ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್‌ ಕೂಲ್‌ ಧೋನಿಗೆ ಅಗ್ನಿಪರೀಕ್ಷೆ !

ವಿರೋಧಿಗಳ ಬಾಯಿ ಮುಚ್ಚಿಸೋಕೆ ಧೋನಿ ಏನು ಮಾಡಬೇಕು? ಧೋನಿ ಅಭಿಮಾನಿಯಾಗಿ ಈ ಬಾರಿಯ ಐಪಿಎಲ್‌ನಲ್ಲಿ ನನಗೂ ಒಂದಷ್ಟು ಅಸಮಾಧಾನ ಇದೆ. ಚೆನ್ನೈ ತಂಡದಲ್ಲಿ ಗೆಲ್ಲಲೇಬೇಕೆಂಬ ಕಿಚ್ಚು ಯಾವ ಆಟಗಾರನಲ್ಲೂ ಕಾಣ್ತಾ ಇಲ್ಲ. ‘ಪವರ್ ಪ್ಲೇ’ಗಳಲ್ಲಿ ಮಿಕ್ಕ ತಂಡಗಳು ಹತ್ತರ ಸರಾಸರಿ ಯಲ್ಲಿ ಚಚ್ಚುತ್ತಾ ಇದ್ದರೆ, ಚೆನ್ನೈ ಅ ಅರ್ಧಪಂದ್ಯವನ್ನು ಸೋಲ್ತಾ ಇದೆ.

ಪದಸಾಗರ

ಐಪಿಎಲ್‌ನಲ್ಲಿ ಹಲವಾರು ಆಟಗಾರರು ಅದ್ಭುತವಾಗಿ ಆಡ್ತಾ ಇದಾರೆ. ನಿಕೋಲಸ್ ಪೂರನ್, ಸಾಯಿ ಸುದರ್ಶನ್, ರಾಹುಲ್, ಸೂರ್ಯ ಕುಮಾರ್ ಯಾದವ್, ಪ್ರಿಯಾಂಶ್ ಆರ್ಯ ಹೀಗೆ ಯುವ ಆಟಗಾರರು ಸಿಕ್ಸರ್‌ಗಳ ಸುರಿಮಳೆ ಸುರಿಸ್ತಾ ಇದಾರೆ. ಬೌಲಿಂಗಲ್ಲಿ ಸಿರಾಜ್, ನೂರ್ ಅಹ್ಮದ್, ದಿಗ್ವೇಶ್, ಸುಯಾಂಶ್ ಹೀಗೆ ಯುವ ವೇಗಿಗಳು, ಸ್ಪಿನ್ನರ್‌ಗಳು ಪಂದ್ಯದ ಗತಿ ಬದಲಿಸುವ ಪ್ರದರ್ಶನ ನೀಡ್ತಾ ಇದಾರೆ. ಆದರೆ ಪ್ರೇಕ್ಷಕ ವರ್ಗ ಮಾತ್ರ, ಅದರಲ್ಲೂ ಸೋಷಿಯಲ್ ಮೀಡಿಯಾ ಧೋನಿಯ ಹಿಂದೆ ಬಿದ್ದು ಆತನನ್ನು ಟ್ರೆಂಡಿಂಗಲ್ಲಿ ಇಡೋದ್ರಲ್ಲಿ ಯಶಸ್ವಿಯಾಗಿದೆ! ಅಂದ ಹಾಗೆ ಧೋನಿ ಯನ್ನು ಈ ರೀತಿ ಟ್ರೆಂಡಿಂಗಲ್ಲಿ ಇಡ್ತಾ ಇರೋದು ಧೋನಿಯ ಅಭಿಮಾನಿಗಳಲ್ಲ. ಆತನನ್ನು ವಿನಾಕಾರಣ ದ್ವೇಷಿಸುವವರು, ತಮ್ಮದೇ ಕಾರಣಗಳಿಗೆ ಹೇಟ್ ಮಾಡುವವರು ಮತ್ತು ಇನ್ಯಾರನ್ನೋ ಅಭಿಮಾನಿಸುವುದಕ್ಕೆ ಧೋನಿಯನ್ನು ಬಯ್ಯೋದು ಟ್ರೋಲ್ ಮಾಡೋದೇ ಮಾನದಂಡ ಅಂದ್ಕೊಂಡಿರೋವ್ರು. ಧೋನಿ ದೇಶವನ್ನು ಪ್ರತಿನಿಧಿಸೋ ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತನಾಗಿದ್ದಾನೆ.

