ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಹುಡುಗ, ಹುಡುಗಿ ಮತ್ತು ಬೇಸಿಗೆ ರಜೆ

ಮನೆಯ ಪಕ್ಕ ಇರುವ ಪುಟ್ಟ ಕೆರೆಯಲ್ಲಿ ಈಸು ಬಿದ್ದದ್ದಾಯಿತು. ಕಾಡುಗುಡ್ಡ ಹತ್ತಿಳಿದು, ಗೇರು ಬೀಜ ಹೆಕ್ಕಿ, ಮಾವು ತಿಂದು, ಹೀಗೆಲ್ಲ ಹೊತ್ತು ಹೋಗುತ್ತದೆ. ಆದರೆ ಅಕ್ಕಪಕ್ಕದಲ್ಲಿ ಕೂತಿರುತ್ತಿದ್ದ ಸಮಾನ ವಯಸ್ಸಿನವರ ಗ್ಯಾಂಗು ಇಲ್ಲದೆ, ಜೀವ ಒಳಗಿದ್ದೂ ಒಳಗಿಲ್ಲ ಎಂಬ ಭಾವ. ಇದೇ ಹೊತ್ತಿನ ಪಟ್ಟಣದಿಂದ ಸೋದರಮಾವನ ಮನೆಯ ಕರೆ ಬರುತ್ತದೆ.

ಹುಡುಗ, ಹುಡುಗಿ ಮತ್ತು ಬೇಸಿಗೆ ರಜೆ

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್‌ ಕೇರ

ಹರೀಶ್‌ ಕೇರ ಹರೀಶ್‌ ಕೇರ Mar 27, 2025 7:40 AM

ಕಾಡುದಾರಿ

ಹಳೆಯ ತರಗತಿ ಅವನನ್ನು ಬೀಳ್ಕೊಟ್ಟಿದೆ. ಮತ್ತಿನ್ನೆರಡು ತಿಂಗಳು ಬಿಟ್ಟು ಅವರನ್ನೆಲ್ಲ ಭೇಟಿಯಾಗಲಿದ್ದೇನಾದರೂ ಮನದಲ್ಲಿ ಏನೋ ಸಣ್ಣ ಬೇಸರದ ಭಾವ. ಒಂದೆರಡು ಮಂದಿ, ಅಪ್ಪನ ಟ್ರಾನ್ಸ್ ಫರ್ ನಿಂದಾಗಿ ಊರನ್ನೇ ಬಿಟ್ಟು ಹೋಗುವವರು ಮಾತ್ರ ಈ ಶಾಲೆ ಬಿಟ್ಟು ಬಾಯ್ ಹೇಳಿದ್ದಾರೆ. ಅವರೂ ಮುಂದೆ ಎಂದಾದರೂ ಸಿಗಬಹುದು; ಅದರೆ ಅವರ ಜೊತೆ ಕ್ರಿಕೆಟ್ ಆಡಿದ, ಜಗಳವಾಡಿದ ನೆನಪುಗಳು ತಾಜಾ ಆಗಿವೆ. ಮನೆಗೆ ಬಂದರೆ ಇಡೀ ದಿನದ ಇಪ್ಪತ್ತನಾಲ್ಕು ಗಂಟೆಗಳು ಹರಡಿ ಬಿದ್ದಿವೆ. ಅರ್ಧ ದಿನ ಶಾಲೆಯಲ್ಲಿ ಕಳೆದುಹೋಗುತ್ತಿತ್ತು. ಸಂಜೆಗಳು ಹರಟೆ ಹೊಡೆಯಲೂ ರಾತ್ರಿಗಳು ಓದಲೂ ಸಿಗುತ್ತಿದ್ದವು. ಈಗ ನಡು ಮಧ್ಯಾಹ್ನಗಳನ್ನು ಏನು ಮಾಡುವುದೋ ತಿಳಿಯುತ್ತಿಲ್ಲ.

