Srivathsa Joshi Column: ಹೂವಾಡಗಿತ್ತಿಯ ಬಯಕೆಯನ್ನು ಕಾಮವಿಲ್ಲದೆ ತೀರಿಸಿದನು !
ತರುಣಿ ಒಡ್ಡಿದ ಸಮಸ್ಯೆಯಿಂದ ತರುಣನು ಪಾರಾದ ಒಂದು ವಿನೋದದ ಕತೆ. ಉಳಿದ ಯಾವ ವಿಶೇಷ ವೂ ಇದರಲ್ಲಿಲ್ಲ. ಆದರೆ ತರುಣ ಕೊಟ್ಟ ಉತ್ತರ ಮನಸ್ಸನ್ನು ಕಾಡುತ್ತದೆ. ಯೋಚಿಸಲು ಹಚ್ಚುತ್ತದೆ. ಅವನು ಹೇಳಿದ ವಾಕ್ಯವನ್ನು ಬರೆದು ತೆಗೆದರೆ ಅದರಿಂದ ಹೊರಡುವುದು ಒಂದೇ ಅರ್ಥ. ಹೂವು ಮಾರುವ ತರುಣಿ ಮತ್ತು ತನ್ನ ಹೆಂಡತಿ, ತಾನು ಮತ್ತು ಅವಳ ಗಂಡ, ಕೂಡಿ ಕೊಂಡು ಜಾತ್ರೆಗೆ ಹೋಗೋಣವೆಂದು ಹೇಳಿದ.
-
ತಿಳಿರುತೋರಣ
ಅಶೋಕ ಪೂಜಾರ ಎಂಬುವ ಓದುಗಮಿತ್ರರು ಮೊನ್ನೆ ವಾಟ್ಸಾಪ್‌ನಲ್ಲಿ ನನಗೊಂದು ಪೇಪರ್ ಕ್ಲಿಪ್ಪಿಂಗ್ ಕಳಿಸಿದ್ದರು. ಕನ್ನಡದ ಯಾವುದೋ ದಿನಪತ್ರಿಕೆಯ ದೋ ನಿಯತಕಾಲಿಕೆಯದೋ ತುಂಬ ಹಳೆಯ ಸಂಚಿಕೆಯೊಂ ದರಿಂದ ಅದನ್ನವರು ಸಂಗ್ರಹಿಸಿಟ್ಟಿದ್ದಂತೆ. ಯಾವ ಪತ್ರಿಕೆ, ಯಾವಾ ಗಿನ ಸಂಚಿಕೆ ಎಂದು ಅವರಿಗೆ ನೆನಪಿಲ್ಲ. ಬರೆದವರಾರೆಂಬ ಮಾಹಿ ತಿಯೂ ಅದರಲ್ಲಿರಲಿಲ್ಲ. ಅಂತಹ ಸ್ವಾರಸ್ಯಕರ ಕುತೂಹಲಕಾರಿ ಸಂಗತಿಗಳಿರುವ ಪುಟಭಾಗಗಳನ್ನು ಕತ್ತರಿಸಿ ಒಂದು ಲಾಂಗ್ ಬುಕ್ ನಲ್ಲಿ ಅಂಟಿಸಿಡುವುದು ಅವರ ಹವ್ಯಾಸವಂತೆ.
ನಿದರ್ಶನವೆಂಬಂತೆ ಅವರ ಆ ಲಾಂಗ್‌ಬುಕ್‌ನಿಂದ ಇಡೀ ಪುಟವೊಂದರ ಚಿತ್ರವನ್ನೂ ಆಮೇಲೆ ಕಳುಹಿಸಿದ್ದರು. ಕನ್ನಡದ ಬೇರೆಬೇರೆ ಪತ್ರಿಕೆಗಳಲ್ಲಿ ಈಹಿಂದೆ ಪ್ರಕಟವಾದ ಸುದ್ದಿಸ್ವಾರಸ್ಯಗಳು, ಚಿಕ್ಕಚಿಕ್ಕ ನೀತಿಕತೆಗಳು, ತಿಳಿವಿನ ಹೊಳಹುಗಳು ಇತ್ಯಾದಿಯೆಲ್ಲ ಅದರಲ್ಲಿದ್ದವು. ಸರಿ, ಅವರು ನನ್ನ ಗಮನಕ್ಕೆ ತರುವುದಕ್ಕಾಗಿ ಕಳಿಸಿದ ಕ್ಲಿಪ್ಪಿಂಗ್‌ನಲ್ಲಿ ಏನಿತ್ತು? ಯಥಾವತ್ತಾಗಿ ಬರೆದು ತಿಳಿಸುವು ದಾದರೆ ಈ ಕೆಳಗಿನ ಎರಡು ಪ್ಯಾರಾಗ್ರಾಫ್ʼಗಳು.
“ಒಬ್ಬ ತರುಣ ನೆರೆಯೂರಿನಲ್ಲಿಯ ಒಂದು ಜಾತ್ರೆಯಲ್ಲಿ ಹೂವು ಮಾರಬೇಕೆಂದು ನಿರ್ಧರಿಸಿದ. ಅವನಿಗೆ ಕೆಲಸವಿರಲಿಲ್ಲ. ಆದ್ದರಿಂದ ಆ ಕೆಲಸವನ್ನಾದರೂ ಮಾಡೋಣವೆಂದು ಅವನ ವಿಚಾರ. ತನ್ನೂರಿನ ಹೂವಿನ ತೋಟಕ್ಕೆ ಹೂವು ಕೊಂಡುಕೊಳ್ಳಲು ಹೋದ. ತೋಟದ ಒಡತಿಯು ಒಬ್ಬ ತರುಣಿ. ಅವಳು ತನ್ನ ಗಂಡನ ಜೊತೆಗೆ ಬುಟ್ಟಿ ತುಂಬ ಹೂವಿಟ್ಟುಕೊಂಡು ಕುಳಿತಿದ್ದಳು. ಈ ತರುಣ ಹೂ ಬೇಕೆಂದು ಕೇಳಿದ. ಅವಳೊಂದು ಕರಾರು ಹಾಕಿದಳು- ‘ನೀನು ನನ್ನನ್ನು ಹೆಂಡತಿಯೆಂದು ಕರೆದರೆ ಹೂವು ಹಾಗೆಯೇ ತೆಗೆದುಕೊಂಡು ಹೋಗಬಹುದು.’ ತರುಣ ವಿಚಾರ ಮಾಡಿದ.
