ತಿಳಿರುತೋರಣ
ಅಕ್ಷರಮಾತ್ರವನ್ನು ಕಲಿಸಿದರೂ ಆ ವ್ಯಕ್ತಿ ಗುರುಸಮಾನ- ಎಂದು ಸಾರುವ ‘ಹಿತವಂ ತೋರುವ ನಾತ್ಮ ಬಂಧು ಪೊರೆವಾತಂ... ಕಲಿಸಿದಾತಂ ವರ್ಣಮಾತ್ರಂ ಗುರು...’ ಸೋಮೇಶ್ವರ ಶತಕದ ಪದ್ಯ ವನ್ನು ನೆನಪಿಸಿಕೊಂಡು ಮೊನ್ನೆ ಗುರುಪೂರ್ಣಿಮೆಯಂದು ವಾಟ್ಸಾಪ್‌ನಲ್ಲೇ ಗೌರವ ಸಲ್ಲಿಕೆ, ಪರಸ್ಪರ ಶುಭಾಶಯ ವಿನಿಮಯಗಳೆಲ್ಲ ನಡೆದವು. ಕೆಲವರು ತೋರಿಕೆಗಾಗಿ ಇರಬಹುದು, ಕೆಲವರು ‘ಫೊಮೊ’(ಫಿಯರ್ ಆಫ್ ಮಿಸ್ಸಿಂಗ್ ಔಟ್)ದಿಂದ ಇರಬಹುದು, ಇನ್ನು ಕೆಲವರು ನಿಜವಾದ ಅಂತಃಕರಣದಿಂದಲೇ ಮಾಡಿರಬಹುದು. ಮತ್ತೆ ಕೆಲವರು ತಮಾಷೆಗೆಂದೇ ಹೌದಾದರೂ ಈಗಿನ ಮಹಾಗುರುಗಳಾದ ಗೂಗಲ್ ಮತ್ತು ಚಾಟ್ ಜಿಪಿಟಿಯಂಥ ಎಐ ಪರಿಕರಗಳನ್ನೂ ಮನಸಾರೆ ವಂದಿಸಿರಬಹುದು.
ಇರಲಿ, ಗುರುವಿನ ವಿಚಾರದಲ್ಲಿ ಲಘುವಾಗಿ ಮಾತಾಡುವುದು ತರವಲ್ಲ. ಗುರುವೆಂಬ ಪದವೇ ಮಾರ್ಪಾಡಾಗಿ ಗೌರವ ಆದದ್ದೆಂದ ಮೇಲೆ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದರಿಂದಾಗಿಯೇ ಇರಬಹುದು- ಗುರು ಎಂದೊಡನೆ, ಅದರಲ್ಲೂ ಅಧ್ಯಾತ್ಮ ಗುರು ಎಂದೊಡನೆ, ನಮ್ಮ ಮನದಲ್ಲಿ ಸಾಮಾನ್ಯವಾಗಿ ಮೂಡುವುದು ‘ಜ್ಞಾನವೃದ್ಧರೂ ವಯೋವೃದ್ಧರೂ’ ಪದಪುಂಜಕ್ಕೆ ಶತಪ್ರತಿಶತ ಹೊಂದುವ ವ್ಯಕ್ತಿಯ ಚಿತ್ರಣ.
ಪುರಾಣಕಥೆಗಳಲ್ಲಿನ ಋಷಿಮುನಿಗಳಂತೆ ಬೇಕಿದ್ದರೆ ಕಾಷಾಯವಸ್ತ್ರಧಾರಿ ದೇಹ, ನೆರೆತು ಬೆಳ್ಳಗಾದ ಗಡ್ಡ-ಮೀಸೆ-ತಲೆಗೂದಲುಳ್ಳ ತೇಜೋಮಯ ಮುಖ ಇತ್ಯಾದಿ. ಆದರೆ ಅಧ್ಯಾತ್ಮಗುರು ಆ ರೀತಿಯೇ ಇರಬೇಕೆಂದಾಗಲೀ ಅಂತಹ ವೇಷಭೂಷಣಗಳಲ್ಲೇ ಕಾಣಿಸಬೇಕೆಂದಾಗಲೀ ಏನಿಲ್ಲ.
ಕೈ ಹಿಡಿದ ಹೆಂಡತಿಯೂ- ಈಗಷ್ಟೇ ಮದುವೆಯಾಗಿ ಬಂದವಳು, ಮನೆವಾಳ್ತೆ ಮಕ್ಕಳು-ಮರಿಗಳನ್ನು ನೋಡಬೇಕಾದವಳು (ಎಂದು ಸಮಾಜದ ಅಲಿಖಿತ ಸಂವಿಧಾನದಲ್ಲಿ ಇರುವಂಥವಳು) ಕೂಡ ಅಧ್ಯಾತ್ಮ ಗುರುವಾಗಬಲ್ಲಳು. ಅದೂ, ಅವರಿವರಿಗಲ್ಲ ವರಿಸಿದ ಗಂಡನಿಗೇ! ಅಂತಹದೊಂದು ಆದರ್ಶ ಉದಾಹರಣೆ ಭಾರತೀಯ ಪುರಾಣಗಳಲ್ಲಿ, ನಿಖರವಾಗಿ ಹೇಳಬೇಕೆಂದರೆ ಆದಿಕವಿ ವಾಲ್ಮೀಕಿ ಬರೆದ ರಾಮಾಯಣದ್ದೇ ಒಂದು ಭಾಗವೆನ್ನಲಾದ ಯೋಗವಾಸಿಷ್ಠದಲ್ಲಿ ಸಿಗುತ್ತದೆ.