ಮನೆಯ ಪಕ್ಕ ಇರುವ ಪುಟ್ಟ ಕೆರೆಯಲ್ಲಿ ಈಸು ಬಿದ್ದದ್ದಾಯಿತು. ಕಾಡುಗುಡ್ಡ ಹತ್ತಿಳಿದು, ಗೇರುಬೀಜ ಹೆಕ್ಕಿ, ಮಾವು ತಿಂದು, ಹೀಗೆಲ್ಲ ಹೊತ್ತು ಹೋಗುತ್ತದೆ. ಆದರೆ ಅಕ್ಕಪಕ್ಕದಲ್ಲಿ ಕೂತಿರುತ್ತಿದ್ದ ಸಮಾನ ವಯಸ್ಸಿನವರ ಗ್ಯಾಂಗು ಇಲ್ಲದೆ, ಜೀವ ಒಳಗಿದ್ದೂ ಒಳಗಿಲ್ಲ ಎಂಬ ಭಾವ. ಇದೇ ಹೊತ್ತಿನ ಪಟ್ಟಣದಿಂದ ಸೋದರಮಾವನ ಮನೆಯ ಕರೆ ಬರುತ್ತದೆ.

ಇದನ್ನೂ ಓದಿ: Harish Kera Column: ಸುನಿತಾ ನೆಪದಲ್ಲಿ ಕೆಲವು ಸಂಗತಿಗಳು

‘ಈಗ ಮದುವೆಯ ಸೀಸನ್. ಊಟಕ್ಕೆ ಬಡಿಸಲು ಜನವಿಲ್ಲ. ಒಂದು ದಿನಕ್ಕೆ ಒಂದು ಸಾವಿರ ಕೊಡ್ತಾರೆ. ಬಂದರೆ ಸುಲಭವಾಗಿ ಒಂದಿಷ್ಟು ದುಡ್ಡು ಮಾಡಿಕೊಂಡು ಹೋಗಬಹುದು’ ಅಂತ. ಇದೇ ಸಮಯ ಅಂತ ಹೊರಟುಬಿಡುತ್ತಾನೆ. ರಾತ್ರಿ ಇಡೀ ನಿದ್ರೆ ಕೊಡದೆ ಕೆಂಪು ಬಸ್ಸು ಅವನನ್ನು ಪಟ್ಟಣದ ಜನಸಾಗರದ ನಡುವೆ ತಂದುಬಿಡುತ್ತದೆ. ಸಾವರಿಸಿಕೊಂಡು ನೋಡುತ್ತಿದ್ದಾಗ ಮಾವನ ಮಗ ಬಂದು ಬೈಕಿನಲ್ಲಿ ಕೂರಿಸಿಕೊಂಡು ಮನೆಗೆ ಕರೆದೊಯ್ಯುತ್ತಾನೆ.

ತಲೆಗೆ ಹೆಲ್ಮೆಟ್ ಇಲ್ಲ. ಒನ್‌ವೇಯಲ್ಲಿ ಉಲ್ಟಾ ದಿಕ್ಕಿನಿಂದ ಶರವೇಗದಲ್ಲಿ ಬೈಕ್ ಓಡಿಸಿ ಟ್ರಾಫಿಕ್ ಪೊಲೀಸರನ್ನೂ ಯಾಮಾರಿಸುವ ವೀರಾಧಿವೀರ ಭಾವನ ಹಿಂದೆ ಕುಳಿತ ಇವನಿಗೆ ದಿಗಿಲು. ಮಾರನೆಯ ದಿನದಿಂದಲೇ ಕೆಲಸ ಶುರು. ಮಾವನೇ ಕರೆದೊಯ್ದಿದ್ದಾನೆ.

