ಯುದ್ಧಕಾಂಡ
ರವೀ ಸಜಂಗದ್ದೆ
ಅಂತಾರಾಷ್ಟ್ರೀಯ ರಾಜಕಾರಣ ಮತ್ತು ವ್ಯವಹಾರಗಳ ಚದುರಂಗದಾಟದಲ್ಲಿ ತೈಲವು ಕೇವಲ ಒಂದು ಇಂಧನವಲ್ಲ, ಅದು ಪ್ರತಿಯೊಂದು ರಾಷ್ಟ್ರದ ಆರ್ಥಿಕತೆಯ ನಾಡಿಮಿಡಿತ! ಮಧ್ಯಪ್ರಾಚ್ಯದಲ್ಲಿ ಎದ್ದಿರುವ ಯುದ್ಧದ ಕಿಡಿಯು ಭೌಗೋಳಿಕ ಗಡಿಗಳನ್ನು ದಾಟಿ ಜಾಗತಿಕ ಇಂಧನ ಮಾರುಕಟ್ಟೆಯ ಸ್ಥಿರತೆಯನ್ನೂ ದಹಿಸುತ್ತಿದೆ. ಈ ಯುದ್ಧದ ವ್ಯತಿರಿಕ್ತ ಪರಿಣಾಮಗಳು ಕಚ್ಚಾತೈಲದ ಬೆಲೆಯನ್ನು ಗಗನಕ್ಕೇರಿಸಿವೆ.
ಇಂಥ ಸಂಕಷ್ಟದ ಸಮಯದಲ್ಲಿ, ಸಾಮಾನ್ಯ ಜನರನ್ನು ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸುವ ಸದುದ್ದೇಶದಿಂದ ಕೇಂದ್ರ ಸರಕಾರವು ಕೈಗೊಂಡಿರುವ ‘ಸ್ಪೆಷಲ್ ಅಡಿಷನಲ್ ಎಕ್ಸೈಸ್ ಡ್ಯೂಟಿ’ ಕಡಿತದ ನಿರ್ಧಾರ ಮತ್ತು ಸಂದರ್ಭ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಪ್ರೇರಿತ ಹೇಳಿಕೆಗಳು ಅತ್ತಿಂದಿತ್ತ ಹರಿದಾಡುತ್ತಿವೆ.
ಮಧ್ಯಪ್ರಾಚ್ಯ ಪ್ರದೇಶವು ವಿಶ್ವದ ಅತಿದೊಡ್ಡ ತೈಲ ಉತ್ಪಾದನಾ ಕೇಂದ್ರ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಸಾರಿರುವ ಯುದ್ಧದಿಂದಾಗಿ ಅಲ್ಲಿ ಉಂಟಾದ ಅಸ್ಥಿರತೆಯು ಜಗತ್ತಿನ ಇತರೆಡೆಗೆ ತೈಲ ಮತ್ತು ಅನಿಲವನ್ನು ಪೂರೈಸುವ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಹೊರ್ಮುಜ್ ಜಲಸಂಧಿಯಂಥ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಉಂಟಾಗುವ ಅಡೆತಡೆಗಳು ಇಂಧನ ಸಾಗಾಟ ಮತ್ತು ವಿತರಣಾ ವೆಚ್ಚವನ್ನು ಹೆಚ್ಚಿಸಿವೆ. ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಅನಿರೀಕ್ಷಿತವಾಗಿ ಏರಿಕೆಯಾದುದರಿಂದ ಶೇ.85ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ಭಾರತದಂಥ ದೇಶಕ್ಕೆ ಇದು ಸತ್ವಪರೀಕ್ಷೆಯ ಕಾಲವಾಗಿದೆ.
