ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಪೇಟೆಯ ಬದುಕಿಗೆ ಜೀನ್ಸ್‌ ಬದಲಿಸಿಕೊಂಡ ಶಿಕಾಗೋ ಗಿಡುಗ

ನಾನು ಕಚೇರಿಯಲ್ಲಿ ಕುಳಿತುಕೊಳ್ಳುವ ಗಾಜಿನ ಗೋಡೆಯ ಹೊರಗೆ ಕಾಣಿಸುವಂತೆ ಎರಡು ಗಿಡುಗಗಳು ಸೇರಿ ಗೂಡು ಕಟ್ಟುತ್ತಿದ್ದವು. ಒಂದೆರಡು ದಿನ, ಆಗೀಗ, ಹೋಗಿ ಬರುವಾಗ ಅದರತ್ತ ಗಮನಹರಿಸುತ್ತಿದ್ದೆ ಒಳಗಿನಿಂದ. ದಿನಗಳು ಕಳೆಯುತ್ತಿದ್ದಂತೆ ನನಗೆ ಅವುಗಳ ಚಲನವಲನವನ್ನು ನೋಡುವುದೇ ಒಂದು ಚಟವಾಗಿಬಿಟ್ಟಿತು. ಒಂದು ದಿನ ನೋಡುತ್ತೇನೆ, ಗಿಡುಗ ಮೂರು ಮೊಟ್ಟೆ ಯಿಟ್ಟಿದೆ.

ಶಿಶಿರಕಾಲ

ಶಿಕಾಗೋ ನಗರ ಮಿಷಿಗನ್ ಸರೋವರದ ತಟದಲ್ಲಿದೆ. ಸರೋವರವೆಂದರೆ ಅದೇನು ಚಿಕ್ಕಪುಟ್ಟ ಕೆರೆಯಲ್ಲ, ಸ್ಯಾಂಕಿ ಟ್ಯಾಂಕ್ ಅಲ್ಲ. ಸರೋವರವೆಂದರೆ ಸಿಹಿ ನೀರಿನ ಸಾಗರ-ಸದೃಶ. ಒಂದು ಕಡೆಯಿಂದ ಇನ್ನೊಂದು ಕಡೆ ಕಾಣಿಸದಷ್ಟು ಅಗಲ. 75 ಬೆಂಗಳೂರನ್ನು ಅದರೊಳಕ್ಕೆ ಹಿಡಿಸ ಬಹುದು ಎಂದಾದರೆ ಅದರ ವಿಸ್ತಾರ ಅಂದಾಜಿಸಿಕೊಳ್ಳಿ.

ಇದರ ತಟದಲ್ಲಿರುವ ಶಿಕಾಗೊ ನಗರದ ತುಂಬೆಲ್ಲ ಗಗನಚುಂಬಿ ಕಟ್ಟಡಗಳು. ನನ್ನ ಕಚೇರಿ ಇರುವುದು ಇಂಥದೇ ಒಂದು ಕಟ್ಟಡದ 76ನೇ ಮಹಡಿಯಲ್ಲಿ. ಅಲ್ಲಿ ಗಾಜಿನ ಗೋಡೆ-ಕಿಟಕಿಗಳಿಂದ ಕೆಳಕ್ಕೆ ನೋಡಿದರೆ ಮನುಷ್ಯರೆಲ್ಲ ಇರುವೆ ಹರಿದಂತೆ, ಕಾರುಗಳು ಅಂಗಿ ಗುಂಡಿಯಷ್ಟು ಚಿಕ್ಕದಾಗಿ ಕಾಣಿಸುತ್ತವೆ.

ಇಷ್ಟು ಎತ್ತರೆತ್ತರದ ಕಟ್ಟಡದ ಮೇಲೆ ವಾಸಿಸುವುದು ಕೇವಲ ಮನುಷ್ಯರಷ್ಟೇ ಅಲ್ಲ. ಕಟ್ಟಡದ ಅಂಚುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೆರಿಗ್ರಿನ್ ಫಾಲ್ಕನ್ (ಒಂದು ಜಾತಿಯ ಗಿಡುಗ) ಗಳು ಗೂಡು ಕಟ್ಟಿಕೊಂಡಿರುತ್ತವೆ. ಅವುಗಳ ಬಗ್ಗೆಯೇ ನಿಮಗೆ ಹೇಳಲು ಹೊರಟದ್ದು. ಈಗ ಕೆಲವು ತಿಂಗಳ ಹಿಂದಿನ ಸಂಗತಿಯಿದು.

ನಾನು ಕಚೇರಿಯಲ್ಲಿ ಕುಳಿತುಕೊಳ್ಳುವ ಗಾಜಿನ ಗೋಡೆಯ ಹೊರಗೆ ಕಾಣಿಸುವಂತೆ ಎರಡು ಗಿಡುಗಗಳು ಸೇರಿ ಗೂಡು ಕಟ್ಟುತ್ತಿದ್ದವು. ಒಂದೆರಡು ದಿನ, ಆಗೀಗ, ಹೋಗಿ ಬರುವಾಗ ಅದರತ್ತ ಗಮನಹರಿಸುತ್ತಿದ್ದೆ ಒಳಗಿನಿಂದ. ದಿನಗಳು ಕಳೆಯುತ್ತಿದ್ದಂತೆ ನನಗೆ ಅವುಗಳ ಚಲನವಲನವನ್ನು ನೋಡುವುದೇ ಒಂದು ಚಟವಾಗಿಬಿಟ್ಟಿತು. ಒಂದು ದಿನ ನೋಡುತ್ತೇನೆ, ಗಿಡುಗ ಮೂರು ಮೊಟ್ಟೆ ಯಿಟ್ಟಿದೆ.

ಇದನ್ನೂ ಓದಿ: Shishir Hegde Column: ಬೆಳಗ್ಗೆ ಬೇಗ ಏಳಲು ಐದು ಕ್ಷಣದ ಉಪಾಯ...

