ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basavaraj Shivappa Giraganvi Column: ಮಾರಕವಾಗದಿರಲಿ ಕೇಂದ್ರದ ಎಥೆನಾಲ್‌ ನೀತಿ

ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಅತಿ ಹೆಚ್ಚು ಎಥೆನಾಲ್ ಉತ್ಪಾದಿಸುವ ಕರ್ನಾಟಕದ ರೈತರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಒಂದು ವೇಳೆ ಈ ಆದೇಶ ವನ್ನು ಕೇಂದ್ರ ಸರಕಾರವು ಮರುಪರಿಶೀಲಿಸದಿದ್ದಲ್ಲಿ ದೇಶದಲ್ಲಿರುವ ಅಂದಾಜು ೬೦ ಮಿಲಿಯನ್ ಹೆಕ್ಟೇರ್ ಪ್ರದೇಶ ದಲ್ಲಿರುವ ಕಬ್ಬು ಬೆಳೆಗಾರರಿಗೆ ಯೋಗ್ಯವಾದ ಹಾಗೂ ಸಮಯಾನುಸಾರ ಕಬ್ಬಿನ ಬೆಲೆ ದೊರೆಯುವುದು ಅಸಾಧ್ಯ.

ಕೃಷಿರಂಗ

ಬಸವರಾಜ ಶಿವಪ್ಪ ಗಿರಗಾಂವಿ

ಕೇಂದ್ರ ಸರಕಾರವು ದೇಶದಲ್ಲಿ ಹೆಚ್ಚುತ್ತಿರುವ ಧಾನ್ಯಗಳ ಸಂಗ್ರಹದಿಂದ ಎಥೆನಾಲ್ ಉತ್ಪಾದನೆ ಯನ್ನು ಉತ್ತೇಜಿಸಲು ಮತ್ತು ಏರುಗತಿಯಲ್ಲಿರುವ ಸಕ್ಕರೆ ದರವನ್ನು ನಿಯಂತ್ರಿಸಲು 2025-26ನೇ ಸಾಲಿಗಾಗಿ ಹೊಸ ಎಥೆನಾಲ್ ನೀತಿಯನ್ನು ಜಾರಿಗೊಳಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ದೇಶ ದಲ್ಲಿರುವ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳು 2025-26ರ ಕಬ್ಬು ನುರಿಸುವ ಹಂಗಾಮಿ ನಲ್ಲಿ ಕಬ್ಬು ರಸ(ಜ್ಯೂಸ್)ದಿಂದ ಹಾಗೂ ಸಕ್ಕರೆ ಪಾಕದಿಂದ (ಸಿರಪ್) ಒಟ್ಟು ಸಾಮರ್ಥ್ಯದ ಶೇ.33ರಷ್ಟು ಮಾತ್ರ ಎಥೆನಾಲ್ ಉತ್ಪಾದಿಸುವಂತೆ ಆದೇಶಿಸಿದೆ.

ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಅತಿ ಹೆಚ್ಚು ಎಥೆನಾಲ್ ಉತ್ಪಾದಿಸುವ ಕರ್ನಾಟಕದ ರೈತರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಒಂದು ವೇಳೆ ಈ ಆದೇಶ ವನ್ನು ಕೇಂದ್ರ ಸರಕಾರವು ಮರುಪರಿಶೀಲಿಸದಿದ್ದಲ್ಲಿ ದೇಶದಲ್ಲಿರುವ ಅಂದಾಜು ೬೦ ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿರುವ ಕಬ್ಬು ಬೆಳೆಗಾರರಿಗೆ ಯೋಗ್ಯವಾದ ಹಾಗೂ ಸಮಯಾನುಸಾರ ಕಬ್ಬಿನ ಬೆಲೆ ದೊರೆಯುವುದು ಅಸಾಧ್ಯ.

