Shishir Hegde Column: ಬೆಳಗ್ಗೆ ಬೇಗ ಏಳಲು ಐದು ಕ್ಷಣದ ಉಪಾಯ...
ಯಶಸ್ವಿ ವ್ಯಕ್ತಿಗಳು ಬೆಳಗ್ಗೆ ಬೇಗನೆ ಏಳುತ್ತಾರೆ, ಏಕೆಂದರೆ ಅವರಲ್ಲಿ ಶಿಸ್ತಿದೆ, ಪ್ರೇರಣೆ ಇದೆ, ಅವರಿಗೆ ದೇವರ ಆಶೀರ್ವಾದ ಇದೆ, ಅವರಲ್ಲಿ ಇನ್ನೇನೋ ಮಣ್ಣು ಮಸಿ ಇದೆ- ಎಂದೆಲ್ಲ ನಾವು ನಂಬಿ ಕೊಂಡಿರು ತ್ತೇವೆ. ಅವರೆಲ್ಲರೂ 4-5 ಗಂಟೆಗೆ ಅಲಾರಾಂ ಆಗುತ್ತಿದ್ದಂತೆ, ಯಾರನ್ನೂ ಶಪಿಸುವುದಿಲ್ಲ, ಬೈದು ಕೊಳ್ಳುವುದಿಲ್ಲ. ಮುಗುಳ್ನಗುತ್ತ, ಜಗತ್ ಪ್ರೇರಣೆಯಿಂದ ಬೆಡ್‌ನಿಂದ- ಪಿಂಗ್‌ಪಾಂಗ್ ಬಾಲಿನಂತೆ ಛಂಗನೆ ಪುಟಿದೇಳುತ್ತಾರೆ- ಇವೆಲ್ಲ ಎಂದುಕೊಳ್ಳುತ್ತೇವೆ.
-
ಶಿಶಿರಕಾಲ
ಟಿಂಗ್ ಟಿಂಗ್ ಟಿಂಗ್.. ಸ್ನೂಜ್..
ಇನ್ನೊಂದ್ ಐದ್ ನಿಮಿಷ ಸ್ನೂಜ್.. ಇನ್ನೊಂದು ಹತ್ತು ನಿಮಿಷ ಜಾಸ್ತಿ ಮಲಗಿಕೊಂಡರೆ ಭೂಮಿ ನಿಂತುಬಿಡುವುದಿಲ್ಲ.. ಸ್ನೂಜ್.. ಇವತ್ತೊಂದು ದಿನ, ಸ್ವಲ್ಪ ಹೊತ್ತು ಮಲಗಿಬಿಡುತ್ತೇನೆ... ಸ್ನೂಜ್... ಥೂತ್ತೇರಿಕ್ಕೆ.. ತಡವಾಗಿ ಹೋಯ್ತು, ನನ್ನ ಹಣೆಬರಹ.. ಇದು ಅದೆಷ್ಟೋ ಜನರ ಪ್ರತಿದಿನದ ಮೊದಲ ಸ್ವಗತ, ಮೊದಲ ಪ್ರಾಪಂಚಿಕ ಸಂಧಾನ, ಮಾತುಕತೆ.
ಮೊನ್ನೆ ಓದುಗರೊಬ್ಬರು ಒಬ್ಬ ಪ್ರಭಾವಿ ಮಾತುಗಾರರ ಭಾಷಣದ ತುಣುಕೊಂದನ್ನು ಕಳುಹಿಸಿ ಕೊಟ್ಟಿದ್ದರು. ಆ ಭಾಷಣದ ಸಾರ ಹೀಗಿತ್ತು- “ಬದುಕಿನಲ್ಲಿ ಸಾಧಿಸಬೇಕೆಂದರೆ ಬೆಳಗ್ಗೆ ಬೇಗ ಏಳಬೇಕು. ಬೇಗ ಏಳಬೇಕೆಂದರೆ ನಿಮಗೆ ಬದುಕಿನಲ್ಲಿ ಮುಖ್ಯವಾಗಿ ಒಂದು ದೊಡ್ಡ ಗುರಿ ಇರಬೇಕು. ಅಬ್ದುಲ್ ಕಲಾಂ ಹೇಳಿಲ್ಲವೇ, ನಿದ್ರಿಸುವಾಗ ಕಾಣುವುದು ಕನಸಲ್ಲ. ಬದಲಿಗೆ ನಿದ್ರಿಸಲು ಬಿಡದಿರು ವುದು ನಿಜವಾದ ಕನಸು. ಆ ಗುರಿಯೇ ನಿಮ್ಮನ್ನು ಎಬ್ಬಿಸಬೇಕು, ಎಬ್ಬಿಸುತ್ತದೆ.." ಎಂದೆಲ್ಲ.
ಅವರು ಸುಲಭಕ್ಕೆ ಸಿಗುವ ಉದಾಹರಣೆಗಳಾದ ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್, ಅಂಬಾನಿ ಮೊದಲಾದ ಹೆಸರನ್ನೆಲ್ಲ ಬಳಸಿಕೊಂಡು, ಬದುಕಿನಲ್ಲಿ ‘ಮೋಟಿವೇಷನ್’ ಇರಬೇಕು, ಆಗಲೇ ಬೆಳಗ್ಗೆ ಬೇಗ ಏಳಲಿಕ್ಕಾಗುವುದು ಎನ್ನುತ್ತಿದ್ದರು. ಅವರದು ಅದೇ ಓಬೀರಾಯನ ಕಾಲದ ಮಾತು. ಅದೇ ಭಾಷಣ. ಅದೇ ಅಮ್ಮಕ್ಕಜ್ಜಿಯ ಕಥೆ.