ಹೂವು ಅಗತ್ಯವಾಗಿ ಬೇಕಾಗಿದ್ದವು. ಹೂವಾಡಗಿತ್ತಿಯನ್ನು ತನ್ನ ಹೆಂಡತಿಯೆಂದು ಕರೆಯಲು ಅವನಿಗೆ ಆಕ್ಷೇಪವಿರಲಿಲ್ಲ. ಸಂಕೋಚವೂ ಇರಲಿಲ್ಲ. ಆದರೆ ಅವಳ ಜೊತೆಗೆ ಗಂಡನೂ ಇದ್ದ. ಸ್ವಲ್ಪ ಹೊತ್ತು ವಿಚಾರ ಮಾಡಿ ಹೇಳಿದನಂತೆ ‘ನೀನು ನನ್ನ ಹೆಂಡತಿ ನಾನು ನಿನ್ನ ಗಂಡ ಎಲ್ಲರೂ ಕೂಡಿಕೊಂಡು ಜಾತ್ರೆಗೆ ಹೋಗೋಣ ಬಾ.’ ತರುಣಿಗೆ ಸಂತೋಷವಾಗಿ ಬುಟ್ಟಿ ತುಂಬ ಹೂ ಕೊಟ್ಟಳು. ಈ ಕತೆಯ ವಾಸ್ತವತೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಮಾತಿನ ಜಾಣ್ಮೆಯನ್ನು ಉದಾಹರಿಸುವ ಕತೆ ಇದು.
ಇದನ್ನೂ ಓದಿ: Srivathsa Joshi Column: ಗದ್ದೆಯ ತೋಟವೂ ಹೀಗೊಂದು ಉದ್ಯಾನವಿಹಾರವೂ
ತರುಣಿ ಒಡ್ಡಿದ ಸಮಸ್ಯೆಯಿಂದ ತರುಣನು ಪಾರಾದ ಒಂದು ವಿನೋದದ ಕತೆ. ಉಳಿದ ಯಾವ ವಿಶೇಷವೂ ಇದರಲ್ಲಿಲ್ಲ. ಆದರೆ ತರುಣ ಕೊಟ್ಟ ಉತ್ತರ ಮನಸ್ಸನ್ನು ಕಾಡುತ್ತದೆ. ಯೋಚಿಸಲು ಹಚ್ಚುತ್ತದೆ. ಅವನು ಹೇಳಿದ ವಾಕ್ಯವನ್ನು ಬರೆದು ತೆಗೆದರೆ ಅದರಿಂದ ಹೊರಡುವುದು ಒಂದೇ ಅರ್ಥ. ಹೂವು ಮಾರುವ ತರುಣಿ ಮತ್ತು ತನ್ನ ಹೆಂಡತಿ, ತಾನು ಮತ್ತು ಅವಳ ಗಂಡ, ಕೂಡಿ ಕೊಂಡು ಜಾತ್ರೆಗೆ ಹೋಗೋಣವೆಂದು ಹೇಳಿದ. ಆದರೆ ಅವನು ಹೇಳುವ ರೀತಿ, ಮಾತಾಡುವಾಗ ಹುಟ್ಟುವ ಕಾಕು ವ್ಯಂಜನ, ದನಿಯ ಏರಿಳಿತ ಬರಹದಲ್ಲಿ ಬರುವದೇ ಇಲ್ಲ.
‘ನೀನು ನನ್ನ ಹೆಂಡತಿ’ ‘ನಾನು ನಿನ್ನ ಗಂಡ’ ಈ ಎರಡು ವಾಕ್ಯಖಂಡಗಳು ನಡುವಿನ ವಿರಾಮ ದಿಂದಾಗಿ ಬೇರೆ ಅರ್ಥವನ್ನು ಕೊಡುತ್ತವೆ. ಕನ್ನಡದ ವಾಕ್ಯ ರಚನೆಯಲ್ಲಿ ಕ್ರಿಯಾಪದ ಕೊನೆಯಲ್ಲಿ ಬರುವದರಿಂದ, ವಾಕ್ಯದ ಅರ್ಥ ಕ್ರಿಯಾಪದದಲ್ಲೇ ಸೋಟವಾಗಬೇಕು. ಬರೆದ ವಾಕ್ಯವನ್ನೋ ದುವಾಗ ನಮ್ಮ ಕಣ್ಣುಗಳು ಕ್ರಿಯಾಪದವನ್ನೇ ಹುಡುಕುತ್ತಿರುತ್ತವೆ. ಅದು ಸಿಕ್ಕ ಮೇಲೆ ಇಡಿಯ ವಾಕ್ಯದ ಅರ್ಥ ಸಜೀವವಾಗಿ ನಮಗೆ ಕಾಣಿಸುತ್ತದೆ."
