ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಸುನಿತಾ ನೆಪದಲ್ಲಿ ಕೆಲವು ಸಂಗತಿಗಳು

ಸುನಿತಾ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅವರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುವ ಮುನ್ನ ತಮ್ಮ ಜೊತೆಗೆ ಗಣೇಶನ ವಿಗ್ರಹ ಮತ್ತು ಭಗವದ್ಗೀತೆ ಕೊಂಡೊಯ್ದರು. ತಾವು ಪ್ರಾಕ್ಟೀಸಿಂಗ್ ಹಿಂದೂ ಎಂದು ಹೇಳಿಕೊಳ್ಳುವುದರಲ್ಲಿ ಸುನಿತಾ ಹಿಂದೆ ಬಿದ್ದಿಲ್ಲ. ಆದರೆ ಸುನಿತಾ ಹೋಗುತ್ತಿರುವುದು ಆಧುನಿಕ ವಿಜ್ಞಾನ- ತಂತ್ರಜ್ಞಾನದ ಉತ್ಕೃಷ್ಟ ಫಲ ಎನ್ನಬಹುದಾದ ರಾಕೆಟ್

ಸುನಿತಾ ನೆಪದಲ್ಲಿ ಕೆಲವು ಸಂಗತಿಗಳು

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್‌ ಕೇರ

ಹರೀಶ್‌ ಕೇರ ಹರೀಶ್‌ ಕೇರ Mar 20, 2025 6:42 AM

ಇತ್ತೀಚೆಗೆ ವಿಶ್ವವಿಖ್ಯಾತ ಖಗೋಳಶಾಸ್ತ್ರಜ್ಞ, ‘ನೊಬೆಲ್ ಆಫ್ ದಿ ಈಸ್ಟ್’ ಖ್ಯಾತಿಯ ಶಾ ಪ್ರಶಸ್ತಿ ಪುರ ಸ್ಕೃತ ಶ್ರೀನಿವಾಸ ಆರ್. ಕುಲಕರ್ಣಿಯವರ ಸಂದರ್ಶನ ಮಾಡಲಾಗಿತ್ತು. ಅದರಲ್ಲಿ ಕೇಳಿದ ಒಂದು ಪ್ರಶ್ನೆ: ಈ ವಿಶ್ವ, ಬ್ರಹ್ಮಾಂಡವನ್ನೆ ಗಮನಿಸುತ್ತಾ, ಇದರ ಹಿಂದೆ ಒಂದು ‘ಬುದ್ಧಿವಂತ ಮೆದುಳಿನ’ ವಿನ್ಯಾಸ ಇರಬಹುದು ಅಂತ ಯಾವತ್ತಾದರೂ ಅನಿಸಿದೆಯಾ? ಇದಕ್ಕೆ ಅವರು ನೀಡಿದ ಉತ್ತರ: ಇಂಥ ಏನೇನೋ ಕಲ್ಪನೆಗಳನ್ನು ನಾವು ಮಾಡಿಕೊಳ್ಳಬಹುದು. ‌ಆದರೆ ಸರಳ ಪ್ರಮೇಯ ಏನು? ಇದು ಸಹಜ ವಿಕಾಸ ಇರಬಹುದಲ್ವಾ? ಡಿಎನ್‌ಎ ಬಗ್ಗೆ ತಿಳಿದು ಬಂದಾಗ, ಇದನ್ನು ದೇವರೇ ಮಾಡಿರಬೇಕು ಅಂದರು. ಆದರೆ ಡಾರ್ವಿನ್ ಥಿಯರಿಯಿಂದ ನಮ್ಮ ವಿಕಾಸ ಹೀಗಾಯ್ತು ಅಂತ ಗೊತ್ತಾಯಿತು. ಆಗ, ಇದೆಲ್ಲಕ್ಕೂ ಮೂಲವಾದ ಬ್ಯಾಕ್ಟೀರಿಯಾಗಳೇ ದೇವರ ಸೃಷ್ಟಿ ಅಂದರು.

