Ramanand Sharma Column: ಅನುಕೂಲಸಿಂಧು ಹೊಂದಾಣಿಕೆ ದಡ ಸೇರಬಹುದೇ ?
ತೀರಾ ಇತ್ತೀಚಿನವರೆಗೆ ಕೇವಲ ವದಂತಿಯಾಗಿದ್ದ ಬಿಜೆಪಿ-ಎಐಎಡಿಎಂಕೆ ಮೈತ್ರಿಗೆ ಈಗ ಅಧಿಕೃತ ಠಸ್ಸೆ ಬಿದ್ದಂತಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವತಃ ಮುತುವರ್ಜಿ ವಹಿಸಿ, ಚೆನ್ನೈಗೆ ತೆರಳಿ, ಆರಂಭಿಕ ಅಡೆತಡೆಗಳನ್ನು ನಿವಾರಿಸಿ ಹಾದಿಯನ್ನು ಸುಸೂತ್ರಗೊಳಿಸಿದ್ದು, ಗೆಲುವಿನ ಬಗ್ಗೆ ಭಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಸಂಗಡ ಮೈತ್ರಿಗೆ ಒಲವು ತೋರಿಸದ ಅಣ್ಣಾಮಲೈ ಅವರಿಗೆ ದೆಹಲಿಯಲ್ಲಿ ಇನ್ನೂ ಉತ್ತಮ ಹುದ್ದೆಯನ್ನು ತೋರಿಸಿ ಮೈತ್ರಿ ಒಪ್ಪಂದವನ್ನು ಅವರು ಸಾಧಿಸಿದ್ದಾರೆ ಎನ್ನಲಾಗುತ್ತದೆ.

ಅಂಕಣಕಾರ ರಮಾನಂದ ಶರ್ಮಾ

ವಿಶ್ಲೇಷಣೆ
ರಮಾನಂದ ಶರ್ಮಾ
ತಮಿಳುನಾಡಿನಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಬಿರುಸಿನ ತಯಾರಿ, ತಂತ್ರಗಾರಿಕೆ, ಹೊಂದಾಣಿಕೆ ಮಾತುಕತೆ ನಡೆಯುತ್ತಿವೆ. ಈ ಚುನಾವಣೆಯು ಹಿಂದಿನ ಎಲ್ಲ ಚುನಾವಣೆಗಳಿಗಿಂತ ವಿಭಿನ್ನವಾಗಲಿದ್ದು, ಹಲವು ಪಕ್ಷಗಳಿಗೆ, ರಂಗಗಳಿಗೆ, ಸಿದ್ಧಾಂತಗಳಿಗೆ, ವೈಯಕ್ತಿಕ ಪ್ರತಿಷ್ಠೆಗಳಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಡಿಎಂಕೆ ಪಕ್ಷಕ್ಕೆ ಅಸ್ತಿತ್ವದ ಚಿಂತೆ ಯಾದರೆ, ಬಿಜೆಪಿಗೆ ತಾನು ಕೇವಲ ಹಿಂದಿ, ಹಿಂದೂ, ಹಿಂದೂಸ್ತಾನಿ ಪಕ್ಷವಲ್ಲ, ದಕ್ಷಿಣದಲ್ಲಿ ಕರ್ನಾಟಕದ ಆಚೆಗೂ ತಾನು ಪ್ರಸ್ತುತ ಎಂದು ತೋರಿಸುವ ಅನಿವಾರ್ಯತೆಯಿದೆ.
