Shishir Hegde Column: ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ
ಅಗಾಧ ನೆನಪಿನ ಶಕ್ತಿ ಕೋಳಿಯ ಇನ್ನೊಂದು ವಿಶೇಷ. ನೂರಕ್ಕಿಂತ ಜಾಸ್ತಿ ಮುಖಗಳನ್ನು ನೆನಪಿಟ್ಟು ಕೊಳ್ಳಬಲ್ಲವು ಎಂದೆನಲ್ಲ. ಅಷ್ಟೇ ಅಲ್ಲ, ಒಮ್ಮೆ ಕೋಳಿಯನ್ನು ನೀವು ಹೆದರಿಸಿದರೆಂದು ಕೊಳ್ಳಿ, ನಿಮ್ಮ ಮುಖ ಮತ್ತು ಆ ಘಟನೆಯನ್ನು ವರ್ಷಗಳ ಕಾಲ ಅವು ನೆನಪಿಟ್ಟುಕೊಳ್ಳಬಲ್ಲವು. ಕೋಳಿಗಳಲ್ಲಿ ಕರುಣಾರಸ ಜಾಸ್ತಿ. ಅವು ತನ್ನ ಸುತ್ತಲಿನ ಜೀವಿಗಳಿಗೆ ಗಾಯವಾದಾಗ ಅದಕ್ಕೆ ಸ್ಪಂದಿಸಬಲ್ಲವು.


ಶಿಶಿರಕಾಲ
ಬದುಕಿನ ಯಶಸ್ಸು ಎಂದರೇನು? ಬೇಕಾದದ್ದನ್ನೆಲ್ಲ ಖರೀದಿಸುವಷ್ಟು ಶ್ರೀಮಂತರಾಗುವುದಾ? ಆರೋಗ್ಯವಾಗಿರುವುದಾ? ಅಥವಾ ನೆಮ್ಮದಿ, ಶಾಂತಿ, ಉತ್ತಮ ಸಂಬಂಧಗಳು, ಒಡನಾಟ, ಸ್ನೇಹ ಇತ್ಯಾದಿಯಾ? ಎಂಟು ಐಷಾರಾಮಿ ಕಾರು, ಹತ್ತು ಸೈಟು, ಎಂಟಂಕಿಯ ಸಂಬಳವಾ ಅಥವಾ ರಾತ್ರಿ ದಿಂಬಿಗೆ ತಲೆ ಕೊಟ್ಟಾಕ್ಷಣ ಸಮಾಧಾನದ ನಿದ್ರೆ ಬರುವುದಾ? ಅಥವಾ ಕೊರತೆಯೇ ಇಲ್ಲದ ಬದುಕಾ? ‘ಇದುವೇ ಯಶಸ್ಸು’ ಎಂದು ಸಾರ್ವತ್ರಿಕವಾಗಿ ವ್ಯಾಖ್ಯಾನಿಸುವುದು ಸಾಧ್ಯವಿಲ್ಲ. ತೃಪ್ತಿ, ಬಯಕೆ, ರುಚಿ, ಅವಶ್ಯಕತೆ ಇವೆಲ್ಲವೂ ತೀರಾ ವೈಯಕ್ತಿಕ. ಅದೆಷ್ಟು ವೈಯಕ್ತಿಕವೆಂದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ, ಅಪ್ಪ ಮಕ್ಕಳ ನಡುವೆಯೇ ಬದುಕಿನ ಸಾರ್ಥಕ್ಯದ ವಿಷಯದಲ್ಲಿ ಅಭಿಪ್ರಾಯ ಭೇದವಿರುತ್ತದೆ. ಹಿಂದಿಯ ಚಲನಚಿತ್ರ ನಟ ಮನೋಜ್ ಕುಮಾರ್ ಇತ್ತೀಚೆಗೆ ತೀರಿಕೊಂಡರು.
ಅವರು ಬಹಳ ಫೇಮಸ್ ನಟ, ಪದ್ಮಶ್ರೀ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಒಂದು ಕಾಲದ ಸ್ಟಾರ್ ನಟ ಇತ್ಯಾದಿ. ಅಂಥ ಸಾಧಕ ತೀರಿಕೊಂಡ ಮಾರನೆಯ ದಿನ ಪತ್ರಿಕೆಯಲ್ಲಿ ಚಿಕ್ಕದೊಂದು ಬಾಕ್ಸ್ ಐಟಂ ಸುದ್ದಿಯಾಯಿತು ಅಷ್ಟೆ.
ಎಂತೆಂಥದ್ದೋ ಸಾಧನೆ ಮಾಡಿದವರೆಲ್ಲ ಒಂದಿಷ್ಟು ವರ್ಷ ಕಳೆದ ನಂತರ ಬದುಕಿದ್ದಾರೋ ಇಲ್ಲವೋ ಎಂಬುದನ್ನೇ ಜಗತ್ತು ಮರೆತಿರುತ್ತದೆ. ಅಂಥ ಅದೆಷ್ಟೋ ಸಾಧಕರು ತೀರಿಕೊಂಡ ಸುದ್ದಿ ಕೇಳಿದಾಗಲೇ ಅವರು ಇಷ್ಟು ಕಾಲ ಬದುಕಿದ್ದರಾ ಎಂದು ಆಶ್ಚರ್ಯವಾಗುತ್ತದೆ. ಹೀಗೊಂದು ಮಾತಿದೆ- ಇನ್ನು ನೂರು ವರ್ಷ ಕಳೆಯುವಾಗ ನಾವಿರುವ ಮನೆಯಲ್ಲಿ ಇನ್ಯಾರೋ ವಾಸಿಸುತ್ತಿರು ತ್ತಾರೆ, ನಮ್ಮದೆನ್ನುವ ಪ್ರತಿಯೊಂದು ಸ್ವತ್ತೂ ಇನ್ಯಾರೋ, ನಾವು ಭೇಟಿಯೇ ಆಗದವರ ಪಾಲಾಗಿರು ತ್ತದೆ, ನಮ್ಮ ಬಂಗಾರ, ಆಸ್ತಿ ಎಲ್ಲವೂ. ಅಷ್ಟೇ ಅಲ್ಲ, ನಮ್ಮ ನಿಮ್ಮ ಹೆಸರು ಕೂಡ ಯಾರಿಗೂ ನೆನಪಿರುವುದಿಲ್ಲ.