ಬಡಿಸುವವರು ಪ್ಯಾಂಟು- ಅಂಗಿ ಧರಿಸುವಂತಿಲ್ಲ. ಬಿಳೀ ಪಂಚೆ ಉಟ್ಟು ಶಾಲು ಹೊದ್ದಿರ ಬೇಕು. ಕೈಕಾಲು ಕ್ಲೀನ್ ಆಗಿರಬೇಕು. ಊಟ ಶುರುವಾಗುವವರೆಗೂ ಕಾಯಿ ತುರಿ, ನೀರು ತಾ. ಹನ್ನೆರಡು ಗಂಟೆಗೆ ಊಟ ಬಡಿಸಲು ಶುರುವಾದರೆ ನಾಲ್ಕು ಗಂಟೆಯವರೆಗೂ ಪಂಕ್ತಿಗಳು ಬೀಳುತ್ತಲೇ ಇರುತ್ತವೆ. ಉಪ್ಪು ಎಲ್ಲಿ ಹಾಕಬೇಕು, ಪಲ್ಯ ಎಲ್ಲಿಗೆ, ಹಪ್ಪಳ ಬಾಳೆಲೆಗೆ ಇಡುವುದೋ ಕೈಗೆ ಕೊಡುವುದೋ, ಸಾಂಬಾರು ಬಡಿಸುವಾಗ ಎಷ್ಟು ಹೋಳು ಇರಬೇಕು, ಅನ್ನ ವೇಸ್ಟ್ ಆಗದ ಹಾಗೆ ಬಡಿಸುವುದು ಹೇಗೆ- ಎಲ್ಲವನ್ನೂ ಚಕಚಕ ಕಲಿತುಕೊಂಡಿದ್ದಾನೆ.

Screenshot_4 ok

ಅತಿಥಿಗಳ ಸಾಲೆ ಮುಗಿದು ನಾಲ್ಕು ಗಂಟೆಗೆ ಇವನ ಸರದಿ ಬರುವಷ್ಟರಲ್ಲಿ ನೀರು ಕುಡಿದೂ ಕುಡಿದೂ ಇವನ ಹಸಿವೇ ಇಂಗಿಹೋಗಿದೆ. ಸ್ವೀಟು ಇದ್ದರೂ ತಿನ್ನಲು ಮನಸ್ಸಾಗದೆ ಸಾರಿನಲ್ಲಿ ನಾಲ್ಕು ತುತ್ತು ಕಲಸಿ ಬಾಯಿಗಿಟ್ಟು ಎದ್ದುಬಿಡುತ್ತಾನೆ. ಇದು ಹೀಗೇ ಮುಂದು ವರಿಯುತ್ತದೆ.

ಒಂದೊಂದು ದಿನ ಒಂದೊಂದು ಕಡೆ. ಮಾವನೋ ಭಾವನೋ ಕರದೊಯ್ಯುತ್ತಾರೆ. ಪ್ರತಿದಿನ ಮನೆಗೆ ಹಿಂದಿರುಗುವಾಗ ಒಂದಿಷ್ಟು ನೋಟುಗಳು ಅವನ ಜೇಬು ಸೇರುತ್ತವೆ. ಈ ನೋಟುಗಳನ್ನು ಎಟಿಎಂ ಮಶಿನ್‌ನಲ್ಲಿ ಅಕೌಂಟ್‌ಗೆ ತುಂಬಿಸುವುದು ಹೇಗೆ, ತೆಗೆಯುವುದು ಹೇಗೆ ಎಂಬುದನ್ನೆಲ್ಲ ಭಾವ ಹೇಳಿಕೊಟ್ಟಿದ್ದಾನೆ.