ಈಗಾಗಲೇ ಕರ್ನಾಟಕದಲ್ಲಿ ಕಬ್ಬು ಕ್ಷೇತ್ರವಿರುವ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಯಾಗಿದೆ. ಇದರಿಂದ ಅತಿಹೆಚ್ಚು ಸೂರ್ಯಪ್ರಕಾಶ ಬಯಸುವ ಕಬ್ಬಿಗೆ ಬೇಡಿಕೆಯಂತೆ ಸೂರ್ಯ ಪ್ರಕಾಶ ಮತ್ತು ಆರ್ದ್ರತೆ ಲಭಿಸಿಲ್ಲ. ಇದರಿಂದ ಕಬ್ಬು ಕ್ಷೇತ್ರ ಹೆಚ್ಚಾಗಿದ್ದರೂ ಉತ್ಪನ್ನ ಕಡಿಮೆ ಯಾಗುವ ಅಂದಾಜಿದೆ.

ಹೀಗಾಗಿ ಸದ್ಯ ಕಬ್ಬು ಬೆಳೆಗಾರರಿಗೆ ಕಡಿಮೆ ಇಳುವರಿಯಿಂದ ನಷ್ಟವಾದರೆ, ಕೆಲಸದ ದಿನಗಳ ಕುಸಿತ ಹಾಗೂ ಗುಣಮಟ್ಟದ ಕಬ್ಬಿನ ಕೊರತೆಯಿಂದ ಸಕ್ಕರೆ ಉದ್ದಿಮೆಗೂ ನಷ್ಟವಾಗಲಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವು ಹೊರಡಿಸಿದ ಈ ಆದೇಶವು ರೈತರಿಗೆ ಹಾಗೂ ಕಾರ್ಖಾನೆಗಳಿಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಓದಿ: Basavaraj Shivappa Giraganvi Column: ಕಬ್ಬು ಕೃಷಿಕರು ಅನುಭವಿಸುತ್ತಿರುವ ಅಸ್ವಾಭಾವಿಕ ಹಾನಿಗಳು

2000ನೇ ಇಸವಿಯಲ್ಲಿ ದೇಶವು ವಿದ್ಯುತ್ ಕೊರತೆ ಅನುಭವಿಸುತ್ತಿತ್ತು. ಆಗ ಕೇಂದ್ರ ಸರಕಾರವು ಹೆಚ್ಚಿನ ದರದಲ್ಲಿ ಸ್ವತಃ ವಿದ್ಯುತ್ ಖರೀದಿಸುವುದಾಗಿ ಹೇಳಿ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಉತ್ಪಾದನೆಗಾಗಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಿಸಿತು. ಆರಂಭದಲ್ಲಿ ಪ್ರತಿ ಯುನಿಟ್‌ಗೆ ೧೩ ರುಪಾಯಿ ದರದಂತೆ ಖರೀದಿಸಿ ಮುಂದೆ ಕೆಲವೇ ತಿಂಗಳುಗಳಲ್ಲಿ ೧೧ ರು., ನಂತರ ದಲ್ಲಿ ೯ ರು. ಹೀಗೆಯೆ ಕಡಿಮೆ ಮಾಡುತ್ತ ಸದ್ಯ ಕೇವಲ ೨.೬೦ ರು.ಗೆ ತಂದು ನಿಲ್ಲಿಸಿದೆ.

ಇದರಿಂದಾಗಿ ಕಾರ್ಖಾನೆಗಳು ವಿದ್ಯುತ್ ಅನ್ನು ಹಲವು ಷರತ್ತುಗಳೊಂದಿಗೆ ಖಾಸಗಿಯಾಗಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಇದೇ ಮಾದರಿಯಂತೆ ಕಳೆದ 2017-18ರ ವರ್ಷದಲ್ಲಿ ಕೇಂದ್ರ ಸರಕಾರವು ಇಂಧನ ಸ್ವಾವಲಂಬನೆ, ರೈತರ ಸಂರಕ್ಷಣೆ, ಕಾರ್ಖಾನೆಗಳ ಪುನಶ್ಚೇತನ, ವಿದೇಶಿ ವಿನಿಮಯ ಉಳಿತಾಯ, ಹಸಿರು ಇಂಧನ ಉತ್ಪಾದನೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವು ಸಮಂಜಸವೆನಿಸುವ ಕಾರಣಗಳನ್ನು ಹೇಳಿದ್ದರಿಂದ, ದೇಶಾದ್ಯಂತದ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದವು.

