಿಆರ್‌ಐ) ಸಂಸ್ಥೆ. ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದಿಕ್ಕು ತೋರಿದ ಈ ಸಂಸ್ಥೆಯು ಸಂಶೋಧನೆ, ಆವಿಷ್ಕಾರ ಮತ್ತು ತಂತ್ರಜ್ಞಾನ, ತಂತ್ರಜ್ಞಾನ ಹಸ್ತಾಂತರ, ಉದ್ಯಮ ಅಭಿವೃದ್ಧಿ ಎಂಬ ನಾಲ್ಕು ಆಧಾರ ಸ್ತಂಭಗಳ ಮೇಲೆ ನಿಂತಿದೆ.

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನೆಲೆಸಿರುವ ಸಿಎಫ್‌ʼಟಿಆರ್‌ಐ, ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಜಾಲವಾಗಿರುವ Council of Scientific and Industrial Research (CSIR) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಿಎಸ್‌ಐಆರ್ ದೇಶಾ ದ್ಯಂತ ಅನೇಕ ರಾಷ್ಟ್ರೀಯ ಪ್ರಯೋಗಾಲಯಗಳನ್ನು ಹೊಂದಿದ್ದು, ಅದರಲ್ಲಿ ಆಹಾರ ತಂತ್ರಜ್ಞಾನ ಕ್ಷೇತ್ರಕ್ಕೆ ಸಮರ್ಪಿತ ಪ್ರಮುಖ ಕೇಂದ್ರವೆಂದರೆ ಸಿಎಫ್‌ʼಟಿಆರ್‌ಐ.

ಸಿಎಫ್‌ʼಟಿಆರ್‌ಐ ಸ್ಥಾಪನೆ 1950ರ ದಶಕದಲ್ಲಿ ನಡೆಯಿತು. ಸ್ವಾತಂತ್ರ್ಯಾನಂತರ ಭಾರತದ ಎದುರಿನ ಪ್ರಮುಖ ಸವಾಲುಗಳಂದಾದ ಪೌಷ್ಟಿಕ ಆಹಾರದ ಕೊರತೆಯ ಹಿನ್ನೆಲೆಯಲ್ಲಿ, ವೈಜ್ಞಾನಿಕವಾಗಿ ಆಹಾರ ಸಂಸ್ಕರಣೆ, ಸಂಗ್ರಹಣೆ ಮತ್ತು ಪೌಷ್ಟಿಕ ಮೌಲ್ಯವರ್ಧನೆ ಕುರಿತು ಆವಿಷ್ಕಾರ ನಡೆಸುವ ರಾಷ್ಟ್ರೀಯ ಮಟ್ಟದ ಸಂಸ್ಥೆಯ ಅಗತ್ಯತೆ ಉಂಟಾಯಿತು.

ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಂತ್ರಜ್ಞಾನ ಹಸ್ತಾಂತರ ಮಾಡುವುದು, ಆಹಾರ ಸುರಕ್ಷತಾ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಪ್ರಮುಖ ಧ್ಯೇಯ ಮತ್ತು ಉದ್ದೇಶಗಳನ್ನು ಈ ಸಂಸ್ಥೆ ಹೊಂದಿದೆ. ಸಿಎಫ್‌ʼಟಿಆರ್‌ಐ ಉದ್ದೇಶವು ಕೇವಲ ಪ್ರಯೋಗಾಲಯ ಮಟ್ಟದ ಸೀಮಿತ ವಾಗಿರದೆ, ‘ಲ್ಯಾಬ್ -ಟು-ಲ್ಯಾಂಡ್’ ತತ್ವದಂತೆ ಜನಜೀವನಕ್ಕೆ ನೇರ ಪರಿಣಾಮ ಬೀರುವ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿದೆ.

Screenshot_3 ಋ

ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಸಂಸ್ಥೆಗಳಂದು ಸಿಎಸ್‌ಐಆರ್. ಇದು ದೇಶದ ಕೈಗಾರಿಕಾ ಬೆಳವಣಿಗೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಆವಿಷ್ಕಾರಗಳಿಗೆ ಬಲ ತುಂಬುವ ಪ್ರಮುಖ ಸಂಶೋಧನಾ ಜಾಲವಾಗಿದೆ. ಸಿಎಸ್‌ಐಆರ್ ಭಾರತವನ್ನು ವಿಜ್ಞಾನದಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ.