ಅದೇ ಹಸಿಬೆಂದ ಸುಳ್ಳು, ಕೆಲಸಕ್ಕೆ ಬಾರದ ಬುರುಡೆ. ನಿಮ್ಮಂದು ವೈಯಕ್ತಿಕ ವಿಷಯ ಹೇಳಬೇಕು. ನಾನು ನಿತ್ಯ ಬೆಳಗ್ಗೆ ನಾಲ್ಕೂವರೆಯಿಂದ ಐದು ಗಂಟೆಯ ಮಧ್ಯದಲ್ಲಿ ಏಳುತ್ತೇನೆ. ವಾರ, ವಾರಾಂ ತ್ಯ, ದಿನ, ನಕ್ಷತ್ರ, ಸ್ಥಳ ಯಾವುದೇ ಇರಲಿ, ಸಂಬಂಧವಿಲ್ಲ. ಹಾಗಂತ ಬೆಳಗ್ಗೆ ನನ್ನನ್ನು ನಿದ್ರೆಯಿಂದ ಎದ್ದೇಳಿಸುವ, ನಿದ್ರಿಸಲು ಬಿಡದ ಯಾವುದೇ ದೊಡ್ಡ ಮೋಟಿವೇಷನ್ ನನ್ನಲ್ಲಿಲ್ಲ. ನನ್ನ ಬದುಕಿ ನಲ್ಲಿ ಅಸಹಜ, ಘನಂದಾರಿ ಪ್ರೇರಣೆ ಯಾವುದೂ ಇಲ್ಲ.
ಇದನ್ನೂ ಓದಿ: Shishir Hegde Column: ʼರೀಲ್ಸ್ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್
ಸತ್ಯ ಹೇಳಬೇಕೆಂದರೆ ಹಾಸಿಗೆಯಿಂದ ಎದ್ದೇಳಿಸುವ ಮಟ್ಟದ ಸ್ಪೂರ್ತಿ ನನಗಿನ್ನೂ ಸಿಕ್ಕಿಯೇ ಇಲ್ಲ. ತಮಾಷೆ ಮಾಡುತ್ತಿಲ್ಲ. ಅಂಥದ್ದೊಂದು ಪ್ರೇರಣೆ ಯಾವುದಿರಬಹುದು ಎಂದು ಅದೆಷ್ಟೋ ಬಾರಿ ಯೋಚಿಸಿದ್ದಿದೆ. ಅಯ್ಯೋ, ಮಹಾನ್ ಸಾಧಕರಿಗೆ ಇರುವ ಅಥವಾ ಇತ್ತು ಎಂದು ಬೇರೆಯವರು ಹೇಳುವ, ನಂಬುವ, ಕನಸು, ಗುರಿ ಇತ್ಯಾದಿಗಳು ನನಗೇ ಇಲ್ಲವಲ್ಲ, ಸಾಧಕನಾದವನಿಗೆ ಇರಬೇಕಲ್ಲ ಎಂದೆನಿಸಿ, ಕೊರತೆಯ ಯೋಚನೆ ಬಂದದ್ದಿದೆ.
ಬದುಕಿನಲ್ಲಿ ಏನೋ ಒಂದು ‘ಮಿಸ್ ಹೊಡೆಯುತ್ತಿದೆಯೇ?’ ನಾನೇ ಸರಿಯಾಗಿ ಬದುಕುತ್ತಿಲ್ಲವೇ? ಎಂದೆಲ್ಲ ನನ್ನನ್ನು ನಾನೇ ಪ್ರಶ್ನಿಸಿಕೊಂಡದ್ದಿದೆ. ಬದುಕಿನಲ್ಲಿ ಪ್ರೇರಣೆಗೆ ಬೇಕಾದಷ್ಟಿದೆ, ಆದರೆ ಅವು ಯಾವುದಕ್ಕೂ ಕಲಾಂ ಹೇಳಿದ ಮಟ್ಟದಲ್ಲಿ ನನ್ನನ್ನು ಹಾಸಿಗೆಯಿಂದ ಎದ್ದು ಕೂರಿಸುವ ‘ತಾಕತ್ತು’ ಇಲ್ಲವಲ್ಲ.
