ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಚಿತ್ರಾನ್ನ ಅಂದರೆ ವರ್ಣರಂಜಿತ ಅನ್ನ; ಛತ್ರದ ಅನ್ನ ಅಂತಲ್ಲ !

ಅನ್ನದ ಮಹತ್ತ್ವವನ್ನು ಸಾರುವ ಇನ್ನಷ್ಟು ಘನತರ ಸೂಕ್ತಿಗಳು ತೈತ್ತಿರೀಯ ಉಪನಿಷತ್ತಿನಲ್ಲಿವೆ. “ಅನ್ನಂ ಬ್ರಹ್ಮೇತಿ ವ್ಯಜಾನಾತ್" (ಅನ್ನವನ್ನು ಬ್ರಹ್ಮವೆಂದು ತಿಳಿಯಬೇಕು); “ಅನ್ನಂ ನ ನಿಂದ್ಯಾತ್, ತದ್‌ವ್ರತಂ" (ಅನ್ನವನ್ನು ಯಾವತ್ತೂ ನಿಂದಿಸಬಾರದು, ಅದೊಂದು ವ್ರತವೇ ಆಗಿರಬೇಕು); “ಅನ್ನಂ ನ ಪರಿಚಕ್ಷೀತ, ತದ್ ವ್ರತಂ (ಅನ್ನವನ್ನು ತ್ಯಜಿಸಬಾರದು, ಅದೂ ಒಂದು ವ್ರತ); “ಅನ್ನಂ ಬಹು ಕುರ್ವೀತ, ತದ್‌ವ್ರತಂ" (ಅನ್ನವನ್ನು ವೃದ್ಧಿಪಡಿಸಿಕೊಳ್ಳಬೇಕು, ಅನ್ನವೆಂದರೇನೇ ಒಂದು ವ್ರತ). ಇಲ್ಲಿ ಅನ್ನ ಎಂದರೆ ಅಕ್ಕಿ ಯಿಂದ ಬೇಯಿಸಿ ಮಾಡಿದ ಅನ್ನ ಎಂಬ ಸೀಮಿತ ಅರ್ಥವಲ್ಲ.

ಚಿತ್ರಾನ್ನ ಅಂದರೆ ವರ್ಣರಂಜಿತ ಅನ್ನ; ಛತ್ರದ ಅನ್ನ ಅಂತಲ್ಲ !

ಅಂಕಣಕಾರ ಶ್ರೀವತ್ಸ ಜೋಶಿ

ತಿಳಿರುತೋರಣ

srivathsajoshi@yahoo.com

ಅನ್ನವನ್ನು ನಾವು ಅನ್ನ ಎನ್ನುತ್ತೇವೇಕೆ? ಇದೊಳ್ಳೇ ಪ್ರಶ್ನೆ ಆಯ್ತಲ್ಲ, ಅನ್ನವನ್ನು ಅನ್ನವೆನ್ನದೆ ಚಪಾತಿ ಅಥವಾ ರಾಗಿಮುದ್ದೆ ಎಂದು ಹೇಳಬೇಕೇ ಅಂತ ಕೇಳಬೇಡಿ. ಅನ್ನ ಪದದ ವ್ಯುತ್ಪತ್ತಿಯ ಬಗ್ಗೆ ನಾನಿಲ್ಲಿ ಹೇಳುತ್ತಿರುವುದು. “ಅನ್ನಾದ್ಭೂತಾನಿ ಜಾಯಂತೇ ಜಾತಾನ್ಯನ್ನೇನ ವರ್ಧಂತೇ|

ಆದ್ಯತೇತ್ತಿ ಚ ಭೂತಾನಿ ತಸ್ಮಾದನ್ನಂ ತದುಚ್ಯತೇ||" ಎಂಬ ಶ್ಲೋಕವಿದೆ ತೈತ್ತಿರೀಯ ಉಪನಿಷತ್ತಿ ನಲ್ಲಿ. ಈ ಶ್ಲೋಕದ ಅರ್ಥವೇನೆಂದರೆ “ಅನ್ನದಿಂದಾಗಿ ಪ್ರಾಣಿಗಳ ಉತ್ಪತ್ತಿಯಾಗುತ್ತದೆ. ಹೀಗೆ ಉತ್ಪನ್ನವಾದ ಪ್ರಾಣಿಗಳು ವಽಸುವುದು ಅನ್ನದಿಂದಲೇ. ಆದ್ಯತೇ = ಪ್ರಾಣಿಗಳಿಂದ ತಾನು ತಿನ್ನಲ್ಪ ಡುತ್ತದೆ; ಅತ್ತಿ ಚ = ಮತ್ತು ತಾನು ಪ್ರಾಣಿಗಳನ್ನು ತಿನ್ನುತ್ತದೆ. ಆದ್ದರಿಂದ ಇದಕ್ಕೆ ಅನ್ನ ಎಂಬ ಹೆಸರು.

ಇದನ್ನೂ ಓದಿ: Srivathsa Joshi Column: ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಆದ್ಯತೇ ಇತಿ ಅನ್ನಂ. ಅತ್ತಿ ಇತಿ ಅನ್ನಂ. ಇದರಲ್ಲಿ, ಪ್ರಾಣಿಗಳಿಂದ ಅನ್ನವು ತಿನ್ನಲ್ಪಡುತ್ತದೆ ಎಂಬ ಭಾಗ ಸುಲಭವಾಗಿ ಅರ್ಥವಾಗುತ್ತದೆ. ಮನುಷ್ಯಪ್ರಾಣಿಗಳಾದ ನಾವೂ ಅನ್ನ ತಿಂದೇ ಬದುಕುವವ ರಲ್ಲವೇ! ಆದರೆ, ಅನ್ನವು ಪ್ರಾಣಿಗಳನ್ನು ತಿನ್ನುತ್ತದೆ ಎಂಬ ಭಾಗ ಸುಲಭವಾಗಿ ಅರ್ಥವಾಗುವುದಿಲ್ಲ. ಅದು ಅರ್ಥವಾಗಲಿಕ್ಕೆ ಸ್ವಲ್ಪ ಅಧ್ಯಾತ್ಮ ಬೇಕು, ಜೀವನಾದರ್ಶ ತಿಳಿದುಕೊಳ್ಳಬೇಕು.