ಇದನ್ನೂ ಓದಿ: Shishir Hegde Column: ಗಡ್ಡಕಿಂತ ವಾಸಿ ಕಣೋ ಬ್ಲೇಡಿನ ದಾಸ್ಯ !
ಇವೆಲ್ಲವನ್ನೂ ಯಾವುದೇ ವೈರಾಗ್ಯದಿಂದ ಹೇಳುತ್ತಿಲ್ಲ. ಬದಲಿಗೆ ಜಗತ್ತು ಇರುವುದೇ ಹೀಗೆ. ಈ ಎಲ್ಲ ಹಿನ್ನೆಲೆಯಲ್ಲಿ ಯಶಸ್ವಿ ಬದುಕೆಂದರೆ ‘ಬದುಕುವುದು’ ಎನ್ನುವುದನ್ನು ಬಿಟ್ಟು ಇನ್ನೊಂದು ನಿರ್ದಿಷ್ಟ ವ್ಯಾಖ್ಯಾನ ಕಷ್ಟ. ಬದುಕಿನ ಯಶಸ್ಸು ಎಂದರೇನು? ಮತ್ತದೇ ಪ್ರಶ್ನೆ. ಆದರೆ ಈಗ ವೈಜ್ಞಾನಿಕ-ಜೀವ ಜಗತ್ತಿನ ಹಿನ್ನೆಲೆಯಲ್ಲಿ.
ಜೀವ ಜಗತ್ತಿನಲ್ಲಿ ಯಶಸ್ವಿ ಪ್ರಾಣಿ/ಜೀವಿ ಎಂದರೆ ಯಾವುದು? ಆಫ್ ಕೋರ್ಸ್ ಮನುಷ್ಯನೇ ಅಲ್ಲವೇ? ಯಾವ ಲೆಕ್ಕದಲ್ಲಿ? ಬೇರಿನ್ನುಳಿದ ಪ್ರಾಣಿಗಳನ್ನು ನಿಯಂತ್ರಿಸುವ ಕಾರಣಕ್ಕೋ ಅಥವಾ ಈ ಭೂಮಿಯ ಮೇಲಿನ ಅತ್ಯಂತ ಹೆಚ್ಚಿನ ಬದಲಾವಣೆಗೆ ಕಾರಣವಾದ ಪ್ರಾಣಿಯಾಗಿಯೋ? ಅಥವಾ ಸಂಖ್ಯಾವೃದ್ಧಿಯಲ್ಲಿ? ಆಯುಷ್ಯದಲ್ಲಿ? ಯಾವ ಯಾವ ವಿಚಾರದಲ್ಲಿ? ಇಲ್ಲೂ ಯಶಸ್ಸೆನ್ನುವ ವ್ಯಾಖ್ಯಾನ ಅಷ್ಟೇ ವಿಭಿನ್ನ.
ಸಂಖ್ಯೆಯನ್ನೇ ತೆಗೆದುಕೊಂಡರೆ ಬ್ಯಾಕ್ಟೀರಿಯಾ ಮೊದಲಾದ ಸೂಕ್ಷ್ಮಾಣುಜೀವಿಗಳೆದುರು ಮನುಷ್ಯನ ಸಂಖ್ಯೆ ಯಾವ ಲೆಕ್ಕವೂ ಅಲ್ಲ. ಅಷ್ಟೇ ಅಲ್ಲ, ನಮ್ಮ ಜತೆ ಜತೆಯಲ್ಲಿಯೇ ಅದೆಷ್ಟೋ ಸಾವಿರ ವರ್ಷ ಬಾಳಿ, ಇಂದಿಗೂ ಬದುಕಿಕೊಂಡು ಬಂದ ಕೆಲವು ಜೀವಿಗಳೂ ಇವೆಯಲ್ಲ. ಅವು ಗಳದ್ದೂ ಯಶಸ್ವಿ ಸಂಕುಲವೇ ಅಲ್ಲವೇ? ಇಲಿಯನ್ನೇ ತೆಗೆದುಕೊಳ್ಳಿ. ಎಲ್ಲಿ ಮನುಷ್ಯನಿದ್ದಾನೋ ಅಲ್ಲ ಇಲಿಗಳಿವೆ.

ನ್ಯೂಯಾರ್ಕ್ ಪೇಟೆಯಲ್ಲಿ, ಅಲಾಸ್ಕಾ ಹಿಮದಲ್ಲಿ, ಶ್ರೀರಾಮಪುರದ ಮೋರಿಯಲ್ಲಿ. ಎಂದರಲ್ಲಿ. ಮನುಷ್ಯ ಸಂಖ್ಯೆಯನ್ನೂ, ನಿಯಂತ್ರಣವನ್ನೂ ಮೀರಿ ಇಲಿಗಳಿವೆ. ಮನುಷ್ಯನಿಲ್ಲದೆ ಅವು ಬದುಕುಳಿಯಲಾರವು. ಅಂತೆಯೇ ಅಕ್ಕಿ, ಗೋದಿ, ಸೋಯಾ ಇತ್ಯಾದಿ ಸಸ್ಯಗಳು, ಆಕಳು, ಕುರಿ, ಮೇಕೆ, ಹಂದಿ, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳದೂ ಯಶಸ್ವಿ ಸಂಕುಲವೇ.