ಯಶಸ್ವಿ ವ್ಯಕ್ತಿಗಳು ಬೆಳಗ್ಗೆ ಬೇಗನೆ ಏಳುತ್ತಾರೆ, ಏಕೆಂದರೆ ಅವರಲ್ಲಿ ಶಿಸ್ತಿದೆ, ಪ್ರೇರಣೆ ಇದೆ, ಅವರಿಗೆ ದೇವರ ಆಶೀರ್ವಾದ ಇದೆ, ಅವರಲ್ಲಿ ಇನ್ನೇನೋ ಮಣ್ಣು ಮಸಿ ಇದೆ- ಎಂದೆಲ್ಲ ನಾವು ನಂಬಿ ಕೊಂಡಿರುತ್ತೇವೆ. ಅವರೆಲ್ಲರೂ 4-5 ಗಂಟೆಗೆ ಅಲಾರಾಂ ಆಗುತ್ತಿದ್ದಂತೆ, ಯಾರನ್ನೂ ಶಪಿಸುವುದಿಲ್ಲ, ಬೈದುಕೊಳ್ಳುವುದಿಲ್ಲ. ಮುಗುಳ್ನಗುತ್ತ, ಜಗತ್ ಪ್ರೇರಣೆಯಿಂದ ಬೆಡ್‌ನಿಂದ- ಪಿಂಗ್‌ಪಾಂಗ್ ಬಾಲಿ ನಂತೆ ಛಂಗನೆ ಪುಟಿದೇಳುತ್ತಾರೆ- ಇವೆಲ್ಲ ಎಂದುಕೊಳ್ಳುತ್ತೇವೆ.
ಇಂಥ ಕಲ್ಪನೆಗಳು ನಮ್ಮಲ್ಲಿ ಸಾಂತ್ವನ, ಕೊರತೆ ತುಂಬಬಹುದು. ಆದರೆ ಅವುಗಳಿಂದ ನಮಗೆ ಎಂಟಾಣೆ ಪ್ರಯೋಜನವಿಲ್ಲ. ಅಲ್ಲ, ಸತ್ಯ ನಾಡೆ, ನರೇಂದ್ರ ಮೋದಿ, ಎಲಾನ್ ಮಸ್ಕ್ ಅವರೆಲ್ಲ ಬೆಳಗ್ಗೆ ಬೇಗನೆ ಏಳುತ್ತಾರೆ ಸರಿ, ಆದರೆ ಅವರಷ್ಟು ಪ್ರೇರಣೆ ನಮಗೆಲ್ಲಿಂದ ಬರಬೇಕು, ನಾವೆಲ್ಲಿಂದ ಕಡ ತರಬೇಕು ಸ್ವಾಮಿ!!
ಇಲ್ಲಿ ಇನ್ನೊಂದು ವಿಷಯ ಸ್ಪಷ್ಟಪಡಿಸಬೇಕು. ಅದೇನೆಂದರೆ, ಬೆಳಗ್ಗೆ ಬೇಗ ಎದ್ದೇಳುವವರೆಲ್ಲ ದೊಡ್ಡ ಸಾಧಕರು, ಶಿಸ್ತಿನವರು, ಕಡಿದು ಗುಡ್ಡೆ ಹಾಕುವವರು, ಮೌಂಟ್ ಎವರೆಸ್ಟ್ ಹತ್ತುವವರು ಎನ್ನುವುದು ಕೂಡ ಸುಳ್ಳೆ. ರಾತ್ರಿ ತಡವಾಗಿ ಮಲಗಿ, ಬೆಳಗ್ಗೆ ತಡವಾಗಿ ಏಳುವವರೆಲ್ಲರೂ ಪರಮ ಆಲಸಿ, ನಿಷ್ಪ್ರಯೋಜಕ ಎನ್ನುವುದು ಕೂಡ ಅಷ್ಟೇ ಸುಳ್ಳು, ತಪ್ಪು. ರಾತ್ರಿ ಎರಡು ಗಂಟೆಗೆ ಮಲಗುವ ಅದೆಷ್ಟೋ ಸಾಧಕ ಮಂದಿ ಇದ್ದಾರೆ.
ಕೆಲವರು ರಾತ್ರಿಯೇ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಕೆಲವರಿಗೆ ಬೆಳಗ್ಗೆ ತಲೆಯೇ ಓಡುವುದಿಲ್ಲ. ಅಂಥವರಿಗೆ ಬದಲಿಸಿಕೊಳ್ಳಬೇಕಿಲ್ಲ ಎಂದೆನಿಸಿದಲ್ಲಿ ಅದು ಕೂಡ ತಪ್ಪಲ್ಲ. ಯಾರಿಗೂ ಬೆಳಗ್ಗೆ ಬೇಗನೆ ಏಳುವುದಿಲ್ಲ ಎಂಬುದರ ಬಗ್ಗೆ ಪಾಪಪ್ರe ಇರಬೇಕಾಗಿಲ್ಲ. ನಿದ್ರೆ ಅವಶ್ಯಕತೆ. ನೀವು ಹಾಲು, ಪೇಪರ್ ಹಾಕುವವರಲ್ಲ ಎಂದಾದರೆ ನಿಮ್ಮ ಬದುಕಿನ ಯಾವುದೇ ಸಾಧನೆಗೆ ಎಷ್ಟು ಗಂಟೆಗೆ ಏಳುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ.
