ವಿದೇಶವಾಸಿ
ಯಾವ ಕ್ಷೇತ್ರವೂ ವಿಮರ್ಶೆಗೆ ಹೊರತಾದದ್ದಲ್ಲ. ವಿಜ್ಞಾನ, ಇತಿಹಾಸ, ಗಣಿತದಂಥ ವಿಷಯ ಗಳೇ ವಿಮರ್ಶೆಗೆ ಒಳಗಾಗಿರುವಾಗ, ನಾಟಕ, ನೃತ್ಯ, ಯಕ್ಷಗಾನ, ತಾಳಮದ್ದಳೆಯಂಥ ವಿಷಯಗಳು ಖಂಡಿತವಾಗಿಯೂ ವಿಮರ್ಶೆಗೆ ಅತೀತವಲ್ಲ. ವಿಮರ್ಶೆಗಳು ಈ ಹಿಂದೆಯೂ ಇದ್ದವು, ಇನ್ನು ಮುಂದೆಯೂ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನು ಕಳೆದ ಗುರುವಾರದ ಅಂಕಣದಲ್ಲಿ ವಿಶ್ವೇಶ್ವರ ಭಟ್ಟರು ಬರೆದ “ಇದು ತಾಳಮದ್ದಳೆಯ ‘ಐಟಮ್ ಸಾಂಗ್ ಡಾನ್ಸರ್’ಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ!" ಶೀರ್ಷಿಕೆಯ ಅಂಕಣಕ್ಕೆ ಸಂಬಂಧಿಸಿದಂತೆ ನನ್ನ ಅನಿಸಿಕೆ ಅಂದುಕೊಳ್ಳಿ ಅಥವಾ ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನನ್ನ ಅಭಿಪ್ರಾಯ ಅಂದುಕೊಳ್ಳಿ.
ಯಾರ ಅಭಿಪ್ರಾಯ ಹೇಗೇ ಇರಲಿ, ಸಂದರ್ಭ ಸಿಕ್ಕಾಗೆಲ್ಲ ‘ಕರ್ನಾಟಕದ ಗಂಡುಕಲೆ’ ಎಂದು ಕರೆಸಿ ಕೊಳ್ಳುವ ಯಕ್ಷಗಾನ ಮತ್ತು ತಾಳಮದ್ದಳೆಯ ಕುರಿತಂತೆ, ಎರಡು ಪ್ರಮುಖ ಸಂಗತಿಗಳಿಗಾಗಿ ಇದು ಬೇಕಿತ್ತು. ಒಂದು, ಐದು ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿದ್ದರೂ ಮೂರೂವರೆ ಜಿಲ್ಲೆಗೆ ಮಾತ್ರ ಸೀಮಿತವಾಗಿರುವ ಈ ಕಲೆಯನ್ನು ರಾಜ್ಯದ ಬೀದರಿನ ಮೂಲೆಯ, ಚಾಮರಾಜ ನಗರದ ಕೊನೆಯ ಕುಳಿತ ಕನ್ನಡಿಗನಿಗೂ ತಲುಪಿಸುವುದಕ್ಕಾಗಿ.
ಇನ್ನೊಂದು, ಈ ಕಲೆಯಲ್ಲಿ ಇತ್ತೀಚೆಗೆ ಆಗುತ್ತಿರುವ ಬದಲಾವಣೆ, ಬೆಳವಣಿಗೆಯನ್ನು ಆ ಕ್ಷೇತ್ರದ ಹೊರತಾದವರೂ ಗಮನಿಸುತ್ತಿದ್ದಾರೆ, ತಮ್ಮನ್ನೂ ವಿಮರ್ಶೆಗೆ ಒಳಪಡಿಸುತ್ತಾರೆ ಎನ್ನುವುದನ್ನು ತಿಳಿಸಿಕೊಡುವುದಕ್ಕಾಗಿ. ಇಂದು ಯಕ್ಷಗಾನಕ್ಕೆ ಹೋಲಿಸಿದರೆ, ತಾಳಮದ್ದಳೆಯಲ್ಲಿ ಭಾಗವಹಿಸು ವವರ ಸಂಖ್ಯೆಯೂ ಕಡಿಮೆ, ಪ್ರೇಕ್ಷಕರ ಸಂಖ್ಯೆಯೂ ಕಡಿಮೆ.
