ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M J Akbar Column: ಬಿಹಾರದಿಂದ ಬಂಗಾಳದವರೆಗೆ ಹಬ್ಬಿರುವ ಚುನಾವಣೆಯ ಮಾಯೆ...

ಬಂಗಾಳದಲ್ಲೂ ಯಾರೋ ಒಬ್ಬರು ಗೆಲ್ಲುತ್ತಾರೆ. ಆದರೆ ಆ ರಾಜ್ಯ ಈಗಾಗಲೇ ಸೋತಂತೆ ಕಾಣಿಸುತ್ತಿದೆ. ಕೆಸರಿನಲ್ಲಿ ಸಿಲುಕಿದವನೊಬ್ಬ ಯಾವ ಭರವಸೆಯೂ ಇಲ್ಲದೆ, ಮೇಲೆದ್ದು ಬರುವ ಆಸಕ್ತಿಯೂ ಇಲ್ಲದೆ, ಅಲ್ಲೇ ಬಿದ್ದುಕೊಂಡಿರುವಂತೆ ನನಗದು ಕಾಣಿಸುತ್ತದೆ. ನಿಜಕ್ಕೂ ಬೇಸರದ ಸಂಗತಿ. ನನಗೆ ಇನ್ನೂ ಸ್ವಲ್ಪ ಹೆಚ್ಚೇ ಬೇಸರ ಯಾಕೆಂದರೆ ಅದು ನಾನು ಹುಟ್ಟಿದ ರಾಜ್ಯ. ನನ್ನ ಬದುಕಿನ ಅತ್ಯಂತ ಸಂತೋಷಕರ ವರ್ಷಗಳನ್ನು ಕೊಲ್ಕತ್ತಾದಲ್ಲಿ ಕಳೆದಿದ್ದೇನೆ.

ಬಿಹಾರದಿಂದ ಬಂಗಾಳದವರೆಗೆ ಹಬ್ಬಿರುವ ಚುನಾವಣೆಯ ಮಾಯೆ...

-

Ashok Nayak Ashok Nayak Nov 5, 2025 8:24 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಭಾರತೀಯ ಕ್ಯಾಲೆಂಡರ್ ವರ್ಷಕ್ಕೆ ಪ್ರಜಾಪ್ರಭುತ್ವವೆಂಬ ಈ ಅದ್ಭುತ ವ್ಯವಸ್ಥೆ ಒಂದು ಹೆಚ್ಚುವರಿ ಋತುವನ್ನು ಸೇರಿಸಿದೆ. ಅದು ಕರಾರುವಾಕ್ಕಾಗಿ ಸಮಯಕ್ಕೆ ಸರಿಯಾಗಿ ಬಂದು ಹೋಗುವ ಋತು ವಲ್ಲ; ಆಗಾಗ ಬೇರೆ ಬೇರೆ ಅವಧಿಯಲ್ಲಿ ಬರುವ ಋತು. ಯಾವಾಗಲೂ ಬರುವ ಐದು ಋತುಗಳು ನಮಗೆ ಗೊತ್ತು: ಮಜಾ ಕೊಡುವ ಚಳಿಗಾಲ, ಚೇತೋಹಾರಿ ವಸಂತಕಾಲ, ಗೋಳು ಹೊಯ್ದು ಕೊಳ್ಳುವ ಬೇಸಗೆ ಕಾಲ, ಹಠಮಾರಿ ಮಳೆಗಾಲ.

ಐದನೆಯ ಋತು ಹಬ್ಬಗಳದು. ಕೊನೆಯ ಮಳೆ ಮತ್ತು ಮೊದಲ ಚಳಿಯ ಸೊಗಸಾದ ಕುಳಿರ್ಗಾಳಿಯ ನಡುವಿನ ಒಂದು ತಿಂಗಳ ಅವಧಿಯಲ್ಲಿ ಹಬ್ಬಗಳ ಅಬ್ಬರ. ಅಕ್ಟೋಬರ್-ನವೆಂಬರ್‌ನಲ್ಲಿ ಈ ಋತು ಬಂದು ಹೋಗುತ್ತದೆ. ದೈನಂದಿನ ಜಂಜಡಗಳನ್ನು ಸಾಧ್ಯವಾದಷ್ಟು ಬದಿಗಿಟ್ಟು ನಮ್ಮ ನಮ್ಮ ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಪೊರೆಯುವ ಹಬ್ಬಗಳನ್ನು ನಾವು ಖುಷಿಯಿಂದ ಆಚರಿಸುತ್ತೇವೆ.

ಈ ಋತುಗಳ ಪಟ್ಟಿಗೆ ಆರನೆಯದನ್ನು ಸೇರಿಸಿದ ನಮ್ಮ ಸಂವಿಧಾನಕ್ಕೆ ಧನ್ಯವಾದ ಹೇಳಬೇಕು. ಅದು ಚುನಾವಣೆಯ ಋತು. ಮೊದಲು ಅರ್ಧ ದಶಕಕ್ಕೊಮ್ಮೆ ಈ ಋತು ಬರುತ್ತಿತ್ತು. ಮತದಾರರು ಚೆಂದದ ಬಟ್ಟೆ ಧರಿಸಿ ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಿದ್ದರು. ಆದರೆ, ಒಳ್ಳೆಯ ಭಾರತೀಯರಿಗೆ ಸಹಜವಾಗಿಯೇ ಒಳ್ಳೆಯ ಆಯ್ಕೆ ಬೇಕು.

