ನೀರುಪಾಲು
ಕೆ.ವಿ.ಚಂದ್ರಮೌಳಿ
ಕಾವೇರಿ ಜಲ ನಿಯಂತ್ರಣ ಸಮಿತಿಯ (CWRC) 146ನೇ ಸಭೆಯು, ಕರ್ನಾಟಕವು ನ.7ರಿಂದ ಮುಂದಿನ 15 ದಿನಗಳವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿ ಸೆಕೆಂಡಿಗೆ 3000 ಕ್ಯೂಸೆಕ್ ನೀರಿನ ಹರಿವನ್ನು ಖಚಿತಪಡಿಸಬೇಕೆಂದು ನಿರ್ದೇಶಿಸಿದೆ. ಈ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಸುಮಾರು 3.88 ಟಿಎಂಸಿ ನೀರಿನ ಹರಿವು ನಿರೀಕ್ಷಿಸಲಾಗಿದೆ. ಈ ನಿರ್ಧಾರವನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೂ (CWMA) ಅನುಮೋದಿಸಿದೆ ಎಂದು ವರದಿಯಾಗಿದೆ. ಈ ನಿರ್ಧಾರವು ಕರ್ನಾಟಕದಲ್ಲಿ ತೀವ್ರ ಬರದ ಪರಿಸ್ಥಿತಿ ಮುಂದುವರಿದಿರುವಾಗ ಹೊರಬಂದಿದೆ.
ಹೀಗಾಗಿ, ಇದು ಕೇವಲ ನೀರು ಬಿಡುಗಡೆ ಮಾಡುವ ಪ್ರಮಾಣದ ಪ್ರಶ್ನೆಯಲ್ಲ; ಸಂಕಷ್ಟದ ವರ್ಷದಲ್ಲಿ ಕಾನೂನುಬದ್ಧ ನೀರಿನ ಹಂಚಿಕೆಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ಮೂಲಭೂತ ಪ್ರಶ್ನೆಯಾಗಿದೆ.
ಕರ್ನಾಟಕದ ವಾದಗಳು: 146ನೇ ಸಭೆಯಲ್ಲಿ ಕರ್ನಾಟಕವು ತನ್ನ ನಾಲ್ಕು ಪ್ರಮುಖ ಕಾವೇರಿ ಜಲಾಶಯ ಗಳಿಗೆ ಬಂದಿರುವ ಒಳಹರಿವು 30 ವರ್ಷಗಳ ಸರಾಸರಿಗಿಂತ ಶೇ.53.88ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ. ಕಾವೇರಿ ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳು ಬರಪೀಡಿತವಾಗಿವೆ ಎಂಬುದನ್ನೂ ಉಲ್ಲೇಖಿಸಿದೆ. ಜೂ.1ರಿಂದ ನ.6ರ ಬೆಳಿಗ್ಗೆ 8 ಗಂಟೆಯವರೆಗೆ ಬಿಳಿಗುಂಡ್ಲುವಿನಲ್ಲಿ ಒಟ್ಟು 54.964 ಟಿಎಂಸಿ ನೀರು ಹರಿದಿದೆ ಎಂದು ಕರ್ನಾಟಕ ತಿಳಿಸಿದೆ.
ಇದನ್ನೂ ಓದಿ: K V Chandramouli Column: ಸ್ಟಿಂಗ್: ತಪ್ಪು ಮಾಡಲು ಪ್ರಚೋದನೆ ನ್ಯಾಯ ಸಮ್ಮತವಲ್ಲ
ಜು.29ರಿಂದ ನ.6ರವರೆಗಿನ CWRC/CWMA ನಿರ್ದೇಶನದ ಅವಧಿಯಲ್ಲಿ 49.119 ಟಿಎಂಸಿ ಹರಿಯಬೇಕಾಗಿದ್ದರೆ, ವಾಸ್ತವವಾಗಿ 51.394 ಟಿಎಂಸಿ ಹರಿದಿದೆ. ಹೀಗಾಗಿ, ನಿಗದಿತ ಪ್ರಮಾಣಕ್ಕಿಂತ ಸುಮಾರು 2.275 ಟಿಎಂಸಿ ಹೆಚ್ಚುವರಿ ಹರಿವು ದಾಖಲಾಗಿದೆ ಎಂಬುದು ರಾಜ್ಯದ ಪ್ರಮುಖ ವಾದ.
