Kiran Upadhyay Column: ವಿಯೆಟ್ನಾಮ್: ಕಲೆ, ಸಂಸ್ಕೃತಿಯ ವಿಟಮಿನ್
ಯಾವುದಾದರೂ ಒಂದು ಪ್ರದರ್ಶನ ನೋಡಿಕೊಂಡು ಬರೋಣ ಎಂದು ಟಿಕೆಟ್ ಪಡೆದು ಒಳಗೆ ಕುಳಿತೆ. ಆ ಪ್ರದರ್ಶನದಲ್ಲಿ ಬಿದಿರನ್ನು ಯಥೇಚ್ಛವಾಗಿ ಬಳಸಲಾಗಿತ್ತು. ಬಿದಿರಿನಲ್ಲಿ ಮಾಡಿ ತೋರಿಸ ಬಹುದಾದ ಕಲೆ, ಸಾಹಸ, ಜತೆಗೆ ಗಾಯನ, ಸಂಗೀತ, ಎಲ್ಲವೂ ಎಷ್ಟು ಅದ್ಭುತವಾಗಿತ್ತು ಎಂದರೆ ಮರುದಿನ ಇನ್ನೊಂದು ಪ್ರದರ್ಶನಕ್ಕೂ ಟಿಕೆಟ್ ಪಡೆದು ಅದನ್ನೂ ನೋಡಿ ಖುಷಿಪಟ್ಟೆ.
-
ವಿದೇಶವಾಸಿ
ವಿಯೆಟ್ನಾಮ್‌ನಲ್ಲಿ ಹಲವಾರು ಬೇರೆ ಬೇರೆ ಜನಾಂಗಗಳಿದ್ದು, ಅವರೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನರ್ತನ ಮಾಡುತ್ತಾರೆ. ಹೇಗೆ ನಮ್ಮಲ್ಲಿ ಸುಗ್ಗಿ ಕುಣಿತ ಇದೆಯೋ ಹಾಗೆಯೇ ವಿಯೆಟ್ನಾಮ್ನ ಒಂದು ಜನಾಂಗದವರು ಅಲ್ಲಿಯ ಗದ್ದೆ ಕೊಯ್ಲಿನ ಸಂದರ್ಭ ದಲ್ಲಿ, ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟು ವಿಶೇಷವಾದ ಹೆಜ್ಜೆ ಮತ್ತು ನಾಟ್ಯದ ಶೈಲಿ ಹೊಂದಿರುವ ‘ಕ್ವಾಯ’ ನೃತ್ಯವನ್ನು ಮಾಡುತ್ತಾರೆ.
ನನಗೆ ಮೊದಲ ಭೇಟಿಯಲ್ಲಿಯೇ ಹೃದಯಕ್ಕೆ ಹತ್ತಿರವಾದ ದೇಶ ವಿಯೆಟ್ನಾಮ್. Love at first sight ಎನ್ನಿ ಅಥವಾ Love at first visit ಎನ್ನಿ, ಮೊದಲ ದಿನದಿಂದಲೇ ಆಪ್ತವಾದ ದೇಶ ಅದು. ಒಂದು ಕಾಲದಲ್ಲಿ ಆಂತರಿಕ ಯುದ್ಧದ ಬೇಗುದಿಯಲ್ಲಿ ಬೆಂದು ಬಸವಳಿದಿದ್ದರೂ, ಕೆಲವು ಕಾಲ ಅಮೆರಿಕದ ದಾಳಿಯ ಮುಷ್ಟಿಗೆ ಸಿಲುಕಿಕೊಂಡರೂ, ಸ್ವಂತ ಬಲದಿಂದ ಅದಕ್ಕೆಲ್ಲ ಸೆಡ್ಡು ಹೊಡೆದು, ಅವರನ್ನೆಲ್ಲ ಹಿಮ್ಮೆಟ್ಟಿಸಿ, ಪುನಃ ಚೇತರಿಸಿಕೊಂಡು, ತಲೆ ಎತ್ತಿ ನಿಂತ ದೇಶ ಅದು. ವಿಯೆಟ್ನಾಮ್ ಇಂದಿಗೂ ನಾನು ಭೇಟಿ ನೀಡಿದ ದೇಶಗಳ ಪಟ್ಟಿಯಲ್ಲಿ ಮೊದಲ ಐದರಲ್ಲಿ ಒಂದಾಗಿರುತ್ತದೆ ಎಂದು ಯಾವ ಅಳುಕಿಲ್ಲದೇ ಹೇಳಬಲ್ಲೆ. ಅಲ್ಲಿಯ ಭಾಷೆಯೊಂದೇ ತೊಡಕು ಬಿಟ್ಟರೆ, ಇನ್ಯಾವ ಸಮಸ್ಯೆ ಯೂ ಅಲ್ಲಿ ಎದುರಾಗಲಿಲ್ಲ.