ಪೇಪರ್‌ಕ್ಲಿಪ್ಪಿಂಗ್‌ನ ಜೊತೆಗೇ ಅಶೋಕ ಪೂಜಾರರಿಂದ ಒಂದು ಸವಿನಯ ಕೋರಿಕೆಯೂ ಇತ್ತು, “ಸರ್, ಈ ಮೇಲಿನ ಒಗಟನ್ನು ಆಧರಿಸಿ ಅದರ ಸುತ್ತಮುತ್ತಲೇ ಒಂದು ಲೇಖನ ಬರೆಯು ವಿರಾ?" ಎಂದು. ಮುಖ್ಯವಾಗಿ ಅದೊಂದು ಭಾಷಾಚಮತ್ಕಾರದ ಒಗಟು ಹಾಗು ವಿಶ್ಲೇಷಣೆ ಆದ್ದರಿಂದ, ಮತ್ತು ಅಂತಹ ಸರಕು ನನ್ನ ನೆಚ್ಚಿನದೂ ಹೌದಾದ್ದರಿಂದ, ಖಂಡಿತ ಬರೆಯುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಅಶೋಕ ಪೂಜಾರರು ನನಗೆ ಅಂಕಣಗಳ ಓದುಗರಾಗಿ ಇತ್ತೀಚೆಗಷ್ಟೇ ಪರಿಚಯವಾದವರು.
ಬೆಂಗಳೂರಲ್ಲಿರುತ್ತಾರೆ ಎನ್ನುವುದನ್ನು ಬಿಟ್ಟರೆ ಅವರ ವೃತ್ತಿ-ಪ್ರವೃತ್ತಿ ಅಭಿರುಚಿ ಇತ್ಯಾದಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಅವರ ಆ ಹವ್ಯಾಸದಿಂದಾಗಿ, ಅದರಲ್ಲೂ ಭಾಷಾ ಚಮತ್ಕಾರ ಗಳನ್ನು ಗಮನಿಸುವವರು ಅಂದಮೇಲೆ ನಮ್ಮಿಬ್ಬರ ತರಂಗಾಂತರ ತಾಳೆ ಯಾಗುತ್ತದೆಂದೇ ಲೆಕ್ಕ; ಕಾಲಕ್ಷೇಪಕ್ಕೆ ಕಾವ್ಯ-ಶಾಸ್ತ್ರ-ವಿನೋದ ಪಕ್ಕಾ!
ಈಗ, ಹೂವಾಡಗಿತ್ತಿ ಮತ್ತು ತರುಣನ ‘ಕಟ್ಟುಕಥೆ’ಯ ವಿಚಾರಕ್ಕೆ ಬರೋಣ. ಹೂವಾಡಗಿತ್ತಿಯ ಷರತ್ತು (ಬಯಕೆ ಅಂತಾದ್ರೂ ಅನ್ನಿ, ಪ್ರಲೋಭನೆ ಅಂತಾದ್ರೂ ಅನ್ನಿ) ಇದ್ದದ್ದು- ಆ ತರುಣನಿಂದ ಹೆಂಡತಿ ಅಂತ ಕರೆಸಿಕೊಳ್ಳಬೇಕು ಎಂದು. ಆ ತರುಣನಾದರೋ “ನೀನು ನನ್ನ ಹೆಂಡತಿ" ಎಂದು ಹೇಳಿಯೂ ನಿಜಾರ್ಥ ಬಾರದಂತೆ ನೋಡಿಕೊಂಡನು! ಧ್ವನಿಯ ಏರಿಳಿತ, ಪದಪುಂಜಗಳ ನಡುವೆ ಸಮಯಾವಕಾಶವನ್ನೂ ಬಳಸಿಕೊಂಡು ಆತ ಹೇಳಿದ್ದು: “ನೀನು, ನನ್ನ ಹೆಂಡತಿ, ನಾನು, ನಿನ್ನ ಗಂಡ ಎಲ್ಲರೂ ಕೂಡಿಕೊಂಡು ಜಾತ್ರೆಗೆ ಹೋಗೋಣ ಬಾ!" ಎಂದು.
ಆತನ ಮಾತಿನಲ್ಲಿದ್ದ ಧ್ವನಿಯ ಏರಿಳಿತ ಮತ್ತು ಪದಪುಂಜಗಳ ನಡುವಿನ ಸಮಯಾವಕಾಶಗಳೆಲ್ಲ ಬರಹರೂಪದಲ್ಲಿಯೂ ಗೊತ್ತಾಗಬೇಕಾದರೆ ಅಲ್ಪವಿರಾಮದಂತಹ ಲೇಖನ ಚಿಹ್ನೆಗಳು ಬೇಕು. “ನೀನು ನನ್ನ ಹೆಂಡತಿ ನಾನು ನಿನ್ನ ಗಂಡ ಎಲ್ಲರೂ ಕೂಡಿಕೊಂಡು ಜಾತ್ರೆಗೆ ಹೋಗೋಣ ಬಾ" ಎಂದು ಯಾವುದೇ ಲೇಖನ ಚಿಹ್ನೆಗಳನ್ನು ಬಳಸದೆಯೇ ಬರೆದರೆ, ಒಂದೇ ಉಸಿರಲ್ಲಿ ಪಟಪಟನೆ ಬಾಯಿಪಾಠ ಒಪ್ಪಿಸಿದಂತೆ ಆಗುತ್ತದೆ ಅಷ್ಟೇ. ಲೇಖನ ಚಿಹ್ನೆಗಳ ಮಹತ್ತ್ವಕ್ಕೆ ಇದೊಂದು ಒಳ್ಳೆಯ ಉದಾಹರಣೆ!