ಇಂಥ ಜನ ಈ ವಾದವನ್ನು ಬಿಡುವುದೇ ಇಲ್ಲ. ನಾವು ಯಾವುದಕ್ಕಾದರೂ ವೈಜ್ಞಾನಿಕ ವಿವರಣೆ ಕೊಟ್ಟರೆ ಅದಕ್ಕೂ ಹಿಂದೆ ಚಲಿಸುತ್ತಾರೆ. ವಿಶ್ವ ಸೃಷ್ಟಿಯಾದದ್ದು ಬಿಗ್ ಬ್ಯಾಂಗ್‌ನಿಂದ ಅಂದರೆ ಪ್ರಶ್ನೆ ತೂರಿಬರುತ್ತದೆ- ಅದಕ್ಕೂ ಮೊದಲೇ ಏನಿತ್ತು ಅಂತ. ಇಂಥ ಪ್ರಶ್ನೆ ಪ್ರತಿಯೊಂದಕ್ಕೂ ಬರುತ್ತದೆ. ಆದರೆ ಅರ್ಥಪೂರ್ಣವಾದ ನಿಜವಾದ ಪ್ರಗತಿ ಅಂದರೆ, ಮಹಾಸ್ಫೋಟದಿಂದ ಈ ವಿಶ್ವ ಶುರುವಾಯಿತು ಅನ್ನುವುದು. ಅದಕ್ಕೆ ಹಿಂದೆ ಯಾವುದೇ ಶಕ್ತಿ ಇದೆ ಅನ್ನುವುದೆಲ್ಲ ಬರಿಯ ಹೇಳಿಕೆಗಳಷ್ಟೇ.

ಇದನ್ನೂ ಓದಿ: Kerala Horror: ಕೇರಳವನ್ನೇ ನಡುಗಿಸಿದ ಬರ್ಬರ ಹತ್ಯಾಕಾಂಡ; ಒಂದೊಂದಾಗಿ ಹೊರ ಬೀಳುತ್ತಿದೆ ಬೆಚ್ಚಿ ಬೀಳಿಸುವ ರಹಸ್ಯ

ಭಾರತದ ವಿಜ್ಞಾನಿಗಳಲ್ಲಿ ಹೀಗೆ ಸ್ಪಷ್ಟವಾಗಿ ದೇವರು ಅಥವಾ ಅಂಥದೊಂದು ಬುದ್ಧಿವಂತ ಮೆದುಳಿನ ಅಸ್ತಿತ್ವವನ್ನು ಅಲ್ಲಗಳೆಯುವವರು ಕಡಿಮೆ. ತಾರ್ಕಿಕವಾಗಿ ನೋಡಿದರೆ, ಹೀಗೆ ಯೋಚಿಸುವವರ ಸಂಖ್ಯೆ ಹೆಚ್ಚಬೇಕಿತ್ತು. ಅಂದರೆ ಬಾಹ್ಯಾಕಾಶ ಯೋಜನೆಗಳ ಪ್ರಮಾಣ, ವೈಜ್ಞಾ ನಿಕ ಆವಿಷ್ಕಾರಗಳ ಪ್ರಮಾಣ ಹೆಚ್ಚಾದಂತೆ ದೇವರ ಅಸ್ತಿತ್ವದ ನಿರಾಕರಣೆ ಸಾಮಾನ್ಯ ಎನಿಸು ವಷ್ಟಿರಬೇಕಿತ್ತು.

ಆದರೆ ಸುನಿತಾ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅವರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುವ ಮುನ್ನ ತಮ್ಮ ಜೊತೆಗೆ ಗಣೇಶನ ವಿಗ್ರಹ ಮತ್ತು ಭಗವದ್ಗೀತೆ ಕೊಂಡೊಯ್ದರು. ತಾವು ಪ್ರಾಕ್ಟೀಸಿಂಗ್ ಹಿಂದೂ ಎಂದು ಹೇಳಿಕೊಳ್ಳುವುದರಲ್ಲಿ ಸುನಿತಾ ಹಿಂದೆ ಬಿದ್ದಿಲ್ಲ. ಆದರೆ ಸುನಿತಾ ಹೋಗುತ್ತಿರುವುದು ಆಧುನಿಕ ವಿಜ್ಞಾನ- ತಂತ್ರಜ್ಞಾನದ ಉತ್ಕೃಷ್ಟ ಫಲ ಎನ್ನಬಹುದಾದ ರಾಕೆಟ್, ಗಗನನೌಕೆ ಇತ್ಯಾದಿಗಳ ಮೂಲಕ ಅಷ್ಟೇ ಆಧುನಿಕ ವಿಜ್ಞಾನದ ಅನೇಕ ಆವಿಷ್ಕಾರಗಳ ಸಂಗಮ ವಾಗಿರುವ ಬಾಹ್ಯಾಕಾಶ ಕೇಂದ್ರಕ್ಕೆ. ಅಂದರೆ ಅವರಲ್ಲಿ ವಿಜ್ಞಾನವೂ ನಂಬಿಕೆಯೂ ಬೇರೆ ಬೇರೆ ಯಾಗಿರದೆ, ಎರಡೂ ವಿಚಿತ್ರ ಯುಗಗಳಂತೆ ಸೇರಿಕೊಂಡಿವೆ.