ಸಾಧಕರೆಲ್ಲರೂ ಬೆಳಗ್ಗೆ ಬೇಗ ಏಳುವವರು ಎನ್ನುವುದು ಪೊಂಕು-ಮಿಥ್ಯ. ಸಾಧನೆಗೂ ಏಳುವ ಸಮಯಕ್ಕೂ ಸಂಬಂಧ ಕಲ್ಪಿಸುವ ನೂರಾರು ಪುಸ್ತಕಗಳಿವೆ. ಆದರೆ ಅವರ ವಾದದಲ್ಲಿ ಹುರುಳಿಲ್ಲ. ಏಕೆಂದರೆ ಅವರು ಬೆಳಗ್ಗೆ ಬೇಗನೆ ಏಳುವ ಸಾಧಕರನ್ನಷ್ಟೇ ಅಲ್ಲಿ ಪಟ್ಟಿಮಾಡಿರುತ್ತಾರೆ. ಬೇಕಾದರೆ ನೋಡಿ. ಅವರದು ಅನುಕೂಲದ ಆಯ್ಕೆ.
ನಮ್ಮ ಮಿದುಳು, ಮನಸ್ಸು ಬಹಳ ಮಜಕೂರಿನದು. ಅದರಷ್ಟಕ್ಕೆ ಬಿಟ್ಟರೆ ಯಾವತ್ತೂ ಸುರಕ್ಷತೆ, ಆರಾಮದಾಯಕ ಮತ್ತು ಪರಿಚಿತವಿರುವುದನ್ನೇ ಅದು ಆಯ್ಕೆ ಮಾಡುವುದು. ಬೇಕಾದರೆ ಸ್ವಲ್ಪ ಯೋಚಿಸಿ ನೋಡಿ. ಇನ್ನು ಮುಂದೆ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕೆಂದರೆ ಅದಕ್ಕೆ ಆ ಮುಂಜಾವೇ ಅಪರಿಚಿತ, ಹೊಸತು. ಮುಗಿಯದ ನಿದ್ರೆಯನ್ನು ಮೀರುವುದು ಅದರ ಪ್ರಕಾರ ನೋವು, ದೇಹಕ್ಕೆ ಅಪಾಯ. ಬದಲಾವಣೆ ಯಾವತ್ತೂ ಅದರ ಪ್ರಕಾರ ಅಸುರಕ್ಷಿತ. ಆ ಕಾರಣಕ್ಕೇ ಅಲಾರಾಂ ಆಗುತ್ತಿದ್ದಂತೆ ಇದರ ಕಿತಾಪತಿ ಕೆಲವೇ ಕ್ಷಣದಲ್ಲಿ ಆರಂಭವಾಗುತ್ತದೆ.
ನೀವು ಅಲಾರಾಂ ಅದಾಕ್ಷಣ ನಡೆಯುವ ಸ್ವಗತ ಸಂಭಾಷಣೆಯನ್ನು ಸ್ವಲ್ಪ ಗ್ರಹಿಸಿ ನೋಡಿ. ಆಗ ಮಿದುಳು ಕೊಡುವ ಸಮಜಾಯಿಷಿ ಹೇಗಿರುತ್ತದೆ? ಅದು ವಿನ್ಯಾಸವಾಗಿರುವುದೇ ಹಾಗೆ. ಮಿದುಳು ಯಾವತ್ತೂ ಬದಲಾವಣೆ, ಬೆಳವಣಿಗೆಗೆ ಹಿಂದೇಟು ಹಾಕುತ್ತದೆ. ಪ್ರೇರಣೆ, ಪ್ಯಾಷನ್, ಶಿಸ್ತು ಇತ್ಯಾದಿ ಗಳೆಲ್ಲ ಅರ್ಥಹೀನ ಎಂದು ಯಾವಾಗ ಬೇಕಾದರೂ ಮನಸ್ಸು ನಮ್ಮನ್ನು ಒಪ್ಪಿಸುತ್ತದೆ. ಅದರ ಜತೆ ವಾದ ಮಾಡಿ ಗೆಲ್ಲಲು ಬೆಳ್ ಬೆಳಗ್ಗೆಯಂತೂ, ಅದರಲ್ಲೂ ಬೆಡ್ ಮೇಲೆ, ಚಾದರದೊಳಗೆ ಸಾಧ್ಯವೇ ಇಲ್ಲ.
ಹಾಗಾದರೆ ಏನು ಮಾಡೋದು? ಎರಡು ಸಾಧ್ಯತೆ- ಒಂದೋ ಅಷ್ಟು ಗಟ್ಟಿ ಮನಸ್ಸು ಮಾಡಿಕೊಳ್ಳ ಬೇಕು, ಮನಸ್ಸಿನ ಜತೆ ವಾದ, ಯುದ್ಧಕ್ಕಿಳಿದು ಅದನ್ನು ಮೀರಬೇಕು. ಅದು ಒಂದೆರಡು ದಿನ ಮಾಡಿ ಬಿಡಬಹುದು. ಆದರೆ ಪ್ರತಿನಿತ್ಯ ಬೆಳ್ಳಂ ಬೆಳಗ್ಗೆ? ಯಶಸ್ವಿಯಾದರೂ ಆಗೀಗ- ಒಂದೊಂದೇ ದಿನ ಮನಸ್ಸು ನಮ್ಮನ್ನು ಸೋಲಿಸುತ್ತದೆ.
