ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಬಿಟ್ಟೂಬಿಡದೆ ಕಾಡುವ ಶ್ಯಾʼಮನ ಮಿಡಿʼಯುವ ಕಥೆ !

ಚಳಿಗಾಲದಲ್ಲಿ ಚಳಿ ಕಮ್ಮಿ ಇದ್ದರೂ ನಮಗೆ ಸಮಾಧಾನ ಇರಲ್ಲ. ಚಳಿಗಾಲವನ್ನು ಬಯ್ತೀವಿ. ಮಳೆಗಾಲದಲ್ಲಿ ಮಳೆ ಜಾಸ್ತಿ ಬಂದ್ರೂ ಗೋಳಾಡ್ತೀವಿ. ಕಮ್ಮಿ ಬಂದರೂ ಗೊಣಗಾಡ್ತೀವಿ. ಪ್ರಕೃತಿಗೆ ನಾವು ಒಗ್ಗಿಕೊಳ್ಳುವುದು ಅನಿವಾರ್ಯ ಅಂತ ಗೊತ್ತಿದ್ದರೂ ಅದರ ಮೇಲಿನ ಮುನಿಸು ಮುಗಿಯೋದಿಲ್ಲ.

ಬಿಟ್ಟೂಬಿಡದೆ ಕಾಡುವ ಶ್ಯಾʼಮನ ಮಿಡಿʼಯುವ ಕಥೆ !

ಪದಸಾಗರ

ಏನ್ ಸೆಖೆ ರೀ ಇದು.. ಈಗ್ಲೇ ಹೀಗೆ... ಇನ್ನು ಮೇ ತಿಂಗಳಲ್ಲಿ ಹೆಂಗೋ... !" ಬೇಸಗೆಯನ್ನು ನಾವು ಸ್ವಾಗತಿಸೋದೇ ಇಂಥದ್ದೊಂದು ಗೊಣಗಾಟದ ಜತೆ. ಇಷ್ಟಕ್ಕೂ ನಾವು ಯಾವ ಸೀಸನ್ನನ್ನು ಬಹಳ ಪ್ರೀತಿ ಉತ್ಸಾಹದಿಂದ ಬರಮಾಡ್ಕೋತೀವಿ? ಯಾವ ಕಾಲವನ್ನು ಒಪ್ಕೊಂಡು ಎಂಜಾಯ್ ಮಾಡ್ತೀವಿ? ನಮಗೆ ಮಳೆ ಬಗ್ಗೆಯೂ ಕಂಪ್ಲೇಂಟ್ ಇರತ್ತೆ. ಚಳಿಯ ಮೇಲೂ ಇರತ್ತೆ. ಚಳಿಗಾಲದಲ್ಲಿ ಚಳಿ ಕಮ್ಮಿ ಇದ್ದರೂ ನಮಗೆ ಸಮಾಧಾನ ಇರಲ್ಲ. ಚಳಿಗಾಲವನ್ನು ಬಯ್ತೀವಿ. ಮಳೆಗಾಲದಲ್ಲಿ ಮಳೆ ಜಾಸ್ತಿ ಬಂದ್ರೂ ಗೋಳಾಡ್ತೀವಿ. ಕಮ್ಮಿ ಬಂದರೂ ಗೊಣಗಾಡ್ತೀವಿ. ಪ್ರಕೃತಿಗೆ ನಾವು ಒಗ್ಗಿಕೊಳ್ಳುವುದು ಅನಿವಾರ್ಯ ಅಂತ ಗೊತ್ತಿದ್ದರೂ ಅದರ ಮೇಲಿನ ಮುನಿಸು ಮುಗಿಯೋದಿಲ್ಲ.