ಇವೆಲ್ಲವೂ ನುಷ್ಯನ ವ್ಯವಸ್ಥೆಯ ಭಾಗವೇ ಆಗಿದ್ದರೂ, ಮನುಷ್ಯ ನಿಯಂತ್ರಣದ ಇದ್ದರೂ ಜತೆಯಲ್ಲಿಯೇ ಬದುಕುಳಿದುಕೊಂಡು ಬಂದಿವೆ. ಇದು ಕೂಡ ಜೀವಸಂಕುಲದ ಯಶಸ್ಸೇ ಅಲ್ಲವೇ. ಇಂಥ ಮನುಷ್ಯನ ಜತೆಯ ಸಿಂಬಿಯೋಸಿಸ್ ಪ್ರಾಣಿ ಪ್ರಭೇದದಲ್ಲಿ ಅತ್ಯಂತ ಯಶಸ್ವಿ ಪ್ರಾಣಿ, ಜೀವಿ ಎಂದರೆ- ಕೋಳಿ! ಕೋಳಿ ಎಂದರೆ ನಾನಿಲ್ಲಿ ಹೇಳಲು ಹೊರಟಿರುವುದು- ಪೀಸ್ ಎಂದು ತಿನ್ನಲ್ಪಡುವ, ಮೊಟ್ಟೆಗಾಗಿ ಸಾಕಲ್ಪಡುವ ಕೋಳಿಯ ಬಗ್ಗೆ.
ಕೆಲವರು ಪ್ಲೇಟಿನಲ್ಲಷ್ಟೇ ನೋಡುವ, ಇನ್ನು ಕೆಲವರಿಗೆ ಹಳ್ಳಿಯ ರಸ್ತೆಗಳಲ್ಲಿ, ಮನೆಯಂಗಳದಲ್ಲಿ, ಫ್ರೇಮ್ ಗಳಲ್ಲಿ, ರಸ್ತೆ ಬದಿಯ ಮಾಂಸದಂಗಡಿಯ ಎದುರಿಗಿನ ಚಿಕ್ಕ ಬಾಕ್ಸ್ ಗಳಲ್ಲಿ ಬಂಧಿಯಾಗಿ, ಕಬ್ಬಿಣದ ಹುಕ್‌ನಲ್ಲಿ ಚರ್ಮ ಸುಲಿದ ಸ್ಥಿತಿಯಲ್ಲಿ ಜೋತಾಡುವ ಚಿಕನ್‌ನ ಬಗ್ಗೆ. ಸದ್ಯ ಇಡೀ ಭೂಮಿಯ ಮನುಷ್ಯ ಸಂಖ್ಯೆ 800 ಕೋಟಿ. ಆದರೆ ಭೂಮಿಯಲ್ಲಿ ಯಾವುದೇ ಸಮಯದಲ್ಲಿ ಬದುಕಿರುವ ಕೋಳಿಗಳ ಸಂಖ್ಯೆ ಎಷ್ಟಿರಬಹುದು ಊಹಿಸಿ? ಬರೋಬ್ಬರಿ 3300 ಕೋಟಿ! ಮನುಷ್ಯ ಸಂಖ್ಯೆಯ ನಾಲ್ಕು ಪಟ್ಟು!
ಹಾಗಾದರೆ ಅವುಗಳದ್ದೂ ಯಶಸ್ವಿ ಸಂಕುಲವೇ ಆಯಿತಲ್ಲ? ಜಿರಳೆ, ಇಲಿಗಳಂತೆ ಕೋಳಿಗಳಿಲ್ಲದ ಜಾಗವಿಲ್ಲ. ಶೀತವಲಯ, ಮರುಭೂಮಿ ಹೀಗೆ ಮನುಷ್ಯ ಎಲ್ಲಿದ್ದಾನೋ ಅ ಜತೆಯಲ್ಲಿಯೇ ಕೋಳಿ ಗಳಿವೆ. ಕೋಳಿ ಮತ್ತು ಮನುಷ್ಯನ ಲವ್ ಸ್ಟೋರಿ ಶುರುವಾಗುವುದು ಸುಮಾರು ಎಂಟರಿಂದ ಹತ್ತು ಸಾವಿರ ವರ್ಷದ ಹಿಂದೆ. ಇಂದಿನ ಭಾರತ, ಥಾಯ್ಲೆಂಡ್, ವಿಯೆಟ್ನಾಂ ಈ ಪ್ರದೇಶದಲ್ಲಿ. ಕೆಂಪು ತುರಾಯಿಯ ಊರ ಕೋಳಿಯನ್ನು ಮೊದಲು ಪಳಗಿಸಿದ್ದು ಭಾರತೀಯರು.