ಟೆಸ್ಟ್ ಕ್ರಿಕೆಟ್ ಸಾಕು ಅನಿಸಿದ ಕೂಡಲೇ ಸದ್ದಿಲ್ಲದೇ ನಿವೃತ್ತಿ ಹೇಳಿ ತನ್ನನ್ನು ಟಿ-ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್‌ಗೆ ಸೀಮಿತಗೊಳಿಸಿಕೊಂಡ. ಟಿ-ಟ್ವೆಂಟಿ ತಂಡಕ್ಕೆ ಯುವಪ್ರತಿಭೆಗಳ ಅಗತ್ಯವಿದೆ, ತನ್ನ ನಿಲ್ದಾಣ ಬಂದಿದೆ ಅಂತ ಅರಿವಾಗ್ತಾ ಇದ್ದ ಹಾಗೇ ಅದಕ್ಕೂ ಗುಡ್ ಬೈ ಹೇಳಿದ. ಐದು ವರ್ಷದ ಹಿಂದೆ ಆಗಸ್ಟ್ ಹದಿನೈದರ ಸಂಜೆ “ಈ ಕ್ಷಣ ಏಳೂ ಇಪ್ಪತ್ತೊಂಬತ್ತು.. ನಾನು ನಿವೃತ್ತನಾಗಿದ್ದೇನೆ ಅಂತ ಪರಿಗಣಿಸಿ" ಅಂತ ಇನ್‌ಸ್ಟಾಗ್ರಾಮಲ್ಲಿ ಒಂದು ಪೋಸ್ಟ್ ಹಾಕಿ, ಕ್ರಿಕೆಟ್ ಜಗತ್ತಿನ ಬೃಹತ್ ಅಧ್ಯಾಯವೊಂದನ್ನು ತೀರಾ ಅಂದ್ರೆ ತೀರಾ ಸಿಂಪಲ್ಲಾಗಿ ಮುಗಿಸಿಬಿಟ್ಟಿದ್ದ. ‌

ಸಾಂದರ್ಭಿಕವಾಗಿ “ಮೈ ಪಲ್ ದೋ ಪಲ್ ಕಾ ಶಾಯರ್ ಹೂ..." ಎಂಬ ಸಾಹಿಲ್ ಲೂಧಿಯಾನ್ವೀ ಗೀತೆಯನ್ನು ಹಂಚಿಕೊಂಡು ಧೋನಿ ತನ್ನ ವೃತ್ತಿಬದುಕನ್ನು, ರಾಷ್ಟ್ರೀಯ ತಂಡವನ್ನು ತೊರೆದಿದ್ದ.

ಇದನ್ನೂ ಓದಿ: Naveen Sagar Column: ಬಿಟ್ಟೂಬಿಡದೆ ಕಾಡುವ ಶ್ಯಾʼಮನ ಮಿಡಿʼಯುವ ಕಥೆ !

