Ranjith H Ashwath Column: ಇನ್ನಾದರೂ ಒಂದಾಗುವುದೇ ಕಮಲದ ದಳಗಳು ?
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ನೇಮಕಗೊಂಡ ದಿನದಿಂದ ಬಿಜೆಪಿ ಭಿನ್ನಮತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದರಿಂದ ಬಿಜೆಪಿಗಾದ ಲಾಭ-ನಷ್ಟಕ್ಕಿಂತ ಮಿಗಿಲಾಗಿ ಕಾಂಗ್ರೆಸ್ ಸರಕಾರಕ್ಕಾದ ಲಾಭವನ್ನು ಲೆಕ್ಕ ಹಾಕುವುದು ಸುಲಭ ಎಂದರೆ ತಪ್ಪಾಗುವುದಿಲ್ಲ.


ಅಶ್ವತ್ಥಕಟ್ಟೆ
ranjith.hoskere@gmail.com
ರಾಜಕೀಯ ಪಕ್ಷಗಳೆಂದ ಮೇಲೆ ಭಿನ್ನಾಭಿಪ್ರಾಯಗಳು ಸರ್ವೇಸಾಮಾನ್ಯ. ಸರ್ವಾನುಮತದ ಆಯ್ಕೆಯಾದ ಬಳಿಕವೂ ಅನೇಕರ ಬಳಿ ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಈ ರೀತಿಯ ಅಸಮಾಧಾನ, ಭಿನ್ನಾಭಿಪ್ರಾಯ, ಬಂಡಾಯಗಳು ಇಲ್ಲವೆಂದರೆ ಪಕ್ಷಗಳಿಗೆ ಕಳೆ ಬರುವುದಿಲ್ಲ. ಆದರೆ ಈ ಎಲ್ಲವನ್ನು ಮೀರಿ ಒಂದಾಗಿ ಕೆಲಸ ಮಾಡುವುದೇ ಪ್ರತಿಯೊಂದು ರಾಜಕೀಯ ಪಕ್ಷದ ಎದುರಿರುವ ಸವಾಲು. ಈ ಸವಾಲನ್ನು ಯಾವ ರೀತಿಯಲ್ಲಿ ಪಕ್ಷಗಳು ನಿಭಾಯಿಸುತ್ತವೆ ಎನ್ನುವುದರ ಮೇಲೆ ಪಕ್ಷದ ‘ಆಂತರಿಕ ಸ್ವಾಮರಸ್ಯ’ ನಿರ್ಧಾರವಾಗುತ್ತದೆ.
ಅಧಿಕಾರಕ್ಕಾಗಿ ನಾಯಕರು ಮಾಡುವ ಕಿತ್ತಾಟದಿಂದ ಆಯಾ ನಾಯಕರು ಹಾಗೂ ಪಕ್ಷಕ್ಕಾಗುವ ಡ್ಯಾಮೇಜ್ ಗೊತ್ತಾಗುವಷ್ಟರ ವೇಳೆಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿರುತ್ತದೆ. ಪ್ರಾದೇಶಿಕ ಪಕ್ಷಗಳಿಗೆ ಹೋಲಿಸಿದರೆ ರಾಷ್ಟ್ರೀಯ ಪಕ್ಷಗಳಿಗೆ ಆಂತರಿಕ ಭಿನ್ನಾಭಿಪ್ರಾಯವನ್ನು ನಿಭಾಯಿಸು ವುದು ಸುಲಭ.
ಯಾವುದಕ್ಕೂ ನಾಯಕರು ಬಗ್ಗದಿದ್ದರೂ, ರಾಷ್ಟ್ರೀಯ ಪಕ್ಷಗಳಲ್ಲಿರುವ ‘ಹೈಕಮಾಂಡ್’ ಗುಮ್ಮವನ್ನು ತೋರಿಸಿ ರಾಜ್ಯ ಘಟಕಗಳಲ್ಲಿರುವ ಅಸಮಾಧಾನವನ್ನು ಅನೇಕ ಬಾರಿ ತಣಿಸಿರುವ ಉದಾಹರಣೆಗಳಿವೆ. ಇದನ್ನೂ ಮೀರಿದರೆ, ದಿಲ್ಲಿಯಿಂದ ಉಸ್ತುವಾರಿಗಳು ಬಂದು ಎಲ್ಲವನ್ನೂ ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ.