ಹೀಗಾಗಿ ಚುನಾವಣೆಗಳು ಈಗ ಹೆಚ್ಚು ಕಮ್ಮಿ ವರ್ಷಕ್ಕೊಮ್ಮೆ ಒಂದಲ್ಲಾ ಒಂದು ರಾಜ್ಯದ ವಿಧಾನ ಸಭೆಗೆ ನಡೆಯುತ್ತವೆ. ಅವುಗಳ ಉದ್ದೇಶ ಸ್ಥಳೀಯವಾಗಿದ್ದರೂ, ವಿಷಯ ರಾಷ್ಟ್ರೀಯವಾಗಿರುತ್ತದೆ. ಚುನಾವಣೆಯ ರಣರಂಗದಲ್ಲಿ ಸಿಟ್ಟು ಮಡುಗಟ್ಟಿದ್ದರಂತೂ ಅದರ ಸದ್ದು ಇಡೀ ದೇಶದ ಕಾಫಿ ಕೆಫೆಗಳು ಹಾಗೂ ಔತಣ ಕೂಟಗಳಿಗೂ ಪ್ರಯಾಣಿಸುತ್ತದೆ.

ಇದನ್ನೂ ಓದಿ: M J Akbar Column: ಔರಂಗಬೇಬನ ಬದುಕಿನಲ್ಲೂ, ಸಾವಿನ ಬಳಿಕವೂ ಸತ್ಯವಾದ ಭವಿಷ್ಯವಾಣಿ

ರಾಜಕೀಯದ ವಿಷಯದಲ್ಲಿ ನಮಗೆ ಪಕ್ಷಪಾತಿಯಾಗುವುದು ಇಷ್ಟ. ಈ ಸಂಗತಿಯೇ ಪ್ರಜಾ ಪ್ರಭುತ್ವವನ್ನು ಆರೋಗ್ಯದಿಂದ ಇರಿಸುತ್ತದೆ. ಉದಾಸೀನತೆಯೇ ಪ್ರಜಾಪ್ರಭುತ್ವದ ಸಾವು. ವಿಧಾನ ಸಭೆ ಚುನಾವಣೆಗಳು ಹಗ್ಗ ಬಿಚ್ಚಿದ ಟಗರಿನಂತೆ ದೇಶಾದ್ಯಂತ ಆಗಾಗ ಕುಪ್ಪಳಿಸುತ್ತಿರುತ್ತವೆ. ಅಧಿಕಾರದ ಹಣಾಹಣಿಯಲ್ಲಿ ಕಾವು ಸಹಜ. ದಿನ ಕಳೆದಂತೆ ಚುನಾವಣೆಯ ಬಿಸಿ ಏರುತ್ತಲೇ ಹೋಗುತ್ತದೆ. ಅದು ಸೋತವರ ಸಂಪತ್ತಿನ ಮುಂದೆ ತಣ್ಣಗಾಗುತ್ತದೆ. ಗೆದ್ದವರು ಅದರ ಖುಷಿಯನ್ನು ಅನುಭಸುವುದು ಒಂದೆರಡು ದಿನಗಳಷ್ಟೆ. ನಂತರ ಈ ಗೆಲುವಿಗೆ ತೆತ್ತ ಬೆಲೆಯ ಬಗ್ಗೆ ಮುಂದಿನ ಚುನಾವಣೆ ಬರುವವರೆಗೂ ಯೋಚಿಸುತ್ತಲೇ ಇರುತ್ತಾರೆ.

ಬಿಹಾರದಲ್ಲಿ ಚುನಾವಣೆ ನಡೆದು ಇಷ್ಟು ಬೇಗ ಐದು ವರ್ಷ ಆಗಿಹೋಯಿತಾ? ಏಕೆ 2025ರ ಚುನಾವಣೆ ಬಿಹಾರದ ಈ ಹಿಂದಿನ ಅನೇಕ ಚುನಾವಣೆಗಳ ನಿರಾಶಾದಾಯಕ ಮರುಹುಟ್ಟಿನಂತೆ ಕಾಣಿಸುತ್ತಿದೆ? ಹೆಸರುಗಳು ಬದಲಾದರೂ ಅದದೇ ರೀತಿಯ ವ್ಯಕ್ತಿಗಳು ಕಾಣಿಸುತ್ತಿದ್ದಾರೆ. ಅವರು ಮಾಡುವ ಭಾಷಣದ ಧ್ವನಿ ಬೇರೆಯಿದ್ದರೂ ವಿಷಯಗಳು ಅವವೇ ಕೇಳಿಸುತ್ತಿವೆ.