ತಮಿಳರ ಮತ್ತು ತಮಿಳುನಾಡಿನ ರಾಜಕೀಯದ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಕಾಂಗ್ರೆಸ್ ಪಕ್ಷವು, ಆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗಿರುವ ಇತಿಮಿತಿಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಹೊಂದಿಕೊಂಡಿದೆ. ತಮಿಳುನಾಡಿನಲ್ಲಿ ನೆಲೆಯೂರಲು ಭಾರಿ ಕನಸು ಕಾಣುತ್ತಿರುವ ಬಿಜೆಪಿ, ಇದಕ್ಕೆ ಅಲ್ಲಿನ ಪ್ರಾದೇಶಿಕ ಪಕ್ಷದೊಡನೆ ಹೊಂದಾಣಿಕೆ ಅನಿವಾರ್ಯ ಎಂಬ ವಾಸ್ತವವನ್ನು ಮನಗಂಡು, ಸ್ವಲ್ಪ ಮುಜುಗರವಾದರೂ ಎಐಎಡಿಎಂಕೆ ಸಂಗಡ ಕೂಡಿಕೆ ಮಾಡಿಕೊಂಡಿದೆ.
ಡಿಎಂಕೆ ಮತ್ತು ಎಐಎಡಿಎಂಕೆಗಳು ಪರಸ್ಪರ ಕಟ್ಟಾವಿರೋಧಿಗಳಾಗಿರುವುದರಿಂದ ‘ಶತ್ರುವಿನ ಶತ್ರು ಮಿತ್ರ’ ಎಂಬ ಸೂತ್ರವನ್ನು ಬಿಜೆಪಿ ಪಾಲಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ತಮಿಳರು ಸಾಮಾನ್ಯವಾಗಿ ಮತ ಹಾಕುವುದಿಲ್ಲ ಎಂಬ ಸತ್ಯವನ್ನು ತಿಳಿದೂ ಎಐಎಡಿಎಂಕೆಯು ಬಿಜೆಪಿಯೊಂದಿಗೆ ಕೈಜೋಡಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Ramanand Sharma Column: ಇಂದಲ್ಲ ನಾಳೆ ಪ್ರಹಸನಕ್ಕೆ ಕೊನೆಯೆಂದು ?
ತೀರಾ ಇತ್ತೀಚಿನವರೆಗೆ ಕೇವಲ ವದಂತಿಯಾಗಿದ್ದ ಬಿಜೆಪಿ-ಎಐಎಡಿಎಂಕೆ ಮೈತ್ರಿಗೆ ಈಗ ಅಧಿಕೃತ ಠಸ್ಸೆ ಬಿದ್ದಂತಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವತಃ ಮುತುವರ್ಜಿ ವಹಿಸಿ, ಚೆನ್ನೈಗೆ ತೆರಳಿ, ಆರಂಭಿಕ ಅಡೆತಡೆಗಳನ್ನು ನಿವಾರಿಸಿ ಹಾದಿಯನ್ನು ಸುಸೂತ್ರಗೊಳಿಸಿದ್ದು, ಗೆಲುವಿನ ಬಗ್ಗೆ ಭಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಐಎಡಿಎಂಕೆ ಸಂಗಡ ಮೈತ್ರಿಗೆ ಒಲವು ತೋರಿಸದ ಅಣ್ಣಾಮಲೈ ಅವರಿಗೆ ದೆಹಲಿಯಲ್ಲಿ ಇನ್ನೂ ಉತ್ತಮ ಹುದ್ದೆಯನ್ನು ತೋರಿಸಿ ಮೈತ್ರಿ ಒಪ್ಪಂದವನ್ನು ಅವರು ಸಾಽಸಿದ್ದಾರೆ ಎನ್ನಲಾಗುತ್ತದೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೇ ವಿನಾ, ಪ್ರಾದೇಶಿಕ ಪಕ್ಷಗಳೆಂಬ ಊರುಗೋಲುಗಳನ್ನು ಆಶ್ರಯಿಸಿ ತಮ್ಮ ಅಸ್ಮಿತೆ-ಅಸ್ತಿತ್ವವನ್ನು ಕಳೆದುಕೊಳ್ಳಬಾರದು ಎಂಬ ಧ್ಯೇಯವನ್ನು ಇಟ್ಟುಕೊಂಡಿದ್ದರು ಅಣ್ಣಾಮಲೈ. ಈ ಹಿಂದಿನ ಲೋಕಸಭಾ ಚುನಾವಣೆ ಯಲ್ಲಿ ಈ ಧ್ಯೇಯವು ವಿಫಲಗೊಂಡರೂ, ‘ಮರಳಿ ಯತ್ನವ ಮಾಡು’ ಎನ್ನುವಂತೆ 2026ರ ವಿಧಾನ ಸಭಾ ಚುನಾವಣೆಯಲ್ಲಿ ಮಗದೊಮ್ಮೆ ಯತ್ನಿಸಲು ಅವರು ತಯಾರಿ ನಡೆಸಿದ್ದರು.