ಇದರ ಪರಿಣಾಮವಾಗಿ, ಮೊದಲೇ ಸಂಕಷ್ಟದಲ್ಲಿದ್ದ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರಕಾರದ ಎಥೆನಾಲ್ ಉತ್ಪಾದನೆ ಕುರಿತಾದ ಅಂದಿನ ಆಶಾದಾಯಕ ನೀತಿಗೆ ಮನಸೋತು ಸಾಲದ ಹೊರೆ ಯನ್ನು ಮತ್ತಷ್ಟು ಹೆಚ್ಚಿಸಿಕೊಂಡು, ಡಿಸ್ಟಿಲರಿ ಘಟಕಗಳನ್ನು ಸ್ಥಾಪಿಸಿದವು.

ಆದರೆ 2022-23ನೇ ಸಾಲಿನಲ್ಲಿ, ಅತಿಯಾಗಿ ಎಥೆನಾಲ್ ಉತ್ಪಾದಿಸದಂತೆ ಸರಕಾರ ನಿರ್ಬಂಧಿಸಿತು. ಮತ್ತೆ ಈಗ ೨೦೨೫-೨೬ನೇ ಸಾಲಿನಲ್ಲಿ ಎಥೆನಾಲ್ ಉತ್ಪಾದನೆ ನಿಯಂತ್ರಿಸಲು ಆದೇಶಿಸಿದೆ. ಭವಿಷ್ಯದಲ್ಲಿ ಎಥೆನಾಲ್ ಉತ್ಪಾದನೆಯೂ ವಿದ್ಯುತ್ ಉತ್ಪಾದನೆಯಂತಾಗ ಬಹುದೆಂದು ಅಂದಾ ಜಿಸಲಾಗುತ್ತಿದೆ.

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಕ್ಕರೆ ದೊರೆಯಲೆಂಬುದು ಕೇಂದ್ರ ಸರಕಾರದ ನಿಲುವಾಗಿದೆ. ಆದರೆ ಸಕ್ಕರೆ ದರವು ಕಡಿಮೆಯಾದಾಗ ಅದರ ನಿಜವಾದ ಉಪಯೋಗವನ್ನು ಮಿಠಾಯಿ ಉದ್ದಿಮೆ, ಬಿಸ್ಕತ್ತು, ಚಾಕೊಲೇಟ್ ಹಾಗೂ ತಂಪು ಪಾನೀಯ ಕಂಪನಿಗಳು ಪಡೆಯುತ್ತವೆ. ಜನ ಸಾಮಾನ್ಯರು ದೇಶದಲ್ಲಿ ಬಳಕೆಯಾಗುವ ಶೇ.90 ರಷ್ಟು ಸಕ್ಕರೆಯನ್ನು ನೇರವಾಗಿ ಉಪಯೋಗಿಸುವುದಿಲ್ಲ.

ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಸರಕಾರವು ವಾಣಿಜ್ಯ ಬಳಕೆಗಾಗಿ ಉಪಯೋಗಿಸುತ್ತಿರುವ ಸಕ್ಕರೆ ಮಾರಾಟಕ್ಕೆ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಬೇಕು. ಸಕ್ಕರೆಯ ತಲಾ ಬಳಕೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಬಳಸುವ ಸಕ್ಕರೆಗೆ ಪ್ರತ್ಯೇಕ ದರ ನಿಗದಿಯಾಗಬೇಕು. ಅಂದಾಗ ಮಾತ್ರ ಕೇಂದ್ರದ ಈ ಉದ್ದೇಶವು ಪರಿಪೂರ್ಣವಾಗಿ ಸಾಕಾರ ಗೊಳ್ಳುತ್ತದೆ.

