ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

ಮುಖ್ಯಮಂತ್ರಿಯಾದವರು ತಮ್ಮ ಸಂಪುಟದ ಸಚಿವರನ್ನು ಊಟಕ್ಕೆ ಆಹ್ವಾನಿಸುವುದು ಹೊಸ ದೇನಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿ ಹುದ್ದೆಯಲ್ಲಿ ಕೂತವರಲ್ಲಿ ಬಹುತೇಕರು ತಮ್ಮ ಊಟವನ್ನು ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿ ತಮ್ಮ ಆಪ್ತರು, ಸಚಿವರು ಹಾಗೂ ನಾಯಕ ರೊಂದಿಗೆ ಮಾಡುತ್ತಾರೆ. ಇದು ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲ, ಈವರೆಗೆ ಆ ಹುದ್ದೆಯಲ್ಲಿ ಕೂತಿರುವ ಎಲ್ಲ ಮುಖ್ಯಮಂತ್ರಿ ಗಳಿಗೂ ಅನ್ವಯವಾಗುತ್ತದೆ.

Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

-

ಅಶ್ವತ್ಥಕಟ್ಟೆ

ಎಲ್ಲರೂ ಒಟ್ಟಿಗೆ ಕೂತು ಊಟ ಮಾಡೋದು ತಪ್ಪೇನ್ರಿ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರವಷ್ಟೇ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮೊದಲು ‘ಕೆಲ ತಿಂಗಳಿ ನಿಂದ ಒಟ್ಟಿಗೆ ಊಟ ಮಾಡಿರಲಿಲ್ಲ. ಆದ್ದರಿಂದ ಡಿನ್ನರ್‌ಗೆ ಬರುವಂತೆ ಸಚಿವರನ್ನು ಸಿದ್ದರಾಮಯ್ಯ ಅವರು ಕರೆಸಿಕೊಂಡಿದ್ದಾರೆ. ಅದರಲ್ಲಿ ಅನುಮಾನಪಡುವಂಥದ್ದು ‘ಏನೂ ಇಲ್ಲ’ವೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು.

ಅದಕ್ಕೂ ಮೊದಲು ಹಲವು ಸಚಿವರು, ‘ಊಟಕ್ಕೆ ಸೇರೋದರಲ್ಲಿ ತಪ್ಪೇನಿಲ್ಲ’ ಎನ್ನುವ ಮಾತು ಗಳನ್ನು ಆಡಿದ್ದರು. ಸಿದ್ದರಾಮಯ್ಯ ಅವರು ಊಟಕ್ಕೆ ಆಹ್ವಾನ ನೀಡಿದ ವಿಷಯ ಈ ಪ್ರಮಾಣದಲ್ಲಿ ಚರ್ಚೆ, ರಾಜಕೀಯ ಗೊಂದಲಗಳಿಗೆ ಕಾರಣವಾಗುತ್ತಿರುವುದರ ಹಿಂದಿನ ಮರ್ಮವೇನು ಎಂದು ಸೂಕ್ಷ್ಮವಾಗಿ ನೋಡಬೇಕಿದೆ.

ಹೌದು, ಸಿದ್ದರಾಮಯ್ಯ ಅವರೇ ಹೇಳಿರುವಂತೆ ಒಟ್ಟಿಗೆ ಕೂತು ಊಟ ಮಾಡೋದರಲ್ಲಿ ತಪ್ಪೇನಿದೆ ಎನಿಸಬಹುದು. ಆದರೆ ರಾಜಕೀಯದಲ್ಲಿ ಪ್ರತಿಯೊಂದಕ್ಕೂ ಟೈಮಿಂಗ್ ಮುಖ್ಯವಾಗುತ್ತದೆ. ಕ್ರಿಯೆಯ ಹಿಂದೆ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಎಷ್ಟು ಸತ್ಯವೋ, ಆ ಕ್ರಿಯೆಯನ್ನು ಯಾವ ಸಮಯದಲ್ಲಿ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಅದರ ‘ಮೌಲ್ಯ’ ತೀರ್ಮಾನವಾಗುತ್ತದೆ.