ಆ ನಂತರ ಇಲ್ಲೀತನಕ ನಾಲ್ಕು ಐಪಿಎಲ್ ನಡೆದು ಐದನೇ ಸೀಸನ್ನಲ್ಲಿದ್ದೇವೆ. ಆದರೆ ದೇಶ ಧೋನಿ ಮಂತ್ರದ ಜಪ ಮಾತ್ರ ಬಿಟ್ಟಿಲ್ಲ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ರಾಷ್ಟ್ರೀಯ ತಂಡದ ಸಕ್ರಿಯ ಸ್ಟಾರ್ ಪ್ಲೇಯರ್‌ಗಳು. ಆದರೆ ಅವರಿಬ್ಬರಿಗಿಂತ ಹೆಚ್ಚು ಚರ್ಚೆಯಲ್ಲಿರೋದು ಧೋನಿ. ವಿಚಿತ್ರ ಅನಿಸಿದರೂ ಇದು ಸತ್ಯ. ಧೋನಿ ಕೂತರೂ ನಿಂತರೂ, ಬಿದ್ದರೂ, ಯಶಸ್ವಿಯಾದರೂ, ಫೇಲ್ ಆದರೂ, ಔಟಾದರೂ, ನಾಟೌಟಾದರೂ, ಬ್ಯಾಟಿಂಗಿಗೆ ಬಂದ್ರೂ, ಬಾರದೇ ಇದ್ರೂ, ಎಲ್ಲವೂ ಆಹಾರವೇ...!

ಧೋನಿಗೆ ಈಗ ವಯಸ್ಸು ನಲವತ್ಮೂರು. ಸದ್ಯದ ಐಪಿಎಲ್‌ನ ಅತಿ ಹಿರಿಯ ಆಟಗಾರ ಅಂದ್ರೆ ಅದು ಧೋನಿಯೇ. ಧೋನಿ ಆಡ್ತಾ ಇರೋದು ಐಪಿಎಲ್ ಮಾತ್ರ. ಇನ್ಯಾವುದೇ ಲೀಗ್ ಪಂದ್ಯಾವಳಿ, ಲೆಜೆಂಡ್ಸ್ ಕ್ರಿಕೆಟ್ ಇತ್ಯಾದಿಗಳಲ್ಲಿ ಧೋನಿ ಇಲ್ಲ. ಕ್ರಿಕೆಟ್ ಸಂಬಂಧ ಯಾವುದೇ ಹುದ್ದೆಗಳಲ್ಲಿ ಅವನಿಲ್ಲ. ಐಪಿಎಲ್ ಹೊರತುಪಡಿಸಿದರೆ ಧೋನಿ ನಮಗೆ ಎಲ್ಲಂದ್ರೆ ಎಲ್ಲೂ ಕಾಣೋದಿಲ್ಲ. ಆತ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇಲ್ಲ. ಮೀಡಿಯಾಗಳ ಕೈಗೆ ಸಿಗುವುದಿಲ್ಲ.

MSD ok R

ಮಾಡ್ತಾ ಇದ್ದಾನೆ. ದುಡಿದಿರೋ ಹಣದಲ್ಲಿ ಸಮಾಜಕ್ಕೇನು ಮಾಡ್ತಿದಾನೆ ಅನ್ನೋದು ನಮಗೆ ಗೊತ್ತಿಲ್ಲ. ಅದು ನಮಗೆ ಬೇಕಾಗಿಲ್ಲ. ಯಾರ ಖಾಸಗಿ ಬದುಕೂ ನಮಗೆ ಮುಖ್ಯವಲ್ಲ. ಅದನ್ನು ಅವರು ತೆರೆದಿಡೋ ಅಗತ್ಯವೂ ಇಲ್ಲ. ಆದರೂ ಧೋನಿಯನ್ನು ಕ್ರಿಕೆಟ್ ಕಾರಣಕ್ಕೆ ಮಾತ್ರವಲ್ಲದೇ ಕ್ರಿಕೆಟೇತರ ಕಾರಣವನ್ನೂ ಹುಡುಕಿ ಟ್ರೋಲ್ ಮಾಡೋದು ಬಿಡೋದಿಲ್ಲ.

ಎರಡು ವರ್ಷಗಳ ಹಿಂದೆ ಧೋನಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಬಹುದಾ ಎಂಬ ಊಹಾ ಪೋಹ ಹರಿದಾಡಿತ್ತು. ‘ಡೆಫಿನೆಟ್ಲಿ ನಾಟ್’ ಅಂತ ಮುಗುಳ್ನಕ್ಕಿದ್ದ. ಆ ನಂತರ ಎರಡು ಐಪಿಎಲ್‌ ಗಳೂ ಇದೇ ಕೊನೆ ಸೀಸನ್ ಇರಬಹುದು ಎಂದೆನಿಸುವ ಹಾಗೆ ಆತನ ಆಟ ಹಾಗೂ ವರ್ತನೆ ಇತ್ತು. ಆದರೆ ಧೋನಿ ಈ ಬಾರಿಯೂ ಆಡ್ತಾ ಇದ್ದಾನೆ.

