ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಅಂಥದೊಂದು ಲೋಲುಪತೆಯೇ ಬಾಲ್ಯದ ದಿನಗಳು ಮತ್ತೆ ಬರಬಾರದೇ ಎಂಬ ತಹತಹ. ಬಾಲ್ಯದ ದಿನಗಳು ಅದೆಷ್ಟು ಅತ್ಯಮೂಲ್ಯವಾಗಿದ್ದುವು, ಎಷ್ಟೊಂದು ಖುಷಿ ಇತ್ತು ಎಂದು ಸವಿ ನೆನಪುಗಳ ಸರಮಾಲೆ ಬಿಚ್ಚತೊಡಗಿದಂತೆ ಏನೋ ಒಂದು ಹಿತಾನುಭವ. ‘ಆ ಕಾಲವೊಂದಿ ತ್ತು ದಿವ್ಯ ತಾನಾಗಿತ್ತು’ ಎಂಬ ಮಧುರಾನುಭೂತಿ.

ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಅಂಕಣಕಾರ ಶ್ರೀವತ್ಸ ಜೋಶಿ

ತಿಳಿರುತೋರಣ

srivathsajoshi@yahoo.com

ಅಸಂಭವಂ ಹೇಮಮೃಗಸ್ಯ ಜನ್ಮ ತಥಾಪಿ ರಾಮೋ ಲುಲುಭೇ ಮೃಗಾಯ... ಎನ್ನುತ್ತದೆ ಒಂದು ಸುಭಾಷಿತದ ಸಾಲು. ಬಂಗಾರದ ಜಿಂಕೆ ಹುಟ್ಟಲಾರದು ಮತ್ತು ಕಾಡಿನಲ್ಲಿ ಓಡಾಡ ಲಾರದು ಎಂದು ಗೊತ್ತಿದ್ದರೂ ಶ್ರೀರಾಮ ಅದರ ಬೆನ್ನಟ್ಟಿಹೋದನು- ಎಂದು ಅರ್ಥ. ಸಂಭವವೆಂದು ಗೊತ್ತಿದ್ದೂ ಶ್ರೀರಾಮನೇ ಹಾಗೆ ಮಾಡಿದ್ದಾನೆ ಅಂದ ಮೇಲೆ ನಮ್ಮಂಥ ಹುಲುಮಾನವರ ಪಾಡೇನು! ಏನನ್ನೋ ಮಾಡುವುದಿರಲಿ, ಕೆಲವೊಮ್ಮೆ ನಮ್ಮ ಆಲೋ ಚನೆಗಳೂ ಹಾಗೆಯೇ ಇರುತ್ತವೆ. ಅಸಂಭವವೆಂದು ಗೊತ್ತಿದ್ದರೂ ಅದನ್ನೇ ತಲೆತುಂಬ ಚಪ್ಪರಿಸುತ್ತೇವೆ, ತಾತ್ಕಾಲಿಕವಾಗಿಯಾದರೂ ಅದರಲ್ಲೇ ಲೋಲುಪರಾಗುತ್ತೇವೆ.

ಅಂಥದೊಂದು ಲೋಲುಪತೆಯೇ ಬಾಲ್ಯದ ದಿನಗಳು ಮತ್ತೆ ಬರಬಾರದೇ ಎಂಬ ತಹತಹ. ಬಾಲ್ಯದ ದಿನಗಳು ಅದೆಷ್ಟು ಅತ್ಯಮೂಲ್ಯವಾಗಿದ್ದುವು, ಎಷ್ಟೊಂದು ಖುಷಿ ಇತ್ತು ಎಂದು ಸವಿನೆನಪುಗಳ ಸರಮಾಲೆ ಬಿಚ್ಚತೊಡಗಿದಂತೆ ಏನೋ ಒಂದು ಹಿತಾನುಭವ. ‘ಆ ಕಾಲ ವೊಂದಿತ್ತು ದಿವ್ಯ ತಾನಾಗಿತ್ತು’ ಎಂಬ ಮಧುರಾನುಭೂತಿ.

ಇದನ್ನೂ ಓದಿ: Srivathsa Joshi Column: ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಜತೆಯಲ್ಲೇ ಒಂದು ತೆರನಾದ ವಿಚಿತ್ರ ನೋವು ಕೂಡ. ಅಷ್ಟು ಸುಂದರ ಬಂಧುರ ಆಗಿದ್ದ ಬಾಲ್ಯ ಮತ್ತೊಮ್ಮೆ ಸಿಗುವಂತಿದ್ದರೆ ಎಷ್ಟು ಚೆನ್ನಿತ್ತು ಎಂಬ ಹಳವಂಡ. ನನಗನಿಸುತ್ತದೆ, ಜಯಂತ ಕಾಯ್ಕಿಣಿಯವರು ಚಿತ್ರಗೀತೆಯಲ್ಲಿ ಟಂಕಿಸಿದ ‘ಆಹಾ ಎಂಥ ಮಧುರ ಯಾತನೆ ...’ ಎಂಬ ಪ್ಯಾರಡಾಕ್ಸ್ ಪದಪುಂಜ ಬಹುಶಃ ಈ ಸಂದರ್ಭಕ್ಕೂ ಪಕ್ಕಾ ಸರಿ ಹೋಗುತ್ತದೆ.

ಜಗಜಿತ್ ಸಿಂಗ್ ಮತ್ತು ಚಿತ್ರಾ ಸಿಂಗ್ ಹಾಡಿರುವ, ತುಂಬ ತುಂಬ ಜನಪ್ರಿಯವಾದ ಅದೊಂದು ಗಜ಼ಲ್ ನೀವು ಕೇಳಿರಬಹುದು. ನನ್ನಂತೆ ನಿಮಗೂ ಅದು ಅಚ್ಚುಮೆಚ್ಚಿನದೂ ಆಗಿರಬಹುದು. ಅದೇ, ‘ವೊ ಕಾಗಜ಼್ ಕೀ ಕಶ್ತೀ ವೊ ಬಾರಿಶ್ ಕಾ ಪಾನಿ...’ ನಾನಂತೂ ಎಷ್ಟುಸಲ ಕೇಳಿ ಆನಂದಿಸಿದ್ದೇನೆಂಬುದಕ್ಕೆ ಲೆಕ್ಕವಿಲ್ಲ. ಜಗಜಿತ್ ಸಿಂಗ್ ರಸಮಂಜರಿ ಕಾರ್ಯಕ್ರಮಗಳಲ್ಲಿ ಅತ್ಯಧಿಕ ಚೀಟಿಕೋರಿಕೆ ಇದಕ್ಕೇ ಬರುವುದಿರಬಹುದು.

