ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಬೋರ್ಡ್‌ ಆಫ್‌ ಪೀಸ್:‌ ವಿಶ್ವಸಂಸ್ಥೆಗೆ ಪರ್ಯಾಯವೇ ?

ಸದಸ್ಯ ರಾಷ್ಟ್ರಗಳಿಗೆ ಸಾಮಾನ್ಯವಾಗಿ 3 ವರ್ಷಗಳ ಅವಧಿಯ ಸದಸ್ಯತ್ವ ಮಾತ್ರ ಇರುತ್ತದೆ; ನಂತರ ಮಂಡಳಿಯ ಚೇರ್ಮನ್ನರ ಅನುಮತಿಯ ಮೇರೆಗೆ ಈ ಅವಧಿಯನ್ನು ನವೀಕರಿಸ ಬಹುದು. ಆದರೆ ಮಂಡಳಿಯ ಚಟುವಟಿಕೆಗಳಿಗೆ ಹಣಕಾಸು ನೆರವಿನ ರೂಪದಲ್ಲಿ ದೇಶ ವೊಂದು ಒಂದು ಬಿಲಿಯನ್ ಡಾಲರ್‌ನಷ್ಟು ಹಣವನ್ನು ಪಾವತಿಸಿದರೆ ಶಾಶ್ವತ ಸದಸ್ಯತ್ವ ವನ್ನು ಪಡೆಯಲು ಅವಕಾಶವಿರುತ್ತದೆ ಎಂದು ಕರಡು ಸಂವಿಧಾನದಲ್ಲಿ ಹೇಳಲಾಗಿದೆ.

ವಿಶ್ವಪರ್ಯಟನೆ

ಪ್ರಕಾಶ ಹೆಗಡೆ

ಯುನೈಟೆಡ್ ನೇಷನ್ಸ್ ಎಂಬುದು 1945ರಲ್ಲಿ ಸ್ಥಾಪಿತವಾದ ಜಾಗತಿಕ ಸಂಸ್ಥೆ. ಇದನ್ನು ನಾವು ‘ವಿಶ್ವಸಂಸ್ಥೆ’ ಅಥವಾ ‘ಸಂಯುಕ್ತ ರಾಷ್ಟ್ರ ಸಂಸ್ಥೆ’ ಎಂದು ಕರೆಯುವುದು ವಾಡಿಕೆ. ಇದು ವಿಶ್ವಶಾಂತಿ, ಭದ್ರತೆ, ಮಾನವ ಹಕ್ಕುಗಳ ರಕ್ಷಣೆ, ಆರ್ಥಿಕ-ಸಾಮಾಜಿಕ ಅಭಿವೃದ್ಧಿ ಮತ್ತು ರಾಷ್ಟ್ರಗಳ ನಡುವಿನ ಸಹಕಾರವನ್ನು ಉತ್ತೇಜಿಸುವ ಪ್ರಮುಖ ಉದ್ದೇಶವನ್ನು ಹೊಂದಿರುವ ಸಂಸ್ಥೆ.

ವಿಶ್ವಸಂಸ್ಥೆಯ ಇಂದಿನ ಪಾತ್ರವು ಬಹುತೇಕ ‘ಪೇಪರ್ ಟೈಗರ್’ನಂತಾಗಿದೆ ಎಂಬ ಅಭಿಪ್ರಾಯ ಹಲವಾರು ದೇಶಗಳಲ್ಲಿ ಮೂಡಿದೆ. ಉದ್ದೇಶಗಳು ಮಹತ್ವದ್ದಾಗಿದ್ದರೂ, ಅವುಗಳನ್ನು ಜಾರಿಗೆ ತರುವ ಶಕ್ತಿ ಮತ್ತು ಪರಿಣಾಮಕಾರಿ ಅಧಿಕಾರ ಈ ಸಂಸ್ಥೆಗೆ ಇಲ್ಲ ಎಂಬ ಟೀಕೆ ಹೆಚ್ಚಾಗಿದೆ.