ಲೇಖನ ಚಿಹ್ನೆಗಳೇ ಇಲ್ಲದ ಬರಹವನ್ನು ಊಹಿಸುವುದೂ ಕಷ್ಟ. ಇಲ್ಲಿ ಅಮೆರಿಕದಲ್ಲಿ ಶಾಲಾ ಮಕ್ಕಳಿಗೆ ಪಂಕ್ಚುವೇಶನ್ ಸಿಂಬಲ್ಸ್ ಮಹತ್ತ್ವ ತಿಳಿಸಲು Punctuation takes a vacation ಎಂಬ ಒಂದು ಸಚಿತ್ರ ಕಥೆಪುಸ್ತಕ ಓದಲು ಸಲಹಿಸುತ್ತಾರೆ. ರಾಬಿನ್ ಪಲ್ವರ್ ಬರೆದ ಆ ಪುಸ್ತಕ ತುಂಬಾ ಚೆನ್ನಾಗಿದೆ. ಮಿಸ್ಟರ್ ರೈಟ್ ಎಂಬ ಹೆಸರಿನ ಶಿಕ್ಷಕ ಮೂರನೆಯ ತರಗತಿಯ ಮಕ್ಕಳಿಗೆ ವಿರಾಮ ಚಿಹ್ನೆಗಳನ್ನು ಕಲಿಸುತ್ತಿರುತ್ತಾರೆ. ದಿನಾ ಬೋರ್ಡ್ ಮೇಲೆ, ಮಕ್ಕಳ ಹೋಮ್ ವರ್ಕ್ ಪುಸ್ತಕದಲ್ಲಿ ಅವು ಪ್ರತ್ಯಕ್ಷವಾಗುತ್ತವೆ.
ಕೆಲವು ತಪ್ಪಾಗಿ, ಕೆಲವು ಸರಿಯಾಗಿ. ಎರೇಸರ್‌ನಿಂದ ಅಳಿಸಲ್ಪಡುವವು ಕೆಲವಾದರೆ ಉಪಾಧ್ಯಾ ಯರ ಕೆಂಪುಶಾಯಿಗೆ ಗುರಿಯಾಗುವವು ಇನ್ನು ಕೆಲವು. ಒಂದುದಿನ ಮಿಸ್ಟರ್ ರೈಟ್ ಹೇಳುತ್ತಾರೆ- “ವಿರಾಮ ಚಿಹ್ನೆಗಳಿಗೆ ಒಮ್ಮೆ ರಜೆ ಕೊಡೋಣ!" ಹಾಗೆಂದದ್ದೇ ತಡ, ವಿರಾಮ ಚಿಹ್ನೆಗಳೆಲ್ಲ ತರಗತಿ ಯಿಂದ ಹೊರಟೇ ಬಿಡುತ್ತವೆ. ದೂರದ ದ್ವೀಪವೊಂದಕ್ಕೆ ಪ್ರವಾಸ ಹೋಗುತ್ತವೆ.
ತರಗತಿಯಲ್ಲಿ ಅವಿಲ್ಲದೆ ಬಿಕೋ ಅನಿಸಿ ಮಕ್ಕಳಿಗೂ ಬೇಸರವಾಗುತ್ತದೆ. ಬರೆದಿದ್ದರಲ್ಲಿ ವಿರಾಮ ಚಿಹ್ನೆಗಳಿಲ್ಲದೆ ಏನೂ ಅರ್ಥವೇ ಬರುವು ದಿಲ್ಲ. ಪ್ರವಾಸಿದ್ವೀಪದಿಂದ ವಿರಾಮ ಚಿಹ್ನೆಗಳು ಮಕ್ಕಳಿಗೆ ಪೋಸ್ಟ್ ಕಾರ್ಡ್ಸ್ ಕಳಿಸುತ್ತವೆ. ಒಂದೊಂದು ಕಾರ್ಡ್‌ನಲ್ಲೂ ಬರೆದಿರು ವುದನ್ನು ಓದಿ ಅದು ಯಾವ ಚಿಹ್ನೆ ಕಳಿಸಿದ ಕಾರ್ಡ್ ಇರಬಹುದು ಎಂದು ಮಕ್ಕಳು ಊಹಿಸಬೇಕು. ವಿರಾಮ ಚಿಹ್ನೆಗಳಿಲ್ಲದೆ ಬೋರಾ ಗುತ್ತಿದೆಯೆಂದು ಮಕ್ಕಳೂ ಓಲೆ ಬರೆಯು ತ್ತಾರೆ. ಆದರೆ ವಿರಾಮ ಚಿಹ್ನೆ ಬಳಸುವಂತಿಲ್ಲ ವಲ್ಲ? ಪಕ್ಕದ ತರಗತಿ ಯಿಂದ ಎರವಲು ಪಡೆಯುತ್ತಾರೆ. ಕೊನೆಗೂ ಪ್ರವಾಸದಿಂದ ಚಿಹ್ನೆಗಳು ಮರಳಿದ ಮೇಲೆ ಮಿಸ್ಟರ್ ರೈಟ್ ಕ್ಲಾಸ್‌ನಲ್ಲಿ ಎಲ್ಲವೂ ಆಲ್‌ರೈಟ್ ಆಗುತ್ತದೆ.
ನಾನು ಬರವಣಿಗೆಯಲ್ಲಿ ವಿರಾಮ ಚಿಹ್ನೆಗಳನ್ನು ಧಾರಾಳವಾಗಿ ಬಳಸುತ್ತೇನೆ. ಕೆಲವೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚು ಎನ್ನುವಷ್ಟು. ಚಿತ್ರಾನ್ನದಲ್ಲಿ ಅನ್ನಕ್ಕಿಂತ ಒಗ್ಗರಣೆ ಸಾಮಗ್ರಿಯೇ ಹೆಚ್ಚು ಇದ್ದಂತೆ ಎಂದು ನಾನದನ್ನು ಹೋಲಿಸುವುದೂ ಇದೆ. ಬರೀ ಅಲ್ಪವಿರಾಮ, ಆಶ್ಚರ್ಯಸೂಚಕ, ಪ್ರಶ್ನಾರ್ಥಕ ಚಿಹ್ನೆಗಳಷ್ಟೇ ನನಗೆ ಸಾಕಾಗು ವುದಿಲ್ಲ.