ಸಿಎಸ್‌ಐಆರ್ ಅನ್ನು 1942ರಲ್ಲಿ ಸ್ಥಾಪಿಸಲಾಯಿತು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ವೈಜ್ಞಾನಿಕ ಅನ್ವೇಷಣೆಗೆ ಉತ್ತೇಜನ ನೀಡಲು ಇದನ್ನು ರೂಪಿಸಲಾಯಿತು. ಸಿಎಸ್‌ಐಆರ್ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದವರು ಶಾಂತಿ ಸ್ವರೂಪ್ ಭಟ್ನಾಗರ್.

ಇವರನ್ನು ‘ಭಾರತದ ಸಂಶೋಧನಾ ಪ್ರಯೋಗಾಲಯಗಳ ಪಿತಾಮಹ’ ಎಂದು ಕರೆಯ ಲಾಗುತ್ತದೆ. ಸ್ವಾತಂತ್ರ್ಯಾನಂತರ ಸಿಎಸ್‌ಐಆರ್, ಭಾರತದ ವಿಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸಿತು.

ವೈಜ್ಞಾನಿಕ ಸಾಧನೆಗೆ ಉತ್ತೇಜನ, ಕೈಗಾರಿಕಾ ಅಭಿವೃದ್ಧಿಗೆ ತಂತ್ರಜ್ಞಾನ ನೀಡುವುದು, ದೇಶೀಯ ಉತ್ಪಾದನೆ ಹೆಚ್ಚಿಸುವುದು, ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಹೊಸ ಆವಿಷ್ಕಾರಗಳು ಮತ್ತು ಪೇಟೆಂಟ್‌ಗಳನ್ನು ಉತ್ತೇಜಿಸುವುದು ಸೇರಿದಂತೆ ಹಲವು ಉದ್ದೇಶಗಳನ್ನು ಇದು ಹೊಂದಿದೆ.

ಸಿಎಸ್‌ಐಆರ್ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿ ಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ದೇಶದಾದ್ಯಂತ 35ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಇವು ದೇಶಾ ದ್ಯಂತ ಹಲವು ಪ್ರಯೋಗಗಳನ್ನು ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ನಡೆಸುತ್ತವೆ. ಔಷಧ ಮತ್ತು ಆರೋಗ್ಯ ವಿಜ್ಞಾನ, ಕೃಷಿ ಮತ್ತು ಆಹಾರ ತಂತ್ರಜ್ಞಾನ, ಪರಿಸರ ಸಂರಕ್ಷಣೆ, ರಸಾಯನಶಾಸ್ತ್ರ, ಜೀವ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಂಥ ಹಲವು ಸಂಶೋಧನಾ ಕ್ಷೇತ್ರಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.

ಕೈಗಾರಿಕಾ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಮತ್ತು ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ಭವಿಷ್ಯದಲ್ಲಿ ಸಿಎಸ್‌ಐಆರ್ ಕಾರ್ಯ ಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ, ವಿಜ್ಞಾನದಲ್ಲಿ ಮುಂಚೂಣಿಗೆ ತರುವಲ್ಲಿ ಸಹಾಯ ಮಾಡಲಿವೆ.

ಮೈಸೂರಿನ ಹೆಮ್ಮೆಯ ಸಂಸ್ಥೆಯಾದ ಸಿಎಫ್‌ʼಟಿಆರ್‌ಐ ಹಲವಾರು ಸಂಶೋಧನಾ ವಿಭಾಗಗಳನ್ನು ಹೊಂದಿದೆ. ಇಲ್ಲಿ ವಿವಿಧ ವಿಶೇಷ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಪ್ರಮುಖವಾಗಿ, ಧಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ, ಅಕ್ಕಿ, ಗೋಧಿ, ಜೋಳ, ಸಜ್ಜೆ ಮುಂತಾದ ಧಾನ್ಯಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ಗುಣಮಟ್ಟ ಸುಧಾರಣೆ ಕುರಿತ ಪ್ರಯೋಗಗಳು ನಡೆಯುತ್ತವೆ.