ನಮ್ಮ ಇಸ್ರೋದ ಮಾಜಿ ಅಧ್ಯಕ್ಷ ಸೋಮನಾಥ್ ಅವರಲ್ಲಿಯೂ ಇದನ್ನು ಕಾಣಬಹುದು. ಇದನ್ನು ವಿಜ್ಞಾನ- ನಂಬಿಕೆಗಳ ವಿಚಿತ್ರ ಸಂಗಮ ಎನ್ನಬೇಕೋ, ಎಲ್ಲ ವೈಜ್ಞಾನಿಕತೆಯನ್ನೂ ಕಪ್ಪು ಕುಳಿ ಯಂತೆ ಹೀರಿಕೊಳ್ಳಬಲ್ಲ ದೈವಭಕ್ತಿಯ ಶಕ್ತಿ ಎನ್ನಬೇಕೋ ಅರ್ಥವಾಗದು. ಇದು ಖಗೋಳ ಶಾಸ್ತ್ರ ಜ್ಞರ ಹೆಚ್ಚಿರುವುದು ಚೋದ್ಯ. ಅಥವಾ, ಅನಂತ ಆಕಾಶವನ್ನು ಸದಾ ದಿಟ್ಟಿಸುತ್ತಿರುವ ಖಗೋಳ ಶಾಸ್ತ್ರಜ್ಞರಲ್ಲಿ ಮೂಡುವ ಮನುಷ್ಯಕುಲದ ಅಪರಿಮಿತ ಅಸಹಾಯಕತೆಯ ಅರಿವಿನಿಂದ ಮೂಡಿದ ತಿಳಿವು ಅನ್ನೋಣವೋ!

2013ರಲ್ಲಿ ಸುನಿತಾ ಭಾರತಕ್ಕೆ ಬಂದಿದ್ದರು. ಆಗ ಕೋಲ್ಕತ್ತಾದಲ್ಲಿ ಅವರು ಆಡಿದ ಮಾತು: ಬಾಹ್ಯಾ ಕಾಶದ ಗಾಢ ಕತ್ತಲಿನ ಪ್ರದೇಶಗಳನ್ನು ನೋಡಿದರೆ, ನಮಗೆ ತಿಳಿದಿಲ್ಲದ ಏನೋ ಇದೆ ಎಂದು ಅನಿಸುತ್ತದೆ. ಇದು ದೇವರ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರ ಉತ್ತರವಾಗಿತ್ತು. ಅನ್ಯಗ್ರಹ ಜೀವಿಗಳು ಇರಬಹುದಾ ಎಂಬ ಪ್ರಶ್ನೆಗೆ ಅವರ ಉತ್ತರ: ವಿಶ್ವದಲ್ಲಿ ಲಕ್ಷಾಂತರ ನಕ್ಷತ್ರಗಳಿವೆ.

ಅವುಗಳಲ್ಲಿ ಯಾವುದರಲ್ಲೂ ಜೀವವಿಲ್ಲ ಎಂದು ಭಾವಿಸುವುದು ಕಷ್ಟ. ನಾವು ಮತ್ತೊಂದು ಸೌರವ್ಯೂಹವನ್ನು ಕಾಣಲು ಎಷ್ಟು ಸಮಯ ತೆಗೆದುಕೊಳ್ಳುತ್ತೇವೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ಅದು ನನ್ನ ಜೀವಿತಾವಽಯಲ್ಲಂತೂ ಆಗುವುದಿಲ್ಲ ಬಿಡಿ. ಅವರ ಮತ್ತೊಂದು ಮುತ್ತಿನಂಥ ಮಾತು- ನೀವು ಬಾಹ್ಯಾಕಾಶದಿಂದ ನೋಡಿದಾಗ ದೇಶಗಳ ನಡುವಿನ ಯಾವುದೇ ಗಡಿಗಳನ್ನು ಕಾಣುವುದಿಲ್ಲ. ಅದೆಲ್ಲ ಮಾನವ ನಿರ್ಮಿತ. ನೀವು ಭೂಮಿಯಲ್ಲಿದ್ದಾಗ ಮಾತ್ರ ಅದನ್ನು ಕಾಣು ವಿರಿ. ಬಾಹ್ಯಾಕಾಶದಲ್ಲಿ ನಿಮ್ಮ ದೃಷ್ಟಿಕೋನ ಬದಲಾಗುತ್ತದೆ.