ಸಂಜೆ ಮೆತ್ತಗೆ ಮನೆಯಿಂದ ಹೊರಬಿದ್ದು ಬೀದಿ ಸುತ್ತುತ್ತಾನೆ. ಸಮಾರಂಭ ಇಲ್ಲದ ದಿನ ಹಾಗೇ ಸಿಟಿ ಬಸ್ಸು ಹತ್ತಿ ಲಾಲ್‌ಬಾಗ್ ಗೆ, ಕಬ್ಬನ್‌ಪಾರ್ಕ್‌ಗೆ ಹೋಗಿ ಬರಲು ಕಲಿತಿದ್ದಾನೆ. ಒಂದು ಸಂಜೆ ಭಾವ ಅವನನ್ನು ಲುಲು ಮಾಲ್ ಗೂ ಕರೆದೊಯ್ದಿದ್ದಾನೆ. ಅಲ್ಲಿ ಇತ್ತೀಚೆಗೆ ತಾನೆ ರಿಲೀಸ್ ಆದ ಪ್ಯಾನ್ ಇಂಡಿಯಾ ಮೂವಿಯೊಂದು ಪ್ರದರ್ಶಿತವಾಗುತ್ತಿದೆ.

ಪಾಪ್ ಕಾರ್ನ್ ತಿನ್ನುತ್ತಾ ಪೆಪ್ಸಿ ಕುಡಿಯುತ್ತಾ ಸಿನಿಮಾ ನೋಡುವ ಕಲೆ ಅವನಿಗೆ ಕರಗತವಾಗುತ್ತದೆ. ಹಾಗೇ ಒಂದು ಸಂಜೆ ವಾಕಿಂಗ್ ಮುಗಿಸಿ ಬಂದಾಗ ಮಾವನ ಮನೆಗೆ ಅಂಟಿಕೊಂಡೇ ಇರುವ ಪಕ್ಕದ ಮನೆಯ ಗೋಡೆಗೆ ಒರಗಿ ಅವನದೇ ಪ್ರಾಯದ ಹುಡುಗಿಯೊಬ್ಬಳು ನಿಂತಿದ್ದಾಳೆ.

ಇವನನ್ನೇ ದಿಟ್ಟಿಸಿ ನೋಡಿ ಮುಗುಳ್ನಕ್ಕಾಗ ಬೆಚ್ಚುತ್ತಾನೆ. ಊರಿನಲ್ಲಿ, ಅವನ ಕ್ಲಾಸಿನ ಹುಡುಗಿಯರಲ್ಲಿ ಯಾರೂ ಹೀಗೆ ಮಾಡುವ ಧೈರ್ಯ ತೋರುವುದಿಲ್ಲ. ಏನಿದ್ದರೂ ಹುಡುಗರೇ ಮೊದಲು ಮಾತಾಡಿಸಬೇಕು. ‘ಅರೇ ನೀನು ನಿನ್ನೆ ಇಂತಿಂತ ಛತ್ರದ ಮದುವೆ ಕಾರ್ಯಕ್ರಮದಲ್ಲಿ ಊಟ ಬಡಿಸ್ತಾ ಇದ್ದೇ ಅಲ್ವಾ?’ ಅಂತ ಇಂಗ್ಲಿಷ್ ನಲ್ಲಿ ಕೇಳುತ್ತಾಳೆ.

ಹುಡುಗ ಇವಳೆಲ್ಲಿ ನೋಡಿದಳಪ್ಪ ಎಂದುಕೊಂಡು ಹೌದು ಎಂದು ಗೋಣು ಹಾಕುತ್ತಾನೆ. ‘ನಾನೂ ಬಂದಿದ್ದೇ ಅಲ್ಲಿಗೆ. ನನ್ನ ಗೆಳತಿಯ ಅಕ್ಕನ ಮದುವೆ ಅದಾಗಿತ್ತು’ ಅನ್ನುತ್ತಾಳೆ. ಇದೇ ನಿಮ್ಮನೇನಾ ಅನ್ನುತ್ತಾಳೆ. ಬರುವ ಹರುಕುಮುರುಕು ಇಂಗ್ಲಿಷ್‌ನ- ಇಲ್ಲ ಇದು ನನ್ನ ಮಾವನ ಮನೆ ಅನ್ನುತ್ತಾನೆ. ಅಂಕಲ್ ಅಂದರೆ ಪ್ಯಾಟರ್ನ್ʼಲ್ಲೋ ಮ್ಯಾಟರ್ನ್ʼಲ್ಲೋ ಅಂತ ಕೇಳುತ್ತಾಳೆ. ಅವನಿಗೆ ಅರ್ಥವಾಗುವುದಿಲ್ಲ. ಅವಳೇ ಅರ್ಥ ಮಾಡಿಸುತ್ತಾಳೆ. ಪಕ್ಕದ ಮನೆ ಅವಳ ಚಿಕ್ಕಪ್ಪನದು ಎಂದು ಅವನಿಗೆ ಗೊತ್ತಾಗುತ್ತದೆ. ಅವಳೂ ಆಂಧ್ರದಿಂದ ರಜೆಯಲ್ಲಿ ಬಂದಿದ್ದಾಳೆ.