ನಂತರ ಕೆಲವು ದಿನಗಳು ತಾಯಿ ಮತ್ತು ತಂದೆ ಗಿಡುಗ ಪಾಳಿಯಲ್ಲಿ ಕಾವು ಕೊಡುತ್ತ ಕೂರುತ್ತಿದ್ದವು. ಅಷ್ಟೊಂದು ಚಟುವಟಿಕೆಯಿರದ ನೀರಸ ದಿನಗಳವು. ಮೂರ್ನಾಲ್ಕು ವಾರ ಕಳೆಯಿತು. ಒಂದು ದಿನ ಮೊಟ್ಟೆಗಳಿಂದ ಚಿಕ್ಕ ಮರಿಗಳು ಹೊರಬಂದವು. ನಂತರ ಅವುಗಳಿಗೆ ಒಂದಿಷ್ಟು ಆಹಾರವನ್ನು, ಮಾಂಸದ ತುಂಡುಗಳನ್ನು ತಂದುಕೊಡುವುದು ಇತ್ಯಾದಿ ನಡೆಯಿತು.

ನಿಧಾನಕ್ಕೆ ಆ ಮರಿ ಗಿಡುಗಗಳು ಕಟ್ಟಡದ ಅಂಚಿನಲ್ಲಿ ಓಡಾಡಲು ಶುರುಮಾಡಿದವು. ಅವುಗಳ ಕಾವಲಿಗೆ ಎರಡರಂದು ಗಿಡುಗ ಇದ್ದೇ ಇರುತ್ತಿತ್ತು. ನನಗೋ, ಅವೆಲ್ಲಿ ಅಕಸ್ಮಾತ್ ಕೆಳಕ್ಕೆ ಬಿದ್ದು ಬಿಡುತ್ತವೋ ಎಂಬ ಅಂಜಿಕೆ. ರೆಕ್ಕೆ ಬಲಿಯದ ಆ ಮರಿಹಕ್ಕಿ ಕೆಳಕ್ಕೆ ಬಿದ್ದರೆ ಬೀಸುವ ಗಾಳಿಗೆ ಇನ್ನೆಲ್ಲಿಯೋ ತೂರಿ ಹೋಗಿ ಯಾವುದೋ ರಸ್ತೆಯ ಕಾರಿನಡಿಯಾಗುತ್ತಿದ್ದವು.

ಒಂದು ದಿನ ಹೋಗಿ ನೋಡುವಾಗ ಎರಡೇ ಮರಿಗಳು ಕಾಣಿಸಿದವು. ಮೂರನೆಯದು ಕಾಣಿಸಲೇ ಇಲ್ಲ. ಈಗ ಇಳಿದ ಎರಡು ಮರಿಗಳ ಹಾರಾಟದ ತಾಲೀಮು ಶುರುವಾಗಿತ್ತು. ಗಿಡುಗ ಮರಿಗಳಿಗೆ ಟ್ರೈನಿಂಗ್ ಕೊಡಲು ಶುರುಮಾಡಿತ್ತು.

ನಿಮಗೊಂದು ಹೇಳಬೇಕು- ಶಿಕಾಗೋ ಸರೋವರದ ಪಕ್ಕದಲ್ಲಿರುವುದರಿಂದ ದಿನದಲ್ಲಿ ಹಲವಾರು ಬಾರಿ 90-120 ಕಿಮಿ ವೇಗದಲ್ಲಿ ಕಟ್ಟಡದ ಮಧ್ಯದಲ್ಲಿ ಗಾಳಿ ನುಸುಳಿ ಹೋಗುತ್ತಿರುತ್ತವೆ. ಬೀಸುಗಾಳಿ ನಿರಂತರ. ಇವುಗಳ ನಡುವೆ ಈ ಗಿಡುಗಗಳು ಹಾರುವುದನ್ನು ವಿಶೇಷವಾಗಿ ಬದಲಿಸಿಕೊಂಡಿವೆ.

chicago giduga R

ಇಂಥ ಆವಾಸಸ್ಥಾನ ಸ್ವಾಭಾವಿಕವಾಗಿ ಎಲ್ಲಿಯೂ ಇರುವುದಿಲ್ಲವಲ್ಲ. ಅಷ್ಟೆತ್ತರದ ಗಗನಚುಂಬಿ ಕಟ್ಟಡಗಳ ನಡುವೆ ಬೇಕಾಬಿಟ್ಟಿ ಸುಳಿ ಸುತ್ತುವ ಗಾಳಿ. ಹೀಗೆ ಬೀಸುವ ಗಾಳಿಯ ನಡುವೆಯೇ ಹೇಗೆ ಗ್ಲೈಡ್ ಮಾಡಿಕೊಂಡು ಹಾರಬೇಕು ಎಂಬುದನ್ನು ವಿಶೇಷವಾಗಿ ಈ ಗಿಡುಗಗಳು ಕಲಿತಿವೆ.

ಅಷ್ಟೇ ಅಲ್ಲ, ಅವುಗಳನ್ನು ಮುಂದಿನ ತಲೆಮಾರಿಗೆ ಕಲಿಸಿಕೊಡುವುದನ್ನೂ ರೂಢಿಸಿಕೊಂಡಿವೆ. ಅವುಗಳು ಸಾಮಾನ್ಯವಾಗಿ ಕಟ್ಟಡದ ಕೊನೆಯ ಕೆಲವು ಮಹಡಿಗಳ ಅಂಚಿನಲ್ಲಿ ಗೂಡು ಕಟ್ಟಿ ಕೊಂಡಿರುತ್ತವೆ. ಅವುಗಳಿಗೆ ಕೆಳಕ್ಕೆ ಹಾರುವ ಪಾರಿವಾಳ, ಇತರೆ ಹಕ್ಕಿಗಳು ಮತ್ತು ಪೇಟೆಯ ರಸ್ತೆ-ನೆಲದಲ್ಲಿ ಓಡಾಡುವ ಇಲಿ-ಹೆಗ್ಗಣಗಳು ಆಹಾರ. ಈ ಗಿಡುಗಗಳು ಉಳಿದವುಗಳಂತೆ ಹಾರುತ್ತ, ಸುತ್ತುತ್ತ ಬೇಟೆಯನ್ನು ಹುಡುಕುವುದಿಲ್ಲ.