ಸಂಪುಟ ಪುನಾರಚನೆ, ಪವರ್ ಶೇರಿಂಗ್ ಗೊಂದಲ, ಡಿ.ಕೆ.ಶಿವಕುಮಾರ್ ಅವರ ಮಹಾಮೌನದ ಸಮಯದಲ್ಲಿನ ಈ ಭೋಜನಕೂಟ, ಊಟವನ್ನು ಮೀರಿದೆ ಎನ್ನುವ ಸಂದೇಶವನ್ನು ರವಾನಿಸು ತ್ತಿದೆ.

ಇದನ್ನೂ ಓದಿ: Ranjith H Ashwath Column: ಮಾಹಿತಿಯಿಲ್ಲದಿದ್ದರೂ ವೈಜ್ಞಾನಿಕ ಸಮೀಕ್ಷೆಯೇ ?!

ಮುಖ್ಯಮಂತ್ರಿಯಾದವರು ತಮ್ಮ ಸಂಪುಟದ ಸಚಿವರನ್ನು ಊಟಕ್ಕೆ ಆಹ್ವಾನಿಸುವುದು ಹೊಸ ದೇನಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿ ಹುದ್ದೆಯಲ್ಲಿ ಕೂತವರಲ್ಲಿ ಬಹುತೇಕರು ತಮ್ಮ ಊಟವನ್ನು ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿ ತಮ್ಮ ಆಪ್ತರು, ಸಚಿವರು ಹಾಗೂ ನಾಯಕ ರೊಂದಿಗೆ ಮಾಡುತ್ತಾರೆ. ಇದು ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲ, ಈವರೆಗೆ ಆ ಹುದ್ದೆಯಲ್ಲಿ ಕೂತಿರುವ ಎಲ್ಲ ಮುಖ್ಯಮಂತ್ರಿಗಳಿಗೂ ಅನ್ವಯವಾಗುತ್ತದೆ.

ಆದರೂ, ಸಿದ್ದರಾಮಯ್ಯ ಅವರು ನಿನ್ನೆ (ಸೋಮವಾರ) ಕರೆದಿದ್ದ ಸಚಿವರ ಡಿನ್ನರ್ ಸಭೆ ಹೆಚ್ಚು ಮಹತ್ವ ಪಡೆದಿತ್ತು. ಹಾಗೆ ನೋಡಿದರೆ, ಈ ಸರಕಾರ ಬಂದ ಬಳಿಕ ನಡೆದಿರುವ ಬಹುತೇಕ ಡಿನ್ನರ್ ಸಭೆಗಳಿಗೆ ಎಲ್ಲಿಲ್ಲದ ಮಹತ್ವದ ಬಂದಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದಿರುವ ಬಹುತೇಕ ಡಿನ್ನರ್ ಮೀಟಿಂಗ್‌ಗಳು ಹಲವು ಆಯಾಮದ ಚರ್ಚೆಗೆ ನಾಂದಿ ಹಾಡಿವೆ ಎನ್ನುವುದು ಸುಳ್ಳಲ್ಲ.

ಮುಖ್ಯಮಂತ್ರಿ ಮಾತ್ರವಲ್ಲದೇ, ಕೆಲ ಸಚಿವರು ತಮ್ಮಷ್ಟಕ್ಕೆ ತಾವೇ ನಡೆಸಿರುವ ಡಿನ್ನರ್ ಸಭೆಗಳೂ ಹೆಡ್‌ಲೈನ್ ಆಗಿದ್ದವು. ಈ ಎಲ್ಲ ಭೋಜನಕೂಟವನ್ನು ‘ಸೌಹಾರ್ದಯುತ’ವೆಂದು ಭಾಗವಹಿಸಿದ್ದ ಸಚಿವರುಗಳು ತೇಪೆ ಹಚ್ಚುವ ಕೆಲಸ ಮಾಡಿದರೂ, ಅದನ್ನು ಒಪ್ಪುವ ಪರಿಸ್ಥಿತಿಯಲ್ಲಿ ಬಹುತೇಕರು ಇರಲಿಲ್ಲ ಹಾಗೂ ಪ್ರತಿ ಡಿನ್ನರ್ ಸಭೆಯ ಹಿಂದೆ-ಮುಂದೆ ನಡೆದಿರುವ ಘಟನಾವಳಿ, ಪ್ರತಿಕ್ರಿಯೆ ಗಳನ್ನು ಗಮನಿಸಿದರೆ ಈ ಯಾವ ಡಿನ್ನರ್ ಸಭೆಗಳೂ ಕೇವಲ ಊಟಕ್ಕೆ ಸೀಮಿತವಾಗಿದ್ದವು ಎನ್ನಲಾಗುವುದಿಲ್ಲ.