ತಪ್ಪಿದಲ್ಲಿ, ಬದುಕುಳಿಯಲು ಸಾಕಷ್ಟು ಶ್ರಮ ಹಾಕುತ್ತಿರುವ ಸಕ್ಕರೆ ಉದ್ದಿಮೆ ಹಾಗೂ ಕಬ್ಬು ಬೆಳೆಗಾರರು ಬಲಿಪಶುವಾಗುವುದರಲ್ಲಿ ಸಂದೇಹವಿಲ್ಲ. ಕೇಂದ್ರದ ಹೊಸ ನೀತಿಯಿಂದ ಈ ಕೆಳಗಿನ ಸಂಕಷ್ಟಗಳು ಎದುರಾಗುವ ಅಪಾಯವಿದೆ: ಎಥೆನಾಲ್ ದರ ಮತ್ತು ಮಾರಾಟವು ನಿಶ್ಚಿತ ವಾಗಿದೆ, ಆದರೆ ಸಕ್ಕರೆ ದರ ಮತ್ತು ಮಾರಾಟವು ಅನಿಶ್ಚಿತವಾಗಿರುತ್ತದೆ.

ಭಾರತೀಯ ಆಯಿಲ್ ಕಂಪನಿಗಳು ಎಥೆನಾಲ್ ಸ್ವೀಕರಿಸಿದ ೨೧ ದಿನಗಳಲ್ಲಿ ಹಣ ಮರು ಪಾವತಿಸುವುದರಿಂದ ರೈತರಿಗೆ ಬೇಗನೆ ಕಬ್ಬು ಬೆಲೆ ಪಾವತಿಸಲು ಸಹಕಾರಿಯಾಗುತ್ತದೆ. ಕೇವಲ ಸಕ್ಕರೆಯ ಉತ್ಪಾದನೆ ಮಾಡುವುದರಿಂದ ಸಮಯಾನುಸಾರ ಯೋಗ್ಯವಾದ ಬೆಲೆಯನ್ನು ಕೊಡಲು ಅಸಾಧ್ಯವಾಗುತ್ತದೆ.

ಇತ್ತೀಚೆಗಷ್ಟೆ ಹಲವಾರು ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಘಟಕಗಳ ನಿರ್ಮಾಣಕ್ಕಾಗಿ ಕೋಟ್ಯಂತರ ಹಣ ವಿನಿಯೋಗಿಸಿವೆ. ಆರಂಭದಲ್ಲಿಯೇ ಹೀಗೆ ಎಥೆನಾಲ್ ಉತ್ಪಾದನೆ ಸ್ಥಗಿತ ವಾಗುವುದರಿಂದ ಕಾರ್ಖಾನೆಗಳು ತೀವ್ರ ನಷ್ಟವನ್ನು ಅನುಭವಿಸುತ್ತವೆ.

ಎಥೆನಾಲ್ ಉತ್ಪಾದನೆಯಿಂದಾಗಿ ದೇಶಾದ್ಯಂತ ಕಬ್ಬು ಬೆಳೆಗಾರರ ಬಾಕಿ ಪ್ರಮಾಣವು ಕಡಿಮೆ ಯಾಗಿದೆ. ಆದರೆ ಎಥೆನಾಲ್ ಉತ್ಪಾದನೆ ಕಡಿಮೆ ಮಾಡುವುದರಿಂದ ಮತ್ತೆ ಬಾಕಿ ಪ್ರಮಾಣವು ಹೆಚ್ಚಾಗಬಹುದು. ಸಕ್ಕರೆ ಕಾರ್ಖಾನೆಗಳು ಕೇವಲ ಸಕ್ಕರೆಯನ್ನು ಉತ್ಪಾದನೆ ಮಾಡುವುದರಿಂದ ಸಕ್ಕರೆಯ ಬೆಲೆ ಕುಸಿತವಾಗುವ ಸಂಭವವಿರುತ್ತದೆ.