ಕೆಲವರಿಗೆ ಇದು ಭಾರಿ ವೆಚ್ಚದಾಯಕವಾಗಿರುವ ಬಿಳಿಯಾನೆಯಂತೆ ಕಾಣುತ್ತಿದ್ದು, ನಿರ್ಣಯಗಳನ್ನು ಜಾರಿಗೊಳಿಸುವಲ್ಲಿ ದಂತವಿಲ್ಲದ ಹುಲಿಯಂತಿದೆ. ಪರಿಣಾಮವಾಗಿ ಅನೇಕ ರಾಷ್ಟ್ರಗಳು ವಿಶ್ವಸಂಸ್ಥೆಗೆ ಹಿಂದಿನಂತೆ ಮಹತ್ವ ನೀಡುತ್ತಿಲ್ಲ. ಅಮೆರಿಕ ಸೇರಿದಂತೆ ಕೆಲವು ಶಕ್ತಿಶಾಲಿ ದೇಶಗಳು ಕೂಡ ಈ ಸಂಸ್ಥೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಇದನ್ನೂ ಓದಿ: Prakash Hegde Column: ಅಮೆರಿಕದ ಆರ್ಥಿಕ ಪರಿವರ್ತನೆ: ಸಾಲ ಮರುಪಾವತಿಗೆ ತಂತ್ರ

ಇಂಥ ಪರಿಸ್ಥಿತಿಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಚೆಕ್‌ಮೇಟ್’ ದಾಳವನ್ನು ಉರುಳಿಸಿದ್ದಾರೆ. ಗಾಜಾ ಯುದ್ಧವನ್ನು ಅಂತ್ಯಗೊಳಿಸುವ ತಮ್ಮ ಯೋಜನೆ ಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಿಸಿದ ಅವರು, ಮೊದಲ ಬಾರಿಗೆ ‘ಬೋರ್ಡ್ ಆಫ್ ಪೀಸ್’ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದಾರೆ. ‌

ನಂತರ, ಈ ಮಂಡಳಿಯ ವ್ಯಾಪ್ತಿಯನ್ನು ಗಾಜಾ ಮಾತ್ರವಲ್ಲದೆ, ಜಗತ್ತಿನ ಇತರೆ ಸಂಘರ್ಷ ಗಳ ಪರಿಹಾರಕ್ಕೂ ವಿಸ್ತರಿಸಲಾಗುವುದೆಂದು ಹೇಳಿಕೆ ನೀಡಿದ್ದಾರೆ. ಟ್ರಂಪ್ ಈ ಮಂಡಳಿಯ ಪ್ರಥಮ ಅಧ್ಯಕ್ಷರಾಗಿದ್ದು, ಜಗತ್ತಿನಾದ್ಯಂತ ಶಾಂತಿಯನ್ನು ಉತ್ತೇಜಿಸುವ ಮತ್ತು ಸಂಘರ್ಷ ಗಳನ್ನು ಪರಿಹರಿಸುವ ಹೊಣೆಗಾರಿಕೆಯನ್ನು ಈ ಮಂಡಳಿಗೆ ನೀಡಲಾಗುತ್ತದೆ.

ಸದಸ್ಯ ರಾಷ್ಟ್ರಗಳಿಗೆ ಸಾಮಾನ್ಯವಾಗಿ 3 ವರ್ಷಗಳ ಅವಧಿಯ ಸದಸ್ಯತ್ವ ಮಾತ್ರ ಇರುತ್ತದೆ; ನಂತರ ಮಂಡಳಿಯ ಚೇರ್ಮನ್ನರ ಅನುಮತಿಯ ಮೇರೆಗೆ ಈ ಅವಧಿಯನ್ನು ನವೀಕರಿಸ ಬಹುದು. ಆದರೆ ಮಂಡಳಿಯ ಚಟುವಟಿಕೆಗಳಿಗೆ ಹಣಕಾಸು ನೆರವಿನ ರೂಪದಲ್ಲಿ ದೇಶ ವೊಂದು ಒಂದು ಬಿಲಿಯನ್ ಡಾಲರ್‌ನಷ್ಟು ಹಣವನ್ನು ಪಾವತಿಸಿದರೆ ಶಾಶ್ವತ ಸದಸ್ಯತ್ವ ವನ್ನು ಪಡೆಯಲು ಅವಕಾಶವಿರುತ್ತದೆ ಎಂದು ಕರಡು ಸಂವಿಧಾನದಲ್ಲಿ ಹೇಳಲಾಗಿದೆ.

