Shishir Hegde Column: ದೊಡ್ಡಣ್ಣ ಟ್ರಂಪನ ಸುಂಕಸಂಧಾನ; ಮಾರುಕಟ್ಟೆ ಕಂಪನ
ಇತ್ತ ಭಾರತ, ಯುರೋಪ್ ರಾಷ್ಟ್ರಗಳು ಮಾತ್ರ ಮನೆಯ ಅಪ್ಪ ಮಗನಂತೆ- ಅತ್ತ ಸೊಸೆಯ ಪಕ್ಷವನ್ನೂ ವಹಿಸಲಾಗದೆ, ಇತ್ತ ಅಮ್ಮನ ಪಕ್ಕಕ್ಕೂ ನಿಲ್ಲಲಾಗದೆ ಕಂಗಾಲಾಗಿವೆ. ಅಮೆರಿಕವು ಚೀನಾದ ಮೇಲೆ ಅದೆಷ್ಟು ಅವಲಂಬಿಸಿದೆ ಎಂದು ತಿಳಿಯಲು ಯಾವುದೇ ವಿಶೇಷ ಲೆಕ್ಕಾಚಾರ ಬೇಕಾಗಿಲ್ಲ. ನನ್ನದೇ ಮನೆಯ ಅಜಮಾಸು ಹದಿನೈದು ಸಾವಿರ ವಸ್ತುಗಳಲ್ಲಿ ಹೆಚ್ಚು ಕಡಿಮೆ ಎಂಟರಿಂದ ಹತ್ತು ಮಾತ್ರ ‘ಮೇಡ್ ಇನ್ ಅಮೆರಿಕ’. ಬಾಕಿ ಎಲ್ಲವೂ ‘ಮೇಡ್ ಇನ್ ಚೀನಾ


ಶಿಶಿರಕಾಲ
shishirh@gmail.com
ಮಗನ ಮದುವೆ ಈಗ ತಾನೇ ಆಗಿದೆ. ಸೊಸೆ ಮನೆಗೆ ಬಂದು ಸೇರಿದ್ದಾಳೆ. ಈಗ ಕೆಲವು ತಿಂಗಳು ಕಳೆದಿವೆ. ಬೇಡವೆಂದರೂ, ಅದೆಷ್ಟೇ ಪ್ರೀತಿಯಿದ್ದರೂ ಅತ್ತೆ ಸೊಸೆಯರ ನಡುವೆ ಚಿಕ್ಕದಾಗಿ ಮುನಿಸು, ಮನಸ್ತಾಪ ಆರಂಭವಾಗಿದೆ. ಈಗ ಇಬ್ಬರೂ ಅಸಹನೆಯೆನಿಸುವ ವಿಷಯವನ್ನು ನೇರ ಮಾತಾಡಿ ಬಗೆಹರಿಸಿಕೊಳ್ಳುತ್ತಿಲ್ಲ. ಬದಲಿಗೆ ಏನೇನೋ ಕೃತ್ಯಗಳಿಂದ ಅತ್ತೆ ಸೊಸೆ ಇಬ್ಬರೂ ಪರಸ್ಪರ ಸಂದೇಶ ರವಾನಿಸಿಕೊಳ್ಳು ತ್ತಿದ್ದಾರೆ. ಮನೆಯೆದುರಿಗಿನ ಚಪ್ಪಲಿ ಶಿಸ್ತಾಗಿ ಇಡಬೇಕೆಂದು ಅತ್ತೆ ನೇರವಾಗಿ ಸೊಸೆಗೆ ಹೇಳುತ್ತಿಲ್ಲ. ಬದಲಿಗೆ ಚಪ್ಪಲಿಯನ್ನು ತಾನೇ ಕೈಯಲ್ಲಿ ಎತ್ತಿ ಇಡುತ್ತಿದ್ದಾಳೆ. ‘ಅತ್ತೆ ಹಾಗೇಕೆ ಮಾಡುವುದು, ನೇರವಾಗಿ ಹೇಳಿದರೆ ಆಗುವುದಿಲ್ಲವಾ. ಸೊಕ್ಕು ಅವರಿಗೆ’ ಎಂದು ಸೊಸೆ ಚಪ್ಪಲಿಯನ್ನು ಎಂದರಲ್ಲಿ ಬಿಡುತ್ತಿದ್ದಾಳೆ.
ಇದೇ ರೀತಿ ಅವರಿಬ್ಬರ ನಡುವೆ ಏನೇನೋ ಸಂದೇಶ ರವಾನಿಸುವ ಕೆಲಸಗಳು. ಇಬ್ಬರೂ ನೇರವಾಗಿ ಇಂಥ ವಿಷಯದಲ್ಲಿ ಮಾತನಾಡಿಕೊಳ್ಳುವುದಿಲ್ಲ. ಇದು ಸದ್ಯ ಅಮೆರಿಕ ಮತ್ತು ಚೀನಾ ನಡುವಿನ ಪರಿಸ್ಥಿತಿ. ಅಮೆರಿಕವು ಚೀನಾವನ್ನು ಬಗ್ಗಿಸಬೇಕೆಂದು ಒಂದಿಷ್ಟು ಆಮದು ಸುಂಕ ಹಾಕಿದೆ. ಅತ್ತ ಚೀನಾ ‘ನೀನ್ಯಾವ ದೊಡ್ಡ ಗೆಂಡೆ. ನಿಂದು ಎಂಟಾಣೆಯಾದರೆ ನನ್ನದೂ ಎಂಟಾಣೆ’ ಎಂದು ಅಮೆರಿಕದಿಂದ ಚೀನಾಕ್ಕೆ ಆಮದಾಗುವ ವಸ್ತುಗಳ ಮೇಲೆ ಅಷ್ಟೇ ಸುಂಕವನ್ನು ಹೊರಿಸಿ ಕೂತಿದೆ.