ಪ್ರೋಟೀನ್ ಮತ್ತು ಪೌಷ್ಟಿಕತೆ ವಿಚಾರವಾಗಿ, ಮಕ್ಕಳ ಅಪೌಷ್ಟಿಕತೆಯನ್ನು ತಡೆಗಟ್ಟಲು ಪ್ರೋಟೀನ್ ಸಮೃದ್ಧ ಆಹಾರಗಳ ಅಭಿವೃದ್ಧಿಯಲ್ಲಿ, ಉದಾಹರಣೆಗೆ, ಸಸ್ಯಾಧಾರಿತ ಪ್ರೋಟೀನ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗುವಂಥ ತಂತ್ರಜ್ಞಾನ ಇಲ್ಲಿ ಬಳಕೆ ಯಾಗುತ್ತಿದೆ.

ಹಣ್ಣು ಮತ್ತು ತರಕಾರಿ ಸಂಸ್ಕರಣೆ ವಿಭಾಗದಲ್ಲಿ, ಜ್ಯಾಮ, ಜ್ಯೂಸ್, ಡಿಹೈಡ್ರೇಟೆಡ್ ಉತ್ಪನ್ನಗಳು, ಪಲ್ಪ ಸಂಸ್ಕರಣೆ ಮುಂತಾದ ತಂತ್ರಜ್ಞಾನಗಳು ಬಳಕೆಯಲ್ಲಿವೆ. ಮೈಕ್ರೋ ಬಯಾಲಜಿ ಮತ್ತು ಫರ್ಮೆಂಟೇಶನ್ ವಿಭಾಗದಲ್ಲಿ, ಫರ್ಮೆಂಟೆಡ್ ಆಹಾರಗಳು, ಪ್ರೊಬಯೋಟಿಕ್ಸ್,‌ ಆಹಾರ ಸುರಕ್ಷತೆ ಮತ್ತು ಸೂಕ್ಷ್ಮಜೀವಿಗಳ ಅಧ್ಯಯನವನ್ನು ನಡೆಸ ಲಾಗುತ್ತಿದೆ.

ಪ್ಯಾಕೇಜಿಂಗ್ ತಂತ್ರಜ್ಞಾನ ವಿಭಾಗದಲ್ಲಿ, ಆಹಾರದ ದೀರ್ಘಾವಧಿ ಸಂಗ್ರಹಣೆಗಾಗಿ ನವೀನ ಪ್ಯಾಕೇಜಿಂಗ್ ವಿಧಾನಗಳ ಅಭಿವೃದ್ಧಿ ನಡೆಯುತ್ತಿದ್ದರೆ, ಆಹಾರ ಎಂಜಿನಿಯರಿಂಗ್ ವಿಭಾಗವು ಡ್ರೈಯರ್, ಮಿಲ್, ಎಕ್ಸ್‌ಟ್ರೂಡರ್, ಪ್ರೊಸೆಸಿಂಗ್ ಯಂತ್ರೋಪಕರಣಗಳ ವಿನ್ಯಾಸದಲ್ಲಿ ತೊಡಗಿಕೊಂಡಿದೆ.

ಇಂಥ ಪ್ರಮುಖ ಧ್ಯೇಯ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು, ಸಿಎಫ್‌ʼಟಿಆರ್‌ಐ ಹಲವು ದಶಕಗಳಿಂದನೂರಾರು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳಲ್ಲಿ, ಮೈಸೂರು ಪಾಕ್ ಉತ್ಪಾದನಾ ತಂತ್ರಜ್ಞಾನ ಸುಧಾರಣೆ, ರಾಗಿ ಆಧಾರಿತ ಆರೋಗ್ಯಕರ ಆಹಾರ ಉತ್ಪನ್ನಗಳು, ತ್ವರಿತ ಸಿದ್ಧವಾಗುವ (Ready-to-eat) ಆಹಾರ ತಂತ್ರಜ್ಞಾನ, ಪ್ರೋಟೀನ್ ಸಮೃದ್ಧ ಪೌಷ್ಟಿಕ ಮಿಶ್ರಣಗಳು, ಆಹಾರ ಗುಣಮಟ್ಟ ಪರೀಕ್ಷಾ ವಿಧಾನಗಳು ಸೇರಿವೆ.

