ಸಂಪಾದಕೀಯ ಸದ್ಯಶೋಧನೆ
ಶತಾವಧಾನಿ ಡಾ.ಆರ್.ಗಣೇಶ್ ಅವರು ಒಂಬತ್ತು ವ್ಯಕ್ತಿ ಚಿತ್ರಗಳನ್ನು ಒಳಗೊಂಡ ‘ಪಂಕ್ತಿಪಾ ವನರು’ ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಇದು ವ್ಯಕ್ತಿಚಿತ್ರ ಪ್ರಕಾರಕ್ಕೆ ಶ್ರೇಷ್ಠತೆಯನ್ನು ನೀಡ ಬಹುದಾದ ಕೃತಿ ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಒಬ್ಬ ವ್ಯಕ್ತಿಯನ್ನು ಕಟ್ಟಿಕೊಡುವುದು ಎಷ್ಟು ಗಂಭೀರ ಮತ್ತು ಜವಾಬ್ದಾರಿಯುತ ಕೆಲಸ ಎಂಬುದು ಈ ಕೃತಿಯನ್ನು ಓದಿದವರಿಗೆ ಅನಿಸ ದಿರದು. ಈ ಹೊಣೆಯನ್ನರಿತು ಶತಾವಧಾನಿಗಳು ಈ ಕೃತಿಯನ್ನು ಬರೆದಿರುವುದು ಗಮನಾರ್ಹ.
ಕನ್ನಡದ ಪ್ರಸಿದ್ಧ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರ ಬಗ್ಗೆ ಬರೆದಿರುವ ಅಧ್ಯಾಯದಲ್ಲಿ ಶತಾವಧಾನಿಗಳು ಒಂದು ಸಣ್ಣ ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಒಮ್ಮೆ ಭೈರಪ್ಪನವರ ಕಾದಂಬರಿ ಗಳ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಭೈರಪ್ಪನವರನ್ನು ರೈಲು ನಿಲ್ದಾಣದಲ್ಲಿ ಸ್ವಾಗತಿಸಿ ಕರೆ ತರುವ ಜವಾಬ್ದಾರಿ ಡಾ.ಗಣೇಶ್ ಅವರದ್ದಾ ಗಿತ್ತು. ಭೈರಪ್ಪನವರು ಅದನ್ನು ಅಪೇಕ್ಷಿಸಿರಲಿಲ್ಲ.
ಇದನ್ನೂ ಓದಿ: Vishweshwar Bhat Column: ಪ್ರಣಬ್ ರಾಷ್ಟ್ರಪತಿ ಆಯ್ಕೆ
“ನಾನು ನನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ತೀನಿ. ಅವರೇ ನನ್ನನ್ನು ನಿಲ್ದಾಣದಿಂದ ತಮ್ಮ ಮನೆಗೆ ಕರೆದು ಕೊಂಡು ಹೋಗ್ತಾರೆ. ಕಾರ್ಯಕ್ರಮದ ದಿನ ಅವರು ಕರೆದುಕೊಂಡು ಬರುತ್ತಾರೆ ಮತ್ತು ರೈಲನ್ನು ಹತ್ತಿಸುವ ಹೊಣೆಯನ್ನೂ ಹೊತ್ತಿದ್ದಾರೆ. ನೀವು ಈ ವಿಷಯದಲ್ಲಿ ತಲೆ ಕೆಡಿಸಿ ಕೊಳ್ಳಬೇಡಿ. ಇದಕ್ಕೆಲ್ಲ ಸಮಯ ಹಾಳು ಮಾಡದೇ ನಿಮ್ಮ ಓದು-ಬರಹ ನೋಡಿಕೊಳ್ಳಿ" ಎಂದು ಭೈರಪ್ಪನವರು ಶತಾವಧಾನಿಗಳಿಗೆ ಹೇಳಿದರು. ಆದರೆ ಸಂಘಟಕರ ಹೊಣೆಗಾರಿಕೆಯನ್ನು ಅರಿತ ಡಾ.ಗಣೇಶ್, ರೈಲು ನಿಲ್ದಾಣಕ್ಕೆ ಹೋದರು.
ಮೈಸೂರಿನ ರೈಲು ಬರಲು ಇನ್ನೂ ಸಮಯವಿತ್ತು. ಆಗ ಅಲ್ಲಿಗೆ ಬಂದ ಭೈರಪ್ಪನವರ ಸ್ನೇಹಿತರು, ಗಣೇಶರನ್ನು ಗುರುತಿಸಿ ಮಾತಾಡಿಸಿದರು. ಹಾಗೆ ಅದೂ- ಇದೂ ಮಾತಾಡುತ್ತಾ ಗಣೇಶ್, “ನಿಮಗೆ ಭೈರಪ್ಪನವರ ಪರಿಚಯ ಎಷ್ಟು ಕಾಲದಿಂದ? ಅವರ ಎಷ್ಟು ಕಾದಂಬರಿಗಳನ್ನು ಓದಿದ್ದೀರಿ?" ಎಂದು ಕೇಳಿದರು. ಅದಕ್ಕೆ ಭೈರಪ್ಪನವರ ಸ್ನೇಹಿತರು, “ಸುಮಾರು ಇಪ್ಪತ್ತೈದು ವರ್ಷಗಳಿಂದ ಅವರು ನನ್ನ ಗೆಳೆಯರು. ಆದರೆ ನಾನು ಅವರ ಒಂದು ಕಾದಂಬರಿಯನ್ನೂ ಓದಿಲ್ಲ" ಎಂದರು.