ಆದರೆ ನಾವು ಹೀಗಿರಲಿಲ್ಲ. ನಾವು ಅಂದ್ರೆ ನಮ್ಮೆಲ್ಲರ ಬಾಲ್ಯದ ನಾವು. ಅವತ್ತಿನ ನಾವು. ನಾವು ಬೇಸಗೆಯನ್ನು ನಮ್ಮದೇ ಥರದಲ್ಲಿ ಎಂಜಾಯ್ ಮಾಡ್ತಿದ್ವಿ. ಬೇಸಗೆ ರಜೆಗೆ ಕಾಯ್ತಿದ್ವಿ. ಸಮ್ಮರ್ ಕ್ಯಾಂಪ್‌ಗಳೋ ರಿಚ್ ಟ್ರಿಪ್‌ಗಳೋ ಬೇಕಿರಲಿಲ್ಲ. ವಿಧವಿಧ ಆಟಗಳು ನಮಗಾಗಿ ಕಾಯ್ತಿರ್ತಿದ್ವು. ಆಜುಬಾಜಲ್ಲಿದ್ದ ಅಜ್ಜಿಮನೆಯೇ ಅತಿ ದೊಡ್ಡ ಬೇಸಿಗೆ ಟ್ರಿಪ್. ಹಳ್ಳಿಯ ಗದ್ದೆ-ತೋಟಗಳು, ಕೆರೆ-ಹಳ್ಳಗಳು-ಕಾಡುಗಳೇ ನಮಗೆ ಅಡ್ವೆಂಚರ್ ಪ್ರವಾಸದ ಅನುಭವ ಕೊಡ್ತಿದ್ವು.

ಇದನ್ನೂ ಓದಿ: ‌Naveen Sagar Column: ಎಪ್ಪತ್ತು ವರ್ಷದ ಅಮ್ಮನನ್ನು ಹೀರೋಯಿನ್‌ ಮಾಡಿದ ಮಗ !

ಮಳೆಗಾಲ ಬಂತಂದ್ರೆ ಅದನ್ನು ಮನಃಪೂರ್ತಿಯಾಗಿ ಅನುಭವಿಸ್ತಿದ್ವಿ. ಛತ್ರಿ, ರೇನ್ ಕೋಟ್‌ ಗಳಿಲ್ಲದ ಬಡತನದ ದಿನಗಳು ಕೂಡ ಕಷ್ಟ ಅನಿಸ್ತಿರಲಿಲ್ಲ. ನೆನೆಯುವುದು, ಇನ್ಯಾರದ್ದೋ ಛತ್ರಿಯಲ್ಲಿ ತೂರಿ ಜಾಗ ಪಡ್ಕೊಂಡು ಹೋಗೋದ್ರಲ್ಲೂ ಸುಖ ಕಾಣ್ತಿದ್ವಿ. ಅಂದಿನ ಮಲೆನಾಡಿನ ಮಳೆಯ ಸೊಬಗು ಅನುಭವಿಸಿದವರಿಗೇ ಗೊತ್ತು. ಅದೇ ರೀತಿ ಚಳಿಗಾಲ ಕೂಡ. ಹಂಡೆ ಒಲೆ ಎದುರು ಕೂತು ಮೈ ಕಾಯಿಸ್ಕೊಳ್ಳೋದು.

ಕಟಕಟ ಹಲ್ಲುಕಡೀತಾ ಚಳಿಯನ್ನು ಉತ್ಕಟವಾಗಿ ಎಂಜಾಯ್ ಮಾಡೋದು ಬೇರೇದೇ ಲೆವೆಲ್ ಬಿಡಿ. ಈಗ ಉಹೂಂ.. ನಮಗೆ ಯಾವುದೂ ಚೆಂದ ಅನಿಸೋದಿಲ್ಲ. ಥ್ರಿಲ್ ಕೊಡೋ ದಿಲ್ಲ. ನಮಗೆ ಮಾತ್ರ ಅಲ್ಲ. ಇಂದಿನ ಮಕ್ಕಳಿಗೂ ಚಿಕ್ಕಪುಟ್ಟ ಸಂತೋಷಗಳ ಅನುಭೂತಿ ಯೇ ಇಲ್ಲ. ಮೆಟೀರಿಯಲಿಸ್ಟಿಕ್ ಪ್ರೀತಿ ಮತ್ತು ಸಂತೋಷಗಳಿಗೆ ಇಂದಿನ ಜೀವಗಳು ಒಗ್ಗಿ ಬಿಟ್ಟಿವೆ. ಹಾಗಂತ ಅವರ ಬಾಲ್ಯ ನಮ್ಮ ಬಾಲ್ಯದಷ್ಟು ಚೆಂದವಿಲ್ಲ ಅನ್ನ ಬಹುದಾ? ಖಂಡಿತ ಇಲ್ಲ. ಹೋಲಿಸದೇ ಇದ್ದರೆ ಇಬ್ಬರೂ ಸುಖಿಗಳು!