ಒಳಗೆ ಬಂದ ಮೇಲೆ, ಅವಳ ಹೆಸರು ಕೇಳಲು ಮರೆತು ಹೋದೆನ ಎಂದು ಹಳಹಳಿಸುತ್ತಾನೆ. ತನ್ನ ಹೆಸರನ್ನೂ ಅವಳು ಕೇಳಿಲ್ಲ. ನಾಳೆ ಸಿಕ್ಕರೆ ಕೇಳೋಣ ಎಂದುಕೊಳ್ಳುತ್ತಾನೆ. ಮರು ದಿನದ ಮದುವೆಯ ಕಾರ್ಯಕ್ರಮದಲ್ಲಿ ಬಡಿಸುವಾಗ ಎಂದಿಗಿಂತ ಚುರುಕಾಗಿ ಓಡಾಡು ತ್ತಾನೆ. ನಾಲ್ಕು ಗಂಟೆಯಾದರೂ ಮುಗಿಯದಿದ್ದಾಗ ಅವನಿಗೆ ಗಾಬರಿಯಾಗುತ್ತದೆ. ಅವಳು ಇಂದು ಮನೆಯ ಹೊರಗೆ ಬಾರದಿದ್ದರೆ? ಬಂದರೂ ಬೇಗನೆ ಒಳಗೆ ಹೋಗಿಬಿಟ್ಟರೆ? ಎಂದೆಲ್ಲ ಪ್ರಶ್ನೆಗಳು ಕಾಡುತ್ತವೆ.

ಕಾರ್ಯಕ್ರಮ ಮುಗಿಸಿ ಬರುವಾಗ ಅವಳು ಗೇಟಿಗೆ ಒರಗಿ ಯಾರನ್ನೋ ಕಾಯುತ್ತಿರುವಂತೆ ಕಾಣುತ್ತಿದೆ. ತನ್ನನ್ನೇ ಕಾಯುತ್ತಿದ್ದಾಳೆ ಅನಿಸಿ ಎದೆಯ ಮೇಲೆ ಒಳಗೆಲ್ಲ ಯಾರೋ ಇಸಿ ಮಾಡಿದಂತಾಗಿ ಬೆಚ್ಚಗಾಗುತ್ತದೆ. ಅಚಾನಕ್ಕಾಗಿ ಇಬ್ಬರದೂ ಕಣ್ಣು ಬೆಳಗುತ್ತದೆ, ಬಾಯಿ ಹಾಯ್ ಎನ್ನುತ್ತದೆ. ಮಾತುಗಳು ಅತ್ತಿಂದಿತ್ತ ಹರಿದಾಡುತ್ತವೆ. ಅವಳ ಹೆಸರು ಶಮಾ ಎಂದು ಅವನಿಗೂ, ಇವನ ಹೆಸರು ಸುಮಿತ್ ಎಂದು ಅವಳಿಗೂ ತಿಳಿಯುತ್ತದೆ.