ಇದನ್ನೂ ಓದಿ: Ranjith H Ashwath Column: ಅತಿಯಾದ್ರೆ ʼಕಪ್ʼ ಕೂಡ ಕಪ್ಪಾಗುತ್ತೆ
ಎಲ್ಲವೂ ಸರಿಹೋಗದಿದ್ದರೂ, ಎಚ್ಚರಿಕೆ ನೀಡಿಯಾದರೂ ಸುಮ್ಮನಾಗಿಸಬಹುದು. ಆದರೆ ಪ್ರಾದೇಶಿಕ ಪಕ್ಷಗಳಲ್ಲಿ ಮುಂಚೂಣಿಯಲ್ಲಿರುವ ನಾಯಕರಲ್ಲಿ ಒಬ್ಬರು ಆಚೀಚೆ ಆದರೂ, ಪಕ್ಷವೇ ಇಬ್ಭಾಗವಾಗಿರುವ ಅನೇಕ ನಿದರ್ಶನಗಳು ನಮ್ಮಲ್ಲಿವೆ. ಇಂಥ ಸಮಯದಲ್ಲಿಯೂ ಕರ್ನಾಟಕ ಬಿಜೆಪಿಯಲ್ಲಿ ಕಳೆದ ಎರಡು ವರ್ಷದಲ್ಲಾಗಿರುವ ಬೆಳವಣಿಗೆಗಳು ಈ ಎಲ್ಲ ರಾಜಕೀಯ ಲೆಕ್ಕಾಚಾರ ಗಳನ್ನು ಮೇಲು-ಕೆಳಗೆ ಮಾಡಿವೆ.
ಅದರಲ್ಲಿಯೂ ಕಳೆದ ಒಂದೂವರೆ ದಶಕದ ಅವಧಿಯಲ್ಲಿ, ಬಿಜೆಪಿಯಲ್ಲಿ ಆಂತರಿಕ ಶಿಸ್ತಿನ ಎಲ್ಲೆ ಮೀರಿದರೆ ಕ್ರಮ ತೆಗೆದುಕೊಳ್ಳುವ ನಾಯಕತ್ವವಿದೆ. ಆದರೆ ಈ ‘ಕಠಿಣ ಕ್ರಮ’ದ ನಾಯಕತ್ವವು ಕರ್ನಾಟಕದಲ್ಲಿ ಕಳೆದ ಎರಡು ವರ್ಷದಲ್ಲಿ ಪಕ್ಷದೊಳಗೆ ನಡೆದ ಬಹುಪಾಲು ಅಂಶಗಳು ಕಿವಿಗೆ ಬೀಳದಂತೆ ನಡೆದುಕೊಂಡಿತ್ತು. ರಾಜ್ಯ ಬಿಜೆಪಿಯೊಳಗಾಗುತ್ತಿರುವ ಸಮಸ್ಯೆಗಳ ಸ್ಪಷ್ಟ ಅರಿವಿದ್ದರೂ, ಜಾಣ ಮೌನಕ್ಕೆ ಜಾರಿದ್ದ ವರಿಷ್ಠರು ಈಗ ಎಲ್ಲರೂ ಒಟ್ಟಿಗೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ ಸಂಘ ಪರಿವಾರ ಪ್ರತಿ 15 ದಿನಕ್ಕೊಮ್ಮೆ ಸಮನ್ವಯ ಸಭೆ ನಡೆಸುವಂತೆ ಸೂಚನೆ ನೀಡಿದೆ. ಈ ಸಭೆಯಲ್ಲಿ, ರಾಜ್ಯಾಧ್ಯಕ್ಷರು ಯಾರಾಗಲಿದ್ದಾರೆ ಅಥವಾ ಯಾರಿಗೆ ಯಾವ ಜವಾಬ್ದಾರಿ ಸಿಗಲಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ಹರಿದು ಹಂಚಿಹೋಗಿರುವ ರಾಜ್ಯ ಬಿಜೆಪಿ ಘಟಕವನ್ನು ಒಂದಾಗಿಸುವ ಹಾಗೂ ಪಕ್ಷದ ನಾಯಕರಲ್ಲಿನ ಭಿನ್ನಮತಗಳನ್ನು ಬದಿಗಿಟ್ಟು, ಪಕ್ಷದ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಬೇಕೆಂಬ ಸೂಚನೆ ಬಂದಿದೆ.