ಕ್ರಮೇಣ ನಮ್ಮ ‘ಅಶ್ವಮೇಧ ಯಾಗ’ ಅಷ್ಟಕ್ಕೇ ನಿಂತು, ಅಲ್ಲಿಯೇ ಕುದುರೆ ಮಲಗಿ ಬಿಡುತ್ತದೆ. ಮನಸ್ಸಿಗೆ ಸೋಲಿಸಿ ಗೊತ್ತೇ ವಿನಾ ಸೋತು ಗೊತ್ತಿಲ್ಲ. ಮಂಡೆ ಸಮ ಇದ್ದವರಲ್ಲ ಈ ಪ್ರಕ್ರಿಯೆ ಸಹಜ ನಡೆಯುತ್ತದೆ. ಹಾಗಾಗಿ ಇಲ್ಲಿರುವ ಎರಡನೇ ಆಯ್ಕೆ- ಮಿದುಳಿಗೆ ಆ ಸಂಭಾಷಣೆಯ ಅವಕಾಶವನ್ನೇ ಕೊಡದಿರುವುದು.
ಏನದು? ಹೇಗದು? ನೀವು ಬೆಳಗ್ಗೆ ಬೇಗ ಏಳುವವರನ್ನು ಯಾರನ್ನೇ ಇದೊಂದು ಪ್ರಶ್ನೆ ಕೇಳಿ- ಬೆಳಗ್ಗೆ ಅಲಾರಾಂ ಅದಾಗ ಅಥವಾ ಎಚ್ಚರವಾದಾಗ ಹಾಸಿಗೆ ಹೇಗೆ ಬಿಡುತ್ತೀರಿ? ಎಂದು. ನಿಮ್ಮ ಪ್ರಶ್ನೆಗೆ ಅವರಲ್ಲಿ ಯಾವುದೇ ವಿಶೇಷ ಉತ್ತರ ಇರುವುದಿಲ್ಲ. ಏಳಬೇಕು, ಏಳುತ್ತೇನೆ, ಎದ್ದು ಬಿಡುತ್ತೇನೆ, ಎಚ್ಚರಾಗಿ ಬಿಡುತ್ತದೆ ಎಂಬಿತ್ಯಾದಿ ಉತ್ತರ ಬಂದೀತು.
ಅವರಿವರು ಏಕೆ, ನಾನೇ ಇಪ್ಪತ್ತು ವರ್ಷದಿಂದ ಬೆಳಗ್ಗೆ ಬೇಗ ಏಳುತ್ತಿದ್ದೇನೆ. ಏಳುವಾಗ ನಾನೆಂದೂ ಯೋಚಿಸುವುದೇ ಇಲ್ಲ. ಏಳಬೇಕು, ಏಳುತ್ತಿದ್ದೇನೆ ಅಷ್ಟೇ. ಬೆಳಗಿನ ಮಿದುಳಿನ ಸಂಭಾಷಣೆಯನ್ನು ತಪ್ಪಿಸಬೇಕೆಂದರೆ, ಏನೂ ಯೋಚಿಸದೆ ಒಂದೇ ಜಪಾಟಿಗೆ ಎದ್ದು ಕುಳಿತುಕೊಳ್ಳುವುದು. ಆದರೆ ಹೇಳಿದೆನಲ್ಲ, ಮಂಡೆ ಸಮ ಇರುವವರಿಗೆ ಅದು ಸುಲಭವಲ್ಲ. ಯೋಚನೆಗಳು, ಆಲಸ್ಯ ನನಗೂ ಬರುತ್ತವೆ. ಅದೆಲ್ಲದಕ್ಕೆ ಒಂದು ಅತ್ಯಂತ ಸುಲಭದ, ಒಂದು ಜೈವಿಕ ಹ್ಯಾಕ್ ಇದೆ. ಅದಕ್ಕೆ ‘5 ಕ್ಷಣದ ಉಪಾಯ’ ಎಂದು ಹೆಸರು.
ಏನದು ‘5 ಕ್ಷಣದ ಉಪಾಯ?’ ನೀವೆಲ್ಲರೂ ಇಸ್ರೋ, ನಾಸಾ ಅವರು ಮಾಡುವ ರಾಕೆಟ್ ಉಡಾವಣೆ ಯ ಸನ್ನಿವೇಶ ನೋಡಿರುತ್ತೀರಿ. ಅಲ್ಲಿ ಈ ಕೌಂಟ್‌ಡೌನ್ ಇರುತ್ತದೆ ನೋಡಿ. ಫೈವ್, ಫಾರ್, ಥ್ರೀ, ಟೂ, ಒನ್ ಎನ್ನುತ್ತಿದ್ದಂತೆ ‘ಬುಸ್ಸ್’ ಅಂತ ರಾಕೆಟ್ ಮೇಲಕ್ಕೇರುತ್ತದೆ. ಇದೇ ರೀತಿ ಐದು, ನಾಲ್ಕು, ಮೂರು, ಎರಡು, ಒಂದು ಎಂದು ಹಿಂದೆಣಿಸುವುದು.