ಸಿದ್ದರಾಮಯ್ಯ ಅವರು ಸಚಿವರಿಗೆ ಆಯೋಜಿಸಿರುವ ಭೋಜನಕೂಟದಲ್ಲಿ ಆಗುವ ಚರ್ಚೆಯೇನು ಎನ್ನುವುದಕ್ಕಿಂತ, ಈ ಪ್ರಮಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದೇಕೆ ಎನ್ನುವುದನ್ನು ಗಮನಿಸ ಬೇಕು. ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ‘ಪವರ್ ಶೇರಿಂಗ್’ ಎನ್ನುವ ಗೊಂದಲ, ಗೋಜಲು ಅಂಟಿಕೊಂಡಿತ್ತು.

ಎರಡೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಒಪ್ಪಂದವಾಗಿದೆ ಎನ್ನುವ ಚರ್ಚೆ ಪ್ರಮಾಣವಚನ ನಡೆದ ದಿನದಿಂದಲೇ ಶುರುವಾಗಿತ್ತು. ಆದರೆ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ‘ಐದು ವರ್ಷ ನಾನೇ ಸಿಎಂ’ ಎನ್ನುವ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ನೀಡಿದರೆ, ಸಿದ್ದರಾಮಯ್ಯ ಆಪ್ತರು ‘ಸಿಎಂ ಬದಲಾವಣೆಯಿಲ್ಲ’ ಎನ್ನುವ ಹೇಳಿಕೆಯನ್ನು ನೀಡುತ್ತಾ ಬಂದರು.

ಇದಾದ ಬಳಿಕ ‘ಡಿಕೆ’ ಆಪ್ತರು ‘ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಡಿಕೆ ಪಾತ್ರವಿದೆ. ಆದ್ದರಿಂದ ಅವರಿಗೂ ಸಿಎಂ ಸ್ಥಾನ ನೀಡಬೇಕು’ ಎನ್ನುವ ಒತ್ತಡವನ್ನು ಹೇರುತ್ತಾ ಹೋದರು. ಕೊನೆಗೆ ಈ ಪವರ್ ಶೇರಿಂಗ್ ವಿಷಯ, ದೆಹಲಿ ನಾಯಕರವರೆಗೆ ತಲುಪಿ ರಾಹುಲ್ ಗಾಂಧಿ ಮಧ್ಯಸ್ಥಿಕೆಯಲ್ಲಿ ‘ಸಂಧಾನ’ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಷ್ಟಾದರೂ ಹೇಳಿಕೆಗಳು ನಿಲ್ಲದಿದ್ದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ಮಧ್ಯಪ್ರವೇಶಿಸಿ ‘ಬಾಯ್ಮುಚ್ಚಿ’ ಎನ್ನುವ ಹೇಳಿಕೆ ನೀಡಬೇಕಾಯಿತು. ಈ ಎಲ್ಲ ಪ್ರಹಸನದ ಹೊರ ತಾಗಿಯೂ, ಪವರ್ ಶೇರಿಂಗ್ ಮಾತಿಗೆ ಬ್ರೇಕ್ ಬಿದ್ದಿಲ್ಲ. ಈ ನಡುವೆ ಕೆಲವೊಂದಷ್ಟು ಜನರಿಗೆ ನೋಟಿಸ್ ಕೊಟ್ಟಾಗಿದೆ (ಮುಂದೇನಾಯ್ತು ಗೊತ್ತಿಲ್ಲ). ಇದೀಗ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದ ಹಿನ್ನಲೆಯಲ್ಲಿ, ಇದೀಗ ಸಂಪುಟ ಪುನಾರಚನೆಯ ಕೂಗಿನ ನಡುವೆ ಮತ್ತೆ ಪವರ್ ಶೇರಿಂಗ್ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು ಡಿನ್ನರ್ ಮೀಟಿಂಗ್ ಆಯೋಜಿಸುತ್ತಿದ್ದಂತೆ ಅನುಮಾನಕ್ಕೆ ಮತ್ತಷ್ಟು ‘ರೆಕ್ಕೆ-ಪುಕ್ಕ’ಗಳು ಒಂದೊಂದಾಗಿ ಸೇರಿಕೊಳ್ಳುತ್ತಾ ಸಾಗಿವೆ ಅಷ್ಟೆ.