ಅದನ್ನು ತಿಳಿಸುವುದಕ್ಕೂ ಒಂದು ಶ್ಲೋಕವಿದೆ: “ಆದ್ಯತೇ ವಿಧಿವದ್ಭುಕ್ತಮತ್ತಿ ಭೋಕ್ತಾರಮನ್ಯಥಾ| ಆಯುಷ್ಯ ಸ್ವಾಸ್ಥ್ಯದಂ ಪೂರ್ವಮನ್ಯಥೈವೇತರತ್ ಸ್ಮೃತಮ್|| ಅಂದರೆ, ವಿಧಿಪೂರ್ವಕವಾಗಿ ಸ್ವೀಕರಿಸಲ್ಪಡುವುದು (ಆದ್ಯತೇ ಎಂಬ ವ್ಯುತ್ಪತ್ತಿಗನುಸಾರವಾಗಿ) ‘ಅನ್ನ’ವೆನಿಸುತ್ತದೆ. ಹಾಗೆಯೇ ವಿರುದ್ಧ ರೀತಿಯಲ್ಲಿ, ಯಾವೊಂದು ಗೌರವಸಂಸ್ಕಾರಗಳಿಲ್ಲದೆ ಸೇವಿಸಲ್ಪಡುವುದು (ಅತ್ತಿ ಎಂಬ ವ್ಯುತ್ಪತ್ತಿಗೆ ಅನುಸಾರವಾಗಿ) ಕೂಡ ‘ಅನ್ನ’ವೇ. ವ್ಯತ್ಯಾಸವೇನೆಂದರೆ ಮೊದಲನೆಯ ವಿಧವಾದ ಅನ್ನವು ಆಯುಷ್ಯ ಮತ್ತು ಆರೋಗ್ಯಪ್ರದವಾದರೆ ಎರಡನೆಯ ರೀತಿಯ ಅನ್ನವು ಅದಕ್ಕೆ ವಿರುದ್ಧ ವಾಗಿ ಆಯುಷ್ಯ-ಆರೋಗ್ಯಗಳ ನಾಶಕ.

Srivathsa Jos ok

ಅನ್ನದ ಮಹತ್ತ್ವವನ್ನು ಸಾರುವ ಇನ್ನಷ್ಟು ಘನತರ ಸೂಕ್ತಿಗಳು ತೈತ್ತಿರೀಯ ಉಪನಿಷತ್ತಿನಲ್ಲಿವೆ. “ಅನ್ನಂ ಬ್ರಹ್ಮೇತಿ ವ್ಯಜಾನಾತ್" (ಅನ್ನವನ್ನು ಬ್ರಹ್ಮವೆಂದು ತಿಳಿಯಬೇಕು); “ಅನ್ನಂ ನ ನಿಂದ್ಯಾತ್, ತದ್‌ವ್ರತಂ" (ಅನ್ನವನ್ನು ಯಾವತ್ತೂ ನಿಂದಿಸಬಾರದು, ಅದೊಂದು ವ್ರತವೇ ಆಗಿರಬೇಕು); “ಅನ್ನಂ ನ ಪರಿಚಕ್ಷೀತ, ತದ್ ವ್ರತಂ (ಅನ್ನವನ್ನು ತ್ಯಜಿಸಬಾರದು, ಅದೂ ಒಂದು ವ್ರತ); “ಅನ್ನಂ ಬಹು ಕುರ್ವೀತ, ತದ್‌ವ್ರತಂ" (ಅನ್ನವನ್ನು ವೃದ್ಧಿಪಡಿಸಿಕೊಳ್ಳಬೇಕು, ಅನ್ನವೆಂದರೇನೇ ಒಂದು ವ್ರತ). ಇಲ್ಲಿ ಅನ್ನ ಎಂದರೆ ಅಕ್ಕಿಯಿಂದ ಬೇಯಿಸಿ ಮಾಡಿದ ಅನ್ನ ಎಂಬ ಸೀಮಿತ ಅರ್ಥವಲ್ಲ.

ಆಹಾರ ಎಂಬ ವಿಶಾಲ ಅರ್ಥ. ಭಗವದ್ಗೀತೆಯಲ್ಲಿ ಬರುವ “ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾ ದನ್ನಸಂಭವಃ" (ಅನ್ನದಿಂದಾಗಿ ಜೀವಿಗಳೆಲ್ಲ ಉತ್ಪತ್ತಿಯಾಗುತ್ತವೆ, ಅನ್ನದ ಉತ್ಪತ್ತಿಯು ಮಳೆ ಯಿಂದಾಗುತ್ತದೆ) ಮತ್ತು “ಪಚಾಮ್ಯನ್ನಂ ಚರ್ತುಧಮ್" (ಎಲ್ಲ ಜೀವಿಗಳ ಶರೀರದೊಳಗೆ ಇದ್ದು ಕೊಂಡು ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ ಎಂಬ ನಾಲ್ಕು ವಿಧದ ಅನ್ನವನ್ನು ನಾನು ಜೀರ್ಣಿಸುತ್ತೇನೆ) ಶ್ಲೋಕಭಾಗಗಳಲ್ಲೂ ಅನ್ನವೆಂದರೆ ಆಹಾರ ಎಂಬ ವಿಶಾಲ ಅರ್ಥವನ್ನೇ ತೆಗೆದು ಕೊಳ್ಳಬೇಕು.

ಅನ್ನದಾತ, ಅನ್ನನಾಳ, ಅನ್ನಪ್ರಾಶನ ಮುಂತಾದ ಪದಗಳಲ್ಲೂ ಬಹುಮಟ್ಟಿಗೆ ಅನ್ನವೆಂದರೆ ಆಹಾರವೆಂಬ ಸ್ಥೂಲ ಅರ್ಥವೇ. ಆದರೆ ಇನ್ನುಮುಂದೆ ಈ ಲೇಖನದಲ್ಲಿ ಅನ್ನ ಪದವನ್ನು ಅಕ್ಕಿ ಬೇಯಿಸಿ ತಯಾರಿಸಿದ ಅನ್ನ ಎಂಬ ಸೀಮಿತ ಅರ್ಥದಲ್ಲಷ್ಟೇ ನೋಡೋಣ. ಮುಖ್ಯವಾಗಿ ಕನ್ನಡಿಗರೆಲ್ಲರಿಗೂ ಚಿರಪರಿಚಿತರುವ, ಕನ್ನಡಿಗರೆಲ್ಲರ ಪ್ರೀತಿಪಾತ್ರವಾದ, ಕರ್ನಾಟಕಕ್ಕೆ ಜಿ.ಐ ಟ್ಯಾಗ್ ಸಹ ಸಿಗಬಹುದಾದ ‘ಚಿತ್ರಾನ್ನ’ದ ಮೇಲೆ ಫೋಕಸ್ ಮಾಡೋಣ.