ಸಿಎಫ್‌ʼಟಿಆರ್‌ಐನಿಂದ ಅಭಿವೃದ್ಧಿಯಾದ ಅನೇಕ ತಂತ್ರಜ್ಞಾನಗಳನ್ನು ದೇಶದ ಸಾವಿರಾರು ಸಣ್ಣ ಉದ್ಯಮಗಳು ಅಳವಡಿಸಿಕೊಂಡಿವೆ. ಇದು ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಸಿಎಫ್‌ʼಟಿಆರ್‌ಐ ಆವಿಷ್ಕಾರದಲ್ಲಿ ಮಾತ್ರವಲ್ಲದೆ, ತಂತ್ರಜ್ಞಾನ ಹಸ್ತಾಂತರ (Technology Transfer) ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

ಸ್ಟಾರ್ಟ್-ಅಪ್‌ಗಳಿಗೆ ಮಾರ್ಗದರ್ಶನ ಮಾಡುವುದು, ಆಸಕ್ತರಿಗೆ ಹಾಗೂ ಯುವಜನತೆಗೆ ಫುಡ್ ಪ್ರೊಸೆಸಿಂಗ್ ಘಟಕಗಳ ಸ್ಥಾಪೆ ಗೆ ಸಲಹೆ ನೀಡುವುದು, ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಲಹೆ-ಮಾರ್ಗದರ್ಶನಗಳ ಜತೆಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದು ಇವುಗಳಲ್ಲಿ ಸೇರಿವೆ.

ಜತೆಗೆ, ಈಗಾಗಲೇ ಉದ್ಯಮ ಸ್ಥಾಪಿಸಿ ಮುನ್ನಡೆಸುತ್ತಿರುವ ಉದ್ಯಮಿಗಳಿಗೆ ಕಾರ್ಯಾಗಾರ ಗಳನ್ನು ಸಹ ಈ ಸಂಸ್ಥೆ ನಡೆಸುತ್ತಿವೆ. ಸಿಎಫ್‌ʼಟಿಆರ್‌ಐ ಸಂಸ್ಥೆ ಎಂಎಸ್‌ಎಂಇ ಘಟಕ ಗಳಿಗೆ ಉತ್ಪಾದನಾ ವಿಧಾನ, ಗುಣಮಟ್ಟ ನಿಯಂತ್ರಣ ಮತ್ತು ಮಾರುಕಟ್ಟೆ ಸ್ಪರ್ಧಾತ್ಮ ಕತೆಯ ಬಗ್ಗೆ ಮಾರ್ಗದರ್ಶನ ನೀಡುತ್ತದೆ.

ಸಿಎಫ್‌ʼಟಿಆರ್‌ಐ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ತರಬೇತಿಗೂ ಪ್ರಸಿದ್ಧ. ಇದು ಅಕಾಡೆಮಿ ಆಫ್ ಸೈಂಟಿಫಿಕ್‌ ಆಂಡ್ ಇನ್ನೋವೇಟಿವ್ ರಿಸರ್ಚ್ (AcSIR) ಸಂಸ್ಥೆಯ ಜತೆ ಗೂಡಿ ಪಿಎಚ್‌ಡಿ ಮತ್ತು ಇತರ ಉನ್ನತ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ.

ವಿದ್ಯಾರ್ಥಿಗಳಿಗೆ, ಪಿಎಚ್‌ಡಿ, ಇಂಟನ್ʼಶಿಪ್, ಅಲ್ಪಾವಧಿ ತರಬೇತಿ, ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಸೇರಿದಂತೆ ಹಲವು ಕಾರ್ಯಕ್ರಮಗಳ ಸೌಲಭ್ಯವನ್ನು ಒದಗಿಸುವ ಮೂಲಕ ಸಿಎಫ್‌ʼಟಿಆರ್‌ಐ ಸಂಸ್ಥೆಯು ವಿಜ್ಞಾನಿಗಳ ಹೊಸ ಪೀಳಿಗೆಯನ್ನು ರೂಪಿಸುತ್ತಿದೆ.