ರಾಜ್ಯ ರಾಜಕೀಯದಲ್ಲಿ ಈ ರೀತಿಯ ಡಿನ್ನರ್ ಸಭೆಗಳೇನೂ ಹೊಸದಲ್ಲ. ಕಳೆದ ವರ್ಷ ‘ಡಿಕೆಶಿ’ ಮುಖ್ಯಮಂತ್ರಿಯಾಗೋದು ಪಕ್ಕಾ ಎನ್ನುವ ಮಾತನ್ನು ಅವರ ಆಪ್ತರು ಹೇಳುತ್ತಿದ್ದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನಿವಾಸದಲ್ಲಿ ದಲಿತ ಸಚಿವರುಗಳ ಸರಣಿ ಸಭೆ ನಡೆದಿತ್ತು. ಆರಂಭದಲ್ಲಿ ಒಳಮೀಸಲನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತಿದ್ದ ಸಚಿವರು, ಕ್ರಮೇಣ ಸಚಿವರು ಮಾತ್ರ ವಲ್ಲದೇ ಶಾಸಕರುಗಳಿಗೂ ಆಹ್ವಾನ ನೀಡಿದರು.

ಈ ವೇಳೆ ಚಿತ್ರದುರ್ಗದಲ್ಲಿ ದಲಿತ ಸಮಾವೇಶ ನಡೆಸಿ, ಅಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವ ಮಟ್ಟಿಗೆ ಈ ಸಭೆಗಳಲ್ಲಿ ತೀರ್ಮಾನಗಳಾಗಿ, ದಿನಾಂಕವೂ ನಿಗದಿಯಾಗಿತ್ತು. ಆದರೆ ಈ ಸಮಾವೇಶ ನಡೆಯದಂತೆ ನೋಡಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಬೇಕಾಗಿ ಬಂತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇ ವಾಲರು ‘ಯಾವುದೇ ಸಮಾವೇಶ ನಡೆಸುವಂತಿಲ್ಲ’ ಎಂದು ಪತ್ರಮುಖೇನ ಅಧಿಕೃತವಾಗಿ ಫರ್ಮಾನು ಹೊರಡಿಸುವ ಹಂತಕ್ಕೆ ಹೋಗಿದ್ದು ಡಿನ್ನರ್ ಮೀಟಿಂಗ್‌ಗಳ ತಾಕತ್ತಾಗಿತ್ತು.

ಈ ಫರ್ಮಾನು ಹೊರಟ ಬಳಿಕವೂ, ಅಧಿಕೃತವಾಗಿ ಬದಲಾದ ಸ್ವರೂಪದಲ್ಲಿ ಈ ಸಭೆಗಳು ಮುಂದುವರಿದಿರುವುದು ಬೇರೆ ಮಾತು. ರಾಜ್ಯ ಕಾಂಗ್ರೆಸ್‌ನಲ್ಲಿನ ಈ ಸಭೆಗಳಿಗೆ ಯಾವುದೇ ಸ್ವರೂಪ ವನ್ನು ನೀಡಿದರೂ ಕೊನೆಯಲ್ಲಿ ಆಂತರಿಕ ಕಲಹದ ಸ್ಪಷ್ಟ ಸಂದೇಶ ನೀಡುತ್ತಿವೆ. ಆದರೆ ಕಾಂಗ್ರೆಸ್‌ನಲ್ಲಿರುವ ಈ ಸಂಘರ್ಷವನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದಾಗಿದ್ದ ಬಹುದೊಡ್ಡ ಅವಕಾಶವನ್ನು ಕಳೆದುಕೊಂಡಿದ್ದು ಮಾತ್ರ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ.