ಮೊನ್ನೆ ಫೇಸ್‌ಬುಕ್‌ನಲ್ಲೊಂದು ವಿಡಿಯೊ ನೋಡಿದೆ. ‘ಮೈಸೂರಿನ ಕಥೆಗಳು’ ಎಂಬ ಹೆಸರಿನ ಆಲ್ಬಮ್‌ನಡಿ “ಚಿತ್ರಾನ್ನಕ್ಕೆ ಆ ಹೆಸರು ಹ್ಯಾಗೆ ಬಂತು..." ಎಂದು ಅದರ ಟೈಟಲ್. ಪೋಸ್ಟ್ ಮಾಡಿ ರುವವರು ಧರ್ಮೇಂದ್ರ ಕುಮಾರ್. ಇವರು ಮೈಸೂರು, ಬೆಂಗಳೂರು ಅಥವಾ ಸಮಗ್ರ ಕರ್ನಾಟಕದ ಇತಿಹಾಸವನ್ನು ತಮ್ಮದೇ ಆದ ರೀತಿಯಲ್ಲಿ ಚಿಕ್ಕಚಿಕ್ಕ ವಿಡಿಯೊ(ರೀಲ್)ಗಳ ಮೂಲಕ ಹೇಳುತ್ತಾರೆ. ಈ ಹಿಂದೆಯೂ ನಾನು ಆಗೊಮ್ಮೆ ಈಗೊಮ್ಮೆ ನೋಡಿದ್ದೇನೆ.

ಕೆಲವು ಸ್ವಾರಸ್ಯಕರ ವಿಷಯಗಳನ್ನು ತಿಳಿದುಕೊಂಡಿದ್ದೇನೆ ಕೂಡ. ಹಾಗೆ ಈ ವಿಡಿಯೊವನ್ನೂ ಆಸಕ್ತಿಯಿಂದಲೇ ಪ್ಲೇ ಮಾಡಿದೆ. ಎಡಗೈಯಲ್ಲಿ ಚಿತ್ರಾನ್ನದ ಪ್ಲೇಟ್ ಹಿಡಿದುಕೊಂಡೇ ಧರ್ಮೇಂದ್ರ ಕುಮಾರ್ ಮಾತನಾಡಿದ್ದಾರೆ. ಒಟ್ಟು 58 ಸೆಕೆಂಡ್ ಅವಧಿಯ ವಿಡಿಯೊದಲ್ಲಿ, ಒಂದಿಷ್ಟು ಅಭಿನಯವನ್ನೂ ಸೇರಿಸಿ ನುಡಿದ ಅವರ ಮಾತಿನ ಪಠ್ಯರೂಪ ಹೀಗಿದೆ: “ಹಿಂದೆ ಛತ್ರಗಳು ಇದ್ದವು. ಒಂದೂರಿನಿಂದ ಇನ್ನೊಂದೂರಿಗೆ ಪ್ರಯಾಣ ಮಾಡಬೇಕಾದರೆ ರಾತ್ರಿ ಮಲಗಿಕೊಳ್ಳಲಿಕ್ಕೆ ಧರ್ಮ ಛತ್ರಗಳಿದ್ದವು.

ಧರ್ಮಛತ್ರಗಳಲ್ಲಿ ಪ್ರಯಾಣಿಕರು ತಂಗಬಹುದಾಗಿತ್ತು. ಬೆಳಗ್ಗೆದ್ದು ಅರ್ಲಿ ಮಾರ್ನಿಂಗ್ ಬಿಡ್ಬೇಕಾದ್ರೆ ಛತ್ರದ ಧರ್ಮದರ್ಶಿಗಳು ಹಿಂದಿನ ರಾತ್ರಿ ಉಳಿದಿದ್ದ ಅನ್ನವನ್ನು ಒಗ್ಗರಣೆ ಮಾಡಿ ಕಲಸಿ ಪ್ರಯಾ ಣಿಕರಿಗೆ ಮುಂದಿನ ದಾರಿಗೆ ಬುತ್ತಿಯಾಗಿ ಕೊಡುತ್ತಿದ್ದರು. ಅದನ್ನು ‘ಛತ್ರದ ಅನ್ನ’ ಅಂತ ಕರೆಯೋರು. ಮುಂದಿನದಾರಿಗೆ ತಗೊಂಡುಹೋಗಿ ಇನ್ನೊಂದು ಧರ್ಮಛತ್ರ, ಇನ್ನೊಂದ್ಸಾರಿ ಸಾಯಂಕಾಲಕ್ಕೆ ಎಲ್ಲಿ ಸೆಟ್ಲ್ ಆಗಬೇಕು ಅಷ್ಟರೊಳಗೆ ಮಧ್ಯದ ದಾರಿಗೆಂದು ಸಿಕ್ಕಂಥ ಬುತ್ತಿಯೇ ‘ಛತ್ರದ ಅನ್ನ’.