ಮನುಷ್ಯನ ನಂತರ ಜೀನೋಮ್ ಸೀಕ್ವೆನ್ಸಿಂಗ್ (ವಂಶವಾಹಿ ಅಭ್ಯಾಸ) ಪೂರ್ಣ ಪ್ರಮಾಣದಲ್ಲಿ ಮಾಡಿದ್ದೆಂದರೆ ಅದು ಕೋಳಿಯದು. ಅವೆಲ್ಲವೂ ಕೋಳಿಯ ಮೂಲವನ್ನು ಭಾರತವೆಂದೇ ಹೇಳುತ್ತವೆ. ಮೂಲ ಎಲ್ಲಿಯೇ ಇರಲಿ, ಈಗ ಕೋಳಿಗಳಲ್ಲಿಯೇ ಅಸಂಖ್ಯ ಬ್ರೀಡ್ (ಪ್ರಭೇದ) ಗಳಿವೆ. ಕೋಳಿ ಹಲವಾರು ಕಾರಣಗಳಿಂದ ನಮಗೆ ಹತ್ತಿರವಾದದ್ದು, ಈ ಪ್ರಮಾಣದಲ್ಲಿ ವ್ಯಾಪಿಸಿದ್ದು. ಹೆಚ್ಚು ಕಡಿಮೆ ದಿನಕ್ಕೊಂದು ಮೊಟ್ಟೆ. ಅದರ ಸಂಖ್ಯಾ ವೃದ್ಧಿಯ ವೇಗ ಹೆಚ್ಚು.
ಮೊಟ್ಟೆಯಿಟ್ಟ ಇಪ್ಪತ್ತೊಂದೇ ದಿನಕ್ಕೆ ಮರಿ. ಜತೆಯಲ್ಲಿ ಬೆಳವಣಿಗೆಯ ವೇಗ ಕೂಡ ಜಾಸ್ತಿ. ಮಾಂಸವೂ ವಿಶೇಷ, ಮೆತ್ತಗೆ, ಯಾವುದೇ ಸಾಂಬಾರ ಪದಾರ್ಥಗಳನ್ನು ಸುಲಭದಲ್ಲಿ ಹೀರಿ ರುಚಿಸಬಲ್ಲದು ಇತ್ಯಾದಿ. ಅದೆಲ್ಲದರ ಜತೆ ಕೋಳಿ ಹಾರಿ ಎಲ್ಲಿಯೋ ಹೋಗದು. ಅದಕ್ಕೆ ತನ್ನ ಆಸ್ಥಾನದ ಅರಿವಿದೆ. ಸಾಕುವುದು ಕೂಡ ಸುಲಭ. ಈ ಎಲ್ಲ ಕಾರಣಗಳಿಂದಾಗಿ ದಕ್ಷಿಣ ಏಷ್ಯಾದ ಹಾರಲು ಬಾರದ ಈ ಪಕ್ಷಿಗಳು ಕ್ರಮೇಣ ಆಫ್ರಿಕಾ, ಆಸ್ಟ್ರೇಲಿಯಾ ಅಮೆರಿಕ ಹೀಗೆ ಎಡೆಯೂ ಮನುಷ್ಯನಿಂದ ಕೊಂಡೊಯ್ಯಲ್ಪಟ್ಟವು.
ವಾತಾವರಣ ಹೊಂದಾಣಿಕೆಯ ವಿಚಾರದಲ್ಲೂ ಕೋಳಿ ವಿಶೇಷ. ಕೋಳಿಗಳು 40 ಡಿಗ್ರಿ ಸೆಲ್ಸಿಯಸ್ ನಿಂದ -20 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ ಬದುಕಬಲ್ಲವು. ಹೀಗೆ ಎಲ್ಲಾ ಲೆಕ್ಕದಲ್ಲಿಯೂ ಸಾಕಲಿಕ್ಕೆ ಹೇಳಿಮಾಡಿಸಿದ ಜಾಗತಿಕ ಜೀವಿ ಕೋಳಿ. ಕೋಳಿ ಕಳೆದ ಎಂಟು ಸಾವಿರ ವರ್ಷದಿಂದ ಸಾಕಲ್ಪಟ್ಟು ಅವುಗಳ ವಂಶಾಭಿವೃದ್ಧಿ ಮನುಷ್ಯ ನಿಯಂತ್ರಿತವಾಗಿರುವುದರಿಂದ ಅವು ಕೂಡ ಸಾಕಷ್ಟು ಬದಲಾವಣೆ ಹೊಂದಿವೆ. ನಾವು ಸಾಕುವ ಯಾವ ಕೋಳಿ ಪ್ರಭೇದವೂ ಇಂದು ಕಾಡಿನಲ್ಲಿ, ಮನುಷ್ಯನಿಲ್ಲದೆ ಬದುಕಲಾರವು. ಅವುಗಳದ್ದು ಅವಲಂಬಿತ ವಿಕಸನ.
ನಮ್ಮೂರಿನ ಕೆಲವರ ಮನೆಯಲ್ಲಿ ಕೋಳಿಗಳಿದ್ದವು. ಅವು ಇಂದಿನ ರೀತಿ ಫಾರ್ಮ್ ಕೋಳಿಗಳಲ್ಲ. ಅವುಗಳು ಮನೆಯ-ಕುಟುಂಬದ ಭಾಗವೇ ಆಗಿದ್ದವು. ಮನೆಯೊಳಕ್ಕೆ ನಾಯಿಗೆ ನಿಷಿದ್ಧವಿದ್ದ ಪ್ರವೇಶ ಕೋಳಿಗಳಿಗಿರಲಿಲ್ಲ. ಆಗೆಲ್ಲ ‘ಕೋಳಿ ಅಂಕ’ ಸಾಮಾನ್ಯ. ಅಂಕಕ್ಕೆ ಬಳಸುವ ಹುಂಜದ ಗತ್ತೇ ಬೇರೆ. ಹುಂಜಕ್ಕೆ ನಾವು ಮಕ್ಕಳು ಹುಶ್ ಎಂದರೆ ಅದು ಹೆದರುತ್ತಿರಲಿಲ್ಲ.