Col ok

ಬೇಸಗೆ ಬಂತು ಅಂದ್ರೆ ಮಾವಿನಮರಗಳು ಕೂಗಿ ಕರೀತಿದ್ವು. ಮರದಿಂದ ರಾಶಿ ರಾಶಿ ಮಿಡಿ ಕಾಯಿಗಳು ಉದುರಿ ಬಿದ್ದಿರ್ತಿದ್ವು. ಆದರೆ ನಮಗೆ ಅದನ್ನು ತಿನ್ನೋ ಆಸೆ ಇಲ್ಲ. ನಮಗೆ ಖುಷಿ ಸಿಗೋದು ಯಾವಾಗ ಗೊತ್ತಾ? ದೊಡ್ಡದೊಡ್ಡ ಮರಗಳಲ್ಲಿ ಎತ್ತರದಲ್ಲಿ ನೇತಾಡ್ತಾ ಇರೋ ಮಾವಿನ ಗೊಂಚಲಿಗೆ ನಾವೇ ಕಲ್ಲು ಹೊಡೆದು ಬೀಳಿಸಬೇಕು.

ಬಿದ್ದಿರೋ ಮಾವಿನ ಕಾಯಿ ಒಂಚೂರು ಕಚ್ಚಿ ಬಿಸಾಕೋದಷ್ಟೇ. ಮಾವಿನಕಾಯಿಗೆ ಕಲ್ಲು ಹೊಡೆಯೋದು, ಅಕ್ಕತಂಗೀರಿಗೆ ಅಥವಾ ಕ್ಲಾಸ್ ಹುಡುಗೀರಿಗೆ ಮಾವಿನಕಾಯಿ ಕೊಡೋದು ಅದೇನೋ ಪೌರುಷದ ಫೀಲ್ ಕೊಡ್ತಿತ್ತು. ಹೆಣ್ಮಕ್ಕಳೂ ನಮ್ಮನ್ನು ಆ ರೀತಿ ಟಾಪಿಗೇರಿಸ್ತಾ ಇದ್ರು ಬಿಡಿ.

ನಾನು ಈಗ ಹೇಳೋಕೆ ಹೊರಟಿದ್ದು ಅಂಥ ಒಬ್ಬ ಟಾಪಿಗೇರಿದವನ ಬಗ್ಗೆ. ಅವನ ಹೆಸರು ಶ್ಯಾಮ. ಮಾವಿನಕಾಯಿ ಶ್ಯಾಮ. ನಂಗೆ ಪ್ರತಿ ಬೇಸಗೆ ಬಂದಾಗ ಶ್ಯಾಮ ನೆನಪಾಗುತ್ತಾನೆ. ಅವನ ದುರಂತ ಕಥೆ ಬಿಟ್ಟೂಬಿಡದೆ ನೆನಪಾಗುತ್ತದೆ. ಅವನು ಬೇಸಗೆ ಅಲ್ಲದ ಒಂದು ದಿನ ನೆನಪಾಗಿಬಿಟ್ಟಿದ್ದ. ಕಾರಣ ಆ ಸಿನಿಮಾ. ಸಿನಿಮಾ ಹೆಸರು ‘ಕಾದಲ್’. ಕನ್ನಡದಲ್ಲಿ ‘ಚೆಲುವಿನ ಚಿತ್ತಾರ’ ಎಂಬ ಹೆಸರಲ್ಲಿ ರೀಮೇಕ್ ಆಯ್ತಲ್ಲ, ಅದು.

ಚಿತ್ರದ ಕಥೆ ಹೇಳೋ ಅಗತ್ಯವೇ ಇಲ್ಲ ಅಂದ್ಕೋತೀನಿ. ಯಾಕಂದ್ರೆ ಆ ಸಿನಿಮಾ ನೋಡಿರ ದವರು ಇರ್ಲಿಕ್ಕಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದ ಗ್ಯಾರೇಜ್ ಮೆಕ್ಯಾನಿಕ್ ಯುವಕನೊಬ್ಬ ಶ್ರೀಮಂತ ಹುಡುಗಿಯೊಂದಿಗೆ ಪ್ರೀತಿಗೆ ಬಿದ್ದು, ಕೊನೆಗೆ ಆಗಬಾರದ್ದೆಲ್ಲ ಆಗಿ ಹುಚ್ಚನಾಗಿಬಿಡುವ ಕಥೆ.