‘ಸಮನ್ವಯ ಸಾಧಿಸಬೇಕು’ ಎನ್ನುವ ಹತ್ತಾರು ಸೂಚನೆಗಳು ಈ ಹಿಂದೆ ಹಲವು ಬಾರಿ ಬಂದಿದ್ದರೂ, ಅದನ್ನು ಬಿಜೆಪಿಯ ಬಹುತೇಕ ನಾಯಕರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ‘ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕಷ್ಟ’ ಎನ್ನುವ ಸಂದೇಶ ರವಾನೆ ಯಾಗಿದ್ದು ಹಾಗೂ ಅದಕ್ಕೂ ಮೊದಲು ದಿನ ಬೆಳಗಾದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಟೀಕಿಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಇತರೆ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆಯಾಗಿತ್ತು.
ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಂಘ ಪರಿವಾರಕ್ಕೆ ಆಪ್ತರಾಗಿರುವ ಪ್ರಲ್ಹಾದ್ ಜೋಶಿ ಅವರಿಗೆ ಈ ಸಮನ್ವಯ ಸಭೆಯ ಟಾಸ್ಕ್ ನೀಡಿದ್ದರಿಂದ ಕಳೆದ ಶುಕ್ರವಾರ ಮೊದಲ ಸಭೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅಸಮಾಧಾನಿತರ ಗುಂಪಿನಲ್ಲಿದ್ದ ಅರವಿಂದ ಲಿಂಬಾವಳಿ ಇಬ್ಬರನ್ನೂ ಒಂದೇ ಸಭೆಗೆ ಕರೆ ತರುವ ಉದ್ದೇಶದಿಂದ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನಿವಾಸವನ್ನು ಈ ಸಭೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ದೆಹಲಿಯಲ್ಲಿ ತಮ್ಮ ಸೀಟನ್ನು ಭದ್ರಪಡಿಸಿಕೊಳ್ಳಲು ಮೊಕ್ಕಾಂ ಹೂಡಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೊರತುಪಡಿಸಿ ಸಂಘ ಸೂಚಿಸಿದ್ದ ಬಹುತೇಕ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಮುಖವಾಗಿ, ಪಕ್ಷದಲ್ಲಿ ತಲೆದೋರಿರುವ ಆಂತರಿಕ ಭಿನ್ನಮತಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಸಂಘಟನೆ, ಒಳಬೇಗುದಿ ಸೇರಿದಂತೆ ಹಲವು ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನುವುದು ನಾಯಕರ ಮಾತಾಗಿದೆ. ಆದರೆ ಈ ಒಂದು ಸಭೆಯಿಂದ ಎಲ್ಲವೂ ಬದಲಾಗುತ್ತದೆ ಎನ್ನುವ ನಂಬಿಕೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರಿಗೆ ಇಲ್ಲ. ಏಕೆಂದರೆ, ಕಳೆದ ಎರಡು ವರ್ಷದಲ್ಲಿ ರಾಜ್ಯ ಬಿಜೆಪಿ ನಾಯಕರ ಆಂತರಿಕ ಕಿತ್ತಾಟದಿಂದ ಸಂಘಟನೆ ಸಂಪೂರ್ಣವಾಗಿ ನೆಲಕಚ್ಚಿದೆ. ಬಹುತೇಕ ಕಾರ್ಯಕರ್ತರು ಪಕ್ಷದ ಕೆಲಸದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಮುಂದಿನ ಮೂರು ವರ್ಷದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯನ್ನು ಗಮನ ದಲ್ಲಿರಿಸಿಕೊಂಡು ಕಳೆದ ಎರಡು ಮೂರು ವರ್ಷದಲ್ಲಾಗಿರುವ ಎಡವಟ್ಟನ್ನು ಸರಿಪಡಿಸಿಕೊಳ್ಳಲು ಪ್ರತಿ 15 ದಿನಕ್ಕೊಮ್ಮೆ ಸಮನ್ವಯ ಸಭೆಗೆ ಸೂಚನೆ ನೀಡಲಾಗಿದೆ.