ಅದು ಛತ್ರದ ಅನ್ನ ‘ಛತ್ರಾನ್ನ’ ಹೋಗಿ ಇವತ್ತು ‘ಚಿತ್ರಾನ್ನ’ ಆಗಿದೇಏಏಏಏ! ಛತ್ರದ ಅನ್ನ ಛತ್ರಾನ್ನ ಹೋಗಿ ಇವತ್ತು ಚಿತ್ರಾನ್ನ ಆಗಿದೆ! ಇದು ಚಿತ್ರಾನ್ನ ಇದು ಛತ್ರದ ಅನ್ನ. ಒಗ್ಗರಣೆ ಕಲಸಿದ ಅನ್ನ. ಬಹಳ ಸಿಂಪಲ್ಲಾಗಿ ಮಾಡ್ಬಹುದು ಇದನ್ನು. ಅನ್ನಕ್ಕೊಂಚೂರ್ ಒಗ್ಗರಣೆ, ಒಂಚೂರ್ ಅರಶಿನ ಹಾಕ್ಕೊಟ್ಟ್ರೆ ಅದು ಛತ್ರದ ಅನ್ನ ಆಯ್ತು. ಛತ್ರದ ಅನ್ನ ಹೋಗಿ ಚಿತ್ರಾನ್ನ ಆಗಿದೆ. ನೀವು ಚಿತ್ರಾನ್ನ ತಿನ್ಬೇಕಾದ್ರೆ ಹಿಂದಿನ್ ಕಾಲ್ದಲ್ಲಿ ನಮ್ಮ ಜನ ಹೆಂಗ್ಹೆಂಗೆಲ್ಲ ಕಷ್ಟಪಟ್ಟರು ಅಂತ ನೆನೆಸ್ಕೊಳ್ಳೋದನ್ನ ಮರೀಬೇಡಿ!" ಎಲ್ಲ ಓಕೆ, ಆದರೆ “ಚಿತ್ರಾನ್ನದ ಮೂಲ ಛತ್ರಾನ್ನ" ಎಂಬ ಅಬದ್ಧ ಯಾಕೆ? ಎಷ್ಟೆಂದರೂ ‘ರೀಲ್’ ತಾನೆ? ಇಲ್ಲ.

ಈ ವಿಡಿಯೊದಲ್ಲಿ ಧರ್ಮೇಂದ್ರ ಕುಮಾರರ ಮಿಕ್ಕೆಲ್ಲ ವಿವರಣೆ ಸಮಂಜಸವಾಗಿಯೇ ಇದೆ. ಹಿಂದಿನ ಕಾಲದಲ್ಲಿ ಜನರು ಕಾಲ್ನಡಿಗೆಯಲ್ಲಿ ಅಥವಾ ಹೆಚ್ಚೆಂದರೆ ಎತ್ತಿನಬಂಡಿಯಲ್ಲಿ ಪ್ರಯಾಣ ಮಾಡು ವಾಗ ರಾತ್ರಿವೇಳೆ ಧರ್ಮಛತ್ರಗಳಲ್ಲಿ ತಂಗುತ್ತಿದ್ದದ್ದು, ಅಲ್ಲಿ ಊರ ದಾನಿಗಳು/ಧರ್ಮದರ್ಶಿಗಳು ಸರಳವಾದ ಊಟ-ವಸತಿ ಒದಗಿಸುತ್ತಿದ್ದದ್ದು, ಮಾರನೇದಿನಕ್ಕೆಂದು ಬುತ್ತಿ ಕಟ್ಟಿಕೊಡುತ್ತಿದ್ದದ್ದು, ಜನರು ಅದನ್ನು ಛತ್ರದ ಅನ್ನ ಎಂದು ಕೃತಜ್ಞತಾಪೂರ್ವಕ ಸ್ವೀಕರಿಸುತ್ತಿದ್ದದ್ದು... ಎಲ್ಲ ಒಪ್ಪಬಹುದಾದ ವಿಚಾರಗಳೇ.

ಮಾತ್ರವಲ್ಲ ಪೂರ್ವಜರ ಬಗ್ಗೆ ಹೆಮ್ಮೆಪಡಬಹುದಾದಂಥವು ಕೂಡ. ಅದನ್ನು ಧರ್ಮೇಂದ್ರ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ರೀಲ್ ಮೂಲಕ ಈಗಿನ ಜನರಿಗೆ ತಿಳಿಯಪಡಿಸಿ ರುವುದೂ ಮೆಚ್ಚತಕ್ಕ ಅಂಶವೇ. ಆದರೆ ‘ಚಿತ್ರಾನ್ನ’ ಎಂಬ ಪದ ಬಂದಿರುವುದು ‘ಛತ್ರಾನ್ನ’ದಿಂದ ಎನ್ನುವುದು ಮಾತ್ರ ಶುದ್ಧ ಬಕ್ವಾಸ್, ಪಕ್ಕಾ ಬುರುಡೆ, ಹದಿನಾರಾಣೆ ಬೊಗಳೆ.

ಪಾಪ, ಧರ್ಮೇಂದ್ರ ಕುಮಾರರ ರೀಲ್ ನೋಡಿದ ಬಹಳಷ್ಟು ಅಮಾಯಕರು ‘ಓಹ್ ಹೌದಾ! ಗೊತ್ತೇ ಇರಲಿಲ್ಲ!’ ಎಂದು ಕಣ್‌ಕಣ್‌ಬಿಟ್ಟು ಕಾಮೆಂಟ್ ಬರೆದಿದ್ದಾರೆ. ಆಫ್‌ ಕೋರ್ಸ್, ಸೋಷಿಯಲ್ ಮೀಡಿಯಾದಲ್ಲಿ ಧರ್ಮೇಂದ್ರಕುಮಾರರನ್ನು ಇದಕ್ಕಾಗಿ ಟ್ರೋಲ್ ಮಾಡಿದವರೂ ಇದ್ದಾರೆ. “ಛತ್ರ ಅನ್ನೋ ಪದ ಕಾಲದ ಹೊಡೆತದಲ್ಲಿ ಅಪಭ್ರಂಶ ವಾಗಿಲ್ಲ; ಅನ್ನ ಅನ್ನೋ ಪದ ಶತಮಾನಗಳಿಂದ ಅಪಭ್ರಂಶವಾಗಿಲ್ಲ; ಛತ್ರ+ಅನ್ನ=ಛತ್ರಾನ್ನ ಅಂತಿದ್ದದ್ದು ಚಿತ್ರಾನ್ನವಾಗಿ ಅಪಭ್ರಂಶವಾಯ್ತಂತೆ!

ಎಲ್ಲಿಂದಾ ಬರ್ತಾವೋ ಶಿವನೇ... ಲೈಕ್‌ಒತ್ತಿ, ಕಮೆಂಟ್ ಮಾಡಿ, ಸಬ್‌ಸ್ಕ್ರೈಬ್ ಆಗಿ ಜನರೇಶನ್ನಿನ ಸಂಶೋಧನೆಗಳು ಹೀಗೇ ಇರ್ತಾವೆ!" ಎಂದು ಜರಿದವರೂ ಇದ್ದಾರೆ. ಹಾಗಾದರೆ ‘ಚಿತ್ರಾನ್ನ’ದ ಅಸಲಿ ಚರಿತ್ರೆ ಏನು? ಆ ಪದದ ನಿಷ್ಪತ್ತಿ ಏನು? ಕನ್ನಡ ಶಬ್ದಾರ್ಥ ವಿಚಾರಕ್ಕೆ ಬಂದಾಗ ‘ಪವಿತ್ರ ಬೈಬಲ್’ ಎಂದೇ ಪರಿಗಣಿತವಾಗುವ ಕಿಟ್ಟೆಲ್ ಕೋಶದಿಂದಲೇ ಆರಂಭಿಸೋಣ.