ತಮಿಳಿನ ಆ ಸಿನಿಮಾ ನೋಡುವಾಗ ನನಗೆ ಶ್ಯಾಮ ಕಣ್ಮುಂದೆ ಬಂದಿದ್ದ. ಅರೆ.. ತಮಿಳ್ನಾ ಡಿನ ನಿರ್ದೇಶಕನಿಗೆ ಶ್ಯಾಮನ ಕಥೆ ಗೊತ್ತಾಗಿದ್ದಾದ್ರೂ ಹೇಗೆ? ಶ್ಯಾಮ ತಮಿಳ್ನಾಡಿಗೆ ಹೋಗಿ ಕಥೆ ಹೇಳ್ಕೊಂಡ್ನಾ? ಯಾರಾದ್ರೂ ಈ ನಿರ್ದೇಶಕನಿಗೆ ಶ್ಯಾಮನ ಕಥೆ ಹೇಳಿದ್ದಿರಬಹುದಾ? ಹೇಗೆ ಸಾಧ್ಯ? ಅಥವಾ ಶ್ಯಾಮನ ಬದುಕನ್ನೇ ಹೋಲೋ ಘಟನೆ ತಮಿಳ್ನಾಡಿನಲ್ಲೂ ನಡೆದಿತ್ತಾ? ಹೀಗೆಲ್ಲ ಯೋಚಿಸ್ತಾ ಇದ್ದಾಗ ಅನಿಸಿದ್ದು ಏನಂದ್ರೆ... ಪ್ರೀತಿ, ಪ್ರೇಮ, ಪ್ರೇಮ ವೈಫಲ್ಯ, ಸಾವು, ನೋವು ಇವೆಲ್ಲವೂ ಜಗತ್ತಿನ ಎಡೆ ಸಂಭವಿಸ್ತಾನೇ ಇರೋ ವಿಚಾರಗಳು.

ಸಿನಿಮಾಗಳಿಗೆ ನಿಜಜೀವನದ ಘಟನೆ ಸ್ಪೂರ್ತಿಯಾಗತ್ತೆ. ಅದೇ ರೀತಿ ನಿಜಜೀವನದ ಮೇಲೆ ಸಿನಿಮಾಗಳು ಪ್ರಭಾವ ಬೀರುತ್ತವೆ. ‘ಉಪೇಂದ್ರ’ ಸಿನಿಮಾ ನೋಡಿದಾಗ ನನಗೆ ಇದೇ ರೀತಿ ಅನಿಸಿತ್ತು. ಉಪೇಂದ್ರ ಚಿತ್ರದ ‘ನಾನು’ ಅನ್ನೋ ಪಾತ್ರದ ರಚನೆಯೇ ವಿಕ್ಷಿಪ್ತವಾಗಿತ್ತು. ಆತ ತನ್ನನ್ನು ತಾನು ಲೋಫರ್, ಕಚಡಾ, ಕಂತ್ರಿ ಅಂತ ಹೇಳ್ಕೊಳ್ತಿದ್ದ.

ಬಹಿರಂಗವಾಗಿ ಹೇಳಿಯೇ ಕೆಟ್ಟ ಕೆಲಸ ಮಾಡ್ತಾ ಇದ್ದ. ವಿಚಿತ್ರವಾಗಿ ಜುಟ್ಟು ಕಟ್ಟಿಕೊಂಡು ಓಡಾಡ್ತಾ ಇದ್ದ. ಸಿಗರೇಟಿನ ಫಿಲ್ಟರಿಗೆ ಬೀಡಿ ಅಂಟಿಸಿ ಸೇದುತ್ತಿದ್ದ. ಆ ಪಾತ್ರವನ್ನು ನೋಡಿ ದಾಗ, ಅರೆ ಉಪೇಂದ್ರನಿಗೆ ಈ ಪಾತ್ರ ರಚಿಸೋದಕ್ಕೆ ಸ್ಪೂರ್ತಿ ಎಲ್ಲಿಂದ ಸಿಕ್ತು ಅಂತ ಅಚ್ಚರಿ ಪಟ್ಟಿದ್ದೆ. ಕಾರಣ, ನನ್ನ ಬಾಲ್ಯದಲ್ಲಿ ನಾನು ಅದೇ ಥರದ ಒಂದು ಜೀವಿಯನ್ನು ನೋಡಿದ್ದೆ.