ಇತ್ತ ಭಾರತ, ಯುರೋಪ್ ರಾಷ್ಟ್ರಗಳು ಮಾತ್ರ ಮನೆಯ ಅಪ್ಪ ಮಗನಂತೆ- ಅತ್ತ ಸೊಸೆಯ ಪಕ್ಷವನ್ನೂ ವಹಿಸಲಾಗದೆ, ಇತ್ತ ಅಮ್ಮನ ಪಕ್ಕಕ್ಕೂ ನಿಲ್ಲಲಾಗದೆ ಕಂಗಾಲಾಗಿವೆ. ಅಮೆರಿಕವು ಚೀನಾದ ಮೇಲೆ ಅದೆಷ್ಟು ಅವಲಂಬಿಸಿದೆ ಎಂದು ತಿಳಿಯಲು ಯಾವುದೇ ವಿಶೇಷ ಲೆಕ್ಕಾಚಾರ ಬೇಕಾಗಿಲ್ಲ. ನನ್ನದೇ ಮನೆಯ ಅಜಮಾಸು ಹದಿನೈದು ಸಾವಿರ ವಸ್ತುಗಳಲ್ಲಿ ಹೆಚ್ಚು ಕಡಿಮೆ ಎಂಟರಿಂದ ಹತ್ತು ಮಾತ್ರ ‘ಮೇಡ್ ಇನ್ ಅಮೆರಿಕ’. ಬಾಕಿ ಎಲ್ಲವೂ ‘ಮೇಡ್ ಇನ್ ಚೀನಾ’.
ಇದನ್ನೂ ಓದಿ: Shishir Hegde Column: ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ
ಕೆಲವೊಂದು ವಸ್ತುಗಳನ್ನು ಅಮೆರಿಕದಲ್ಲಿ ತಯಾರಿಸುವುದೇ ಇಲ್ಲ. ಉದಾಹರಣೆಗೆ ಅಮೆರಿಕದಲ್ಲಿ ಮಾರಾಟವಾಗುವ ಶೇ.99 ಚಪ್ಪಲಿ, ಶೂ ಚೀನಾದಿಂದ ಆಮದಾಗುತ್ತವೆ. ಮೊಬೈಲ್, ಟಿವಿ, ಪೀಠೋಪಕರಣಗಳು, ಬಕೆಟ್, ಚೊಂಬು ಹೀಗೆ ನಿತ್ಯ ಬಳಸುವ ವಸ್ತುಗಳಲ್ಲಿ ಸಿಂಹಪಾಲು ‘ಮೇಡ್ ಇನ್ ಚೀನಾ’. ಎಷ್ಟೆಂದರೆ ಸುಲಿದ ಬೆಳ್ಳುಳ್ಳಿ ಚೀನಾದಿಂದ ಆಮದಾಗುತ್ತದಪ್ಪ! ಉಳಿದದ್ದು ನೀವೇ ಅಂದಾಜಿಸಿಕೊಳ್ಳಿ. ವಾಲ್‌ಮಾರ್ಟ್ ಮೊದಲಾದ ಅಂಗಡಿಗಳಿಗೆ ಹೋದರೆ ಮುಟ್ಟಿದ್ದೆಲ್ಲ ‘ಮೇಡ್ ಇನ್ ಚೀನಾ’. ಅಮೆರಿಕವು ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕವನ್ನು ಈಗ ಏಕಾಏಕಿಯಾಗಿ ಶೇ.245ರ ಮಟ್ಟಕ್ಕೆ ಹೆಚ್ಚಿಸಿದೆ.
ಅದೆಲ್ಲವನ್ನೂ ಅಮೆರಿಕದ ನಾಗರಿಕ ಅಷ್ಟು ಹೆಚ್ಚು ಹಣಕೊಟ್ಟು ಭರಿಸಬೇಕು. ಇಲ್ಲಿನ ಗ್ರಾಹಕರ ಪರಿಸ್ಥಿತಿ ಹೀಗಿರುವಾಗ, ವಿಧಿಸಿದ ಸುಂಕದಿಂದಾಗಿ ದಿನಬಳಕೆಯ ವಸ್ತುಗಳ ಬೆಲೆ ಅಷ್ಟೇ ಏರುವು ದರಿಂದ ಕ್ರಮೇಣ ಜನರ ಕೊಳ್ಳುವಿಕೆ ತಗ್ಗಲಿದೆ. ಈ ಅಂದಾಜಿನಿಂದಾಗಿಯೇ ಚೀನಾ ಮೇಲೆ ಸುಂಕ ಹೇರಿಕೆಯದದ್ದೇ ತಡ, ಮಾರನೇ ದಿನವೇ ಅಮೆರಿಕದ ಷೇರು ಮಾರುಕಟ್ಟೆ ಹಣ್ಣಾದ ಹಲಸಿನ ಹಣ್ಣು ಧೊಪ್ಪನೆ ನೆಲಕ್ಕೆ ಬೀಳುವಂತೆ ಕೆಳಗೆ ಬಿದ್ದಿದೆ.
ಇವಿಷ್ಟಾಗುವಾಗ ಅಮೆರಿಕ- ಟ್ರಂಪ್ ಸುಂಕವನ್ನು ತಾತ್ಕಾಲಿಕವಾಗಿ 90 ದಿನ ತಡೆಹಿಡಿದಿದೆ. ಅದಾದ ಮೇಲೆ ಇಲ್ಲಿನ ಷೇರು ಮಾರುಕಟ್ಟೆ ಸದ್ಯ ಸುಧಾರಿಸಿಕೊಂಡಿದ್ದರೂ ಬಿದ್ದಲ್ಲಿಂದ ಪೂರ್ಣ ಮೇಲಕ್ಕೆದ್ದಿಲ್ಲ. ಕೆಲವು ದೇಶಗಳಿಗೆ ಬದ್ಧ ವೈರಿ ಎನ್ನುವ ಒಂದೆರಡು ದೇಶವಿರುತ್ತದೆ. ಉದಾಹರಣೆಗೆ ಭಾರತಕ್ಕೆ ಪಾಕಿಸ್ತಾನ. ದಕ್ಷಿಣ ಕೊರಿಯಾಕ್ಕೆ ಉತ್ತರ ಕೊರಿಯಾ ಇತ್ಯಾದಿ. ಅದೇ ರೀತಿ ಅಮೆರಿಕಕ್ಕೆ ರಷ್ಯಾ. ಆದರೆ ರಷ್ಯಾ ವೈರುಧ್ಯವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದ್ದು ಟ್ರಂಪ್, ಹಿಂದಿನ ಅವಧಿಯಲ್ಲಿ. ಶೀತಲ ಯುದ್ಧದ ನಂತರ ರಷ್ಯಾಕ್ಕೆ ಅಮೆರಿಕದ ಪ್ರಥಮ ವಿರೋಧಿಯ ಪಟ್ಟ ಇಂದು ಮುಂದುವರಿಸುವುದರಲ್ಲಿ ಅರ್ಥವಿರಲಿಲ್ಲ.