ಇನ್ನು, ಕೋಳಿಗಳ ಗುಂಪನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳಂದು ಶ್ರೇಣೀಕೃತ ವ್ಯವಸ್ಥೆ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅವುಗಳನ್ನು ಗೂಡಿನಿಂದ ಹೊರಗೆ ಬಿಟ್ಟಾಕ್ಷಣ ನೆಲದಲ್ಲಿದ್ದ ಕಾಳು, ಹುಳುಹುಪ್ಪಡಿಗಳನ್ನು ತಿನ್ನಲು ಮುಂದಾಗುತ್ತವೆಯಲ್ಲ ಆಗ ಮೊದಲ ಜಾಗ ಅವುಗಳಲ್ಲಿನ ದೊಡ್ಡ ಹುಂಜಕ್ಕೆ. ದೇಹ ಗಾತ್ರಕ್ಕೆ-ತೂಕಕ್ಕೆ ಅನುಗುಣವಾಗಿ ಶ್ರೇಣಿ ವ್ಯವಸ್ಥೆಯಲ್ಲಿಯೇ ಅವು ಆಹಾರ ಹೆಕ್ಕಿ ತಿನ್ನುವುದು. ಇದು ಕೋಳಿ ಕಾನೂನು.
ಇದನ್ನು ಯಾವುದೇ ಕೋಳಿ ಮೀರಿದರೆ ಉಳಿದ ಕೋಳಿಗಳು ಅದರ ಮೇಲೆರಗಿಬಿಡುತ್ತವೆ. ಇಷ್ಟೇ ಅಲ್ಲ, ಕೋಳಿಗಳಲ್ಲಿ ಇನ್ನೊಂದಿಷ್ಟು ವಿಶೇಷತೆಗಳಿವೆ. ಅವುಗಳ ಜೀ ಡೈನಾಸರಸ್ ಜೀ ಗೆ ಅತ್ಯಂತ ಹತ್ತಿರ ಹೊಂದುತ್ತವೆ. ಹಾಗಾಗಿ ತಾಂತ್ರಿಕವಾಗಿ ಅವು ಇಂದಿಗೂ ಬದುಕುಳಿದ ಡೈನಾಸರಸ್ ಸಂತತಿ. ಚಿಕ್ಕನಿದ್ರೆ ಮಾಡುವವರಿಗೆ ‘ಅವನದು ಕೋಳಿನಿದ್ರೆ’ ಎನ್ನುವುದುಂಟು.
ಅಸಲಿಗೆ ಕೋಳಿಯದು ಕೋಳಿ ನಿದ್ರೆಯೇ. ಆದರೆ ಕೋಳಿ ನಿದ್ರೆಯಲ್ಲಿಯೇ ಒಂದು ವಿಶೇಷತೆ ಇದೆ. ಅವು ಮನುಷ್ಯನಂತೆ REM (Rapid Eye Movement)- ಕಣ್ಣುಗಳು ವೇಗದಲ್ಲಿ ಚಲಿಸುವ ನಿದ್ರಾವಸ್ಥೆ ಯಲ್ಲಿ ನಿದ್ರಿಸಬಲ್ಲವು. ಕೋಳಿ ನಿದ್ರಿಸುವಾಗ ನೋಡಿದರೆ ಅವುಗಳ ಕಣ್ಣು ಮನುಷ್ಯನಂತೆ ಇತ್ತಿಂ ದತ್ತ ಚಲಿಸುತ್ತಿರುತ್ತದೆ.
ಮನುಷ್ಯ ಈ ನಿದ್ರಾವಸ್ಥೆಯಲ್ಲಿಯೇ ಕನಸನ್ನು ಕಾಣುವುದರಿಂದ ಕೋಳಿಗಳು ಕೂಡ ಇದೇ ಕನಸನ್ನು ಕಾಣಬಲ್ಲವು ಎನ್ನುವುದು ವಿಜ್ಞಾನಿಗಳ ನಂಬಿಕೆ. ಕೆಲವರ ಕನಸಿನಲ್ಲಿ ಚಿಕನ್ ಬಿರಿಯಾನಿ ಬರುತ್ತದಂತೆ- ಕೋಳಿಯ ಕನಸಿನಲ್ಲಿ ಏನು ಬರುತ್ತದೆಯೋ ಗೊತ್ತಿಲ್ಲ. ಕೋಳಿ ಸುಮಾರು ನೂರು ಮುಖಗಳವರೆಗೆ ನೆನಪಿಟ್ಟುಕೊಳ್ಳಬಲ್ಲವಂತೆ. ಹಾಗಾಗಿ ಅವುಗಳ ಕನಸಿನಲ್ಲಿಯೂ ಸಾಕಿದವರ ಮುಖಗಳೇ ಬರಬಹುದು ಎಂಬ ಊಹೆಯಿದೆ.
ಅಗಾಧ ನೆನಪಿನ ಶಕ್ತಿ ಕೋಳಿಯ ಇನ್ನೊಂದು ವಿಶೇಷ. ನೂರಕ್ಕಿಂತ ಜಾಸ್ತಿ ಮುಖಗಳನ್ನು ನೆನಪಿಟ್ಟುಕೊಳ್ಳಬಲ್ಲವು ಎಂದೆನಲ್ಲ. ಅಷ್ಟೇ ಅಲ್ಲ, ಒಮ್ಮೆ ಕೋಳಿಯನ್ನು ನೀವು ಹೆದರಿಸಿ ದರೆಂದುಕೊಳ್ಳಿ, ನಿಮ್ಮ ಮುಖ ಮತ್ತು ಆ ಘಟನೆಯನ್ನು ವರ್ಷಗಳ ಕಾಲ ಅವು ನೆನಪಿಟ್ಟು ಕೊಳ್ಳಬಲ್ಲವು.