ಸುನಿತಾ ವಿಲಿಯಮ್ಸ್ ಭೂಮಿಗೆ ಬಂದ ಪ್ರಕರಣದಲ್ಲಿ ನಿಸ್ಸಂಶಯವಾಗಿ ಬಿಗ್ ಪ್ಲೇಯರ್ ಆಗಿ ಹೊರಹೊಮ್ಮುತ್ತಿರುವವನು ಎಲಾನ್ ಮಸ್ಕ್. ಸುನಿತಾರನ್ನು ಕರೆತಂದದ್ದು ಇವನ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯ ಡ್ರ್ಯಾಗನ್ ಕ್ಯಾಪ್ಸೂಲ್. ಈ ಮಿಷನ್‌ಗೆ ಆದ ಒಟ್ಟಾರೆ ವೆಚ್ಚ 140 ಮಿಲಿಯ ಡಾಲರ್ ಅಥವಾ 1208 ಕೋಟಿ ರೂಪಾಯಿ (ಚಂದ್ರಯಾನ 3ರ ವೆಚ್ಚ 615 ಕೋಟಿ).

ಸ್ಪೇಸ್‌ಎಕ್ಸ್‌ನ ಮಹತ್ವಾಕಾಂಕ್ಷೆಗಳಿಗೆ ಹೋಲಿಸಿದರೆ ಇದೇನೂ ಅಂಥ ವೆಚ್ಚವಲ್ಲ. ಅಮೆರಿಕದ ಅಧ್ಯಕ್ಷ ಟ್ರಂಪ್ ಜೊತೆಗಿನ ಗೆಳೆತನ ಈತನಿಗೆ ಈ ವಿಚಾರದಲ್ಲಿ ಇನ್ನಷ್ಟು ಮುಕ್ತಹಸ್ತ ಕೊಡಲಿದೆ. ಸ್ಪೇಸ್ ಎಕ್ಸ್ ಎಂಬುದು ವ್ಯೋಮಯೋಜನೆಗಳಿಗಾಗಿಯೇ ಈತ ಹುಟ್ಟುಹಾಕಿದ ಸಂಸ್ಥೆ. ಇದರ ಸದ್ಯದ ಕೆಲಸ ನಾಸಾ ಸಂಸ್ಥೆಗೆ ಕಡಿಮೆ ವೆಚ್ಚದಲ್ಲಿ ರಾಕೆಟ್‌ಗಳನ್ನು, ಡ್ರ್ಯಾಗನ್‌ನಂಥ ಸ್ಪೇಸ್‌ಶಿಪ್ ಗಳನ್ನು ಒದಗಿಸಿಕೊಡುವುದು.

ಸದ್ಯದ ಗುರಿ ಏನೆಂದರೆ ಎಲ್ಲರಿಗೂ, ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಯಾತ್ರೆಗೆ ಅವಕಾಶ ಕಲ್ಪಿಸುವುದು. ಈ ‘ಎಲ್ಲರಿಗೂ’ ಎಂಬುದರಲ್ಲಿ ಆತ ಇತ್ತೀಚೆಗೆ ಕೆಲಸದಿಂದ ಕಳಚಿ ಎಸೆದ ಲಕ್ಷಾಂತರ ಸರಕಾರಿ ಸಿಬ್ಬಂದಿಯೂ ಸೇರುತ್ತಾರೆಯೆ? ಅದನ್ನೆಲ್ಲ ಕೇಳಬಾರದು. ದೂರದ ಗುರಿಗಳೂ ಇವೆ. ಅದೇನೆಂದರೆ ಮನುಷ್ಯನನ್ನು ಮಂಗಳ ಗ್ರಹಕ್ಕೆ ಕಳಿಸುವುದು; ಅಲ್ಲಿ ಕಾಲಜ್ಞಾನಿಗಳನ್ನು ನಿರ್ಮಿಸುವುದು.