Screenshot_10 R

ಮಂಡಳಿಯ ಸನ್ನದಿನ (ಚಾರ್ಟರ್) ಪ್ರಕಾರ, ಅದರ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ವ್ಯಾಪಕ ಕಾರ್ಯನಿರ್ವಾಹಕ ಅಧಿಕಾರಗಳಿದ್ದು, ಕೆಲವು ನಿಯಂತ್ರಣಗಳ ಅಧೀನ ದಲ್ಲಿಯೇ ನಿರ್ಣಯಗಳನ್ನು ‘ವೀಟೋ’ ಮಾಡುವ ಹಾಗೂ ಸದಸ್ಯರನ್ನು ಪದಚ್ಯುತಗೊಳಿ ಸುವ ಶಕ್ತಿಯೂ ಇದೆ. ಸನ್ನದಿನಲ್ಲಿಯೇ ಹೇಳಿರುವಂತೆ, ‘ಬೋರ್ಡ್ ಆಫ್ ಪೀಸ್’ ಸಜ್ಜಿಕೆಯು ಅಂತಾರಾಷ್ಟ್ರೀಯ ಕಾನೂನುಗಳ ಚೌಕಟ್ಟಿನೊಳಗೆ ಶಾಂತಿನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಿದೆ. ‌

ದಾವೋಸ್‌ನಲ್ಲಿ World Economic Forum ವೇಳೆ ಆಯೋಜಿಸಿದ್ದ ಸಮಾರಂಭ ದಲ್ಲಿ ಸದರಿ ಶಾಂತಿ ಮಂಡಳಿಯನ್ನು ಟ್ರಂಪ್ ಅನಾವರಣಗೊಳಿಸಿದರು. ಅವರೇ ಉಲ್ಲೇಖಿಸಿದ್ದಂತೆ, ಮಂಡಳಿಗೆ 59 ದೇಶಗಳು ಒಪ್ಪಿಗೆ ಕೊಟ್ಟಿದ್ದರೂ, ಸಮಾರಂಭದಲ್ಲಿ ಉಪಸ್ಥಿತರಿದ್ದು ಸಹಿ ಹಾಕಿದವರು 19 ದೇಶಗಳ ಪ್ರತಿನಿಧಿಗಳು ಮಾತ್ರ.

ಈ ಪೈಕಿ ಅಮೆರಿಕದೊಂದಿಗೆ ಮೈತ್ರಿ ಹೊಂದಿರುವ ಮಧ್ಯಪ್ರಾಚ್ಯ ರಾಷ್ಟ್ರಗಳು, ‘ನ್ಯಾಟೋ’ ಒಕ್ಕೂಟದ ಸದಸ್ಯರಾದ ತುರ್ಕಿಯೆ ಮತ್ತು ಹಂಗೇರಿ, ಏಷ್ಯಾದ ಕೆಲವು ರಾಷ್ಟ್ರಗಳು ಮತ್ತು ಪೂರ್ವ ಯುರೋಪ್ ರಾಷ್ಟ್ರಗಳು ಸೇರಿವೆ.