ಇದನ್ನೂ ಓದಿ: Kiran Upadhyay Column: ವಿಯೆಟ್ನಾಮ್: ಕಲೆ, ಸಂಸ್ಕೃತಿಯ ವಿಟಮಿನ್
ಆದರೆ ಇವೆರಡೂ ಕಲೆಗಳು ಒಂದೇ ಕುಟುಂಬದ ಎರಡು ಕವಲುಗಳಿದ್ದಂತೆ. ಇಂದಿಗೂ ಒಂದ ಕ್ಕೊಂದು ಪೂರಕವಾಗಿವೆ, ಹಾಸುಹೊಕ್ಕಾಗಿವೆ. ಒಂದು ಕಾಲದಲ್ಲಿ, ನಾಟ್ಯ ಗೊತ್ತಿಲ್ಲದವರು, ವಯಸ್ಸಾಗಿ ಕುಣಿಯಲಾಗದವರು, ಮುಖವರ್ಣಿಕೆ ಮಾಡಿಕೊಳ್ಳಲಾಗದವರು, ವೇಷ ಕಟ್ಟಿ ಕುಣಿಯ ಲಾಗದವರು ತಾಳಮದ್ದಳೆಯಲ್ಲಿ ಅರ್ಥ ಹೇಳುತ್ತಾರೆ ಎಂಬ ಮಾತಿತ್ತು.
ಅದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದಕ್ಕಿಂತ, ಅದು ಅವರವರ ಆಸಕ್ತಿಗೆ, ಇಷ್ಟಕ್ಕೆ ಸಂಬಂಧಿ ಸಿದ ವಿಷಯ ಎನ್ನುವ ಅಭಿಪ್ರಾಯ ನನ್ನದು. ಮಾತಾಡಲು ಸಿದ್ಧತೆ ಮಾಡಿಕೊಳ್ಳುವವರು ನಾಟ್ಯ ಕಲಿಯಲಾರರು, ಬಣ್ಣ ಹಚ್ಚಲಾರರು ಎಂದರೆ ನಂಬಿಕೆ ಸಾಲುವುದಿಲ್ಲ.
ತಾಳಮದ್ದಳೆಯ ಅರ್ಥಧಾರಿಗಳು ಯಕ್ಷಗಾನದಲ್ಲಿ ಪಾತ್ರಮಾಡಿ ರಂಗಸ್ಥಳ ಪುಡಿ ಮಾಡ ಬೇಕೆಂದೇನೂ ಇಲ್ಲ. ತಕ್ಕ ಮಟ್ಟಿನ ತಾಳ, ನಾಟ್ಯ ಕಲಿಯಲು ಹೆಚ್ಚಿನ ಸಮಯವೇನೂ ಬೇಕಾಗುವು ದಿಲ್ಲ. ಅದರಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎನ್ನುವುದಷ್ಟೇ ಸತ್ಯ. ಆ ಕಾರಣಕ್ಕಾಗಿ ಯಾರನ್ನಾದರೂ ದೂಷಿಸುವುದೋ, ಟೀಕಿಸುವುದೋ ಸರಿಯಲ್ಲ.
ಈಗ ವಿಷಯ ಅದಲ್ಲ. ನಮ್ಮ ಪರಂಪರೆಯ ಪ್ರತಿರೂಪವಾಗಿರುವ ಈ ಕಲೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಕಲಾವಿದರ ಸಿದ್ಧತೆ ಹೇಗಿದೆ? ಕಾರ್ಯಕ್ರಮದ ಆಯೋಜಕರ ಆಸೆಗಳೇನು? ಪ್ರೇಕ್ಷಕರ ನಿರೀಕ್ಷೆಗಳೇನು? ಇತ್ಯಾದಿಗಳು ಕಾಲಕಾಲಕ್ಕೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಹೊಸ ಪ್ರಸಂಗಗಳು, ಅದರಲ್ಲಿ ಬರುವ ಹಾಸ್ಯ ಪಾತ್ರಗಳು, ಹೊಸ ಗಾಯನ ಶೈಲಿ, ಅನುಕರಣೆ, ಅದರ ಒಳಿತು-ಕೆಡುಕು ಗಳು, ಅದರ ಪರಿಣಾಮ, ಈ ಕ್ಷೇತ್ರಕ್ಕೆ ಹೊಸತನ ಬೇಕೇ? ಬೇಕು ಎಂದಾದರೆ ಎಷ್ಟು ಮತ್ತು ಹೇಗೆ? ಇವನ್ನೆಲ್ಲ ಚರ್ಚಿಸಲೇಬಾರದೇ? ಆಕ್ಷೇಪಿಸಲೇಬಾರದೇ? ವಿಮರ್ಶೆ ಮಾಡಬಾರದೇ? ಮೊದಲಾಗಿ, ಯಾವ ಕ್ಷೇತ್ರವೂ ವಿಮರ್ಶೆಗೆ ಹೊರತಾದದ್ದಲ್ಲ.