ಉರ್ದು/ಹಿಂದಿ ಅರ್ಥವಾಗುವುದು ಕಷ್ಟವಿರುವವರಿಗೋಸ್ಕರ ಈ ಗಜ಼ಲ್‌ನ ಸಾಲುಗಳನ್ನು ಸರಳಗನ್ನಡದಲ್ಲಿ ಭಾವಾನುವಾದ ಮಾಡಿ ಇಲ್ಲಿ ಒದಗಿಸುತ್ತಿದ್ದೇನೆ, ಇಂದಿನ ಅಂಕಣ ಬರಹದ ತಿರುಳಿಗೆ ತಕ್ಕುದಾಗಿರುವುದರಿಂದ. “ಈ ದೌಲತ್ತನ್ನು ನನ್ನಿಂದ ಕಸಿದುಕೊಳ್ಳಿ. ನನ್ನಲ್ಲಿರುವ ಸಂಪತ್ತನ್ನೆಲ್ಲ ತೆಗೆದುಕೊಂಡು ಹೋಗಿ. ಬೇಕಿದ್ದರೆ ನನ್ನ ತಾರುಣ್ಯವನ್ನೂ ಕಿತ್ತುಕೊಳ್ಳಿ.

srivathsa joshi 160325 ok

ಆದರೆ ನನ್ನ ಬಾಲ್ಯದ ಸುಂದರ ದಿನಗಳನ್ನು ನನಗೆ ಮರಳಿಸಿ. ಆ ಕಾಗದದ ದೋಣಿ... ಆ ಮಳೆಯ ನೀರು... ನಮ್ಮ ಬೀದಿಯ ಅತ್ಯಂತ ಹಳೆಯ ಗುರುತಾಗಿದ್ದ ಆ ಮುದುಕಿ... ಆಕೆ ಯನ್ನು ನಾವು ಮಕ್ಕಳೆಲ್ಲ ಸೇರಿ ‘ನಾನಿ’ ಅಂತ ಕರೆಯುತ್ತಿದ್ದದ್ದು... ಅವಳ ಮಾತುಗಳಲ್ಲಿ, ಸುಕ್ಕುಗಟ್ಟಿದ ಕೆನ್ನೆಗಳಲ್ಲಿ ಮಾಗಿದ ಜೀವನಾನುಭವ ಭಂಡಾರ... ಅವಳು ಹೇಳುತ್ತಿದ್ದ ಕಥೆಗಳಲ್ಲಿ ಬರುವ ಆ ಸುಂದರ ರಾಜಕುಮಾರಿ... ಮರೆತಿಲ್ಲ ನಾವು, ಮರೆಯು ವುದು ಸಾಧ್ಯವೂ ಇಲ್ಲ.

ರಾತ್ರಿಗಳು ಕಿರಿದೆನಿಸುತ್ತಿದ್ದುವು, ಕಥೆ ಕೇಳುತ್ತ ಕೇಳುತ್ತ ಬೆಳಗಾಗಿಬಿಡುತ್ತಿತ್ತು, ಕಥೆ ಇನ್ನೂ ಉಳಿದಿರುತ್ತಿತ್ತು! ಆಡಲಿಕ್ಕೆಂದು ನಾವು ಗೆಳೆಯರೆಲ್ಲ ಬಿಸಿಲ ಝಳ ಲೆಕ್ಕಿಸದೆ ಮನೆಯಿಂದ ಹೊರಡುತ್ತಿದ್ದೆವು. ಹಕ್ಕಿ ಹಿಡಿವ ಸಾಹಸ ಮಾಡುತ್ತಿದ್ದೆವು. ಚಿಟ್ಟೆಯ ಹಿಂದೆ ಓಡುತ್ತಿದ್ದೆವು. ಗೊಂಬೆಗೆ ಮದುವೆ ಮಾಡಿಸುವಾಗ ಜಗಳವೂ ಆಗುತ್ತಿತ್ತು.

ಆಲದ ಮರದ ತೊಗಟೆ ಚೂರುಗಳೇ ಉಡುಗೊರೆಗಳು. ಉಯ್ಯಾಲೆಯಿಂದ ಕೆಳಗೆ ಬೀಳು ತ್ತಿದ್ದೆವು, ಬಿದ್ದು ಏಳುತ್ತಿದ್ದೆವು. ಮೈಕೈ ಮೇಲೆಲ್ಲ ಬಳೆ ಚೂರುಗಳ ಗುರುತುಗಳು. ಮರಳಿನ ದಿಬ್ಬಗಳ ಮೇಲಕ್ಕೆ ಹೋಗುತ್ತಿದ್ದೆವು. ಮರಳಿನ ಸೌಧ ಕಟ್ಟಿ ಅದನ್ನೇ ಮುರಿಯುತ್ತಿದ್ದೆವು. ಮುಗ್ಧ ಆಸೆಗಳೇ ತುಂಬಿಕೊಂಡಿದ್ದ ಮನಸು. ಕಣ್ತುಂಬ ಕನಸು. ಕನಸುಗಳದೇ ಲೋಕ. ನಮ್ಮ ಪ್ರಪಂಚದಲ್ಲಿ ದುಃಖವೆಂಬುದು ಎಲ್ಲಿತ್ತು? ಸಂಬಂಧಗಳ ಬಂಧನ ಎಲ್ಲಿತ್ತು? ಎಷ್ಟೊಂದು ಮುದವಾಗಿತ್ತು ಆ ಜೀವನ!"