ವಿಯೆಟ್ನಾಮ್ ಇಷ್ಟವಾಗಲು ಕೆಲವು ಕಾರಣಗಳಿದ್ದರೂ, ಹೆಚ್ಚು ಖುಷಿ ಕೊಟ್ಟದ್ದು ಅಲ್ಲಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೇಳುವ ವಿವಿಧ ಕಲಾಪ್ರಕಾರಗಳು. ಅದರೊಂದಿಗೆ ಇಂದಿನ ಸಮಕಾಲೀನ ಸಾಹಸ ಮತ್ತು ನೃತ್ಯ ಪ್ರದರ್ಶನಗಳು. ನಾನು ಮೂರು ಬಾರಿ ವಿಯೆಟ್ನಾಮ್‌ಗೆ ಭೇಟಿ ಕೊಟ್ಟಿದ್ದೇನೆ.
ಪ್ರತಿ ಸಲವೂ ಹೊಸ ಪ್ರದರ್ಶನಗಳನ್ನು ನೋಡಿ, ಖುಷಿಪಟ್ಟಿದ್ದೇನೆ. ಅವುಗಳಲ್ಲಿ ಯಾವುದನ್ನೂ ಮರೆಯುವಂತಿಲ್ಲ. ವಿಯೆಟ್ನಾಮ್‌ನ ಆರ್ಥಿಕ ರಾಜಧಾನಿ ಎಂದೇ ಹೆಸರಾಗಿರುವ ಹೊ ಚಿ ಮಿನ್ಹ್ ಸಿಟಿಯಲ್ಲಿ ಒಂದು ಒಪೆರಾ ಹೌಸ್ ಇದೆ. ಪ್ರವಾಸಿಗರಿಗೆ ಒಪೆರಾ ಒಂದು ವೀಕ್ಷಣೀಯ ಸ್ಥಳ.
ಅಂಥದ್ದರಲ್ಲಿ ಒಂದು ಪ್ರದರ್ಶನ ನಡೆಯುತ್ತಿದೆ, ಅದನ್ನು ಪ್ರವಾಸಿಗರು ವೀಕ್ಷಿಸಬಹುದು ಎಂದಾದರೆ ಯಾರಿಗೆ ಬೇಡ? ನಾನು ಅಲ್ಲಿಗೆ ಹೋದಾಗ ‘ಲೂನ್ ಪ್ರೊಡಕ್ಷನ್’ ಸಂಸ್ಥೆ ನಿರ್ಮಿಸಿದ ‘ತೆಹ್ ದಾರ್’ ಮತ್ತು ‘ಎ ಒ’ ಪ್ರದರ್ಶನ ನಡೆಯುತ್ತಿತ್ತು.
ಇದನ್ನೂ ಓದಿ: Kiran Upadhyay Column: ಅತಿ ಆಸೆಯ ಭಾವ, ಒಲೆ ಮೇಲೆ ಜೀವ...
ಯಾವುದಾದರೂ ಒಂದು ಪ್ರದರ್ಶನ ನೋಡಿಕೊಂಡು ಬರೋಣ ಎಂದು ಟಿಕೆಟ್ ಪಡೆದು ಒಳಗೆ ಕುಳಿತೆ. ಆ ಪ್ರದರ್ಶನದಲ್ಲಿ ಬಿದಿರನ್ನು ಯಥೇಚ್ಛವಾಗಿ ಬಳಸಲಾಗಿತ್ತು. ಬಿದಿರಿನಲ್ಲಿ ಮಾಡಿ ತೋರಿಸ ಬಹುದಾದ ಕಲೆ, ಸಾಹಸ, ಜತೆಗೆ ಗಾಯನ, ಸಂಗೀತ, ಎಲ್ಲವೂ ಎಷ್ಟು ಅದ್ಭುತವಾಗಿತ್ತು ಎಂದರೆ ಮರುದಿನ ಇನ್ನೊಂದು ಪ್ರದರ್ಶನಕ್ಕೂ ಟಿಕೆಟ್ ಪಡೆದು ಅದನ್ನೂ ನೋಡಿ ಖುಷಿಪಟ್ಟೆ.
ಅಷ್ಟಕ್ಕೇ ನಿಲ್ಲಲಿಲ್ಲ, ಇಂಥ ಅದ್ಭುತ ಪ್ರದರ್ಶನದ ನಿರ್ದೇಶಕರನ್ನೂ ಭೇಟಿಯಾಗಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು. ಸಾಮಾನ್ಯವಾಗಿ ವಿಯಟ್ನಾಮ, ಥಾಯ್ಲೆಂಡ್, ಮಲೇಷ್ಯಾ ಈ ಭಾಗಗಳಲ್ಲಿ ಕಾರ್ಯಕ್ರಮದ ನಂತರ ಕಲಾವಿದರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ಅವಕಾಶ ವಿರುತ್ತದೆ. ಆ ಸಂದರ್ಭದಲ್ಲಿ ನಾನು ನಿರ್ದೇಶಕರನ್ನು ಭೇಟಿಯಾಗಬೇಕು ಎಂದು ಕೇಳಿಕೊಂಡು, ನಿರ್ದೇಶಕ ‘ತುವಾನ್ ಲೀ’ಯ ಪರಿಚಯವನ್ನೂ ಮಾಡಿಕೊಂಡಿದ್ದೆ.