ಸ್ವಲ್ಪ ವಿಳಂಬವಾದರೂ ಪರವಾಗಿಲ್ಲ, ಹಂಗಿನ ಅರಮನೆಯಲ್ಲಿರದೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎನ್ನುವ ತತ್ವವನ್ನು ಅವರು ಬಲವಾಗಿ ನಂಬಿದ್ದರು ಹಾಗೂ ಆ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸಿದ್ದರು. ಆದರೆ, ರಾಷ್ಟ್ರೀಯ ಪಕ್ಷಗಳಲ್ಲಿ ಮುಜುಗರವಾದರೂ ಕಡ್ಡಾಯವಾಗಿ ಪಾಲಿಸ ಬೇಕಾದ ಹೈಕಮಾಂಡ್ ನಿರ್ದೇಶನವು ಕೈಯನ್ನು ಕಟ್ಟಿ ಹಾಕಿರುವುದರಿಂದ ಅವರು ಪಕ್ಷದ ವರಿಷ್ಠರ ಆಶಯಕ್ಕೆ ತಲೆಬಾಗಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಏನನ್ನೂ ಪ್ರತಿಕ್ರಿಯಿಸದೆ ಆದೇಶವನ್ನು ಶಿಸ್ತಿನ ಸಿಪಾಯಿಯಂತೆ ಪಾಲಿಸಿದ್ದಾರೆ.
ಅಣ್ಣಾಮಲೈ ಅವರು ಎಐಎಡಿಎಂಕೆ ಕಾರ್ಯದರ್ಶಿ ಎ.ಪಳನಿಸ್ವಾಮಿಯವರಂತೆ ಗೌಂಡರ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಇಬ್ಬರು ಧುರೀಣರು ಒಂದೇ ಸಮುದಾಯದವರು ಎಂಬ ತಪ್ಪು ಸಂದೇಶ ಹೊಮ್ಮದಿರಲಿ ಎಂಬ ಕಾರಣಕ್ಕೆ ಅಣ್ಣಾಮಲೈ ಅವರನ್ನು ದೂರ ಸರಿಸ ಲಾಗಿದೆ ಎನ್ನುವ ಮಾತು ಕೇಳಿಬರುತ್ತಿದ್ದರೂ, ಯಾರೂ ಅದನ್ನು ‘ಮುಖಬೆಲೆ’ಯಲ್ಲಿ ಸ್ವೀಕರಿಸು ತ್ತಿಲ್ಲ.
ಒಂದು ಕಾಲಕ್ಕೆ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಅವರು, ಪಕ್ಷದ ಶಿಸ್ತಿನ ಚೌಕಟ್ಟಿನಲ್ಲೇ ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಬಹುವಾಗಿ ಬೆವರು ಸುರಿಸಿದ್ದರು. ಚುನಾವಣೆಯಲ್ಲಿ ಗಮನಾರ್ಹ ಯಶಸ್ಸನ್ನು ಕಾಣದಿದ್ದರೂ, ಆ ರಾಜ್ಯದಲ್ಲಿ ಬಿಜೆಪಿಯ ಬೀಜ ಬಿತ್ತುವಲ್ಲಿ, ಅದರ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸಫಲರಾಗಿದ್ದರು.