ಈ ಸೂಚನೆಯಂತೆ ನಡೆದ ಸಭೆಯಲ್ಲಿ ಮೇಲ್ನೋಟಕ್ಕೆ ಎಲ್ಲ ಭಿನ್ನಾಭಿಪ್ರಾಯಗಳು ಸರಿಹೋಗಿವೆ ಎನ್ನುವ ಸಂದೇಶವನ್ನು ವಿಜಯೇಂದ್ರ ಪಡೆ ರವಾನಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಸಭೆಯಲ್ಲಿದ್ದ ಕೆಲ ನಾಯಕರ ಪ್ರಕಾರ, ಅರವಿಂದ ಲಿಂಬಾವಳಿ ಸೇರಿದಂತೆ ಬಹುತೇಕ ನಾಯಕರು ಈ ಸಭೆಯಲ್ಲಿ ಹಾಜರಾಗಿದ್ದು ಸಂಘದ ಸೂಚನೆಯ ಮೇರೆಗೆ. ಆದರೆ ಸಭೆಗೆ ಹಾಜರಾಗುವ ಮೊದಲು, ಈ ಸಭೆಯ ನೇತೃತ್ವವನ್ನು ಬಿಜೆಪಿಯ ರಾಜ್ಯಾಧ್ಯಕ್ಷರು ವಹಿಸುವಂತಿಲ್ಲ ಎನ್ನುವ ಷರತ್ತಿನೊಂದಿಗೆ ಹಲವು ನಾಯಕರು ಭಾಗವಹಿಸಿದ್ದಾರೆ.
ಇದರೊಂದಿಗೆ ಮುಂದಿನ ದಿನದಲ್ಲಿ ‘ಸಾಮೂಹಿಕ ನಾಯಕತ್ವ’ ಎನ್ನುವ ಷರತ್ತನ್ನು ಹಾಕಲಾಗಿದೆ ಎನ್ನುವುದು ಸುದ್ದಿ. ಯಾವುದೇ ಒಂದು ರಾಷ್ಟ್ರೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಈ ರೀತಿಯ ಭಿನ್ನಾಭಿಪ್ರಾಯವನ್ನು ಬಗೆಹರಿಸುವ ಬದಲು ‘ಏನಾಗುತ್ತದೆ ನೋಡೋಣ’ ಎನ್ನುವ ಮನಸ್ಥಿತಿಯಲ್ಲಿ ವರಿಷ್ಠರು ಇದ್ದುದರಿಂದಲೇ ಬಿಜೆಪಿಯ ಸಂಘಟನೆ ಈ ಹಂತಕ್ಕೆ ಬಂದು ನಿಂತಿದೆ.
ಹಾಗೆ ನೋಡಿದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ನೇಮಕಗೊಂಡ ದಿನದಿಂದ ಬಿಜೆಪಿ ಭಿನ್ನಮತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದರಿಂದ ಬಿಜೆಪಿಗಾದ ಲಾಭ-ನಷ್ಟಕ್ಕಿಂತ ಮಿಗಿಲಾಗಿ ಕಾಂಗ್ರೆಸ್ ಸರಕಾರಕ್ಕಾದ ಲಾಭವನ್ನು ಲೆಕ್ಕ ಹಾಕುವುದು ಸುಲಭ ಎಂದರೆ ತಪ್ಪಾಗುವುದಿಲ್ಲ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಸರಕಾರದ ಹಲವು ‘ಲೋಪ’ ಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ವಿಫಲವಾಯಿತು. ಮುಡಾ ವಿರುದ್ಧಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಆರಂಭಿಸಿದ್ದ ‘ಮೈಸೂರು ಚಲೋ’ ಪಾದಯಾತ್ರೆ ಸಮಯದಲ್ಲಿ ಚರ್ಚಿಸಬೇಕಾದ ವಿಷಯಕ್ಕಿಂತ ಹೆಚ್ಚಾಗಿ, ಬಿಜೆಪಿಯ ಒಳಜಗಳಗಳಿಗೆ ಸ್ಪಷ್ಟನೆ ನೀಡುವುದೇ ಬಹುದೊಡ್ಡ ವಿಷಯವಾಗಿತ್ತು.
