ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

US-Israel-Iran War: ಹೊರ್ಮುಜ್ ಜಲಸಂಧಿಯ ಮೂಲಕ ಆಗಮಿಸುತ್ತಿವೆ ಭಾರತೀಯ ಧ್ವಜ ಹೊತ್ತ 2 ಬೃಹತ್‌ ಎಲ್‌ಪಿಜಿ ಹಡಗುಗಳು; ಇಂಧನ ಬಿಕ್ಕಟ್ಟು ಶೀಘ್ರ ಅಂತ್ಯ?

Middle East conflict: ಅಡುಗೆ ಅನಿಲವನ್ನು ಹೊತ್ತ ಎರಡು ಭಾರತೀಯ ಹಡಗುಗಳು ಪ್ರಸ್ತುತ ಹೊರ್ಮುಜ್ ಜಲಸಂಧಿಯ ಮೂಲಕ ಆಗಮಿಸುತ್ತಿವೆ. ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹಡಗುಗಳಿಗೆ ಸುರಕ್ಷಿತ ಸಾಗಣೆಗೆ ಅನುಮೋದನೆ ಸಿಕ್ಕ ನಂತರ ಇರಾನ್‌ನ ಹೊರ್ಮುಜ್ ಜಲಸಂಧಿಯ ಮೂಲಕ ಚಲಿಸುತ್ತಿವೆ ಎಂದು ತಿಳಿದುಬಂದಿದೆ.

ಭಾರತಕ್ಕೆ ಆಗಮಿಸುತ್ತಿದೆ 2 ಬೃಹತ್‌ ಎಲ್‌ಪಿಜಿ ಹಡಗು

ಸಾಂದರ್ಭಿಕ ಚಿತ್ರ -

Priyanka P
Priyanka P Mar 23, 2026 7:31 PM

ನವದೆಹಲಿ, ಮಾ. 23: ಅಡುಗೆ ಅನಿಲವನ್ನು ಹೊತ್ತು, ಭಾರತೀಯ ಧ್ವಜ ಹೊಂದಿರುವ 2 ಹಡಗುಗಳು ಪ್ರಸ್ತುತ ಇರಾನ್‌ನ ಹೊರ್ಮುಜ್ ಜಲಸಂಧಿಯ (Strait of Hormuz) ಹಾದು ಬರುತ್ತಿದ್ದು, ನಿರೀಕ್ಷೆ ಮೂಡಿಸಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಭಾರತದಲ್ಲಿ ಎಲ್‌ಪಿಜಿ (LPG) ಕೊರತೆಯನ್ನು ನಿವಾರಿಸುವ ಭರವಸೆಯನ್ನು ಇವು ಹುಟ್ಟು ಹಾಕಿವೆ.

ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹಡಗುಗಳ ಸುರಕ್ಷಿತ ಸಾಗಣೆಗೆ ಅನುಮೋದನೆ ಲಭಿಸಿದ ನಂತರ ಅವು ಹೊರ್ಮುಜ್ ಜಲಸಂಧಿಯ ಮೂಲಕ ಭಾರತದತ್ತ ಚಲಿಸುತ್ತಿವೆ. ಈ ಹಡಗುಗಳು ಬೃಹತ್‌ ಪ್ರಮಾಣದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಹೊತ್ತು ಬರುತ್ತಿವೆ. ಇದನ್ನು ಭಾರತದಲ್ಲಿ ಅಡುಗೆ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

ಎರಡೂ ಹಡಗುಗಳು ಸೋಮವಾರ (ಮಾ. 23) ಮುಂಜಾನೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದವು. ಯುಎಇ ಕರಾವಳಿಯಿಂದ ಪ್ರಯಾಣ ಬೆಳೆಸಿ ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ಬಳಿ ಇರಾನ್‌ನ ಕರಾವಳಿಯ ಹತ್ತಿರ ಸಾಗಿದವು.