ಮುಂದಿನ ದಿನಗಳಲ್ಲಿ ಬಿಜೆಪಿಯು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಸದ್ದು-ಸುದ್ದಿ ಮಾಡಿದರೆ, ಅದರ ಶ್ರೇಯಸ್ಸು ಅಣ್ಣಾಮಲೈ ಅವರಿಗೆ ಸಲ್ಲಬೇಕು. ಆದರೆ, ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾ ಣಿಕೆ ಮಾಡಿಕೊಳ್ಳಲು ನಿರಾಕರಿಸಿದ ಕಾರಣ ಅವರನ್ನು ಬದಿಗೆ ಸರಿಸಿರುವುದು ದುರ್ದೈವ ಎನ್ನ ಲಾಗುತ್ತಿದೆ.
ಹೆಚ್ಚು ಸೀಟುಗಳನ್ನು ಪಡೆದು, ತನ್ಮೂಲಕ ಆಡಳಿತದ ಚುಕ್ಕಾಣಿ ಹಿಡಿಯುವ ಧಾವಂತದಲ್ಲಿ ಬಿಜೆಪಿಯು ತನ್ನ ತತ್ವಾದರ್ಶಗಳನ್ನು ಬದಿಗೊತ್ತಿತೇ? ತಾನು ಇತರ ಪಕ್ಷಗಳಿಗಿಂತ ಭಿನ್ನ ಎಂಬ ಇಮೇಜನ್ನು ಕಳಚಿಕೊಂಡಿತೇ? ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಂದ್ಯ ಹೇಗಿರಬಹುದೆಂಬ ಚಿತ್ರಣ ಸ್ಪಷ್ಟವಾಗುತ್ತಿದೆ.
ಕಾಂಗ್ರೆಸ್ ಬೆಂಬಲಿತ ಡಿಎಂಕೆ ನೇತೃತ್ವದ ರಂಗ, ಎಐಎಡಿಎಂಕೆ ಬೆಂಬಲಿತ ಬಿಜೆಪಿಯ ಕೂಟ ಮತ್ತು ಜನಪ್ರಿಯ ನಟ ‘ದಳಪತಿ’ ವಿಜಯ್ ನೇತೃತ್ವದ ‘ತಮಿಳು ವೇಟ್ರಿ ಕಳಗಂ’ ಈ ಮೂರು ಪಾಳಯಗಳು ಪರಸ್ಪರ ತೊಡೆತಟ್ಟುವುದು ಬಹುತೇಕ ನಿಶ್ಚಿತ. ಉಳಿದ ಪಕ್ಷಗಳು ಸ್ವಲ್ಪ ಸೀಟುಗಳ ಹೊಂದಾಣಿಕೆ ಮಾಡಿಕೊಂಡು, ಈ ಮೂರು ಕೂಟಗಳ ಪೈಕಿ ಒಂದರಿಂದ ಸ್ಪರ್ಧಿಸಬಹುದು ಅಥವಾ ಹಠ ಮಾರಿತನದಿಂದ ಪ್ರತ್ಯೇಕವಾಗಿ ಸ್ಪರ್ಧಿಸಿ ಅಸ್ತಿತ್ವಕ್ಕೆ ಪರದಾಡಬಹುದು.
ವಿಜಯ್ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆಯಿದ್ದು, ಜನರು ಬದಲಾವಣೆ ಬಯಸಿದರೆ ಅಥವಾ ಚಿತ್ರರಂಗದವರನ್ನು ಚುನಾಯಿಸುವ ತಮ್ಮ ಹಳೆಯ ಪರಂಪರೆಯನ್ನು ಮುಂದುವರಿಸಿದರೆ, ಸನಾತನ ಧರ್ಮವನ್ನು ಮತ್ತು ಹಿಂದೂಗಳನ್ನು ದ್ವೇಷಿಸುವವರಿಗೆ ಪಾಠ ಕಲಿಸಬೇಕು ಎಂದು ಮನಸ್ಸು ಮಾಡಿದರೆ, ಡಿಎಂಕೆ ಈ ಸಲ ಭಾರಿ ಬೆವರು ಸುರಿಸಬೇಕಾಗುತ್ತದೆ.