ಕಿಟ್ಟೆಲ್ ಕೋಶದಲ್ಲಿ ‘ಚಿತ್ರಾನ್ನ’ ಪದಕ್ಕೆ ಕೊಟ್ಟಿರುವ ಅರ್ಥ Rice dressed with coloured, or various condiments; a hotchpotch of boiled grain ಎಂದು. ಶಬ್ದಗಳ ವ್ಯುತ್ಪತ್ತಿಯನ್ನು ಹೆಚ್ಚು ವ್ಯಾಖ್ಯಾನಿಸುವುದಿಲ್ಲವಾದರೂ ಕಿಟ್ಟೆಲ್ ಕೋಶ ಸಾಮಾನ್ಯವಾಗಿ ಯಾವುದೇ ಶಬ್ದದ ಬಳಕೆ ಹೇಗೆ, ಅದು ಯಾವ ಭಾಷೆಯಿಂದ ಬಂದಿದೆ ಇತ್ಯಾದಿಯನ್ನು ಸಂಕ್ಷಿಪ್ತ ವಾಗಿ ತಿಳಿಸುತ್ತದೆ.

ಚಿತ್ರಾನ್ನಕ್ಕೆ ಸಂಬಂಧಿಸಿದಂತೆ ಛತ್ರದ ಸುಳಿವು ಏನೂ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಪ್ರೊ.ಜಿ. ವೆಂಕಟಸುಬ್ಬಯ್ಯನವರ ಮುಂದಾಳತ್ವದಲ್ಲಿ ಹೊರತಂದ ಎಂಟು ಸಂಪುಟಗಳ ಕನ್ನಡ ನಿಘಂಟು ವಿನ ಮೂರನೆಯ ಸಂಪುಟದಲ್ಲಿ, ಅಂದರೆ ೨೮೩೮ನೆಯ ಪುಟದಲ್ಲಿ ‘ಚಿತ್ರಾನ್ನ’ ಪದಕ್ಕೆ ಕೊಟ್ಟಿರುವ ಅರ್ಥವಿವರಣೆ ಹೀಗಿದೆ: “ಚಿತ್ರಾನ್ನ(ನಾಮಪದ): ಉಪ್ಪು, ಕಾರ, ಹುಳಿ ಸೇರಿಸಿ ಒಗ್ಗರಣೆ ಹಾಕಿ ಕಲೆಸಿದ ಅನ್ನ; ಮಿರುಪ ಚಿತ್ರಾನ್ನ ನಾನಾಬಗೆ ಭಕ್ಷ್ಯಗಳ... ಸಿರಿಧರನಾರೋಗಿಸಿದನು (ಕಂಠೀರವ ನರಸರಾಜ ಜಯಂ- ಸುಮಾರು ಕ್ರಿ.ಶ ೧೬೪೮ರಲ್ಲಿ ಗೋವಿಂದವೈದ್ಯ ಕವಿಯ ರಚನೆ); ಪರಿಕಲಿತ ಚಿತ್ರಾನ್ನ ರಾಶಿಯ ಶೋಣಿತಾಜ್ಯಗಳ... ಭೋಜನಗೈದು (ಆನಂದ ರಾಮಾಯಣ- ಸುಮಾರು ಕ್ರಿ.ಶ ೧೭೫೦ರಲ್ಲಿ ತಿಮ್ಮಾಮಾತ್ಯ ಕವಿಯ ರಚನೆ); ಹುರುಳಿಕಾಯಿಯ ಪಲ್ಯ, ಚಿತ್ರಾನ್ನ, ಬೋಂಡ ಮತ್ತು ಪಾಯಸ- ಆ ದಿನದ ಅಡುಗೆ (ರಂಗಣ್ಣನ ಕನಸಿನ ದಿನಗಳು- ೨೦ನೆಯ ಶತಮಾನದ ಎಂ.ಆರ್. ಶ್ರೀನಿವಾಸಮೂರ್ತಿಯವರ ರಚನೆ); ಉಪ್ಪೇರಿ, ವಾಂಗೀಭಾತು, ಚಿತ್ರಾನ್ನ... ಪಟ್ಟಿ ಉದ್ದಕ್ಕೂ ಸಾಗಿತು (ರೂಪರಾಶಿಗಳ ಸಂತೆ- ೨೦ನೆಯ ಶತಮಾನದ ಎಂ.ಬಿ.ಮರಕಿಣಿಯವರ ರಚನೆ). (ಚಿತ್ರ + ಅನ್ನ)". ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲೂ ಛತ್ರದ ಸುಳಿವಿಲ್ಲ! ಆದರೆ ಬೇರೊಂದು ಮುಖ್ಯವಾದ ಮಾಹಿತಿ ಇದೆ.

ಏನೆಂದರೆ ‘ಚಿತ್ರಾನ್ನ’ ಎಂಬುದು ಚಿತ್ರ + ಅನ್ನ ಎಂಬ ಸಂಸ್ಕೃತ ಪದಗಳು ಸವರ್ಣದೀರ್ಘ ಸಂಧಿಯಲ್ಲಿ ಸೇರಿ ಆಗಿರುವ ಪದ. ಹಾಗಿದ್ದರೆ ‘ಚಿತ್ರ’ ಪದದ ಬೆನ್ನಟ್ಟಿಹೋದರೆ ನಮಗೆ ಹೆಚ್ಚಿನ ಮಾಹಿತಿ ಸಿಗುತ್ತದೆ! ಚಿತ್ರ ಅಂದರೆ ಡ್ರಾಯಿಂಗ್, ಪಿಕ್ಚರ್, ಇಮೇಜ್ ಎಂಬ ಅರ್ಥಗಳಷ್ಟೇ ನಮಗೆ ಹೊಳೆಯುತ್ತವೆ. ಆದರೆ ಸಂಸ್ಕೃತದಲ್ಲಿ ಈ ಪದದ ಆಳ ವಿಸ್ತಾರಗಳು ಅಗಾಧವಾಗಿವೆ.