ಹಿಂದೆಣಿಕೆಯಲ್ಲಿ ‘ಒಂದು’ ಕಳೆಯುತ್ತಿದ್ದಂತೆ ರಾಕೆಟ್‌ನಂತೆ ಮೇಲಕ್ಕೇಳುವುದು, ಕಾಲು ನೆಲಕ್ಕಿಡು ವುದು, ದೈಹಿಕವಾಗಿ ಚಲಿಸುವುದು. ಅತ್ಯಂತ ಸರಳ. ನಿಮಗೆ ಇದು ತೀರಾ ಪೊಕ್ಕು ವಿಚಾರ ಅನಿಸ ಬಹುದು. ಇಷ್ಟು ಸರಳ ಉಪಾಯ ಕೆಲಸ ಮಾಡಬಹುದೇ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಇದು ನೂರಕ್ಕೆ ನೂರು ಬಾರಿ ಕೆಲಸ ಮಾಡುತ್ತದೆ. ಇಲ್ಲಿ ಮುಖ್ಯ ಹಿಂದೆಣಿಕೆ. ಅಲಾರಾಂ ಆಗುತ್ತಿದ್ದಂತೆ, ಬೇರಿನ್ನೊಂದು ವಿಚಾರ ಬರುವುದರೊಳಗೆ ಐದರ ಹಿಂದೆಣಿಕೆ ಆರಂಭವಾಗಬೇಕು.
5, 4, 3 , 2.. ‘ಒಂದು’ ಎಂದಾಕ್ಷಣ ದೇಹ ಚಲಿಸಬೇಕು. ರಾತ್ರಿ ಮಲಗುವಾಗ ಬೆಳಗ್ಗೆ ಎದ್ದು ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದೆಲ್ಲ ಅಂದುಕೊಂಡರೆ ಅದೆಲ್ಲ ಪ್ರಯೋಜನಕ್ಕೆ ಬರುವು ದಿಲ್ಲ. ಬದಲಿಗೆ ಕಾರಣಗಳು ತೀರಾ ಚಿಕ್ಕವೆನಿಸುತ್ತವೆ. ಹಾಗಾಗಿ ಅದೆಲ್ಲ ಆಗದ ಕೆಲಸ. ಅಲಾರಾಂ ‘ಟಿಂಗ್ ಟಿಂಗ್’ ಐದು, ನಾಲ್ಕು, ಮೂರು, ಎರಡು, ಒಂದು, ದೈಹಿಕವಾಗಿ ಕಾರ್ಯಗತವಾಗುವುದು, ಬೆಡ್ ಬಿಟ್ಟು ಮೇಲೇಳುವುದು.
ಇದುವೇ ‘ಐದು ಸೆಕೆಂಡಿನ ಉಪಾಯ’. ಈ ಉಪಾಯ ನನ್ನ ಸೃಷ್ಟಿಯಲ್ಲ, ಆದರೆ ನನ್ನದೇ ಆಗಿ ಅದೆಷ್ಟೋ ವರ್ಷವಾಯಿತು. ಇಂದಿಗೂ ಇದು ನಿತ್ಯ ಬೆಳಗ್ಗೆ ಕೆಲಸ ಮಾಡುತ್ತದೆ. ಇದನ್ನು ಇತ್ತೀಚೆಗೆ ಮೆಲ್ ರಾಬಿ ಮೊದಲಾದ ಬರಹಗಾರರು ಇನ್ನಷ್ಟು ಪ್ರಚಲಿತಕ್ಕೆ ತಂದಿದ್ದಾರೆ.
ಬೆಳಗ್ಗೆ ಎದ್ದೇಳುವುದರ ಪ್ರಯೋಜನ, ಎಷ್ಟು ಗಂಟೆಗೆ ಏಳಬೇಕು ಇತ್ಯಾದಿ ಈಗ ಬೇಡ. ಅದು ಇಂದಿನ ವಿಷಯ ಅಲ್ಲ. ಮುಂದೆ ಬರೆದೇನು. ಆದರೆ ನಿಮ್ಮಲ್ಲಿ ಬೇಗ ಏಳಬೇಕೆನ್ನುವ ಕಿಂಚಿತ್ ಬಯಕೆ, ಉದ್ದೇಶವಿದ್ದರೆ, ಅದು ನಿಮ್ಮ ಅವಶ್ಯಕತೆಯಾಗಿದ್ದರೆ, ಅದು ಸಾಧ್ಯವಾಗುತ್ತಿಲ್ಲದಿದ್ದರೆ ಅದಕ್ಕೆ ಏಕೈಕ ಪರಿಹಾರ - ಐದು ಸೆಕೆಂಡಿನ ಉಪಾಯ. 5, 4, 3, 2, 1- ತಲೆ, ಬೆನ್ನು ಹಾಸಿಗೆಯಿಂದ ಮೇಲಕ್ಕೆ, ಕಾಲು ನೆಲಕ್ಕೆ.. ಉಡಾವಣೆ!!
ಬೇಗನೆ ಏಳಲು ನಿದ್ರೆ ಎಂದೂ ಸಮಸ್ಯೆಯಲ್ಲ. ಈ ಬೆಳಗಿನ ಮನಸ್ಸಿನ ಸಂಭಾಷಣೆ, ಸಮಜಾಯಿಷಿ ಇವುಗಳನ್ನು ಮೀರುವುದು ಕಷ್ಟದ್ದು. ಇಂದು ಸೂಕ್ಷ್ಮವಿದೆ. ಏನೆಂದರೆ ಯಾವುದೇ ವಿಷಯದ ಅರಿವು ಮೊದಲು ಮೂಡುತ್ತದೆ. ಆನಂತರದಲ್ಲಿ ಮನಸ್ಸಿನ ಕಾರ್ಯಚಟುವಟಿಕೆ, ಪ್ರಶ್ನೋತ್ತರ ಆರಂಭ ವಾಗುವುದು. ಎಚ್ಚರಾಗುವ ಸ್ಥಿತಿ ಅರಿವಿನದು. ಪ್ರeಯ ಹಿಂದೆ-ಹಿಂದೆ ಯೋಚನೆ ಬರುತ್ತದೆ.