ಅದನ್ನು ಕೇಳಿ ಗಣೇಶ್ ಅವರಿಗೆ ಅತೀವ ಆಶ್ಚರ್ಯವಾಯಿತು. ಅಷ್ಟರಲ್ಲಿ ರೈಲು ಬಂದಿತು. ಭೈರಪ್ಪ ನವರೂ ಬಂದರು. ಅವರ ಸ್ನೇಹಿತರು ತಮ್ಮ ವಾಹನ ತರಲೆಂದು ಹೊರಟರು. ಆಗ ಗಣೇಶ್ ಅವರು ಭೈರಪ್ಪನವರ ಜತೆ ಮಾತಾಡುತ್ತ, “ಏನ್ಸಾರ್, ನಿಮ್ಮ ಇಷ್ಟು ದೀರ್ಘಕಾಲದ ಸ್ನೇಹಿತರು ನಿಮ್ಮ ಒಂದು ಕಾದಂಬರಿಯನ್ನೂ ಓದಿಲ್ಲವಂತೆ!
ಇದು ನನಗೆ ತುಂಬಾ ಆಶ್ಚರ್ಯ ತಂದಿತು. ಹೀಗಿದ್ದರೂ ಅವರೊಂದಿಗೆ ನಿಮ್ಮ ಸ್ನೇಹ ಹೇಗೆ ಸಾಧ್ಯ ವಾಯಿತು?" ಎಂದು ಕೇಳಿದರು. ಭೈರಪ್ಪನವರು ಅದು ಅಷ್ಟೇನೂ ಮಹತ್ವದ ವಿಷಯ ಅಲ್ಲ ವೆಂಬಂತೆ ತಮ್ಮ ನಿರುದ್ವಿಗ್ನ ಶೈಲಿಯಲ್ಲಿ, “ನನಗೆ ಸಾಹಿತಿಗಳು ಮತ್ತು ಸಾಹಿತ್ಯ ಓದುವವರು ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರಾಗಿಲ್ಲ.
ನನ್ನ ಗೆಳೆಯರೆಲ್ಲ ಹೆಚ್ಚಾಗಿ ಸಾಹಿತ್ಯದ ಜಗತ್ತಿನ ಆಚೆ ಇರುವವರೇ. ಇಷ್ಟಕ್ಕೂ ಸಾಹಿತ್ಯ ಓದುವವ ರೇ ನನಗೇಕೆ ಸ್ನೇಹಿತರಾಗಬೇಕು? ಬದುಕಿನ ಬೇರೆ ಬೇರೆ ಮುಖಗಳಿಂದ ಬಂದವರು ಸ್ನೇಹಿತ ರಾದಷ್ಟೂ ನನ್ನ ಅನುಭವಕ್ಕೆ ಸಮೃದ್ಧಿ ಸಿಗುತ್ತದೆ. ಇಷ್ಟಕ್ಕೂ ಸಾಹಿತ್ಯ ಅಂದರೆ ಏನು? After all, it is a by product of life!" ಎಂದು ಹೇಳಿದರು.
ಈ ಮಾತುಗಳನ್ನು ಕೇಳಿದ ಗಣೇಶ್ ಹೀಗೆ ಬರೆಯುತ್ತಾರೆ- “ಭಾವ-ಭಾಷೆಗಳ ಸಾಮ್ರಾಟರಾಗಿ ಹದಿನೈದಿಪ್ಪತ್ತು ರಸಘಟ್ಟಿಗಳನ್ನು ಸಾರಸ್ವತಲೋಕಕ್ಕೆ ಸಮರ್ಪಿಸಿದ ಈ ಸರಸ್ವತೀಮೂರ್ತಿಯ ಬಾಯಿಂದ ಎಂಥ ಮಾತು?! ಜೀವನವನ್ನು ಕುರಿತು ಇಂಥ ಗಟ್ಟಿಯಾದ ಅರಿವಿರುವುದರಿಂದಲೇ ಭೈರಪ್ಪನವರ ಕಾದಂಬರಿಗಳು ಜಗತ್ತಿಗೂ, ಸಾಹಿತ್ಯ ಜಗತ್ತಿಗೂ ಅಲಂಕಾರಗಳಾಗಿವೆ".