ಇದನ್ನೂ ಓದಿ: Srivathsa Joshi Column: ಹೂವಾಡಗಿತ್ತಿಯ ಬಯಕೆಯನ್ನು ಕಾಮವಿಲ್ಲದೆ ತೀರಿಸಿದನು !
ಚೂಡಾಲಾ ಮತ್ತು ಶಿಖಿಧ್ವಜ ಎಂಬ ಪತ್ನಿ-ಪತಿ ಗುರು-ಶಿಷ್ಯರ ಕಥೆಯಲ್ಲಿ. ಜೀವನಾದರ್ಶಗಳನ್ನು ಬೋಧಿಸುತ್ತ ವಸಿಷ್ಠ ಮಹರ್ಷಿಯು ಶ್ರೀರಾಮಚಂದ್ರನಿಗೆ ಹೇಳಿದ ಕಥೆಯಿದು: ಈ ಹಿಂದಿನ ಯುಗ ಚಕ್ರದ ದ್ವಾಪರದಲ್ಲಿ ಮಾಲವ ರಾಜ್ಯದ ಉಜ್ಜಯಿನಿಯಲ್ಲಿ ಶಿಖಿಧ್ವಜನೆಂಬ ರಾಜನು ಜನಿಸಿದನು.
ಬಾಲ್ಯದಲ್ಲಿಯೇ ಅವನ ತಂದೆ ನಿಧನರಾದ ಕಾರಣ, ಇನ್ನೂ ಪೂರ್ಣವಾಗಿ ರಾಜಕೀಯ ಅನುಭವ ವಿಲ್ಲದ ವಯಸ್ಸಿನಲ್ಲೇ ರಾಜ್ಯಭಾರ ಅವನ ಹೆಗಲಿಗೆ ಬಂತು. ಆದರೆ ಅವನು ತನ್ನ ಯೋಗ್ಯತೆಯಿಂದ ಎಲ್ಲರನ್ನೂ ಆಶ್ಚರ್ಯಗೊಳಿಸಿದನು. ಶಿಖಿಧ್ವಜ ಧೈರ್ಯಶಾಲಿ. ಉದಾರ ಸ್ವಭಾವದವನು. ಇಂದ್ರಿಯ ನಿಗ್ರಹ ಹೊಂದಿದ್ದವನು ಮತ್ತು ಮೃದುಭಾಷಿ. ವೇದಶಾಸಗಳ ಅಧ್ಯಯನದಲ್ಲಿ ಆಸಕ್ತನು. ಮಂತ್ರಿ ಗಳ ಸಲಹೆಗಳನ್ನು ಗೌರವಿಸುತ್ತಿದ್ದರೂ ತನ್ನ ಸ್ವಂತ ವಿವೇಚನೆಯಿಂದ ಆಡಳಿತ ನಡೆಸುವ ಸಮರ್ಥ ದೊರೆ. ಹದಿನಾರು ವರ್ಷಗಳ ಕಾಲ ಅನೇಕ ರಾಜ್ಯಗಳನ್ನು ಜಯಿಸಿ ತನ್ನ ಸಾಮ್ರಾಜ್ಯ ವನ್ನು ಬಲಪಡಿಸಿದನು.
ರಾಜ್ಯದಲ್ಲಿ ಶಾಂತಿ ಸಮೃದ್ಧಿ ನೆಲೆಸಿದ ಬಳಿಕ ಮಂತ್ರಿಗಳು ಶಿಖಿಧ್ವಜನ ವಿವಾಹದ ಬಗ್ಗೆ ಯೋಚಿಸಿದರು. ಸೌರಾಷ್ಟ್ರದ ರಾಜಕುಮಾರಿ, ಸೌಂದರ್ಯ ಮತ್ತು ಬುದ್ಧಿವಂತಿಕೆಯ ಗಣಿಯಾಗಿದ್ದ ಚೂಡಾಲಾಳನ್ನು ಆತನಿಗೆ ವಧುವಾಗಿ ಆರಿಸಿದರು. ಅವರಿಬ್ಬರ ವಿವಾಹವು ಶಾಸ್ತ್ರೋಕ್ತವಾಗಿ ನೆರವೇರಿತು.
ದಿನಗಳೆದಂತೆ ಅವರಲ್ಲಿ ಪ್ರೀತಿ ಹೆಚ್ಚಾಯಿತು. ಅರಮನೆಯ ಉದ್ಯಾನಗಳಲ್ಲಿ, ಸರೋವರಗಳ ತೀರದಲ್ಲಿ ವಿಹರಿಸುತ್ತಾ ಸಂಗೀತ, ಚಿತ್ರಕಲೆ, ನೃತ್ಯ, ತತ್ತ್ವಶಾಸ್ತ್ರ, ರಾಜಕೀಯ ಕಲೆಗಳನ್ನೆಲ್ಲ ಒಟ್ಟಿಗೆ ಅಭ್ಯಾಸ ಮಾಡಿದರು. ಇಬ್ಬರೂ ಪರಸ್ಪರ ಕಲಿಯುತ್ತಾ ಅತ್ಯಂತ ಆಪ್ತ ಸ್ನೇಹಿತರಾದರು. ವರ್ಷಗಳು ರುಳಿದಂತೆ, ವಯಸ್ಸಾಗುವ ಮೊದಲ ಲಕ್ಷಣಗಳು ಅವರಲ್ಲಿ ಕಾಣಿಸಿಕೊಂಡವು. ತಮ್ಮ ಸಂಪತ್ತು ತಮಗೆ ಎಂದಿಗೂ ಶಾಶ್ವತ ನೆಮ್ಮದಿ ನೀಡಲಾರದು ಎಂಬುದನ್ನು ಇಬ್ಬರೂ ಅರಿತುಕೊಂಡರು.