ಕಾಲನಿ ಏಕೆ? ಭೂಗ್ರಹ ಜಾಗತಿಕ ತಾಪಮಾನದಿಂದ ಮುಂದೊಂದು ದಿನ ನಾಶವಾಗಲಿದೆ. ಆಗ ಮನುಷ್ಯನಿಗೆ ಉಳಿಯುವುದಕ್ಕೆ ತಾಣ ಬೇಕಲ್ಲ! ಈಗ ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯರು ಒಂದೆರಡು ಸಿಂಪಲ್ ಪ್ರಶ್ನೆ ಎತ್ತಬಹುದು- ನಿಮ್ಮ ವ್ಯೋಮ ಯೋಜನೆಗೆ ಸುರಿಯುತ್ತಿರುವ ಹಣ ದಲ್ಲಿ ಕಾಲು ಭಾಗ ವ್ಯಯಿಸಿದರೂ ಈ ಭೂಮಿಯ ತಾಪಮಾನ ಏರಿಕೆಯನ್ನು ತಡೆಯುವ ಕೆಲವು ಕ್ರಮಗಳನ್ನು ಕೈಗೊಳ್ಳಬಹುದಲ್ಲ ಸ್ವಾಮೇ? ಮತ್ತೆ ನಿಮ್ಮ ಮಂಗಳನ ಕಾಲನಿಗೆ ನಮ್ಮಂಥ ಸಾಮಾ ನ್ಯರೂ ಬರಬಹುದೇ? ಶಾಂತಂ ಪಾಪಂ, ಇಂಥ ಪ್ರಶ್ನೆಗಳನ್ನೆಲ್ಲ ಕೇಳಬಾರದು.

ಅಸಲಿ ವಿಷಯ ಏನೆಂದರೆ ಇದೆಲ್ಲ ಬಿಲಿಯನೇರ್‌ಗಳಿಗೆ ಮಾತ್ರ ದಕ್ಕುವ ಯೋಜನೆಗಳು. ಈಗ ಸುನೀತಾ ವಿಲಿಯಮ್ಸ್ ಅನ್ನು ಕರೆತಂದ ಮಿಷನ್‌ಗೆ ಆತ ನಾಸಾದಿಂದ 140 ಮಿಲಿಯ ಡಾಲರ್ ವಸೂಲಿ ಮಾಡುತ್ತಾನೆ. ಹೀಗೆ 2020ರಿಂದಲೂ ಆತ ನಾಸಾದಿಂದ ವಸೂಲಿ ಮಾಡುತ್ತಲೇ ಇದ್ದಾನೆ. ಸ್ಪೇಸ್‌ಎಕ್ಸ್ ತಯಾರಿಸಿರುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಇದರಲ್ಲಿ ನಿಪುಣ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಇಲ್ಲಿಗೆ ಸರಕು ಮತ್ತು ಸಿಬ್ಬಂದಿ ಯನ್ನು ಸಾಗಿಸುವ ಕಾರ್ಯಾಚರಣೆಗೇ ಇದನ್ನು ವಿನ್ಯಾಸಗೊಳಿಸಿರುವುದು. 2020ರಲ್ಲಿ ಮೊದಲ ಬಾರಿಗೆ ಹಾರಿ, ಹೀಗೆ ಖಾಸಗಿಯಾಗಿ ನಿರ್ಮಿಸಲಾದ ಮೊದಲ ಬಾಹ್ಯಾಕಾಶ ನೌಕೆಯಾಗಿ ಇತಿಹಾಸ ನಿರ್ಮಿಸಿತು. ಇದು ದೀರ್ಘ, ಸಂಕೀರ್ಣವಾದ ಸ್ಪೇಸ್ ಪ್ರಯಾಣಗಳಿಗೆ ಸೂಕ್ತವಾಗಿದೆ.