ಮುಂದಿನ ಅವಧಿಯಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣ ಸುಮಾರು 57 ಟಿಎಂಸಿ ಎಂದು ಕರ್ನಾಟಕ ಅಂದಾಜಿಸಿದೆ. 2027ರ ಜುಲೈ ಅಂತ್ಯದವರೆಗೆ ಕುಡಿಯುವ ನೀರು ಸೇರಿದಂತೆ ಆದ್ಯತೆಯ ಅಗತ್ಯಗಳನ್ನು ಪೂರೈಸಲು ಸುಮಾರು 50 ಟಿಎಂಸಿ ಅಗತ್ಯವಿದೆ. ಉಳಿಯಬಹುದಾದ 7 ಟಿಎಂಸಿ ನೀರು ಈಗಾಗಲೇ ನಿಂತಿರುವ ಬೆಳೆಗಳ ನೀರಾವರಿ ಅಗತ್ಯಕ್ಕೂ ಸಾಕಾಗುವುದಿಲ್ಲ ಎಂಬುದು ರಾಜ್ಯದ ಆತಂಕ.
ತಮಿಳುನಾಡಿನ ಸಾಂಬಾ ಬೆಳೆಗಳಿಗೆ ನೀರು ಬೇಕೆಂಬುದನ್ನು ಕರ್ನಾಟಕ ನಿರಾಕರಿಸಿಲ್ಲ. ಆದರೆ, ತಮಿಳುನಾಡಿನ ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ನ.5ರಂದು ಒಟ್ಟು 37.125 ಟಿಎಂಸಿ ನೀರಿನ ಸಂಗ್ರಹವಿತ್ತು. ಈ ಸಂಗ್ರಹ, ಈಶಾನ್ಯ ಮುಂಗಾರು ಮಳೆ ಮತ್ತು ಅಂತರ್ಜಲದ ಲಭ್ಯತೆಯನ್ನು ಪರಿಗಣಿಸಿದರೆ, ಸಾಂಬಾ ಬೆಳೆಯ ತಕ್ಷಣದ ಅಗತ್ಯಗಳನ್ನು ಪೂರೈಸುವ ಸಾಧ್ಯತೆಯಿದೆ ಎಂಬುದು ಕರ್ನಾಟಕದ ಪ್ರತಿವಾದ.
ತಮಿಳುನಾಡಿನ ವಾದಗಳು: ತಮಿಳುನಾಡು ತನ್ನ ಪಾಲಿನ ನೀರು ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಎಂದು ಪ್ರತಿಪಾದಿಸಿದೆ. ಅದರ ಲೆಕ್ಕಾಚಾರದ ಪ್ರಕಾರ, ನ.4ರವರೆಗೆ ತನ್ನ ಪಾಲಿಗೆ ಬರಬೇಕಾಗಿದ್ದ ನೀರಿನ ಪ್ರಮಾಣ 70.330 ಟಿಎಂಸಿ; ಆದರೆ ಬಿಳಿಗುಂಡ್ಲುವಿನಲ್ಲಿ ವಾಸ್ತವವಾಗಿ 53.435 ಟಿಎಂಸಿ ಮಾತ್ರ ದೊರೆತಿದೆ. ಹೀಗಾಗಿ 16.895 ಟಿಎಂಸಿ ನೀರಿನ ಕೊರತೆಯಿದೆ ಎಂಬುದು ಅದರ ವಾದ. ತಮಿಳುನಾಡು ತನ್ನ ಲೆಕ್ಕಾಚಾರದಲ್ಲಿ ಶೇ. 48.44ರ ಅನುಪಾತವನ್ನು ಅನ್ವಯಿಸಿದೆ.
ಅ.24ರಿಂದ ನ.4ರವರೆಗೆ ಹಲವು ದಿನಗಳಲ್ಲಿ ಬಿಳಿಗುಂಡ್ಲುವಿನಲ್ಲಿ ನಿಗದಿತ 3000 ಕ್ಯೂಸೆಕ್ ಹರಿವು ದಾಖಲಾಗಿಲ್ಲ ಎಂಬುದನ್ನೂ ಅದು ಆಕ್ಷೇಪಿಸಿದೆ. ತನ್ನ ಸಾಂಬಾ ಬೆಳೆಗಳು ಬೆಳವಣಿಗೆಯ ಹಂತದಲ್ಲಿದ್ದು, ನೀರಿನ ಕೊರತೆ ಮುಂದುವರಿದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಮಿಳುನಾಡು ವಾದಿಸಿದೆ. ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ಒಟ್ಟು 37.125 ಟಿಎಂಸಿ ಸಂಗ್ರಹವಿದ್ದರೂ, ಆ ನೀರು ರಾಜ್ಯದ ಎಲ್ಲ ನೀರಾವರಿ ಮತ್ತು ಇತರ ಅಗತ್ಯಗಳಿಗೆ ಸಾಕಾಗುವುದಿಲ್ಲ ಎಂಬುದು ತಮಿಳುನಾಡಿನ ನಿಲುವು. ಲಭ್ಯವಿರುವ ಸಂಗ್ರಹದ ಜೊತೆಗೆ ಭವಿಷ್ಯದ ಬೆಳೆ ಅಗತ್ಯ, ಕುಡಿಯುವ ನೀರು ಮತ್ತು ಇತರ ಬಳಕೆಗಳನ್ನೂ ಪರಿಗಣಿಸಬೇಕು ಎಂದಿದೆ.