ಶರೀರವು ಕ್ಷೀಣಿಸುತ್ತದೆ, ಭೌತಿಕ ವಸ್ತುಗಳು ಸಮಯಕ್ಕೆ ಅಧೀನವಾಗಿವೆ ಮತ್ತು ಸಾವು ನಿಶ್ಚಿತ ಎಂಬುದನ್ನು ಮನಗಂಡಾಗ ಅವರಲ್ಲಿ ವೈರಾಗ್ಯಭಾವ ಉಂಟಾಯಿತು. ಇದರಿಂದಾಗಿ ಅವರಿಬ್ಬರೂ ಒಟ್ಟಾಗಿ ಆತ್ಮಜ್ಞಾನದ ಅಧ್ಯಯನವನ್ನು ಪ್ರಾರಂಭಿಸಿದರು. ಚೂಡಾಲೆಗೆ ಈ ಅಧ್ಯಯನವು ತೀವ್ರ ಆತ್ಮವಿಚಾರವಾಗಿ ಬದಲಾಯಿತು. ಆಕೆಯು ತನ್ನೊಳಗಿನ “ನಾನು" ಎಂಬುದನ್ನು ಪರೀಕ್ಷಿಸಲು ಶುರುಮಾಡಿದಳು. ದೇಹ, ಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಅಹಂಕಾರ- ಇವೆಲ್ಲವೂ ಬದಲಾಗುವಂಥವು ಹಾಗೂ ಕೇವಲ ಉಪಕರಣಗಳು ಮಾತ್ರ. ಇವೆಲ್ಲವುಗಳ ಹಿಂದೆ ಸಾಕ್ಷಿಯಾಗಿ ರುವ ಶುದ್ಧ ಪ್ರಜ್ಞೆಯೇ ನಿಜವಾದ ತತ್ತ್ವ ಎಂಬುದನ್ನು ಚೂಡಾಲೆ ಸಾಕ್ಷಾತ್ಕರಿಸಿಕೊಂಡಳು. ಈ ಸಾಕ್ಷಾತ್ಕಾರದಿಂದಾಗಿ ಆಕೆಯಲ್ಲಿದ್ದ ಆಸೆ ಮತ್ತು ಭಯಗಳು ಸಂಪೂರ್ಣವಾಗಿ ಮಾಯವಾದವು.
ಬಾಹ್ಯ ಪ್ರಪಂಚವು ಕೇವಲ ನಮ್ಮ ಪ್ರಜ್ಞೆಯಲ್ಲಿ ಮೂಡುವ ಒಂದು ತೋರಿಕೆ ಮಾತ್ರ ಎಂಬುದನ್ನು ಚೂಡಾಲೆ ಗ್ರಹಿಸಿದಳು. ಈ ಜ್ಞಾನೋದಯದಿಂದಾಗಿ ಆಕೆಯ ಮುಖದಲ್ಲಿ ಮತ್ತು ನಡವಳಿಕೆಯಲ್ಲಿ ಅಪೂರ್ವವಾದ ತೇಜಸ್ಸು ಮೂಡಿತು. ಇದನ್ನು ನೋಡಿ ಶಿಖಿಧ್ವಜನು, “ನಿನಗೆ ಯಾವುದಾದರೂ ಅಪರೂಪದ ಸಾಮ್ರಾಜ್ಯ ಅಥವಾ ಚಿಂತಾಮಣಿ ರತ್ನ ಸಿಕ್ಕಿತೇ?" ಎಂದು ಆಶ್ಚರ್ಯದಿಂದ ಕೇಳಿದನು. ಅದಕ್ಕೆ ಚೂಡಾಲೆಯು, ತಾನು ತನ್ನೊಳಗಿನ ಆತ್ಮನನ್ನು ಕಂಡುಕೊಂಡಿರುವುದಾಗಿ ಉತ್ತರಿಸಿದಳು.
ಶಿಖಿಧ್ವಜನಿಗೆ ಆಕೆಯ ಮಾತುಗಳು ವಿರೋಧಾಭಾಸವಾಗಿ ಕಾಣಿಸಿ, ನಕ್ಕು ತಮಾಷೆ ಮಾಡಿದನು. ವಾಸ್ತವವಾಗಿ ಶಿಖಿಧ್ವಜನಿಗೆ ಇನ್ನೂ ಅಂತಹ ದಿವ್ಯಜ್ಞಾನವನ್ನು ಸ್ವೀಕರಿಸುವ ಪಕ್ವತೆ ಬಂದಿರಲಿಲ್ಲ. ಚೂಡಾಲೆಯಾ ದರೋ ತನ್ನ ರಾಜ್ಯಭಾರವನ್ನು ಮುಂದುವರಿಸುತ್ತಿರುವಾಗಲೇ ತೀವ್ರ ಯೋಗಾ ಭ್ಯಾಸದ ಮೂಲಕ ಆಕಾಶದಲ್ಲಿ ಹಾರುವ, ಬೇರೆ ರೂಪ ತಳೆಯುವ ಮುಂತಾದ ಅತಿಮಾನುಷ ಸಿದ್ಧಿಗಳನ್ನೂ ಪಡೆದಿದ್ದಳು. ಆದರೆ ಕೇವಲ ಪವಾಡಗಳಿಂದ ಗಂಡನಿಗೆ ಜ್ಞಾನ ಮೂಡಿಸಲು ಸಾಧ್ಯ ವಿಲ್ಲವೆಂದು ಅರಿತು ಅವುಗಳನ್ನು ರಹಸ್ಯವಾಗಿಯೇ ಇಟ್ಟಿದ್ದಳು. ಶಿಖಿಧ್ವಜನಿಗೆ ಸಂಸಾರದ ಮೇಲಿನ ವಿರಕ್ತಿ ಹೆಚ್ಚಾಯಿತು.