ವಿಜ್ಞಾನ, ಇತಿಹಾಸ, ಗಣಿತದಂಥ ವಿಷಯಗಳೇ ವಿಮರ್ಶೆಗೆ ಒಳಗಾಗಿರುವಾಗ, ನಾಟಕ, ನೃತ್ಯ, ಯಕ್ಷಗಾನ, ತಾಳಮದ್ದಳೆಯಂಥ ವಿಷಯಗಳು ಖಂಡಿತವಾಗಿಯೂ ವಿಮರ್ಶೆಗೆ ಅತೀತವಲ್ಲ. ವಿಮರ್ಶೆಗಳು ಈ ಹಿಂದೆಯೂ ಇದ್ದವು, ಇನ್ನು ಮುಂದೆಯೂ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ತಾನು ವಿಮರ್ಶೆಗೆ ಒಳಪಡಬಾರದು ಎನ್ನುವ ಮನಸ್ಸಿದ್ದವರು ಆ ಕ್ಷೇತ್ರ ಬಿಡುವುದು ಒಳ್ಳೆಯದು. ಅದು ಖಾಸಗಿ ಅಥವಾ ಸರಕಾರಿ ನೌಕರರಾದರೂ ಸರಿ, ಕೃಷಿಕ, ಕಲಾವಿದನಾದರೂ ಸರಿ. ಏಕೆಂದರೆ, ನೌಕರನಿಗೆ ಭಡ್ತಿ ಸಿಗುವುದಾಗಲಿ, ಕೃಷಿಕನ ಬೆಳೆಗೆ ಬೆಲೆ ಕಟ್ಟುವುದಾಗಲೀ ವಿಮರ್ಶೆ ಮಾಡಿಯೇ. ವಿಮರ್ಶೆಗೆ ಯಾವುದೇ ರೀತಿಯ ಪರಿಮಿತಿ ಅಥವಾ ಚೌಕಟ್ಟಿಲ್ಲ, ಯಾರು ಬೇಕಾದರೂ, ಯಾರ ಕುರಿತಾಗಿ ಆದರೂ ವಿಮರ್ಶೆ ಮಾಡಬಹುದು.
ಆದರೆ ಯಾವ ವಿಮರ್ಶೆಯನ್ನು ಪರಿಗಣಿಸಬೇಕು, ಯಾರ ಟೀಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದು ಪ್ರಮುಖವಾಗುತ್ತದೆ. ಯಕ್ಷಗಾನ, ತಾಳಮದ್ದಳೆಯ ಬಗ್ಗೆ ತಿಳಿದವರು ಮಾತ್ರ ಅದರ ವಿಮರ್ಶೆ ಮಾಡಬೇಕು, ಪತ್ರಕರ್ತರು ವಿಮರ್ಶೆ ಮಾಡಬಾರದು, ಪತ್ರಕರ್ತರಿಗೆ ಯಕ್ಷಗಾನದ ಬಗ್ಗೆ ಏನು ಗೊತ್ತು ಎನ್ನುವ ವಾದ ಸರಿ ಎಂದಾದರೆ, ಅರ್ಥಧಾರಿಗಳು ರಾಜಕೀಯದ, ಸಿನಿಮಾದ ಅಥವಾ ಪತ್ರಿಕೋದ್ಯಮದ ಬಗ್ಗೆಯೂ ವಿಮರ್ಶೆ ಮಾಡಬಾರದು.
ತಾವು ಮಾತ್ರ ಒಂದು ವೇದಿಕೆಯಲ್ಲಿ ಕುಳಿತು ಸಾವಿರಾರು ಜನರ ಎದುರು ಇನ್ನೊಬ್ಬರ ಕುರಿತು ಮಾತನಾಡಬಹುದು, ಕಥೆಗೆ ಸಂಬಂಧವಿಲ್ಲದಿದ್ದರೂ, ಕವಿ ಅದಕ್ಕೆ ಪೂರಕವಾದ ಪದ್ಯ ಬರೆಯ ದಿದ್ದರೂ, ತಮ್ಮ ಬಾಯಿಚಪಲ ತೀರಿಸಿಕೊಳ್ಳಲು ಸಮಯ ಹೊಂದಾಣಿಕೆ ಮಾಡಿಕೊಂಡು, ಸಂಬಂಧವಿಲ್ಲದ ಸಂಗತಿ, ಸಂಬಂಧವಿಲ್ಲದವರ ವಿಷಯವನ್ನು ಅದರಲ್ಲಿ ಎಳೆದು ತಂದು ಚರ್ಚಿಸಬಹುದು, ಉಳಿದವರು ತಮ್ಮ ಬಗ್ಗೆ ಮಾತನಾಡಬಾರದು ಎಂದರೆ ಅದು ಅಹಂಕಾರದ ಪರಮಾವಧಿಯೇ ಹೊರತು ಮತ್ತೇನೂ ಅಲ್ಲ.