ಅಸಲಿಗೆ ಅದಾಗಲೇ ಚೀನಾ ನೋಡನೋಡುತ್ತಲೇ ಅಮೆರಿಕಕ್ಕೆ ಸರಿಸಮನಾಗಿ ನಿಂತಾಗಿತ್ತು. ೀನಾದ ವ್ಯವಹಾರ, ವ್ಯಾಪಾರ ಮತ್ತು ಬುದ್ಧಿ ಎಲ್ಲರಿಗೂ ತಿಳಿದಿರುವುದೇ. ಅದು ಆಧುನಿಕ ಬ್ರಿಟಿಷ್ ಈ ಇಂಡಿಯಾ ಕಂಪನಿಯಂತೆಯೇ ಹಲವಾರು ದೇಶಗಳಲ್ಲಿ ವ್ಯವಹರಿಸುತ್ತಿದೆ. ಆಫ್ರಿಕಾದ ಬಡ ರಾಷ್ಟ್ರಗಳೆಲ್ಲ ಹೆಚ್ಚು ಕಡಿಮೆ ಚೀನಾ ತೆಕ್ಕೆಗೆ ಬಿದ್ದು ಅದೆಷ್ಟೋ ಕಾಲವಾಗಿದೆ. ಅವೆಲ್ಲವೂ ಚೀನಾ ಸಾಲದಲ್ಲಿ ಸಿಕ್ಕಿಕೊಂಡಾಗಿದೆ.
ಚೀನಾ ಇಷ್ಟು ಪ್ರಬಲವಾಗಿದ್ದೇ ಅಮೆರಿಕದ ಗ್ರಾಹಕ ಕೇಂದ್ರಿತ ವ್ಯವಸ್ಥೆಯಿಂದಾಗಿ. ಅಮೆರಿಕದ ಡಾಲರ್ ಹಣದಿಂದ. ಚೀನಾ ಅದೆಷ್ಟು ಅಗ್ಗದ ಬೆಲೆಯಲ್ಲಿ ಅಮೆರಿಕಕ್ಕೆ ವಸ್ತುಗಳನ್ನು ಸರಬರಾಜು ಮಾಡುತ್ತದೆಯೆಂದರೆ, ಒಂದು ವೇಳೆ ಹತ್ತು ಡಾಲರಿನ ಅದೇ ವಸ್ತುವನ್ನು ಅಮೆರಿಕದಲ್ಲಿಯೇ ತಯಾರಿಸಬೇಕೆಂದರೆ ಇಪ್ಪತ್ತು ಡಾಲರ್ ಬೇಕಾಗುತ್ತದೆ. ಹೀಗಿರುವಾಗ ಕಳೆದ ನಾಲ್ಕೈದು ದಶಕ ದಿಂದ ಅಮೆರಿಕದ ಬಹುತೇಕ ಚಿಕ್ಕಪುಟ್ಟ ಕಾರ್ಖಾನೆಗಳೆಲ್ಲ ಬಾಗಿಲು ಬಂದ್ ಮಾಡಿವೆ.
ಆ ಕಾರ್ಖಾನೆ ಗಳೆಲ್ಲ ಅಗ್ಗದ ಚೀನಾದಲ್ಲಿ ತಲೆಯೆತ್ತಿ ನಿಂತಿವೆ. ಅಮೆರಿಕನ್ ಕಂಪನಿಗಳು ಚೀನಾ ದಿಂದ ಅವನ್ನು ಆಮದು ಮಾಡಿ ಇಲ್ಲಿ ಮಾರಾಟ ಮಾಡಿ ಲಾಭಮಾಡುತ್ತಿವೆ. ಅದಷ್ಟೇ ಅಲ್ಲ. ಅಮೆಜಾನ್ ಬಹುತೇಕ ಚೀನಾ ಆಮದು ವಸ್ತುಗಳನ್ನೇ ಮಾರುವುದು. ಅಮೆರಿಕದ ಅದೆಷ್ಟೋ ಅಂಗಡಿಗಳು ಬಾಗಿಲು ಮುಚ್ಚಲು ಅಮೆಜಾನ್ ಇತ್ತೀಚಿನ ವರ್ಷಗಳಲ್ಲಿ ಕಾರಣವಾಗಿದೆ.
ಅದಾದಮೇಲೆ ಈಗ ‘ಟೆಮು’ ಎಂಬಿತ್ಯಾದಿ ಮೊಬೈಲ್ ಅಪ್ಲಿಕೇಶನ್‌ಗಳು ಬಂದು ಅಮೆರಿಕದ ಗ್ರಾಹಕರು ಚೀನಾದ ಕಂಪನಿಗಳಿಂದಲೇ ನೇರವಾಗಿ ಖರೀದಿಸುವ ವ್ಯವಸ್ಥೆಯೂ ಈಗೆರಡು ವರ್ಷದಿಂದೀಚೆಗೆ ಬಂದಿದೆ. ಅದು ಅಮೆಜಾನ್‌ಗೂ ಹೊಡೆತ ಕೊಟ್ಟಿದೆ. ಹೀಗೆ ಅಮೆರಿಕದ ಮೇಲೆಯೂ ಚೀನಾದ್ದು ಆರ್ಥಿಕ ಆಕ್ರಮಣಕಾರಿ ನಡೆ- ವ್ಯವಹಾರ. ಚೀನಾದಿಂದ ಬಚಾವಿಲ್ಲದ ಸ್ಥಿತಿ.