ಈ ಹಿನ್ನೆಲೆಯಲ್ಲಿ, ಬಾಕಿ ಉಳಿದಿದೆ ಎಂದು ಹೇಳಲಾದ 16.895 ಟಿಎಂಸಿ ನೀರನ್ನು ಬಿಡುಗಡೆ ಮಾಡುವುದರ ಜೊತೆಗೆ ನ.5ರಿಂದ 21ರವರೆಗೆ ಬಿಳಿಗುಂಡ್ಲುವಿನಲ್ಲಿ ಒಟ್ಟು 20.678 ಟಿಎಂಸಿ ಹರಿವನ್ನು ಖಚಿತಪಡಿಸಬೇಕೆಂದು ಅದು ಕೋರಿದೆ.
ಎರಡೂ ರಾಜ್ಯಗಳ ವಾದಗಳಿಗೆ ಪ್ರತಿವಾದ: ಕರ್ನಾಟಕದ ವಾದದಲ್ಲಿ ಜಲಾಶಯಗಳ ಒಳಹರಿವಿನ ತೀವ್ರ ಕುಸಿತ, ವ್ಯಾಪಕ ಬರ, ಕುಡಿಯುವ ನೀರಿನ ಅಗತ್ಯ ಮತ್ತು ಮುಂದಿನ ಬೇಸಿಗೆಯ ನೀರಿನ ಭದ್ರತೆ ಪ್ರಮುಖ ಅಂಶಗಳಾಗಿವೆ. ಇವುಗಳನ್ನು ಕೇವಲ ರಾಜ್ಯದ ಮನವಿಯೆಂದು ತಳ್ಳಿಹಾಕಲಾಗದು. ವಿಶೇಷವಾಗಿ, ಕರ್ನಾಟಕದ ಜಲಾಶಯಗಳು ಮುಖ್ಯವಾಗಿ ನೈಋತ್ಯ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿರುವುದರಿಂದ, ಮಳೆ ಕೊರತೆಯ ಪರಿಣಾಮ ಅದರ ನೀರಿನ ಲಭ್ಯತೆಯ ಮೇಲೆ ನೇರವಾಗಿ ಬೀಳುತ್ತದೆ. ಆದರೆ, ಕರ್ನಾಟಕವು ತನ್ನ ಜಲಾಶಯಗಳ ಸಂಗ್ರಹವನ್ನು ಮಾತ್ರ ಆಧರಿಸಿ ತಮಿಳುನಾಡಿನ ಬೇಡಿಕೆಯನ್ನು ತಿರಸ್ಕರಿಸುವಂತಿಲ್ಲ.
ಬಿಳಿಗುಂಡ್ಲುವಿನಲ್ಲಿ ದಾಖಲಾಗಿರುವ ಹರಿವು, ತಮಿಳುನಾಡಿನ ಪಾಲಿನ ಲೆಕ್ಕಾಚಾರ, ಅದರ ಜಲಾಶಯ ಗಳ ಸಂಗ್ರಹ ಮತ್ತು ಬೆಳೆಗಳ ನೈಜ ಅಗತ್ಯಗಳನ್ನೂ ಸಮಗ್ರವಾಗಿ ಪರಿಗಣಿಸಬೇಕು. ಕರ್ನಾಟಕದ 51.394 ಟಿಎಂಸಿ ಹರಿವಿನ ಲೆಕ್ಕಾಚಾರ ಮತ್ತು ತಮಿಳುನಾಡಿನ 16.895 ಟಿಎಂಸಿ ಕೊರತೆಯ ಲೆಕ್ಕಾಚಾರಗಳ ನಡುವಿನ ವ್ಯತ್ಯಾಸವನ್ನು ವೈಜ್ಞಾನಿಕವಾಗಿ ಬಗೆಹರಿಸಬೇಕು.