“ಸಿಎಸ್‌ಕೆಯ ನನ್ನ ಅಭಿಮಾನಿಗಳು, ನಾನು ವೀಲ್‌ಚೇರಲ್ಲಿ ಕೂತಿದ್ರೂ ಎಳ್ಕೊಂಡ್ ಬಂದು ಆಡಿಸ್ತಾರೆ.. ಸೋ ರಿಟೈರ್ ಆಗೋ ಆಲೋಚನೆ ಇಲ್ಲ" ಅಂತ ಹೇಳೋ ಮೂಲಕ ವಿರೋಧಿಗಳಿಗೆ ಇನ್ನಷ್ಟು ಮಾತಾಡೋ ಅವಕಾಶ ಮಾಡಿಕೊಟ್ಟಿದ್ದಾನೆ. ಧೋನಿಯನ್ನು ಒಂದು ವರ್ಗ ಇಷ್ಟೊಂದು ವಿರೋಧಿಸೋದಕ್ಕೆ, ಟೀಕಿಸೋದಕ್ಕೆ, ದ್ವೇಷಿಸೋದಕ್ಕೆ ಕಾರಣ ಆದರೂ ಏನು? “ಕ್ರೆಡಿಟ್ ಕಳ್ಳ.. ಯಾರೋ ಕಷ್ಟಪಟ್ಟು ಆಡ್ತಾರೆ, ಧೋನಿ ಕೊನೆಗೆ ಬಂದು ಒಂದು ಸಿಕ್ಸ್ ಹೊಡೆದು ಕ್ರೆಡಿಟ್ ತಗೋತಾನೆ"- ಇದು ಟೀಕಾಕಾರರ ಒಂದು ಆರೋಪ. ‌

ಧೋನಿ ಅಭಿಮಾನಿಗಳ ಎಮೋಷನ್ ದುರ್ಬಳಕೆ ಮಾಡ್ಕೋತಾ ಇದಾನೆ. ಸಿಎಸ್‌ಕೆ ತಂಡದ ಸೋಲಿಗೆ ಧೋನಿಯೇ ಕಾರಣ. ಧೋನಿಯಿಂದ ಸಿಎಸ್‌ಕೆ ತಂಡದ ಯುವ ಆಟಗಾರರಿಗೆ ಅವಕಾಶ ಸಿಕ್ತಾ ಇಲ್ಲ. ಧೋನಿಗೆ ಬ್ಯಾಟಿಂಗ್ ಮಾಡೋ ತಾಕತ್ತಿಲ್ಲ, ಮ್ಯಾಚ್ ಗೆಲ್ಲಿಸೋ ಧೈರ್ಯ ಇಲ್ಲ. ಸ್ಪಿನ್ ಆಡೋಕೆ ಬರಲ್ಲ. ವೇಗಕ್ಕೆ ಹೆದರ್ತಾನೆ. ಮೇಲಿನ ಕ್ರಮಾಂಕದಲ್ಲಿ ಆಡೋಕೆ ಬರೋದಿಲ್ಲ.