ಟ್ರಂಪ್ ಹಿಂದಿನ ಅಧಿಕಾರಾವಧಿಯ ಕೊನೆಯಲ್ಲಿಯೇ ಚೀನಾ ವಿರುದ್ಧ ಸುಂಕಸಮರವನ್ನು ಸಣ್ಣಗೆ ಆರಂಭಿಸಿದ್ದರು. ಅದಾದ ಒಂದೆರಡು ತಿಂಗಳ ಕರೊನಾ ಶುರುವಾಯ್ತು. ‘ಟ್ರಂಪ್ ಸುಂಕ ವಿಧಿಸುತ್ತಾರೆ, ನಮಗೆ ಇನ್ನು ಉಳಿಗಾಲವಿಲ್ಲ’ ಎಂಬ ಕಾರಣಕ್ಕೆ ಚೀನಾ ಕೋವಿಡ್ ವೈರಸ್ ಅನ್ನು ಜಗತ್ತಿಗೆ ಹರಡಿದ್ದು ಎಂಬ ಗುಲ್ಲು ಸುದ್ದಿಯಿದೆ. ಅದೇನೇ ಇರಲಿ, ಕೋವಿಡ್ ನಂತರ ಟ್ರಂಪ್ ಸೋತು ಹೋದರು, ಅಧಿಕಾರಕ್ಕೆ ಬಂದದ್ದು ಬೈಡನ್.
ಅಮೆರಿಕದ ‘ಚೀನಾ ಲವ್’ ಯಥಾಸ್ಥಿತಿ ಮುಂದುವರಿಯಿತು. ಬೈಡನ್ ‘ಚೀನಾ ನಮ್ಮ ವಿರೋಧಿ ಯಲ್ಲ, ರಷ್ಯಾವೇ ನಮ್ಮ ಮೊದಲ ವಿರೋಧಿ’ ಎಂದರು. ಇಂದು ಮರುಸ್ಥಾಪಿಸಿದ್ದು ಉಕ್ರೇನ್ ಯುದ್ಧದಲ್ಲಿ. ಏನೇ ಇರಲಿ, ಈ ವರ್ಷ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಅತ್ತೆ-ಸೊಸೆ ಜಗಳ ಮತ್ತೆ ಶುರುವಾಗಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಮಾರನೇ ಕ್ಷಣವೇ ಮೂರ್ನಾಲ್ಕು ವಿಷಯವನ್ನು ಚೀನಾದ ಜತೆ ಬಗೆಹರಿಸಬೇಕು ಎಂದು ತಮ್ಮ ಅಧಿಕಾರಿ ದಂಡಿಗೆ ಸೂಚಿಸಿದ್ದರು.
ಮೊದಲನೆಯದು ತೈವಾನ್. ಮೈಕ್ರೋಚಿಪ್ ತಯಾರಿಸಿ ಜಗತ್ತಿಗೇ ಸರಬರಾಜು ಮಾಡುತ್ತದೆ ತೈವಾನ್. ಕಂಪ್ಯೂಟರ್, ಕಾರು, ವಿಮಾನ, ಹೀಗೆ ಇಂದು ತಯಾರಾಗುವ ಬಹುತೇಕ ಇಲೆಕ್ಟ್ರಾನಿಕ್ ಮತ್ತು ಇಲೆಕ್ಟ್ರಿಕಲ್ ಉಪಕರಣಗಳಿಗೆ ಮೈಕ್ರೋಚಿಪ್ ಬೇಕು. ಜಗತ್ತಿನ ಶೇ.90ರಷ್ಟು ಅತ್ಯಾಧುನಿಕ ಚಿಪ್ ತಯಾರಾಗುವುದು ತೈವಾನ್‌ನಲ್ಲಿ. ಹಾಗಾಗಿ ಎಲ್ಲಾ ದೇಶಗಳಿಗೂ ತೈವಾನ್ ಸ್ವತಂತ್ರವಾಗ ಬೇಕು,
ಚೀನಾ ಹಿಡಿತದಿಂದ ಹೊರಗಿರಬೇಕು.ತೈವಾನ್‌ನ ಚಿಪ್ ತಯಾರಿಕೆಯನ್ನು ನಿಯಂತ್ರಿಸುವ ಮೂಲಕ ಚೀನಾ ಜಗತ್ತಿನ ಎಲ್ಲಾ ದೇಶಗಳ ಕತ್ತು ಹಿಚುಕಬಹುದು. ಹಾಗಾಗಿ ಚೀನಾ ದೇಶವು ತೈವಾನ್‌ನ ತಂಟೆಗೆ ಹೋಗಬಾರದು. ಆದರೆ ತೈವಾನ್ ತನ್ನ ಭಾಗ ಎಂಬುದು ಚೀನಾದ ವಾದ. ಚೀನಾ ಅಲ್ಲಿ ಮಾಡದ ಉಪದ್ರವಿಲ್ಲ.