ಹೀಗೇ ಒಂದು ವಾರ ಸರಿಯುತ್ತದೆ. ಒಂದು ದಿನ ಅವಳೇ ಪಕ್ಕದ ಬೀದಿಯಲ್ಲಿ ಗೋಲ್‌ಗಪ್ಪಾ ಚೆನ್ನಾಗಿರುತ್ತೆ, ತಿನ್ನೋಣವಾ ಎಂದು ಕೇಳುತ್ತಾಳೆ. ಇವನ ಎದೆ ಪುಕಪುಕ ಎನ್ನುತ್ತಿದೆಯಾದರೂ ಒಪ್ಪಿದ್ದಾನೆ. ಇಬ್ಬರೂ ಅಕ್ಕಪಕ್ಕ ನಡೆದುಕೊಂಡೇ ಸಾಗುತ್ತಾರೆ. ಅವಳ ಮೈಯಿಂದ ಜಾಸ್ಮಿನ್ ಪರ್ ಫ್ಯೂಮಿನ ಪರಿಮಳ, ಇವನ ಮೈಯಿಂದ ಮದುವೆ ಮನೆಯ ಅಡುಗೆಯ ಪರಿಮಳ ವಿನಿಮಯವಾಗುತ್ತವೆ.

ಮೊದಲ ಬಾರಿಗೆ ಅವನ ಚಪ್ಪಲಿ ಹಾಗೂ ಪ್ಯಾಂಟಿನ ಬಗ್ಗೆ ಅವನಿಗೆ ಅಸಮಾಧಾನ ವಾಗುತ್ತದೆ. ಗೋಲ್‌ಗಪ್ಪಾ ಮಾಡುವ ಭಯ್ಯಾನಿಗೆ ಇವಳ ಪರಿಚಯ ಚೆನ್ನಾಗಿದ್ದಂತಿದೆ. ನೋಡಿದವನೇ ನಕ್ಕು ಸರಸರ ಎರಡು ಪ್ಲೇಟು ಕೈಗೆ ಕೊಟ್ಟು ಪುರಿ ಪಾನಿಯಲ್ಲಿ ಮುಳುಗಿಸಿ ಮುಳುಗಿಸಿ ಕೊಡುತ್ತಿದ್ದಾನೆ.

ಇವನು ಮೊದಲ ಬಾರಿಗೆ ಇಷ್ಟೊಂದು ರುಚಿಯಾದ ಗೋಲ್‌ಗಪ್ಪಾ ತಿನ್ನುತ್ತಿರುವಂತಿದೆ. ಅಂದು ರಾತ್ರಿ ಅವನ ಕನಸಿನಲ್ಲಿ ಆ ಹುಡುಗಿ ಬಂದುಬಿಟ್ಟಿದ್ದಾಳೆ. ಅವನಿಗೆ ಎಚ್ಚರವಾಗಿ ನೋಡಿದರೆ ಮೈಯೆಲ್ಲ ಬೆವರಿ ಒದ್ದೆಯಾಗಿದೆ. ಮರಳಿ ನಿದ್ದೆ ಬರುವುದೇ ಇಲ್ಲ. ಮರುದಿನ ನಿದ್ರೆಗೆಟ್ಟೇ ಊಟ ಬಡಿಸಲು ಹೋಗಿದ್ದಾನೆ. ಅಲ್ಲಿ ಅನ್ನದ ಮೇಲೆ ಪಾಯಸ ಬಡಿಸಿ ಬಯ್ಯಿಸಿಕೊಂಡಿದ್ದಾನೆ.