ಬದಲಿಗೆ ಬಿಲ್ಡಿಂಗ್‌ನ ಅಂಚಿನಲ್ಲಿ ಬೇಟೆಗೆ ಕಾಯುತ್ತವೆ. ಕೆಳಕ್ಕೆ ನೆಲದಲ್ಲಿ ಇಲಿ ಕಾಣಿಸಿತೆಂದುಕೊಳ್ಳಿ, ಅವುಗಳ ರೆಕ್ಕೆಗಳು ಮಡಚಿ, ದೇಹವನ್ನು ರಾಕೆಟ್ ಆಕೃತಿಯಲ್ಲಿ ಹಿಡಿದು, ಸುಮಾರು 300-400 ಮೀಟರ್ ಎತ್ತರದ ಕಟ್ಟಡದಿಂದ ಜಿಗಿಯುತ್ತವೆ, ರಾಕೆಟ್ ವೇಗದಲ್ಲಿ. ಎಷ್ಟು ವೇಗದಲ್ಲಿ ಅವು ಡೈವ್ ಮಾಡಬಹುದು? ಹೇಳಿ ನೋಡೋಣ? 370ರಿಂದ 400 ಕಿ.ಮೀ ವೇಗ!! ಅಷ್ಟು ವೇಗದಲ್ಲಿ ಕೆಳಕ್ಕಿಳಿದು ಕ್ಷಣಾರ್ಧದಲ್ಲಿ ಇಲಿಯನ್ನು ಹಿಡಿದು ಮೇಲಕ್ಕೆತ್ತಿಕೊಂಡು ಬರುತ್ತವೆ.

ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಅಷ್ಟು ವೇಗದಲ್ಲಿ ಮೇಲಿನಿಂದ ಕೆಳಕ್ಕೆ ಶರವೇಗದಲ್ಲಿ ಇಳಿಯುವಾಗ ಕಟ್ಟಡಗಳ ನಡುವೆ ಅಂಡೆಪಿರ್ಕಿ ಗಾಳಿ ನುಗ್ಗುತ್ತಿರುತ್ತದೆ. ಅದರ ದಿಶೆ, ವೇಗ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಜಾಸ್ತಿ ಗಾಳಿಯಿದ್ದರೆ ಒಂದು ಕಟ್ಟಡದಿಂದ ಕೆಳಕ್ಕೆ ಹಾರಿದರೆ ನಾಲ್ಕು ಕಟ್ಟಡದಾಚೆ ಇನ್ನೊಂದು ಬುಡಕ್ಕೆ ಹೋಗಿ ತಲುಪಬಹುದು. ಆ ಕಾರಣಕ್ಕೆ ಅವು ನಾಲ್ಕು ಬಿಲ್ಡಿಂಗ್ ಆ ಕಡೆ ಹೋಗಿ ಕುಳಿತುಕೊಳ್ಳುತ್ತವೆ.

ಗಾಳಿ ಎಡದಿಂದ ಬಲಕ್ಕೆ ಬೀಸುತ್ತಿದ್ದರೆ ಎಡಗಡೆಯ ಒಂದಿಷ್ಟು ಬಿಲ್ಡಿಂಗುಗಳಾಚೆ ಕೂತು ಅವು ಬಲಕ್ಕೆ ನೋಡುತ್ತಿರುತ್ತವೆ. ಅನಾದರೂ ಬೇಟೆ ಕಂಡಿತೆಂದುಕೊಳ್ಳಿ, ಗಾಳಿಗನುಸಾರವಾಗಿ ಬಾಗಿ ಕೆಳಕ್ಕೆ ಹಾರುತ್ತವೆ. ಅವುಗಳಿಗೆ 70-80 ಅಂತಸ್ತು ಕೆಳಕ್ಕೆ ನೆಲದಲ್ಲಿರುವ ಇಲಿ ಕಾಣಿಸುತ್ತವೆ. ಈ ಪೇಟೆಯ ಇಲಿಗಳು ಸಿಕ್ಕಾಪಟ್ಟೆ ವೇಗದವು.

ಮನುಷ್ಯ ವಸತಿ ಅಷ್ಟಿರುವುದರಿಂದ ಕ್ಷಣಾರ್ಧದಲ್ಲಿ ಕಂಡು ಮಾಯವಾಗುವಷ್ಟು ಅವುಗಳದ್ದೂ ವೇಗ. ಆದರೆ ಈ ಪೆರಿಗ್ರಿನ್ ಗಿಡುಗ ಕ್ಷಣಕ್ಕೊಮ್ಮೆ ಬೀಸುವ, ವೇಗ ದಿಕ್ಕುಗಳನ್ನು ಬದಲಿಸಿಕೊಳ್ಳುವ ಗಾಳಿಯ ನಡುವೆ ಕರಾರುವಾಕ್ಕಾಗಿ ಎಷ್ಟು ದೂರದಿಂದ ಹೇಗೆ, ಯಾವ ಕೋನದಲ್ಲಿ ಹಾರಬೇಕು ಎಂದು ಲೆಕ್ಕಾಚಾರ ಮಾಡಿ ನೆಗೆಯುತ್ತದೆ.