ಅವನ ಹೆಸರು ಗಡ್ಡದ ರಾಮಕೃಷ್ಣ. ನಮ್ಮ ಸಾಗರ ಸೀಮೆಯಲ್ಲಿ ಮಕ್ಕಳನ್ನು ಭಯಭೀತಿ ಯಲ್ಲಿಟ್ಟುಕೊಳ್ಳೋಕೆ ಇದ್ದ ಒಂದು ಕ್ಯಾರೆಕ್ಟರ್ ಅದು. ಊಟ ಮಾಡಿಲ್ಲ ಅಂದ್ರೆ ಗಡ್ಡದ ರಾಮಕೃಷ್ಣ ಬರ್ತಾನೆ.. ಓದಿಲ್ಲ ಬರ್ದಿಲ್ಲ ಅಂದ್ರೆ ಗಡ್ಡದ ರಾಮಕೃಷ್ಣನ್ನ ಕರೀತೀನಿ.. ಇವೇ ಅಸ್ತ್ರಗಳು!

ಅವನನ್ನು ನೋಡಿಲ್ಲದವರಿಗೆ ಒಂದು ಥರದ ಭಯ. ನೋಡಿರೋವ್ರಿಗೆ ಇನ್ನೂ ಹೆಚ್ಚು ಭಯ. ಆತ ಕೂಡ ಬಹಳ ವಿಕ್ಷಿಪ್ತವಾಗಿ ಬದುಕುತ್ತಿದ್ದ. ಸೈಕಲ್ಲಿಗೊಂದು ಪ್ಲಾಸ್ಟಿಕ್ ಕವರಿನ ಛಾವಣಿ ಮಾಡ್ಕೊಂಡಿದ್ದ. ಸೈಕಲ್ ಮುಂದುಗಡೆ ಸ್ಲೇಟಿನ ಮೇಲೆ ನಾಲ್ಕನೇ ನಂಬರ್ ಕಳ್ಳ ಅಂತ ಬರ್ಕೊಂಡಿದ್ದ.

ಗಡ್ಡಧಾರಿ. ತಲೆ ಮೇಲೆ ಥೇಟ್ ಉಪೇಂದ್ರನ ಥರದ ಜುಟ್ಟು. ಸೈಕಲ್ಲಿಗೊಂದು ತ್ರಿಶೂಲ ಸಿಕ್ಕಿಸಿರ್ತಿದ್ದ. ಇವತ್ತು ಯಾರ ಮನೇಲಿ ಕಳ್ತನ ಮಾಡ್ತೀನಿ ಅಂತ ಹೇಳಿಯೇ ಕದೀತಾ ಇದ್ನಂತೆ. ಹಾಗಂತ ಜನ ಹೇಳ್ತಾ ಇದ್ರು. ಜೈಲಿನಲ್ಲಿ ಆತನಿಗೆ ನಾಲ್ಕನೇ ನಂಬರ್ ಫಿಕ್ಸ್ ಮಾಡಿಬಿಟ್ಟಿದ್ರಂತೆ. ‌

ಅದ್ಕೇ ಅವ್ನು ಬಿಡುಗಡೆ ಆದಾಗ್ಲಿಂದ ನಾಲ್ಕನೇ ನಂಬರ್ ಕಳ್ಳ ಅಂತ ಬೋರ್ಡ್ ಹಾಕ್ಕೊಂಡ್ ಓಡಾಡ್ತಾ ಇದ್ನಂತೆ. ಉಪೇಂದ್ರ ಸಿನಿಮಾ ನೋಡಿದಾಗ ನಂಗೆ ಮತ್ತೆ ಮತ್ತೆ ಈ ಗಡ್ಡದ ರಾಮಕೃಷ್ಣ ನೆನಪಾಗಿ, ಉಪೇಂದ್ರರನ್ನೊಮ್ಮೆ ಸಂದರ್ಶಿಸಿ ನಿಮಗೆ ಗಡ್ಡದ ರಾಮ‌ ಕೃಷ್ಣ ಗೊತ್ತಾ ಅಂತ ಕೇಳಬೇಕೆನಿಸಿತ್ತು.