ಡಿನ್ನರ್ ಮೀಟಿಂಗ್ ಮೂಲಕ ಸರಕಾರ ಉರುಳುವುದೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅಸ್ಥಿರತೆಯನ್ನು ಸಾರ್ವಜನಿಕವಾಗಿ ಬಯಲು ಮಾಡಬಹುದಾಗಿದ್ದ ಬಿಜೆಪಿ ಪ್ರತಿಪಕ್ಷವಾಗಿ ಈ ವಿಷಯದಲ್ಲಿ ಸೋತಿರುವುದು ಸ್ಪಷ್ಟ. ಇದಕ್ಕೆ ಕಾರಣ, ಬಿಜೆಪಿಯೊಳಗಿನ ಆಂತರಿಕ ಕಲಹ! ಕಾಂಗ್ರೆಸ್‌ನಲ್ಲಿ ರಾತ್ರಿ ವೇಳೆ ಈ ರೀತಿಯ ಸಭೆಗಳಾಗುತ್ತಿದ್ದರೆ, ಬಿಜೆಪಿಯಲ್ಲಿ ಮಟಮಟ ಮಧ್ಯಾಹ್ನವೇ ಭಿನ್ನರ ಸಭೆಗಳು ನಡೆದು, ಸುದ್ದಿಗೋಷ್ಠಿಯಲ್ಲಿ, ಸಂಘ-ಪರಿವಾರದ ಎದುರೇ ಜಟಾಪಟಿ ನಡೆದಿರುವ ಉದಾಹರಣೆಗಳಿವೆ.

ಹತ್ತಾರು ಗುಂಪುಗಳಾಗಿರುವ ಬಿಜೆಪಿಯಲ್ಲಿ, ಈ ವಿಷಯವನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಯಾವ ರೀತಿಯಲ್ಲಿ ಹೋರಾಡಬೇಕು ಎನ್ನುವುದನ್ನು ಚರ್ಚಿಸುವುದಕ್ಕೂ ಪುರುಸೊತ್ತು ಇಲ್ಲದಂತಾಗಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದರೂ, ಈ ರೀತಿಯ ಗೊಂದಲ ಗೋಜಲುಗಳೊಂದಿಗೆ ಎರಡೂವರೆ ವರ್ಷದ ಹೊಸ್ತಿಲಿನಲ್ಲಿ ರಾಜ್ಯ ಸರಕಾರವಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ, ಈ ರೀತಿಯ ಗೊಂದಲ ಸೃಷ್ಟಿಯಾಗುತ್ತದೆ ಎಂದು ಬಹುತೇಕರು ಊಹಿಸಿದ್ದರು. ಏಕೆಂದರೆ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು, ಅತಿಹೆಚ್ಚು ಕಾಲ ಆಡಳಿತ ನಡೆಸಿದ್ದು ಕಾಂಗ್ರೆಸ್‌ನ ಇತಿಹಾಸ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನ ಹೈಕಮಾಂಡ್ ಮಾತನ್ನು ಕೇಳುವ ಸ್ಥಿತಿಯಲ್ಲಿ ನಾಯಕರು ಉಳಿದಿಲ್ಲ.