ಅಷ್ಟಕ್ಕೂ ವಿಮರ್ಶೆ ಎಂದರೆ ಒಂದು ವಿಷಯದ ಕುರಿತಾಗಿ ಅವರ ಅಭಿಪ್ರಾಯವೇ ಹೊರತು ಯುದ್ಧವಲ್ಲ. ಒಂದು ವಿಷಯದ ಕುರಿತು ಚರ್ಚೆಯೇ ನಡೆಯಬಾರದು ಎಂದಾದರೆ ತಾಳಮದ್ದಳೆ ಮೊದಲು ಖೈದಾಗಬೇಕು. ಏಕೆಂದರೆ ತಾಳಮದ್ದಳೆಗೆ ಮೂಲಧಾತು, ಅಧಾರ ಸ್ಥಂಭವೇ ಚರ್ಚೆ. ಯಕ್ಷಗಾನದದರೆ, ನಾಟ್ಯ, ವೇಷಭೂಷಣಗಳೂ ಪ್ರಮುಖವೆನಿಸುತ್ತವೆ.
ತಾಳಮದ್ದಳೆಯಲ್ಲಿ ಇವೆರಡಕ್ಕೂ ಅವಕಾಶವಿಲ್ಲ. ಹೆಸರಿಗೆ ’ತಾಳಮದ್ದಳೆ’ಯಾದರೂ, ಭಾಗವತ ಮತ್ತು ಮದ್ದಳೆಗಾರರಿಗೆ ಹೆಚ್ಚಿನ ಪ್ರಾಮುಖ್ಯ ಇರಬೇಕಾಗಿತ್ತಾದರೂ, ಇಂದು ಅರ್ಥಧಾರಿಗಳಿಗೂ ಇದರಲ್ಲಿ ಪ್ರಮುಖ ಪಾತ್ರವಿದ್ದು, ಎಲ್ಲವೂ ಸೇರಿ ಮನರಂಜನೆಯೊಂದಿಗೆ ತಲೆಗೆ ಕೆಲಸ ಕೊಡುವ ಕಲೆಯಾಗಿದೆ. ಆದರೂ ಆಗಾಗ ಯಕ್ಷಗಾನದ ಪ್ರಾತ್ಯಕ್ಷಿಕೆ, ವಿಮರ್ಶೆ, ಚರ್ಚೆ ಯಾಕೆ ಬೇಕು ಎಂದರೆ, ಕಲೆಯ ಒಳಿತಿಗಾಗಿ, ಸರಿಯಾದದ್ದನ್ನು ಉಳಿಸಿಕೊಳ್ಳುವುದಕ್ಕಾಗಿ. ಹಾಗಾಗಿ ವಿಮರ್ಶೆ ಅಥವಾ ಚರ್ಚೆಯನ್ನು ವೈಯಕ್ತಿಕ ಎಂದು ಪರಿಗಣಿಸಬಾರದು.
ಯಕ್ಷಗಾನ ಮತ್ತು ತಾಳಮದ್ದಳೆಯ ಬಗ್ಗೆ ವಿಶ್ವೇಶ್ವರ ಭಟ್ಟರಿಗೆ ಏನು ಗೊತ್ತು ಎನ್ನುವುದಕ್ಕೆ ಸಮರ್ಪಕ ಉತ್ತರ ನನಗೆ ಗೊತ್ತು, ಅವರೂ ಕೊಡಬಲ್ಲರು. ಅಂಥ ಪ್ರಶ್ನೆ ಕೇಳುವವರಲ್ಲಿ ನನ್ನ ದೊಂದು ಪ್ರಶ್ನೆ, ಅರ್ಥಧಾರಿಗಳು ದೇಶದ ರಾಜಕೀಯದ ಕುರಿತಾಗಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಜಕೀಯ ಪಕ್ಷದ ಬಗ್ಗೆ ಮಾತನಾಡುವಾಗ ಇವರೆಲ್ಲ ರಾಜ್ಯಶಾಸ್ತ್ರ ಓದಿಕೊಂಡಿದ್ದಾರೆಯೇ ಎಂದು ಕೇಳಿದರೆ? ಅರ್ಥಶಾಸ್ತ್ರ, ಸಮಾಜಶಾಸ್ತ್ರದ ಪ್ರವೀಣರೆ ಎಂದರೆ? ಹೋಗಲಿ, ಯಕ್ಷಗಾನವನ್ನೇ ಕಸುಬಾಗಿ ಮಾಡಿಕೊಂಡವರಾಗಿ, ಬ್ರಹ್ಮನ ಪಾತ್ರ ಮಾಡುವವ ಅಥವಾ ಅರ್ಥ ಹೇಳುವವ ವೇದಗಳ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾನೆ ಎಂದರೆ? ಅವೆಲ್ಲ ವಿತಂಡವಾದಗಳಾಗುತ್ತವೆಯೇ ಹೊರತು ಸರಿಯಾದ ವಾದವಾಗುವುದಿಲ್ಲ.