ಇನ್ನೊಂದೆಡೆ, ತಮಿಳುನಾಡು ತನ್ನ ನಿಗದಿತ ಪಾಲಿನ ಪ್ರಮಾಣವನ್ನು ಆಧರಿಸಿ ಕೊರತೆಯ ಲೆಕ್ಕಾಚಾರ ಮಾಡುವುದು ಮಾತ್ರ ಸಾಕಾಗುವುದಿಲ್ಲ. ಸಂಕಷ್ಟದ ವರ್ಷದಲ್ಲಿ ಒಟ್ಟು ಜಲಲಭ್ಯತೆ ಎಷ್ಟು ಕಡಿಮೆ ಯಾಗಿದೆ, ಯಾವ ರಾಜ್ಯಕ್ಕೆ ಎಷ್ಟು ನೀರು ವಾಸ್ತವವಾಗಿ ಲಭ್ಯವಿದೆ, ಜಲಾಶಯಗಳಲ್ಲಿ ಉಳಿದಿರುವ ಸಂಗ್ರಹ ಎಷ್ಟು ಮತ್ತು ಮುಂದಿನ ಮಳೆಯ ಸಾಧ್ಯತೆ ಏನು ಎಂಬುದನ್ನೂ ಪರಿಶೀಲಿಸಬೇಕು. ಸಾಮಾನ್ಯ ವರ್ಷದ ನೀರಿನ ಹಂಚಿಕೆ ಪ್ರಮಾಣವನ್ನು ಸಂಕಷ್ಟದ ವರ್ಷದಲ್ಲಿಯೂ ಬದಲಾವಣೆಯಿಲ್ಲದೆ ಜಾರಿಗೊಳಿಸಬೇಕೆಂಬ ನಿಲುವು ನ್ಯಾಯಯುತವಾಗುವುದಿಲ್ಲ.
ತಮಿಳುನಾಡು ಈಶಾನ್ಯ ಮುಂಗಾರು ಮಳೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂಬ ಕರ್ನಾಟಕದ ವಾದವೂ ಗಮನಾರ್ಹ. ಆದರೆ, ಆ ಮಳೆ ಎಷ್ಟು ಪ್ರಮಾಣದಲ್ಲಿ ಬೀಳಲಿದೆ ಮತ್ತು ಯಾವ ಪ್ರದೇಶಗಳಲ್ಲಿ ಬೀಳಲಿದೆ ಎಂಬುದನ್ನು ಖಚಿತವೆಂದು ಪರಿಗಣಿಸಲಾಗದು. ಅದೇ ರೀತಿ, ತಮಿಳುನಾಡಿನ ಜಲಾಶಯಗಳಲ್ಲಿರುವ ಒಟ್ಟು ಸಂಗ್ರಹವನ್ನೇ ಅದರ ಎಲ್ಲ ಅಗತ್ಯಗಳಿಗೆ ಲಭ್ಯವಿರುವ ಹೆಚ್ಚುವರಿ ನೀರೆಂದು ಪರಿಗಣಿಸುವುದೂ ಸರಿಯಲ್ಲ. ಎರಡೂ ರಾಜ್ಯಗಳ ವಾದಗಳನ್ನು ಒಂದೇ ವೈಜ್ಞಾನಿಕ ಮಾನದಂಡದಡಿ ಪರಿಶೀಲಿಸುವುದು ಅಗತ್ಯ.
ಕಾನೂನು ಏನು ಹೇಳುತ್ತದೆ?: ಈ ವಿವಾದದಲ್ಲಿ ಅತ್ಯಂತ ಮಹತ್ವದ ಕಾನೂನು ಆಧಾರವೆಂದರೆ ಕಾವೇರಿ ಜಲವಿವಾದಗಳ ನ್ಯಾಯಮಂಡಳಿಯ 2007ರ ಫೆಬ್ರವರಿ 5ರಂದು ನೀಡಿದ ಅಂತಿಮ ತೀರ್ಪಿನ ಏಳನೇ ಷರತ್ತು (Clause VII) ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಕಷ್ಟದ ವರ್ಷದಲ್ಲಿ ನೀರಿನ ಲಭ್ಯತೆ ಕಡಿಮೆಯಾದರೆ, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ನಿಗದಿತ ಪಾಲುಗಳನ್ನು ಅನುಪಾತದ ಆಧಾರದಲ್ಲಿ ಕಡಿತಗೊಳಿಸಬೇಕು ಎಂದು ಈ ವಿಧಿ ಸ್ಪಷ್ಟಪಡಿಸುತ್ತದೆ.