ರಷ್ಯಾ ಮತ್ತು ಚೀನಾ ಇನ್ನೂ ತಮ್ಮ ನಿರ್ಧಾರವನ್ನು ಪ್ರಕಟಿಸಿಲ್ಲ. ಇವೆರಡೂ ವಿಶ್ವಸಂಸ್ಥೆ ಯ ಭದ್ರತಾ ಮಂಡಳಿಯಲ್ಲಿ ‘ವೀಟೋ’ ಅಧಿಕಾರ ಹೊಂದಿರುವ ಸದಸ್ಯದೇಶಗಳಾಗಿರುವು ದರಿಂದ, ವಿಶ್ವಸಂಸ್ಥೆಯಲ್ಲಿ ತಮ್ಮ ಶಕ್ತಿಯನ್ನು ಕುಂದಿಸುವಂತಾಗುವ ಯಾವುದೇ ಹೊಸ ಉಪಕ್ರಮಗಳ ಬಗ್ಗೆ ಅವು ಎಚ್ಚರಿಕೆಯಿಂದ ವರ್ತಿಸುವ ಸಾಧ್ಯತೆಯಿದೆ. ಜಪಾನ್ ತನ್ನ ಸ್ಪಷ್ಟ ನಿಲುವನ್ನು ಸಾರ್ವಜನಿಕವಾಗಿ ಇನ್ನೂ ಪ್ರಕಟಿಸಿಲ್ಲ.

ಟ್ರಂಪ್ ಅವರ ಆಕ್ರಮಣಕಾರಿ, ಏಕಪಕ್ಷೀಯ ಮತ್ತು ‘ಅಮೆರಿಕ ಮೊದಲು’ ಎನ್ನುವ ವಿದೇಶಾಂಗ ನೀತಿಯ ಶೈಲಿಯಿಂದ ಅಸಮಾಧಾನಗೊಂಡಿರುವ ಅಮೆರಿಕದ ಕೆಲವು ಮಿತ್ರ ರಾಷ್ಟ್ರಗಳಿಂದ ಎಚ್ಚರಿಕೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ನ್ಯಾಟೋ’ ಒಕ್ಕೂಟದ ದೇಶಗಳ ಪೈಕಿ ನಾರ್ವೆ, ಡೆನ್ಮಾರ್ಕ್ ಮತ್ತು ಸ್ವೀಡನ್ ‘ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರೆ, ಫ್ರಾನ್ಸ್ ಮತ್ತು ಇಟಲಿ ದೇಶಗಳು ಈ ಪ್ರಸ್ತಾವನೆಯನ್ನು ಪರಿಣಾಮಕಾರಿಯಾಗಿ ತಿರಸ್ಕರಿಸುತ್ತಿವೆ.

ಜರ್ಮನಿ, ಬ್ರಿಟನ್ ಮತ್ತು ಕೆನಡಾ ಮಾತ್ರ ಇನ್ನೂ ಎಚ್ಚರಿಕೆಯ ನಿಲುವಿನಲ್ಲಿದ್ದು, ಸ್ಪಷ್ಟ ನಿರ್ಧಾರವನ್ನು ಕೈಗೊಂಡಿಲ್ಲ. ವಿಶ್ವಸಂಸ್ಥೆಯಂಥ ಸ್ಥಾಪಿತ ಬಹುಪಕ್ಷೀಯ ವ್ಯವಸ್ಥೆಯ ಹೊರಗೆ ಕಾರ್ಯನಿರ್ವಹಿಸುವ ಅಮೆರಿಕ ನೇತೃತ್ವದ ಈ ಮಂಡಳಿಯ ಬಗ್ಗೆ ‘ನ್ಯಾಟೋ’ ಒಳಗಡೆ ವ್ಯಾಪಕ ಅನುಮಾನಗಳಿವೆ, ಅಸಹಜ ಅಭಿಪ್ರಾಯಗಳಿವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.