ದಾನ-ಧರ್ಮ, ಕಠಿನ ವ್ರತ, ತೀರ್ಥಯಾತ್ರೆಗಳನ್ನು ಮಾಡಿದರೂ ಆತನಿಗೆ ಶಾಂತಿ ಸಿಗಲಿಲ್ಲ. ಅರಮನೆಯ ವಾತಾವರಣವೇ ತನ್ನ ಅಶಾಂತಿಗೆ ಕಾರಣ ಎಂದು ಭಾವಿಸಿದ ಆತ, ಎಲ್ಲವನ್ನೂ ತೊರೆದು ಕಾಡಿಗೆ ಹೋಗಲು ನಿರ್ಧರಿಸಿದನು. ಶಿಖಿಧ್ವಜನು ಕಾಡಿಗೆ ಹೋಗುವ ನಿರ್ಧಾರ ಪ್ರಕಟಿಸಿ ದಾಗ, ಚೂಡಾಲೆಯು ರಾಜಧರ್ಮದ ಜವಾಬ್ದಾರಿಯನ್ನು ನೆನಪಿಸಿ ತಡೆದಳು. ಆದರೆ ಆತ ಕೇಳಲಿಲ್ಲ.
ಒಂದು ಮಧ್ಯರಾತ್ರಿ ಎಲ್ಲರೂ ಮಲಗಿದ್ದಾಗ ಶಿಖಿಧ್ವಜನು ಯಾರಿಗೂ ತಿಳಿಸದೆ ಅರಮನೆಯನ್ನು ತೊರೆದು ಹೊರಟುಹೋದನು. ದೀರ್ಘ ಪ್ರಯಾಣಾನಂತರ ಮಂದಾರ ಪರ್ವತದ ಬಳಿಯ ದಟ್ಟ ಅರಣ್ಯದಲ್ಲಿ ಒಂದು ಪರ್ಣಕುಟಿಯನ್ನು ನಿರ್ಮಿಸಿಕೊಂಡು, ಕಠಿಣ ತಪಸ್ಸು ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡನು. ಇತ್ತ ಅರಮನೆಯಲ್ಲಿ ಬೆಳಗ್ಗೆ ಎದ್ದ ಚೂಡಾಲೆ ಪಕ್ಕದಲ್ಲಿ ನೋಡುತ್ತಾಳಾದರೆ ಶಿಖಿಧ್ವಜ ಕಾಣುತ್ತಿಲ್ಲ!
ಆದರೆ ಯೋಗದೃಷ್ಟಿಯಿಂದಲೇ ತನ್ನ ಗಂಡ ಎಲ್ಲಿದ್ದಾನೆಂದು ಆಕೆ ತಿಳಿದುಕೊಂಡಳು. ಆಕಾಶಮಾರ್ಗ ವಾಗಿ ಕಾಡಿಗೆ ಬಂದು ಗಂಡನನ್ನು ನೋಡಿದಳು. ಆತನಿಗಿನ್ನೂ ಕೇವಲ ಭೌತಿಕವಾಗಿ ವಸ್ತುಗಳನ್ನು ತ್ಯಜಿಸುವುದೇ ಮುಕ್ತಿ ಎಂಬ ಭ್ರಮೆ ಇತ್ತು. ಹಾಗಾಗಿ ಈಗಲೇ ಆತನನ್ನು ಭೇಟಿಯಾದರೆ ಪ್ರಯೋಜನ ವಿಲ್ಲವೆಂದು ತಿಳಿದು ಉಜ್ಜಯಿನಿಗೆ ಮರಳಿದಳು. ರಾಜನು ಮುಖ್ಯ ಕೆಲಸದ ಮೇಲೆ ಹೋಗಿದ್ದಾನೆಂದು ಪ್ರಜೆಗಳಿಗೆ ತಿಳಿಸಿ, ಆಕೆಯೇ ಸ್ವತಃ ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿ ಯಾಗಿ ರಾಜ್ಯಭಾರ ಮಾಡಿದಳು.
ಚೂಡಾಲೆ ಅರಮನೆಯಲ್ಲಿದ್ದು ರಾಜ್ಯಾಡಳಿತದ ಗುರುತರ ಹೊಣೆಯಿದ್ದರೂ ಮಾನಸಿಕವಾಗಿ ಮುಕ್ತಳಾಗಿದ್ದಳು; ಶಿಖಿಧ್ವಜ ಕಾಡಿನಲ್ಲಿ ಸ್ವಚ್ಛಂದವಾಗಿದ್ದರೂ ಮಾನಸಿಕವಾಗಿ ಬಂಧನದಲ್ಲಿದ್ದನು. ಎಂಟು ವರ್ಷಗಳ ಕಠಿಣ ತಪಸ್ಸಿನಿಂದಾಗಿ ಶಿಖಿಧ್ವಜ ತುಂಬ ಕೃಶನಾದನು ಮತ್ತು ಆತನ ಮನಸ್ಸು ಈಗ ಜ್ಞಾನವನ್ನು ಸ್ವೀಕರಿಸಲು ಪಕ್ವವಾಯಿತು. ಅದನ್ನೂ ಯೋಗಶಕ್ತಿಯಿಂದಲೇ ಅರಿತ ಚೂಡಾಲೆ ಕಾಡಿನಲ್ಲಿ ಶಿಖಿಧ್ವಜನಿದ್ದಲ್ಲಿಗೆ ಬಂದಳು. ಅವನನ್ನು ಮುನ್ನಡೆಸಲು ಕುಂಭ ಎಂಬ ಹೆಸರಿನ ಒಬ್ಬ ತೇಜಸ್ವಿ ಬ್ರಾಹ್ಮಣ ಯುವ ತಪಸ್ವಿಯ ರೂಪವನ್ನು ಧರಿಸಿದಳು.