ಇನ್ನೊಂದು ಹಿಂದಿ ಕವಿತೆ ‘ಮೇರಾ ನಯಾ ಬಚಪನ್’. ಸುಭದ್ರಾಕುಮಾರಿ ಚೌಹಾಣ್ ಎಂಬ ಪ್ರಸಿದ್ಧ ಹಿಂದಿ ಕವಯಿತ್ರಿಯ ರಚನೆ. “ಬಾರ್ ಬಾರ್ ಆತೀ ಹೈ ಮುಝಕೋ ಮಧುರ ಯಾದ್ ಬಚಪನ್ ತೇರೀ, ಗಯಾ ಲೇ ಗಯಾ ತೂ ಜೀವನ ಕೀ ಸಬಸೇ ಮಸ್ತ್ ಖುಷೀ ಮೇರೀ..." ಎಂದು ಅದರ ಪಲ್ಲವಿ. “ಆಟ, ಊಟ ಯಾವುದರಲ್ಲೂ ಚಿಂತೆಯೆಂಬುದೇ ಇರಲಿಲ್ಲ.

ಎಲ್ಲಿ ಓಡಾಡುವುದಿದ್ದರೂ ನಿರ್ಭಯ, ಸ್ವಚ್ಛಂದ. ಮರೆಯುವುದು ಹೇಗೆ ಬಾಲ್ಯದ ಆ ಅತುಲಿತ ಆನಂದ! ಮೇಲು-ಕೀಳು ಎಂಬ ತಾರತಮ್ಯ ಎಲ್ಲಿತ್ತು? ಮಡಿ-ಮೈಲಿಗೆ ಎಲ್ಲ ಯಾರಿಗೆ ಗೊತ್ತಿತ್ತು? ಅರಮನೆಯೇ ಆಗಬೇಕಿರಲಿಲ್ಲ, ಗುಡಿಸಲುಗಳಲ್ಲೂ ರಾಣಿಯ ದರ್ಬಾರು ಸಾಧ್ಯವಿತ್ತು. ಹಾಲು ಕುಡಿಯುವಾಗ ರಂಪಗಳೇನು, ಬಾಯ್ತುಂಬಿಕೊಂಡು ಗಲ್ಲ ಉಬ್ಬಿಸುವುದೇನು, ನಿಶ್ಶಬ್ದವಾಗಿದ್ದ ಮನೆಯನ್ನು ಗಲಾಟೆ ಮಾಡಿಯೇ ಸಂತೆಯಾಗಿಸುವು ದೇನು! ಅತ್ತು ಕಣ್ಣೀರುಗರೆದರೂ ಒಂಥರದ ಹಿಗ್ಗು. ಕಣ್ಣೀರ ಹನಿಗಳೇ ಮುತ್ತುಗಳಾಗಿ ಜಯಮಾಲೆ ತೊಡಿಸಿದವೇನೋ ಎಂಬಂತೆ.

ಅಳು ಹೆಚ್ಚಾದರೆ ಅಮ್ಮ ಕೆಲಸಬಿಟ್ಟು ಓಡಿಬರುವಳು, ಮುದ್ದುಗರೆದು ತನ್ನ ಮುತ್ತು ಗಳಿಂದಲೇ ಗಲ್ಲ ಒರೆಸುವಳು. ಅಜ್ಜ ಕೈಹಿಡಿದು ಚಂದಮಾಮನನ್ನು ತೋರಿಸುವನು. ನನ್ನ ಮುಖವೂ ಚಂದ್ರನಂತೆ ಬೆಳಗಿದಾಗ ಮನೆತುಂಬ ಬೆಳದಿಂಗಳು!" ಎಂದು ಬಾಲ್ಯವನ್ನು ಪರಿಪರಿಯಾಗಿ ನೆನಪಿಸಿಕೊಳ್ಳುವ ಕವಯಿತ್ರಿ, ಮುಂದುವರಿದು “ಅಂಥ ಸುಖಸಾಮ್ರಾ ಜ್ಯದಿಂದ ನಾನು ಜೀವನಜಂಜಾಟಕ್ಕೆ ತಯಾರಾಗಿ ನಿಂತೆ.

ನೀರಿನಿಂದ ಹೊರಬಿದ್ದ ಮೀನಿನಂತಾದೆ. ಕಂಗಳಲ್ಲಿ ನಾಚಿಕೆ, ಎದೆಯಲ್ಲಿ ನಡುಕ, ಮನಸ್ಸಿ ನಲ್ಲಿ ಚಡಪಡಿಕೆ. ಎಲ್ಲರೊಂದಿಗಿದ್ದರೂ ಕಾಡುವ ಒಂಟಿತನದ ಭಾವನೆ. ತಾರುಣ್ಯ ವೆಂದರೆ ಸ್ವರ್ಗದಂತಿರುತ್ತದೆ ಎಂದುಕೊಂಡಿದ್ದ ನನ್ನನ್ನು ಬದುಕಿನ ಬವಣೆಗಳು ಹೈರಾಣು ಮಾಡಿ ದವು. ಉರುಳಿಗೆ ಕೊರಳೊಡ್ಡಿದೆನಲ್ಲ ಎಂದುಕೊಳ್ಳುವಂತಾಯಿತು. ಅಯ್ಯೋ ಬಾಲ್ಯವೇ ಮತ್ತೊಮ್ಮೆ ಬಾ. ನಿರ್ಮಲ ಶಾಂತಿಯನ್ನು ಮನಸ್ಸಿಗೆ ತಾ. ವ್ಯಥೆ ವ್ಯಾಕುಲತೆ ಗಳನ್ನು ಹೋಗಲಾಡಿಸು.

ಅದೇ ಸರಳತೆ ಅದೇ ಮುಗ್ಧತೆಗಳನ್ನು ದಯಪಾಲಿಸು. ಮನದಲ್ಲಿ ಮಡುಗಟ್ಟಿರುವ ಸಂತಾ ಪವನ್ನೆಲ್ಲ ಕರಗಿಸು" ಎಂದು ಗೋಗರೆಯುತ್ತಾಳೆ. ಆದರೆ ಆಮೇಲೆ ತನ್ನ ಪುಟ್ಟ ಮಗ ಳಿಂದಾಗಿ ಹೇಗೆ ತನ್ನದೇ ಬಾಲ್ಯ ಕಣ್ಣೆದುರಿಗೆ ಬಂದಂತಾಯ್ತು ಎಂದು ಬಣ್ಣಿಸುತ್ತಾಳೆ: “ಆಡಲಿಕ್ಕೆ ಹೋಗಿದ್ದ ಮಗಳು ಹಿಂದಿರುಗುವಾಗ ಬಾಯಿತುಂಬ ಮಣ್ಣು.