ಉಕ್ರೇನ್ ತಾನು ರಷ್ಯಾದೊಂದಿಗೆ ಒಂದೇ ಮಂಡಳಿಯಲ್ಲಿ ಸೇರಿಕೊಳ್ಳುವ ಬಗ್ಗೆ ದ್ವಂದ್ವ ದಲ್ಲಿದೆ. ಅಂತೆಯೇ, ವ್ಯಾಟಿಕನ್‌ನ ಪೋಪ್ʼರವರಿಗೂ ಆಮಂತ್ರಣವಿದ್ದು, ಅವರು ಈ ಪ್ರಸ್ತಾವನೆಯನ್ನು ಇನ್ನೂ ಪರಿಶೀಲಿಸುತ್ತಿದ್ದಾರೆ.

ಈ ಹಂತದಲ್ಲಿ ಭಾರತವು ಟ್ರಂಪ್ ಅವರ ‘ಬೋರ್ಡ್ ಆಫ್ ಪೀಸ್’ಗೆ ಸೇರುವ ಬಗ್ಗೆ ಯಾವುದೇ ಅಧಿಕೃತ ಒಪ್ಪಿಗೆಯನ್ನೂ ನೀಡಿಲ್ಲ ಅಥವಾ ನಿರಾಕರಣೆಯನ್ನೂ ಪ್ರಕಟಿಸಿಲ್ಲ. ಭಾರತದ ನಿಲುವು ಸಾಮಾನ್ಯವಾಗಿ ಜಾಗರೂಕವಾಗಿರುವಂಥದ್ದೂ, ತಂತ್ರಾತ್ಮಕವಾಗಿರು ವಂಥದ್ದೂ ಆಗಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ವಿಶ್ವಸಂಸ್ಥೆ ಹಾಗೂ ಇತರ ಬಹುಪಕ್ಷೀಯ ಸಂಸ್ಥೆಗಳ ಪಾತ್ರವನ್ನು ದುರ್ಬಲಗೊಳಿಸುವ ಯಾವುದೇ ಹೊಸ ವ್ಯವಸ್ಥೆಗಳ ಬಗ್ಗೆ ಭಾರತವು ಎಚ್ಚರ ವಹಿಸುತ್ತದೆ. ಶಾಂತಿ, ಸಂವಾದ ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರುವುದನ್ನು ಭಾರತವು ಒತ್ತಿ ಹೇಳು ತ್ತದೆಯಾದರೂ, ಒಂದು ದೇಶದ ನಾಯಕತ್ವದಡಿ ಕಾರ್ಯನಿರ್ವಹಿಸುವ ಮತ್ತು ಸ್ಪಷ್ಟ ಕಾನೂನು ಅಧಿಕಾರವಿಲ್ಲದ ವೇದಿಕೆಗೆ ಸೇರುವುದಕ್ಕೆ ಭಾರತವು ಸಂಶಯಪಡುವ ಸಾಧ್ಯತೆ ಹೆಚ್ಚಿದೆ.