ಈ ಐದು ಸೆಕೆಂಡಿನ ಉಪಾಯ. 5,4,3,2,1 ನಿದ್ರೆಯಿಂದ ಬೇಗ ಎದ್ದೇಳುವುದಕ್ಕೆ ಮಾತ್ರವಲ್ಲ. ಎಲ್ಲಿ ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಹೆಣಗಾಡಿ ಸೋಲುತ್ತೇವೋ, ಎಲ್ಲಿ ಯೋಚಿಸಿ ದರೆ ಕೆಲಸ ಕೆಡುತ್ತಿದೆಯೋ ಅಲ್ಲ ಈ ಉಪಾಯ ಬಳಸಿಕೊಳ್ಳಬಹುದು. ಉದಾಹರಣೆಗೆ- ಹಿಂದಿನ ವಾರ ರೀಲ್ಸ್ ನೋಡುವ ಚಟದ ಬಗ್ಗೆ ಬರೆದಿದ್ದೆ.
ಅದಕ್ಕೆ ರೀಲ್ಸ್ ನೋಡದೆ ನಿಲ್ಲಿಸುವುದು ಹೇಗೆಂದು ಕೆಲ ಓದುಗ ಮಿತ್ರರು ಇ-ಮೇಲ್ ಮಾಡಿ ಕೇಳಿದ್ದರು. ಫೋನ್ ಅನ್‌ಲಾಕ್ ಮಾಡಿರುತ್ತೀರಿ, ರೀಲ್ಸ ಇತ್ಯಾದಿ ನೋಡನೋಡುತ್ತಾ ಹದಿನೈದಿ ಪ್ಪತ್ತು ನಿಮಿಷ ಕಳೆದಿರುತ್ತದೆ. ಆಗ ಸಮಯ ವ್ಯರ್ಥವಾಗಿದೆ ಎಂದು ಅರೆಕ್ಷಣ ಅನಿಸುತ್ತದೆ.. ಆಗ 5,4,3,2.. ಒಂದು.. ಎನ್ನುತ್ತಿದ್ದಂತೆ ಎಕ್ಸಿಟ್, ಫೋನ್ ಲಾಕ್. ಈ ಐದು ಸೆಕೆಂಡ್ ಉಪಾಯ ಕೇವಲ ಏನೋ ಒಂದನ್ನು ನಿಲ್ಲಿಸುವುದಕ್ಕೆ ಮಾತ್ರವಲ್ಲ. ಇದನ್ನು ಏನೋ ಒಂದು ಕೆಲಸ ಆರಂಭಿಸಲು ಕೂಡ ಬಳಸಬಹುದು.
ಏನೋ ಒಂದು ಕಥೆ, ಲೇಖನ, ಯಾರಿಗೋ ಇ-ಮೇಲ್, ಯಾವುದೋ ಹಳೆಯ ಸ್ನೇಹಿತನಿಗೆ, ಸಂಬಂಧಿಕರಿಗೆ ಒಂದು ಫೋನ್ ಕರೆ, ಯಾವತ್ತೋ ತುಂಬಬೇಕಾದ ಯಾವುದೋ ಒಂದು ಅರ್ಜಿ.. ಎಲ್ಲದಕ್ಕೂ 5,4,3,2,1, ಆಕ್ಷನ್. ಈ ಐದು ಕ್ಷಣದ ಉಪಾಯ ಕೆಲಸ ಮಾಡಬೇಕೆಂದರೆ ‘ಒಂದು’ ಎನ್ನುತ್ತಿದ್ದಂತೆ ದೈಹಿಕವಾದ ನಡೆಯೊಂದನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಕಚೇರಿಯ ಮೀಟಿಂಗ್‌ನಲ್ಲಿ, ಮನೆಯಲ್ಲಿ, ಸ್ನೇಹಿತರ ಜತೆ, ಏನೋ ಒಂದು ಹೇಳಬೇಕು ಆದರೆ ಸಾಧ್ಯವಾಗುತ್ತಿಲ್ಲ ಎಂದೆನಿಸಿದಾಗ, ಅಥವಾ ಯಾರಿಗೋ ಏನೋ ಒಂದಕ್ಕೆ ಬೇಡ, ಇಲ್ಲ, ‘ನೋ’ ಎಂದು ಹೇಳಬೇಕಾದಾಗ, ಯಾವುದೋ ಒಂದು ಬೇಡದ ಸಂಬಂಧ ಮುರಿಯುವ ಕೊನೆಯ ಹಂತಕ್ಕೆ ಬಂದಾಗ, ವ್ಯಾಯಾಮ, ವಾಕಿಂಗ್‌ಗೆ ಹೊರಡಬೇಕು ಎಂದಾಗ.. 5,3,3,2,1, ಆಕ್ಷನ್. ದುಶ್ಚಟ ಬಿಡಬೇಕು ಎಂದೆನಿಸಿದಾಗ ಅತ್ಯಂತ ಕಷ್ಟದ್ದೆಂದರೆ ಅದು ಎದುರಿಗೆ ಇರುವಾಗ ಅದರ ಮೇಲೆ ನಿಯಂತ್ರಣ ಸಾಧಿಸುವುದು, ಮಾಡದಿರುವುದು. ಉದಾಹರಣೆಗೆ ಸಿಗರೇಟ್, ಹೆಂಡ ಇತ್ಯಾದಿ.