ಸಿಎಫ್‌ʼಟಿಆರ್‌ಐನ ಕಾರ್ಯಗಳು ಭಾರತ ಸರಕಾರದ ಹಲವು ಯೋಜನೆಗಳಿಗೆ ನೇರವಾಗಿ ಸಂಬಂಧಿಸಿದೆ. ಆಹಾರ ಭದ್ರತಾ ಮಿಷನ್, ಪೋಷಣ ಅಭಿಯಾನ, ‘ಮಿಡ್-ಡೇ-ಮಿಲ್’ ಯೋಜನೆಗೆ ಪೌಷ್ಟಿಕ ಆಹಾರದ ಮಾರ್ಗದರ್ಶನ, ಕೃಷಿ ಮೌಲ್ಯವರ್ಧನೆ ಮೂಲಕ ಸಿಎಫ್‌ʼ ಟಿಆರ್‌ಐ ಸಂಸ್ಥೆಯ ರಾಷ್ಟ್ರದ ಪೌಷ್ಟಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಸಿಎಫ್‌ʼಟಿಆರ್‌ಐ ಭಾರತದ ಪ್ರತಿನಿಧಿಯಾಗಿ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಂಡಿದೆ. ಇದರೊಂದಿಗೆ, ಹತ್ತು ಹಲವು ಸಮಾಜಮುಖಿ ಕಾರ್ಯ ಕ್ರಮಗಳನ್ನು ಅದು ಆಯೋಜಿಸುತ್ತಿದೆ. ಗ್ರಾಮೀಣ ಮಹಿಳೆಯರಿಗೆ ಆಹಾರ ಸಂಸ್ಕರಣೆ ತರಬೇತಿ, ಸ್ವಸಹಾಯ ಸಂಘಗಳಿಗೆ ಮೌಲ್ಯವರ್ಧಿತ ಉತ್ಪನ್ನಗಳ ತರಬೇತಿ, ಪೌಷ್ಟಿಕ ಜಾಗೃತಿ ಶಿಬಿರಗಳು, ಆಹಾರ ಸುರಕ್ಷತಾ ಅರಿವು ಕಾರ್ಯಕ್ರಮಗಳಿಂದ ಸಿಎಫ್‌ʼಟಿಆರ್‌ಐ ವಿಜ್ಞಾನವನ್ನು ಸಮಾಜದ ಅಗತ್ಯಗಳಿಗೆ ಜೋಡಿಸಿದೆ ಎನ್ನಬಹುದು.

ಸಿಎಫ್‌ʼಟಿಆರ್‌ಐ ಆಹಾರ ತ್ಯಾಜ್ಯ ಕಡಿತ, ಉಪ-ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೃಷಿ ಅವಶೇಷ ಗಳಿಂದ ಮೌಲ್ಯವರ್ಧಿತ ಉತ್ಪನ್ನಗಳು, ಬಯೋ-ಆಕ್ಟಿವ್ ಸಂಯೋಗಗಳು ಮುಂತಾದ ಕಾರ್ಯಗಳು ನಡೆಯುತ್ತಿವೆ. ಭವಿಷ್ಯದಲ್ಲಿ ಸಿಎಫ್‌ʼಟಿಆರ್‌ಐ ಹತ್ತು ಹಲವು ಯೋಜನೆ ಗಳನ್ನು ರೂಪಿಸಿದ್ದು, ‘ಪ್ಲಾಂಟ್ ಬೇ ಮೀಟ್’ ಪರ್ಯಾಯಗಳು, ಫಂಕ್ಷನಲ್ ಫುಡ್ಸ್, ನ್ಯೂಟ್ರಾ ಸ್ಯೂಟಿಕಲ್ಸ್, ಡಿಜಿಟಲ್ ಫುಡ್ ಪ್ರೊಸೆಸಿಂಗ್ ತಂತ್ರಜ್ಞಾನ ಇವುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

ಮೈಸೂರು ಕೇವಲ ಅರಮನೆಗಳ ನಗರವಲ್ಲ; ಅದು ವಿಜ್ಞಾನ ಮತ್ತು ಸಂಶೋಧನೆಯ ಕೇಂದ್ರವೂ ಹೌದು. ಸಿಎಫ್‌ʼಟಿಆರ್‌ಐನಂಥ ಸಂಸ್ಥೆಗಳು ಮೈಸೂರನ್ನು ಜಾಗತಿಕ ವಿಜ್ಞಾನ ನಕ್ಷೆಯಲ್ಲಿ ಎದ್ದು ಕಾಣುವಂತೆ ಮಾಡಿವೆ. ಸಿಎಸ್‌ಐಆರ್-ಸಿಎಫ್‌ʼಟಿಆರ್‌ಐ ಮೈಸೂರು, ಭಾರತದ ಆಹಾರ ತಂತ್ರಜ್ಞಾನ ಕ್ಷೇತ್ರದ ಶಕ್ತಿಕೇಂದ್ರವಾಗಿದೆ.