ಖಾಸಗಿ ವ್ಯೋಮ ಯೋಜನೆಗಳಲ್ಲಿ ಮಸ್ಕ್‌ಗೆ ಪೈಪೋಟಿ ಕೊಡುತ್ತಿರುವ ಇನ್ನೊಬ್ಬ ಕುಬೇರ ಇದ್ದಾನೆ. ಇವನು ಅಮೆಜಾನ್ ಕಂಪನಿಯ ಜೆಫ್ ಬೆಜೋಸ್. ಸ್ಪೇಸ್ ಟ್ರಾವೆಲ್‌ಗಾಗಿಯೇ ಇವನು ಬ್ಲೂ ಒರಿ ಜಿನ್ ಎಂಬ ಕಂಪನಿ ಸ್ಥಾಪಿಸಿದ್ದಾನೆ. ಇವರಿಬ್ಬರ ಕಂಪನಿಗಳೂ ಪ್ರವಾಸಿಗರನ್ನೊಳಗೊಂಡ ಸ್ಪೇಸ್‌ ಶಿಪ್‌ಗಳನ್ನು ಹತ್ತು ಹಲವು ಬಾರಿ ವ್ಯೋಮಕ್ಕೆ ಒಯ್ದು ಮರಳಿ ತಂದಿವೆ. ಕೆಲ ವಾರಗಳ ಹಿಂದಷ್ಟೇ ಬ್ಲೂ ಒರಿಜಿನ್‌ನ ಶಿಪ್‌ನಲ್ಲಿ ಹಾಲಿವುಡ್‌ನ ಖ್ಯಾತ ನಟಿಯೊಬ್ಬಳು ಪ್ರಯಾಣಿಸಿ ಬಂದಳು. ದುಡ್ಡಿ ದ್ದರೆ ನೀವೂ ಹೋಗಿ ಬರಬಹುದು.

ಟಿಕೆಟ್ ದರ ಹೆಚ್ಚೇನಿಲ್ಲ, 6 ಲಕ್ಷ ಡಾಲರ್ ಅಥವಾ 518 ಲಕ್ಷ ರೂ. ಇವರಿಬ್ಬರಿಗೂ ಈ ವಿಷಯದಲ್ಲಿ ಸಮಾನವಾಗಿ ಭುಜ ತಗುಲಿಸಿ ತಿಕ್ಕಾಡುತ್ತಿರುವ ಇನ್ನೊಬ್ಬ ಉದ್ಯಮಿ ಅಂದರೆ ರಿಚರ್ಡ್ ಬ್ರಾನ್ಸನ್ (ಇವನ ಚಿಂತನೆಗಳ ಬಗ್ಗೆ ವಿಶ್ವೇಶ್ವರ ಭಟ್ ಅವರು ‘ವರ್ಜಿನಲ್ ವಿಚಾರಗಳು’ ಎಂಬ ಕೃತಿ ಬರೆದಿದ್ದಾರೆ). ಇವನ ವರ್ಜಿನ್ ಗ್ಯಾಲಾಕ್ಟಿಕ್ ಕೂಡ ಶ್ರೀಮಂತರಿಗೆ ವ್ಯೋಮ ಸೇವೆ ಒದಗಿಸಿ ಕೊಡು ತ್ತಿರುವ ಇನ್ನೊಂದು ಕಂಪನಿ. ಇದರ ಸ್ಪೇಸ್ ಪ್ರಯಾಣದ ವೇಟ್‌ಲಿಸ್ಟ್‌ನಲ್ಲಿ ಮುಂದಿನ 20 ವರ್ಷಕ್ಕೆ 700 ಮಂದಿ ನೋಂದಾಯಿಸಿದ್ದಾರೆ!

ಮಸ್ಕ್‌ನಂತೆಯೇ ಜೆಫ್ ಬೆಜೋಸ್ ಕೂಡ ಬಾಹ್ಯಾಕಾಶದಲ್ಲಿ ದೊಡ್ಡ ದೊಡ್ಡ ಕಾಲನಿಗಳನ್ನು ಸ್ಥಾಪಿಸಿ ಅಲ್ಲಿ ಮನುಷ್ಯರನ್ನು ಇರಿಸುವ ಕುರಿತು ಮಾತನಾಡುತ್ತಾನೆ. ಅವನೂ ಮನಸ್ಸು ಮಾಡಿದರೆ ಇಲ್ಲಿಯೇ ಲಕ್ಷಾಂತರ ಬಡವರಿಗೆ ನೆಮ್ಮದಿಯ ಸ್ವರ್ಗ ಸ್ಥಾಪಿಸಬಹುದು. ಆದರೆ ಅದೆಲ್ಲ ಲಾಭ ತಂದುಕೊಡುವುದಿಲ್ಲ ಎಂಬುದು ನಿಮಗೆ ಗೊತ್ತೇ ಇದೆ. ‌ನಾಸಾ, ಇಸ್ರೋದಂಥ ಸರ್ಕಾರಿ ಸಂಸ್ಥೆಗಳು ಮಾಡುತ್ತಿರುವ ಕೆಲಸಕ್ಕೂ, ಈ ಕುಬೇರರು ಮಾಡು ತ್ತಿರುವ ಕೆಲಸಗಳಿಗೂ ವ್ಯತ್ಯಾಸ ಸ್ಪಷ್ಟವಾಗಿದೆ. ನೂರಾರು ವರ್ಷಗಳಿಂದ, ಐನ್‌ಸ್ಟೈನ್‌ನಿಂದ ಹಿಡಿದು, ನೂರಾರು ವಿಜ್ಞಾನಿಗಳು ಮೂಲಭೂತ ವಿಜ್ಞಾನ ಹಾಗೂ ತಂತ್ರಜ್ಞಾನದತ್ತ ಕೆಲಸ ಮಾಡಿದ್ದಾರೆ.