ಕೈಯಲ್ಲೂ ಒಂದಿಷ್ಟು ಮಣ್ಣನ್ನು ತರುತ್ತಾಳೆ. ಏನೋ ದಿಗ್ವಿಜಯ ಸಾಧಿಸಿದ ಹೆಮ್ಮೆ ಅವಳ ಮುಖದಲ್ಲಿ. ಅಮ್ಮಾ ನೀನೂ ತಿನ್ನು ಎಂದು ತೊದಲುತ್ತ ಹೇಳುತ್ತಾಳೆ. ಅವಳ ಈ ತುಂಟಾ ಟಗಳು ನನ್ನದೇ ಬಾಲ್ಯವನ್ನು ನೆನಪಿಸುತ್ತವೆ. ಅವಳ ಮುಗ್ಧತೆಯ ಮೂರ್ತಿ ಕಂಡು ನನಗೆ ನವಜೀವನ ಮರಳಿದೆ. ನನ್ನ ಮಗಳೊಂದಿಗಿನ ಆಟ-ಊಟ-ನಲಿದಾಟ ನನ್ನನ್ನೂ ಒಬ್ಬ ಪುಟ್ಟ ಹುಡುಗಿಯನ್ನಾಗಿಸಿದೆ!" ಎಂದು ಕವಿತೆ ಮುಗಿಯುತ್ತದೆ.

ಇದರಲ್ಲಿ ನಡುವಿನ ಆತಂಕ, ಉದ್ವೇಗ, ದುಗುಡ-ದುಮ್ಮಾನಗಳ ಭಾಗವನ್ನು ಬಿಟ್ಟು ಆರಂಭದ ಮತ್ತು ಅಂತ್ಯದ ನಲಿವಿನ ಭಾಗಗಳನ್ನಷ್ಟೇ ಸೇರಿಸಿ ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕಕ್ಕೆ ಯೋಗ್ಯವಾಗಿಸುತ್ತಾರೆ. ನಮಗೆ ಏಳನೆಯ ತರಗತಿಯಲ್ಲಿತ್ತು ಇದೇ ಪದ್ಯ.

ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯದ ದಿನಗಳು’ ಕೃತಿಯಲ್ಲೂ ನೆನಪುಗಳು ನವಿರಾಗಿ ನಲಿದಾಡಿವೆ. ಸಾಹಿತ್ಯಿಕ ಸಿರಿತನದ ಶೈಲಿಯಲ್ಲಿ ವ್ಯಕ್ತವಾಗಿವೆ. ಅದರ ಕನ್ನಡ ರೂಪಾಂತರ ಹಳೇಕಾಲದ ಪ್ರೌಢಶಾಲಾ ಪಠ್ಯದಲ್ಲಿ ಅಳವಡಿಸಿಕೊಂಡಿದ್ದಿದೆ, ಹೀಗೆ ಆರಂಭವಾಗುತ್ತದೆ: “ಆಗಿನ ಕಾಲವನ್ನು ಈಗಿನ ಕಾಲದ ಜತೆಗೆ ತುಲನೆ ಮಾಡಿದರೆ ಎಷ್ಟು ಬದಲಾವಣೆ ಆಗಿರುವುದೆಂದು ತಿಳಿಯುತ್ತದೆ. ಇಂದಿನ ಕಾಲದ ಉಪ್ಪರಿಗೆಮನೆಗಳ ಮೇಲಂತಸ್ತಿನಲ್ಲಿ ಮನುಷ್ಯರಾಗಲಿ ಭೂತಪ್ರೇತಗಳಾಗಲಿ ಯಾರೂ ವಾಸ ಮಾಡದಿರುವುದನ್ನು ಕಂಡಾಗ ನನಗೆ ಇದು ಹೊಳೆಯುತ್ತದೆ.

ಈಗಿನ ಕಾಲದ ವಿಪರೀತ ವಿದ್ಯಾಭ್ಯಾಸದ ಹೊಡೆತಕ್ಕೆ ತಾಳಲಾರದೆ ಬ್ರಹ್ಮದೈತ್ಯನೂ ಓಡಿಹೋಗಿದ್ದಾನೇನೋ. ಯಾವ ಜಾಲಂದ್ರದಲ್ಲಿ ಆ ದೈತ್ಯನು ಕಾಲಿಟ್ಟಿದ್ದನೆಂದು ಪ್ರತೀತಿ ಯಿತ್ತೋ ಅಲ್ಲಿ ಈಗ ಕಾಗೆಗಳು ಮಾವಿನ ಓಟೆಗಾಗಿ ಕಿತ್ತಾಡುತ್ತ ಗಲಭೆ ಮಾಡುತ್ತಿವೆ. ಈಗಿನ ಕಾಲದ ಜನಗಳು ಕೂಡ ಕೆಳಗಡೆಯ ಪೆಟ್ಟಿಗೆಗಳಂತಿರುವ ಕೊಠಡಿಗಳಲ್ಲಿ ಕಾಲ ಕಳೆಯು ವರು.