ಸೋಷಿಯಲ್ ಮೀಡಿಯಾದಲ್ಲಿ ಅದೇ ಹಳೆಯ ಗಿಣಿಪಾಠಗಳೇ ಒಂದಷ್ಟು ಸದ್ದು ಮಾಡುತ್ತಿವೆ. ಅಲ್ಲೋ ಇಲ್ಲೋ ಒಂದಷ್ಟು ಹೊಸತನ, ಮಹತ್ವಾಕಾಂಕ್ಷೆ ಕಾಣಿಸುತ್ತಿರಬಹುದು. ಆದರೆ ಅದರ ಹಿಂದೆಯೂ ಹಣ ಹರಿಯುತ್ತಿದೆ. ಅಂದರೆ ಅಡ್ಡಹೆಸರು ಬದಲಾಗಬಹುದು, ಆದರೆ ರೋಗ ಬದಲಾಗುವುದಿಲ್ಲ.

Screenshot_11  ಋ

ಯಾವ ಸ್ಪರ್ಧಿಯ ಬಳಿಯೂ ಜನರ ಮುಂದೆ ಇರಿಸುವುದಕ್ಕೆ ಹೊಸತೇನೂ ಇಲ್ಲದಿರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವುದರಲ್ಲೇ ಲಾಭವಿದೆ. ಇಲ್ಲಿಯವರೆಗಿನ ಚರ್ಚೆಗಳನ್ನೂ ಚುನಾವಣಾ ಪ್ರಚಾರವನ್ನೂ ಗಮನಿಸಿದರೆ, ಬಿಹಾರದಲ್ಲಿ ಆಡಳಿತಾರೂಢ ಪಕ್ಷಗಳು ಮತ್ತು ವಿರೋಧ ಪಕ್ಷಗಳ ನಡುವೆ ಕಾಣಿಸುತ್ತಿರುವ ಒಂದೇ ಒಂದು ವ್ಯತ್ಯಾಸವೆಂದರೆ ವಿರೋಧ ಪಕ್ಷಗಳು ತಾವು ಗೆದ್ದರೆ ಮದ್ಯ ನಿಷೇಧವನ್ನು ರದ್ದುಪಡಿಸುವುದಾಗಿ ಹೇಳುತ್ತಿರುವುದು. ಆದರೆ ನನ್ನ ಪ್ರಕಾರ ಅದಕ್ಕೇನೂ ಹೆಚ್ಚು ಮಹತ್ವವಿಲ್ಲ. ಏಕೆಂದರೆ ಇಷ್ಟು ದಿನ ಮದ್ಯಕ್ಕೆ ನಿಷೇಧವಿದೆ ಎಂದು ಬಿಹಾರದಲ್ಲಿ ಯಾರೂ ಕುಡಿತ ಬಿಟ್ಟಿಲ್ಲ!

ಅಂಗಡಿಯಲ್ಲಿ ಮದ್ಯ ಸಿಗದಿದ್ದರೆ ಏನಾಯಿತು, ಕಳ್ಳಭಟ್ಟಿ ಕಾಯಿಸುವವನ ಬಳಿ ಸಿಗುತ್ತದೆಯಲ್ಲ. ಕಾಯ್ದೆ ಕಠಿಣವಾದಷ್ಟೂ ಕಳ್ಳಭಟ್ಟಿ ಕಾಯಿಸುವವನ ದುಡ್ಡಿನಚೀಲ ದೊಡ್ಡದಾಗುತ್ತದೆ ಮತ್ತು ಕಾನೂನುಪಾಲಕರ ಮುಖದಲ್ಲಿ ನಗು ಅರಳುತ್ತದೆ. ಇನ್ನು ಹದಿನೈದು ದಿನದೊಳಗೆ ಬಿಹಾರದ ರೇಸ್ ಮುಗಿದಿರುತ್ತದೆ. ಹನ್ನೆರಡು ವಾರಗಳ ನಂತರ, ಹೆಚ್ಚು ಕಮ್ಮಿ ಮಾರ್ಚ್ ವೇಳೆಗೆ, ಚಳಿ ಹೋಗಿ ಬೇಸಿಗೆ ಗಟ್ಟಿಯಾಗಿ ಕಾಲೂರುವುದಕ್ಕೂ ಮೊದಲೇ ಬಂಗಾಳದಲ್ಲಿ ಚುನಾವಣೆಯ ಕಾವು ಶುರು ವಾಗುತ್ತದೆ. ಆರನೇ ಋತುವಿಗೆ ಬಿಡುವೇ ಇಲ್ಲ.