ಈ ತತ್ವವನ್ನು ಕಾವೇರಿ ಜಲ ನಿರ್ವಹಣಾ ಯೋಜನೆ, 2018ರ ಕ್ಲಾಸ್ 10(3) ಮತ್ತಷ್ಟು ವಿವರಿಸುತ್ತದೆ. ಕ್ಲಾಸ್ 10(3)(ಜಿ) ಪ್ರಕಾರ, ಪ್ರತಿವರ್ಷ ಜೂನ್ 1ರಂದು ಪ್ರಾಧಿಕಾರವು ನಿರ್ದಿಷ್ಟ ಜಲಾಶಯಗಳಲ್ಲಿನ ಉಳಿಕೆ ನೀರಿನ ಸಂಗ್ರಹವನ್ನು ನಿರ್ಧರಿಸಬೇಕು. ಆರಂಭಿಕ ಲೆಕ್ಕಾಚಾರಕ್ಕಾಗಿ ಜಲಾನಯನ ಪ್ರದೇಶದ ಒಳಹರಿವನ್ನು ಶೇ.50ರ ಅವಲಂಬನೀಯತೆಯ ಆಧಾರದ ಮೇಲೆ 740 ಟಿಎಂಸಿ ಎಂದು ಪರಿಗಣಿಸಿ, ಹಿಂದಿನ ವರ್ಷದ ಉಳಿಕೆ ನೀರಿನೊಂದಿಗೆ ರಾಜ್ಯಗಳ ಪಾಲನ್ನು ನಿರ್ಧರಿಸಬೇಕು. ಆದರೆ, 740 ಟಿಎಂಸಿ ಎಂಬುದು ಆರಂಭಿಕ ಯೋಜನಾ ಲೆಕ್ಕಾಚಾರಕ್ಕೆ ಬಳಸುವ ಪ್ರಮಾಣ ಮಾತ್ರ; ಪ್ರತಿವರ್ಷ ಅಷ್ಟೇ ನೀರು ಖಚಿತವಾಗಿ ಲಭ್ಯವಾಗುತ್ತದೆ ಎಂಬ ಭರವಸೆಯಲ್ಲ.
ಕ್ಲಾಸ್ 10(3)(ಜಿಜಿ) ಪ್ರಕಾರ, ನಂತರದ ಪ್ರತಿ ಅವಧಿಯಲ್ಲೂ ನೈಜ ಒಳಹರಿವು, ನೀರಿನ ಬಳಕೆ, ಬಿಡುಗಡೆ ಮತ್ತು ಜಲಾಶಯಗಳಲ್ಲಿನ ಸಂಗ್ರಹವನ್ನು ಪರಿಶೀಲಿಸಿ, ಮುಂದಿನ ಅವಧಿಯ ನೀರಿನ ಲಭ್ಯತೆಯನ್ನು ಮರುಮೌಲ್ಯಮಾಪನ ಮಾಡಬೇಕು. ಇದಕ್ಕಿಂತಲೂ ಮುಖ್ಯವಾಗಿ, ಕ್ಲಾಸ್ 10(3) (iii) ಪ್ರಕಾರ, ಜಲಾನಯನ ಪ್ರದೇಶದಲ್ಲಿ ಉಂಟಾಗುವ ನೀರಿನ ಸಂಕಷ್ಟದ ಪರಿಸ್ಥಿತಿ ಮತ್ತು ಅದರ ಪ್ರಮಾಣವನ್ನು ಪ್ರಾಧಿಕಾರವು ಗುರುತಿಸಬೇಕು. ಅಂತಹ ಸಂಕಷ್ಟದಿಂದ ಉಂಟಾಗುವ ಕೊರತೆಯನ್ನು ನಿಗದಿತ ಪಾಲುಗಳನ್ನು ಗಮನದಲ್ಲಿಟ್ಟುಕೊಂಡು ಪಾಲುದಾರ ರಾಜ್ಯಗಳ ನಡುವೆ ಹಂಚಿಕೊಳ್ಳಬೇಕು. ಕ್ಲಾಸ್ 10(3)( viii) ಪ್ರಕಾರ, ಯಾವುದೇ ತಿಂಗಳಲ್ಲಿ ನೀರಿನ ಲಭ್ಯತೆಯಲ್ಲಿ ಕೊರತೆ ಕಂಡುಬಂದರೆ, ನಿಗದಿತ ಬೆಳೆಗಳಿಗೆ ಸಂಬಂಧಿಸಿ ದಂತೆ ರಾಜ್ಯಗಳು ಸಲ್ಲಿಸುವ ನೀರಿನ ಬೇಡಿಕೆ ಗಳನ್ನು ಅವುಗಳಿಗೆ ಹಂಚಿಕೆ ಮಾಡಿರುವ ಪ್ರಮಾಣದ ಅನುಪಾತದಲ್ಲಿ ಕಡಿತಗೊಳಿಸುವುದನ್ನು ಪ್ರಾಧಿಕಾರವು ಪರಿಗಣಿಸಬೇಕು.