ಶಿಖಿಧ್ವಜನು ಆ ದಿವ್ಯ ಯುವಕನನ್ನು ಗೌರವದಿಂದ ಸತ್ಕರಿಸಿದನು. ಕುಂಭನು ತಾನು ದೇವಲೋಕದ ನಾರದ ಮುನಿಯ ಮಗನೆಂದು ಸುಳ್ಳು ಕಥೆಯೊಂದನ್ನು ಹೇಳಿ ಶಿಖಿಧ್ವಜನ ನಂಬಿಕೆ ಗಳಿಸಿದನು. ಆಮೇಲೆ ಶಿಖಿಧ್ವಜನೂ ತನ್ನ ದುಃಖದ ಕಥೆಯನ್ನು ಹೇಳಿ, ಇಷ್ಟು ವರ್ಷ ತಪಸ್ಸು ಮಾಡಿದರೂ ತನಗೆ ಶಾಂತಿ ಸಿಕ್ಕಿಲ್ಲವೆಂದು ಚಿಂತೆಯನ್ನು ತೋಡಿಕೊಂಡನು. ಅದಕ್ಕೆ ಕುಂಭನು, “ನೀನು ಕೇವಲ ಹೊರಗಿನ ವಸ್ತುಗಳನ್ನು ತ್ಯಜಿಸಿದ್ದೀಯೇ ಹೊರತು, ‘ಇದು ನನ್ನ ಪರ್ಣಕುಟಿ, ಇದು ನನ್ನ ತಪಸ್ಸು’ ಎಂದುಕೊಳ್ಳುವ ನಿನ್ನೊಳಗಿನ ಅಹಂ ಭಾವ ಮತ್ತು ಮಮಕಾರಗಳನ್ನು ತ್ಯಜಿಸಿಲ್ಲ" ಎಂದು ತಿಳಿಸಿದನು.
ಶಿಖಿಧ್ವಜನಿಗೆ ಜ್ಞಾನದ ಅರಿವಾಗುವಂತೆ ಕುಂಭನು ಒಂದೆರಡು ಕಥಾನಕಗಳನ್ನೂ ಬಳಸಿದನು. ಮೊದಲನೆಯದು ಚಿಂತಾಮಣಿ ರತ್ನದ ಕಥೆ- ಒಬ್ಬ ವ್ಯಕ್ತಿ ಅಪರೂಪದ ಬಯಕೆಗಳನ್ನು ಈಡೇರಿಸುವ ‘ಚಿಂತಾಮಣಿ’ ರತ್ನಕ್ಕಾಗಿ ತಪಸ್ಸು ಮಾಡುತ್ತಾನೆ. ರತ್ನವು ಆತನ ಕೈಗೆ ಸಿಕ್ಕಾಗ, ಇಷ್ಟು ಸುಲಭವಾಗಿ ಇದು ಸಿಗಲು ಸಾಧ್ಯವಿಲ್ಲ, ಇದು ನಕಲಿ ಇರಬೇಕು ಎಂದು ಸಂಶಯಪಟ್ಟು ಅದನ್ನು ಕಳೆದುಕೊಳ್ಳುತ್ತಾನೆ. ಆಮೇಲೆ ಒಂದು ಗಾಜಿನ ಚೂರನ್ನು ಅಸಲಿ ರತ್ನವೆಂದು ಭಾವಿಸಿ ಕಾಡಿಗೆ ಹೋಗಿ ಕಷ್ಟಪಡುತ್ತಾನೆ. ಇಲ್ಲಿ ನಿಜವಾಗಿ ಚೂಡಾಲೆಯ ಜ್ಞಾನವೇ ಅಸಲಿ ರತ್ನ, ಆದರೆ ಶಿಖಿಧ್ವಜನು ಅದನ್ನು ನಂಬದೆ ಕಾಡಿನ ಕಠಿನ ತಪಸ್ಸೆಂಬ ಗಾಜಿನ ಚೂರನ್ನು ಹಿಡಿದು ಕುಳಿತಿದ್ದನು!
ಕುಂಭನು ಹೇಳಿದ ಇನ್ನೊಂದು ಕಥಾನಕದಲ್ಲಿ ಒಂದು ಬಲಿಷ್ಠ ಆನೆ ತನ್ನ ಸರಪಳಿಗಳನ್ನು ಮುರಿದು ಕಾಡಿಗೆ ಓಡಿಹೋಗುತ್ತದೆ. ದಾರಿಯಲ್ಲಿ ತನ್ನ ಮಾವುತನನ್ನು ಕೊಲ್ಲುವ ಅವಕಾಶ ವಿದ್ದರೂ ಕರುಣೆಯಿಂದ ಸುಮ್ಮನೆ ಬಿಡುತ್ತದೆ. ಮಾವುತನು ಕಾಡಿಗೆ ಬಂದು ಕಂದಕ ತೋಡಿ, ಎಲೆಗಳಿಂದ ಮುಚ್ಚಿ ಆನೆಯನ್ನು ಮತ್ತೆ ಬಂಧಿಸುತ್ತಾನೆ.