ಒಂದು ಪ್ರದರ್ಶನ ನೀಡಲು ಅವರು ಎರಡು ವರ್ಷ ನಿರಂತರವಾಗಿ ಸಿದ್ಧತೆ ಮಾಡಿಕೊಂಡಿದ್ದು ಕೇಳಿ ಅಂದು ನಾನು ಗರಬಡಿದವನಂತೆ ನಿಂತಿದ್ದೆ. ಈ ಕುರಿತು ಒಂದು ಅಂಕಣದಲ್ಲಿ ವಿಸ್ತಾರವಾಗಿ ಬರೆದಿದ್ದೇನೆ. ಸುಮಾರು ಆರು ವರ್ಷದ ನಂತರ, ಕಳೆದ ತಿಂಗಳು ನಾನು ಪುನಃ ಹೊ ಚಿ ಮಿನ್ಹ್ ಒಪೆರಾಕ್ಕೆ ಹೋದಾಗ ಅದೇ ಲೂನ್ ಪ್ರೊಡಕ್ಷನ್ʼನವರ ಪ್ರದರ್ಶನಗಳು ಇನ್ನೂ ನಡೆಯುತ್ತಿದ್ದವು.
ಸ್ನೇಹಿತ ತುವಾನ್ ಲೀ ಈಗ ತುಂಬಾ ಬೆಳೆದಿದ್ದಾರೆ. ದಕ್ಷಿಣದ ‘ಹೊಯ್ ಆನ್’ ನಗರದಲ್ಲಿ ಸಂಪೂರ್ಣ ಬಿದಿರಿನಿಂದಲೇ ಕಲಾಭವನವನ್ನು ನಿರ್ಮಿಸಿzರೆ. ಈಗ ಅಲ್ಲಿಯೂ ಪ್ರತಿನಿತ್ಯ ಪ್ರದರ್ಶನ ಗಳು ನಡೆಯುತ್ತವೆ. ಲೀ ತನ್ನ ಬಾಲ್ಯದ ದಿನಗಳಲ್ಲಿ ಇಂಥ ಸಾಂಸ್ಕೃತಿಕ, ಸಾಹಸದ ಪ್ರದರ್ಶನ ಗಳಲ್ಲಿ ಭಾಗವಹಿಸುತ್ತಿದ್ದರಂತೆ.
ಹೊಟ್ಟೆಪಾಡಿಗಾಗಿ ಯುರೋಪ್ ಸೇರಿಕೊಂಡ ಲೀ, ಬೀದಿಯಲ್ಲಿ ನಿಂತು ತಾನು ವಿಯೆಟ್ನಾಮ್ನಲ್ಲಿರು ವಾಗ ಕಲಿತ ಜಿಗ್ಲಿಂಗ್ ಕಲೆಯನ್ನು ಪ್ರದರ್ಶಿಸಿ ಹಣ ಸಂಪಾದಿಸಿ ಕೊಳ್ಳುತ್ತಿದ್ದರಂತೆ.
ನಂತರ ವಿಯೆಟ್ನಾಮ್‌ಗೆ ಹಿಂತಿರುಗಿ ಬಂದು, ತಾವು ಕಲಿತ ಕಲೆಯಲ್ಲಿಯೇ ಉದ್ಯಮವನ್ನು ಕಂಡು ಕೊಂಡರು. ತಾವೂ ಬೆಳೆದು, ತಮ್ಮವರನ್ನೂ ಬೆಳೆಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಕಲಿತ ಕೆಲವು ಸಾಹಸಗಳು, ತಂತ್ರಗಳು ಮತ್ತು ಕಲೆ, ಯುರೋಪಿನಲ್ಲಿಯೂ, ಈಗ ವಿಯೆಟ್ನಾಮ್‌ನಲ್ಲಿಯೂ ಅವರ ಕೈ ಹಿಡಿಯಿತು.
ವಿಯೆಟ್ನಾಮ್ ರಾಜಧಾನಿ ಹನೋಯ್‌ನಲ್ಲಿ ‘ಥಂಗ್ ಲಾಂಗ್ ವಾಟರ್ ಪಪೆಟ್ ಶೋ’ ನಡೆಯುತ್ತದೆ. ಸರಳವಾಗಿ ಹೇಳುವುದಾದರೆ, ಇದು ನಮ್ಮಲ್ಲಿಯ ಗೊಂಬೆಯಾಟ. ಮೊದಲೆಲ್ಲ ನಮ್ಮ ಕಡೆಯೂ ಗೊಂಬೆಯಾಟದ ಸಾಕಷ್ಟು ಪ್ರದರ್ಶನಗಳು ನಡೆಯುತ್ತಿದ್ದವು. ಯಾವುದೇ ಜಾತ್ರೆ, ಮಹೋತ್ಸವ ಗೊಂಬೆಯಾಟವಿಲ್ಲದೇ ಪೂರ್ಣಗೊಳ್ಳುತ್ತಿರಲಿಲ್ಲ.