ನಾಲ್ಕು ಕಡೆ ಬಾಲ್ಕನಿಯಿಂದ ಆವೃತವಾಗಿದ್ದ ನಮ್ಮ ಮನೆಯ ಮೇಲ್ಮಹಡಿಯು ಜ್ಞಾಪಕಕ್ಕೆ ಬರುತ್ತದೆ. ಸಾಯಂಕಾಲ ನಮ್ಮಮ್ಮ ಚಾಪೆ ಹಾಸಿಕೊಂಡು ಕೂತಿದ್ದಾಳೆ. ಸುತ್ತ ನೆರೆದಿದ್ದಾರೆ ಇತರ ಹೆಂಗಸರು. ಅವರ ಹರಟೆಗೆ ನಿರ್ದಿಷ್ಟವಾದ ವಿಷಯವಾವುದೂ ಬೇಕಾಗಿರಲಿಲ್ಲ. ಹೇಗೋ ಹೊತ್ತು ಕಳೆದರೆ ಸಾಕು. ಆಗೇನು, ದಿನ ಕಳೆಯಬೇಕಾದರೆ ಇಂದಿ ನಂತೆ ನಾನಾ ಬೆಲೆಯ, ನಾನಾ ಮಸಾಲೆಯ ಮಾಲುಗಳನ್ನು ಒದಗಿಸುವ ಅವಕಾಶ ವಿರಲಿಲ್ಲ.

ಈಗಿನಂತೆ ಆಗ ದಿನವೆಂದರೆ ಒತ್ತಾಗಿ ಹೆಣೆದ ಕಸೂತಿಯಾಗಿರಲಿಲ್ಲ. ಸಡಿಲವಾಗಿ ಹೊಲೆದು ರಂಧ್ರಗಳು ಬೇಕಾದಷ್ಟಿರುವಂಥ ಚೌಕವಾಗಿದ್ದುವು. ಗಂಡಸರ ತಂಡದಲ್ಲಾಗಲಿ ಹೆಂಗಸರ ಗುಂಪಿನಲ್ಲಾಗಲಿ ಮಾತುಕತೆಗಳು ನಗುಹಾಸ್ಯಗಳು ಬಹಳ ಲಘುತರವಾಗಿದ್ದುವು". ಅದರಲ್ಲೇ ಮುಂದೆ ಟಾಗೋರರು ಮತ್ತಷ್ಟು ಚಿತ್ರಣಗಳನ್ನು ಕೊಡುತ್ತಾರೆ.

“ಮನೆಗಳಲ್ಲಿಯೇ ಬತ್ತ ಕುಟ್ಟುತ್ತಿದ್ದಾಗ, ಆಗಾಗ ಬೆಲ್ಲದ ಪಾಕವಿಟ್ಟು ವಿಧವಿಧವಾದ ಉಂಡೆ ಗಳನ್ನು ಕಟ್ಟುತ್ತಿದ್ದಾಗ, ದಾಸಿಯರು ತೊಡೆಗಳ ಮೇಲೆ ದೀಪದ ಬತ್ತಿಗಳನ್ನು ಹೊಸೆಯು ತ್ತಿದ್ದಾಗ, ನೆರೆಹೊರೆಯವರ ಮನೆಗಳಿಂದ ಶಿಶು ಜನನವಾದ ಎಂಟನೆಯ ದಿವಸ ಮನೆಯ ಹೆಂಗಸರಿಗೆ ಆರತಿ, ಅರಿಶಿನ ಕುಂಕುಮದ ನಿಮಂತ್ರಣ ಬರುತ್ತಿದ್ದಾಗ ಇಂಥ ಸರಸ ವ್ಯವಹಾರ ನಡೆಯುತ್ತಿತ್ತು. ಆ ಸೊಗಸಾದ ದಿನಗಳು ಇನ್ನೆಲ್ಲಿ? ಈಗಂತೂ ಮಕ್ಕಳು ಅಡು ಗೂಲಜ್ಜಿ ಕಥೆಗಳನ್ನು ತಮ್ಮ ತಾಯಿಯರ ಬಾಯಿಂದ ಕೇಳುವುದಿಲ್ಲ.