ಇನ್ನೊಂದು ‘ಟಿಕ್ ಟಾಕ್’. ಬಹುತೇಕ ಎಲ್ಲಾ ಅಮೆರಿಕನ್ನರು ಪ್ರೀತಿಸುವ ಈ ಸೋಶಿಯಲ್ ಮೀಡಿಯಾ ಚೀನಿಯರದ್ದು. ಈ ಮೂಲಕ ಅಮೆರಿಕದ ಎಲ್ಲರ ಮೊಬೈಲ್‌ನಲ್ಲಿರುವ ಮಾಹಿತಿ ಯನ್ನು ಚೀನಾ ಕದಿಯುತ್ತಿದೆ, ಹಾಗಾಗಿ ಅದನ್ನು ಅಮೆರಿಕಕ್ಕೆ ಮಾರಬೇಕು ಎಂದು ಟ್ರಂಪ್ ವರಾತ. ಇನ್ನೊಂದು ವಿಷಯ ಮಾದಕ ಡ್ರಗ್ಸ್ ಫಂಟನಿಲ್‌ಗೆ ಸಂಬಂಧಿಸಿದ್ದು. ಅಮೆರಿಕದಾದ್ಯಂತ ಕಳ್ಳವಂತಿಕೆಯಲ್ಲಿ ಮಾರಾಟವಾಗುವ ಫಂಟನಿಲ್ ಚೀನಾದಲ್ಲಿ ತಯಾರಾಗಿ, ಬೇರೆ ಬೇರೆ ಮಾರ್ಗದ ಮೂಲಕ ಅಮೆರಿಕಕ್ಕೆ ತಲುಪುತ್ತದೆ. ಹೀಗೆ ಚೀನಾ ಅಮೆರಿಕನ್ನರ ಮಾಹಿತಿ ಕದಿಯುತ್ತಿದೆ,
ಮೈಕ್ರೋಚಿಪ್‌ನ ಮೇಲಿನ ಹಿಡಿತ ಹೊಂದಿದೆ, ಅಮೆರಿಕನ್ನರ ಆರೋಗ್ಯದ ಮೇಲೆ ಫಂಟನಿಲ್ ಹೊಡೆತ ಕೊಡುತ್ತಿದೆ, ಇದೆಲ್ಲವನ್ನೂ ನಿಲ್ಲಿಸಬೇಕು ಎಂಬ ಅಮೆರಿಕದ ಸಂದೇಶ ಮಾತ್ರ ನೇರ ಮಾತುಕತೆಯಲ್ಲಿಲ್ಲ. ಬದಲಿಗೆ ಟ್ರಂಪ್ ಮೊದಲು ಮಾಡಿದ ಕೆಲಸವೆಂದರೆ ಚೀನಾದ ಮೇಲೆ ಸುಂಕ ಹೇರಿದ್ದು. ಟ್ರಂಪ್ ಮೊದಲಿಗೆ ಸುಂಕದ ಸಂಧಾನಕ್ಕೆ ಮುಂದಾದದ್ದು ಅಕ್ಕಪಕ್ಕದ ದೇಶಗಳಾದ ಕೆನಡಾ ಮತ್ತು ಮೆಕ್ಸಿಕೋ ಜತೆ. ಮೊದಲು ಸುಂಕ ಹೇರುವುದು, ಆಮೇಲೆ ಸಂಧಾನಕ್ಕೆ ಕೂರುವುದು- ಇದು ಟ್ರಂಪ್ ಯೋಜನೆ. ಹೇಳಿ ಕೇಳಿ ಮೆಕ್ಸಿಕೋ ಬಡದೇಶ. ಅಮೆರಿಕದ ಮೇಲೆಯೇ ಸಂಪೂರ್ಣ ಅವಲಂಬಿತ. ಹಾಗಾಗಿ ಅಮೆರಿಕ ವಿಧಿಸಿದ ಸುಂಕಕ್ಕೆ ಹೆದರಿ ಅಲ್ಲಿನ ಸರಕಾರ ಟ್ರಂಪ್ ಹೇಳಿದ್ದನ್ನು ಕೇಳಿ ಎಲ್ಲದಕ್ಕೂ ಓಕೆ ಎಂದು ಬಿಟ್ಟಿತು.
ಕೆನಡಾ ತಕರಾರೆಬ್ಬಿಸಿ ಇಂದಿಗೂ ಅಳುತ್ತಲೇ ಇದೆ. ಇವೆಲ್ಲ ಸುಂಕದ ಸಂಧಾನ ಕೇವಲ ಚೀನಾದ ಜತೆಗಿನ ಸುಂಕದ ಯುದ್ಧಕ್ಕೆ ತಾಲೀಮು ಇದ್ದಂತಿದೆ. ಆದರೆ ಚೀನಾವನ್ನು ಬಗ್ಗುಬಡಿಯುವುದು ಸುಲಭವೇನಲ್ಲ. ಅದು ಎರಡನೇ ಆರ್ಥಿಕ ಶಕ್ತಿ.
ಅಮೆರಿಕದ ಸ್ನೇಹಿತ ರಾಷ್ಟ್ರಗಳಿಗೆ ಚೀನಾ ಅಷ್ಟಕ್ಕಷ್ಟೇ. ಅವೆಲ್ಲಕ್ಕೂ ಚೀನಾ ಭೀತಿಯೇ. ಏಕೆಂದರೆ ಯುರೋಪ್ ಸಾಕಷ್ಟು ವಿಷಯಗಳಲ್ಲಿ ಆಫ್ರಿಕಾ ದೇಶಗಳನ್ನು ಅವಲಂಬಿಸಿದೆ. ಅಲ್ಲ ಚೀನಾ ಬೇರೂರಿ ನಿಂತಿದೆ. ಇತ್ತ ಅಮೆರಿಕದ ಸ್ನೇಹಿತ ರಾಷ್ಟ್ರ, ಚೀನಾ ಎಂದರೆ ಅಷ್ಟಕ್ಕಷ್ಟೇ ಎಂದಿರುವ ಭಾರತಕ್ಕೆ ಕೂಡ ಚೀನಾ ಇಂದಲ್ಲ ನಾಳೆ ಆಪತ್ತೇ. ಆದರೆ ಟ್ರಂಪ್ ಚೀನಾದ ಮೇಲೆ ಮಾತ್ರವಲ್ಲ, ಸಿಕ್ಕ ಸಿಕ್ಕ ದೇಶಗಳ ಮೇಲೆ ಕಂದಾಯ ಏರಿಸಿ ಕೂತಿದ್ದಾರೆ.