ಅಷ್ಟಕ್ಕೂ ಲೇಖನದ ಉದ್ದೇಶ ಅದಲ್ಲ. ಪತ್ರಿಕೋದ್ಯಮದಲ್ಲಿ ಎಷ್ಟೇ ಹೆಸರು ಮಾಡಿದವರಾದರೂ ಅವರ ಬರಹಗಳು ಹೇಗೆ ವಿಮರ್ಶೆಗೆ ಅರ್ಹವೋ, ಹಾಗೆಯೇ ತಾಳಮದ್ದಳೆಯ ಅಥವಾ ಯಕ್ಷಗಾನದ ಪಾತ್ರಧಾರಿಗಳು ಆಡಿದ, ಆಡುವ ಮಾತುಗಳೂ, ಭಾಗವತರು ಹಾಡುವ ಪದ್ಯಗಳೂ ವಿಮರ್ಶೆಗೆ ಅರ್ಹ.
ಆದ್ದರಿಂದ ಇದರಲ್ಲಿ ಖಾಲಿಪೀಲಿ ಯಾರz ವೈಯಕ್ತಿಕ ವಿಷಯಗಳನ್ನು ಎಳೆದು ತರುವುದು ಯೋಗ್ಯ ವಲ್ಲ. ನನ್ನ ದೃಷ್ಟಿಯಲ್ಲಿ ಯಕ್ಷಗಾನ-ತಾಳಮದ್ದಳೆಯ ಪ್ರತಿಯೊಬ್ಬ ಪ್ರೇಕ್ಷಕನೂ ಒಳ್ಳೆಯ ವಿಮರ್ಶಕ. ನಾಟಕದಂತೆ ಯಾವುದೇ ರಂಗಸಜ್ಜಿಕೆ, ಪರದೆ ಇಲ್ಲದಿದ್ದರೂ ಅರಮನೆಯ ದೃಶ್ಯವನ್ನಾ ಗಲಿ, ರಣರಂಗದ, ವನವಿಹಾರದ ಸನ್ನಿವೇಶವನ್ನಾಗಲಿ ಕಲ್ಪಿಸಿಕೊಳ್ಳುತ್ತಾನೆ.
ಪ್ರತಿಯೊಂದು ಪಾತ್ರದ ಮಾತನ್ನೂ ಕೇಳುತ್ತಾನೆ. ಎಲ್ಲವನ್ನೂ ತನ್ನೊಳಗೇ ವಿಮರ್ಶೆ ಮಾಡಿ ಕೊಂಡು, ಬೇಕಾದದ್ದನ್ನು ಮಾತ್ರ ಮನೆಗೆ ಕೊಂಡೊಯ್ಯುತ್ತಾನೆ. ಸುಮ್ಮನೇ ಯೋಚಿಸಿ, ‘ಭಕ್ತ ಪ್ರಹ್ಲಾದ’ ಪ್ರಸಂಗದಲ್ಲಿ ಹಿರಣ್ಯಕಶಿಪು ಒಳ್ಳೆಯ ವಾಗ್ಮಿ, ಪ್ರಹ್ಲಾದ ಮತ್ತು ಕಯಾದುವಿನ ಪಾತ್ರಧಾರಿ ಗಳಿಗೆ ಮಾತು ಹೊರಡುವುದಿಲ್ಲ ಅಂದುಕೊಳ್ಳಿ.
ತಾನು ಮೇಲುಗೈ ಸಾಧಿಸಬೇಕೆಂದು ಅರ್ಥಧಾರಿ ಹಿರಣ್ಯಕಶಿಪುವನ್ನು ಸಮರ್ಥಿಸಿಕೊಳ್ಳುತ್ತಾ ಹೋದರೆ? ಗದಾಯುದ್ಧದ ಕೌರವ, ದೇವಿ ಮಹಾತ್ಮೆಯ ರಕ್ತಬೀಜಾಸುರ, ವಾಲಿವಧೆಯ ವಾಲಿ, ಹೀಗೆ ಅನೇಕ ಪಾತ್ರಗಳನ್ನು ಹೇಳಬಹುದು. ದಿ.ಕೆ.ಎಸ್.ನಾರಾಯಣಾಚಾರ್ಯರು ಒಂದು ಕಡೆ ಹೇಳುತ್ತಾರೆ, “ಪುರಾಣಗಳಲ್ಲಿ ಬರುವ ಕೆಟ್ಟ ಪಾತ್ರಗಳನ್ನು ವೈಭವೀಕರಿಸುವ ಅವಶ್ಯಕತೆ ಇಲ್ಲ.
ಅವರಲ್ಲಿಯ ಗುಣಗಳಿಂದಾಗಿ, ಅವರ ವರ್ತನೆಯಿಂದಾಗಿ ಅವರನ್ನು ರಾಕ್ಷಸರ ಪಟ್ಟಿಗೆ ಸೇರಿಸ ಲಾಗಿದೆ, ಅವರನ್ನು ಯಾಕೆ ಸಮರ್ಥಿಸಿಕೊಳ್ಳಬೇಕು?". ಇದು ನಮ್ಮ ಯಕ್ಷಗಾನ-ತಾಳಮದ್ದಳೆಯ ಪ್ರೇಕ್ಷಕರಿಗೆ ಗೊತ್ತು. ಆದ್ದರಿಂದಲೇ ಇಂದಿಗೂ ರಾಮ-ಕೃಷ್ಣರೇ ನಮಗೆ ಆರಾಧ್ಯ ದೈವವಾಗಿ ಉಳಿದುಕೊಂಡಿದ್ದಾರೆ.