ಅರ್ಧವಿರಾಮ (semicolon), ವಿವರಣ ವಿರಾಮ ( colon ), ಉದ್ಧರಣ ( double quotes), ವಾಕ್ಯ ವೇಷ್ಟನ ( single quotes), ಆವರಣ ( brackets ), ಓರೆಗೆರೆ (forward slash ), ಲಂಬಗೆರೆ ( pipe ), ಕೂಡುಗೆರೆ ( hyphen) ಮುಂತಾದುವೆಲ್ಲವೂ ನನ್ನ ಬರವಣಿಗೆಯಲ್ಲಿ ಅಲ್ಲಲ್ಲಿ ಇಣುಕುತ್ತಿ ರುತ್ತವೆ. ತದ್ವಿರುದ್ಧವಾಗಿ, ಕೆಲವೊಮ್ಮೆ ಪೂರ್ಣವಿರಾಮವೊಂದನ್ನು ಹೊರತುಪಡಿಸಿ ಬೇರಾವ ಚಿಹ್ನೆ ಯನ್ನೂ ಬಳಸದೆಯೇ ಇಡೀ ಲೇಖನ ಬರೆದದ್ದೂ ಇದೆ! “ಯಾರಿಟ್ಟರೀ ಚುಕ್ಕಿ ಯಾಕಿಟ್ಟರೀ ಚುಕ್ಕಿ..." ಶೀರ್ಷಿಕೆಯ ಅಂಕಣಬರಹ ಚುಕ್ಕಿಯ ಬಗ್ಗೆಯೇ ಇದ್ದುದರಿಂದ ಅದರಲ್ಲಿ ಚುಕ್ಕಿ (ಪೂರ್ಣ ವಿರಾಮ) ಹೊರತಾಗಿ ಯಾವುದೇ ಚಿಹ್ನೆ ಬಳಸಿರಲಿಲ್ಲ.
ಹಾಗೆಯೇ “ತಿನ್ನುವುದೆಂದರೆ ತಿನ್ನುವುದೊಂದೇ ಅಲ್ಲ" ಎಂಬ ಶೀರ್ಷಿಕೆಯ ಬರಹವೊಂದರಲ್ಲಿ ವಿರಾಮ ಚಿಹ್ನೆಗಳನ್ನೆಲ್ಲ ಗುಳುಂ ಸ್ವಾಹಾ ಮಾಡಿದ್ದೆ. ಪೂರ್ಣವಿರಾಮವನ್ನು ಮಾತ್ರ ಉಳಿಸಿ ಕೊಂಡದ್ದು, ಕರ್ಫ್ಯೂ/ಬಂದ್ ಸಂದರ್ಭದಲ್ಲಿ ಹಾಲು-ಪತ್ರಿಕೆ ಮುಂತಾಗಿ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ವಿನಾಯತಿ ಇರುವಂತೆ. ಆದರೆ ಹಾಗೆ ಬರೆಯುವುದು ಕಷ್ಟವಿದೆ. ವೈವಿಧ್ಯ ಮತ್ತು ಚಮತ್ಕಾರ ವಿರಲೆಂದು ಆಗೊಮ್ಮೆ ಈಗೊಮ್ಮೆ ಅಂತಹ ಸರ್ಕಸ್‌ಗಳು. ಸ್ವಾರಸ್ಯವೆಂದರೆ, ಪ್ರಾಚೀನ ಕಾಲದಲ್ಲಿ ಭಾರತೀಯ ಭಾಷೆಗಳಲ್ಲಿ ಈಗಿನಂತೆ ವಿವಿಧ ವಿರಾಮ ಚಿಹ್ನೆಗಳ ಬಳಕೆಯೇ ಇರಲಿಲ್ಲ!
ಒಂದು ಲಂಬರೇಖೆ ಮತ್ತು ಎರಡು ಲಂಬರೇಖೆಗಳು ಮಾತ್ರ ಆಗಿನ ಕಾಲದಲ್ಲಿ ವಿರಾಮ ಚಿಹ್ನೆಗಳು. ಸಂಸ್ಕೃತದ ಪುರಾಣಗ್ರಂಥಗಳಲ್ಲಿ ಮತ್ತು ಬಹುಮಟ್ಟಿಗೆ ಈಗಲೂ, ಇದು ನಮ್ಮ ಗಮನಕ್ಕೆ ಬರುತ್ತದೆ. ಕನ್ನಡದಲ್ಲೂ ಶಿಲಾಶಾಸನಗಳಲ್ಲಿ, ತಾಳೆಗರಿಗಳ ಮೇಲೆ ಬರೆದ ಕಾವ್ಯ, ವಚನ, ತ್ರಿಪದಿ ಮುಂತಾದು ವಲ್ಲೂ ಲಂಬರೇಖೆಗಳನ್ನು ಬಿಟ್ಟರೆ ಬೇರಾವ ಚಿಹ್ನೆಗಳೂ ಕಾಣಲಿಕ್ಕೆ ಸಿಗುವುದಿಲ್ಲ. ಟಿಪ್ಪು ಸುಲ್ತಾನನ ಕೈಬರಹದ್ದೆನ್ನಲಾದ (ಅಥವಾ ಆತನ ಕೈಕೆಳಗಿನವರಾರೋ ಬರೆದುಕೊಟ್ಟ) ಒಂದು ಕನ್ನಡ ಪತ್ರ, ಹಾಗೆಯೇ ಮೈಸೂರಿನ ರಾಜಮನೆತನದವರೊಬ್ಬರ ಶುಭವಿವಾಹ ಕರೆಯೋಲೆ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರದೊಂದು ಹಸ್ತಲಿಖಿತ ಪತ್ರ ಮುಂತಾದುವು ಅಂತರಜಾಲ ದಲ್ಲಿ ಲಭ್ಯವಿವೆ. ಅವುಗಳಲ್ಲಿ ಲಂಬಗೆರೆಗಳೂ ಅಸ್ಪಷ್ಟವಾಗಿವೆ, ಅಥವಾ ಇಲ್ಲವೆಂದೇ ಹೇಳಬೇಕು.