ಜಾಸ್ತಿ ರನ್ ಅಗತ್ಯ ಇದ್ದಾಗ ಬೇಕಂತ ಅಡಗಿ ಕೂರ್ತಾನೆ... ಹೀಗೆ ಒಂದಲ್ಲ ಎರಡಲ್ಲ. ಹಾಗಾದ್ರೆ ಧೋನಿ ವಿರೋಧಿಗಳ ಬಾಯಿ ಮುಚ್ಚಿಸೋಕೆ ಏನು ಮಾಡಬೇಕು? ಧೋನಿ ಅಭಿಮಾನಿಯಾಗಿ ಈ ಬಾರಿಯ ಐಪಿಎಲ್‌ನಲ್ಲಿ ನನಗೂ ಒಂದಷ್ಟು ಅಸಮಾಧಾನ ಖಂಡಿತ ಇದೆ. ಮುಖ್ಯವಾಗಿ ಚೆನ್ನೈ ತಂಡದಲ್ಲಿ ಗೆಲ್ಲಲೇಬೇಕೆಂಬ ಕಿಚ್ಚು ಯಾವ ಆಟಗಾರನಲ್ಲೂ ಕಾಣ್ತಾ ಇಲ್ಲ. ‘ಪವರ್ ಪ್ಲೇ’ಗಳಲ್ಲಿ ಮಿಕ್ಕ ತಂಡಗಳು ಹತ್ತರ ಸರಾಸರಿಯಲ್ಲಿ ಚಚ್ಚುತ್ತಾ ಇದ್ದರೆ, ಚೆನ್ನೈ ಅಲ್ಲೇ ಅರ್ಧಪಂದ್ಯವನ್ನು ಸೋಲ್ತಾ ಇದೆ. ಬೌಲಿಂಗ್ ಮತ್ತು ಫೀಲ್ಡಿಂಗ್ ಸಂಪೂರ್ಣವಾಗಿ ದುರ್ಬಲ ಎಂಬಂತಾಗಿದೆ.

ಧೋನಿ ಬ್ಯಾಟಿಂಗಿಗೆ ಬರೋ ಹೊತ್ತಿಗೆ ಟಾರ್ಗೆಟ್ ಅನ್ನೋದು ನಾಟ್ ರೀಚೆಬಲ್ ಎಂಬಷ್ಟು ದೂರದಲ್ಲಿರುತ್ತದೆ. ಆರೇಳು ವರ್ಷಗಳ ಹಿಂದಿನ ಧೋನಿ ಮೂರು ಓವರ್‌ಗೆ ಐವತ್ತು ಬೇಕಂದ್ರೂ ಗೆಲ್ಲಿಸುತ್ತಿದ್ದ. ಅಭಿಮಾನಿಗಳು ಇಂದಿಗೂ ಅದೇ ನಂಬಿಕೆ ಅದೇ ನಿರೀಕ್ಷೆಯಲ್ಲಿ ಧೋನಿಯನ್ನು ನೋಡ್ತಾರೆ. ವಿರೋಧಿಗಳು ಆತನ ವೈಫಲ್ಯಕ್ಕಾಗಿಯೇ ಕಾದು ಕೂರ್ತಾರೆ. ಧೋನಿಯಿಂದ ಪಂದ್ಯ ಗೆಲ್ಲಿಸೋ ಆಟ ಬರ್ತಾ ಇಲ್ಲ ಅನ್ನೋ ಬೇಸರಕ್ಕಿಂತ, ಗೆಲ್ಲಿಸಬೇಕೆಂಬ ಫೈರ್ ಕಾಣ್ತಾ ಇಲ್ಲ ಅನ್ನೋದು ಎಲ್ಲರ ಬೇಸರಕ್ಕೆ ಕಾರಣ. ಧೋನಿ ಹೊಡೆಯೋ ಸಿಕ್ಸು-ಫೋರುಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿವೆ ಎಂಬ ಗೊಣಗಾಟದಲ್ಲೂ ವಾಸ್ತವವಿದೆ. ಚೆನ್ನೈ ತಂಡ ಆಡಿರೋ ಐದು ಪಂದ್ಯದಲ್ಲಿ ನಾಲ್ಕು ಸೋತು ಟೂರ್ನಿಯಿಂದ ಹೊರಬೀಳೋ ಅಪಾಯದಲ್ಲಿದೆ. ಏತನ್ಮಧ್ಯೆ ಋತುರಾಜ್ ಗಾಯಕ್‌ವಾಡ್ ಗಾಯಗೊಂಡ ಕಾರಣಕ್ಕೆ ಧೋನಿಗೆ ನಾಯಕತ್ವದ ಜವಾಬ್ದಾರಿ ಹೆಗಲೇರಿದೆ.