ಕೋಳಿಗಳಲ್ಲಿ ಕರುಣಾರಸ ಜಾಸ್ತಿ. ಅವು ತನ್ನ ಸುತ್ತಲಿನ ಜೀವಿಗಳಿಗೆ ಗಾಯವಾದಾಗ ಅದಕ್ಕೆ ಸ್ಪಂದಿಸಬಲ್ಲವು. ನಮ್ಮೂರಿನ ಒಬ್ಬರ ಮನೆಯಲ್ಲಿ ಬೆಕ್ಕು ಮರಿಗಳನ್ನು ಇಟ್ಟು ಸತ್ತುಹೋಗಿತ್ತು. ಆ ಮರಿಗಳಲ್ಲಿ ಬದುಕುಳಿದ ಒಂದೇ ಮರಿ ಕ್ರಮೇಣ ಕೋಳಿಗಳ ಜತೆ ವಾಸಮಾಡಲು ಶುರುಮಾಡಿತ್ತು. ಕೋಳಿಗಳೂ ಅಷ್ಟೇ, ಆ ಬೆಕ್ಕಿನ ಮರಿಯನ್ನು ತಮ್ಮ ಮರಿಯಂತೆಯೇ ಜತೆಯಲ್ಲಿಟ್ಟುಕೊಂಡು ಸಾಕಿದ್ದವು. ಕೋಳಿಗಳು ಮಾತ್ಸರ್ಯ ಮೀರಿದವು. ಅವು ಬಾತುಕೋಳಿ, ಬೆಕ್ಕು, ನಾಯಿ ಮರಿಗಳನ್ನೂ ತನ್ನವೆಂದೇ ಸಾಕುವಷ್ಟು ಮಾತೃಭಾವವನ್ನು ಹೊಂದಿವೆ.
ಕೋಳಿಗಳು ಈ ಪ್ರಮಾಣದಲ್ಲಿ ಸಾಕಲ್ಪಡಲು ಸಾಧ್ಯವಾಗಿದ್ದು ಆಧುನಿಕ ಕುಕ್ಕುಟ ಕೃಷಿಯ ಸಾಧ್ಯತೆ ಯಿಂದಾಗಿ. ಅಮೆರಿಕ ಮೊದಲಾದ ಆಧುನೀಕೃತ ಕೈಗಾರಿಕಾ ಕೃಷಿ ವ್ಯವಸ್ಥೆಯಲ್ಲಿ ಲಕ್ಷ ಕೋಳಿ ಗಳನ್ನು ಒಂದೇ ಚಾವಣಿಯಡಿಯಲ್ಲಿ ಬೆಳೆಸಲಾಗುತ್ತದೆ. ಜಗತ್ತಿನಲ್ಲಿ ಮನುಷ್ಯನ ನಾಲ್ಕರಷ್ಟು ಸಂಖ್ಯೆಯಲ್ಲಿ, ಪಕ್ಷಿಗಳ ಅತ್ಯಂತ ಹೆಚ್ಚಿನ ಸಂಖ್ಯೆಯ (3300 ಕೋಟಿ) ಕೋಳಿಗಳಿವೆ, ಆ ಅರ್ಥದಲ್ಲಿ ಅವು ಯಶಸ್ವಿ ಜೀವವರ್ಗ ಎಂದೆನಲ್ಲ. ಈ ವಿಷಯಕ್ಕೆ ಇನ್ನೊಂದು ಆಯಾಮವಿದೆ.
ಜಗತ್ತಿನಲ್ಲಿ ಪ್ರತಿ ವರ್ಷ ಆಹಾರಕ್ಕೆಂದೇ ಬರೋಬ್ಬರಿ 7500 ಕೋಟಿ ಕೋಳಿಗಳನ್ನು ಕೊಲ್ಲಲಾ ಗುತ್ತದೆ. ನಿತ್ಯ ಇಪ್ಪತ್ತು ಕೋಟಿ. ಇದು ಮೊಟ್ಟೆ ಇಡುವ ಕೋಳಿಯ ಲೆಕ್ಕವಲ್ಲ. ಮೊಟ್ಟೆಗಲ್ಲದ- ಮಾಂಸಾಹಾರಕ್ಕೆಂದೇ ಬಳಸುವ ಚಿಕನ್ ಪ್ರಮಾಣ ಇಷ್ಟು.
ಅಮೆರಿಕ ಮೊದಲಾದ ದೇಶಗಳಲ್ಲಿ ಆಧುನಿಕ ಕೋಳಿ ಫಾರಂಗಳೆಂದರೆ ಮಾಂಸಕ್ಕಾಗಿ ಕೋಳಿ ಬೆಳೆಸುವ ಫಾರ್ಮ್ ಬೇರೆ. ಮೊಟ್ಟೆಗಾಗಿ ಬೆಳೆಸುವ ಕೋಳಿಯೇ ಬೇರೆ. ಮಾಂಸಕ್ಕಾಗಿ ಬೆಳೆಸುವ ಕೋಳಿಯ ಮೊಟ್ಟೆಯನ್ನು ಆಹಾರಕ್ಕೆಂದು ಬಳಸುವುದಿಲ್ಲ. ಮಾಂಸಕ್ಕೆಂದು ಬೆಳೆಸುವ ಕೋಳಿ ಗಳನ್ನು ಸಾಮಾನ್ಯವಾಗಿ ದೊಡ್ಡ ದೊಡ್ಡ ಕತ್ತಲೆ ಕೋಣೆಗಳಲ್ಲಿ ಬೆಳೆಸಲಾಗುತ್ತದೆ.