ಇದು ಪೆಟ್ರೋಲ್ ಬೆಲೆಯ ಪ್ರಶ್ನೆ ಮಾತ್ರ ಆಗಿರದೆ, ಸಾರಿಗೆ ವೆಚ್ಚ, ಆ ಮೂಲಕ ಆಹಾರ ಪದಾರ್ಥಗಳ ಬೆಲೆ ಮತ್ತು ಒಟ್ಟಾರೆ ಹಣದುಬ್ಬರದ (Inflation) ಮೇಲೆ ವ್ಯತಿರಿಕ್ತ ಪರಿಣಾಮ ವನ್ನು ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಯಾದಾಗ, ಅದರ ಹೊರೆಯನ್ನು ಆಯಾ ದೇಶದ ಸರಕಾರಗಳು ಗ್ರಾಹಕರಿಗೆ ವರ್ಗಾಯಿಸು ವುದು ಸಾಮಾನ್ಯ ಪದ್ಧತಿ. ಆದರೆ, ಪ್ರಸಕ್ತ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವು ‘ಸ್ಪೆಷಲ್ ಅಡಿಷನಲ್ ಎಕ್ಸೈಸ್ ಡ್ಯೂಟಿ’ಯನ್ನು ಕಡಿತಗೊಳಿಸುವ ಮೂಲಕ ಒಂದು ವಿಭಿನ್ನ ಆರ್ಥಿಕ ತಂತ್ರವನ್ನು ಅನು ಸರಿಸಿದೆ. ಈ ಹಿಂದೆ ಪೆಟ್ರೋಲ್‌ಗೆ 13 ರುಪಾಯಿ ಮತ್ತು ಡೀಸೆಲ್‌ಗೆ 10 ರುಪಾಯಿಯಷ್ಟು ಇದ್ದ ಈ ತೆರಿಗೆ ಪೆಟ್ರೋಲ್‌ಗೆ 3 ರುಪಾಯಿ ಆಗಿದೆ; ಡೀಸೆಲ್ ಮೇಲಿನ ಈ ತೆರಿಗೆಯನ್ನು ಮಾರ್ಚ್ 27ರಿಂದಲೇ ಶೂನ್ಯಕ್ಕೆ ತರಲಾಗಿದೆ. ಬಹುಶಃ ನಿಗದಿಯಾಗಿರುವ ಪಂಚ ರಾಜ್ಯಗಳ ಚುನಾವಣೆಯ ಮತದಾನ ಮತ್ತು ಫಲಿತಾಂಶದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವುದನ್ನು ತಡೆಯುವ ಸಲುವಾಗಿ ಒಂದಷ್ಟು ರಾಜಕೀಯ ಲೆಕ್ಕಾಚಾರಗಳು ಈ ನಿರ್ಧಾರದ ಹಿಂದೆ ಇರುವಂತೆ ಕಾಣುತ್ತಿದೆ!
ಅದೇನೇ ಇರಲಿ, ಸದ್ಯಕ್ಕೆ ನಾವು ಗ್ರಾಹಕರು ಬೆಲೆ ಏರಿಕೆಯಿಂದ ಬಚಾವ್! ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಅದು ಸರಕುಗಳ ಸಾಗಾಣಿಕೆ ವೆಚ್ಚವನ್ನು ಹೆಚ್ಚಿಸು ತ್ತದೆ. ಇದನ್ನು ತಡೆಯಲು ತೆರಿಗೆ ಕಡಿತವು ಸುಲಭ ಮತ್ತು ಸುರಕ್ಷಿತ ವಿಧಾನ. ಕೋವಿಡ್ ಕಾಲಾನಂತರದಲ್ಲಿ ನಿಧಾನವಾಗಿ ಚೇತರಿಸಿಕೊಂಡು ಹೋಗುತ್ತಿರುವ ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಎಳೆಯುವುದನ್ನು ತಪ್ಪಿಸುವುದೂ ಸರಕಾರದ ಉದ್ದೇಶ ವಾಗಿರಲೂಬಹುದು.
ಸರಕಾರವು ತನ್ನ ಈ ‘ಜನಸ್ನೇಹಿ’ ನಿರ್ಧಾರಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಯಾಕೆಂದರೆ ತೈಲದ ಮೇಲೆ ವಿಧಿಸುವ ಅಬಕಾರಿ ಸುಂಕವು ಸರಕಾರದ ಪ್ರಮುಖ ಆದಾಯದ ಮೂಲ ಗಳಲ್ಲಿ ಒಂದು. ತಜ್ಞರ ಅಂದಾಜಿನಂತೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಪ್ರತಿ ಒಂದು ರುಪಾಯಿ ಕಡಿತವಾದರೂ, ವಾರ್ಷಿಕವಾಗಿ ಕೇಂದ್ರದ ಬೊಕ್ಕಸಕ್ಕೆ ಸುಮಾರು 3000 ದಿಂದ 15000 ಕೋಟಿ ರುಪಾಯಿಗಳಷ್ಟು ಆದಾಯ ನಷ್ಟವಾಗುತ್ತದೆ. ಪ್ರಸ್ತುತ ಮಧ್ಯ ಪ್ರಾಚ್ಯ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಡಲಾದ ಗಣನೀಯ ಕಡಿತದಿಂದಾಗಿ, ಒಟ್ಟಾರೆ ರಾಜಸ್ವ ನಷ್ಟವು 30000 ದಿಂದ 50000 ಕೋಟಿ ರುಪಾಯಿ ಗಳನ್ನು ದಾಟುವ ಸಾಧ್ಯತೆಯಿದೆ.