ಜತೆಗೆ, ರಷ್ಯಾ, ಚೀನಾ ಹಾಗೂ ಪಶ್ಚಿಮ ರಾಷ್ಟ್ರಗಳ ನಡುವೆ ಸಮತೋಲನ ಕಾಯ್ದು ಕೊಳ್ಳುವ ಭಾರತದ ವಿದೇಶಾಂಗ ನೀತಿಯ ಹಿನ್ನೆಲೆಯಲ್ಲಿ, ಭಾರತವು ತ್ವರಿತ ನಿರ್ಧಾರ ಕ್ಕಿಂತ ಪರಿಸ್ಥಿತಿಯನ್ನು ಗಮನಿಸಿ ಲೆಕ್ಕಾಚಾರ ಮಾಡುವ ಮಾರ್ಗವನ್ನೇ ಅನುಸರಿಸುವ ಸಾಧ್ಯತೆ ಹೆಚ್ಚು. ಸದಸ್ಯತ್ವವು ವಿಷಭರಿತ ಪಾತ್ರೆಯಂತೆ ಇರುವುದರಿಂದ, 2003ರಲ್ಲಿ ಉತ್ತರ ಇರಾಕ್‌ನಲ್ಲಿ ಶಾಂತಿಪಾಲನೆಗೆ ಭಾರತೀಯ ಸೇನಾದಳವನ್ನು ಕಳುಹಿಸಬೇಕೆಂಬ ಅಮೆರಿಕ ದ ಆಹ್ವಾನವನ್ನು ವಾಜಪೇಯಿಯವರು ಜಾಣ್ಮೆಯಿಂದ ತಪ್ಪಿಸಿಕೊಂಡಂತೆ, ಈಗಲೂ ನವದೆಹಲಿಯು ಈ ಪ್ರಸ್ತಾವವನ್ನು ದೂರವಿಡಬೇಕು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಳೆದ ನವೆಂಬರ್ʼನಲ್ಲಿ ‘ಬೋರ್ಡ್ ಆಫ್ ಪೀಸ್’ ಅನ್ನು ಅನುಮೋದಿಸಿದೆ. ಆದರೆ ಈ ಅನುಮೋದನೆ 2027ರವರೆಗೆ ಮಾತ್ರ ಸೀಮಿತ‌ ವಾಗಿದ್ದು, ಅದರ ಕಾರ್ಯವ್ಯಾಪ್ತಿ ಸಂಪೂರ್ಣವಾಗಿ ಗಾಜಾ ಪ್ರದೇಶದ ಮೇಲೆಯೇ ಕೇಂದ್ರೀ ಕೃತವಾಗಿರಬೇಕು ಎಂದು ನಿರ್ಧರಿಸಲಾಗಿದೆ.

ಈ ನಿರ್ಣಯಕ್ಕೆ ರಷ್ಯಾ ಮತ್ತು ಚೀನಾ ತಟಸ್ಥವಾಗಿ ಮತ ಹಾಕಿದ್ದು, ಅಮೆರಿಕ ರೂಪಿಸಿದ ನಿರ್ಣಯದಲ್ಲಿ ಗಾಜಾಪಟ್ಟಿ ಪ್ರದೇಶದ ಭವಿಷ್ಯದಲ್ಲಿ ವಿಶ್ವಸಂಸ್ಥೆಗೆ ಸ್ಪಷ್ಟವಾದ ಪಾತ್ರ ವನ್ನು ನೀಡಲಾಗಿಲ್ಲ ಎಂಬ ಅಸಮಾಧಾನವನ್ನು ಅವು ವ್ಯಕ್ತಪಡಿಸಿವೆ.

‘ಬೋರ್ಡ್ ಆಫ್ ಪೀಸ್’ ಎಂಬ ವ್ಯವಸ್ಥೆಯು ವಿಶ್ವಸಂಸ್ಥೆಯ ಪ್ರಾಮುಖ್ಯವನ್ನು ಹಂತ ಹಂತವಾಗಿ ಕುಗ್ಗಿಸುವ ಸಾಧ್ಯತೆಯನ್ನು ಹೊಂದಿದೆ ಎಂಬ ಆತಂಕವನ್ನು ಅನೇಕ ರಾಷ್ಟ್ರ ಗಳು ವ್ಯಕ್ತಪಡಿಸುತ್ತಿವೆ. ವಿಶ್ವಸಂಸ್ಥೆಯು ಬಹುಪಕ್ಷೀಯತೆ, ಸಮಾನ ಸದಸ್ಯತ್ವ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದರೆ, ‘ಬೋರ್ಡ್ ಆಫ್ ಪೀಸ್’ ಸಜ್ಜಿಕೆಯು ಒಂದು ದೇಶದ ನಾಯಕತ್ವದಡಿ, ಆಯ್ದ ರಾಷ್ಟ್ರ‌ ಗಳೊಂದಿಗೆ ಕಾರ್ಯನಿರ್ವಹಿಸುವ ಏಕಪಕ್ಷೀಯ ವೇದಿಕೆಯಾಗುವ ಅಪಾಯವಿದೆ.