ಗೊಂಬೆಗಳಿಂದಲೇ ಅರ್ಧ ಗಂಟೆ, ಒಂದು ಗಂಟೆಯ ಯಕ್ಷಗಾನವನ್ನೂ ಆಡಿಸಿ ತೋರಿಸುತ್ತಿದ್ದರು. ಈಗಂತೂ ಗೊಂಬೆಯಾಟ ನಶಿಸಿಹೋಗುತ್ತಿದ್ದು, ತೀರಾ ಅಪರೂಪವಾಗುತ್ತಿದೆ. ಆದರೆ ಹನೋಯ್ʼ ನಲ್ಲಿ ನಡೆಯುವ ಗೊಂಬೆಯಾಟ ಸಾಮಾನ್ಯದ್ದಲ್ಲ. ಅದು ನೀರಿನಲ್ಲಿ ನಡೆಯುವ ಗೊಂಬೆಯಾಟ. ಆ ನೀರಿನಲ್ಲಿ ಕೃತಕವಾದ ಕಮಲ ಅರಳುತ್ತದೆ, ಪಾತ್ರವಾಗಿ ಬರುವ ಗೊಂಬೆಗಳು ಚಲಿಸುವ ದೋಣಿ ನಡೆಸುತ್ತವೆ,
ಗದ್ದೆಯಲ್ಲಿ ನಾಟಿ ಮಾಡುತ್ತವೆ, ನೀರಿನಿಂದ ಮೇಲೆ ಎದ್ದುಬರುವ ಡ್ರಾಗನ್‌ಗಳು ಬೆಂಕಿ ಉಗುಳುತ್ತವೆ. ಸಾಮಾನ್ಯವಾಗಿ ಗೊಂಬೆಯಾಟ ಧ್ವನಿಮುದ್ರಿತವಾದ ಹಾಡು, ಸಂಭಾಷಣೆಯಲ್ಲಿ ನಡೆಯುತ್ತದೆ. ಆದರೆ ಹನೋಯ್‌ನಲ್ಲಿ ಹಾಡು, ವಾದ್ಯ ಮತ್ತು ಸಂಭಾಷಣೆಗಾಗಿ ಕಲಾವಿದರು ಜತೆಗಿದ್ದು ಧ್ವನಿ ನೀಡುತ್ತಾರೆ. ಈ ಕಲೆಗೆ ವಿಯೆಟ್ನಾಮ್‌ನಲ್ಲಿ ಒಂದು ಸಾವಿರ ವರ್ಷದ ಇತಿಹಾಸವಿದೆಯಂತೆ.
ವಿಯೆಟ್ನಾಮ್ ಸಂಸ್ಕೃತಿಯ ಕತೆ ಹೇಳುವ ಆ ಕಲೆ ಅಲ್ಲಿ ಇಂದಿಗೂ ಜೀವಂತವಾಗಿದೆ. ಕಲಾವಿದರೂ ಆ ಪ್ರದರ್ಶನಕ್ಕೆ ಅಷ್ಟೇ ಜೀವ ತುಂಬುತ್ತಿದ್ದಾರೆ. ವಿಶೇಷವೆಂದರೆ, ಈ ನೀರಿನ ಗೊಂಬೆಯಾಟ ನಡೆಯುವುದು ಒಂದು ಸಭಾಂಗಣದ ಒಳಗೆ. ಸಭಾಂಗಣದ ಒಳಗೇ ಒಂದು ಕೊಳ ನಿರ್ಮಿಸಿ, ಅದರಲ್ಲಿ ಈ ಪ್ರದರ್ಶನ ಏರ್ಪಡಿಸುತ್ತಾರೆ. ಹೊರಗೆ ಮಳೆಯಾಗಲಿ, ಚಳಿಯಾಗಲಿ, ಈ ಪ್ರದರ್ಶನ ನಿಲ್ಲುವುದಿಲ್ಲ.
ಪ್ರವೇಶ ಶುಲ್ಕ ಐದು ನೂರು ರೂಪಾಯಿ. ಫೋಟೊ ಅಥವಾ ವಿಡಿಯೋ ರೆಕಾರ್ಡಿಂಗ್ ಬೇಕು ಎಂದಾದರೆ, ಹೆಚ್ಚಿನ ಹಣ ನೀಡಿದರೆ ಇಲ್ಲಿ ಅದಕ್ಕೂ ಅವಕಾಶವಿದೆ. ಇತ್ತೀಚಿನ ವರ್ಷಗಳಲ್ಲಿ ವಿಯೆಟ್ನಾಮ್ ‘- ಕ್ವಾಕ್’ ದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತುನೀಡುತ್ತಿದೆ.