ದೇವಿಯ ದೇವಸ್ಥಾನಗಳು ಉಳಿದುಕೊಂಡಿವೆಯೇ ವಿನಾ ಕಂಸ, ರಕ್ತಬೀಜಾಸುರ, ಚಂಡ-ಮುಂಡ, ಕೌರವ, ಕೊನೆ ಪಕ್ಷ ಕರ್ಣನ ದೇವಸ್ಥಾನವೂ ನಿರ್ಮಾಣವಾಗಲಿಲ್ಲ, ಯಾರ ಮನೆಯಲ್ಲಿಯೂ ಅಂಥವರದ್ದೊಂದು ಚಿತ್ರವೂ ಕಾಣುವುದಿಲ್ಲ.
ಈ ಕಲೆ ಬದುಕಿದ್ದೇ ಚರ್ಚೆಯಿಂದ, ವಿಮರ್ಶೆಯಿಂದ. ಏಕೆಂದರೆ ಯಕ್ಷಗಾನ ಅಥವಾ ತಾಳಮದ್ದಳೆ ಯಲ್ಲಿ ತಾಳ, ರಾಗ, ವೇಷಭೂಷಣ ಹೀಗೆ ಕೆಲವೊಂದು ವಿಷಯಕ್ಕೆ ಹೊರತುಪಡಿಸಿ ಉಳಿದವುಗಳಿಗೆ ಯಾವುದೇ ಪಠ್ಯಕ್ರಮ ಇಲ್ಲ. ಆಯುರ್ವೇದ, ಯೋಗ ಇತ್ಯಾದಿಗಳಿಗೆ ಇದ್ದಂತೆ, ಕಾಲೇಜ್ ಆಗಲಿ, ವಿಶ್ವವಿದ್ಯಾಲಯವಾಗಲಿ ಇಲ್ಲ.
ಯಾವ ಕ್ರಮ ಸರಿ, ಯಾವ ಕ್ರಮ ತಪ್ಪು ಎನ್ನುವುದನ್ನು ‘ಇದಮಿತ್ಥಂ’ ಎಂದು ತಿಳಿಸಿ ಕೊಡುವ ಶಾಸನವಿಲ್ಲ, ಬರಹಗಳಿಲ್ಲ. ಬಹುತೇಕ ಪುಸ್ತಕಗಳೆಲ್ಲ ಅವರವರ ಚಿಂತನೆಗೆ ತಕ್ಕಂತೆ ಬರೆದದ್ದೇ ವಿನಾ ಅವುಗಳಿಗೆ ‘ಇದೇ ಸರಿ’ ಎನ್ನುವ ಯಾವ ರಾಜಮುದ್ರೆಯೂ ಬಿದ್ದಿಲ್ಲ.
ಇಂದಿನವರೆಗೂ, ಅಧಿಕೃತವಾಗಿ ಮುದ್ರೆ ಒತ್ತುವ ಒಂದೇ ಒಂದು ಸಂಸ್ಥೆ ಇಲ್ಲ. ಹಾಗಾದರೆ, ಐದು ನೂರಕ್ಕೂ ಹೆಚ್ಚು ವರ್ಷದ ಇತಿಹಾಸವಿರುವ ಈ ಕಲೆ ಇಂದೂ ಜೀವಂತವಾಗಿ, ಲವವವಿಕೆಯಿಂದ ಇರುವುದಕ್ಕೆ ಕಾರಣ, ಹಳೆಯವರು ಹಾಕಿಕೊಟ್ಟ ಚೌಕಟ್ಟು, ತೋರಿಸಿಕೊಟ್ಟ ದಾರಿ.
ಇನ್ನು ಮುಂದೆಯೂ ಇದು ಹೀಗೆಯೇ ನಡೆದುಕೊಂಡು ಹೋಗಬೇಕೇ ವಿನಾ ಬೇರೆ ಮಾರ್ಗ ಕಾಣುವುದಿಲ್ಲ. ವಿಶ್ವೇಶ್ವರ ಭಟ್ಟರ ಲೇಖನಕ್ಕೆ ಕೆಲವು ಪ್ರತಿಕ್ರಿಯೆಗಳನ್ನು ನಾನು ನೋಡುತ್ತಿದ್ದೆ. ಅದರಲ್ಲಿ ಅರ್ಥಧಾರಿಗಳ ಪಟ್ಟಿಯಲ್ಲಿ ಕೆಲವು ಹೆಸರು ತಪ್ಪಿ ಹೋಗಿವೆ, ಕೆಲವು ಹೆಸರು ಸೇರಿಸಬಹು ದಾಗಿತ್ತು, ಇತ್ಯಾದಿ ಅಭಿಪ್ರಾಯಗಳಿವೆ.