ಅದನ್ನು ಕೈಗೆತ್ತಿಕೊಳ್ಳುವ ಸಮಯದಲ್ಲಿ, ಗ್ಲಾಸಿಗೆ ಹುಯ್ಯುವ ಆ ಕ್ಷಣದಲ್ಲಿ - 5,3,3,2,1, ಸ್ಟಾಪ್- ನಿಲ್ಲಿಸಿಬಿಡುವುದು. ಮತ್ತೆ ಬೇಕೆನ್ನಿಸಿದರೆ- ಮತ್ತೆ ಅದೇ ಉಪಾಯ. ಯಾವುದೋ ನಮಗಿಷ್ಟವಾಗದ ಸ್ಥಳ, ಯಾರದೋ ಮನೆ, ಯಾರದೋ ಅತಿ ಒತ್ತಾಯ, ಕಿರಿಕಿರಿಯೆನಿಸುವ ಮಾತುಕತೆ, ಸಂಭಾಷಣೆ, ಮುರಿಯಬೇಕಾದ ಕೆಟ್ಟ ಸಂಬಂಧ. ಸಾಧ್ಯವೇ ಆಗುತ್ತಿಲ್ಲವೇ? 5,3,3,2,1, ಕತ್ತೆ ಬಾಲ, ಕುದುರೆ ಜುಟ್ಟು- ಔಟ್- ನಿರ್ಗಮನ. ಈ ಎಲ್ಲ ಉದಾಹರಣೆಗಳಲ್ಲಿ ಒಂದು ಅನುಕ್ರಮವಿದೆ.
ಅವಶ್ಯಕತೆ-ಪ್ರಜ್ಞೆ- ಯೋಚನೆ-ಜಿಜ್ಞಾಸೆ, ಸ್ವವಿಮರ್ಶೆ-ಅಂಜಿಕೆ, ಭಯ, ತರುವಾಯ ಹಿಂಜರಿಕೆ. ಇದು ಒಂದಾದ ನಂತರ ಒಂದು ಸಂಭವಿಸುತ್ತದೆ. ಇದೇ ನಮ್ಮ ಬಹುತೇಕ ನಿಷ್ಕ್ರಿಯತೆಗೆ ಕಾರಣ. ಹಿಂಜರಿಕೆ- ಆಮೇಲೆ ಮಾಡಿದರಾಯ್ತು, ಇನ್ಯಾವತ್ತೋ ನೋಡಿಕೊಳ್ಳೋಣ, ಮೊದಲು ಮಾನಸಿಕ ವಾಗಿ ತಯಾರಾಗೋಣ; ಮುಂದೂಡಿಕೆ, ದೀರ್ಘ ಸೂತ್ರ- ಆಮೇಲೆ ಬೇಸರ, ಪುನರಾವರ್ತನೆ, ಮತ್ತೆ ಬೇಸರ. ಈ ವಿಷವರ್ತುಲಕ್ಕೆ ಇರುವ ಪರಿಹಾರ ಇದೊಂದೇ.
ನಿತ್ಯ ಬದುಕಿನಲ್ಲಿ ಎಲ್ಲಿ ನಮ್ಮ ಹೃದಯ ಬಯಸುತ್ತದೆ ಆದರೆ ಬುದ್ಧಿ ಅಡ್ಡಗಾಲು ಇಡುತ್ತದೆಯೋ ಅಲ್ಲ ಐದು ಸೆಕೆಂಡಿನ ಉಪಾಯ ಬಹಳ ಪರಿಣಾಮಕಾರಿ. 5,3,3,2,1 ‘ಆಕ್ಷನ್’. ಇದನ್ನು ನಾನಂತೂ ನಿತ್ಯ ಬದುಕಿನಲ್ಲಿ ಅಸಂಖ್ಯ ಕಡೆ, ಎಲ್ಲಿ ಸ್ನೂಜ್ ಬಟನ್ ಕಾಣಿಸುತ್ತದೆಯೋ ಅಲ್ಲ ಬಳಸುತ್ತೇನೆ. ನನ್ನ ಮಟ್ಟಿಗಂತೂ ಇದು ಬಹಳ ಸಹಾಯಕ. 5,3,3,2,1- ಆಕ್ಷನ್! ಅಷ್ಟೆ. ಈ ಉಪಾಯವನ್ನು ನೀವು ಎಲ್ಲಿ ಬಳಸಿದಿರಿ ತಿಳಿಸಿ. ಚಿಯರ್ಸ್.