ಭಾರತವು ಪ್ರಪಂಚದಲ್ಲಿಯೆ ಅತೀ ಹೆಚ್ಚು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿರು ವುದರಿಂದ ದೇಶದ ಬಹುಪಾಲು ವಿದೇಶಿ ವಿನಿಮಯವು ಖರ್ಚಾಗುತ್ತಿದೆ. ಆದರೆ ೨೦೨೪-೨೫ನೇ ಸಾಲಿನ ಒಂದೇ ವರ್ಷದಲ್ಲಿ ಎಥೆನಾಲ್ ಬಳಕೆಯಿಂದ ದೇಶದಲ್ಲಿ ೧.೪೪ ಲಕ್ಷ ಕೋಟಿ ರು. ಮೌಲ್ಯದ ವಿದೇಶಿ ವಿನಿಮಯವು ಉಳಿತಾಯವಾಗಿದೆ.

ಕೇಂದ್ರ ಸರಕಾರಕ್ಕೆ ಎಥೆನಾಲ್ ಉತ್ಪಾದನೆ, ಪೂರೈಕೆ ಹಾಗೂ ಬಳಕೆಯಿಂದ ಬರುವ ರಾಜಸ್ವ ಸಂಗ್ರಹವು ಕಡಿಮೆಯಾಗುತ್ತದೆ. ಎಥೆನಾಲ್ ಸಾಗಾಟ ಸ್ಥಗಿತಗೊಳ್ಳುವುದರಿಂದ, ಎಥೆನಾಲ್ ಸಾಗಾಣೆಗಾಗಿ ಭಾರಿ ವಾಹನಗಳನ್ನು ಹೊಂದಿರುವ ಟ್ಯಾಂಕರ್ ಸಾರಿಗೆದಾರರಿಗೆ ಹಾನಿಯಾಗುತ್ತದೆ.

ಆದೇಶದ ಜಾರಿಗೆ ಕೇಂದ್ರ ಸರಕಾರವು ಪ್ರಸಕ್ತ ವರ್ಷದ ಎಫ್ಆ‌ರ್‌ಪಿ ಬೆಲೆಯನ್ನು ತಕ್ಷಣದಿಂದ ಮರುಪರಿಶೀಲಿಸಬೇಕಾಗುತ್ತದೆ. ಈಗಾಗಲೆ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಮತ್ತು ಎಫ್ಆ‌ರ್‌ಪಿ ಬೆಲೆಯನ್ನು ಪರಿಗಣಿಸಿಯೇ ಕಬ್ಬು ಬೆಲೆಯನ್ನು ನಿಗದಿಪಡಿಸಿರುತ್ತವೆ. ಒಂದು ವೇಳೆ ಈ ಆದೇಶವು ಜಾರಿಯಾದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಉಂಟಾಗುವ ನಷ್ಟದ ಪ್ರಮಾಣವನ್ನು ಕೇಂದ್ರ ಸರಕಾರವು ‘ಬರಪಾಯಿ’ ಮಾಡಿಕೊಡಬೇಕಾಗುತ್ತದೆ.

ಎಥೆನಾಲ್ ಬಳಕೆಗೆ ಅನ್ವಯವಾಗುವಂತೆ ವಾಹನ ತಯಾರಿಕಾ ಕಂಪನಿಗಳು ವಾಹನಗಳಲ್ಲಿ ಮಾಡುತ್ತಿರುವ ತಾಂತ್ರಿಕ ಮಾರ್ಪಾಟಿಗೆ ತೊಂದರೆಯಾಗುವ ಸಂಭವವಿದೆ. ಎಥೆನಾಲ್ ಉತ್ಪಾದನೆ ಯ ಸ್ಥಗಿತದಿಂದಾಗಿ ರೈತರ ಪಾಲಿಗೆ, ಡಬಲ್ ಇನ್‌ಕಮ್, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಎಂಬ ಕೇಂದ್ರ ಸರಕಾರದ ಜನಪ್ರಿಯ ಘೋಷಣೆಗಳು ಮಹತ್ವವನ್ನು ಕಳೆದು ಕೊಳ್ಳುತ್ತವೆ.