ಅಚ್ಚಾದ ಪುಸ್ತಕಗಳಿಂದ ಸ್ವತಃ ಓದಿಕೊಳ್ಳುತ್ತಾರೆ. ಉಪ್ಪಿನಕಾಯಿ, ಸಾರಿನಪುಡಿ, ಮುರಬ್ಬಾ ಗಳನ್ನು ಯಾರೂ ಮನೆಯಲ್ಲಿ ತಯಾರಿಸುವುದಿಲ್ಲ. ಕಾರ್ಕ್‌ನಿಂದ ಮುಚ್ಚಿ ಅರಗಿನಿಂದ ಸೀಲ್ ಮಾಡಿದ ಸೀಸೆಗಳನ್ನು ಮಾರುಕಟ್ಟೆಯಿಂದ ಸುಲಭವಾಗಿ ತಂದುಕೊಳ್ಳುತ್ತಾರೆ..." ಹೀಗೆ ಸಾಗುತ್ತದೆ ಟಾಗೋರರ ತಲ್ಲಣ. ತನ್ನ ಬಾಲ್ಯದಲ್ಲಾದರೆ ಮೇಲ್ಮಹಡಿಯಲ್ಲಿ ಹೆಂಗಸರು ನಿಂಬೆಕಾಯಿ, ಮಾವಿನಮಿಡಿ, ಹಲಸಿನಕಾಯಿ ಇತ್ಯಾದಿಯ ಉಪ್ಪಿನಕಾಯಿ ಹಾಕುತ್ತಿದ್ದದ್ದು, ತಾಂಬೂಲದ ಜತೆಗೆ ಹಾಕಿಕೊಳ್ಳಲಿಕ್ಕೆ ಕಾಚು ತಯಾರಿಸುತ್ತಿದ್ದದ್ದು, ತಾನು ಕಳ್ಳತನದಿಂದ ಮೇಲಿನ ಅಟ್ಟಕ್ಕೆ ಹತ್ತಿ ಒಂದಿಷ್ಟು ಕಾಚನ್ನು ಕಳ್ಳತನ- ಅಲ್ಲ, ಅಪಹರಣ ಮಾಡುತ್ತಿದ್ದದ್ದು, ಅತ್ತಿಗೆಯು ತಯಾರುಮಾಡಿದ ಮಾವಿನಕಾಯಿ ಮುರಬ್ಬವನ್ನು ಬಿಸಿಲಲ್ಲಿ ಹಾಕಿ ಪಹರೆ ಕಾಯುವ, ಅಂತೆಯೇ ಅಡಿಕೆ ಕತ್ತರಿಸಿ ಕೊಡುವ ಕೆಲಸ ತನಗಿ ದ್ದದ್ದು, ಮನೆಯ ಹೊರ ವರಾಂಡದ ಚಂಡೀಮಂಟಪದಲ್ಲಿ ಶಾಲೆ ನಡೆಯುತ್ತಿದ್ದದ್ದು, ಅಲ್ಲಿ ಅಕ್ಷರಾಭ್ಯಾಸ, ಕಥೆಪುಸ್ತಕಗಳ ಓದು, ಹೊರಮನೆಯ ಮಹಡಿಯ ಮೇಲಿನ ಮಾಳಿಗೆಯ ಬಯಲೇ ರಜಾದಿನಗಳಲ್ಲಿ ವಿಹಾರಸ್ಥಳವಾಗಿದ್ದದ್ದು, ಕಟಕಟೆಯ ಸಂದಿನಲ್ಲಿ ಕೈಹಾಕಿ ಬಾಗಿಲಿನ ಅಗುಳಿ ತೆಗೆಯುತ್ತಿದ್ದದ್ದು, ಬಿಸಿಲು ಮಾಳಿಗೆಯನ್ನೇ ತಾನು ಭೂಗೋಳ ದಲ್ಲೋದಿದ ಮರುಭೂಮಿ ಎಂದುಕೊಳ್ಳುತ್ತಿದ್ದದ್ದು, ಎರಡನೆ ಮಹಡಿಯಲ್ಲಿದ್ದ ಸ್ನಾನದಮನೆಗೆ ಹೋಗುವ ಕೊಳಾಯಿಯನ್ನು ಪತ್ತೆಹಚ್ಚಿ ಅದನ್ನು ಮರುಭೂಮಿಯ ಓಯಸಿಸ್ ಎಂದು ಕರೆದದ್ದು, ಕೊಳಾಯಿ ತಿರುಗಿಸಿದಾಗ ಮೈಮೇಲೆ ಜಲಪಾತದಂತೆ ಜಲ ಧಾರೆ ಸುರಿಯುತ್ತಿದ್ದದ್ದು, ಮನಸಾರೆ ಮಿಂದಮೇಲೆ ದುಪಟಿಯೊಂದನ್ನು ತೆಗೆದು ಚೆನ್ನಾಗಿ ಮೈ ಒರೆಸಿಕೊಂಡು ಪುನಃ ಸಹಜ ಮನುಷ್ಯನಾಗಿ ಕೂರುತ್ತಿದ್ದದ್ದು... ಮುಂತಾದುವನ್ನೆಲ್ಲ ನೆನಪಿಸಿಕೊಳ್ಳುತ್ತಾರೆ.

ಇಲ್ಲೊಂದು ಗಮನಾರ್ಹ ಸೂಕ್ಷ್ಮ ಅಂಶವಿದೆ. ಏನೆಂದರೆ, ಟಾಗೋರರು ಇದನ್ನು ಬರೆದಿದ್ದು ಕನಿಷ್ಠ 100 ವರ್ಷಗಳ ಹಿಂದೆ. ಆಗಿನ ಕಾಲವನ್ನೇ ಅವರು ಚೆನ್ನಾಗಿಲ್ಲ ಎಂದು ಜರಿದದ್ದು; ಅದಕ್ಕಿಂತ ತನ್ನ ಬಾಲ್ಯದ ಕಾಲ, ಅಂದರೆ ಮತ್ತೂ ಸುಮಾರು 50 ವರ್ಷಗಳ ಹಿಂದಿನ ಕಾಲ ಚೆನ್ನಾಗಿತ್ತು ಎಂದು ಬಣ್ಣಿಸಿದ್ದು.

ಟಾಗೋರರು ನಿಧನರಾದ ಮೇಲಷ್ಟೇ ಹುಟ್ಟಿದವರು ನಮ್ಮಲ್ಲನೇಕರು. ಆದರೆ ನಮಗೆ ನಮ್ಮ ಬಾಲ್ಯದ ಕಾಲ ಬಲುಸೊಗಸು! “ಈಗಿನ ಮಕ್ಕಳು ಅಡುಗೂಲಜ್ಜಿ ಕಥೆಗಳನ್ನು ಕೇಳು ವುದಿಲ್ಲ. ಅಚ್ಚಾದ ಪುಸ್ತಕಗಳನ್ನು ಓದುತ್ತಾರೆ" ಎಂದು ಟಾಗೋರರ ಅಸಮಾಧಾನವಾದರೆ “ಈಗಿನ ಮಕ್ಕಳು ಕಥೆಪುಸ್ತಕ ಓದುವುದಿಲ್ಲ, ವಿಡಿಯೊ ಗೇಮ್ಸ್ ಆಡುತ್ತ ಕಾಲಹರಣ ಮಾಡುತ್ತಾರೆ" ಎಂದು ನಮ್ಮ ಅಸಮಾಧಾನ!

ತಾತ್ಪರ್ಯವೇನೆಂದರೆ ಪ್ರತಿ ತಲೆಮಾರಿಗೂ ಅವರವರ ಪ್ರೌಢಕಾಲ ಕೆಟ್ಟದು, ಬಾಲ್ಯದ ದಿನಗಳು ಸ್ವರ್ಣಯುಗ. ಅವು ಮತ್ತೊಮ್ಮೆ ಬರಲಿ ಎಂಬ ಸುಪ್ತ ಬಯಕೆ. ಇದು ಸಾರ್ವತ್ರಿಕ, ಸಾರ್ವಕಾಲಿಕ, ಮತ್ತು ಮುಖ್ಯವಾಗಿ ಸಾಪೇಕ್ಷ. ಉದಾಹರಣೆಗೆ- ಪೆರ್ರಿ ಬ್ಲೇಕ್ ಎಂಬ ಹೆಸರಿನ ಇಂಗ್ಲಿಷ್ ಗಾಯಕನೊಬ್ಬನ ಹಾಡು. ಆತ ಮೂಲತಃ ಐರ್ಲೆಂಡ್ ದೇಶದವನು; ಬಿಬಿಸಿ ರೇಡಿಯೋದಲ್ಲಿಯೂ ಹಾಡಿ ಯುರೋಪ್‌ನಲ್ಲೆಲ್ಲ ಸಾಕಷ್ಟು ಪ್ರಖ್ಯಾತನಾದವನು.