ಹಾಗಾದರೆ ಈ ಅಲ್ಪವಿರಾಮ ಅರ್ಧವಿರಾಮ ಉದ್ಧರಣ ವಾಕ್ಯವೇಷ್ಟನ ಪ್ರಶ್ನಾರ್ಥಕ ಆಶ್ಚರ್ಯ ಸೂಚಕ ಗಳೆಲ್ಲ ಎಲ್ಲಿಂದ ಬಂದವು? ಇವೆಲ್ಲವೂ ನಮಗೆ ಇಂಗ್ಲಿಷ್‌ನಿಂದ ಬಂದ ಬಳುವಳಿ. ಇಂಗ್ಲಿಷ್‌ನಲ್ಲಿ ಪಂಕ್ಚುವೇಶನ್ ವಿಚಾರ ಬಂದಾಗೆಲ್ಲ ನೆನಪಾಗುವುದು "Eats, Shoots and Leaves''. ಲಿನ್ನೆ ಟ್ರಸ್ಸ್ ಎಂಬಾಕೆ ಬರೆದ ಪುಸ್ತಕ. ಒಂದು ಎನ್‌ಸೈಕ್ಲೊಪಿಡಿಯಾದಲ್ಲಿ ಪಾಂಡಾ ಪ್ರಾಣಿಯ ಚಿತ್ರದ ಪಕ್ಕ ವಿವರಣೆಯಲ್ಲಿ Eats shoots and leaves ಅಂತ ಇತ್ತು.
ಪಾಂಡಾ ಚಿಗುರೆಲೆಗಳನ್ನು ತಿನ್ನುತ್ತದೆ ಎಂದು ಅದರ ಅರ್ಥ. ಪಾಂಡಾ ಒಮ್ಮೆ ಒಂದು ರೆಸ್ಟೋ ರೆಂಟ್‌ಗೆ ಹೋಯಿತಂತೆ. ಬೇಕಾದಷ್ಟು ತಿಂದಾದ ಮೇಲೆ ಕೈಯಲ್ಲಿದ್ದ ಪಿಸ್ತೂಲಿನಿಂದ ಢಂ ಢಂ ಎಂದು ಗುಂಡು ಹಾರಿಸಿ, ದುಡ್ಡು ಕೂಡ ಕೊಡದೆ ಅಲ್ಲಿಂದ ಕಾಲ್ಕಿತ್ತಿತಂತೆ. ಯಾಕೆ ಏನಾಯಿತು ಎಂದು ತಬ್ಬಿಬ್ಬಾಗಿ ನೋಡುತ್ತಿದ್ದ ಜನರಿಗೆ ಪಾಂಡಾ ಹೇಳಿದ್ದು- ಎನ್ ಸೈಕ್ಲೊಪಿಡಿಯಾದಲ್ಲಿರುವ ವಿವರಣೆಯಂತೆಯೇ ಮಾಡಿದ್ದೇನೆ ಎಂದು. ಇದಕ್ಕೆಲ್ಲ ಕಾರಣ ಎನ್‌ಸೈಕ್ಲೊಪಿಡಿಯಾ ವಿವರಣೆ ಯಲ್ಲಿ ಮೊದಲ ಪದದ ನಂತರ ಯಾರೋ ಒಂದು ಅಲ್ಪವಿರಾಮ ಸೇರಿಸಿದ್ದರು. ಆಗ ಅರ್ಥ ಏನಾಯ್ತು? ಪಾಂಡಾ: ತಿನ್ನುತ್ತದೆ, ಗುಂಡು ಹಾರಿಸುತ್ತದೆ ಮತ್ತು ಹೊರನಡೆಯುತ್ತದೆ ಎಂದು!
ಈ ಒಂದು ಕಪೋಲಕಲ್ಪಿತ ಪ್ರಸಂಗವನ್ನಿಟ್ಟುಕೊಂಡು ಪುಸ್ತಕದ ತುಂಬ ತಮಾಷೆ ತುಂಬಿಸಿದ್ದಾಳೆ ಲಿನ್ನೆ ಟ್ರಸ್ಸ್. Greedy Apostrophe: A Cautionary Tale ಎಂಬ ಇನ್ನೊಂದು ಪುಸ್ತಕವಿದೆ, ಇಂಗ್ಲಿಷ್ ನಲ್ಲಿ ಸಾಕಷ್ಟು ದಾಂಧಲೆಯೆಬ್ಬಿಸುವ ಎಪೊಸ್ಟ್ರೊಫಿ ಚಿಹ್ನೆ ಬಗ್ಗೆ. ಅದೂ ತಮಾಷೆಯಾಗಿ ಇದೆ. No Dog’s allowed - ಒಂದು ಪಾಕ್ ನಲ್ಲಿ ಕಂಡುಬಂದ ಈ ಸೂಚನಾಫಲಕ, ಎಪೊಸ್ಟ್ರೊಫಿ ದಾಂಧಲೆಯ ಜಸ್ಟ್ ಒಂದು ಸ್ಯಾಂಪಲ್. ಪುಣ್ಯಕ್ಕೆ ಕನ್ನಡದಲ್ಲಿ ಎಪೊಸ್ಟ್ರೊಫಿ ಚಿಹ್ನೆಯ ಬಳಕೆ ಇಲ್ಲ.