ಅಷ್ಟೇ ಅಲ್ಲ, ಅವು ಬೇಟೆಯಾಡುವ ಸಮಯ ಸಾಮಾನ್ಯವಾಗಿ ಬೆಳಗ್ಗೆ ಹತ್ತರಿಂದ ಮಧ್ಯಾಹ್ನ ಹನ್ನೆರಡರ ಒಳಗೆ. ಶಿಕಾಗೋದಲ್ಲಿ ಈ ಸಮಯದಲ್ಲಿ ಸರೋವರದಿಂದ ಬೀಸುವ ಗಾಳಿ ಸಾಮಾನ್ಯ ವಾಗಿ ಒಂದೇ ವೇಗದಲ್ಲಿರುತ್ತದೆ, ನಂತರದಲ್ಲಿ ವೇಗ ಹೆಚ್ಚುತ್ತಾ ಹೋಗುತ್ತದೆ. ಈ ಗಂಡು ಮತ್ತು ಹೆಣ್ಣು ಗಿಡುಗ ತಮ್ಮ ಮರಿಗಳಿಗೆ ಹಾರುವುದನ್ನು, ಬೇಟೆಯಾಡುವದನ್ನು ಕಲಿಸುವುದಕ್ಕೆ ಶುರು ಮಾಡಿದ್ದವು.

ಮೊದಲೆರಡು ದಿನ ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಅವುಗಳ ತಾಲೀಮು ಶುರುವಾಯಿತು. ಅಷ್ಟೊತ್ತಿಗಾಗಲೇ ಆ ಗಿಡುಗದ ಬಗ್ಗೆ ಒಂದಿಷ್ಟು ಓದಿಕೊಂಡಿದ್ದೆ. ಈಗ ಕುತೂಹಲ ಇನ್ನಷ್ಟು ಹೆಚ್ಚಿತ್ತು. ಏಕೆಂದರೆ ಗಿಡುಗ ಮರಿಗಳಿಗೆ ಹಾರಲು ಕಲಿಸುವ ವಿಧಾನವೇ ಅಷ್ಟು ರೋಚಕ. ನಾನು ಅವು ಪ್ರತಿದಿನ ತಾಲೀಮು ಶುರುವಾಗುವ ಸಮಯ ಮತ್ತು ಆ ಸಮಯದಲ್ಲಿ ಅಲ್ಲಿನ ಗಾಳಿಯ ವೇಗವನ್ನು ಒಂದು ಹಾಳೆಯ ಮೇಲೆ ಬರೆದುಕೊಳ್ಳಲು ಶುರುಮಾಡಿದೆ.

ದಿನವೂ ಅದೇ ಕೆಲಸ. ಸ್ಥಳೀಯ ಗಾಳಿಯ ವೇಗವನ್ನು ತಿಳಿಸುವ ಮೊಬೈಲ್ ಅಪ್ಲಿಕೇಷನ್‌ ಗಳಿವೆ ಯಲ್ಲ. ದಿನಕಳೆದಂತೆ ಮರಿಗಳ ಹಾರಾಡುವ ಕ್ಷಮತೆ ಹೆಚ್ಚುತ್ತಾ ಹೋಗುವುದು ಕಾಣಿಸುತ್ತಿತ್ತು. ಹಾಗೆ ಹೆಚ್ಚಿದಂತೆ ಅವುಗಳ ತಾಲೀಮು ಶುರುವಾಗುವ ಸಮಯ ಕೂಡ ಬದಲಾದವು. ಈಗ ತಾಲೀಮು ಹೆಚ್ಚಿನ ವೇಗದ ಗಾಳಿಯ ಸಮಯದಲ್ಲಾಗುತ್ತಿತ್ತು.

ದಿನಗಳೆದಂತೆ ಗಿಡುಗವು ಮರಿಗಳಿಗೆ ಹೆಚ್ಚಿನ ಸವಾಲು ಒಡ್ಡುತ್ತಿರುವುದು ಸ್ಪಷ್ಟವಾಗಿತ್ತು. ಗಾಳಿಯ ವೇಗ, ದಿಕ್ಕು ಇವೆಲ್ಲ ಕಾಲಕ್ಕೆ ತಕ್ಕಂತೆ ಬದಲಾಗುವವು. ನಾನು ಪಟ್ಟಿಮಾಡಿಕೊಳ್ಳುತ್ತ ಹೋದಂತೆ ಅವೆಲ್ಲವುದರ ಅರಿವು ಈ ಗಿಡುಗಕ್ಕೆ ಇದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಮರಿ ಹಕ್ಕಿ ಬೆಳೆದಂತೆಲ್ಲ, ರೆಕ್ಕೆ ಬಲಿತಂತೆಲ್ಲ ಹೆಚ್ಚುಹೆಚ್ಚಿನ ವೇಗದ ಗಾಳಿಯಲ್ಲಿ ಅವುಗಳ ತಾಲೀಮು.

ಅದಾಗಲೇ ತಾಯಿ-ತಂದೆ ಹಕ್ಕಿಗಳು ಸುಮಾರು ನೂರಿನ್ನೂರು ತಾಸನ್ನು ಹಾರಾಟ ಕಲಿಸುವುದಕ್ಕೆ ವ್ಯಯಿಸಿದ್ದವು. ಆದರೆ ಮರಿಹಕ್ಕಿಗಳು ಇನ್ನೂ ಸಂಪೂರ್ಣ ಹೊರಜಗತ್ತಿಗೆ, ಕಟ್ಟಡಗಳ ನಡುವೆ, ಬೀಸುಗಾಳಿಯಲ್ಲಿ ಬೇಟೆಯ ಡೈವ್‌ಗೆ ತಯಾರಾಗಿರಲಿಲ್ಲ. ಆ ಸಮಯದಲ್ಲಿ ಒಮ್ಮೆಲೇ ಈ ಗಿಡುಗದ ನಡವಳಿಕೆ ಸಂಪೂರ್ಣ ಬದಲಾದದ್ದು ಕಾಣಿಸಿತು.