ಈ ಪಾದಯಾತ್ರೆಯಲ್ಲಿ ವಿಜಯೇಂದ್ರ ವಿರೋಧಿ ಪಡೆ ಕಾಣಿಸಿಕೊಳ್ಳಲಿಲ್ಲ ಎನ್ನುವುದೇ ‘ಹೈಲೈಟ್’ ಆಗಿದ್ದು ಸುಳ್ಳಲ್ಲ. ಇನ್ನು ಯತ್ನಾಳ್ ಬಣದಿಂದ ಆರಂಭವಾದ ವಕ್ಫ್ ಜನಜಾಗೃತಿ ಹೋರಾಟ, ಪಕ್ಷದ ವರಿಷ್ಠರಿಗೆ ಒಪ್ಪಿತವಾಯಿತು. ವಕ್‌ನಿಂದ ನೋಟಿಸ್ ಪಡೆದ ಸಂತ್ರಸ್ತರಿಗೆ ಅನುಕೂಲ ವಾಗಿರಬಹುದೇ ಹೊರತು, ಸರಕಾದ ವಿರುದ್ಧ ಜನಾಕ್ರೋಶ ಮೂಡಿಸುವಲ್ಲಿ ಅದು ವಿಫಲವಾಯಿತು.
ಬಿಜೆಪಿ ಘಟಕದಿಂದ ನಡೆದ ಜನಾಕ್ರೋಶ ಯಾತ್ರೆ ಆರಂಭವಾಗಿದ್ದು, ಕೊನೆಯಾಗಿದ್ದು ಅನೇಕರಿಗೆ ತಿಳಿಯಲಿಲ್ಲ. ಪಕ್ಷವಾಗಿ ಒಡೆದುಹೋಗಿದ್ದ ಬಿಜೆಪಿ ಯಾವುದೇ ಹೋರಾಟಕ್ಕೆ ಮುಂದಾದರೂ ಪಕ್ಷದೊಳಗಿನ ಭಿನ್ನಮತವೇ ಮುನ್ನೆಲೆಗೆ ಬರುವ ಮೂಲಕ ಆಡಳಿತ ಪಕ್ಷಕ್ಕೆ ‘ಡಿಫೆಂಡ್’ ಮಾಡಿ ಕೊಳ್ಳಬೇಕು ಎನ್ನುವ ಅನಿವಾರ್ಯತೆಯನ್ನೇ ಸೃಷ್ಟಿಸಲಿಲ್ಲ.
ರಾಜ್ಯ ಸರಕಾರದ ವಿರುದ್ಧದ ಸರಣಿ ಆರೋಪಗಳ ಹೊರತಾಗಿಯೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ರಾಜ್ಯ ಬಿಜೆಪಿ ಘಟಕ ಯಶ ಕಾಣದಿರುವ ಹಂತಕ್ಕೆ ತಲುಪಿ ಹಲವು ತಿಂಗಳುಗಳೇ ಕಳೆದರೂ ದಿಲ್ಲಿಯಲ್ಲಿದ್ದ ನಾಯಕರು ಕಾದು ಕೂತರು. ಆದರೆ ರಾಜ್ಯ ಮಟ್ಟದಲ್ಲಿಯೇ ಎಲ್ಲ ಗೊಂದಲಗಳನ್ನು ಸರಿಪಡಿಸುವ ಯಾವ ಸೂಚನೆಯೂ ಕಾಣದ ಹಿನ್ನೆಲೆಯಲ್ಲಿ ಇದೀಗ ಸಮನ್ವಯ ಸಭೆಗಳಿಗೆ ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಈ ರೀತಿಯ ಸಮನ್ವಯ ಸಮಿತಿಗಳನ್ನು ಮೈತ್ರಿಪಕ್ಷಗಳ ನಡುವಿನ ಗೊಂದಲಗಳ ನಿವಾರಣೆಗೆ ಮಾಡಲಾಗುತ್ತದೆ. ಆದರೆ ಕರ್ನಾಟಕ ಬಿಜೆಪಿಯಲ್ಲಿ ಪಕ್ಷದೊಳಗಿನ ‘ಹಿರಿ’ ನಾಯಕರನ್ನು ಒಂದು ಕಡೆ ಕೂರಿಸಲು ಅದನ್ನು ಮಾಡಬೇಕಾದ ಸ್ಥಿತಿ ಬಂದಿರುವುದು ಬಿಜೆಪಿಯ ಇಂದಿನ ಪರಿಸ್ಥಿತಿಯನ್ನು ತೋರಿಸುತ್ತದೆ.