ಅಲ್ಪವಿರಾಮದಿಂದ ಅರ್ಥವ್ಯತ್ಯಾಸವಾಗುವುದಕ್ಕೆ ಇಂಗ್ಲಿಷ್‌ನಲ್ಲಿ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. Let's eat, Grandma' ಎನ್ನುತ್ತದೆ ಮಗು. ಅಲ್ಲಿ ಅಲ್ಪವಿರಾಮ ತಿಂದು ಹಾಕಿದರೆ ಅಜ್ಜಿ ಯನ್ನೇ ತಿನ್ನಲು ಹೊರಟಂತೆ! ಕಾಲೇಜ್‌ನಲ್ಲಿ ಒಬ್ಬ ಪ್ರಾಧ್ಯಾಪಕರು ಒಮ್ಮೆ A woman without her man is nothing. ಎಂದು ವಿದ್ಯಾರ್ಥಿಗಳಿಂದ ಬರೆಯಿಸಿ ಅದಕ್ಕೆ ಸೂಕ್ತವಾಗಿ ಪಂಕ್ಚುವೇಶನ್ ಹಾಕುವಂತೆ ಹೇಳಿದರಂತೆ.
ಹುಡುಗರೆಲ್ಲ A woman, without her man, is nothing! ಎಂದು ಬರೆದಿದ್ದರೆ ಹುಡುಗಿಯರು A woman: without her, man is nothing! ಎಂದು ಬರೆದರು. ಬರ್ತ್‌ಡೇ ಅಥವಾ ಬೇರಾವುದೇ ಪಾರ್ಟಿಗಳಲ್ಲಿ ಕೇಕ್ ಮೇಲೆ ಬರೆದಿದ್ದರಲ್ಲಿ ಪಂಕ್ಚುವೇಶನ್ ಆಭಾಸಗಳಾಗುವುದಿದೆ.
ಲೇಡಿಸ್ ಹಾಸ್ಟೆಲ್‌ನಲ್ಲಿ ನಾಲ್ಕೈದು ಹುಡುಗಿಯರ ಬರ್ತ್‌ಡೇಯನ್ನು ಎಲ್ಲ ಒಟ್ಟಾಗಿ ಒಂದೇ ಕೇಕ್ ಮೂಲಕ ಸೆಲೆಬ್ರೇಟ್ ಮಾಡಿದರು. ಕೇಕ್ ಮೇಲೆ Happy Birthday ಎಂದು ಬರೆಸಿ ಕೆಳಗೆ (all girls) ಎಂದು ಇನ್ನೊಂದು ಸಾಲು. ಓಪನಿಂಗ್ ಕಂಸ ಇಂಗ್ಲಿಷ್ ಅಕ್ಷರ ಯಂತೆ ಕಾಣಿಸಿ ಆಭಾಸವಾಗಿತ್ತು! ಕಂಸದಿಂದಾದ ಆಭಾಸ ಇನ್ನೊಂದಿದೆ. ಶಾಲಾ ವಾರ್ಷಿಕೋತ್ಸವಕ್ಕೆ ನಾಟಕದಲ್ಲಿ ಕೌರವನ ಪಾತ್ರ ಇದ್ದ ಒಬ್ಬ ಹುಡುಗ ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ದ. ಡಯಲಾಗ್ಸ್ ಉರುಹೊಡೆದಿದ್ದ.
ನಾಟಕದ ದಿನ ಬಂದೇಬಿಡ್ತು. ತುಂಬ ಉತ್ಸಾಹದಿಂದಲೇ ಸ್ಟೇಜ್ ಮೇಲೆ ಬಂದ ಹುಡುಗ ಶುರು ಮಾಡಿದ. “ಕೌರವ ಕಂಸದಲ್ಲಿ ಮೀಸೆ ತಿರುವುತ್ತ ಹಹ್ಹಹ್ಹಾ...!" ಅಲ್ಲಿ ಆಗಿದ್ದೇನೆಂದರೆ ನಾಟಕ ನಿರ್ದೇಶಿಸಿದ್ದ ಮೇಷ್ಟ್ರು ಅವನ ಪಾತ್ರದ ಸಂಭಾಷಣೆಯನ್ನು- ಕೌರವ (ಮೀಸೆ ತಿರುವುತ್ತ): “ಹಹ್ಹಹ್ಹಾ...!" ಎಂದು ಬರೆಸಿದ್ದರು. ಹುಡುಗ ವಿರಾಮ ಚಿಹ್ನೆಗಳನ್ನು ಕಡೆಗಣಿಸಿ ಅಭ್ಯಾಸ ಮಾಡಿಕೊಂಡಿದ್ದ. ನಾಟಕದ ಪ್ರೇಕ್ಷಕರಿಗೆ, ಸ್ಟೇಜ್ ಮೇಲೆ ಬಂದವ ಕೌರವನೋ ಕಂಸನೋ ಅಂತ ಕನ್ ಫ್ಯೂಷನ್!