ಈ ನಷ್ಟವು ಸರಕಾರದ ವಿತ್ತೀಯ ಕೊರತೆಯ ಮೇಲೆ ಒತ್ತಡ ಹೇರಲಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣದಲ್ಲಿ ಕಡಿತ ಮಾಡುವ ಅಥವಾ ಮಾರುಕಟ್ಟೆಯಿಂದ ಸಾಲ ಪಡೆಯುವ ಅನಿವಾರ್ಯತೆ ಎದುರಾಗಬಹುದು. ಸರಕಾರವು ಈ ಕೊರತೆಯನ್ನು ಹೇಗೆ ತುಂಬಲಿದೆ ಎನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.
ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ತೈಲ ಬೆಲೆ ಏರಿಕೆಯನ್ನು ಮಾರು ಕಟ್ಟೆಯ ನೇರ ಏರಿಳಿತಕ್ಕೆ ಜೋಡಿಸಿಕೊಂಡು ಕೈತೊಳೆದುಕೊಂಡಿವೆ. ಉದಾಹರಣೆಗೆ, ಯುರೋಪಿನ ಹಲವು ದೇಶಗಳಲ್ಲಿ ತೈಲ ಬೆಲೆಯು ಆಕಾಶಕ್ಕೆ ಏರಿದ್ದರೂ ಅಲ್ಲಿನ ಸರಕಾರ ಗಳು ತೆರಿಗೆ ಕಡಿತಕ್ಕೆ ಮುಂದಾಗಿಲ್ಲ. ಆದರೆ ಭಾರತದಲ್ಲಿ ತೈಲ ಬೆಲೆಯು ಕೇವಲ ಆರ್ಥಿಕತೆ ಯಲ್ಲ, ಅದೊಂದು ಭಾವನಾತ್ಮಕ ಮತ್ತು ರಾಜಕೀಯ ಕೆಸರೆರಚಾಟದ ವಿಚಾರವೂ ಹೌದು! ಭಾರತದಲ್ಲಿ ತೈಲ ಬೆಲೆಗಳ ಏರಿಳಿತ ನಿರ್ಧಾರವು ಇನ್ನೂ ಕೇಂದ್ರ ಸರಕಾರದ ನಿಯಂತ್ರಣದ ಇದೆ.
2008ರ ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿ ಮತ್ತು 2022ರ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲೂ ಭಾರತವು ಇಂಥದ್ದೇ ಸವಾಲನ್ನು ಎದುರಿಸಿತ್ತು. ಅಂದು ‘ತೈಲ ಬಾಂಡ್’ಗಳ ಮೂಲಕ ಹೊರೆ ನಿರ್ವಹಿಸಲಾಗಿದ್ದರೆ, ಇಂದು ‘ನೇರ ತೆರಿಗೆ ಕಡಿತ’ದ ಮೂಲಕ ಸರಕಾರವು ತಾನೇ ಈ ಹೊರೆಯನ್ನು ಹೊರುತ್ತಿದೆ. ಇದು ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಶಿಸ್ತಿಗೆ ಸವಾಲಾಗಿದ್ದರೂ, ಅಲ್ಪಾವಧಿಯಲ್ಲಿ ಜನರ ಕೊಳ್ಳುವ ಶಕ್ತಿಯನ್ನು ಕಾಪಾಡುತ್ತದೆ. ಈ ತೆರಿಗೆ ಕಡಿತವು ಕೇವಲ ‘ತಾತ್ಕಾಲಿಕ ಮದ್ದು’.