“ಚಿತ್ರಂ ರಂ ರಮ್ಯತೇ ತಂ ತ್ರಿಭುವನವಪುಶಂ ವಿಷ್ಣುಮೀಶಂ ನಮಾಮಿ" ಎಂದು ವಿಷ್ಣು ಸಹಸ್ರನಾಮದ ಧ್ಯಾನಶ್ಲೋಕದಲ್ಲಿ ವಿಷ್ಣುವನ್ನೇ ‘ಚಿತ್ರ’ ಎಂದು ಬಣ್ಣಿಸಲಾಗಿದೆ. ಅಂಥ ‘ಚಿತ್ರ’ ದದ ಅರ್ಥವಿಸ್ತಾರವನ್ನು ಅರಿಯಲು ನಾವು ಪ್ರೊ.ಜಿ.ಎನ್.ಚಕ್ರವರ್ತಿ ಯವರ ಸಂಸ್ಕೃತ-ಕನ್ನಡ ನಿಘಂಟುವನ್ನು ನೋಡೋಣ. ಮೊದಲನೆಯದಾಗಿ ಚಿತ್ರಾನ್ನ ಎಂಬ ಪದ ಇದೆಯೇ ಎಂದು ಹುಡುಕೋಣ. ಇದೆ! ೨೯೦ನೆಯ ಪುಟದಲ್ಲಿ. ಹುಳಿ ರುಚಿಯಿ ರುವ, ಎಳ್ಳಿನ ಒಗ್ಗರಣೆ ಸೇರಿಸಿರುವ ಎಂಬರ್ಥದಲ್ಲಿ ಹುಳಿಯನ್ನ ಅಥವಾ ಎಳ್ಳಿನ ಅನ್ನ ಎಂದು ಕೊಟ್ಟಿದ್ದಾರೆ.

ಅಂದಮೇಲೆ ಚಿತ್ರಾನ್ನ ಸಂಪೂರ್ಣವಾಗಿ ಸಂಸ್ಕೃತಪದ ಎಂದಾಯಿತು! ಈಗ ಅದೇ ನಿಘಂಟು ವಿನಲ್ಲಿ ಚಿತ್ರಾನ್ನಕ್ಕಿಂತ ಮೊದಲು ಬರುವ ಚಿತ್ರ ಪದದ ಮೇಲೆ ಕಣ್ಣಾಡಿಸೋಣ. ಇದು ನಮ್ಮ ಸಂದೇಹ, ಊಹೆ, ಅಂದಾಜುಗಳೆಲ್ಲವನ್ನೂ ನೀಟಾಗಿ ಪರಿಹರಿಸುತ್ತದೆ. ಚಿತ್ರ ಎಂಬ ಪದ ಸಂಸ್ಕೃತ ದಲ್ಲಿ ನಪುಂಸಕಲಿಂಗ ನಾಮಪದವಾಗಿ ಬಳಕೆಯಾದರೆ ಅಲೇಖ್ಯ, ನಕ್ಷೆ, ಪಟ, ಆಶ್ಚರ್ಯ, ಅದ್ಭುತ, ವರ್ಣ, ತಿಲಕ, ಗಗನ ಎಂಬ ಅರ್ಥಗಳನ್ನು ಪಡೆಯುತ್ತದೆ. ಪುಲ್ಲಿಂಗ ರೂಪದಲ್ಲಿ ಬಳಕೆಯಾದರೆ ಹರಳುಗಿಡ, ಅಶೋಕವೃಕ್ಷ ಎಂಬ ಅರ್ಥಗಳು. ಸೀಲಿಂಗದಲ್ಲಿ ಚಿತ್ರಾ ಎಂದು ಬಳಕೆಯಾದರೆ ಇಲಿಯಾಲದ ಗಿಡ, ಬುಡುಮೆ ಗಿಡ, ದಂತೀವೃಕ್ಷ, ಸುಭದ್ರೆಯ ಇನ್ನೊಂದು ಹೆಸರು, ೨೭ ನಕ್ಷತ್ರಗಳಲ್ಲಿ ೧೪ನೆಯದು, ಒಬ್ಬ ಅಪ್ಸರೆ, ಒಂದು ಸರ್ಪ ಎಂಬ ಅರ್ಥಗಳು. ಇವ್ಯಾವುವೂ ಚಿತ್ರಾನ್ನಕ್ಕೆ ಒದಗಿ ಬರುವಂಥವಲ್ಲ. ಆದರೆ ಚಿತ್ರ ಎಂಬ ಪದ ಸಂಸ್ಕೃತದಲ್ಲಿ ವಿಶೇಷಣ ರೂಪದಲ್ಲೂ ಬಳಕೆಯಾಗುತ್ತದೆ.

ಆಗ ಅರ್ಥಗಳು: ಆಶ್ಚರ್ಯಕರವಾದ ಅಥವಾ ನಾನಾ ವರ್ಣಗಳುಳ್ಳ ಎಂದು. ಯುರೇಕಾ! ನಾನಾ ವರ್ಣಗಳುಳ್ಳ ಎಂಬ ಈ ಕೊನೆಯ ಅರ್ಥವೇ ಅನ್ನವನ್ನು ಚಿತ್ರಾನ್ನವಾಗಿಸುವುದು. ಈಗ ಇನ್ನೂ ಆಸಕ್ತಿಕರವಾದ ಒಂದು ವಿಚಾರ. ಏನೆಂದರೆ ಚಿತ್ರಾನ್ನ ಎಂಬ ಪದಬಳಕೆ, ಮಸಾಲೆಗಳನ್ನು ಸೇರಿಸಿದ ವರ್ಣರಂಜಿತ ಅನ್ನ ಎಂಬ ಅರ್ಥದಲ್ಲಿ ಸಂಸ್ಕೃತದಲ್ಲಿ ಪ್ರಾಚೀನ ಕಾಲದಿಂದಲೂ ಇದೆ. ೧೨ನೆಯ ಶತಮಾನದ ‘ಮಾನಸೋಲ್ಲಾಸ’ ಪಾಕ ಪುಸ್ತಕದಲ್ಲಿ ಅದಕ್ಕೆ ಚಿತ್ರಪಾಕ ಎಂದು ಹೆಸರಿತ್ತಂತೆ . ಮತ್ತೂ ಹಿಂದೆ ಹೋದರೆ, ವೇದಕಾಲದಲ್ಲಿ ಚಿತ್ರಾನ್ನ ಎಂಬ ಹೆಸರಿಂದಲೇ ಅದು ಖ್ಯಾತವಾಗಿತ್ತೆಂದು ತಿಳಿಯುತ್ತದೆ.