ಇಷ್ಟು ದಿನ ತನ್ನ ಪಾಡಿಗಿದ್ದ ಗಿಡುಗ, ಈಗ ಎಲ್ಲಿಲ್ಲದಷ್ಟು ಅಕ್ರಮಣಕಾರಿಯಾಗಿತ್ತು. ಅದು ಮರಿ ಹಕ್ಕಿ ಮೇಲಿಂದ ನೆಲದವರೆಗೆ ಹಾರಿ ಇಳಿಯುವ ತರಬೇತಿಯ ಸಮಯ. ಆ ಸಮಯದಲ್ಲಿ ರಸ್ತೆಯ ಕೆಳಕ್ಕೆ ಓಡಾಡುವವರನ್ನೆಲ್ಲ ತಾಯಿ-ತಂದೆ ಹಕ್ಕಿಗಳು ಕುಕ್ಕಿ ದಾಳಿ ಮಾಡಲು ಶುರುಮಾಡಿದವು.

ಅದೆಷ್ಟೆಂದರೆ ಕಟ್ಟಡದ ಒಂದು ಪಕ್ಕದ ರಸ್ತೆಯಲ್ಲಿ ‘ಗಿಡುಗ ದಾಳಿ ಮಾಡಬಹುದು’ ಎಂಬ ಎಚ್ಚರಿಕೆಯ ಬೋರ್ಡ್ ಹಾಕಬೇಕಾದಷ್ಟು. ಒಂದಿಷ್ಟು ದಿನ ನಡೆದಾಡುವವರು ಯಾರೂ ಅತ್ತ ಸುಳಿಯಲಿಲ್ಲ. ಅಷ್ಟು ವ್ಯವಸ್ಥೆ ಮಾಡಿಕೊಂಡ ನಂತರವೇ ಈ ಮರಿಹಕ್ಕಿಗಳಿಗೆ ಪೂರ್ಣ ನೆಲದವರೆಗೆ ಡೈವ್ ಮಾಡಲು ಕಲಿಸಲು ಶುರುಮಾಡಿದ್ದು.

ಇದಿಷ್ಟೇ ಆಗಿದ್ದಿದ್ದರೆ ಯಾವುದೋ ಒಂದು ಹಕ್ಕಿ, ಎಲ್ಲಿಯೋ ಒಂದು ಕಡೆ ಪೇಟೆಯಲ್ಲಿ ಬಿಲ್ಡಿಂಗು ಗಳ ನಡುವೆ ಹಾರಲು ಕಲಿತುಕೊಂಡಿದೆ, ಅವು ಮರಿಗಳಿಗೆ ಕಲಿಸುತ್ತವೆ ಎಂದಷ್ಟೇ ವಿಷಯವಾಗು ತ್ತಿತ್ತು. ಆದರೆ ವಿಷಯ ಅಷ್ಟೇ ಅಲ್ಲ. ಈ ಗಿಡುಗಗಳು 1960-70ರ ಸಮಯದಲ್ಲಿ ಅವಸಾನದ ಅಂಚಿಗೆ ತಲುಪಿದ್ದವು. ಮೊದಲನೆಯದಾಗಿ, ಆ ಸಮಯದಲ್ಲಿ ಉಳಿದ ಕೆಲವೇ ಖಾಲಿ ಜಾಗಗಳಲ್ಲ ಕಟ್ಟಡಗಳು ಬಂದು ಅವಕ್ಕೆ ಹೊಂದಿಕೊಳ್ಳಲಾಲಿಲ್ಲ.

ಎರಡನೆಯದಾಗಿ ಆ ಕಾಲದಲ್ಲಿ ಶಿಕಾಗೋದಲ್ಲಿ ಸೊಳ್ಳೆ ಓಡಿಸಲಿಕ್ಕೆಂದು ಯಥೇಚ್ಛ ಡಿಡಿಟಿ ಹೊಗೆ ಬಳಸಲಾಗುತ್ತಿತ್ತು. ಅದು ಈ ಗಿಡುಗದ ಮೊಟ್ಟೆಗಳ ಹೊರ ಮೇಲ್ಮೈಯನ್ನು ದುರ್ಬಲವಾಗಿಸುತ್ತಿತ್ತು. ಅದರಿಂದ ಮೊಟ್ಟೆ ಅಕಾಲದಲ್ಲಿ ಒಡೆದು ಮರಿಗಳು ಸಾಯುತ್ತಿದ್ದವು. ಅದಾದ ನಂತರ 1990ರಲ್ಲಿ ಈ ಗಿಡುಗಗಳನ್ನು ‘ಶಿಕಾಗೋ ನಗರದ ಹಕ್ಕಿ’ ಎಂದು ಘೋಷಿಸಿ, ಅವುಗಳನ್ನು ಸಂರಕ್ಷಿಸುವ ಕೆಲಸ ಶುರುವಾಯಿತು. ಅದೆಷ್ಟೋ ಪೆರಿಗ್ರಿನ್ ಫಾಲ್ಕನ್‌ಗಳನ್ನು ತಂದುಬಿಡಲಾಯಿತು.

ನಂತರದ ಮೂವತ್ತೇ ವರ್ಷದಲ್ಲಿ ಅವು ಸಂಪೂರ್ಣ ಶಿಕಾಗೋ ಪೇಟೆಯ ಬಹುಮಹಡಿ ಬದುಕಿಗೆ ಹೊಂದಿಕೊಂಡವು. ಅವು ಅಲ್ಲಿ ಹಾರಿ, ಬೇಟೆಯಾಡಿ ಬದುಕಲಷ್ಟೇ ಕಲಿತದ್ದಲ್ಲ, ಮೂರೇ ದಶಕ ದಲ್ಲಿ ಅವುಗಳ ದೇಹರಚನೆ ಬದಲಾದವು. ಬಾಹ್ಯವಲ್ಲ, ವಂಶವಾಹಿನಿಯಲ್ಲಿಯೇ ಆದ ಬದಲಾವಣೆ ಅದು.