ಕತ್ತಲೆ ಕೋಣೆಯೆಂದರೆ ಅಲ್ಲಿ ಕೋಳಿಗಳು ಜಾಸ್ತಿ ಓಡಾಡುವುದಿಲ್ಲ- ಅವಕ್ಕೆ ಹೆಚ್ಚಿನ ವ್ಯಾಯಾಮ ಇಲ್ಲ. ಅಲ್ಲಿಯೇ ನಿಂತಲ್ಲಿಯೇ. ಅವಕ್ಕೆ ಅತ್ಯಂತ ವೇಗದಲ್ಲಿ ಬೆಳೆಯುವ ಹಾರ್ಮೋನ್ ನೀಡಲಾಗು ತ್ತದೆ. ಇದರಿಂದ ಈ ಬ್ರಾಯ್ಲರ್ ಕೋಳಿಗಳು 6-8 ವಾರದಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದು ಮಾಂಸಕ್ಕೆ ತಯಾರಾಗಿಬಿಡುತ್ತವೆ. ಈ ರೀತಿಯ ಕೋಳಿಗಳು ಬೆಳಕನ್ನು ಕಾಣುವುದು ಬದುಕಿನ ಕೆಲವೇ ಗಂಟೆಗಳಷ್ಟೇ- ಸಾಯುವುದಕ್ಕಿಂತ ಮೊದಲು.
ಕೋಳಿಯ ಸರಾಸರಿ ಆಯಸ್ಸು 5-6 ವರ್ಷ. ಅದರರ್ಥ ಕೋಳಿ ಸಹಜವಾಗಿ ಪೂರ್ಣ ಬೆಳವಣಿಗೆಗೆ ವರ್ಷಗಳ ಕಾಲ ಬೇಕು. ಆದರೆ ಇಂಥ ವ್ಯವಸ್ಥೆಯಲ್ಲಿ ಅವುಗಳನ್ನು 5-6 ವಾರದಲ್ಲಿಯೇ ಬೆಳೆಯು ವಂತೆ ಮಾಡುವುದರಿಂದ ಆ ಕೋಳಿಗಳು ಅಕ್ಷರಶಃ ಮಾಂಸದ ಮುದ್ದೆಯಂತೆಯೇ ಆಗಿ ಬಿಡುತ್ತವೆ. ಅವುಗಳ ದೇಹ ಅಷ್ಟು ವೇಗದಲ್ಲಿ ಬೆಳೆಯುವುದರಿಂದ, ಮತ್ತು ಕಾಲು ಅದೇ ಪ್ರಮಾಣದಲ್ಲಿ ಸ್ವಾಭಾ ವಿಕ ಶಕ್ತಿ ಪಡೆಯದಿರುವುದರಿಂದ ಅವುಗಳಲ್ಲಿ ಬಹುತೇಕ ತನ್ನ ಕಾಲಮೇಲೆ ತಾನೇ ನಿಲ್ಲದಾದವು.
ಇನ್ನು ಮೊಟ್ಟೆ ಉದ್ದೇಶಿತ ಫಾರ್ಮ್‌ಗಳು. ಈ ಮೊಟ್ಟೆಯಿಡುವ ಕೋಳಿಗಳನ್ನು ಮಾಂಸಕ್ಕೆ ಬಳಸು ವುದಿಲ್ಲ. ಇವು ಮೊಟ್ಟೆಗೆಂದೇ ಬೆಳೆಸುವ ಕೋಳಿಗಳು. ಹಾಗಾಗಿ ಮೊಟ್ಟೆಯಿಡುವ ಕ್ಷಮತೆ ಕಳೆದು ಕೊಳ್ಳುತ್ತಿದ್ದಂತೆ ಅವನ್ನು ಕೊಲ್ಲಲಾಗುತ್ತದೆ- ಆನಂತರ ಅವುಗಳನ್ನು ಗದ್ದೆಗಳಲ್ಲಿ ಗೊಬ್ಬರಕ್ಕೆ ಬಳಸಲಾಗುತ್ತದೆ. ಈ ಮೊಟ್ಟೆಯ ಫಾರಂನಲ್ಲಿ ಒಂದಿಷ್ಟು ಮೊಟ್ಟೆಯನ್ನು ಮರಿಗಳಿಗಾಗಿ ಬಿಡಲಾಗುತ್ತದೆ.
ಅಲ್ಲಿ ಮೊಟ್ಟೆಯೊಡೆದು ಮರಿ ಹೊರಬರುತ್ತಿದ್ದಂತೆ ಅವು ಗಂಡಾಗಿದ್ದರೆ ಅವುಗಳನ್ನು ಅಲ್ಲಿಯೇ ಕೊಲ್ಲಲಾಗುತ್ತದೆ. ಎಲ್ಲಿ ಕುಕ್ಕುಟ ಕೃಷಿ ಕೈಗಾರಿಕೀಕರಣಗೊಂಡಿದೆಯೋ ಅಲ್ಲ ಕೋಳಿಯ ಪಾಡು ಇದೇ ಆಗಿದೆ. ಅಷ್ಟೊಂದು ಚಿಕ್ಕ ಜಾಗದಲ್ಲಿ, ಅವಸ್ಥೆಯಲ್ಲಿ ಅವುಗಳನ್ನು ಬೆಳೆಸುವುದರಿಂದ ರೋಗ ಗಳು ಹರಡುವ ಸಾಧ್ಯತೆಯೂ ಅಷ್ಟೇ ಜಾಸ್ತಿ.