ಕರ್ನಾಟಕದ ಮುಂದಿನ ಕಾರ್ಯತಂತ್ರ: ಕರ್ನಾಟಕವು ಪ್ರತಿ ಬಾರಿ ನೀರು ಬಿಡುಗಡೆ ಮಾಡುವ ನಿರ್ದೇಶನ ಬಂದಾಗ ಅದನ್ನು ವಿರೋಧಿಸುವುದಕ್ಕೆ ಸೀಮಿತವಾಗಬಾರದು. ದೀರ್ಘಕಾಲೀನ ಪರಿಹಾರಕ್ಕಾಗಿ ಸಮಗ್ರ, ದತ್ತಾಂಶ ಆಧಾರಿತ ಮತ್ತು ಕಾನೂನುಬದ್ಧ ಕಾರ್ಯತಂತ್ರವನ್ನು ರೂಪಿಸಬೇಕು.
- ಸಂಕಷ್ಟದ ಪ್ರಮಾಣವನ್ನು ಅಧಿಕೃತವಾಗಿ ನಿರ್ಧರಿಸುವಂತೆ ಒತ್ತಾಯಿಸಬೇಕು: ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ಕ್ಲಾಸ್ 10(3) (iii)ರ ಅಡಿಯಲ್ಲಿ ಜಲಾನಯನ ಪ್ರದೇಶದ ಒಟ್ಟು ಸಂಕಷ್ಟದ ಪ್ರಮಾಣವನ್ನು ಗುರುತಿಸಿ, ಅದನ್ನು ಎಲ್ಲ ಪಾಲುದಾರ ರಾಜ್ಯಗಳ ನಡುವೆ ಹೇಗೆ ಹಂಚಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಕರ್ನಾಟಕ ಒತ್ತಾಯಿಸಬೇಕು.
- ಎಲ್ಲ ರಾಜ್ಯಗಳ ನೀರಿನ ಲೆಕ್ಕಪತ್ರಗಳನ್ನು ಪಾರದರ್ಶಕಗೊಳಿಸಬೇಕು: ನಾಲ್ಕು ಪ್ರಮುಖ ಜಲಾಶಯಗಳ ಒಳಹರಿವು, ಸಂಗ್ರಹ, ಬಿಡುಗಡೆ, ಆವಿಯಾಗುವಿಕೆ, ಮಳೆಯ ಪ್ರಮಾಣ, ಮಧ್ಯಂತರ ಜಲಾನಯನ ಪ್ರದೇಶದ ಕೊಡುಗೆ ಮತ್ತು ಬಿಳಿಗುಂಡ್ಲುವಿನ ನೈಜ ಹರಿವಿನ ದತ್ತಾಂಶವನ್ನು ನಿಯಮಿತವಾಗಿ ಪ್ರಕಟಿಸಬೇಕು. ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸುವ ಲೆಕ್ಕಾಚಾರಗಳ ನಡುವಿನ ವ್ಯತ್ಯಾಸವನ್ನು ಸ್ವತಂತ್ರ ತಾಂತ್ರಿಕ ಪರಿಶೀಲನೆಯ ಮೂಲಕ ಬಗೆಹರಿಸಬೇಕು.
- ತಮಿಳುನಾಡಿನ ನೀರಿನ ಬೇಡಿಕೆಯನ್ನು ಬೆಳೆವಾರು ಪರಿಶೀಲಿಸಬೇಕು: ಸಾಂಬಾ ಸೇರಿದಂತೆ ವಿವಿಧ ಬೆಳೆಗಳ ವಿಸ್ತೀರ್ಣ, ಬಿತ್ತನೆ ದಿನಾಂಕ, ಬೆಳೆಯ ಹಂತ, ನೀರಾವರಿ ಅಗತ್ಯ, ಮಳೆ ಮತ್ತು ಅಂತರ್ಜಲದ ಲಭ್ಯತೆಯನ್ನು ಪರಿಶೀಲಿಸಬೇಕು. ಕೇವಲ ಒಟ್ಟು ಬೆಳೆ ಪ್ರದೇಶ ಅಥವಾ ಹಿಂದಿನ ವರ್ಷದ ಬೇಡಿಕೆಯನ್ನು ಆಧರಿಸಿ ನೀರು ಬಿಡುಗಡೆ ನಿರ್ಧರಿಸಬಾರದು. ಇದೇ ಮಾನದಂಡವನ್ನು ಕರ್ನಾಟಕದ ಬೆಳೆಗಳಿಗೂ ಅನ್ವಯಿಸಬೇಕು.