ಇದೆಲ್ಲ ನಡೆದದ್ದು ಕೇವಲ 30-40 ವರ್ಷದಲ್ಲಿ. ಸಾಮಾನ್ಯವಾಗಿ ಯಾವುದೇ ಜೀವಿಯ ಹೊಂದಾ ಣಿಕೆಯು ಜೀನ್ ಹಂತದಲ್ಲಿ ಅಷ್ಟು ಕಡಿಮೆ ಸಮಯದಲ್ಲಿ ಆಗುವುದಿಲ್ಲ. ಜೀ ಬದಲಾವಣೆ ಯಿಂದಾಗಿ ದೇಹರಚನೆಯಷ್ಟೇ ಅಲ್ಲ, ಅವುಗಳು ಗೂಡು ಕಟ್ಟುವ ರೀತಿ, ಆಹಾರ ಕ್ರಮ, ಬೇಟೆಯ ರೀತಿ ಮತ್ತು ಅವುಗಳ ನಡವಳಿಕೆಯಲ್ಲಿಯೂ ಬದಲಾವಣೆಯಾಗಿದೆ.

ಈ ಬದಲಾವಣೆ ಎಷ್ಟೆಂದರೆ ಈ ಪೇಟೆಯ ಗಿಡುಗನನ್ನು ಕಾಡಿನಲ್ಲಿ, ಬಯಲುಸೀಮೆಯಲ್ಲಿ ಬಿಟ್ಟರೆ ಅವು ಇಂದು ಬದುಕಲಾರವು. ಅವುಗಳು ಇಂದು ಬಹುಮಹಡಿ ಪೇಟೆಯಲ್ಲಷ್ಟೇ, ಶಿಕಾಗೋದಲ್ಲಷ್ಟೇ ಬದುಕುಳಿಯಬಲ್ಲವು. ಇಂದು ಹಿಂದೆಲ್ಲದಕ್ಕಿಂತ ವೇಗದಲ್ಲಿ ನಾವು ಭೂಮಿಯನ್ನು ಬದಲಿಸು ತ್ತಿದ್ದೇವೆ ಎಂಬುದು ಅಮ್ಮಕ್ಕಜ್ಜಿಯ ಕಥೆಯಂತಾಗಿದೆ.

ಇದನ್ನು ಹೋದಲ್ಲಿ-ಬಂದಲ್ಲಿ ಕೇಳುತ್ತಲೇ ಇರುತ್ತೇವೆ. ನಿಜ ಅದು. ಇದನ್ನು break neck speed ಎಂದು ಕರೆಯುವುದಿದೆ- ಕುತ್ತಿಗೆ ಮುರಿದುಕೊಳ್ಳುವಷ್ಟು ವೇಗವೆಂಬ ವಿಡಂಬನಾ ಹೋಲಿಕೆ. ಇದು ಅದೆಷ್ಟು ವೇಗವೆಂದರೆ ಖುದ್ದು ಮನುಷ್ಯನಿಗೇ ಅಷ್ಟು ವೇಗದಲ್ಲಿ ಹೊಂದಿಕೊಳ್ಳಲಾಗುತ್ತಿಲ್ಲ.

ಇಂದು ಬದುಕುವ ರೀತಿ ಬದಲಿಸಿಕೊಂಡ ಒಂದು ದೊಡ್ಡ ವರ್ಗ ದಿನಕ್ಕೆ ಹತ್ತೆಂಟು ತಾಸು ಕೂತು ಕೆಲಸ ಮಾಡುತ್ತದೆ. ನಮ್ಮ ದೇಹ ಅದಕ್ಕೇ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ, ಬೆನ್ನುನೋವು ಬಂದು ಅದು ಇವರನ್ನೆಲ್ಲ ಕಾಡುತ್ತದೆ. ಡಯಾಬಿಟಿಸ್, ಜಿಡ್ಡು ಆಹಾರ ಪದ್ಧತಿ, ಸ್ಥೂಲಕಾಯ ಇವು ಯಾವುದು ಕೂಡ ನಮಗೆ ಹೊಂದಾಣಿಕೆಯಾಗದೇ ರೋಗಕ್ಕೆ ಕಾರಣವಾಗುತ್ತವೆ.

ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಇಂದು ಪೇಟೆಯಲ್ಲಿ ಬದುಕುತ್ತಿದೆಯಂತೆ. ಅವರಲ್ಲಿ ಕೆಲವು ತಲೆಮಾರಿನಿಂದ ಅದೇ ಪೇಟೆಯಲ್ಲಿದ್ದವರಿದ್ದಾರೆ. ಆದರೆ ಇಂದಿಗೂ ಆಧುನಿಕ ಪೇಟೆಗೆ ಮನುಷ್ಯ ಸಂಪೂರ್ಣವಾಗಿ ಹೊಂದಿಕೊಂಡಿಲ್ಲ. ಇಂಥ ಸಮಯದಲ್ಲಿ ಮನುಷ್ಯ ಮಾಡಿದ ಆವಾಂತರದ ಬದಲಾವಣೆಗೆ ನಮಗಿಂತ ಚೆನ್ನಾಗಿ ಹೊಂದಿಕೊಳ್ಳುವ, ತಮ್ಮ ವಂಶವಾಹಿನಿಯನ್ನೇ ಬದಲಿಸಿ ಕೊಳ್ಳುವ ಜೀವಿಗಳು, ಅವುಗಳ ಹೊಂದಾಣಿಕೆಯ ವೇಗ ವಿಶೇಷವೆನ್ನಿಸುತ್ತದೆ.

ನ್ಯೂಯಾರ್ಕ್ ನಗರದಲ್ಲಿ ಒಂದು ಜಾತಿಯ ಊಸರವಳ್ಳಿಯಿದೆ. ಅವುಗಳದ್ದು ಕೂಡ ಬಿಲ್ಡಿಂಗ್ ಬದುಕು. ಅವುಗಳ ನಿರ್ವಾತ ಅಂಟಿಕೊಳ್ಳುವ ಪಾದದ ಅಗಲ ಕಳೆದ ಐದು ದಶಕದಲ್ಲಿ ಒಂದೂವರೆ ಪಟ್ಟು ಜಾಸ್ತಿ ದೊಡ್ಡದಾಗಿರುವುದು ಇನ್ನೊಂದು ಉದಾಹರಣೆ.