ಬಂಗಾಳದಲ್ಲೂ ಯಾರೋ ಒಬ್ಬರು ಗೆಲ್ಲುತ್ತಾರೆ. ಆದರೆ ಆ ರಾಜ್ಯ ಈಗಾಗಲೇ ಸೋತಂತೆ ಕಾಣಿಸು ತ್ತಿದೆ. ಕೆಸರಿನಲ್ಲಿ ಸಿಲುಕಿದವನೊಬ್ಬ ಯಾವ ಭರವಸೆಯೂ ಇಲ್ಲದೆ, ಮೇಲೆದ್ದು ಬರುವ ಆಸಕ್ತಿಯೂ ಇಲ್ಲದೆ, ಅಲ್ಲೇ ಬಿದ್ದುಕೊಂಡಿರುವಂತೆ ನನಗದು ಕಾಣಿಸುತ್ತದೆ. ನಿಜಕ್ಕೂ ಬೇಸರದ ಸಂಗತಿ. ನನಗೆ ಇನ್ನೂ ಸ್ವಲ್ಪ ಹೆಚ್ಚೇ ಬೇಸರ ಯಾಕೆಂದರೆ ಅದು ನಾನು ಹುಟ್ಟಿದ ರಾಜ್ಯ. ನನ್ನ ಬದುಕಿನ ಅತ್ಯಂತ ಸಂತೋಷಕರ ವರ್ಷಗಳನ್ನು ಕೊಲ್ಕತ್ತಾದಲ್ಲಿ ಕಳೆದಿದ್ದೇನೆ.

ನಾನು ಕೊಲ್ಕತ್ತಾದವನು. ಆ ನಗರದ ಇತಿಹಾಸದಲ್ಲೇ ಒಂದು ಜಾದೂ ಇದೆ. ಮಳೆಗಾಲ ಮುಗಿದು, ಫೆಬ್ರವರಿಯ ಚಳಿಗಾಲದ ಇಳಿಸಂಜೆಯಲ್ಲಿ ಕೊಲ್ಕತ್ತಾದಲ್ಲಿ ಹಬ್ಬಗಳ ಶ್ರಾಯ ಶುರುವಾಗುತ್ತದೆ. ಹಬ್ಬಗಳು ಬರುತ್ತಿದ್ದಂತೆ ಕೊಲ್ಕತ್ತಾದ ಮುಖ್ಯ ರಸ್ತೆಗಳ ಮೇಲೆ ನೇತಾಡುವ ದೀಪಗಳು ಈಗಾಗಲೇ ಆ ನಗರವು ಕಳೆದುಕೊಂಡ ಸೌಂದರ್ಯವನ್ನು ಮರಳಿ ಸೃಷ್ಟಿಸಲಾರವು.

ಒಂದು ಕಾಲದಲ್ಲಿ ಅದೊಂದು ಸಾಮ್ರಾಜ್ಯವಾಗಿತ್ತು. ಈಗ ಜಮೀನ್ದಾರನ ಹಳೆಯ ಬಂಗಲೆಯಂತೆ ಅಲ್ಲಿನ ಒಂದೊಂದೇ ಇಟ್ಟಿಗೆ ಕಳಚಿ ಬೀಳುತ್ತಿದೆ. ಕೊಲ್ಕತ್ತಾದ ಆಕರ್ಷಣೆಗಳು ಒಂದೊಂದು ಕಾಲ ದಲ್ಲಿ ಸಿನಿಮಾ ಪರದೆಯ ಮೇಲೆ ಕುಣಿಯುತ್ತಿದ್ದವು. ನಗರದ ಮೂಲೆ ಮೂಲೆಯಲ್ಲಿ ಉನ್ನತ ಮಟ್ಟದ ಸಾಹಿತ್ಯ, ಕಲೆ ಮತ್ತು ಸಂಗೀತದ ಪರಿಮಳ ಸೂಸುತ್ತಿತ್ತು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಉಸ್ತಾದ್ ಅಮಿರ್‌ಖಾನ್ ಒಮ್ಮೆ “ಕೊಲ್ಕತ್ತಾದ ಪ್ರೇಕ್ಷಕರು ನಿಮ್ಮ ಪ್ರತಿಭೆಯನ್ನುಗುರುತಿಸುವವರೆಗೂ ನೀವು ದೊಡ್ಡ ಸಂಗೀತಗಾರ ಆಗಲು ಸಾಧ್ಯ ವಿಲ್ಲ" ಎಂದು ಹೇಳಿದ್ದರು. ಕೊಲ್ಕತ್ತಾದಲ್ಲಿ ಶಿಷ್ಟಾಚಾರವನ್ನು ತಿಳಿದಿದ್ದ ಉನ್ನತ ಮಟ್ಟದ ಸಾಮಾ ಜಿಕ ವ್ಯವಸ್ಥೆಯೊಂದಿತ್ತು. ಅಲ್ಲಿನ ರಸ್ತೆಯುದ್ದಕ್ಕೂ ಅದ್ಭುತವಾದ ಮನರಂಜನೆ ಮತ್ತು ಅಪರೂಪ ದ ತಿಂಡಿ ತಿನಿಸುಗಳು ಸಿಗುತ್ತಿದ್ದವು. ಅಲ್ಲಿನ ಫುಟ್‌ಪಾತುಗಳಲ್ಲಿ ಇಂಥದ್ದೊಂದು ಇಲ್ಲ ಎಂಬುದೇ ಇರಲಿಲ್ಲ.