ದ್ವೀಪದ ದಕ್ಷಿಣ ಭಾಗವಾದ ‘ಸನ್ ವರ್ಲ್ಡ್’ ಪ್ರದೇಶದ ಸಮುದ್ರದಲ್ಲಿ, ತಟದಲ್ಲಿ ಪ್ರದರ್ಶಿಸಲ್ಪಡುವ ‘ಕಿಸ್ ಆಫ್ ದಿ ಸೀ’ ಮತ್ತು ‘ಸಿಂಫನಿ ಆಫ್ ದಿ ಸೀ’ ಎರಡೂ ಪ್ರದರ್ಶನಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡ ಪ್ರದರ್ಶನಗಳಾದರೆ, ಉತ್ತರದ ‘ಗ್ರಾಂಡ್ ವರ್ಲ್ಡ್’ನಲ್ಲಿ ‘ಕಂಟೆಸನ್ಸ್ ಶೋ’ (ಪಂಚ ಭೂತಗಳ ಪ್ರದರ್ಶನ) ನಡೆಯುತ್ತದೆ.
ನಲವತ್ತು ನಿಮಿಷದ ಈ ಪ್ರದರ್ಶನದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಪಾಲ್ಗೊಳ್ಳುತ್ತಾರೆ. ಅಲ್ಲಿ ಅರಮನೆ, ಹಳ್ಳಿಯ ಮನೆಯ ಕೃತಕ ಸೆಟ್ ನಿರ್ಮಾಣ ಮಾಡಿದ್ದಾರೆ. ವಿಶೇಷ ವೆಂದರೆ ಸಮಯಕ್ಕೆ, ಸಂದರ್ಭಕ್ಕೆ ಬೇಕಾಗಿ ಅವು ಕೂಡ ಹಿಂದೆ ಮುಂದೆ ಚಲಿಸುತ್ತವೆ. ಇದು ಖುಲ್ಲಾ ಜಾಗದಲ್ಲಿ ನಡೆಯುವ ಪ್ರದರ್ಶನ. ಜನರಿಗೆ ಕುಳಿತುಕೊಳ್ಳಲು ಮೆಟ್ಟಿಲಿನ ವ್ಯವಸ್ಥೆ ಇದೆ. ಅದರ ಮುಂದೆ ನಿರ್ಮಿಸಿದ ಅರಮನೆ ಮತ್ತು ಮನೆಗಳ ಮೇಲೆ ಎಲಇಡಿ ಮತ್ತು ಲೇಸರ್ ಬೆಳಕಿ ನಿಂದ ದೃಶ್ಯಾವಳಿಗಳನ್ನು ನಿರ್ಮಿಸುತ್ತಾರೆ.
ಇದು ಕೂಡ ವಿಯೆಟ್ನಾಮ್‌ನ ಇತಿಹಾಸ, ಅಲ್ಲಿಯ ಜನಜೀವನ, ಶಿಕ್ಷಣ ಇತ್ಯಾದಿಗಳನ್ನು ಹೇಳುವ ಕಥೆಯಾಗಿದೆ. ಅದನ್ನು ಸಂಭಾಷಣೆ ಮತ್ತು ನೃತ್ಯದ ಮೂಲಕ ತೋರ್ಪಡಿಸುತ್ತಾರೆ. ನದಿ ದಾಟುವ ಅಥವಾ ಹೊಲದಲ್ಲಿ ಕೆಲಸ ಮಾಡುವ ದೃಶ್ಯಗಳು ಬಂದಾಗ ವೇದಿಕೆ ಭೂಮಿಗಿಂತ ಸ್ವಲ್ಪ ಕೆಳಕ್ಕೆ ಜಾರುತ್ತದೆ. ಆ ಸಂದರ್ಭದಲ್ಲಿ ಅದರಲ್ಲಿ ನೀರು ತುಂಬಿಕೊಳ್ಳುತ್ತದೆ. ಹಾಗೆಯೇ ಆ ದೃಶ್ಯ ಮುಗಿದ ನಂತರ, ಅದೇ ವೇದಿಕೆ ಮೇಲೆ (ಮೊದಲಿನ ಸ್ಥಿತಿಗೆ) ಬಂದು, ಭೂಮಿಗೆ ಸಮನಾಗಿ ಹೊಂದಿಕೊಳ್ಳು ತ್ತದೆ.
ಇದರಲ್ಲಿಯೂ ಅಷ್ಟೇ, ಅವರು ಬಳಸುವ ವಾದ್ಯಗಳು, ಹಾಡುಗಳು ಅಥವಾ ಉಪಕರಣಗಳೆಲ್ಲ ಹಳೆಯ ಕಾಲದ, ಅವರ ಪರಂಪರೆ, ಸಂಸ್ಕೃತಿ, ಉಡುಗೆ-ತೊಡುಗೆಯನ್ನು ಬಿಂಬಿಸುವ ವಸ್ತುಗಳೇ ಆಗಿರುತ್ತವೆ. ಈ ಮೈದಾನದ ಹೊರಗೆ ಒಂದು ಬೀದಿ ನಿರ್ಮಿಸಿದ್ದಾರೆ. ಅಲ್ಲಿ ವಿಯೆಟ್ನಾಮ್‌ನ ಸಂಪ್ರದಾಯದಂತೆ ಮದುವೆ, ಹೆರಿಗೆ, ನಾಮಕರಣ, ಧಾರ್ಮಿಕ ಉತ್ಸವ, ಹಬ್ಬಗಳ ಆಚರಣೆಯ ಪ್ರದರ್ಶನ ವರ್ಷದ ಮುನ್ನೂರ ಅರವತ್ತೈದು ದಿನವೂ ನಡೆಯುತ್ತಿರುತ್ತದೆ.