ರಜನಿಕಾಂತ್ ಅವರಿಗೆ ಅಪಾರ ಅಭಿಮಾನಿಗಳ ಬಳಗವಿತ್ತು; ಆದರೂ ತಮ್ಮ ಧಾರ್ಮಿಕ ಭಾವನೆ ಗಳು ಮತ್ತು ಬದುಕಿನ ಶೈಲಿಯು ಮತದಾರರ ಭಾವನೆಗಳಿಗೆ ಸ್ಪಂದಿಸಲಾರದು ಎಂಬುದನ್ನು ಗ್ರಹಿಸಿದ ಅವರು ಹೆಜ್ಜೆಯನ್ನು ಮುಂದಿಡಲಿಲ್ಲ. ತಮಿಳುನಾಡಿನಲ್ಲಿ ದಶಕಗಳ ಕಾಲದಿಂದ ಬಾಳಿರುವ ಮತ್ತು ಅಧ್ಯಾತ್ಮದತ್ತ ಹೆಚ್ಚು ವಾಲಿರುವ ಅವರು, ಅಲ್ಲಿನ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತು ಪ್ರಜ್ಞಾವಂತ ನಿರ್ಣಯವನ್ನೇ ತಳೆದಿದ್ದಾರೆ, ರಾಜಕೀಯದಿಂದ ವಿಮುಖರಾಗಿದ್ದಾರೆ ಎನ್ನಲಾಗುತ್ತದೆ.
ಆದರೆ ವಿಜಯ್ ಇನ್ನೂ ಯುವಕ, ಉತ್ಸಾಹದ ಚಿಲುಮೆ. ಏನೋ ಮಾಡಬೇಕು ಎನ್ನುವ ಹುಮ್ಮಸ್ಸಿ ನಲ್ಲಿರುವ ಅವರು, ದಡ ಸೇರುವ ಕಾತುರದಲ್ಲಿದ್ದಾರೆ. ಅದಕ್ಕೆ ಜನರು ನೀಡಿರುವ ಆರಂಭಿಕ ಪ್ರತಿಕ್ರಿಯೆಯನ್ನು ನೋಡಿದರೆ ಅವರ ಯಶಸ್ಸಿನ ಬಗ್ಗೆ ಸ್ವಲ್ಪ ಆಶಾಭಾವನೆ ಮೂಡುತ್ತದೆ. ಆದರೆ, ‘ಅವಸರದ ಹೊಸಬರಿಗಿಂತ ಅನುಭವಿ ಹಳಬರು ವಾಸಿ’ ಎಂದು ಮತದಾರ ನಿರ್ಧರಿಸಿದರೆ ವಿಜಯ್‌ಗೆ ಸ್ವಲ್ಪ ಕಷ್ಟವಾಗಬಹುದು.
ಬಿಜೆಪಿಯ ಧುರೀಣರು ಎಐಎಡಿಎಂಕೆ ನಾಯಕಿ ಜಯಲಲಿತಾರನ್ನು ಹಿಂದೆ ಟೀಕಿಸಿದ್ದು ಈ ಮೈತ್ರಿಗೆ ಮುಳ್ಳಾಗಬಹುದು ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರೆ, ಹೊಸ ಪಕ್ಷವನ್ನು ಕಟ್ಟಿ ಕೈಸುಟ್ಟು ಕೊಂಡಿರುವ ಕಮಲಹಾಸನ್ ಇತ್ತೀಚೆಗೆ ಡಿಎಂಕೆಯತ್ತ ವಾಲುತ್ತಿದ್ದು ಅದರ ವತಿಯಿಂದಲೇ ರಾಜ್ಯಸಭೆಯನ್ನು ಪ್ರವೇಶಿಸಬಹುದು ಎಂಬ ಗುಸುಗುಸು ಕೇಳಿಬರುತ್ತಿದೆ ಮತ್ತು ಅವರು ತಮಿಳು ನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಬೆಂಬಲಿಸುವುದು ಖಚಿತ ಎನ್ನಲಾಗುತ್ತಿದೆ.