ಅದರ ನಡುವೆಯೇ ಬಹಳ ಚಾಣಾಕ್ಷತನದ ಅಪರಾಧ ಚಟುವಟಿಕೆಗಳು ಕೂಡ ರಾಜಾರೋಷವಾಗಿ ನಡೆಯುತ್ತಿದ್ದವು. ಆತ್ಮಗೌರವಕ್ಕೆ ಜಾಣತನ ಬಹಳ ಮುಖ್ಯ. ಕೊಲ್ಕತ್ತಾದ ಕ್ರಿಮಿನಲ್ ಗಳು ಕೂಡ ಕುತೂಹಲ ಮೂಡಿಸುವಂತಿರುತ್ತಿದ್ದರು. ಕೊಲ್ಕತ್ತಾದ ನರಮಂಡಲದೊಳಗೆ ದೊಡ್ಡ ದೊಡ್ಡ ಮೊಹಲ್ಲಾಗಳು, ವಸತಿ ಪ್ರದೇಶಗಳಿವೆ. ಅವುಗಳಿಗೆ ವಿಶಿಷ್ಟವಾದ ಜನಲಕ್ಷಣವಿದೆ. ಅಂಥ ಒಂದು ಪ್ರದೇಶದಲ್ಲಿರುವ ನನ್ನ ಸಹೋದರಿಯ ಮನೆಗೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿಂದ ಬರುವಾಗ ನನ್ನನ್ನು ಖಿನ್ನತೆ ಆವರಿಸಿಕೊಂಡಿತ್ತು. ಆ ಪ್ರದೇಶ ಇಂದಿಗೂ 20ನೇ ಶತಮಾನದ ಯಾವುದೋ ದಶಕದಲ್ಲಿ ಸಿಲುಕಿಕೊಂಡಂತಿದೆ.

ಸಾಮಾನ್ಯ ನಗರ ಪ್ರದೇಶಗಳಲ್ಲಿ ನಾವು ನೋಡುವ ಯಾವ ಸೌಕರ್ಯಗಳೂ ಅಲ್ಲಿಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಮುಂಬೈ ನಗರ ತನ್ನನ್ನು ತಾನೇ ಮರುನಿರ್ಮಾಣ ಮಾಡಿಕೊಂಡಿದೆ. ಮದ್ರಾಸ್ ನಗರ ಹೊಸ ಆರ್ಥಿಕತೆಯ ತವರಾಗಿದೆ. ಬೆಂಗಳೂರು ನಗರ ಟ್ರಾಫಿಕ್ ಜಾಮ್‌ನ ತವರಾಗಿ ರೂಪುಗೊಂಡಿದ್ದರೂ ಯಾರೊಬ್ಬರು ಕೂಡ ಆ ನಗರವನ್ನು ಬಿಟ್ಟು ಹೋಗಲು ಬಯಸುವುದಿಲ್ಲ.

ಹೈದರಾಬಾದ್ ನಗರ ಗಗನಚುಂಬಿ ಕಟ್ಟಡಗಳ ಮೇಳವಾಗಿದೆ. ದೆಹಲಿಯಂತೂ ಎಷ್ಟು ದೈತ್ಯಾಕಾರ ವಾಗಿ ಬೆಳೆದಿದೆ ಅಂದರೆ, ಅದಕ್ಕೊಂದು ಸರ್ಜರಿ ಮಾಡಲೇಬೇಕು. ಆದರೆ ಕೊಲ್ಕತ್ತಾ ನಗರ ಮಾತ್ರ ಹಿಂದೆ ಎಲ್ಲಿತ್ತೋ ಅಲ್ಲೇ ಇದೆ. ಹೊಸ ಟೌನ್‌ಶಿಪ್‌ಗಳು ಬಂದಿದ್ದರೂ ಅವು ಕೂಡ ಕಿಕ್ಕಿರಿದು ತುಂಬಿ, ಅಸ್ತವ್ಯಸ್ತವಾಗಿ ಬೆಳೆದು ನಲುಗುತ್ತಿವೆ. ಜನರು ದಿಕ್ಕಾಪಾಲಾಗಿ ಬದುಕುತ್ತಿದ್ದಾರೆ!

ರಸ್ತೆ, ಓಣಿಗಳು ಕಿರಿದಾಗಿವೆ. ಹೇಗೋ ಜೀವನ ನಡೆಯಬೇಕಲ್ಲಾ ಎಂಬ ಏಕೈಕ ಕಾರಣದಿಂದ ಅಲ್ಲಿನ ಜನರು ನಗುತ್ತಾ ಮಾತನಾಡುತ್ತಾರೆ. ಆದರೆ, ಚುನಾವಣೆಯಿಂದ ಏನೂ ಬದಲಾಗುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ.

ಕೊಲ್ಕತ್ತಾ ನಗರ ಬಹುಶಃ ಸುಸ್ತಾಗಿ ಏದುಸಿರು ಬಿಡುತ್ತಿರಬಹುದು. ಆದರೆ ಅದಕ್ಕಿಂತ ಅಪಾಯಕಾರಿ ಸಂಗತಿ ಏನೆಂದರೆ, ದೇಶದ ಪೂರ್ವಭಾಗವು ಅಭಿವೃದ್ಧಿಯ ಸೂಚ್ಯಂಕದಲ್ಲಿ ರಾಷ್ಟ್ರೀಯ ಸರಾಸರಿ ಗಿಂತ ಬಹಳ ಕೆಳಮಟ್ಟದಲ್ಲಿದೆ. ಕೊಲ್ಕತ್ತಾದ ಪ್ರತಿಯೊಂದು ರಸ್ತೆಯೂ ಅಲ್ಲಿನ ನಿರುದ್ಯೋಗಿ ಯುವಕರು ಊರು ಬಿಟ್ಟು ಓಡಿಹೋಗುವುದಕ್ಕೆಂದೇ ಚಾಚಿಕೊಂಡು ಮಲಗಿದಂತೆ ತೋರುತ್ತಿವೆ.