ಇತ್ತೀಚೆಗೆ ಅಮೆರಿಕದಲ್ಲಿ ಬರ್ಡ್ -- ಕೋಳಿಜ್ವರ ಎಡೆ ವ್ಯಾಪಿಸಿತ್ತು. ಅದೆಷ್ಟೆಂದರೆ ಇಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ಆಗೊಂದಿಷ್ಟು ತಿಂಗಳು ಚಿಕನ್ ಮತ್ತು ಮೊಟ್ಟೆ ಸಿಗುತ್ತಲೇ ಇರಲಿಲ್ಲ. ಇಡೀ ಅಮೆರಿಕಕ್ಕೆ ಅಮೆರಿಕವೇ ಬೆಳಗಿನ ತಿಂಡಿಗೆ ಏನು ತಿನ್ನುವುದೆಂದು ಕಂಗಾಲದಂತಿತ್ತು. ಇಲ್ಲಿನ ರಾಷ್ಟ್ರೀಯ ವಾಹಿನಿಗಳಲ್ಲಿ ದಿನಬೆಳಗಾದರೆ ಚಿಕನ್- ಮೊಟ್ಟೆಯ ಅಭಾವದ್ದೇ ಸುದ್ದಿ.
ಇವತ್ತಿಗೂ ಇಲ್ಲಿ ಕೋಳಿ ಮೊಟ್ಟೆ ಬೇಕೆಂದಷ್ಟು ಸಿಗುವುದಿಲ್ಲ. ಈಗೀಗ ದೂರದ ಫಿಲಿಪೈನ್ಸ್ ನಿಂದ ಮೊಟ್ಟೆ ತರಿಸಿಕೊಳ್ಳಲಾಗುತ್ತಿದೆ. ಒಂದಕ್ಕೆ ನಾಲ್ಕರಷ್ಟು ತುಟ್ಟಿ. ಅಂಗಡಿಗಳಲ್ಲಿ ಒಬ್ಬರಿಗೆ ಇಂತಿಷ್ಟು ಮಾತ್ರ ಎನ್ನುವ ಬೋಡ್ ಗಳು ಸಾಮಾನ್ಯ. ಈ ಕೋಳಿಜ್ವರ ಅಮೆರಿಕವನ್ನು ಅದೆಷ್ಟು ಬಾಧಿಸಿತು ಎಂದರೆ ಹಿಂದಿನ ವರ್ಷ ಸುಮಾರು ಹತ್ತು ಕೋಟಿ ಕೋಳಿಗಳನ್ನು ಕೋಳಿಜ್ವರದ ಕಾರಣಕ್ಕೆ ಕೊಲ್ಲಲಾಗಿದೆ.
ಇದ್ಯಾವುದೂ ಮಾಂಸಾಹಾರದ ನೈತಿಕತೆಯ ಪ್ರಶ್ನೆ ಅಲ್ಲ. ಬದಲಿಗೆ ಮನುಷ್ಯರಾಗಿ ನಾವು ಕಟ್ಟಿ ಕೊಂಡ ವ್ಯವಸ್ಥೆಯ ನೈತಿಕತೆಯ ಪ್ರಶ್ನೆ. ಬಹುತೇಕ ಪಾಶ್ಚಿಮಾತ್ಯ ದೇಶಗಳಲ್ಲಿ ತರಕಾರಿಗಿಂತ ಚಿಕನ್ ಅಗ್ಗ. ಅದೆಲ್ಲವೂ ಸಾಧ್ಯವಾಗಿರುವುದು ಆಧುನಿಕ ಕೈಗಾರಿಕಾ ಸಾಧ್ಯತೆಯಿಂದಾಗಿ. ಅಲ್ಲಿನ ಅಮಾನ ವೀಯತೆಯ ಸಾಧ್ಯತೆಯಿಂದಾಗಿ. ಕೋಳಿ ಸಾಕಾಣಿಕೆ ಈಗ ಬರೀ ಸಾಕಾಣಿಕೆಯಾಗಿ, ಕೃಷಿಯಾಗಿ ಉಳಿದೇ ಇಲ್ಲ.
ಈಗ ಇದು ಕೈಗಾರಿಕೆ. ಕೋಳಿ ಒಂದು ಉತ್ಪನ್ನ. 300 ಬಿಲಿಯನ್ ಡಾಲರ್ ಜಾಗತಿಕ ವ್ಯವಹಾರ. ಆಕಳು ಹಿಂದೂಗಳಿಗೆ ಶ್ರೇಷ್ಠ. ಹಂದಿ ಮುಸ್ಲಿಮರಿಗೆ ಹರಾಮ. ಹೀಗೆ ಮನುಷ್ಯ ಆಹಾರವಾಗಿ ಸೇವಿಸುವ ಒಂದೊಂದು ಪ್ರಾಣಿಗೂ ಒಂದಿಷ್ಟು ವಿನಾಯತಿಗಳಿವೆ. ಆದರೆ ಚಿಕನ್‌ಗೆ ಮಾತ್ರ ಅಂಥ ಯಾವುದೇ ರಿಯಾಯತಿ ಇಲ್ಲ. ಬೆಳಗೆದ್ದು ಕೋಳಿಯ ಕೂಗನ್ನು ಕೇಳುತ್ತಿದ್ದ ಮನುಷ್ಯ ಈಗೀಗ ಕೋಳಿಯ ಕೂಗನ್ನೇ ಕೇಳದಂತಾಗಿರುವುದು ಆಧುನಿಕತೆಯ ದ್ವಂದ್ವ.
ಒಟ್ಟಾರೆ ಕೋಳಿ ಕೂಗದಿದ್ದರೆ ಬೆಳಗಾಗದಿರುತ್ತದೆಯೇ ಎನ್ನುತ್ತಿದ್ದ ನಾವು ಕೋಳಿ ಕೂಗದಿದ್ದರೆ ಹೊಟ್ಟೆತುಂಬುತ್ತದೆಯೇ? ಎಂದು ಇದೆಲ್ಲವನ್ನೂ ನಿರ್ಲಕ್ಷಿಸಬೇಕಷ್ಟೆ.