ಹಾಗೆ ಮಾಡುವಾಗ ಅವರಲ್ಲಿ ಯಾವುದೇ ಸ್ವಾರ್ಥ ಇರಲಿಲ್ಲ. ತಮ್ಮ ಚಿಂತನೆಗಳಿಂದ ಭೂಮಿಗೆ ಒಳಿತಾಗುತ್ತದಾ ಇಲ್ಲವಾ ಅಂತ ಕೂಡ ಅವರು ಯೋಚಿಸಿರಲಿಲ್ಲ ಅನಿಸುತ್ತದೆ. ಮೂಲಭೂತ ವೈeನಿಕ ತತ್ವಗಳನ್ನು ಅನ್ವೇಷಿಸುವುದೇ ಅವರಿಗೆ ಒಂದು ಸಂಭ್ರಮವಾಗಿತ್ತು. ಐನ್ ಸ್ಟೈನ್ ಕಾಲದ ಸಾಪೇಕ್ಷತೆ ಶಕ್ತಿಯ ವಿನ್ಯಾಸ ಇತ್ಯಾದಿಗಳ ಬಗ್ಗೆ ಯೋಚಿಸಿದಾಗ, ಎನ್ರಿಕೋ ಫರ್ಮಿ ಎಂಬ ಭೌತ ಶಾಸ್ತ್ರಜ್ಞ ಅನ್ಯಗ್ರಹಜೀವಿಗಳ ಕುರಿತು ಚಿಂತಿಸಿದಾಗ, ಕೋಪರ್ನಿಕಸ್ ಭೂಗ್ರಹದ ಆಕಾರದ ಬಗ್ಗೆ ಚಿಂತಿಸಿ ಪ್ರಮೇಯಗಳನ್ನು ಮಂಡಿಸಿದಾಗ ಅವರಿಗ್ಯಾರಿಗೂ ಇದರಿಂದ ಯಾವುದಾದರೂ ಲಾಭ ಮಾಡಿಕೊಳ್ಳಬಹುದು ಎಂಬ ಚಿಂತನೆ ಇದ್ದಂತಿರಲಿಲ್ಲ.

ಬಹುಶಃ ಸುನಿತಾ ಥರದ ಆಸ್ಟ್ರೋನಾಟ್‌ಗಳಿಗೂ ಇದ್ದಂತಿಲ್ಲ. ನಾಸಾ, ಇಸ್ರೋಗಳು ಈಗಲೂ ಭೂಮಿಯ ಮೇಲಿನ ಎಲ್ಲ ಜನರಿಗೆ ಉಪಯೋಗವಾಗುವಂಥ ಯೋಜನೆಗಳು, ವೈಜ್ಞಾನಿಕ ಪ್ರಯೋ ಗಗಳತ್ತ ಗಮನ ನೆಟ್ಟಿವೆ. ಪ್ರಜೆಗಳಿಂದ ಚುನಾಯಿತವಾದ ಸರಕಾರ ಅವುಗಳ ವೆಚ್ಚ ಸರಿಯಾದ ರೀತಿಯಲ್ಲಿ ಆಗುತ್ತಿದೆಯೇ ಎಂದು ಗಮನ ಕೊಟ್ಟು ನೋಡುತ್ತದೆ. ಆದರೆ ಮಸ್ಕ್, ಬೆಜೋಸ್ ಥರ ದವರ ವ್ಯೋಮ ಯೋಜನೆಗಳು ಯಾಕಾಗಿ ಇವೆ ಎಂಬುದು ಸ್ಪಷ್ಟವಾಗಿದೆ.