- ಪ್ರತಿ 15 ದಿನಗಳಿಗೊಮ್ಮೆ ಮರುಮೌಲ್ಯಮಾಪನಕ್ಕೆ ಒತ್ತಾಯಿಸಬೇಕು: ಒಂದು ಬಾರಿ ನೀಡಿದ ನಿರ್ದೇಶನವನ್ನು ಮುಂದಿನ ಅವಽಗೂ ಯಾಂತ್ರಿಕವಾಗಿ ಮುಂದುವರಿಸುವ ಬದಲು, ಪ್ರಾಧಿಕಾರವು ನೈಜ ಒಳಹರಿವು, ಜಲಾಶಯಗಳ ಸಂಗ್ರಹ ಮತ್ತು ಮಳೆಯ ಮುನ್ಸೂಚನೆಗಳನ್ನು ಆಧರಿಸಿ ನಿರ್ಧಾರವನ್ನು ಮರುಪರಿಶೀಲಿಸಬೇಕು. ಪ್ರತಿ ನಿರ್ಧಾರದಲ್ಲಿಯೂ ಕರ್ನಾಟಕದ ಕುಡಿಯುವ ನೀರಿನ ಅಗತ್ಯ ಮತ್ತು ಮುಂದಿನ ಬೇಸಿಗೆಯ ಭದ್ರತೆಯನ್ನು ಸ್ಪಷ್ಟವಾಗಿ ಪರಿಗಣಿಸಬೇಕು.
- ಕಾನೂನು ಹೋರಾಟವನ್ನು ನಿರ್ದಿಷ್ಟ ಬೇಡಿಕೆಗಳೊಂದಿಗೆ ನಡೆಸಬೇಕು: ಕರ್ನಾಟಕವು ನ್ಯಾಯಮಂಡಳಿಯ ಕ್ಲಾಸ್ VII ಮತ್ತು 2018ರ ಯೋಜನೆಯ ಕ್ಲಾಸ್ 10(3)( (iii), (viii)ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಾಧಿಕಾರದ ಮುಂದೆ ಲಿಖಿತ ಮನವಿ ಸಲ್ಲಿಸಬೇಕು. ಸಂಕಷ್ಟದ ಪ್ರಮಾಣ ನಿರ್ಧರಿಸುವ ವಿಧಾನ, ಬಳಸುವ ದತ್ತಾಂಶ, ರಾಜ್ಯಗಳ ಪಾಲಿನ ಅನುಪಾತ ಮತ್ತು ಆದ್ಯತೆಯ ನೀರಿನ ಅಗತ್ಯಗಳನ್ನು ಒಳಗೊಂಡ ಸ್ಪಷ್ಟ ಸಂಕಷ್ಟ ಹಂಚಿಕೆ ಸೂತ್ರವನ್ನು ರೂಪಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದಲ್ಲಿ, ಸೂಕ್ತ ಕಾನೂನು ವೇದಿಕೆಯಲ್ಲಿ ಈ ಬೇಡಿಕೆಗಳನ್ನು ಮಂಡಿಸಬೇಕು.
- ರಾಜ್ಯದೊಳಗಿನ ನೀರಿನ ನಿರ್ವಹಣೆಯನ್ನೂ ಸುಧಾರಿಸಬೇಕು: ಕುಡಿಯುವ ನೀರಿಗೆ ಆದ್ಯತೆ ನೀಡುವುದರ ಜೊತೆಗೆ, ನೀರಾವರಿ ನೀರಿನ ಸಮರ್ಥ ಬಳಕೆ, ಬೆಳೆ ಪದ್ಧತಿಗಳ ವೈಜ್ಞಾನಿಕ ಮರುಪರಿಶೀಲನೆ, ಕೆರೆಗಳ ಪುನರುಜ್ಜೀವನ, ಮಳೆನೀರು ಸಂಗ್ರಹ ಮತ್ತು ಸಂಸ್ಕರಿಸಿದ ನೀರಿನ ಮರುಬಳಕೆಗೆ ಆದ್ಯತೆ ನೀಡಬೇಕು. ಬರದ ವರ್ಷಗಳಲ್ಲಿ ಕಡಿಮೆ ನೀರು ಬಳಸಿ ಹೆಚ್ಚು ಉತ್ಪಾದನೆ ಪಡೆಯುವ ಕೃಷಿ ಪದ್ಧತಿಗಳನ್ನು ಉತ್ತೇಜಿಸಬೇಕು.