ಇನ್ನು ಕೆಲವೊಮ್ಮೆ ಮನುಷ್ಯಕೃತ ಬದಲಾವಣೆಗಳು ವಿಕಸನದ ನೈಸರ್ಗಿಕ ಆಯ್ಕೆಯನ್ನೇ ಬದಲಿಸು ವುದಿದೆ. ಆನೆ ಮತ್ತು ಆನೆಯ ದಂತದ ವಿಷಯ. ಮೊಜಾಂಬಿಕ್ ಯಥೇಚ್ಛ ಆನೆಗಳಿರುವ ಆಫ್ರಿಕಾದ ಒಂದು ಬಡದೇಶ. ಅದು ಪೋರ್ಚುಗೀಸರ ವಸಾಹತಾಗಿತ್ತು. ಅವರ ದಂತಲೂಟಿಯ ನಂತರವೂ ಅಲ್ಲಿ ಯಥೇಚ್ಛ ಆನೆಗಳು ಬದುಕುಳಿದುಕೊಂಡಿದ್ದವು.

ಮೊಜಾಂಬಿಕ್ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು 1975ರಲ್ಲಿ. ಸ್ವಾತಂತ್ರ ಸಿಕ್ಕ ಒಂದೂವರೆ ವರ್ಷ ದೊಳಗೆ ಆಂತರಿಕ ಯುದ್ಧದ ಬೆಂಕಿ ಹೊತ್ತಿಕೊಂಡಿತು. 1977ರಲ್ಲಿ ದೇಶ ಎರಡು ಪಂಗಡವಾಗಿ ಒಡೆದಿತ್ತು. ಈ ಪಂಗಡಗಳು ಯುದ್ಧಕ್ಕೆ ನಿಂತವು. ಯುದ್ಧವೆಂದರೆ ಶಸ್ತ್ರಾಸ್ತ್ರ, ಉಳಿದವುಗಳಿಗೆ ಹಣ ಬೇಕಲ್ಲ. ಎರಡೂ ಪಂಗಡಗಳು ಆನೆಯನ್ನು ಕೊಂದು ದಂತವನ್ನು ಸ್ಮಗಲ್ ಮಾಡಲು ಶುರು ಮಾಡಿದವು.

ಪೋರ್ಚುಗೀಸರು ಆ ದೇಶದಲ್ಲಿ 25,00ದಷ್ಟಿದ್ದ ಆನೆಯ ಸಂಖ್ಯೆಯನ್ನು ಅದಾಗಲೇ 10,000ಕ್ಕೆ ಇಳಿಸಿದ್ದರು. ಈ ಆಂತರಿಕ ಯುದ್ಧದ ಸಮಯದಲ್ಲಿ ಅವುಗಳ ಸಂಖ್ಯೆ 200ಕ್ಕೆ ಬಂದು ನಿಂತಿತ್ತು ಎಂದರೆ ನೀವೇ ಅಂದಾಜಿಸಿಕೊಳ್ಳಿ. ನೀವು ಆನೆಯನ್ನು ಕಾಣುವಾಗ ಒಂದನ್ನು ಗ್ರಹಿಸಿರಬಹುದು.

ಗಂಡು ಆನೆಗೆ ಉದ್ದದ ದಂತವಿರುತ್ತದೆ. ಹೆಣ್ಣು ಆನೆಗೆ ಕೆಲವೊಮ್ಮೆ, ಇದ್ದರೂ ಚಿಕ್ಕದಂತ. ಗಂಡು ಎಂದರೆ XY ಕ್ರೋಮೋಸೋಮ (ವರ್ಣತಂತು), ಹೆಣ್ಣೆಂದರೆ XX ಕ್ರೋಮೋಸೋಮ. ಇದು ನಿಮಗೆ ಗೊತ್ತು. ಈ ಆಫ್ರಿಕಾದ ಆನೆಗಳ XX ವರ್ಣತಂತುವಿನಲ್ಲಿ ಒಂದು X ನಲ್ಲಿ ದಂತವನ್ನು ಕಳೆದುಕೊಳ್ಳುವ ಅಂಶವಿತ್ತು. ಆ ಸಾಮೂಹಿಕ ‘ಗಜಮೇಧ’ ನಡೆಯುವುದಕ್ಕಿಂತ ಮೊದಲು ಅಲ್ಲಿನ ಶೇ.60ರಷ್ಟು ಹೆಣ್ಣು ಆನೆಗಳಿಗೆ ಗಂಡಿನಷ್ಟೇ ಉದ್ದದ ದಂತವಿರುತ್ತಿತ್ತಂತೆ.

ಅಂದು ಅಲ್ಲಿನವರು ದಂತವಿದ್ದ ಬಹುತೇಕ ಆನೆಗಳನ್ನು ಕೊಂದುಬಿಟ್ಟಿದ್ದರು. ಹಾಗಾಗಿ ಕೊನೆ ಯಲ್ಲಿ ಉಳಿದಿದ್ದು ದಂತವಿಲ್ಲದ ಕೆಲವೇ ಹೆಣ್ಣು ಆನೆಗಳು. ಆ ಕಾರಣಕ್ಕೇ ಅವು ಬದುಕಿಕೊಂಡದ್ದು. ಅದು ಬೇರೆ ವಿಷಯ. ಆದರೆ ಅವೆಲ್ಲವೂ X ಜೀವವಾಹಿನಿಯಲ್ಲಿ ದಂತವಿಲ್ಲದ ಜೀನ್ಸ್ ಹೊಂದಿ ದ್ದವು.