ಹಾಂ, ಈ ಶ್ಯಾಮನ ಕಥೆ ಕೇಳಿ. ಶ್ಯಾಮ ಕುಳ್ಳಗಿದ್ದ. ಬಹಳ ಚಟುವಟಿಕೆಯ ಯುವಕ. ಸದಾ ಚೆಂದದ ಬೆಲ್‌ಬಾಟಮ್ ಪ್ಯಾಂಟ್, ಅಗಲದ ಬೆಲ್ಟ್, ಫುಲ್ ಕೈತೋಳಿನ ಶರ್ಟ್ ಧರಿಸಿ ಸಾಗರದ ತುಂಬ ಓಡಾಡ್ತಾ ಇದ್ದ. ಮಾವಿನಕಾಯಿ ಸೀಸನ್ ಬಂತು ಅಂದ್ರೆ ಶ್ಯಾಮನಿಗೆ ಡಿಮ್ಯಾಂಡ್. ಯಾಕಂದ್ರೆ ಈತ ಮಾವಿನಮರಗಳನ್ನು ಹತ್ತುವುದರಲ್ಲಿ ನಿಷ್ಣಾತ. ಜತೆಗೆ ಮರಗಳ ಕಾಂಟ್ರಾಕ್ಟ್ ತಗೊಂಡು, ಮಿಡಿಗಾಯಿಗಳನ್ನು ಕಿತ್ತು ಮಾರುತ್ತಿದ್ದ. ಸಾಗರದಲ್ಲಿ ಶ್ಯಾಮ ತರೋ ಮಿಡಿಗಳೇ ಎಲ್ಲರ ಮನೆಯ ಉಪ್ಪಿನಕಾಯಿ. ಮಿಕ್ಕಿರೋ ಟೈಮಲ್ಲಿ ಏನೋ ಕೂಲಿಕೆಲಸ ಮಾಡ್ಕೊಂಡಿರ್ತಾ ಇದ್ದ ಈತನಿಗೆ ಬೇಸಗೆ ಬಂತಂದ್ರೆ ಲಾಟರಿ ಹೊಡೆದ ಹಾಗೆ.

ನಮ್ಮಂಥ ಮಕ್ಕಳ ಕಣ್ಣಿಗೆ ಶ್ಯಾಮ ಹೀರೋ ಅನಿಸ್ತಿದ್ದ. ಅವ್ನು ದಾರೀಲಿ ಮೂಟೆ ಹೊತ್ಕೊಂಡ್ ಹೋಗ್ತಾ ಇದ್ರೆ.. ಏಯ್ ಶ್ಯಾಮ ಒಂದ್ ಮಾವಿನ್‌ಕಾಯಿ ಕೊಡೋ ಅಂತ ಕೇಳ್ತಿದ್ವಿ. ಅವ್ನಿಗೆ ಕೊಡಬೇಕು ಅನಿಸಿದ್ರೆ ಕೊಟ್ಟು ಹೋಗ್ತಿದ್ದ. ಅವ್ನು ಕೊಟ್ರೆ ನಮಗೇನೋ ರಿವಾರ್ಡ್ ಸಿಕ್ಕ ಖುಷಿ. ಅದೇ ರೀತಿ ನಮ್ಮೂರಿನಲ್ಲಿ ಹುಡುಗೀರೂ ಶ್ಯಾಮನನ್ನು ಪೀಡಿಸ್ತಾ ಇದ್ರು- ಮಾವಿನಕಾಯಿ ಕೊಡೋ ಅಂತ. ಶ್ಯಾಮ ಒಂದು ಹೆಲ್ದೀ ಫ್ಲರ್ಟ್ ಮಾಡ್ಕೊಂಡು ಚೆನ್ನಾಗಿದ್ದ. ಅದೊಮ್ಮೆ ಒಬ್ಬ ಸುಂದರಿ, ಶ್ರೀಮಂತರ ಮನೆ ಹುಡುಗಿ ಶ್ಯಾಮನ ಜತೆ ಮಾವಿನಕಾಯಿ ಕೇಳೋ ನೆಪದಲ್ಲಿ ಗೆಳೆತನಕ್ಕೆ ಬಿದ್ದಳು.