ಅವನದೊಂದು ಪ್ರಸಿದ್ಧ ಗೀತೆ ‘ಎಜಿqಛಿ ಞಛಿ ಚಿZh ಞqs eಜ್ಝಿbeಟಟb...ೞ. ಅದರಲ್ಲಿ, ಸುಂದರ ಯುವಕನೊಬ್ಬ ತನ್ನ ಹಿಂದೆ ಬಿದ್ದಿರುವ ತರುಣಿಯರ ಕಾಟ ತಪ್ಪಿಸಲಿಕ್ಕಾದರೂ ಎಜಿqಛಿ ಞಛಿ ಚಿZh ಞqs eಜ್ಝಿbeಟಟb. ಎಜಿqಛಿ ಞಛಿ ಚಿZh ಡಿeZಠಿ ಐ eZqಛಿ ಟoಠಿ... ಎಂದು ದೇವರಲ್ಲಿ ಕೇಳಿಕೊಳ್ಳುತ್ತಾನೆ. ಆ ಹಾಡಿನಲ್ಲೇ ಬರುವ SeZಠಿ ಟ್ಞ್ಛಜಿbಛ್ಞ್ಚಿಛಿ Z ಞZhಛಿ Z ಜಿmmಛಿ ohಜಿm ಟ್ಞ ಜಿqಛ್ಟಿo (ತುಂಬಿತುಳುಕುವ ಆತ್ಮವಿಶ್ವಾಸವೊಂದೇ ಸಾಕು, ಕುಂಟನನ್ನೂ ಹೊಳೆ ದಾಟಿಸೀತು) ಎಂಬ ಸಾಲು ವಿಶೇಷವಾಗಿ ಗಮನ ಸೆಳೆಯುತ್ತದೆ.

ಮತ್ತೆ ಈ ಸುಪ್ತ ಬಯಕೆ ಜಾಗೃತವಾಗುವುದೂ ಕಷ್ಟವೇನಿಲ್ಲ. ಯಾವುದೋ ಒಂದು ಚಿಕ್ಕ ಸಂಗತಿ ನೆಪವಾದೀತು, ನಿಮಿತ್ತವಾದೀತು. ರೂಪ, ಶಬ್ದ, ರಸ, ಗಂಧ, ಸ್ಪರ್ಶಗಳನ್ನು ಗ್ರಹಿಸುವ ಪಂಚೇಂದ್ರಿಯಗಳೆಲ್ಲವೂ ನೆನಪುಗಳ ತಿಜೋರಿಯ ಕೀಲಿಕೈಗಳೇ. ಹಳೆಯ ಕಪ್ಪುಬಿಳುಪು ಸಿನಿಮಾವೊಂದರ ಪೋಸ್ಟರ್ ಕಣ್ಣಿಗೆ ಬಿದ್ದರೆ ಸಾಕು ಟೈಮ್‌ಟ್ರಾವೆಲ್ ಮಷಿನ್‌ನಲ್ಲಿ ಅಷ್ಟು ವರ್ಷ ಹಿಂದಕ್ಕೆ ಸರಿದು ಬಾಲ್ಯದ ದಿನಗಳ ನೆನಪುಗಳಲ್ಲಿ ಮೀಯಬಹುದು.

ಬಿನಾಕಾ ಗೀತ್‌ಮಾಲಾದ ಆರಂಭಿಕ ಬಿಗುಲ್ ಮತ್ತು ಅಮೀನ್ ಸಯಾನಿಯ ಸುಸ್ವರದಲ್ಲಿ ‘ಬೆಹೆನ್ ಔರ್ ಭಾಯಿಯೋಂ...’ ಧ್ವನಿತುಣುಕು ಕೇಳಿಬಂದರೆ ಸಾಕು ಅದೇ ಟೈಮ್‌ಟ್ರಾವೆಲ್ ಮಷಿನ್‌ನಲ್ಲಿ ಬಾಲ್ಯಕಾಲಕ್ಕಿಳಿದು ವಿಹರಿಸಬಹುದು. ಒಂದರ್ಧ ಚಮಚ ಗ್ರೈಪ್‌ವಾಟರ್ ಅನ್ನೋ ಅಜ್ಜಿ ಅರೆದುಕೊಡುತ್ತಿದ್ದ ಮತ್ತಾವುದೋ ಮನೆಮದ್ದನ್ನೋ ಈಗ ನಾಲಗೆಗೆ ಮುಟ್ಟಿಸಿಕೊಂಡರೂ ಸಾಕು ಆ ರುಚಿ ನಮ್ಮನ್ನು ಬಾಲ್ಯದ ದಿನಗಳಿಗೆ ಎಳೆದೊಯ್ಯ ಬಹುದು.

ಪಿಯರ್ಸ್ ಸೋಪಿನ ಪರಿಮಳವೂ ಈ ಕೆಲಸವನ್ನು ಅಷ್ಟೇ ಸಲೀಸಾಗಿ ಮಾಡಬಹುದು. ಸುಕ್ಕುಗಟ್ಟಿದ ಕೈಯೊಡನೆ ಹಸ್ತಲಾಘವ ಮಾಡಿದಾಕ್ಷಣ ನಮ್ಮದೇ ಅಜ್ಜ ಅಥವಾ ಅಜ್ಜಿ ಕೈಹಿಡಿದು ನಡೆಸುತ್ತಿದ್ದದ್ದು ನೆನಪಾಗಬಹುದು. ಇಂಥ ಸೋಜಿಗಗಳನ್ನು ನಾನು ಆಗಾಗ ಅನುಭವಿಸಿದ್ದೇನೆ, ಬೇರೆಯವರಿಗಾಗುವುದನ್ನೂ ಗಮನಿಸಿದ್ದೇನೆ.

