ಒಂದೊಳ್ಳೆ ಮಾತು
rgururaj628@gmail.com
ದಕ್ಷನ ಯಜ್ಞಕುಂಡಕ್ಕೆ ಹಾರಿ ದೇಹವನ್ನು ತ್ಯಜಿಸಿದ ಸತಿಯು ಸೃಷ್ಟಿಯನ್ನು ಉದ್ಧಾರ ಮಾಡಲೆಂದು ಹಿಮವಂತನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ. ಪಾರ್ವತಿಯು ಯೌವನಾವಸ್ಥೆಗೆ ಬಂದಾಗ ನಾರದ ಮುನಿಗಳು ಹಿಮವತ್ಪುರಕ್ಕೆ ಬಂದು ಆಕೆಯನ್ನು ಕಂಡು, “ಅಮ್ಮಾ ನೀನು ಈಗ ಮದುವೆ ವಯಸ್ಸಿಗೆ ಬಂದಿರುವಿ, ಹಾಗಾಗಿ ಈಗ ಮತ್ತೆ ಶಿವನನ್ನು ವರಿಸುವ ಸಮಯ ಬಂದಿದೆ. ಅದು ಅಷ್ಟು ಸುಲಭವಲ್ಲ.
ಆದರೆ ದೃಢಮನಸ್ಸಿನಿಂದ ಕಠೋರ ತಪಸ್ಸಿನ ಹಾದಿಯನ್ನು ಅನುಸರಿಸಿ ದರೆ, ಹಿಂದಿನ ಜನ್ಮದಲ್ಲಿ ನಿನ್ನ ಪತಿಯಾಗಿದ್ದ ಈಶ್ವರನನ್ನು ಈ ಜನ್ಮದಲ್ಲೂ ಮದುವೆಯಾಗ ಬಹುದು" ಎನ್ನುತ್ತಾರೆ. ಸದಾ ಶಿವನ ಧ್ಯಾನದಲ್ಲೇ ಇದ್ದು ಅವನನ್ನೇ ಮತ್ತೆ ವರಿಸಲು ಬಯಸಿದ್ದ ಪಾರ್ವತಿಯು ಒಂದಿಷ್ಟೂ ಯೋಚಿಸದೆ ದೃಢಭಕ್ತಿ ಮತ್ತು ಗಟ್ಟಿ ಸಂಕಲ್ಪದೊಂದಿಗೆ ಹಿಮಾಲಯದಲ್ಲಿ ಕಠೋರ ತಪಸ್ಸನ್ನು ಪ್ರಾರಂಭಿಸುತ್ತಾಳೆ.
ಇದನ್ನೂ ಓದಿ: Roopa Gururaj Column: ಸತಿಗಾದ ಅವಮಾನ, ಮಾರಣಹೋಮವಾದ ದಕ್ಷಯಜ್ಞ
ಪಾರ್ವತಿಯು ಮೊದಲ ಸಾವಿರ ವರ್ಷಗಳ ಕಾಲ ಹಣ್ಣುಗಳು ಮತ್ತು ಎಲೆಗಳನ್ನಷ್ಟೇ ಸೇವಿಸಿದಳು. ನಂತರ ಇನ್ನೊಂದು ಸಾವಿರ ವರ್ಷಗಳ ಕಾಲ ಒಣಗಿದ ಬಿಲ್ವಪತ್ರೆಯನ್ನಷ್ಟೇ ತಿಂದು ಬದುಕಿದಳು. ಅಂತಿಮವಾಗಿ ನೀರು ಮತ್ತು ಆಹಾರ ಎರಡನ್ನೂ ತ್ಯಜಿಸಿ ಇನ್ನೂ ಸಾವಿರ ವರ್ಷಗಳ ಕಾಲ ತಪಸ್ಸನ್ನು ಮುಂದುವರಿಸಿದಳು.
ಹೀಗೆ ಛಲ ಬಿಡದೆ 5000 ವರ್ಷಗಳವರೆಗೆ ತಾಯಿ ಪಾರ್ವತಿ ತಪೋನಿರತಳಾಗು ತ್ತಾಳೆ. ಎಲೆಯಂಥ ಆಹಾರವನ್ನೂ ತ್ಯಜಿಸಿ ತಪಸ್ಸು ಮಾಡಿದ ಕಾರಣಕ್ಕೇ ಅವಳಿಗೆ ‘ಅಪರ್ಣಾ’ ಎಂಬ ಹೆಸರೂ ಬಂತು (‘ಅ’ ಎಂದರೆ ಇಲ್ಲ, ‘ಪರ್ಣ’ ಎಂದರೆ ಎಲೆ). ಪಾರ್ವತಿಯ ಈ ತಪಸ್ಸಿನ ಸುದ್ದಿ ಎಲ್ಲೆಡೆ ತಲುಪಿತು, ಅವಳ ಬ್ರಹ್ಮಚರ್ಯದ ತೇಜಸ್ಸು ಇಡೀ ಲೋಕವನ್ನೇ ನಡುಗುವಂತೆ ಮಾಡಿತು.