ಮಾವಿನಕಾಯಿ ಕೊಟ್ರೆ ಏನ್ ಕೊಡ್ತೀಯ ಅಂತ ಕೇಳ್ದ. ನನ್ನ ಲವ್ ಮಾಡ್ತೀಯಾ? ಮದ್ವೆ ಮಾಡ್ಕೋತೀಯ ಅಂತ ಕೇಳ್ದ. ತಮಾಷೆಗೆ ಕೇಳ್ತಿದಾನೆ ಅಂದ್ಕೊಂಡ್ಲೋ ಏನೋ.. ಆಯ್ತು ಮಾವಿನಕಾಯಿ ಕೊಡು.. ಲವ್ ಮಾಡ್ತೀನಿ ಮದ್ವೆ ಆಗ್ತೀನಿ ಅಂದ್ಲು. ಆ ವಯಸ್ಸಲ್ಲಿ ಅವಳಿಗೂ ಶ್ಯಾಮ ಹೀರೋ ಥರ ಕಾಣಿಸಿರಬಹುದು. ಇಬ್ಬರೂ ಲವ್ವಲ್ಲಿ ಬಿದ್ದೇಬಿಟ್ರು. ಚಿಕ್ಕ ಊರಲ್ವಾ? ಹುಡುಗೀ ಮನೇಲಿ ಗೊತ್ತಾಗ್ತಾ ಇದ್ದ ಹಾಗೇ ಪ್ರೀತಿಗೆ ಕತ್ತರಿ ಬಿತ್ತು. ಶ್ಯಾಮನ ಎದೆ ಒಡೆದುಹೋಯ್ತು.

ಅಮ್ಮ ಮಗನ ಪುಟ್ಟ ಜಗತ್ತು ಅವನದ್ದು.. ಹುಡುಗಿ ಕೈಕೊಟ್ಲು ಅನ್ನೋ ನೋವೋ, ಊರಿನ ಜನರ ಮುಂದೆ ಮುಖ ತೋರಿಸೋದು ಹೇಗೆ ಅಂತ ಯೋಚನೆ ಬಂತೋ ಏನ್ ಕತೇನೋ. ದಿಢೀರ್ ನಾಪತ್ತೆ ಆಗಿಬಿಟ್ಟ. ಆ ನಂತರ ಆತ ಮತ್ತೆ ಕಾಣಿಸಿದ್ದು ಇನ್ನೊಂದು ಬೇಸಗೆಯ. ಆದರೆ ಅಷ್ಟೊತ್ತಿಗೆ ಶ್ಯಾಮ ಎಂದಿನ ಶ್ಯಾಮ ಆಗಿರಲಿಲ್ಲ.

ತಲೆಕೂದಲು ನೀರು ನೋಡದೇ ವರ್ಷವಾಗಿತ್ತೇನೋ. ಎದೆ ಮುಟ್ಟುವಷ್ಟು ಉದ್ದ ಗಡ್ಡ, ಹರಿದ ಪ್ಯಾಂಟು, ಪ್ಯಾಂಟ್ ಮೇಲೆ ಮತ್ತೊಂದು ಪ್ಯಾಂಟು, ಹರಿದ ಅಂಗಿ, ಅದರ ಮೇಲೆ ಇನ್ನೊಂದು ಹರಿದ ಅಂಗಿ. ಅರ್ಥವಾಗದ ಕನ್ನಡದಲ್ಲಿ ಯಾರಿಗೋ ಏನೋ ಬಯ್ಯುತ್ತಾ, ರಸ್ತೆಯಲ್ಲಿ ನಡೆದು ಹೋಗ್ತಾ ಇದ್ರೆ ಇಡೀ ಊರಿಗೂರೇ ಶಾಕ್- ಶ್ಯಾಮ ಹೀಗಾಗಿಬಿಟ್ನಾ ಅಂತ. ಮನೆ ಮರೆತುಹೋಗಿದ್ದ. ಮಾವಿನಕಾಯಿ ಮಾರೋದು ಬಿಟ್ಟಿದ್ದ. ಆದರೆ ಮರ ಹತ್ತೋದು ನೆನಪಿತ್ತು. ಎತ್ತರೆತ್ತರದ ಮರ ಹತ್ತಿ ಅ ವಾಸ ಮಾಡೋಕೆ ಶುರು ಮಾಡಿದ. ರಾತ್ರಿ ಅ ನಿದ್ರೆ. ನಿದ್ರೇಲೆಲ್ಲಿ ಮರದಿಂದ ಬಿದ್ದು ಸಾಯ್ತಾನೋ ಅಂತ ಊರ ಜನ ಆತಂಕಪಟ್ಟರು.