ಈ ಸಂದರ್ಭದಲ್ಲಿ ಧೋನಿಯಿಂದ ಅಭಿಮಾನಿಗಳು ನಿರೀಕ್ಷಿಸುತ್ತಾ ಇರೋದೇನು? ನಿಜ ಧೋನಿಗೆ ವಯಸ್ಸಾಗಿದೆ. ಮಂಡಿಯ ಶಸ್ತ್ರಚಿಕಿತ್ಸೆ ನಂತರ ರನ್ನಿಂಗ್ ಸಮಸ್ಯೆ ಇದೆ. ಆದರೂ ಸಿಎಸ್‌ಕೆ ತಂಡಕ್ಕೆ ಧೋನಿ ಬೇಕು. ಹೀಗಾಗಿ ಧೋನಿಗೆ ಅದು ನೀಡಿರೋ ರೋಲ್ ಕೊನೆಯ ಎರಡು ಓವರ್‌ಗಳಲ್ಲಿ ಕಣಕ್ಕಿಳಿದು ಅಭಿಮಾನಿಗಳಿಗೋಸ್ಕರ ಆಡಿಬರೋದು.

ಅಭಿಮಾನಿಗಳಿಗೆ ಧೋನಿಯನ್ನು ನೋಡೋದ್ರ ಖುಷಿ ಸಿಗೋದು ನಿಜ. ಆದರೆ ಆತ ಪರ್ಫಾರ್ಮ್ ಮಾಡ್ಬೇಕು. ತಂಡವನ್ನು ಗೆಲ್ಲಿಸೋ ಆಟ ಆಡಬೇಕು. ವಿರೋಧಿಗಳ ಬಾಯಿಗೆ ಆಹಾರ ಆಗಬಾರದು. ಆತ ತಂಡಕ್ಕೆ ಮೈನಸ್ ಆಗಬಾರದು ಅಂತ ಕೂಡ ಅಭಿಮಾನಿಗಳು ಯೋಚಿಸ್ತಾರೆ. ಧೋನಿಯ ಪರ ಎದೆಯುಬ್ಬಿಸಿ ನಿಂತು ವಿರೋಧಿಗಳ ಟೀಕೆಯನ್ನು ಮಟ್ಟ ಹಾಕೋಕೆ ಬಯಸ್ತಾರೆ. ಅದು ಈ ಸೀಸನ್ನಲ್ಲಿ ಆಗಿಲ್ಲ ಅನ್ನೋದೇ ದೊಡ್ಡ ಬೇಸರ. ಧೋನಿ ಆಡೋದೇ ಎರಡು ಓವರ್ ಅಂತಾದ್ರೆ ಅದನ್ನು ಓಪನಿಂಗ್ ಬಂದು ಆಡಬಹುದಲ್ವಾ? ಔಟಾದ್ರೆ ಔಟ್ ಅಂತ ಬಂದು ಹೊಡಿಬಡಿ ಆಟ ಆಡಿ ಹೋಗಬಹುದಲ್ವಾ? ಇದು ಅಭಿಮಾನಿಗಳ ಪ್ರಶ್ನೆ. ಧೋನಿ ಓಪನರ್ ಆಗಿ ಕ್ರಿಕೆಟ್ ರಂಗಕ್ಕೆ ಬಂದವನು.

ಅಲ್ಲಿಂದ ಮುಂದೆ ತಂಡದ ಹಿತಕ್ಕೋಸ್ಕರ ಒಂದೊಂದೇ ಹೆಜ್ಜೆ ಹಿಂದಕ್ಕೆ ಹೋಗಿ ಫಿನಿಷರ್ ಪಾತ್ರವನ್ನು ಅನಿವಾರ್ಯವಾಗಿ ವಹಿಸಿಕೊಂಡವನು. ಆತ ಫಿನಿಷರ್ ಎಂದು ಹೇಳಿಕೊಂಡವನಲ್ಲ. ಆತ ಬಯಸಿ ಪಡೆದ ಪಾತ್ರವೂ ಅದಾಗಿರಲಿಲ್ಲ. ಈಗ ಮತ್ತೆ ಆತ ಓಪನರ್ ಆಗಿ ಬಂದು ತನ್ನ ಯೌವನದ ದಿನಗಳಂತೆ ಬ್ಯಾಟ್ ಬೀಸಿ ಹೋದರೆ ಅದು ನಿಜಕ್ಕೂ ಹಬ್ಬ.