ಸಮತೋಲನದ ಪರಿಹಾರವೇ ಶಾಶ್ವತ ಮಾರ್ಗ: ಸುಪ್ರೀಂ ಕೋರ್ಟ್ 2018ರ ಫೆಬ್ರವರಿ 16ರಂದು ನೀಡಿದ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ 284.75 ಟಿಎಂಸಿ ಮತ್ತು ತಮಿಳುನಾಡಿಗೆ 404.25 ಟಿಎಂಸಿ ನೀರಿನ ಪಾಲನ್ನು ನಿಗದಿಪಡಿಸಿದೆ. ಈ ಕಾನೂನುಬದ್ಧ ಹಂಚಿಕೆಯನ್ನು ಎರಡೂ ರಾಜ್ಯಗಳು ಗೌರವಿಸಬೇಕು. ಅದೇ ಸಮಯದಲ್ಲಿ, ಸಂಕಷ್ಟದ ವರ್ಷದಲ್ಲಿ ನೀರಿನ ಕೊರತೆಯ ಹೊಣೆಯನ್ನು ನ್ಯಾಯಮಂಡಳಿಯೇ ಸೂಚಿಸಿರುವಂತೆ ಅನುಪಾತದ ಆಧಾರದಲ್ಲಿ ಹಂಚಿಕೊಳ್ಳಬೇಕು.
ತಮಿಳುನಾಡಿನ ರೈತರ ಬೆಳೆಗಳನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಕರ್ನಾಟಕದ ರೈತರ ಬದುಕು ಮತ್ತು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಜನರ ಕುಡಿಯುವ ನೀರಿನ ಭದ್ರತೆಯೂ ಅಷ್ಟೇ ಮುಖ್ಯ. ಒಂದು ರಾಜ್ಯದ ಸಂಕಷ್ಟವನ್ನು ಮತ್ತೊಂದು ರಾಜ್ಯದ ಹಕ್ಕುಗಳನ್ನು ನಿರಾಕರಿಸುವ ನೆಪವಾಗಿಸಬಾರದು. ಅದೇ ರೀತಿ, ಒಂದು ರಾಜ್ಯದ ನಿಗದಿತ ಪಾಲನ್ನು ಮತ್ತೊಂದು ರಾಜ್ಯದ ನೈಜ ಸಂಕಷ್ಟವನ್ನು ಕಡೆಗಣಿಸಿ ಜಾರಿಗೊಳಿಸುವುದೂ ನ್ಯಾಯಸಮ್ಮತವಲ್ಲ.
ಕರ್ನಾಟಕದ ಮುಂದಿನ ಹೆಜ್ಜೆ ಕೇವಲ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವುದಾಗಿರ ಬಾರದು. ಸಂಕಷ್ಟದ ಪ್ರಮಾಣವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ, ನ್ಯಾಯಮಂಡಳಿಯ ತೀರ್ಪು ಮತ್ತು 2018ರ ಯೋಜನೆಯಡಿ ಸಂಕಷ್ಟ ಹಂಚಿಕೆಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲು ಪ್ರಾಧಿಕಾರವನ್ನು ಬದ್ಧಗೊಳಿಸುವುದಾಗಿರಬೇಕು.
ನೀರು ಸಮೃದ್ಧವಾಗಿದ್ದಾಗ ಹಂಚಿಕೊಳ್ಳೋಣ; ನೀರಿನ ಸಂಕಷ್ಟ ಎದುರಾದಾಗಲೂ ಸಂಕಷ್ಟ ವನ್ನು ನ್ಯಾಯಯುತವಾಗಿ ಹಂಚಿಕೊಳ್ಳೋಣ. ಕಾವೇರಿ ವಿವಾದಕ್ಕೆ ದೀರ್ಘಕಾಲೀನ ಪರಿಹಾರ ದೊರೆಯಬೇಕಾದರೆ, ಕಾನೂನುಬದ್ಧ ಹಂಚಿಕೆಯ ಜೊತೆಗೆ ನ್ಯಾಯಸಮ್ಮತ ಸಂಕಷ್ಟ ಹಂಚಿಕೆ ಯೂ ಕಡ್ಡಾಯವಾಗಿ ಜಾರಿಯಾಗಬೇಕು.