ಅದರಲ್ಲಿಯೂ ಕರ್ನಾಟಕ ಕಾಂಗ್ರೆಸ್‌ಗೆ ಹೀಗೆ ಆಗಬೇಕು ಎನ್ನುವ ಸೂಚನೆ ನೀಡುವ ಸ್ಥಿತಿ ಯಲ್ಲಿಯೂ ದಿಲ್ಲಿ ನಾಯಕರು ಉಳಿದಿಲ್ಲ. ದೇಶದ ಇಡೀ ಕಾಂಗ್ರೆಸ್ ಅನ್ನು ತಕ್ಕಡಿಯಲ್ಲಿಟ್ಟು, ಕರ್ನಾಟಕ ಕಾಂಗ್ರೆಸ್ ಅನ್ನು ಇನ್ನೊಂದರಲ್ಲಿ ಇಟ್ಟರೂ ರಾಜ್ಯ ಕಾಂಗ್ರೆಸ್‌ನ ತೂಕ ತುಸು ಹೆಚ್ಚು ಎನ್ನುವ ರೀತಿಯಲ್ಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ರಾಷ್ಟ್ರ ನಾಯಕರ ಕೊಡುಗೆಗಿಂತ, ರಾಜ್ಯ ನಾಯಕತ್ವದ ತಾಕತ್ತು ಹೆಚ್ಚಾಗಿತ್ತು. ಅದರಲ್ಲಿಯೂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜಂಟಿ ಹೋರಾಟದಿಂದ ಕರ್ನಾಟಕದಲ್ಲಿ ಸ್ಪಷ್ಟ ಬಹುಮತವಷ್ಟೇ ಅಲ್ಲದೇ, ಐತಿಹಾಸಿಕ ಫಲಿತಾಂಶವನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಸಿದ್ದು-ಡಿಕೆ ಸಮಾನ ಶ್ರಮ ಹಾಕಿರುವ ಈ ಸಮಯದಲ್ಲಿ ‘ಗಾದಿ’ಗೆ ಟವೆಲ್ ಹಾಕುವುದರಲ್ಲಿ ತಪ್ಪೇನಿಲ್ಲ. ಆದರೆ ಇದನ್ನು ನಿಯಂತ್ರಿಸುವ ವಿಷಯದಲ್ಲಿ ಹೈಕಮಾಂಡ್ ಸಪ್ಪೆಯಾದರೆ ಇಂಥ ಡಿನ್ನರ್ ಸಭೆಗಳು ಇನ್ನಷ್ಟು ಹೆಚ್ಚಾಗುವುದರಲ್ಲಿ ಅಚ್ಚರಿಯೇನಿಲ್ಲ. ಈ ಡಿನ್ನರ್ ಸಭೆಗಳಿಂದ ಸ್ಥಾನಪಲ್ಲಟಗಳಾಗುವುದೋ ಇಲ್ಲವೋ ಎನ್ನುವ ತೀರ್ಮಾನ ಪಕ್ಷದ ವೇದಿಕೆಯಲ್ಲಿ, ನಾಯಕರ ರಾಜಕೀಯ ಪಟ್ಟುಗಳ ಆಧಾರದಲ್ಲಿ ಆಗಲಿದೆ.

ಆದರೆ, ಆಡಳಿತಾರೂಢ ಪಕ್ಷದೊಳಗಿನ ಇಂಥ ನಿರಂತರ ಗೊಂದಲಗಳು ಇಡೀ ವ್ಯವಸ್ಥೆಯನ್ನು ಅಲುಗಾಡುವಂತೆ ಮಾಡುವುದಂತೂ ಸತ್ಯ. ಇಂಥ ಅಸ್ಥಿರ ಸನ್ನಿವೇಶದಲ್ಲಿ ‘ನಮಗ್ಯಾಕೆ ಬೇಕು’ ಎನ್ನುವ ಮನಸ್ಥಿತಿಯಲ್ಲಿ ಕೆಲವರಿದ್ದರೆ, ಇನ್ನೂ ಕೆಲವರು ಈ ಎಲ್ಲ ಗೊಂದಲಗಳ ಲಾಭವನ್ನು ಪಡೆಯುವುದು ಹೇಗೆ ಎನ್ನುವ ಲೆಕ್ಕಾಚಾರದಲ್ಲಿ ದಿನದೂಡುವುದಿದೆ. ಇನ್ನು ಕೆಲವರು ಅಸ್ಥಿರತೆ ಇತ್ಯರ್ಥವಾಗುವ ತನಕ ಕಾದು ನೋಡುವ ತಂತ್ರವನ್ನು ಅಪ್ಪುತ್ತಾರೆ.

ಕಿಚಡಿ ಸರಕಾರದ ಗೊಂದಲ ಬೇಡ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವನ್ನು ನೀಡಿದ್ದ ಜನರು ‘ಡಿನ್ನರ್ ಸಭೆ’ಗಳಿಗೆ ಕೊನೆಯೆಂದು ಎನ್ನುವ ಕುತೂಹಲದಲ್ಲಿರುವುದು ಸತ್ಯ.