ಇಂದು ಮೊಜಾಂಬಿಕ್‌ನಲ್ಲಿ ಆನೆಗಳ ಸಂಖ್ಯೆ ಹತ್ತುಸಾವಿರಕ್ಕೆ ಏರಿದೆ. ಆದರೆ ಶೇಕಡಾವಾರು ಕೆಲವೇ ಹೆಣ್ಣು ಆನೆಗಳಲ್ಲಿ ದಂತ ಉಳಿದುಕೊಂಡಿದೆ. ಶೇ.90ಕ್ಕಿಂತ ಹೆಚ್ಚಿನ ಹೆಣ್ಣು ಆನೆಗಳಲ್ಲಿ ದಂತಗಳು ಇಲ್ಲ. ಹಾಗಾದರೆ ಗಂಡಿನಲ್ಲಿ XY ಇದೆಯಲ್ಲ. ಇಲ್ಲಿ X ಬರುವುದು ತಾಯಿಯಿಂದ. ಹಾಗಾಗಿ ಗಂಡು ಆನೆಗಳು ದಂತವನ್ನು ಕಳೆದುಕೊಳ್ಳಲಿಲ್ಲವೇ ಎಂಬ ಪ್ರಶ್ನೆ ಸಹಜ.

ಅದು ಹೇಗೋ, ಗಂಡು ಆನೆಗಳಲ್ಲಿ ದಂತ ಗುಣವಿರುವ Y ವರ್ಣತಂತುವೇ ಹೆಚ್ಚು ಗಟ್ಟಿಯಾಗಿ, ದಂತ ಕಳೆದುಕೊಳ್ಳುವ X ವರ್ಣತಂತುವನ್ನು ಮೆಟ್ಟಿ ನಿಂತಿವೆ, ಇಂದಿಗೂ. ವಿಜ್ಞಾನಿಗಳು ಅದಕ್ಕೆ ಗಂಡು ಆನೆಗಳ ಜೀವನಶೈಲಿಯೇ ಕಾರಣವೆನ್ನುತ್ತಾರೆ. ಆದರೆ ಅದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವಷ್ಟು ನಮ್ಮ ವಿಜ್ಞಾನ ಮುಂದುವರಿದಿಲ್ಲ.

ಒಟ್ಟಾರೆ ಗಂಡು ಆನೆ ಸಂಕುಲಕ್ಕೆ ಅಪಾಯಕಾರಿಯಾಗುವ ಜೀ ಅನ್ನು ಹಿಡಿದಿಟ್ಟುಕೊಂಡಿದ್ದರೆ ಹೆಣ್ಣಾನೆ ಬದುಕಲಿಕ್ಕೆ ಅತ್ಯವಶ್ಯಕವಾದ ದಂತವನ್ನು ಕಳೆದುಕೊಳ್ಳುವ ಜೈವಿಕ ಆಯ್ಕೆ ಮಾಡಿ ಕೊಂಡಿತು. ಇದೇ ಸ್ಥಿತಿ ಆನೆಗಳನ್ನು ಸಾಕಿ ಬೆಳೆಸಿ ವಿದೇಶಗಳಿಗೆ, ಭಾರತಕ್ಕೆ ಮಾರುವ ಶ್ರೀಲಂಕಾ ದಲ್ಲಿಯೂ ಇದೆ. ಅಲ್ಲಿ ಇವತ್ತು ಶೇ. 5ರಷ್ಟು ಹೆಣ್ಣಾನೆಗಳಿಗೆ ಮಾತ್ರ ಚಿಕ್ಕದಂತವಿರುತ್ತದೆ.

ಉಳಿದವು ಟೂತ್ ಲೆಸ್. ನಾವು ಭೂಮಿಯ ಮೇಲಿನ ಅತ್ಯಂತ ದೊಡ್ಡ ಪ್ರಾಣಿ ಆನೆ, ಆಕಾಶದಲ್ಲಿ ಹಾರಡುವ ಗಿಡುಗ, ಅಂಥವುಗಳ ಜೀ ಅನ್ನೇ ಬದಲಿಸುವಷ್ಟು ಜಗತ್ತನ್ನು ಬದಲಿಸುತ್ತಿದ್ದೇವೆ. ಇನ್ನು ಚಿಕ್ಕಪುಟ್ಟ ಜೀವಿಗಳ ಕಥೆಯೇನಾಗಿರಬಹುದು? ಸುಮ್ಮನೆ ನೀವು ಕೂರುವ, ವಾಸಿಸುವ ಬಿಲ್ಡಿಂಗು, ಮನೆ, ಪಕ್ಕದ ಕೆರೆ ಹೀಗೆ ಮನುಷ್ಯ ವಾಸದ ಸುತ್ತಮುತ್ತ ಅದೆಷ್ಟೋ ಇಂಥ ಸೂಕ್ಷ್ಮ ಬದಲಾವಣೆ ಗಳನ್ನು ನೋಡಬಹುದು.

ಗುಬ್ಬಿ, ಕಾಗೆ, ನರಿ, ಕರಡಿ, ತೋಳ, ಹಾವು, ಇಲಿ, ಪಾರಿವಾಳ, ಇಣಚಿ ಹೀಗೆ ಅದೆಷ್ಟೋ ಜೀವಿಗಳು, ಗಿಡಗಳೂ ಹೊರತಲ್ಲ. ಮನುಷ್ಯನ ಪೇಟೆಯ ಜೀವನ, ಮಾಲಿನ್ಯ, ಗ್ಲೋಬಲ್ ವಾರ್ಮಿಂಗ್ ಇತ್ಯಾದಿ ನೂರೆಂಟು break neck ವೇಗದ ಬದಲಾವಣೆಗಳಿಗೆ ಒಗ್ಗಿಕೊಂಡು ಬದುಕುವುದು, ಜೀವ ಸ್ವಾಭಾವಿಕ ಆಯ್ಕೆ, ವಂಶವಾಹಿನಿಯನ್ನೇ ಅದರ ಸುತ್ತ ಬೇಕಾದಂತೆ ಬದಲಿಸಿಕೊಳ್ಳುವುದು ಜೀವ ಜಗತ್ತಿನ ವಂಡರ್, ಅಲ್ಲವೇ?

ಶಿಶಿರ್‌ ಹೆಗಡೆ

View all posts by this author