ಅಗ್ನಿಪುರಾಣ, ಗರುಡಪುರಾಣ ಗಳಲ್ಲಿ ಚಿತ್ರಾನ್ನದ ಉಲ್ಲೇಖವಿದೆ. ನಾರದಸಂಹಿತಾ ಎಂಬ ಜ್ಯೋತಿ ಷ್ಯ ಗ್ರಂಥದಲ್ಲಿ ಸಂಕ್ರಾಂತಿ ಆಚರಣೆ ಬಗೆಗಿನ ಒಂದು ಶ್ಲೋಕ ಹೀಗಿದೆ: “ಅನ್ನಂ ಚ ಪಾಯಸಂ ಭೈಕ್ಷ್ಯಮಪೂಪಂ ಚ ಪಯೋ ದಽ| ಚಿತ್ರಾನ್ನಂ ಗುಡಮಧ್ವಾಜ್ಯಶರ್ಕರಾ ಬವತೋ ಹವಿಃ" ಇದು ಸಂಕ್ರಾಂತಿಯಂದು ಸೇವಿಸಬೇಕಾದ ಭೋಜನದ ವಿವರ. ಬವ-ಬಾಲವ-ಕೌಲವ... ಮುಂತಾದ ೧೧ ಕರಣಗಳಿಗೆ ಅನುಕ್ರಮವಾಗಿ ಅನ್ನ, ಪಾಯಸ, ಭಿಕ್ಷೆಯಿಂದ ಬಂದ ವಸ್ತು, ಕರಿದು ತಯಾರಿಸಿದ ವಡೆಯಂಥ ತಿನಿಸು, ಹಾಲು, ಮೊಸರು, ಚಿತ್ರಾನ್ನ, ಬೆಲ್ಲ, ಜೇನು, ತುಪ್ಪ, ಸಕ್ಕರೆ- ಈ ೧೧ ಪದಾರ್ಥಗಳ ಸೇವನೆ. ಚಿತ್ರಾನ್ನದ ಕ್ರಮಸಂಖ್ಯೆ ೭. ಅದು ಏಳನೆಯ ಕರಣ ‘ಭದ್ರೆ’ಯ ಪ್ರೀತ್ಯರ್ಥ.

ಇಷ್ಟೇ ಸ್ವಾರಸ್ಯಕರವಾದ ಚಿತ್ರಾನ್ನ ಉಲ್ಲೇಖ ಯಾಜ್ಞವಲ್ಕ್ಯ ಸ್ಮೃತಿಯಲ್ಲಿಯೂ ಇದೆ. ಯಾಜ್ಞವಲ್ಕ್ಯ ಸ್ಮೃತಿಯ ‘ಗ್ರಹಶಾಂತಿ’ ಎಂಬ ಅಧ್ಯಾಯದಲ್ಲಿ ನವಗ್ರಹಗಳ ಆರಾಧನೆಯ ವಿವರಗಳು ಬರುತ್ತವೆ. ನವಗ್ರಹಗಳೆಂದರೆ ಸೂರ್ಯ, ಚಂದ್ರ, ಭೂಮಿ, ರಾಹು, ಮತ್ತು ಕೇತುಗಳನ್ನು ಸೇರಿಸಿ ಒಂಬತ್ತರ ಪಟ್ಟಿಯೇ ಹೊರತು ಈಗಿನ ವೈಜ್ಞಾನಿಕ ಯುಗದಲ್ಲಿ ಸೌರಮಂಡಲದಲ್ಲಿರುವ ಬುಧ, ಶುಕ್ರ, ಭೂಮಿ, ಮಂಗಳದಿಂದ ಹಿಡಿದು ಪ್ಲುಟೋವರೆಗಿನ ಒಂಬತ್ತು ಗ್ರಹಗಳಲ್ಲ(ಈಗ ಪ್ಲುಟೋ ಗ್ರಹವೇ ಅಲ್ಲವಂತೆ.

ನೆಪ್ಚೂನ್‌ವರೆಗೆ ಎಂಟೇ ಗ್ರಹಗಳು). ನವಗ್ರಹಗಳಿಗೆ ಅನುಕ್ರಮವಾಗಿ ಯಾವ್ಯಾವ ಸುಧೆಗಳನ್ನು ಅರ್ಪಿಸಬೇಕು, ಯಾವ್ಯಾವ ಅಡುಗೆಗಳ ನೈವೇದ್ಯ ಮಾಡಬೇಕು, ಮತ್ತು ಗ್ರಹಯಜ್ಞಕ್ಕೆಂದು ಕರೆದ ವಿಪ್ರರಿಗೆ ಯಾವ್ಯಾವ ದಾನ-ದಕ್ಷಿಣೆಗಳನ್ನು ಕೊಡಬೇಕು ಎಂದು ಮೂರು ಶ್ಲೋಕಗಳು ತಿಳಿಸುತ್ತವೆ. ಅವುಗಳ ಪೈಕಿ ನೈವೇದ್ಯಭಕ್ಷ್ಯಗಳ ಶ್ಲೋಕ ಹೀಗಿದೆ: “ಗುಡೌದನಂ ಪಾಯಸಂ ಚ ಹವಿಷ್ಯಂ ಕ್ಷೀರಷಾಷ್ಟಿಕಮ್| ದಧ್ಯೋದನಂ ಹವಿಶ್ಚೂರ್ಣಂ ಮಾಂಸಂ ಚಿತ್ರಾನ್ನಮೇವ ಚ||" ಇದು ಯಾಜ್ಞ ವಲ್ಕ್ಯ ಸ್ಮೃತಿಯ ಮೊದಲ ಭಾಗದಲ್ಲಿ ಬರುವ ೩೦೪ನೆಯ ಶ್ಲೋಕ. ಇದರ ಪ್ರಕಾರ ಸೂರ್ಯನಿಗೆ ಗುಡೌದನ. ಗುಡ ಅಂದರೆ ಬೆಲ್ಲ, ಓದನ ಅಂದರೆ ಅನ್ನ.