ಇಂಥ ವ್ಯವಸ್ಥೆಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಶಾಂತಿಪಾಲನಾ ಕಾರ್ಯಾಚರಣೆ ಗಳು ಮತ್ತು ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಅಪ್ರಸ್ತುತಗೊಳಿಸಿ, ಜಾಗತಿಕ ಆಡಳಿತವನ್ನು ಕೆಲವೇ ಶಕ್ತಿಶಾಲಿ ರಾಷ್ಟ್ರಗಳ ನಿಯಂತ್ರಣಕ್ಕೆ ತಳ್ಳಬಹುದು.

ದೀರ್ಘಾವಧಿಯಲ್ಲಿ ಇದು ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ, ಪ್ರಭಾವ ಮತ್ತು ಅಸ್ತಿತ್ವವೇ ಪ್ರಶ್ನಿಸಲ್ಪಡುವ ಮಟ್ಟಿಗೆ ಅದನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂಬುದು ಪ್ರಮುಖ ಚಿಂತೆಯಾಗಿದೆ.

ಡೊನಾಲ್ಡ್ ಟ್ರಂಪ್ ಅವರ ‘ಬೋರ್ಡ್ ಆಫ್ ಪೀಸ್’ ಎಂಬ ಪರಿಕಲ್ಪನೆಯು ಶಾಂತಿಯ ಆದರ್ಶವನ್ನು ಪ್ರತಿಪಾದಿಸುವುದಾಗಿ ಹೇಳಿಕೊಂಡರೂ, ಅದರ ಅರ್ಥ ಮತ್ತು ಅನುಷ್ಠಾನ ವು ಬಹಳ ವಿವಾದಾತ್ಮಕವಾಗಿದೆ. ಟ್ರಂಪ್ ಅವರ ದೃಷ್ಟಿಯಲ್ಲಿ ಶಾಂತಿ ಅಂದರೆ ನೈತಿಕತೆ ಅಥವಾ ಅಂತಾರಾಷ್ಟ್ರೀಯ ಸಹಮತಕ್ಕಿಂತಲೂ ಅಮೆರಿಕದ ಶಕ್ತಿ, ಪ್ರಾಬಲ್ಯ ಮತ್ತು ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ನೀತಿ. ‌

ಅವರ ಆಡಳಿತದಲ್ಲಿ ಶಾಂತಿ ಮಾತುಕತೆಯ ಜತೆಗೆ, ಕಠಿಣ ಆರ್ಥಿಕ ನಿರ್ಬಂಧಗಳು, ಸೇನಾ ಒತ್ತಡ ಮತ್ತು ‘ಬಲದ ಮೂಲಕ ಶಾಂತಿ’ ಎಂಬ ತತ್ವವು ಸ್ಪಷ್ಟವಾಗಿ ಕಾಣಿಸಿಕೊಳ್ಳುವು ದನ್ನು ನಾವೆಲ್ಲರೂ ನೋಡಿದ್ದೇವೆ, ಅನುಭವಿಸಿದ್ದೇವೆ. ಆದ್ದರಿಂದ ಟ್ರಂಪ್ ಅವರ ‘ಬೋರ್ಡ್ ಆಫ್ ಪೀಸ್’ ಸಜ್ಜಿಕೆಯು ಶಾಂತಿಯ ಸಾಂಪ್ರದಾಯಿಕ ಅರ್ಥಕ್ಕಿಂತ ಮಿಗಿಲಾಗಿ ಅಮೆರಿಕದ ಶಕ್ತಿ ಮತ್ತು ಪ್ರಭುತ್ವವನ್ನು ಜಗತ್ತಿನ ಮೇಲೆ ಹೇರುವ ಸಾಧನವೆಂದು ಹಲವರು ವಿಶ್ಲೇಷಿಸುತ್ತಾರೆ.‌

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)