“ನಾವೆಲ್ಲ ಚಿಕ್ಕಂದಿನಲ್ಲಿ ಆನಂದಿಸಿದ, ನಮ್ಮೆಲ್ಲರ ಪ್ರೀತಿಯ ‘ಚಂದಮಾಮ’ ಮಾಸಪತ್ರಿಕೆ ಈಗ ಅಂತರಜಾಲದಲ್ಲಿ ಲಭ್ಯವಿದೆ. ಈಗಿನ ಸಂಚಿಕೆಗಳಷ್ಟೇ ಅಲ್ಲ, 1949ರಿಂದ ಮೊದ ಲ್ಗೊಂಡು ಹಳೆಯ ಸಂಚಿಕೆಗಳನ್ನೆಲ್ಲ ಮುದ್ರಿತ ಪ್ರತಿ ಹೇಗಿರುತ್ತಿತ್ತೋ ಅದೇ ಸ್ವರೂಪದಲ್ಲಿ ಪುಟ ತಿರುಗಿಸುತ್ತ ಓದುವ ಅನುಕೂಲವಿದೆ. ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು- ಬೇಕಾದ ಭಾಷೆ ಆಯ್ದುಕೊಳ್ಳಬಹುದು!" ಎಂದು ಕೆಲ ವರ್ಷಗಳ ಹಿಂದೊಮ್ಮೆ ಬಂಧುಮಿತ್ರರಿಗೆಲ್ಲ ಇಮೇಲ್ ಕಳುಹಿಸಿದ್ದೆ.

ಅದೆಂಥ ಅನರ್ಘ್ಯ ನಿಧಿ ಸಿಕ್ಕಂತಾಯ್ತೋ ಗೊತ್ತಿಲ್ಲ, ಹಳೆಯ ಚಂದಮಾಮ ಸಂಚಿಕೆಗಳು ಕಂಪ್ಯೂಟರ್ ಪರದೆ ಮೇಲೆ ಮೂಡಿದಾಗ ಒಬ್ಬೊಬ್ಬರೂ ಅನುಭವಿಸಿದ ರೋಮಾಂಚನ ವರ್ಣನಾತೀತ ಎಂದು ಎಲ್ಲರ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗಿತ್ತು.

ಮೊನ್ನೆಯೂ ಹಾಗೆಯೇ ಆಯ್ತು. “ನೀವು ಸರಿಸುಮಾರು 1978-1988ರ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರೌಢಶಾಲೆಯಲ್ಲಿ ಓದಿದವರಾದರೆ, ಪ್ರಥಮ ಭಾಷೆ ಕನ್ನಡ ಆಗಿದ್ದರೆ 8, 9, 10ನೆಯ ತರಗತಿಗಳಿಗಿದ್ದ ಉಪಪಠ್ಯ (ಘೆಟ್ಞbಛಿಠಿZಜ್ಝಿ) ಪುಸ್ತಕಗಳು ಇಲ್ಲಿವೆ. ಈಗ ಮತ್ತೊಮ್ಮೆ ಓದಬೇಕೆಂದೆನಿಸಿದರೆ, ಉಚಿತ ಪಿಡಿಎಫ್ ಬೇಕಾದರೆ, ಆಸಕ್ತರು ಸಂದೇಶ ಕಳುಹಿಸಿ ಪಡೆದುಕೊಳ್ಳಬಹುದು" ಎಂಬೊಂದು ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದೆ.

‘ಸಾಧನೆಯ ಹಾದಿಯಲ್ಲಿ’, ‘ಹೂವ ತಂದವರು’ ಮತ್ತು ‘ಶಿಖರಗಾಮಿಗಳು’ ಪಠ್ಯಪುಸ್ತಕಗಳ ಮುಖಪುಟಗಳನ್ನು ಜೋಡಿಸಿಟ್ಟ ಚಿತ್ರವನ್ನೂ ಸೇರಿಸಿದ್ದೆ. ಸಾವಿರಾರು ಜನ ಸದಭಿರುಚಿಯ ಕನ್ನಡಿಗರು ದುಂಬಾಲುಬಿದ್ದು ಎಂಬಂತೆ ಪುಸ್ತಕಗಳ ಪಿಡಿಎ- ಪಡೆದುಕೊಂಡರು. ಆ ಮೂರೂ ಪುಸ್ತಕಗಳ ಸರಕು ಅತ್ಯುತ್ಕೃಷ್ಟ ಮಟ್ಟದ್ದು, ಜೀವನಕ್ಕೆ ಸ್ಪೂರ್ತಿ ತುಂಬಬಲ್ಲದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಅಷ್ಟು ಖಾಯಿಶಿ ಬಂದದ್ದು ಅವುಗಳನ್ನೀಗ ಓದುತ್ತ ಬಾಲ್ಯದ ದಿನಗಳನ್ನು ಮೆಲುಕು ಹಾಕಬಹುದೆಂಬ ತೀವ್ರ ತುಡಿತದಿಂದ. “ಮುಖಪುಟಗಳನ್ನು ನೋಡಿಯೇ ಹೈಸ್ಕೂಲಿಗೆ ಮರಳಿದಂತಾಯ್ತು!" ಎಂದು ಭಾವಜೀವಿ ಬರಹಗಾರ ವಸುಧೇಂದ್ರ ಪ್ರತಿ ಕ್ರಿಯಿಸಿದ್ದು ಎಲ್ಲರ ಪರವಾಗಿಯೇ ಹೇಳಿದಂತಿತ್ತು. ಬಾಲ್ಯದ ನೆನಪುಗಳ ಸಿರಿತನ-ಸಿಹಿತನ ಗಳ ಮಹಿಮೆಯೇ ಅಂಥದು. ಆ ಸ್ವಚ್ಛಂದ ದಿನಗಳ ಒಂದಷ್ಟು ಚಿತ್ರಣಗಳು ಈಗ ನಿಮ್ಮ ಚಿತ್ತಭಿತ್ತಿಯಲ್ಲೂ ಒತ್ತರಿಸಿ ಬಂದಿರಬಹುದು; ಮಧುರಾನುಭೂತಿಯನ್ನು ತಂದಿರಬಹುದು!