ಇವೆಲ್ಲ ಒಂದು ಕಡೆ ಇರಲಿ, ವಿಯೆಟ್ನಾಮ್‌ನಲ್ಲಿ ಹಲವಾರು ಬೇರೆ ಬೇರೆ ಜನಾಂಗಗಳಿದ್ದು, ಅವರೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನರ್ತನ ಮಾಡುತ್ತಾರೆ. ಹೇಗೆ ನಮ್ಮಲ್ಲಿ ಸುಗ್ಗಿ ಕುಣಿತ ಇದೆಯೋ ಹಾಗೆಯೇ ವಿಯೆಟ್ನಾಮ್ನ ಒಂದು ಜನಾಂಗದವರು ಅಲ್ಲಿಯ ಗದ್ದೆ ಕೊಯ್ಲಿನ ಸಂದರ್ಭದಲ್ಲಿ, ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟು ವಿಶೇಷವಾದ ಹೆಜ್ಜೆ ಮತ್ತು ನಾಟ್ಯದ ಶೈಲಿ ಹೊಂದಿರುವ ‘ಕ್ವಾಯ’ ನೃತ್ಯವನ್ನು ಮಾಡುತ್ತಾರೆ.
ದೇಶದ ಮಧ್ಯ ಭಾಗದಲ್ಲಿ ‘ಚಾವ್’ ನೃತ್ಯ ಇಂದಿಗೂ ಜನಪ್ರಿಯ. ಈ ನೃತ್ಯಗಳೆಲ್ಲ ವಿಯೆಟ್ನಾಮ್‌ನ ಗ್ರಾಮೀಣ ಭಾಗದ ಜನರ ಜೀವನ ಕಥೆಯನ್ನು ಹೇಳುತ್ತವೆ. ಸ್ಥಳೀಯರು ತಮ್ಮ ಹಬ್ಬಗಳ ಸಂದರ್ಭ ದಲ್ಲಿ, ಮದುವೆ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಈ ನೃತ್ಯವನ್ನು ಮಾಡುತ್ತಾರೆ. ಪ್ರವಾಸಿಗ ರಿಗೂ ನೋಡಲು ಅವಕಾಶ ಮಾಡಿಕೊಡುವುದಕ್ಕಾಗಿ ಕೆಲವು ಸಭಾಂಗಣಗಳಲ್ಲಿ ಈ ನೃತ್ಯವನ್ನು ಆಯೋಜಿಸಿzರೆ. ವಿಯೆಟ್ನಾಮ್‌ನ ಐತಿಹಾಸಿಕ ಕಥೆಗಳು, ಘಟನೆಗಳು, ಸಾಮಾಜಿಕ ಸಮಸ್ಯೆಗಳನ್ನು ಹೇಳುವ ‘ಚೆ’ ಮತ್ತು ‘ಟಿಯು ಕ್ಯು’ ನೋಡಿದರೆ ನಮ್ಮಲ್ಲಿಯ ನಾಟಕ ಮತ್ತು ರೂಪಕಗಳನ್ನು ನೋಡಿದಂತಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ‘ಹ್ಯೂ ಸ್ಟೇಜ್’ ಮತ್ತು ‘ಸೈಗೋನ್ ಸಿಂಫಿ’ (ಸೈಗೋನ್- ಹೊ ಚಿ ಮಿ ನಗರದ ಹಳೆಯ ಹೆಸರು)ಯಲ್ಲಿ ನಾಟಕಗಳು ಜನಪ್ರಿಯವಾಗುತ್ತಿವೆ. ನಾನು, ‘ಡಿ ಲೆಗಸಿ ಆಫ್ ಥಾಂಗ್’ ನಾಟಕಕ್ಕೆ ಹೋಗಿದ್ದೆ. ಪ್ರೊಜೆಕ್ಷನ್ ಮ್ಯಾಪಿಂಗ್, ಎಲಇಡಿ ಬೆಳಕು ಮತ್ತು ಆಧುನಿಕ ಧ್ವನಿವರ್ಧಕ ಗಳನ್ನು ಬಳಸಿ ನಿರ್ಮಿಸಿದ ಈ ನಾಟಕವನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿ ವೇದಿಕೆಗೆ ತಂದರೂ ಇದರ ಮೂಲ ವಿಯೆಟ್ನಾಮ್‌ನ ಸಾಂಪ್ರದಾಯಿಕ ಅಂಶಗಳೇ ಆಗಿವೆ.