ಭವಿಷ್ಯ ಅರಸಿಕೊಂಡು ಯುವಕರು ನಗರ ಬಿಟ್ಟು ಹೋಗುವುದಕ್ಕೆಂದೇ ಅಲ್ಲಿ ರಸ್ತೆಗಳನ್ನು ನಿರ್ಮಿಸಿದ್ದಾರಾ? ಕೈಗಳಿಗೆ ಕೆಲಸವೇ ಇಲ್ಲದಿದ್ದರೆ ಯುವಕರು ಏನು ಮಾಡಬೇಕು? ಯುವಕರಿಗೆ ಕಾಲದ ಮಾಪನ ಬೇರೆಯದೇ ರೀತಿಯಲ್ಲಿರುತ್ತದೆ. ವಯಸ್ಸಾದವರಿಗೆ ಐದು ವರ್ಷ ಕಳೆಯಲು ಒಂದು ದಶಕ ಬೇಕಾಗಬಹುದು. ಆದರೆ ಯುವಕರಿಗೆ ಐದು ವರ್ಷವೆಂಬುದು ಅತ್ತಿತ್ತ ನೋಡು ತ್ತಿದ್ದಂತೆ ಬಹುಬೇಗ ಕಳೆದುಹೋಗುತ್ತದೆ. ಈ ದಶಕದ ಅಂತ್ಯದಲ್ಲಿ ನಮ್ಮ ದೇಶದ ಶೇ.60ರಷ್ಟು ಮತದಾರರು 35ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ. ಅವರ ಪೈಕಿ ಶೇ.90ರಷ್ಟು ಜನರು ೨೧ನೇ ಶತಮಾನದ ಯುವಕರಾಗಿರುತ್ತಾರೆ.

1960ರ ದಶಕದಲ್ಲಿ, ಅಂದರೆ ಸ್ವಾತಂತ್ರ್ಯ ಲಭಿಸಿ ಇನ್ನೂ ಎರಡು ದಶಕ ಕಳೆಯುವುದಕ್ಕೂ ಮೊದಲು, ಸ್ವತಂತ್ರ ಭಾರತದ ಮೊದಲ ತಲೆಮಾರಿನ ಜನರು ಆಡಳಿತ ವ್ಯವಸ್ಥೆಯ ಬಗ್ಗೆ ತಾಳ್ಮೆ ಕಳೆದುಕೊಂಡಿದ್ದರು. ನಕ್ಸಲೀಯರು ನಡೆಸುತ್ತಿದ್ದ ನರಮೇಧ ಮತ್ತು ನಾನಾ ಕಾರಣಕ್ಕೆ ನಡೆಯು ತ್ತಿದ್ದ ಮತೀಯ ಹಿಂಸಾಚಾರಗಳು ಕೊಲ್ಕತ್ತಾ ನಗರವನ್ನು ಮತ್ತು ಅರ್ಧಕ್ಕರ್ಧ ಬಂಗಾಳವನ್ನು ಅರಾಜಕತೆಗೆ ತಳ್ಳಿತ್ತು.

ಬೆಂಕಿ ಹಚ್ಚುವ ಸೂಡಿ ಈಗ ಮತ್ತೆ ಅತ್ತಿತ್ತ ತೊನೆದಾಡುತ್ತಿದೆ. ಯಾವ ಕಿಡಿ ಎಲ್ಲಿ ಬೆಂಕಿಯನ್ನು ಹಚ್ಚುತ್ತದೆಯೋ ಗೊತ್ತಿಲ್ಲ. ಯಾವ ಜ್ವಾಲೆ ಇನ್ನೆಲ್ಲಿ ಕಾಳ್ಗಿಚ್ಚಿಗೆ ಕಾರಣವಾಗುವುದೋ ಗೊತ್ತಿಲ್ಲ. ಯಾವ ದಾವಾಗ್ನಿ ಯಾರನ್ನು ಸುಡಲಿದೆಯೋ ಗೊತ್ತಿಲ್ಲ. ಆರನೇ ಋತುವಿನಿಂದ ಅಧಿಕಾರ ಪಡೆಯುವ ಸನ್ನಾಹದಲ್ಲಿರುವವರಿಗಾಗಿ ಒಂದು ದಂತಕತೆಯಿದೆ. ಅದರ ಅರ್ಥ ಏನೆಂಬುದರ ಬಗ್ಗೆ ಇನ್ನಷ್ಟು ಚರ್ಚೆಯ ಅಗತ್ಯವಿರಬಹುದು.