ರಾಜಕೀಯದ ಸ್ವರೂಪ, ಹೊಂದಾಣಿಕೆಗಳು, ತಂತ್ರಗಾರಿಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ಯಾಗಿರುತ್ತವೆ. ಆದರೆ, ತಮಿಳುನಾಡಿನ ರಾಜಕೀಯವು ‘ಊರಿಗೊಂದು ದಾರಿಯಾದರೆ, ಪೋರನಿಗೆ ಮತ್ತೊಂದು ದಾರಿ’ ಎನ್ನುವಂತೆ ಸಂಪೂರ್ಣವಾಗಿ ಬೇರೆಯದೇ ಆಗಿರುತ್ತದೆ. ಇಲ್ಲಿ ಅಭಿವೃದ್ಧಿಯ ಅಜೆಂಡಾಗಳಿಗಿಂತ, ನಾಡು-ನುಡಿ-ಸಂಸ್ಕೃತಿಯಂಥ ಭಾವನಾತ್ಮಕ ವಿಷಯಗಳೇ ಮುಖ್ಯ.
ಇಲ್ಲಿ ರಾಷ್ಟ್ರೀಯ ಪಕ್ಷಗಳು ನೆಪಮಾತ್ರಕ್ಕೆ ಇವೆ; ಅವು ಅಧಿಕಾರದ ಗದ್ದುಗೆ ಹಿಡಿಯುವ ಮಾತಿರಲಿ, ತಮ್ಮ ಅಸ್ತಿತ್ವಕ್ಕೆ ಅಲ್ಲಿನ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿಗಳಾಗಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಹಂ ತೋರಿಸಿದರೆ ಅಥವಾ ಮಿತಿಗಿಂತ ಹೆಚ್ಚು ಚೌಕಾಸಿ ಮಾಡಿದರೆ, ಅವು ತಮಿಳುನಾಡಿನ ರಾಜಕೀಯ ಭೂಪಟದಿಂದಲೇ ಕಾಣೆಯಾಗುತ್ತವೆ. ಈ ಸತ್ಯವನ್ನು ಮನಗಂಡೇ ಕಾಂಗ್ರೆಸ್ ಪಕ್ಷವು ದಶಕಗಳಿಂದ ‘ಹಿರಿಯಣ್ಣ ಕೊಟ್ಟಿದ್ದೇ ಪ್ರಸಾದ’ ಎಂದು ಸ್ವೀಕರಿಸಿ ರಾಜಕೀಯ ಅಖಾಡದಲ್ಲಿ ಇನ್ನೂ ಉಸಿರಾಡುತ್ತಿದೆ.