ಹೊರ್ಮುಜ್ ತೆರೆಯದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದಿದ್ದ ಟ್ರಂಪ್‌ಗೆ ಇರಾನ್‌ ತಿರುಗೇಟು; ಗಲ್ಫ್‌ನಲ್ಲಿ ದಾಳಿ ತೀವ್ರಗೊಳಿಸುವ ಎಚ್ಚರಿಕೆ

ವರದಿಗಳ ಪ್ರಕಾರ, ಹೊರ್ಮುಜ್ ಜಲಸಂಧಿಯನ್ನು ದಾಟಲು ಸಾಮಾನ್ಯವಾಗಿ ಸುಮಾರು 14 ಗಂಟೆ ಬೇಕಾಗುತ್ತದೆ. ತೈಲ ಮತ್ತು ಅನಿಲ ಸಾಗಣೆಗೆ ಪ್ರಮುಖ ಜಾಗತಿಕ ಮಾರ್ಗವಾದ ಈ ಜಲಸಂಧಿಯು ಸದ್ಯ ಜಗತ್ತಿನ ಗಮನ ಸೆಳೆದಿದೆ. ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ದಾಳಿ ನಡೆಸಿದ ಬಳಿಕ ಇರಾನ್‌ ಈ ಜಲಸಂಧಿಯನ್ನು ಸ್ಥಗಿತಗೊಳಿಸಿದೆ. ಮಾತುಕತೆಗಳ ನಂತರ ಭಾರತ ಸೇರಿದಂತೆ ಕೆಲವು ದೇಶಗಳೊಂದಿಗೆ ಸಂಪರ್ಕ ಹೊಂದಿದ ಆಯ್ದ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ಮಾಡಿಕೊಟ್ಟಿದೆ.

ಇಸ್ರೇಲ್-ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ಹೊರ್ಮುಜ್‌ ಜಲಮಾರ್ಗ ಮುಕ್ತ: ಇರಾನ್ ಘೋಷಣೆ

ಇರಾನ್ ತನ್ನ ಕರಾವಳಿಯಲ್ಲಿನ ಹಡಗುಗಳ ಸಂಚಾರವನ್ನು ನಿಯಂತ್ರಿಸುತ್ತಿದೆ. ಸಂಘರ್ಷ ಉಲ್ಬಣಗೊಳ್ಳುವ ಸ್ವಲ್ಪ ಮೊದಲು, ಫೆಬ್ರವರಿ ಅಂತ್ಯದಲ್ಲಿ ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹದಡಗುಗಳು ಪರ್ಷಿಯನ್ ಕೊಲ್ಲಿಯನ್ನು ಪ್ರವೇಶಿಸಿದ್ದವು. ಜಗ್ ವಸಂತ್ ಕುವೈತ್‌ನಿಂದ ಎಲ್‌ಪಿಜಿಯನ್ನು ಲೋಡ್ ಮಾಡಿದರೆ, ಪೈನ್ ಗ್ಯಾಸ್ ಯುಎಇಯ ರುವೈಸ್‌ನಿಂದ ತನ್ನ ಸರಕನ್ನು ತುಂಬಿಕೊಂಡಿದೆ.

ಸಂಘರ್ಷ ಆರಂಭವಾದ ಬಳಿಕ ಎರಡೂ ಹಡುಗುಗಳು ಸಿಲುಕಿಕೊಂಡಿದ್ದವು. ಇದೀಗ ಭಾರತದತ್ತ ಪ್ರಯಾಣ ಆರಂಭಿಸಿವೆ. ಈ ತಿಂಗಳ ಆರಂಭದಲ್ಲಿ, ಭಾರತೀಯ ಧ್ವಜ ಹೊತ್ತ ಇತರ ಎರಡು ಎಲ್‌ಪಿಜಿ ವಾಹಕಗಳು ಜಲಸಂಧಿಯ ಮೂಲಕ ಭಾರತದ ಕರಾವಳಿ ಪ್ರವೇಶಿಸಿದ್ದವು.