ಬಾಗ್ದಾದ್‌ನ ಪ್ರಸಿದ್ಧ ಸುಲ್ತಾನ ಹರೂನ್ ಅಲ್ ರಶೀದ್‌ನ ಮೊಮ್ಮಗ ಸೂಫಿ ಸಂತನಾಗಿ ರೂಪಾಂ ತರಗೊಂಡಿದ್ದ. ಸುಲ್ತಾನ್ ತಾತನಿಗೆ ಬಹಳ ಸಿಟ್ಟು ಬಂದಿತ್ತು. “ರಾಜರ ನಡುವೆ ನನ್ನ ಘನತೆಗೆ ಮಸಿ ಬಳಿದುಬಿಟ್ಟೆ" ಎಂದು ಮೊಮ್ಮಗನಿಗೆ ಬೈದ. ಅದಕ್ಕೆ ಮೊಮ್ಮಗ ಹೇಳಿದ: “ಸೂಫಿಗಳ ನಡುವೆ ನೀವು ನನ್ನ ಘನತೆಗೆ ಮಸಿ ಬಳಿದುಬಿಟ್ಟಿರಿ".

ಈ ಕ್ಷಣ ನಿಮ್ಮ ಜತೆಗೆ ಖುಷಿಖುಷಿಯಾಗಿ ಮಾತನಾಡುತ್ತಿದ್ದ ಅತ್ಯಾಪ್ತ ಸ್ನೇಹಿತನೊಬ್ಬ ಇನ್ನೊಂದು ಕ್ಷಣದಲ್ಲಿ ನೋವಿನಿಂದ ಕುಸಿದು, ಮತ್ತೊಂದು ಕ್ಷಣಕ್ಕೆ ಜೀವ ಬಿಟ್ಟುಬಿಟ್ಟರೆ ಅದಕ್ಕಿಂತ ದೊಡ್ಡ ದುಃಖ ಇನ್ನೇನಿದೆ? ತರಾತುರಿಯಲ್ಲಿ ಘಟಿಸಿದ ಈ ಮೂರು ಕ್ಷಣದ ಬೆಳವಣಿಗೆಯನ್ನು ನಿಮ್ಮ ಕಣ್ಣು ಕೂಡ ಸರಿಯಾಗಿ ದಾಖಲಿಸಿಕೊಂಡಿರುವುದಿಲ್ಲ. ನಿಮ್ಮ ಮನಸ್ಸಿಗೆ ಅದು ಸರಿಯಾಗಿ ಅರ್ಥ ವಾಗಿರುವುದಿಲ್ಲ.

ನಿಜ ಹೇಳಬೇಕೆಂದರೆ ಅಲ್ಲಿ ಏನುನಡೆಯಿತು ಎಂಬುದೇ ನಿಮಗೆ ಸರಿಯಾಗಿ ಗೊತ್ತಾಗಿರುವುದಿಲ್ಲ. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಗು, ಪ್ರೀತಿ, ಓಡಾಟ, ಸಾಹಸ, ಉಪಕಾರ, ಉಪದ್ವ್ಯಾಪ, ಕೋಪ ಇತ್ಯಾದಿಗಳನ್ನೆಲ್ಲ ಮೂರು ಕ್ಷಣಗಳು ಕೊಚ್ಚಿಕೊಂಡು ಹೋಗಿರುತ್ತವೆ. ನಂತರ ನೆನಪಿನ ಅಂಗಳದಲ್ಲಿ ಅವು ಶಾಶ್ವತವಾಗಿ ನೆಲೆಸುತ್ತವೆ. ಆ ಮೂರನೇ ಕ್ಷಣ ಎಲ್ಲವನ್ನೂ ಬದಲಿಸಿರುತ್ತದೆ. ಅದು ನಿಮ್ಮನ್ನು ಕೂಡ ಬದಲಾಯಿಸಿರುತ್ತದೆ.

ನಂತರ ಬದುಕು ನಿಮಗೆ ಮೊದಲಿಗಿಂತ ಹೆಚ್ಚು ಅಮೂಲ್ಯವಾಗಿ ಕಾಣಿಸಬಹುದು ಅಥವಾ ಲೆಕ್ಕಕ್ಕೇ ಇಲ್ಲದಂತೆ ಅನ್ನಿಸಬಹುದು. ಆದರೆ ಮರೆತಿದ್ದ ನೆನಪುಗಳೆಲ್ಲ ಮತ್ತೆ ಜೀವ ತಳೆದು ನಿಮ್ಮನ್ನು ಮುತ್ತಿಕೊಳ್ಳುವುದು ಮಾತ್ರ ನಿಜ. ಯಾವಾಗಲೂ ಕರಗುತ್ತಾ ಹೋಗುವ ಸಂಪತ್ತು ನೆನಪು. ಭೂತ ದಿಂದ ಭವಿಷ್ಯದ ಕಡೆಗೆ ಸಾಗುವಾಗ ಆ ನೆನಪುಗಳು ಮಾತ್ರ ವಾಸ್ತವವೇ? ಏಕೆಂದರೆ ಕಾಲ ಯಾವತ್ತೂ ವರ್ತಮಾನವನ್ನುಗುರುತಿಸುವುದಿಲ್ಲ.