ಹಾಗೂ ಹೀಗೂ ಅವನು ಇರೋದಕ್ಕೊಂದು ಸೂರು ವ್ಯವಸ್ಥೆ ಮಾಡ್ಕೊಟ್ರು. ಬೀಡಿ ಸಿಗರೇಟು ಅಭ್ಯಾಸವೇ ಇಲ್ಲದವನು ಏಕಕಾಲಕ್ಕೆ ಐದಾರು ಬೀಡಿ ಅಂಟಿಸಿಕೊಂಡು ಎಲ್ಲ ಬೆರಳುಗಳ ಮಧ್ಯ ಒಂದೊಂದು ಇಟ್ಟುಕೊಂಡು ಸೇದತೊಡಗಿದ. ಯಾರು ಮಾತನಾಡಿಸಿ ದರೂ ಧ್ವನಿಯೇ ಇಲ್ಲದವನ ಹಾಗೆ ಪಾಸ್ ಆಗಿಬಿಡ್ತಿದ್ದ.

ಹಳೆಯ ನೆನಪು ಕಾಡಲು ಶುರುಮಾಡಿದ ಕೂಡಲೇ ಅರ್ಥವಾಗದ ಭಾಷೇಲಿ ವಿಧಿಯನ್ನು ಬಯ್ತಾ ಇದ್ದ. ಒಳ್ಳೆ ಬಟ್ಟೆ ಕೊಟ್ಟರೆ ಅದನ್ನು ಹಾಕ್ಕೊಂಡು ಅದರ ಮೇಲೆ ಮತ್ತದೇ ಹರಿದ ಬಟ್ಟೆ ಧರಿಸಿಕೊಳ್ತಿದ್ದ. ಇದ್ದಕ್ಕಿದ್ದಂತೆ ಹೋಗಿ ತಲೆಬೋಳಿಸಿಕೊಂಡು ಮೀಸೆಗಡ್ಡ ಎಲ್ಲ ನುಣ್ಣಗೆ ತೆಗೆಸಿಕೊಂಡು ಬಂದುಬಿಡ್ತಿದ್ದ.

ಮತ್ತೆ ಅವನು ಮಾವಿನಮಿಡಿ ವ್ಯಾಪಾರಕ್ಕೆ ಮರಳಲಿ, ಸರಿ ಹೋದಾನು ಅಂತ ಊರ ಜನ ಪ್ರಯತ್ನಪಟ್ಟರು. ಅವನಿಗೆ ಬಹುಶಃ ಮಾವಿನಮಿಡಿ ಹಳೆಹುಡುಗಿಯನ್ನು ನೆನಪಿಸ್ತಾ ಇತ್ತೋ ಏನೋ... ಶ್ಯಾಮ ಸರಿಹೋಗಲೇ ಇಲ್ಲ. ನಲವತ್ತು ವರ್ಷದ ಹಳೇ ನೆನಪು ಇದು... ಇವತ್ತಿಗೆ ಶ್ಯಾಮ ಬದುಕಿದ್ದಾನೋ ಇಲ್ವೋ ಗೊತ್ತಿಲ್ಲ. ಆದರೆ ಪ್ರತಿ ಬೇಸಗೆ ಶ್ಯಾಮ ನೆನಪಾಗುತ್ತಾನೆ. ಮಾವಿನ ಮಿಡಿ ನೋಡಿದ್ರೆ ಶ್ಯಾಮ ನೆನಪಾಗುತ್ತಾನೆ. ಚೆಲುವಿನ ಚಿತ್ತಾರದ ಕ್ಲೈಮ್ಯಾಕ್ಸ್ ನೋಡಿದಾಗೆಲ್ಲ ಶ್ಯಾಮ ನೆನಪಾಗುತ್ತಾನೆ. ‌

ಪ್ರೇಮವೈಫಲ್ಯದ ಯಾವುದೇ ಟ್ರ್ಯಾಜಿಡಿಗಳು ಪ್ರಸ್ತಾಪವಾದರೂ ಶ್ಯಾಮ ನೆನಪಾಗುತ್ತಾನೆ. ಬೇಸಗೆಯ ಹಲವು ಮಧುರ ನೆನಪುಗಳ ನಡುವೆ ಶ್ಯಾಮನ ದುರಂತಬದುಕು ಬೇಡ ವೆಂದರೂ ನೆನಪಾಗುತ್ತಲೇ ಇರುತ್ತದೆ...