ಯಕ್ಷಗಾನ ಬಿಡಿ, ತಾಳಮದ್ದಳೆಯ ಅರ್ಥಧಾರಿಗಳಲ್ಲಿ ಉತ್ತಮರು ಎಂದು ಕರೆಸಿಕೊಂಡವರ ಹೆಸರನ್ನೆಲ್ಲ ಹಾಕಿದರೆ ಲೇಖನ ಒಂದು ಪುಟವಲ್ಲ, ಪತ್ರಿಕೆಯ ಹದಿನಾರು ಪುಟಗಳೂ ಸಾಲುವು ದಿಲ್ಲ. ಒಬ್ಬ ಲೇಖಕ ಸಂದರ್ಭಕ್ಕೆ ಬೇಕಾಗಿ ಪದಗಳ ಮಿತಿಗೆ ತಕ್ಕಂತೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಳ್ಳುತ್ತಾನೆ.
ಎಲ್ಲರ ಹೆಸರನ್ನೂ ಬರೆಯಬೇಕಾಗಿತ್ತು ಎಂದರೆ, ಕೌರವನ ಪಾತ್ರ ಮಾಡಿದವ ತಮ್ಮಂದಿರ ಹೆಸರು ಹೇಳುವಾಗ ನೂರು ಮಂದಿಯ ಹೆಸರನ್ನೂ ಹೇಳಬೇಕಿತ್ತು, ಕೃಷ್ಣ ತನ್ನ ಪತ್ನಿಯರ ಹೆಸರು ಹೇಳು ವಾಗ ಹದಿನಾರು ಸಾವಿರದ ಎಂಟು ಹೆಸರನ್ನು ಹೇಳಬೇಕಿತ್ತು ಎಂದಂತಾಗುತ್ತದೆ!
ಭಟ್ಟರನ್ನು ಟೀಕಿಸುವ ಭರದಲ್ಲಿ ಕೆಲವರು ಭಟ್ಟರ ಬಗ್ಗೆ ಪ್ರತಾಪ ಸಿಂಹ ಏನೋ ಹೇಳಿದ್ದ ಎಂದು ಬರೆದದ್ದು ತೀರಾ ವೈಯಕ್ತಿಕ. ಅಂದು ಪ್ರತಾಪ ಸಿಂಹ ಹೇಳಿದ್ದಾಗಲಿ, ಅದನ್ನು ಪುನಃ ಬರೆದದ್ದಾಗಲಿ, ಅಥವಾ ಇತ್ತೀಚೆಗೆ ‘ಚಿಂತಕರು’ ಎಂದು ಕರೆಸಿಕೊಳ್ಳುವವರು ಯಕ್ಷಗಾನ ಕಲಾವಿದರ ಕುರಿತು ಹೇಳಿದ್ದಾಗಲಿ, ಎಲ್ಲವೂ ಖಂಡನೀಯವೇ.
ನಾಳೆ ಯಾರಾದರೂ ಪಾತ್ರಧಾರಿಗಳು, ಅರ್ಥಧಾರಿಗಳೆಲ್ಲರೂ ವ್ಯಸನಮುಕ್ತರೇ ಎಂದು ಕೇಳಿದರೆ? ಅದೂ ಅನಾವಶ್ಯಕ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಒಂದು ಹೊಸ ಬೆಳವಣಿಗೆ ಕಾಣಬಹುದು. ತಮ್ಮ ತಮ್ಮ ಸಿನಿಮಾಕ್ಕಾಗೆ ಮಾತನಾಡುವ ತಾರೆಯರು, ದೇಶದ ವಿಷಯ ಬಂದಾಗ, ಧರ್ಮದ ವಿಷಯ ಬಂದಾಗ, ಕೊನೆ ಪಕ್ಷ ಅವರ ಕ್ಷೇತ್ರದಲ್ಲಿಯೇ ವಿವಾದ ಉಂಟಾದಾಗ, ಒಬ್ಬರೂ ಮಾತನಾಡುವು ದಿಲ್ಲ. ಧ್ವನಿ ಎತ್ತುವುದಿಲ್ಲ. ಅದೇ ಒಂದು ಸಿನಿಮಾ ಬಿಡುಗಡೆಯಾಗಲಿ, ಅದು ಎಷ್ಟು ಕೆಟ್ಟ ಚಿತ್ರ ವಾದರೂ ಅದನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ.