ಟ್ರಂಪ್ ಮಾತುಕತೆಯ ಟೇಬಲ್ಲಿಗೆ ಆಹ್ವಾನಿಸುವುದೇ ಹೀಗೆ. ಹಾಗಾಗಿ ಈ ಗಲಾಟೆಯಲ್ಲಿ ಬೇರೆ
ದೇಶಗಳು ಅಮೆರಿಕದ ಬೆನ್ನಿಗೆ ನಿಂತು ಚೀನಾವನ್ನು ಎದುರಿಸುವ ಬದಲು, ಮೊದಲು ತಾವು ಹೇಗೆ ಅಮೆರಿಕದ ಜತೆ ವ್ಯವಹಾರ ಸರಿಮಾಡಿಕೊಳ್ಳಬಹುದುಎಂದೇ ಹೆಣಗಾಡುತ್ತಿವೆ. ಹಾಗಾಗಿ ಈ ತೆರಿಗೆ ಸಂಧಾನದಲ್ಲಿ ಅಮೆರಿಕ ಒಂಟಿಯಾಗಿದೆ.
ಅಮೆರಿಕ ಇದೆಲ್ಲವನ್ನೂ ಡಾಲರ್ ಬಲದಿಂದ ತಕ್ಕಮಟ್ಟಿಗೆ ಅರಗಿಸಿಕೊಳ್ಳಬಹುದು. ಆದರೆ ಇಂದು ಸಮಸ್ಯೆ ಇದೆ. ಸದ್ಯ ಟ್ರಂಪ್ ಹೇಳುವುದೇನೆಂದರೆ, ‘ನಾವು ವಿಧಿಸಿದ ಹೆಚ್ಚಿನ ಸುಂಕದಿಂದಾಗಿ ಚೀನಾ ದಿಂದ ಮತ್ತು ಅನ್ಯದೇಶಗಳಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳು ತುಟ್ಟಿಯಾಗುತ್ತವೆ. ಮೂಲಕ ಸ್ವದೇಶಿ ಉತ್ಪಾದನೆ ಹೆಚ್ಚುತ್ತದೆ. ಅಮೆರಿಕವನ್ನು ಬಿಟ್ಟು ಚೀನಾಕ್ಕೆ ಹೋದ ಕಾರ್ಖಾನೆ ಗಳು ಅಮೆರಿಕಕ್ಕೆ ಮರಳುತ್ತವೆ’ ಎಂದು. ಆದರೆ ಅದೆಲ್ಲ ದಿನಬೆಳಗಾಗುವುದರೊಳಗೆ ಸಂಭವಿಸುವು ದಿಲ್ಲ.
ಕಂಪ್ಯೂಟರ್ ಮೈಕ್ರೋಚಿಪ್ ಅನ್ನೇ ತೆಗೆದುಕೊಳ್ಳೋಣ. ಒಂದು ಮೈಕ್ರೋಚಿಪ್ ಕಾರ್ಖಾನೆ ಹೊಸತಾಗಿ ನಿರ್ಮಾಣಗೊಂಡ ಮೇಲೆ ಪೂರ್ಣ ಕಾರ್ಯನಿರ್ವಹಿಸಲು ಕನಿಷ್ಠ ನಾಲ್ಕೈದು ವರ್ಷವೇ ಬೇಕು. ಅದಕ್ಕಿಂತ ವೇಗದಲ್ಲಿ ಮಾಡಲಿಕ್ಕೆ ಅಸಂಭವ. ಅದೇ ರೀತಿ ಉಳಿದ ಕಾರ್ಖಾನೆ ಗಳಿಗೂ ಸಮಯ ಬೇಕು. ಅಷ್ಟೇ ಅಲ್ಲ, ಅವು ಅಮೆರಿಕದಲ್ಲಿ ನಿರ್ಮಾಣವಾಗಬೇಕೆಂದರೆ ಸರಕಾರದ ಸಹಾಯ ಬೇಕು ಇತ್ಯಾದಿ. ಆದರೆ ಸದ್ಯ ಅಮೆರಿಕದ ಬಡ್ಡಿದರ ಕೋವಿಡ್ ಮೊದಲಿನದಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿದೆ. ಅಲ್ಲದೆ ಅಮೆರಿಕದಲ್ಲಿ ಚೀನಾದಷ್ಟು ಜನರೇ ಇಲ್ಲ.
ಹೀಗಿರುವಾಗ ಅಮೆರಿಕಕ್ಕೆ ಸ್ವಾವಲಂಬಿಯಾಗುವುದು ಬಹಳ ಕಷ್ಟದ ಕೆಲಸ. ಚೀನಾದಿಂದ ವಿಮುಕ್ತಿ ಸದ್ಯಕ್ಕೆ ಅಸಾಧ್ಯ. ಅದಾಗ್ಯೂ ಕಾರ್ಖಾನೆಗಳು ಅಮೆರಿಕದಲ್ಲಿಯೇ ತೆರೆದುಕೊಂಡರೆ ಇಂದಲ್ಲ ನಾಳೆ ಅವು ಮತ್ತೆ ಚೀನಾದ ಕಾರ್ಖಾನೆಗಳ, ಅಗ್ಗದ ವಸ್ತುಗಳ ಮುಂದೆ ಸೆಣೆಸಾಡಲೇಬೇಕು. ಅಸಲಿಗೆ ಟ್ರಂಪ್ ಇದೆಲ್ಲವನ್ನೂ ಮಾಡಿದ್ದು ಸಂಧಾನಕ್ಕೋಸ್ಕರ ಎಂಬುದು ಈಗ ಸ್ಪಷ್ಟ. ಏಕೆಂದರೆ ಶೇ.45-50 ಸುಂಕಕ್ಕೆ ಯಾವುದೇ ಲೆಕ್ಕವೇ ಇಲ್ಲ. ಅಲ್ಲದೆ ಕಂಡ ಕಂಡ ದೇಶಗಳ ಮೇಲೆಲ್ಲ ಈ ರೀತಿ ಮನಸಿಗೆ
ಬಂದಷ್ಟು ತೆರಿಗೆ ಹಾಕಿದರೆ ಆ ಹೊಡೆತವನ್ನು ಅಮೆರಿಕವೇ, ಅಮೆರಿಕನ್ನರೇ ತಿನ್ನಬೇಕಾಗುತ್ತದೆ.