ಇಲ್ಲಿ ರಾಜನೇ ಆನೆ, ಅರಮನೆಯ ಬಂಧನವೇ ಸರಪಳಿ, ಕಾಡಿನ ತಪಸ್ಸೆಂಬ ಭ್ರಮೆಯೇ ಆತ ಬಿದ್ದ ಕಂದಕ. ಈ ಕಥಾನಕಗಳನ್ನು ಕೇಳಿದ ಶಿಖಿಧ್ವಜನು ತನಗಿದ್ದ ಅಲ್ಪಸ್ವಲ್ಪ ವಸ್ತುಗಳ ಮೇಲಿನ ಮೋಹವನ್ನೂ ತೊರೆಯಲು ನಿರ್ಧರಿಸಿ ತನ್ನ ಕಮಂಡಲ, ದಂಡ, ಜಿಂಕೆಯ ಚರ್ಮ ಮತ್ತು ಪರ್ಣಕುಟಿಯನ್ನೇ ಬೆಂಕಿಗೆ ಹಾಕಿ ಸುಟ್ಟು ಬೂದಿ ಮಾಡಿದನು. ಈಗ ತಾನು ಸಂಪೂರ್ಣ ದಿಗಂಬರ ನಾಗಿದ್ದು, ಸರ್ವಸ್ವವನ್ನೂ ತ್ಯಜಿಸಿದ್ದೇನೆ ಎಂದು ಘೋಷಿಸಿದನು.
ಆಗ ಕುಂಭನು, “ನೀನು ಇನ್ನೂ ಮುಖ್ಯವಾದದ್ದನ್ನು ತ್ಯಜಿಸಿಲ್ಲ" ಎಂದನು. ಶಿಖಿಧ್ವಜನು ತನ್ನ ಶರೀರವೇ ಆ ಕೊನೆಯ ವಸ್ತು ಎಂದು ಭಾವಿಸಿ, ಕಂದಕಕ್ಕೆ ಬಿದ್ದು ಪ್ರಾಣತ್ಯಾಗ ಮಾಡಲು ಹೊರಟನು. ಕುಂಭನು ಆತನನ್ನು ತಡೆದು, “ದೇಹವು ಕೇವಲ ಒಂದು ಜಡ ಉಪಕರಣ. ಅಸಲಿ ಮಾಲೀಕನಿರುವುದು ನಿನ್ನ ಮನಸ್ಸಿನಲ್ಲಿ ಮತ್ತು ಅಹಂಕಾರದಲ್ಲಿ. ಅದನ್ನು ವಿಚಾರದ ಮೂಲಕ ನಾಶಮಾಡು" ಎಂದು ಉಪದೇಶಿಸಿದನು. ಶಿಖಿಧ್ವಜನಿಗೆ ಸತ್ಯದ ಅರಿವಾಯಿತು. ಜಗತ್ತು ಮತ್ತು ಅಹಂಕಾರ ಎರಡೂ ಶುದ್ಧ ಪ್ರಜ್ಞೆಯಲ್ಲೇ ಮೂಡುವ ತರಂಗಗಳು ಎಂಬುದನ್ನು ಆತನು ಸಾಕ್ಷಾತ್ಕರಿಸಿಕೊಂಡು ತತ್‌ಕ್ಷಣವೇ ನಿರ್ವಿಕಲ್ಪ ಸಮಾಧಿಸ್ಥಿತಿಗೆ ತಲುಪಿದನು.
ಮೂರು ದಿನಗಳ ಬಳಿಕ ಚೂಡಾಲೆಯೇ ಮರಳಿ ಬಂದು ಮಂತ್ರಗಳನ್ನು ಪಠಿಸಿ ಆತನನ್ನು ಬಾಹ್ಯ ಪ್ರಜ್ಞೆಗೆ ತಂದಳು. ಶಿಖಿಧ್ವಜ ಈಗ ಜೀವನ್ಮುಕ್ತನಾಗಿದ್ದನು. ಅರಮನೆಯಿರಲಿ ಕಾಡಿರಲಿ, ಆತನಿಗೆ ಎರಡೂ ಒಂದೇ ಆಗಿತ್ತು. ಶಿಖಿಧ್ವಜನ ಜ್ಞಾನವು ಎಷ್ಟರಮಟ್ಟಿಗೆ ದೃಢವಾಗಿದೆ ಎಂದು ಪರೀಕ್ಷಿಸಲು ಚೂಡಾಲೆಯು ಕುಂಭನ ರೂಪದಲ್ಲೇ ಮೂರು ಪರೀಕ್ಷೆಗಳನ್ನು ಒಡ್ಡಿದಳು.
ಮೊದಲನೆಯದು ಬಾಹ್ಯ ಪರಿಸ್ಥಿತಿಯ ಪರೀಕ್ಷೆ. ಹಗಲಿನಲ್ಲಿ ಗಂಡಾಗಿಯೂ ರಾತ್ರಿಯಲ್ಲಿ ಹೆಣ್ಣಾಗಿಯೂ ಇರುವಂತೆ ದುರ್ವಾಸರ ಶಾಪ ತನಗೆ ತಟ್ಟಿದೆ ಯೆಂದು ತಿಳಿಸಿ ರಾತ್ರಿಯೂ ಅಲ್ಲಿರಲು ಅವಕಾಶವನ್ನು ಬೇಡಿದಳು. ಈಗಾಗಲೇ ಗಂಡು-ಹೆಣ್ಣು ಎಂಬ ಭೇದಭಾವವನ್ನು ಮೆಟ್ಟಿ ನಿಂತಿದ್ದ ಶಿಖಿಧ್ವಜ ನಿರಾಕರಿಸಲಿಲ್ಲ. ರಾತ್ರಿಯಲ್ಲಿ ಮದನಿಕೆ ಎಂಬ ಸುಂದರ ಸ್ತ್ರೀ ಯಾಗಿ ಪರಿವರ್ತನೆ ಹೊಂದಿ ಶಿಖಿಧ್ವಜನನ್ನು ಕಾಮೋದ್ರೇಕಕ್ಕೆ ಒಳಪಡಿಸಲಿಕ್ಕೂ ಯತ್ನಿಸಿದಳು. ಆದರೆ ಶಿಖಿಧ್ವಜ ಯಾವುದೇ ಪ್ರಚೋದನೆಗೆ ಒಳಗಾಗಲಿಲ್ಲ. ಅವಳು ಮಾಡುವ ಯಾವ ಕ್ರಿಯೆಯನ್ನೂ ವಿರೋಧಿಸಲೂ ಇಲ್ಲ.