ಧೋನಿ ತನ್ನ ಆರಂಭದ ದಿನಗಳಲ್ಲಿ ಬ್ಯಾಟ್ ಮೂಲಕ, ಕೀಪಿಂಗ್ ಮೂಲಕ, ನಾಯಕತ್ವದಲ್ಲಿ ಅಚ್ಚರಿಯ ಬದಲಾವಣೆ, ನಿರ್ಧಾರ ಕೈಗೊಳ್ಳೋ ಮೂಲಕ ಪ್ರೇಕ್ಷಕರ ಒಲವು ಸಂಪಾದಿಸಿದವನು. ಆದರೆ ಇತ್ತೀಚಿನ ದಿನಗಳಲ್ಲಿ ಆ ಧೋನಿ ಕಂಡದ್ದು ಕಡಿಮೆ. ಈಗ ನಾಯಕತ್ವ ಸಿಕ್ಕಿದೆ. ಯಾಕೆ ಧೋನಿ ಹಳೇ ಧೋನಿ ಆಗಬಾರದು. ಧೋನಿಯನ್ನು ಟ್ರೋಲ್ ಮಾಡೋವ್ರಿಗೆ ಆತನ ದಾಖಲೆಗಳು, ಕೊಡುಗೆಗಳು ಕಾಣೋದಿಲ್ಲ. ಕಂಡರೂ ನೋಡೋಕಿಷ್ಟ ಇಲ್ಲ.

ಖಂಡಿತ ಈ ಸಲದ ಐಪಿಎಲ್‌ನಲ್ಲಿ ಧೋನಿ ತಂಡಕ್ಕೆ ಹೊರೆ ಅನಿಸುವಂತೆ ಕಂಡದ್ದು ಹೌದು. ಆದರೆ ಫ್ರಾಂಚೈಸಿ ಆತನನ್ನು ‘ಅನ್ ಕ್ಯಾ ಪ್ಲೇಯರ್’ ಆಗಿ ಮತ್ತೆ ಸೇರಿಸಿಕೊಂಡಿದೆ ಅಂದ್ರೆ, ಆತನ ಅನುಭವ, ಆತನ ವರ್ಚಸ್ಸು, ಆತನ ಅಭಿಮಾನಿವರ್ಗ, ಕ್ರೌಡ್ ಪುಲ್ಲಿಂಗ್ ಸಾಮರ್ಥ್ಯ, ಐಪಿಎಲ್‌ನ ಕಮರ್ಷಿಯಲ್ ವಿಚಾರಗಳು ಇವೆಲ್ಲವೂ ಗಣನೆಗೆ ಬಂದಿರುತ್ತವೆ. ಆತ ಈ ಟೂರ್ನಿಯ ಅಸೆಟ್ ಅಲ್ಲದೇ ಹೋಗಿದ್ದಲ್ಲಿ ಎಷ್ಟೋ ಅನ್‌ಸೋಲ್ಡ್‌ ಪ್ಲೇಯರ್ ಥರ ಎಂದೋ ಹೊರಗಿರುತ್ತಿದ್ದ.