ಹಾಗಾಗಿ ಬೆಲ್ಲದ ಅನ್ನ. ಚಂದ್ರನಿಗೆ ಪಾಯಸ. ಮಂಗಳನಿಗೆ ಹವಿಷ್ಯಾನ್ನ ಅಂದರೆ ತುಪ್ಪ ಕಲೆಸಿದ ಅನ್ನ. ಬುಧನಿಗೆ ಕ್ಷೀರಷಾಷ್ಟಿಕ. ಕ್ಷೀರ ಅಂದರೆ ಹಾಲು, ಷಾಷ್ಟಿಕ ಅಂದರೆ ಅರವತ್ತು ದಿನಗಳಲ್ಲಿ ಬೆಳೆಬರುವ ಬತ್ತದಿಂದ ಮಾಡಿದ ಅಕ್ಕಿ. ಅಂಥ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಹಾಲಿನಲ್ಲಿ ಬೆರೆಸಿದ್ದು. ಗುರುವಿಗೆ ಮೊಸರನ್ನ. ಶುಕ್ರನಿಗೂ ತುಪ್ಪದ ಅನ್ನ. ಶನಿಗೆ ಎಳ್ಳು ಹುಡಿ ಮಾಡಿ ಕಲಸಿದ ಅನ್ನ. ರಾಹುವಿಗೆ ಮಾಂಸಕ್ಕೆ ಸಮಾನವಾದ ಉದ್ದಿನ ಅನ್ನ. ಕೇತುವಿಗೆ ಚಿತ್ರಾನ್ನ. ಈ ಶ್ಲೋಕದಲ್ಲಿ ಬರುವ ‘ಮಾಂಸ’ ಪದಕ್ಕೆ ಬೇರೆಬೇರೆ ವ್ಯಾಖ್ಯಾನಗಳಿವೆ.

ಕೆಲವು ಪಾಠಾಂತರಗಳಲ್ಲಿ ಅದನ್ನು ‘ಮಾಷ’ ಎಂದು ಬರೆಯಲಾಗಿದೆ. ಮಾಷ ಅಂದರೆ ಉದ್ದು. ಉದ್ದು ತಾಮಸ ಆಹಾರ ಆದ್ದರಿಂದ ಮಾಂಸಕ್ಕೆ ಹೋಲಿಸುವುದಿದೆ. ಇನ್ನು ಕೆಲವೆಡೆ, ಅದು ನಿಜವಾಗಿಯೂ ಮಾಂಸವೇ. ಮಾತ್ರವಲ್ಲ “ಅಜಾಕ್ಷೀರೇಣ ಸಂಸ್ವಿನ್ನಾ ಯವಾಶ್ಚ ತಿಲತಂಡುಲಾಃ| ಅಜಾಕರ್ಣಸ್ಯ ರಕ್ತೇನ ರಕ್ತಾಶ್ಚಿತ್ರಾನ್ನಸಂಜ್ಞಿತಾಃ" ಎಂಬೊಂದು ಶ್ಲೋಕವನ್ನು ಉಲ್ಲೇಖಿಸಿ, ಆಡಿನ ಹಾಲಿನಿಂದ ತೊಳೆದ ಗೋಧಿ, ಎಳ್ಳು, ಅಕ್ಕಿಗಳನ್ನು ಬಳಸಿ ತಯಾರಿಸಿದ, ಆಡಿನ ಕಿವಿಯ ರಕ್ತದಿಂದ ಕೆಂಪು ಬಣ್ಣ ಬಂದಿರುವ ಅನ್ನವೇ ಚಿತ್ರಾನ್ನ ಎಂಬ ಭಯಂಕರ ವ್ಯಾಖ್ಯಾನಗಳೂ ಇವೆ!

ಒಟ್ಟಿನಲ್ಲಿ, ಚಿತ್ರಾನ್ನವೆಂದರೆ ಕಲರ್‌ಕಲರ್ ರೈಸ್ ಎನ್ನುವುದಂತೂ ಆಚಂದ್ರಾರ್ಕ ಬೆಳಗುವ ಸತ್ಯ. ಛತ್ರದಿಂದ ಬಂದದ್ದು ಎನ್ನುವುದೆಲ್ಲ ಕಾಗಕ್ಕ ಗುಬ್ಬಕ್ಕ ಕಥೆಗಳಿಗೆ ಆಗಬಹುದು ಅಷ್ಟೇ. ಅದಕ್ಕಿಂತ, ನನ್ನ ಸ್ನೇಹಿತ ರಾಘವೇಂದ್ರ ಸುಬ್ರಹ್ಮಣ್ಯ ಫೇಸ್‌ಬುಕ್ ನಲ್ಲಿ ಬರೆದುಕೊಂಡ ತಮಾಷೆ ಚೆನ್ನಾಗಿದೆ. ಚಿತ್ರಾನ್ನ ಮಾಡುವಾಗ ಕೊನೆಯಲ್ಲಿ ನಿಂಬೆಹಣ್ಣು ಹಿಂಡುತ್ತೇವಲ್ಲ, ನಿಂಬೆರಸವೆಂದರೆ ಸಿಟ್ರಿಕ್ ಆಸಿಡ್.

ನಿಂಬೆಯ ಬದಲಿಗೆ ಹೇರಳೆಕಾಯಿ ರಸ ಹಿಂಡಿ ದರೂ, ಅಥವಾ ಮುಂದಿನ ಭಾನುವಾರ ಯುಗಾದಿ ಹಬ್ಬದಂದು ಮಾವಿನಕಾಯಿ ಚಿತ್ರಾನ್ನ ಮಾಡಿದರೂ, ಹೇರಳೆಯಲ್ಲಿ ಮತ್ತು ಮಾವಿನಕಾಯಿ ಯಲ್ಲೂ ಇರುವುದು ಸಿಟ್ರಿಕ್ ಆಮ್ಲವೇ. ಆದ್ದರಿಂದ, ಮೂಲತಃ ಈ ಭಕ್ಷ್ಯದ ವೈಜ್ಞಾನಿಕ ಹೆಸರು ಸಿಟ್ರಸ್ ಅನ್ನ. ಅದೇ ಕ್ರಮೇಣ ಸಿಟ್ರಾನ್ನ ಆಗಿ ಚಿತ್ರಾನ್ನಕ್ಕೆ ಬಂದು ನಿಂತಿದೆ!