ಆ ಚಿತ್ರದ ಐಟಮ್ ಸಾಂಗ್‌ಗಳು ಜನಪ್ರಿಯವಾಗುತ್ತವೆ ಅಥವಾ ಅದನ್ನೇ ವೈಭವೀಕರಿಸುತ್ತಾರೆ. ಹಾಗಾದರೆ ಅದೇ ಸರಿಯೇ ಅಂದರೆ, ಖಂಡಿತ ಅಲ್ಲ. ಯಾಕೋ ಇತ್ತೀಚೆಗೆ ಯಕ್ಷಗಾನ, ತಾಳಮದ್ದಳೆ ಗಳೂ ಇದೇ ಹಾದಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಯಕ್ಷಗಾನ ಎಂದರೆ ಮಾಸ್ ಸಿನಿಮಾ ಇದ್ದಂತೆ, ತಾಳಮದ್ದಳೆ ಎಂದರೆ ಕ್ಲಾಸ್ ಸಿನಿಮಾ ಇದ್ದಂತೆ.
ಎರಡನ್ನೂ ನೋಡುವ, ಇಷ್ಟಪಡುವವರ, ಅರ್ಥಮಾಡಿಕೊಳ್ಳುವ ಜನರ ಸಮೂಹ ಬೇರೆಯದ್ದೇ ಆಗಿರುತ್ತದೆ. ತಾಳಮದ್ದಳೆಯ ಪ್ರೇಕ್ಷಕರು ಹೆಚ್ಚು ಪ್ರಾಜ್ಞರು ಎಂದು ಪರಿಗಣಿಸಲಾಗುವುದರಿಂದ, ಅಲ್ಲಿ ಸಣ್ಣ ತಪ್ಪಾದರೂ ದೊಡ್ಡದಾಗಿ ಕಾಣುತ್ತದೆ. ‘ಅಂಥವರೇ ತಪ್ಪು ಮಾಡಿದರೆ ಹೇಗೆ?’ ಎಂಬ ಕಳಕಳಿಯೂ ಇರುತ್ತದೆ.
ಅರ್ಥಧಾರಿಗಳು ಅರ್ಥವಿಲ್ಲದೇ ಬಾಯಿ ಹರಿಬಿಟ್ಟರೆ ಪ್ರಸಂಗ ಒಳಿತಿಗಿಂತ ಕೊಳಕೇ ಹೆಚ್ಚಾಗುತ್ತದೆ. ಅಂಥ ಸಂದರ್ಭದಲ್ಲಿ ಅದೇ ಕ್ಷೇತ್ರದ ಹಿರಿಯರಾದಿಯಾಗಿ, ಪ್ರೇಕ್ಷಕರೂ ಅದನ್ನು ಖಂಡಿಸುವು ದನ್ನೋ, ವಿಮರ್ಶಿಸುವುದನ್ನೋ ಮಾಡದಿದ್ದರೆ, ಆ ಕ್ಷೇತ್ರವೂ ಬಾಲಿವುಡ್ ನಂತಾಗುತ್ತದೆ. ಪಾತ್ರ ಧಾರಿ, ಅರ್ಥಧಾರಿಗಳು ಐಟಮ್ ಡಾನ್ಸರ್‌ಗಳಂತೆ ಕಾಣುತ್ತಾರೆ. ಹಾಗಾಗಬಾರದು ಎಂಬುದು ಈ ಕಲೆಯ ಅಭಿಮಾನಿಗಳ ಮನದ ಮಾತು.
ಕೊನೆಯದಾಗಿ, ಸಾರ್ವಜನಿಕ ಜೀವನದಲ್ಲಿ ಯಾರೂ ಪ್ರಶ್ನಾತೀತರಲ್ಲ. ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು, ಸರಿಯಾದ ವಿಮರ್ಶೆ ಸ್ವೀಕರಿಸಲು, ಏನೂ ಬೇಡ, ಸಾಮಾನ್ಯ ಚರ್ಚೆಗೆ (ವೈಯಕ್ತಿಕ ವಿಷಯವನ್ನು ಹೊರತುಪಡಿಸಿ) ಯಾರೇ ಆದರೂ ಸಿದ್ಧರಾಗಿರಬೇಕು. ನಾನು ದೊಡ್ಡ ನಟ, ನಾನು ದೊಡ್ಡ ರಾಜಕಾರಣಿ, ನಾನು ದೊಡ್ಡ ಅರ್ಥಧಾರಿ, ನಾನು ದೊಡ್ಡ ವೇಷಧಾರಿ, ನನಗೆ ಎಲ್ಲವೂ ಗೊತ್ತು, ಇಡೀ ಜಗತ್ತಿಗೇ ನಾನು ಗೊತ್ತು ಎಂದು ತಿಳಿದರೆ ಅಂಥವರು ಬಾವಿಯಲ್ಲಿನ ಕಪ್ಪೆ ಮಾತ್ರ. ಅಷ್ಟಕ್ಕೂ ವಿದ್ಯೆ ಶೋಭಿಸುವುದು ವಿನಯದಿಂದಲೇ ಹೊರತು ಅಹಂಕಾರದಿಂದಲ್ಲ ಎನ್ನುವುದನ್ನು ಕಲಾವಿದ ತಿಳಿದಿರಬೇಕು.