ಈಗಾಗಲೇ ಸುಂಕ ವಿಧಿಸಲಾಗಿದೆ ಎಂದಾದ ಮಾರನೆಯ ದಿನವೇ ಅಮೆರಿಕ ಷೇರು ಮಾರುಕಟ್ಟೆ ಕುಸಿದಿದ್ದು ಇನ್ನು 90 ದಿನದ ನಂತರ ಲಾಗುವಾದರೆ, ಮತ್ತೊಂದು ಆರ್ಥಿಕ ಮುಗ್ಗಟ್ಟು ಪ್ರಪಂಚ ವನ್ನೆಲ್ಲ ಬಾಧಿಸುವುದು ಶತಃಸಿದ್ಧ. ಆದರೆ ಹಾಗಾಗುವುದಿಲ್ಲ. ಏಕೆಂದರೆ ಇದೆಲ್ಲವನ್ನೂ ಟ್ರಂಪ್ ಮಾಡುತ್ತಿರುವುದೇ ಚೀನಾ ವನ್ನು ಸರಿದಾರಿಗೆ, ಮಾತುಕತೆಗೆ ಕರೆತರಬೇಕೆಂದು. ಆದರೆ ಚೀನಾ ಮಾತನಾಡುತ್ತಲೇ ಇಲ್ಲ.
ಈ ತೆರಿಗೆ ಯುದ್ಧವನ್ನು ಅಮೆರಿಕ ಏಕಾಂಗಿಯಾಗಿ ಎದುರಿಸಲಾರದು ಎಂಬುದು ಖುದ್ದು ಟ್ರಂಪ್ ಗೂ, ಅಮೆರಿಕ ಆಡಳಿತಕ್ಕೂ ಚೆನ್ನಾಗಿಯೇ ಗೊತ್ತು. ಆ ಕಾರಣಕ್ಕೆ ಅಮೆರಿಕವು ಜಪಾನ್, ದಕ್ಷಿಣ ಕೊರಿಯಾ, ಭಾರತ, ತೈವಾನ್, ಯುರೋಪ್ ದೇಶಗಳ ಜತೆಗಿನ ಪ್ಯಾಚಪ್ ಸಂಧಾನ ಆರಂಭಿಸಿದೆ. ಟ್ರಂಪ್ ಹಿಂದಿನ ಸೋಮವಾರ ಚೀನಾದ ಮೇಲಿನ ಸುಂಕ ಸರಿಯಾಗಿಯೇ ಕೆಲಸ ಮಾಡುತ್ತಿದೆ ಎಂದು ಹೇಳಿ ಕೊಂಡಿದ್ದರು.
ಅದಾದ 48 ಗಂಟೆಗಳಲ್ಲಿಯೇ ಮೊಬೈಲ್ ಫೋನ್, ಕಂಪ್ಯೂಟರ್ ಇವಕ್ಕೆಲ್ಲ ಸುಂಕವಿಲ್ಲ ಎಂದು ತಾವಾಗಿಯೇ ಬಾಗಿದ್ದಾರೆ. ಅದಾದ ಮೇಲೆ ಚೀನಾ ಕೂಡ ಸ್ವಲ್ಪ ಬಾಗಿದೆ. ಒಟ್ಟಾರೆ ಇವರನ್ನು ಅವರು, ಅವರನ್ನು ಇವರು ಬಗ್ಗಿಸುತ್ತಿದ್ದಾರೆ. ಇದರಿಂದಾಗಿ ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆ ತಗ್ಗಿ ಬಗ್ಗಿ ನಡೆಯುತ್ತಿದೆ. ಸದ್ಯ ಅಮೆರಿಕ ಮತ್ತು ಚೀನಾ ನಡುವಿನದು ಸುಮಾರು 640 ಬಿಲಿಯನ್ ಡಾಲರ್ ವ್ಯವಹಾರ. ಹೆಚ್ಚು ಕಡಿಮೆ ಐವತ್ನಾಲ್ಕು ಲಕ್ಷ ಕೋಟಿ ರುಪಾಯಿ. ಅದರಲ್ಲಿ ಅಮೆರಿಕ 180 ಬಿಲಿಯನ್‌ನಷ್ಟು ಚೀನಾಕ್ಕೆ ರಪ್ತು ಮಾಡುತ್ತದೆ.
ಚೀನಾದಿಂದ 460 ಬಿಲಿಯನ್ ಡಾಲರ್ ವಸ್ತುಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತದೆ. ಇದರರ್ಥ ಅಮೆರಿಕದ ಸುಂಕ ಚೀನಾಕ್ಕೆ ಹೊಡೆತವೇನೋ ಕೊಡಲಿದೆ, ಆದರೆ ಅಮೆರಿಕದ ಅವಲಂಬನೆಯೂ ಅಷ್ಟೇ ಇದೆ. ಅತ್ತೆ-ಸೊಸೆ ಗಲಾಟೆಯಲ್ಲಿ ನಷ್ಟ ಇಬ್ಬರಿಗೂ, ಜತೆಯಲ್ಲಿ ಮನೆಯ ಎಲ್ಲರಿಗೂ. ಇದೆಲ್ಲದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ಏನಾಗಬೇಕಿದೆ ಎಂಬ ಪ್ರಶ್ನೆ ಬರಬಹುದು.