ನಿರ್ಲಿಪ್ತ ಭಾವದಿಂದ ಪತ್ನಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದನು. ಎರಡನೆಯದು ಆಸೆಯ ಪರೀಕ್ಷೆ. ಚೂಡಾಲೆಯು ಇಂದ್ರನ ಭ್ರಮೆಯನ್ನು ಸೃಷ್ಟಿಸಿ ಶಿಖಿಧ್ವಜನನ್ನು ಸ್ವರ್ಗಕ್ಕೆ ಆಹ್ವಾನಿಸಿ ದಳು. ತನಗೆ ಸ್ವರ್ಗದ ಸುಖ ಬೇಡ, ತಾನು ಎಲ್ಲಿದ್ದರೂ ತೃಪ್ತನಾಗಿದ್ದೇನೆ ಎಂದು ಆತ ಅದನ್ನು ನಿರಾಕರಿಸಿದನು. ಮೂರನೆಯದು ಕ್ರೋಧ ಮತ್ತು ಅಸೂಯೆಯ ಪರೀಕ್ಷೆ. ಒಂದು ರಾತ್ರಿ ಮದನಿಕೆಯು ಪರಪುರುಷನೊಂದಿಗೆ ಅಪ್ಪಿಕೊಂಡಿರುವಂತೆ ಚೂಡಾಲೆಯು ಭ್ರಮೆಯನ್ನು ಸೃಷ್ಟಿಸಿದಳು. ಇದನ್ನು ನೋಡಿದರೂ ಶಿಖಿಧ್ವಜನು ಕೋಪಗೊಳ್ಳದೆ “ನಿಮ್ಮ ಇಷ್ಟದಂತೆ ಇರಿ" ಎಂದು ಹೇಳಿ ಧ್ಯಾನಕ್ಕೆ ಕುಳಿತನು.
ಅಂತೂ ಶಿಖಿಧ್ವಜನು ಆಸೆ, ಕೋಪ ಅಸೂಯೆಗಳನ್ನೆಲ್ಲ ಗೆದ್ದು ಪಕ್ವನಾಗಿದ್ದಾನೆಂದು ಖಚಿತಪಡಿಸಿ ಕೊಂಡ ಚೂಡಾಲೆ ತನ್ನ ಅಸಲಿ ರೂಪದಲ್ಲಿ ಆತನ ಮುಂದೆ ನಿಂತಳು. ಶಿಖಿಧ್ವಜನಿಗೆ ಕಣ್ಣೀರು ಬಂತು. ತನ್ನ ಹೆಂಡತಿಯೇ ತನಗೆ ಗುರುವಾಗಿ ಬಂದು ಇಷ್ಟೊಂದು ತಾಳ್ಮೆಯಿಂದ ತನ್ನನ್ನು ಉದ್ಧರಿಸಿದ್ದನ್ನು ಕಂಡು ಆಕೆಯನ್ನು ಆಲಿಂಗಿಸಿ ಕೃತಜ್ಞತೆ ಸಲ್ಲಿಸಿದನು. ಅವರಿಬ್ಬರೂ ಮರಳಿ ಉಜ್ಜಯಿನಿ ನಗರಿಗೆ ಬರಲು ನಿರ್ಧರಿಸಿದರು. ಚೂಡಾಲೆ ತನ್ನ ಯೋಗಶಕ್ತಿಯಿಂದ ಒಂದು ದೊಡ್ಡ ಸೈನ್ಯವನ್ನು ಸೃಷ್ಟಿಸಿದಳು.
ರಾಜ-ರಾಣಿಯರು ಸಡಗರದಿಂದ ನಗರವನ್ನು ಪ್ರವೇಶಿಸಿದರು. ಶಿಖಿಧ್ವಜನು ಮತ್ತೆ ಸಿಂಹಾಸನ ವನ್ನೇರಿ, ಚೂಡಾಲೆಯೊಂದಿಗೆ ಯಾವುದೇ ಅಹಂಕಾರವಿಲ್ಲದೆ, ಕಮಲದೆಲೆಯ ಮೇಲಿನ ನೀರಹನಿ ಯಂತೆ ನಿರ್ಲಿಪ್ತನಾಗಿ, ಕೇವಲ ಕರ್ತವ್ಯ ಭಾವದಿಂದ ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಕೊನೆಯಲ್ಲಿ ಇಬ್ಬರೂ ಒಟ್ಟಿಗೆ ಪರಮಮುಕ್ತಿಯನ್ನು ಪಡೆದರು. ಚೂಡಾಲೆ ಮತ್ತು ಶಿಖಿಧ್ವಜನ ಈ ಕಥೆಯು, ಮೋಕ್ಷವನ್ನು ಪಡೆಯಲು ಲೋಕತ್ಯಾಗವೇ ಏಕೈಕ ಮಾರ್ಗ ಎಂಬ ತಪ್ಪು ಕಲ್ಪನೆಯನ್ನು ಸಂಪೂರ್ಣವಾಗಿ ಭಗ್ನಗೊಳಿಸುತ್ತದೆ. ಚೂಡಾಲೆ ಒಬ್ಬ ರಾಣಿ. ಅವಳು ಆಭರಣಗಳನ್ನು ಧರಿಸುತ್ತಾಳೆ.