ಕೆಲವು ವರ್ಷಗಳ ಹಿಂದೆ ದೇಶದ ಸಕ್ಕರೆ ಉದ್ಯಮವು, ಹೊರಬರಲಾರದಷ್ಟರ ಮಟ್ಟಿಗೆ ನಷ್ಟದ ಕೂಪದಲ್ಲಿ ಸಿಲುಕಿಕೊಂಡಿತ್ತು. ಆಗ ಕೇಂದ್ರ ಸರಕಾರವು ಸಕ್ಕರೆ ಉದ್ಯಮವನ್ನು ನಷ್ಟದಿಂದ ಪಾರು ಮಾಡಲು ತಜ್ಞರಿಂದ ಸಾಕಷ್ಟು ಅಧ್ಯಯನ ನಡೆಸಿ ಎಥೆನಾಲ್ ಉತ್ಪಾದನೆಯ ನೀತಿಯನ್ನು ಜಾರಿ ಗೊಳಿಸಿತು. ಇದರಿಂದಾಗಿ ಸದ್ಯ ಸಕ್ಕರೆ ಉದ್ಯಮವು ನಷ್ಟದಿಂದ ಕ್ರಮೇಣವಾಗಿ ಹೊರ ಬರುತ್ತಿದೆ. ಆದರೆ ಕೇಂದ್ರ ಸರಕಾರವು ಪ್ರತಿವರ್ಷ ಎಥೆನಾಲ್ ನೀತಿಯನ್ನು ಬದಲಾವಣೆ ಮಾಡುತ್ತಿ ರುವುದರಿಂದ ಸಕ್ಕರೆ ಉದ್ಯಮವು ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ.

ಬ್ರೆಜಿಲ್ ಮತ್ತು ಕ್ಯೂಬಾ ದೇಶಗಳು ಎಥೆನಾಲ್ ಉತ್ಪಾದನೆ ಮತ್ತು ಬಳಕೆಯಿಂದ ವಿಶ್ವದಲ್ಲಿಯೇ ಸಕ್ಕರೆ ಉದ್ಯಮವನ್ನು ಹಾಗೂ ರೈತರನ್ನು ಲಾಭದಾಯಕ ಸ್ಥಿತಿಯಲ್ಲಿರಿಸಿವೆ. ವಿಶ್ವದೆಲ್ಲೆಡೆ ಗೋವಿನ ಜೋಳ ಹಾಗೂ ಇತರೆ ಆಹಾರಧಾನ್ಯಗಳು ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಂದ ಎಥೆನಾಲ್ ಉತ್ಪಾದಿಸಲಾಗುತ್ತದೆ. ಆದರೆ ಕಬ್ಬು ಬೆಳೆಯಿಂದ ಉತ್ಪಾದನೆಯಾಗುವ ಎಥೆನಾಲ್ ಕಡಿಮೆ ಖರ್ಚು ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ.

ಆದ್ದರಿಂದ ಕೇಂದ್ರ ಸರಕಾರವು ರೈತರ ಹಾಗೂ ಸಕ್ಕರೆ ಉದ್ದಿಮೆಗಳ ಹಿತ ಕಾಪಾಡಲು ಈ ಆದೇಶವನ್ನು ಮರುಪರಿಶೀಲಿಸಬೇಕು.

(ಲೇಖಕರು ಕೃಷಿ ತಜ್ಞರು ಹಾಗೂ ಸಹಾಯಕ ಮಹಾ ಪ್ರಬಂಧಕರು)