ಸಂಜೆ ವಾಪಸು ಬರುವಾಗ ಅವಳು ಮತ್ತದೇ ಜಾಗದಲ್ಲಿ ಕಾಯುತ್ತಿದ್ದಾಳೆ. ಕನಸಿನ ವಿಷಯ ಹೇಳಲೋ ಬೇಡವೋ ಅಂದುಕೊಂಡು, ಬೇಡವೆಂದೇ ನಿರ್ಧರಿಸುತ್ತಾನೆ. ಅಂದು ಅವರು ಪಕ್ಕದ ಪಾರ್ಕೊಂದಕ್ಕೆ ಹೋಗುತ್ತಾರೆ. ಅಲ್ಲಿ ಮಕ್ಕಳು ಆಡುತ್ತಿದ್ದಾರೆ. ಅವಳು ತಾನು ಚಿಕ್ಕವಳಿದ್ದಾಗ ಉಯ್ಯಾಲೆಯಿಂದ ಬಿದ್ದಿದ್ದನ್ನು ಹೇಳುತ್ತಾಳೆ. ಇವನು ತೋಟದ ಕೆರೆಯಲ್ಲಿ ತಾನು ನೀರು ಕುಡಿದದ್ದನ್ನು ಹೇಳುತ್ತಾನೆ.

ಒಂದು ಸಲ ನಿಮ್ಮ ಊರಿಗೆ ಬಂದು ತೋಟವನ್ನೆಲ್ಲ ನೋಡಬೇಕಲ್ಲ ಅನ್ನುತ್ತಾಳೆ. ಅದಕ್ಕೇನು, ಯಾವಾಗ ಬೇಕಾದರೂ ಬರಬಹುದು ಅನ್ನುತ್ತಾನೆ. ಇಬ್ಬರೂ ತಮ್ಮ ಫೋನ್ ನಂಬರ್ ವಿನಿಮಯಿಸಿಕೊಳ್ಳುತ್ತಾರೆ. ಅವಳ ಕೈಯಲ್ಲಿರುವ ದುಬಾರಿ ಸ್ಮಾರ್ಟ್ ಫೋನು, ಅವನ ಬಳಿ ಇರುವ ಪುರಾತನ ಬಟನ್ ಫೋನನ್ನು ನೋಡಿ ನಗುತ್ತದೆ.

ಅವರು ಹಿಂದಿರುಗಿ ಬರುತ್ತಿರುವಾಗ ಮನೆಯ ಮುಂದೆ ಆಕೆಯ ಅಂಕಲ್ ನಿಂತಿದ್ದಾನೆ. ಅವನು ಪೊಲೀಸ್ ಇಲಾಖೆಯಲ್ಲಿರುವವನು ಎಂದು ಅವನ ನಿಲುವೇ ಹೇಳುತ್ತಿದೆ. ಅವನ ದಪ್ಪ ಹುಬ್ಬಿನ ಕೆಳಗಿರುವ ಕಂಗಳು ಇವನನ್ನು ಇರಿಯುವಂತೆ ದಿಟ್ಟಿಸುತ್ತವೆ. ಅವಳು ಬಾಯ್ ಎಂದಾಗ ಅಸ್ಪಷ್ಟವಾಗಿ ತೊದಲಿ ಇವನು ಕಳವಳದಿಂದ ಮನೆ ಸೇರಿಕೊಳ್ಳುತ್ತಾನೆ. ಅಂದು ಲಾಕಪ್ಪಿನಲ್ಲಿ ಇವನನ್ನು ನಾಲ್ಕಾರು ಮಂದಿ ಲಟ್ಟಿಸಿದಂತೆ ಇವನಿಗೆ ಕನಸು ಬಿದ್ದು ಬೆಚ್ಚಿ ಎದ್ದು ಕೂರುತ್ತಾನೆ. ಮರುದಿನವೂ ಮದುವೆ ಮನೆಯಲ್ಲಿ ಮೈಮುರಿಯುವಷ್ಟು ಕೆಲಸ. ಇಂದು ಸಂಜೆ ಮನೆಯ ಮುಂದೇ ಕಾದು ನಿಂತರೂ ಅವಳ ಸುಳಿವಿಲ್ಲ. ಅವಳು ಈಗ ಬರಬಹುದು, ಮತ್ತೆ ಬರಬಹುದು ಎಂದು ನಾಲ್ಕಾರು ಬಾರಿ ಮನೆ ಮುಂದೆ ಠಳಾಯಿಸಿದರೂ ಇಲ್ಲ.