ಒಂದು ರಾಜ್ಯವನ್ನು ಆಳುತ್ತಾಳೆ. ಅವಳಿಗೆ ಪತಿಯಿದ್ದಾನೆ. ಆದರೂ ಅವಳು ಸಂಪೂರ್ಣ ಮುಕ್ತಳು. ಅಂದರೆ ಅವಳು ‘ಜೀವನ್ಮುಕ್ತೆ. ಮುಕ್ತಿಯನ್ನು ಪಡೆಯಲು ಅವಳು ಗುಹೆಗೆ ಓಡಿಹೋಗಬೇಕಾಗಿಲ್ಲ. ಏಕೆಂದರೆ ಅವಳ ಪಾಲಿಗೆ ನಿಜವಾದ ಗುಹೆ ಹೊರಗೆಲ್ಲೋ ಇರುವುದಲ್ಲ; ಅದು ಅವಳ ಅಂತರಂಗ ದಲ್ಲಿದೆ. ಅವಳ ಹೃದಯಗುಹೆಯೇ ಅವಳ ಆಶ್ರಯ. ಆತ್ಮವೇ ಅವಳ ಗುಹೆ.
ಶಿಖಿಧ್ವಜನು ಒಬ್ಬ ರಾಜ. ಆದರೆ ಅವನು ಲೋಕತ್ಯಾಗವೇ ಮೋಕ್ಷದ ಮಾರ್ಗ ಎಂದು ಭಾವಿಸು ತ್ತಾನೆ. ಆದ್ದರಿಂದ ರಾಜ್ಯವನ್ನು ತೊರೆದು ಅರಣ್ಯಕ್ಕೆ ಹೋಗುತ್ತಾನೆ. ಕಠಿನ ತಪಸ್ಸು ಮಾಡುತ್ತಾನೆ. ತನ್ನ ದೇಹವನ್ನು ದಂಡಿಸುತ್ತಾನೆ. ಆದರೂ ಅವನಿಗೆ ಮುಕ್ತಿ ದೊರೆಯುವುದಿಲ್ಲ. ಏಕೆಂದರೆ ಅವನಲ್ಲಿ ಲೋಕಾಸಕ್ತಿ ಇಂದ್ರಿಯವಾಸನೆಗಳು ಇನ್ನೂ ಉಳಿದಿರುತ್ತವೆ. ಅವನು ತನ್ನ ಪತ್ನಿಯ ಮೇಲೂ ಆಸಕ್ತಿ ಹೊಂದಿದ್ದಾನೆ. ತಾನು ಒಬ್ಬ ಸಂನ್ಯಾಸಿ ಎಂಬ ಕಲ್ಪನೆಯ ಮೇಲೂ ಆಸಕ್ತಿ ಹೊಂದಿದ್ದಾನೆ. ತನ್ನ ತಪಸ್ಸು, ಆಚರಣೆಗಳು ಮತ್ತು ಸಾಧನೆಗಳ ಮೇಲೂ ಅವನು ಅಂಟಿಕೊಂಡಿ ದ್ದಾನೆ. ಆಗ ಚೂಡಾಲೆಯೇ ಅವನ ಗುರುವಾಗುತ್ತಾಳೆ. ಅವಳು ಅವನಿಗೆ ಒಂದು ಮಹತ್ತರವಾದ ಸತ್ಯವನ್ನು ಬೋಧಿಸುತ್ತಾಳೆ.
ಸಂನ್ಯಾಸ ಎಂದರೆ ಲೋಕವನ್ನು ತೊರೆಯುವುದಲ್ಲ; ಲೋಕದ ಮೇಲಿರುವ ಆಸಕ್ತಿ ಮತ್ತು ಅಹಂಕಾರವನ್ನು ತೊರೆಯುವುದು. ಅವಳು ಮತ್ತೊಂದು ಸತ್ಯವನ್ನೂ ತಿಳಿಸುತ್ತಾಳೆ. ನಿಜವಾದ ಅರಣ್ಯ ಹೊರಗಿಲ್ಲ; ಅದು ನಮ್ಮ ಅಂತರಂಗದಲ್ಲಿದೆ. ಕೊನೆಗೆ, ಅವಳು ಅವನಿಗೆ, “ನೀನು ಹುಡುಕುತ್ತಿರುವ ಮುಕ್ತಿ ಈಗಾಗಲೇ ನಿನ್ನೊಳಗೇ ಇದೆ.
ನೀನು ಮೂಲತಃ ಸದಾ ಮುಕ್ತನೇ" ಎಂಬ ಆತ್ಮಜ್ಞಾನದ ಸಂದೇಶವನ್ನು ನೀಡುತ್ತಾಳೆ. ಹೀಗೆ ಗುರು ಯಾವುದೇ ರೂಪದಲ್ಲಿ ಬರಬಹುದು. ಜ್ಞಾನಕ್ಕೆ ಲಿಂಗ, ವಯಸ್ಸು ಅಥವಾ ಸ್ಥಾನಮಾನ ಅಡ್ಡಿಯಾಗುವುದಿಲ್ಲ. ಸಂಸಾರದಲ್ಲಿದ್ದು ಕರ್ತವ್ಯಗಳನ್ನು ನಿರ್ವಹಿಸುತ್ತ ಆತ್ಮಸಾಕ್ಷಾತ್ಕಾರ ಹೊಂದಬಹುದು. ಈ ಹಿನ್ನೆಲೆಯಲ್ಲೇ ಈ ಕಥೆಯನ್ನು ನಾವು ಅರ್ಥೈಸಬೇಕು. ಇದನ್ನು ವಸಿಷ್ಠರು ಶ್ರೀರಾಮನಿಗಷ್ಟೇ ಅಲ್ಲ, ನಮಗೆಲ್ಲರಿಗೂ ಹೇಳಿದ್ದು ಎಂದುಕೊಳ್ಳಬೇಕು.