ಒಂದು ನೆನಪಿಡಬೇಕು- ಏನೆಂದರೆ ಬೆಂಗಳೂರಿನ ಐಟಿ ಮತ್ತು ಬಿಟಿ ವ್ಯವಹಾರ ನಿಂತಿರುವುದೇ ಅಮೆರಿಕದ ಕಂಪನಿಗಳ ಮೇಲೆ. ಈಗಾಗಲೇ ಈ ಸುಂಕದ ಗಲಾಟೆಯಿಂದಾಗಿ ಅದೆಷ್ಟೋ ಪ್ರಾಜೆPಗಳು ಸದ್ಯ ನಿಂತಿವೆ. ಈ ವರ್ಷ ಬಹುತೇಕ ಅಮೆರಿಕನ್ ಕಂಪನಿಗಳು ತಮ್ಮೆಲ್ಲ ವೆಚ್ಚವನ್ನು ನಿಯಂ ತ್ರಿಸುತ್ತಿವೆ. ನಿಮಗೊಂದಿಷ್ಟು ಲೆಕ್ಕಾಚಾರ ತಿಳಿದಿರಲಿ. ಕರ್ನಾಟಕದ ಶೇ.60ರಷ್ಟು ಆದಾಯ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶದಿಂದ ಬರುತ್ತದೆ. ಬೆಂಗಳೂರಿನ ಆದಾಯ ಎಂದರೆ ಅಲ್ಲಿ ಐಟಿ-ಬಿಟಿಯದೇ ಸಿಂಹಪಾಲು. ಬೆಂಗಳೂರು ಸುಮಾರು 12 ಲಕ್ಷ ಕೋಟಿ ರುಪಾಯಿಯ ಸಾಫ್ಟ್ ವೇರ್ ಕೆಲಸವನ್ನು ಮಾಡಿಕೊಡುತ್ತದೆ.
ಕಳೆದ ವರ್ಷವಷ್ಟೇ ಬೆಂಗಳೂರಿನ ಸಾಫ್ಟ್ ವೇರ್ ಉದ್ಯಮ ಶೇ.27ರಷ್ಟು ವೃದ್ಧಿಯಾಗಿದೆ. ಬೆಂಗಳೂ ರಿನ ಐಟಿ-ಬಿಟಿಯ ಆದಾಯದ ಶೇ.65ರಷ್ಟು ಭಾಗ ಅಮೆರಿಕನ್ ಕಂಪನಿಗಳಿಂದ ಬರುವುದು. ಹೀಗಾಗಿ ಭಾರತದ ಮಟ್ಟಿಗೆ, ಅದರಲ್ಲಿಯೂ ಕರ್ನಾಟಕ-ಬೆಂಗಳೂರಿನ ಮಟ್ಟಿಗೆ ಅಮೆರಿಕ ಆರ್ಥಿಕತೆ ಬಹಳ ಮಹತ್ವದ್ದು. ಅಮೆರಿಕದ ಡಾಲರ್ ಎದುರು ರುಪಾಯಿ ಕುಸಿದಷ್ಟೂ ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಗೆ ಲಾಭ.
ಏಕೆಂದರೆ ಒಂದು ಡಾಲರ್‌ಗೆ ಬರುವ ರುಪಾಯಿ ಹೆಚ್ಚಾಗುತ್ತದೆ. ಅಂತೆಯೇ ಅಮೆರಿಕದ ಆರ್ಥಿಕ ಹಿನ್ನಡೆ ಎಂದರೆ ಅದು ಬೆಂಗಳೂರಿನ ಕಂಪನಿಗಳ ಹಿನ್ನಡೆ. ಇದೆಲ್ಲ ಬಿಸಿ ಬೆಂಗಳೂರಿಗೆ ಮೊದಲು ಮುಟ್ಟುತ್ತದೆ. ಈಗ ಅಮೆರಿಕದ ಭಾರತದ ಅವಲಂಬನೆ ಕೇವಲ ಐಟಿ-ಬಿಟಿ ಮಾತ್ರವಲ್ಲ. ಗುಜರಾತಿನ ವಜ್ರ ಮತ್ತು ಇನ್ನಿತರ ಆಭರಣದ ವ್ಯವಹಾರ (ಶೇ.10), ಔಷಧಿ (ಶೇ.9), ಇಲೆಕ್ಟ್ರಾನಿಕ್ಸ್, ಬಟ್ಟೆ ಇವೆಲ್ಲ ವ್ಯವಹಾರ- ಒಟ್ಟಾಗಿ ಸರಿಸುಮಾರು 77 ಬಿಲಿಯನ್ ಡಾಲರ್ ಎಂದರೆ 6.5 ಲಕ್ಷ ಕೋಟಿ ರುಪಾಯಿ ವ್ಯವಹಾರವನ್ನು ಭಾರತ ಮಾಡುತ್ತದೆ.
ಅವುಗಳ ಮೇಲಿನ ಸುಂಕ ಮತ್ತು ಅವುಗಳ ತಗ್ಗಿದ ಬೇಡಿಕೆ ಇವೆಲ್ಲ ಭಾರತದ ಆರ್ಥಿಕತೆಯ ಮೇಲೂ ಹೊಡೆತ ನೀಡಲಿದೆ, ಏಳ್ಗೆಯ ವೇಗ ಕುಗ್ಗಲಿದೆ. ಆ ಕಾರಣಕ್ಕೇ ಭಾರತದ ಷೇರು ಮಾರುಕಟ್ಟೆ ಕೆಲ ದಿನದಿಂದ ಮೇಲೆಕೆಳಗಾಗುತ್ತಿರುವುದು. ‘ಕೋಣ ಕೆಳಗಿಳಿದರೆ ಎಮ್ಮೆಗೆ ಬರೆ’- ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ಹಾಗಾಗಿ ಈ ಅಮೆರಿಕದ, ಟ್ರಂಪ್‌ರ ಸುಂಕದ ಕಟ್ಟೆಯ ಮಾತುಕತೆಗಳು, ಜಗಳಗಳು ಬೇಗ ಮುಗಿದರೆ ಎಲ್ಲರಿಗೂ ಒಳ್ಳೆಯದು. ಕನ್ನಡಿಗರ ಮಟ್ಟಿಗಂತೂ ಈ ಬಿಸಿ ಬೆಂಗಳೂರಿಗೆ ಮುಟ್ಟುವುದರೊಳಗೆ ಶಮನವಾದರೆ ಜನರಿಗೂ ಒಳಿತು, ಸ್ಕೀಮುಗಳಿಗೂ ಒಳಿತು!