ಬೇಸರದಿಂದ ಒಳಬಂದು ಒಂದು ತಂಬಿಗೆ ಮಜ್ಜಿಗೆ ಕುಡಿದು ಮಲಗುತ್ತಾನೆ. ರಜೆ ಮುಗಿ ಯುತ್ತಾ ಬಂದಿದೆ. ಕಾರ್ಯಕ್ರಮಗಳೂ ವಿರಳವಾಗುತ್ತಿವೆ. ಊರು ಕೈಬೀಸಿ ಕರೆಯುತ್ತಿದೆ. ಅವಳು ಮನೆ ಮುಂದೆ ಬರುವುದಿಲ್ಲ. ಮನೆಯೊಳಗೆ ಇದ್ದಾಳೋ ಇಲ್ಲವೋ ಗೊತ್ತೇ ಆಗುವುದಿಲ್ಲ. ಒಂದು ವಾರ ಹೀಗೇ ಕಳೆದಿದೆ. ಅವಳು ಕೊಟ್ಟಿರುವ ನಂಬರ್‌ಗೆ ಡಯಲ್ ಮಾಡುತ್ತಾನೆ. ಇಂಥದೊಂದು ನಂಬರ್ ಅಸ್ತಿತ್ವದ ಇಲ್ಲ ಎನ್ನುತ್ತದೆ ಅದು. ಮೊದಲ ಬಾರಿಗೆ ಅವನಿಗೆ ತನ್ನೊಳಗೇ ಏನೋ ಮುರಿದುಬಿದ್ದಂತಾಗಿದೆ.

ಹುಡುಗ ಇದ್ದಕ್ಕಿದ್ದಂತೆ ದೊಡ್ಡವನಾಗಿ ಬಿಟ್ಟಿದ್ದಾನೆ. ಬೇಸಿಗೆ ರಜೆ ಅವನಲ್ಲಿ ಆಳವಾದ ಏನೋ ಒಂದನ್ನು ಬಿಟ್ಟು ಹೋಗುತ್ತಿದೆ. ಹಲವು ಗುರುತುಗಳು- ಕೆಲವು ನೋವಿನ, ಕೆಲವು ಸಿಹಿಯ, ಕೆಲವು ವಿಷಾದದ, ಕೆಲವು ಪುಳಕದ, ಇನ್ನೂ ಏನೇನೋ ಅರ್ಥವಾಗದ ಭಾವಗಳು.

ಬೇಸಿಗೆ ರಜೆ ಮುಗಿದು ಊರಿಗೆ ಹಿಂದಿರುಗುತ್ತಿರುವ ಅವನ ಅಕೌಂಟ್‌ನಲ್ಲಿ ಈಗ ಒಂದು ಒಳ್ಳೆಯ ಮೊಬೈಲು ಕೊಳ್ಳಬಹುದಾದಷ್ಟು ಹಣವಿದೆ. ಎದೆಯ ಒಳಗೂ ಕೆಲವು ನೆನಪುಗಳು ಭಾರವಾಗಿ ಕೂತಿವೆ. ಅವನು ಈಗ ಮೊದಲಿನ ಹುಡುಗನಲ್ಲ, ಅವನ ಹೆಗಲುಗಳು ಮತ್ತಷ್ಟು ಗಟ್ಟಿಯಾಗಿವೆ. ಕಣ್ಣಿನಲ್ಲಿ ಮುರಿದುಬಿದ್ದ ಕನಸಿನಂಥದೇನೋ ತೇಲುತ್ತಿದೆ. ಅದು ಅವನ ಪ್ರಾಯದ ಎಲ್ಲ ಹುಡುಗರ ಬೇಸಿಗೆ ರಜೆಯ ಒಂದು ರೂಪಕದಂತಿದೆ.