ಸಂಶೋಧನೆ, ತಂತ್ರಜ್ಞಾನ ಹಸ್ತಾಂತರ, ಪೌಷ್ಟಿಕ ಅಭಿವೃದ್ಧಿ, ಉದ್ಯಮ ಬೆಂಬಲ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಸಿಎಫ್‌ʼಟಿಆರ್‌ಐ ರಾಷ್ಟ್ರದ ಆಹಾರ ಭದ್ರತೆ ಮತ್ತು ಆರ್ಥಿಕ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಇಂಥ ಹೆಮ್ಮೆಯ ಸಂಸ್ಥೆಯ ಮತ್ತೊಂದು ವಿಶೇಷವೆಂದರೆ, ಇಡೀ ದೇಶದಗುವ, ಆಹಾರ ಸಂಬಂಧಿ ಗುಣಮಟ್ಟದ ಬಗೆಗಿನ ವ್ಯಾಜ್ಯ‌ ವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ, ನಿಖರವಾಗಿ, ಸಂಶೋಧನಾ ವರದಿ ಇತ್ಯಾದಿ ವಿವರವನ್ನು ನ್ಯಾಯಾಲಯಕ್ಕೆ ನೀಡುವ ಅಧಿಕಾರವನ್ನು ಸಿಎಫ್‌ʼಟಿಆರ್‌ಐ ಹೊಂದಿದೆ.

ಊಖಖಅಐ ಎಂಬುದು ಭಾರತ ಸರಕಾರದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ನಿಯಂತ್ರಣ ಸಂಸ್ಥೆಯಾಗಿದೆ. 2006ರ ಫುಡ್ ಸೇಫ್ಟಿ ಆಂಡ್ ಸ್ಟಾಂಡರ್ಡ್ಸ್ ಆಕ್ಟ್ ಮೇರೆಗೆ ಇದು ಸ್ಥಾಪಿತವಾಗಿದ್ದು, ಎಲ್ಲಾ ಆಹಾರೋತ್ಪನ್ನಗಳ ಸುರಕ್ಷತೆ ನಿಯಮವನ್ನು ರೂಪಿಸು ತ್ತದೆ ಮತ್ತು ಸಂಸ್ಥೆಗಳನ್ನು ಪರಿಶೀಲಿಸುತ್ತದೆ.

ಸಿಎಫ್‌ʼಟಿಆರ್‌ಐ ಅನ್ನು ಊಖಖಅಐ ಆದೇಶಿತ ರೆಫರಲ್ ಫುಡ್ ಲ್ಯಾಬರೇಟರಿ ( Notified Referral Laboratory) ಆಗಿ ಗುರುತಿಸಲಾಗಿದೆ. ಇದರ ಅರ್ಥ, CFTRI-FSSAI ನ ಅಂತರ್ಗತ ಹಕ್ಕು ಪಡೆದ ಖಾದ್ಯ ಪರೀಕ್ಷೆ ಮತ್ತು ಸುರಕ್ಷತಾ ಮೌಲ್ಯಮಾಪನಕ್ಕೆ ಔಪಚಾರಿಕ ರೀತಿ ಯಲ್ಲಿ ಸಂಸ್ಥೆ ಬಳಕೆಯಲ್ಲಿದೆ.

ಭಾರತದ ಆಹಾರ ಮತ್ತು ಆರೋಗ್ಯ ವಲಯವನ್ನು ಸುರಕ್ಷತೆ, ಗುಣಮಟ್ಟದ ಮೂಲಕ ತಲೆಮಾರುಗಳ ಕಾಲದಿಂದ ಕಾಯುತ್ತ ಬರುತ್ತಿರುವ ಮೈಸೂರಿನ ಸಿಎಫ್‌ʼಟಿಆರ್‌ಐ ಸಂಸ್ಥೆಯು ಹೀಗೆ ಜನಸೇವೆ, ದೇಶಸೇವೆಗಳನ್ನು ಮುಂದುವರಿಸಲಿ, ಇಂದಿನ ಉದ್ಯಮಿಗಳು, ಯುವಜನರು, ಸಾರ್ವಜನಿಕರು ಇದರ ಸದುಪಯೋಗ ಹೊಂದುವಂತಾಗಲಿ ಎಂದು ಆಶಿಸೋಣ.