ಆರಂಭದಲ್ಲಿ ಈ ಸಮನ್ವಯ ಸಮಿತಿ ಸಭೆಯನ್ನು ‘ಸಂಧಾನ’ದ ಸಭೆಯೆಂದೇ ಹೇಳಲಾಗಿತ್ತು. ಅದರಲ್ಲಿಯೂ ವಿಜಯೇಂದ್ರ ಹಾಗೂ ಅರವಿಂದ ಲಿಂಬಾವಳಿ ನಡುವೆ ಸಂಧಾನ ನಡೆದಿದೆ ಎನ್ನಲಾಗುತ್ತಿತ್ತು. ಆದರೆ ಈ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಒಂದೇ ಸಭೆಯಲ್ಲಿ ಎಲ್ಲವೂ ಸರಿಹೋಯಿತು ಎನ್ನುವ ಹಂತದಲ್ಲಿಲ್ಲ ಎನ್ನುವುದು ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುವ ಯಾರಿಗೇ ಆದರೂ ಆರ್ಥವಾಗುವ ಸಂಗತಿಯಾಗಿದೆ.
ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದ ಕಾರ್ಯದಿಂದ ದೂರ ಉಳಿದಿದ್ದವರು ಈಗ ಒಂದೇ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಮನೆಯೊಂದು, ಹತ್ತಾರು ಬಾಗಿಲು’ ಎನ್ನುವಂತಾಗಿದ್ದ ಬಿಜೆಪಿಯಲ್ಲಿ ಕೊನೆಗಾದರೂ ಈ ರೀತಿಯ ಸಭೆಗಳನ್ನು ನಡೆಸಲು ಮುಂದಾಗಿರುವುದು ಪಕ್ಷದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಈ ಸಭೆಗಳ ಮೂಲಕ ವಿಜಯೇಂದ್ರ ಹಾಗೂ ಭಿನ್ನಮತೀಯರ ನಡುವಿನ ಬಿರುಕು ಯಾವ ಮಟ್ಟಕ್ಕೆ ಸರಿಹೋಗುವುದೋ ಗೊತ್ತಿಲ್ಲ.
ಆದರೆ ಪಕ್ಷದ ಕಾರ್ಯಕರ್ತರಿಗೆ ಮುಂದೊಂದು ದಿನವಾದರೂ ಪಕ್ಷದೊಳಗಿನ ಭಿನ್ನಮತ ಕೊನೆ ಯಾಗಲಿದೆ ಎನ್ನುವ ಸಣ್ಣ ಭರವಸೆ ಮೂಡಲು ಹಾಗೂ ಪುನಃ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲು, ಈ ನಡೆ ಮಹತ್ವದ್ದಾಗಿದೆ. ಸಂಘ ಹಾಗೂ ಪಕ್ಷದ ವರಿಷ್ಠರು ಕಂಡುಕೊಂಡಿರುವ ಈ ಮಾರ್ಗದಲ್ಲಿಯೇ ರಾಜ್ಯ ನಾಯಕರು ಸಾಗಿದರೆ, ಅದು ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ ರಾಜ್ಯ ನಾಯಕರು ಈ ಸಭೆಯನ್ನು ಎಷ್ಟು ದಿನದವರೆಗೆ ಎಳೆದುಕೊಂಡು ಹೋಗಲಿದ್ದಾರೆ ಎನ್ನುವುದೇ ಈಗಿರುವ ಕುತೂಹಲ.