ಯುದ್ಧವು ದೀರ್ಘಕಾಲ ಮುಂದುವರಿದರೆ ಎಷ್ಟು ದಿನಗಳ ಕಾಲ ಸರಕಾರವು ಈ ಹೊರೆ ಯನ್ನು ಹೊರಲು ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ. ಇಂಥ ಬಿಕ್ಕಟ್ಟುಗಳು ನಮಗೆ ಪರ್ಯಾಯ ವ್ಯವಸ್ಥೆಗಳಾದ ಇಲೆಕ್ಟ್ರಿಕ್ ವಾಹನಗಳು ಮತ್ತು ಹಸಿರು ಹೈಡ್ರೋಜನ್ ನತ್ತ ವಾಲಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತವೆ. ಇದರ ಜತೆಗೆ ಭಾರತವು ತನ್ನ ಆಯಕಟ್ಟಿನ ತೈಲ ಸಂಗ್ರಹಾಗಾರಗಳನ್ನು (Strategic Petroleum Reserves)* ಬಲಪಡಿಸು ವುದು ಮತ್ತು ತೈಲ ಸಂಗ್ರಹ ಸಾಮರ್ಥ್ಯವನ್ನು ವೃದ್ಧಿಸುವುದು ಅತ್ಯಗತ್ಯವಾಗಿದೆ.
ಮಧ್ಯಪ್ರಾಚ್ಯದ ರಣಹೂಂಕಾರದ ನಡುವೆ, ತನ್ನ ಆರ್ಥಿಕ ನೌಕೆಯನ್ನು ಮುಳುಗದಂತೆ ಕಾಪಾಡಿಕೊಳ್ಳುವುದು ಭಾರತದ ಮುಂದಿರುವ ಅತಿದೊಡ್ಡ ಸವಾಲು. ಕೇಂದ್ರ ಸರಕಾರವು ರಾಜಸ್ವ ನಷ್ಟವನ್ನು ಲೆಕ್ಕಿಸದೆ ಸುಂಕವನ್ನು ಕಡಿತಗೊಳಿಸಿರುವುದು ಒಂದು ‘ಸಂವೇದನಾ ಶೀಲ ನಡೆ’ಯಾದರೂ, ಇದು ಆರ್ಥಿಕತೆಯ ಮೇಲೆ ನಿರಂತರ ಹಾಕುವ ಒತ್ತಡವನ್ನು ನಿರ್ಲಕ್ಷಿಸುವಂತಿಲ್ಲ.
ಸರಕಾರದ ಬೊಕ್ಕಸ ಖಾಲಿಯಾಗುವ ಅಪಾಯ ಒಂದೆಡೆಯಾದರೆ, ಜನರ ಕೈಯಲ್ಲಿ ಹಣ ವಿಲ್ಲದೆ ಮಾರುಕಟ್ಟೆ ಮಂದವಾಗುವುದು, ಸ್ಥಗಿತಗೊಳ್ಳುವುದು ಮತ್ತೊಂದು ದೊಡ್ಡ ಮಟ್ಟದ ಅಪಾಯ. ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ಕೇಂದ್ರ ಸರಕಾರದ ಈ ಕಸರತ್ತು ಯಶಸ್ವಿಯಾಗಲಿ ಎಂಬುದಷ್ಟೇ ಆಶಯ.
ಶಕ್ತಿಯುತ ಆರ್ಥಿಕತೆಯು ಕೇವಲ ಅಂಕಿ-ಅಂಶಗಳಲ್ಲಿಲ್ಲ, ಬದಲಾಗಿ ಅದು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೇಂದ್ರ ಸರಕಾರದ ನಿರ್ಧಾರಗಳಲ್ಲಿದೆ. ಈ ಯುದ್ಧವು ಶೀಘ್ರದ ಶಮನವಾಗಿ, ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಮರಳುವವರೆಗೆ ಭಾರತದ ಈ ‘ರಕ್ಷಣಾತ್ಮಕ ಆರ್ಥಿಕ ನೀತಿ’ ಅನಿವಾರ್ಯವೂ ಹೌದು, ಅವಶ್ಯಕವೂ ಹೌದು.
ನಮ್ಮ ಖರ್ಚು-ವೆಚ್ಚಗಳನ್ನು ನಿಯಂತ್ರಿಸಿ ಆ ಮೂಲಕ ದೇಶದ ಸ್ಥಿರತೆಗೆ ಬಲ, ಬೆಲೆ ಮತ್ತು ಬೆಂಬಲ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದು ಎನ್ನುವ ನೆನಪು ಇರಲಿ. ಸರ್ವೇ ಸಂತು ನಿರಾಮಯಾಃ...
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)