ಇಂಥ ಕಠೋರ ತಪಸ್ಸನ್ನು ಇದುವರೆಗೂ ಯಾರೂ ಮಾಡಿಲ್ಲ, ಮುಂದೆ ಯಾರೂ ಮಾಡಲೂ ಸಾಧ್ಯವಿಲ್ಲ ಎಂಬುದು ಮೂರು ಲೋಕಕ್ಕೂ ತಿಳಿಯಿತು. ಕೊನೆಯಲ್ಲಿ ಬ್ರಹ್ಮದೇವನು ಪ್ರತ್ಯಕ್ಷನಾಗಿ, “ಇದುವರೆಗೂ ಯಾರೂ ಮಾಡದಂಥ ಕಠಿಣ ತಪಸ್ಸನ್ನು ನೀನು ಮಾಡಿರುವೆ ಜಗನ್ಮಾತೆ. ಶಿವನ ಮೇಲಿರುವ ನಿನ್ನ ಪ್ರೀತಿ ಪರಿಶುದ್ಧವಾದುದು, ಹೀಗಾಗಿಯೇ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ದ್ದೀಯ. ನಿನಗೆ ವರ ಕೊಡುವಷ್ಟು ನಾನು ದೊಡ್ಡವನಲ್ಲ ತಾಯಿ. ಹಾಗಾಗಿ ನಿನ್ನ ಅಣ್ಣನ ಸ್ಥಾನ ದಲ್ಲಿ ಇದ್ದುಕೊಂಡು ನಿನಗೆ ಆಶೀರ್ವಾದ ಮಾಡುತ್ತೇನೆ. ನೀನು ಶಿವನನ್ನೇ ಮತ್ತೊಮ್ಮೆ ಪತಿಯಾಗಿ ಪಡೆಯುವೆ" ಎಂದು ಆಶೀರ್ವದಿಸಿದನು. ಹೀಗೆ ಕಠೋರ ತಪಸ್ಸು ಮಾಡಿದ ಪಾರ್ವತಿಯು ‘ಬ್ರಹ್ಮಚಾರಿಣಿ’ ಎಂಬ ಹೆಸರನ್ನು ಪಡೆದಳು.
ಮುಂದೆ ಶಿವನು ವೃದ್ಧನ ರೂಪದಲ್ಲಿ ಬಂದು, “ನಿನ್ನಂಥ ಸುಂದರ ಹೆಣ್ಣು ಮಗಳು, ಸ್ಮಶಾನ ದಲ್ಲಿ ಭೂತಗಣಗಳ ಜತೆ ಸುತ್ತುವ ಆ ಶಿವನನ್ನು ಮದುವೆಯಾಗಲು ಬಯಸುತ್ತಿರುವುದೇಕೆ?" ಎಂದು ಕೇವಲವಾಗಿ ಮಾತನಾಡಿದನು. ಆಗ ಒಂದು ಹಂತದವರೆಗೂ ಸಮಾಧಾನವಾಗಿ ಮಾತನಾಡಿದ ಪಾರ್ವತಿ, ನಂತರ ತಾಳ್ಮೆಯನ್ನು ಕಳೆದು ಕೊಂಡು, “ನೀನೀಗ ಹೊರಡದಿದ್ದರೆ ನಿನ್ನನ್ನು ಶಪಿಸು ತ್ತೇನೆ" ಎಂದಾಗ, ಅವಳ ಪ್ರೀತಿಯನ್ನು ಮೆಚ್ಚಿದ ಶಿವ ಪ್ರತ್ಯಕ್ಷನಾಗುತ್ತಾನೆ. ನಂತರ ಶಿವ-ಪಾರ್ವತಿ ಯರ ವಿವಾಹವಾಗುತ್ತದೆ. ಆದಿಶಕ್ತಿ ಪಾರ್ವತಿಯು ‘ಬ್ರಹ್ಮಚಾರಿಣಿ’ ಅವತಾರದಲ್ಲಿ, ಬಲಗೈಯಲ್ಲಿ ಜಪಮಾಲೆಯನ್ನೂ ಎಡಗೈಯಲ್ಲಿ ಕಮಂಡಲವನ್ನೂ ಹಿಡಿದಿರುತ್ತಾಳೆ. ಈ ರೂಪವು ಆಕೆಯ ಕಠಿಣ ತಪಸ್ಸು, ದೃಢಸಂಕಲ್ಪ ಮತ್ತು ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಗೆಲ್ಲುವ ಮನಸ್ಥಿತಿ ಯನ್ನು ಪ್ರತಿಬಿಂಬಿಸುತ್ತದೆ.
ತಾಯಿ ಬ್ರಹ್ಮಚಾರಿಣಿಗೆ ಸಮರ್ಪಿತವಾದ ದೇವಾಲಯವು ವಾರಾಣಸಿಯಲ್ಲಿದೆ. ಹಲವಾರು ದೇಗುಲ ಗಳಲ್ಲಿ ಈ ತಾಯಿಗೆ ಪುಳಿಯೋಗರೆ ಅಥವಾ ಹುಣಿಸೆ ಗೊಜ್ಜಿನ ಅನ್ನವನ್ನು ನೈವೇದ್ಯ ಮಾಡುತ್ತಾರೆ. ನವರಾತ್ರಿಯ ಎರಡನೇ ದಿನದಂದು ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಈ ಪೂಜೆಯು ತ್ಯಾಗ ಮತ್ತು ಸಂಯಮವನ್ನು ಮಾತ್ರವಲ್ಲದೆ, ಅಂತಿಮ ಸತ್ಯವನ್ನು ಅನ್ವೇಷಿಸುವ ಹಾದಿಯಲ್ಲಿ ನಮಗೆ ಶಕ್ತಿ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ ಎಂದು ನಂಬಲಾಗಿದೆ.
ಇಂದಿನ ದಿನಗಳಲ್ಲಿ ಬಹುಶಃ ನಾವೆಲ್ಲರೂ ಜೀವನದಲ್ಲಿ ಮತ್ತೆ ಅಳವಡಿಸಿಕೊಳ್ಳಲೇಬೇಕಾದ ಸಂಯಮ ಮತ್ತು ಮಾನಸಿಕ ದೃಢತೆಯು ಇಂಥ ಆಚರಣೆಗಳಿಂದ ನಮಗೆ ದಕ್ಕಲಿ ಎನ್ನುವ ಆಶಯ ಇದರ ಹಿಂದೆ ಅಡಗಿದೆ.