ಇದು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದರಿಂದ ಪ್ರವಾಸಿಗರನ್ನು ಆಕರ್ಷಿಸುವು ದರೊಂದಿಗೆ ವಿಯೆಟ್ನಾಮ್‌ನ ಯುವಕ-ಯುವತಿಯರನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ಇಷ್ಟೇ ಇಲ್ಲ, ವಿಯೆಟ್ನಾಮ್‌ನಲ್ಲಿ ಹಲವಾರು ಸಾಂಸ್ಕೃತಿಕ ಉತ್ಸವಗಳು ನಡೆಯುತ್ತವೆ. ವಿಯೆಟ್ನಾಮ್‌ನ ಹೊಸ ವರ್ಷದ ‘ಟೆಟ್’ ಹಬ್ಬ ಕೇವಲ ಅಲ್ಲಿಯ ದೊಡ್ಡ ಹಬ್ಬ ಮಾತ್ರವಲ್ಲ, ವಿಶ್ವಪ್ರಸಿದ್ಧವೂ ಆಗಿದೆ.
ಇದರಲ್ಲಿಯೂ ಬಹುಪಾಲು ಅಲ್ಲಿಯ ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ತಿಂಡಿ-ತಿನಿಸುಗಳ ಕೊಡುಗೆಯೇ ತುಂಬಿಕೊಂಡಿರುತ್ತದೆ. ಪ್ರತಿ ವರ್ಷ ಪೆಬ್ರವರಿಯಲ್ಲಿ ದಕ್ಷಿಣದ ‘ಹೋಯ್ ಆನ್’ನಲ್ಲಿ ‘ಲ್ಯಾಂಟರ್ನ್ ಫೆಸ್ಟಿವಲ್’ ನಡೆಯುತ್ತದೆ. ನಮ್ಮಲ್ಲಿ ದೀಪಾವಳಿಯ ಸಂದರ್ಭದಲ್ಲಿ ಹೇಗೆ ಆಕಾಶ ಗೂಡುಗಳನ್ನು ಮನೆಯ ಮುಂದೆ ತೂಗುಹಾಕಿ ದೀಪಗಳಿಂದ ಅಲಂಕರಿಸುತ್ತೇವೆಯೋ, ಅದೇ ರೀತಿ ವಿಯೆಟ್ನಾಮ್‌ನವರು ಈ ಹಬ್ಬದಲ್ಲಿ ಮನೆ ಮತ್ತು ಬೀದಿಗಳನ್ನು ದೀಪಗಳಿಂದ, ಅದರಲ್ಲೂ, ಲ್ಯಾಂಟರ್ನ್‌ನಿಂದ ಅಲಂಕರಿಸುತ್ತಾರೆ.
ಜತೆಗೆ, ಸಾಂಪ್ರದಾಯಿಕ ನೃತ್ಯಗಳು ಮತ್ತು ಗೊಂಬೆಗಳ ಪ್ರದರ್ಶನಗಳೂ ಇರುತ್ತವೆ. ಅಲ್ಲಿಯ ರಾಜ ಮನೆತನದ ಸಂಸ್ಕೃತಿಯನ್ನು ಪ್ರದರ್ಶಿಸಲು ಪ್ರತಿವರ್ಷ ‘ಹ್ಯೂ ಫೆಸ್ಟಿವಲ್’ ಆಚರಿಸುತ್ತಾರೆ. ಕಳೆದ ತಿಂಗಳು ನಾನು ವಿಯೆಟ್ನಾಮ್‌ಗೆ ಹೋಗಿದ್ದಾಗ, ಸ್ವಾಗತಿಸಲು ಬಂದಿದ್ದ ಗೈಡ್ ಪೀಟರ್, ಹಾರ್ಮೋ ನಿಕ ನುಡಿಸಿ ನಮ್ಮನ್ನು ಸ್ವಾಗತಿಸಿದ್ದ. ಆತ ಯಾವುದೇ ಇಂಗ್ಲಿಷ್ ಹಾಡನ್ನು ನುಡಿಸುತ್ತಿರಲಿಲ್ಲ.
ಬದಲಾಗಿ ವಿಯೆಟ್ನಾಮ್‌ನ ಸಾಂಪ್ರದಾಯಿಕ ಸಂಗೀತವನ್ನು ಸುಮಾರು ಹತ್ತು ನಿಮಿಷಗಳ ಕಾಲ ನುಡಿಸಿ ನಮ್ಮನ್ನು ಸ್ವಾಗತಿಸಿದ್ದ. ಇದನ್ನೆಲ್ಲ ಹೇಳಿದರೆ ನಾನು ಕೇವಲ ಅಲ್ಲಿಯ ವರದಿ ಒಪ್ಪಿಸಿ ದಂತಷ್ಟೇ ಆಗುತ್ತದೆ.ಆದರೆ ಏನು ಗೊತ್ತೇ? ಪೀಟರ್ ಅಥವಾ ಅವರಂಥ ನಿವಾಸಿಗಳಿಗೆ ಇದೆಲ್ಲ ಸಾಧ್ಯವಾಗುತ್ತಿರುವುದು ಬಾಲ್ಯದಲ್ಲಿ ಅಥವಾ ಯೌವನದಲ್ಲಿ ಅವರು ನೋಡಿದ, ಕಲಿತ, ಅನುಭವಿಸಿದ ಅವರ ಮಣ್ಣಿನ ಪರಂಪರೆ, ಸಂಸ್ಕೃತಿ ಮತ್ತು ಕಲೆಯನ್ನು ತಮ್ಮಲ್ಲಿ ಅಳವಡಿಸಿ ಕೊಂಡಿದ್ದರಿಂದ ಹೊರತು ಇನ್ನೇನು ಅಲ್ಲ.