1967ರಲ್ಲಿ ಎಂ.ಭಕ್ತವತ್ಸಲಂ ಅವರು ಕಾಂಗ್ರೆಸ್ ಪಕ್ಷದಿಂದ ಕೊನೆಯ ಮುಖ್ಯಮಂತ್ರಿಯಾಗಿದ್ದು ಬಿಟ್ಟರೆ ಈವರೆಗೆ ಪುನಃ ರಾಷ್ಟ್ರೀಯ ಪಕ್ಷಗಳಿಗೆ ಈ ಹುದ್ದೆ ಮರೀಚಿಕೆಯಾಗಿದೆ. ಬಿಜೆಪಿ ಕೂಡ ಈ ಬಾರಿ ದಾರಿಯನ್ನು ಬದಲಿಸಿದಂತೆ ಕಾಣುತ್ತಿದ್ದು, ‘ಅಧಿಕಾರ ದೊರಕದಿದ್ದರೂ ಪರವಾಗಿಲ್ಲ, ಕನಿಷ್ಠಪಕ್ಷ ಅಸ್ತಿತ್ವವಾದರೂ ಉಳಿಯಲಿ’ ಎಂದು ಅದು ಆಲೋಚಿಸಿದಂತೆ ಕಾಣುತ್ತದೆ. ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ, ಉತ್ತರ-ದಕ್ಷಿಣ, ಹಿಂದಿ-ಹಿಂದಿಯೇತರ ಚರ್ಚಾ ವಿಷಯಗಳು, ಕೇಂದ್ರ-ರಾಜ್ಯ ಸಂಬಂಧಗಳು, ರಾಷ್ಟ್ರೀಯ ಶಿಕ್ಷಣ ನೀತಿ, ನೀಟ್ ಪರೀಕ್ಷೆ, ತಮಿಳು ನಾಡಿನ ರಾಜ್ಯಪಾಲರ ವಿರುದ್ಧದ ಸುಪ್ರೀಂಕೋರ್ಟ್ ತೀರ್ಪು, ಹಿಂದಿ ಹೇರಿಕೆಗಳು ದೊಡ್ಡ ಪ್ರಮಾಣದಲ್ಲಿ ಧೂಳೆಬ್ಬಿಸಲಿವೆ ಎಂದು ಭಾಷ್ಯ ಬರೆಯುತ್ತಿದ್ದಾರೆ ವಿಶ್ಲೇಷಕರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರದ ಅನುಷ್ಠಾನ, ಈ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ನೀತಿಯ ಅಡಿಯಲ್ಲಿ ಕೇಂದ್ರ ಸರಕಾರ ನೀಡುವ 2152 ಕೋಟಿ ರು.ಗಳ ಅನುದಾನ ನಿಲ್ಲಿಸುವ ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನ್‌ರ ಎಚ್ಚರಿಕೆ, 10000 ಕೋಟಿ ನೀಡಿದರೂ ತ್ರಿಭಾಷಾ ಸೂತ್ರ ಅಳವಡಿಸದಿರುವ ಚಾಲೆಂಜ್, ದೇವನಾಗರಿ ಲಿಪಿ ಹೋಲುವ ರುಪಾಯಿ ಚಿಹ್ನೆ ಬದಲಿಗೆ ತಮಿಳು ಚಿಹ್ನೆ ಬಳಕೆ, ತಮಿಳು ಮಾಧ್ಯಮದಲ್ಲಿ ವೈದ್ಯಕೀಯ-ಎಂಜಿನಿಯರಿಂಗ್ ಶಿಕ್ಷಣ ಮುಂತಾದ ವಿಷಯಗಳು ಭಾರಿ ಸದ್ದು ಮಾಡುವ ಸಾಧ್ಯತೆಯಿದೆ ಮತ್ತು ಇವು ಚುನಾವಣಾ ಫಲಿತಾಂಶದಲ್ಲಿ ಅಚ್ಚರಿ ಉಂಟುಮಾಡುವುದನ್ನು ಅಲ್ಲಗಳೆಯಲಾಗದು.
ಡಿಎಂಕೆ ಮತ್ತು ಬಿಜೆಪಿ ಈ ಎರಡೂ ರಂಗಗಳು ಈ ವಿಷಯಗಳನ್ನು ತಂತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವುದು ನಿಶ್ಚಿತ. ನಾಡು, ನುಡಿ, ಸಂಸ್ಕೃತಿ ವಿಷಯದಲ್ಲಿ ತನ್ನದೇ ಚಿಂತನೆಯನ್ನು ಮೈಗೂಡಿಸಿಕೊಂಡು ಪಾಲಿಸುವ ತಮಿಳುನಾಡು ರಾಜ್ಯವು, ಒಕ್ಕೂಟ ವ್ಯವಸ್ಥೆಗೆ ಹೊಸರೂಪ ಕೊಡಬಹುದೇ ಎಂಬ ಪ್ರಶ್ನೆಯು ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)