ಚೆನ್ನೈ ಫ್ರಾಂಚೈಸಿಗೆ ಆತ ಬೇಕಿರುವಾಗ ಆತನನ್ನು ಹೊರೆ ಎನ್ನಲು ನಾವ್ಯಾರು. ಅದೇನು ರಾಷ್ಟ್ರೀಯ ತಂಡವಾ? ಇನ್ಯಾರದ್ದೋ ಅವಕಾಶ ಕಿತ್ತುಕೊಳ್ತಿದಾನೆ ಅನ್ನೋದಕ್ಕೆ ಅರ್ಥವಾದರೂ ಇದ್ಯಾ? ಹಣಕ್ಕಾಗಿ ಆಡ್ತಾನೆ ಅಂತ ಹೇಳೋವ್ರು ಒಂದು ಗಮನಿಸಬೇಕು. ಧೋನಿ ಖರೀದಿಯಾಗಿರೋದು ಕೇವಲ ನಾಲ್ಕು ಕೋಟಿಗೆ. ಅವನ ಆದಾಯ ಮತ್ತು ಆಸ್ತಿಯ ಎದುರು ಈ ನಾಲ್ಕು ಕೋಟಿ ಏನೇನೂ ಅಲ್ಲ. ವಿಕೆಟ್ ಹಿಂದುಗಡೆ ತೋರುತ್ತಿರುವ ಚುರುಕುತನ, ಬ್ಯಾಟಿಂಗಲ್ಲೂ ತೋರಿದರೆ, ಬ್ಯಾಟಿಂಗಲ್ಲಿ ಆಕ್ರಮಣಕಾರಿ ಮನೋಭಾವ ತೋರಿದರೆ, ಗೆಲ್ಲುವ ಹಸಿವು ತೋರಿಸಿದರೆ ಅಷ್ಟೇ ಸಾಕು. ಅಭಿಮಾನಿಗಳು ಧೋನಿಯ ವೈಫಲ್ಯದ ಬಗ್ಗೆ ಬೇಸರ ಮಾಡಿಕೊಳ್ಳುವುದಿಲ್ಲ.

ಹಳೆಯ ಧೋನಿಯಲ್ಲಿದ್ದ ತಣ್ಣನೆಯ ಆಕ್ರಮಣಕಾರಿ ಗುಣವನ್ನು ಮಿಸ್ ಮಾಡಿಕೊಳ್ತಾ ಇದ್ದಾರೆ. ಈಗ ನಾಯಕತ್ವ ಸಿಕ್ಕಿದೆ. ತಂಡಕ್ಕೆ ಪ್ರತಿಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಲಾದರೂ ಧೋನಿ ತನ್ನ ಗತವೈಭವ ತೋರಲಿ. ಸೋಲು ಗೆಲುವುಗಳಾಚೆ, ಧೋನಿಯ ತಂಡ ಒಳ್ಳೇ ಆಟ ಆಡಿತು ಎಂಬ ಖುಷಿ ಅಭಿಮಾನಿಗಳಿಗೆ ಸಿಗುವಂತಾಗಲಿ. ಧೋನಿ ಮತ್ತು ಚೆನ್ನೈ ಬಗ್ಗೆ ಇಷ್ಟು ಬರೆದಮಾತ್ರಕ್ಕೆ ನಾನು ರಾಜ್ಯದ್ರೋಹಿ, ಕೊಹ್ಲಿ ವಿರೋಧಿ ಅಂತೆಲ್ಲ ಅಂದುಕೊಳ್ಳುವವರಿಗೆ ಹೇಳೋದಿಷ್ಟೆ. ನಾನು ಅಪ್ಪಟ ಕ್ರಿಕೆಟ್ ಪ್ರೇಮಿ.

ಧೋನಿ, ಕಪಿಲ್, ಕಾಂಬ್ಳಿ, ಸಚಿನ್, ಕೊಹ್ಲಿ, ಶರ್ಮ, ಬುಮ್ರಾ, ರಿಚರ್ಡ್ಸ್, ಲಾರಾ, ಡಿವಿಲಿಯರ್ಸ್ ಹೀಗೆ ಸರ್ವದೇಶಗಳ ಉತ್ತಮ ಕ್ರಿಕೆಟಿಗರನ್ನು ಮನಸಾರೆ ಇಷ್ಟಪಡುವ ಕ್ರಿಕೆಟ್ ಪ್ರೇಮಿ.

ನವೀನ್‌ ಸಾಗರ್‌

View all posts by this author