ಈ ಕಾರಣಕ್ಕಾಗಿಯೇ ಇರಬೇಕು, ವಿಯೆಟ್ನಾಮ್‌ನ ಜನ ತಮ್ಮ ಮಣ್ಣಿನೊಂದಿಗೆ, ತಮ್ಮ ಕಲೆಯೊಂದಿಗೆ, ಗಾಢವಾದ ಬೆಸುಗೆ ಹೊಂದಿರುತ್ತಾರೆ. ವಿಯೆಟ್ನಾಮ್‌ನ ಅದೆಷ್ಟೋ ಜನರಿಗೆ ಅವರು ನಂಬಿದ ಸಂಸ್ಕೃತಿ ಮತ್ತು ಕಲೆ ಜೀವನೋಪಾಯವನ್ನು, ಬದುಕಿನ ದಾರಿಯನ್ನು ತೋರಿಸಿ ಕೊಟ್ಟಿದೆ.
ಇದರಿಂದಾಗಿ ಅವರು ತಮ್ಮ ಬದುಕು ಕಟ್ಟಿಕೊಳ್ಳುವುದಷ್ಟೇ ಅಲ್ಲದೆ, ಪ್ರವಾಸಿಕರಿಗೂ ತಮ್ಮ ಮಣ್ಣಿನ ಸೊಗಡನ್ನು ಉಣಬಡಿಸುತ್ತಿzರೆ. ಬಹುಶಃ ಈ ಕಾರಣಕ್ಕಾಗಿ ಹಲವು ವರ್ಷ ಅಮೆರಿಕದ ಬಾಂಬ್ ದಾಳಿಗೆ ತುತ್ತಾಗಿ ಛಿದ್ರ-ಛಿದ್ರವಾಗಿದ್ದ ವಿಯೆಟ್ನಾಮ್ ಇಂದು ಪ್ರವಾಸೋದ್ಯಮದಲ್ಲಿ ಈ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ.
ಯಾರೇ ಆಗಲಿ, ವಿಯೆಟ್ನಾಮ್ ಪ್ರವಾಸಕ್ಕೆಂದು ಹೋದಾಗ ಇವನ್ನೆಲ್ಲ ನೋಡದಿದ್ದರೆ ಅಥವಾ ಇವುಗಳಲ್ಲಿ ಒಂದೆರಡನ್ನಾದರೂ ಕಾಣದಿದ್ದರೆ ಅವರ ಪ್ರವಾಸ ಅಪೂರ್ಣ. ಅದಿರಲಿ, ವಿಯೆಟ್ನಾಮ್ ನಂಥ ದೇಶಕ್ಕೆ, ಇಂಥ ಕಾರ್ಯಕ್ರಮಗಳನ್ನು, ಪ್ರದರ್ಶನಗಳನ್ನು ಪ್ರತಿನಿತ್ಯ ಆಯೋಜಿಸಲು ಸಾಧ್ಯ ವಾಗುತ್ತಿದೆ, ಆ ಮುಖೇನ ತನ್ನ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸಲು ಅದಕ್ಕೆ ಸಾಧ್ಯವಾಗುತ್ತಿದೆ ಎಂದಾದರೆ, ಭಾರತದಲ್ಲಿ ಅಥವಾ ನಮ್ಮ ರಾಜ್ಯ ದಲ್ಲಿ ಇದು ಯಾಕೆ ಸಾಧ್ಯವಾಗುತ್ತಿಲ್ಲ? ಪ್ರತಿನಿತ್ಯ ಪ್ರವಾಸಿಗರಿಗಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸಿಕೊಡುವ ಒಂದೇ ಒಂದು ಪ್ರದರ್ಶನವನ್ನೂ ಯಾಕೆ ಆಯೋಜಿಸ ಲಾಗುತ್ತಿಲ್ಲ? ನಮ್ಮಲ್ಲಿಯ ಯಕ್ಷಗಾನ, ಕಂಸಾಳೆ, ಜಗ್ಗಲಗಿ, ಡೊಳ್ಳು ಕುಣಿತ, ಕೊರಗ ನೃತ್ಯ ಅಥವಾ ಇನ್ಯಾವುದೋ ಕಲೆಯ ನಿರಂತರ ಪ್ರದರ್ಶನ ಯಾಕೆ ಸಾಧ್ಯವಾಗುತ್ತಿಲ್ಲ? ಆ ’ಭಾಗ್ಯ’ವಿಧಾತನೇ ಉತ್ತರಿಸಬೇಕು!