ವರ್ತಮಾನವನ್ನು ಗುರುತಿಸಲು ಗಡಿಯಾರ ಯಾವ ಕ್ಷಣದಲ್ಲೂ ನಿಲ್ಲುವುದಿಲ್ಲ. ಅದು ಸದಾಕಾಲ ಭೂತದಿಂದ ಭಷ್ಯಕ್ಕೆ ಓಡುತ್ತಿರುತ್ತದೆ. ನೆನಪೆಂಬುದು ನಮ್ಮನ್ನು ತಿರುಚಿ ತೋರಿಸುವ ಕನ್ನಡಿ ಯಿದ್ದಂತೆ. ಅದೊಂದು ಊಸರವಳ್ಳಿ. ಅದು ಖುಷಿಯನ್ನೂ ತರಬಹುದು, ನೋವನ್ನೂ ತರಬಹುದು.

ನಮ್ಮ ಅಸ್ತಿತ್ವವನ್ನು ನಿಜವಾಗಿಸುವುದೇ ನೆನಪುಗಳು. ನೋವಿನ ಹಾಸಿಗೆಯಲ್ಲಿ ಕುಳಿತ ಆ ಜೀವ ಗೆಳೆಯನಂತೆ ನೆನಪುಗಳು ವರ್ತಿಸುತ್ತವೆ. ನೆನಪು ಯಾವತ್ತೂ ವೈಯಕ್ತಿಕ. ಅದನ್ನು ಹಂಚಿಕೊಂಡು ನೋವು ಕಡಿಮೆ ಮಾಡಿಕೊಳ್ಳುತ್ತೇನೆ ಎಂದು ಕೆಲವರು ಹೇಳುವುದುಂಟು. ಆದರೆ ಆ ನೆನಪು ನಿಮಗೆ ತಟ್ಟುವ ರೀತಿಯಲ್ಲೇ ಬೇರೆಯವರಿಗೆ ತಟ್ಟುವುದಿಲ್ಲ ಎಂಬುದನ್ನು ನೆನಪಿಡಿ.

ಮೈ ಡಿಯರ್ ಫ್ರೆಂಡ್ ಸುನೀಲ್, ಹೋಗಿ ಬಾ!’ ‘ಗುಡ್‌ಬೈ’ ಎಂದು ಹೇಳುವುದಕ್ಕಿಂತ ‘ಹೋಗಿ ಬಾ’ ಎಂದು ಹೇಳುವುದು ನನಗೆ ಇಷ್ಟ. ಏಕೆಂದರೆ ವಿದಾಯ ಶಾಶ್ವತ. ‘ಹೋಗಿ ಬಾ’ ಎಂದು ಹೇಳುವು ದರಲ್ಲಿ ಅದೇನೋ ಆಶಾಭಾವನೆಯಿದೆ. ಈ ಜಗತ್ತಿನಲ್ಲಿ ದೈವಿಕ ಹಾಸ್ಯವೆಂಬುದು ಯಾವತ್ತೂ ನಿರ್ದಿಷ್ಟವಾದ ತೆರೆ ಎಳೆಯುವುದರೊಂದಿಗೆ ಅಂತ್ಯವಾಗುವುದಿಲ್ಲ.

ಹಾಗೇನಾದರೂಆದರೆ ಬದುಕು ದೈವಿಕ ದುರಂತವಾಗಿ ಬಿಡುತ್ತದೆ. ಅಥವಾ, ಇಷ್ಟೆಲ್ಲ ಉನ್ಮಾದ ದಿಂದ ಮಾತನಾಡುವುದು ಅರ್ಥಹೀನವೇ ಇರಬಹುದು. ಏಕೆಂದರೆ ಹುಟ್ಟಿದವರು ಸಾಯಲೇಬೇಕು. ಎಲ್ಲರ ಬದುಕೂ ತಾತ್ಕಾಲಿಕ ಮತ್ತು ಕ್ಷಣಿಕ. ಇಂಥ ವಿಷಯಗಳಲ್ಲಾದರೂ ನಾವು ಪ್ರಾಚೀನ ಋಷಿ ಮುನಿಗಳ ಉಪದೇಶವನ್ನು ಕೇಳಬೇಕು.

ಅವರು ಮಾಯೆಯ ಬಗ್ಗೆ ನಮ್ಮನ್ನು ಎಚ್ಚರಿಸಿದರು. ಸಹಜ ಸ್ಥಿತಿಯನ್ನು ಮರೆಸಿ ಭ್ರಮೆಯಲ್ಲಿ ನಮ್ಮನ್ನು ಮುಳುಗಿಸುವುದೇ ಮಾಯೆ. ಆ ಮೂರನೇ ಕ್ಷಣ ನಮಗೆ ಬಂದೆರಗುವವರೆಗೂ ಕಾಲದ ಮಾಯೆಯಲ್ಲಿ ಹೀಗೇ ಸಾಗುತ್ತಿರಬೇಕು.

(ಲೇಖಕರು ಹಿರಿಯ ಪತ್ರಕರ್ತರು)