ಡೆನ್ಮಾರ್ಕ್ ದೇಶದ ವಿಕ್ಟರ್ ಬೋರ್ಜೆ ಎಂಬ ಕಾಮೆಡಿಯನ್ Phonetic punctuation ಅಂತೊಂದು ಐಟಂ ಪ್ರದರ್ಶಿಸುತ್ತಿದ್ದನಂತೆ. ಪ್ರತಿಯೊಂದು ವಿರಾಮ ಚಿಹ್ನೆಗೂ ಅವನ ಬಳಿ ಪ್ರತ್ಯೇಕವಾದ ಶಬ್ದಸಹಿತ ಹಾವಭಾವ ಇರುತ್ತಿತ್ತು. ಸ್ಟೇಜ್ ಮೇಲೆ ವಿಕ್ಟರ್ ಒಂದು ಪುಸ್ತಕ ತೆರೆದು ಅದರಲ್ಲಿನ ಪ್ಯಾರಾಗ್ರಾ- ಓದುತ್ತಿದ್ದ. ವಿರಾಮ ಚಿಹ್ನೆ ಬಂದಾಗೆಲ್ಲ ಅದಕ್ಕೆ ತಕ್ಕ ಧ್ವನಿ ಹೊರಡಿಸುತ್ತಿದ್ದ. ಪ್ರೇಕ್ಷಕರಿಗೆ ಹೊಟ್ಟೆಹುಣ್ಣಾಗುವಷ್ಟು ನಗು. ಇನ್ನೊಬ್ಬ, ಟಿಮೊತಿ ಡೆಕ್ಸ್‌ಟರ್ ಎಂಬುವವನಿದ್ದ. ಈತ ಅಮೆರಿಕದವನು, 18ನೆಯ ಶತಮಾನದಲ್ಲಿ ಬಾಳಿದವನು. ಶಾಲೆಗೆ ಹೋಗಿ ಓದುಬರಹ ಕಲಿತವ ನಲ್ಲ. ಇವನು A Pickle for the Knowing Ones ಎಂಬ ಆತ್ಮಚರಿತ್ರೆ ಬರೆದ. ಇಡೀ ಪುಸ್ತಕದಲ್ಲಿ ಒಂದೇ ಒಂದು ಪಂಕ್ಚುವೇಶನ್ ಮಾರ್ಕ್ ಉಪಯೋಗಿಸಲಿಲ್ಲ.
ಸ್ಪೆಲ್ಲಿಂಗ್‌ಗಳ ಬಗ್ಗೆಯಂತೂ ಕೇಳುವುದೇ ಬೇಡ. ಹಾಗಿದ್ದರೂ ಆ ಪುಸ್ತಕ ತುಂಬ ಜನಪ್ರಿಯ ವಾಯಿತು. ಎಂಟು ಮುದ್ರಣಗಳನ್ನು ಕಂಡಿತು. ಪುಸ್ತಕದ ಎರಡನೆಯ ಆವೃತ್ತಿಯಲ್ಲಿ ಡೆಕ್ಸ್‌ಟರ್ ಇನ್ನೊಂದು ಗಿಮಿಕ್ ಮಾಡಿದ. ಈಸಲ ವಿರಾಮ ಚಿಹ್ನೆಗಳನ್ನೆಲ್ಲ ಬಳಸಿದ. ಆದರೆ ಯಥಾಸ್ಥಾನ ದಲ್ಲಿ ಅಲ್ಲ. ಎಲ್ಲ ವಿರಾಮ ಚಿಹ್ನೆಗಳನ್ನು ಒಟ್ಟಿಗೆ ಒಂದು ಪುಟದಲ್ಲಿ ಮುದ್ರಿಸಿ ಅದನ್ನು ಪುಸ್ತಕದ ಅನುಬಂಧವಾಗಿ ಕೊಟ್ಟು ಜತೆಯಲ್ಲೇ ಓದುಗರಿಗೆ ಪುಟ್ಟ ಸಂದೇಶವನ್ನೂ ಮುದ್ರಿಸಿದ. ‘ಆಹಾರದ ಮೇಲೆ ಉಪ್ಪು ಕಾಳುಮೆಣಸಿನ ಪುಡಿ ಸಿಂಪಡಿಸಿಕೊಂಡಂತೆ ಬೇಕಾದಲ್ಲಿ ಸಿಂಪಡಿಸಿಕೊಳ್ಳಿ’ ಎಂದು ಬಿಟ್ಟ.
ಡೆಕ್ಸ್‌ಟರ್‌ನ ಕ್ರೇಜಿ ಪ್ರಯೋಗ ಜನರಿಗೆ ಇಷ್ಟವಾಯಿತು. ತಡೆಗುರುತುಗಳು ಎಂದರೇನೆಂದೇ ಗೊತ್ತಿರ ದಿದ್ದ ಕಾಲದ ಹೈರೊಗ್ಲಿ- ಬರವಣಿಗೆಯನ್ನು ಬಹುಶಃ ಅದು ನೆನಪಿಸಿರಬೇಕು. ಟಿಮೊತಿ ಡೆಕ್ಸ್‌ಟರ್‌ನ ಕ್ರೇಜಿ ಐಡಿಯಾ ಅದಾದರೆ, ಚೈನಾ ದೇಶದ ಹೂ-ವೆನ್-ಲಿಯಾಂಗ್ ಎಂಬ ಕಾದಂಬರಿಕಾರನ ಸಂಗತಿಯೂ ಸ್ವಾರಸ್ಯಕರವಾಗಿದೆ. ಹೂ ಒಂದು ಕಾದಂಬರಿ ಬರೆದಿದ್ದಾನಂತೆ. ಅದರಲ್ಲಿ ಒಂದೇ ಒಂದು ಅಕ್ಷರವಿಲ್ಲ. ಒಟ್ಟು ಹದಿನಾಲ್ಕು ವಿರಾಮ ಚಿಹ್ನೆಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೂ ಅದೊಂದು ಹೃದಯಸ್ಪರ್ಶಿ ಪ್ರೇಮಕಥೆ ಮತ್ತು ಅದರಲ್ಲಿ ದೊಡ್ಡದೊಡ್ಡ ಕಾದಂಬರಿಗಳಲ್ಲಿ ಇರುವಂತೆ ಕಥೆಯ ಥಿಕ್ ಪ್ಲಾಟ್ ಇದೆಯೆನ್ನುತ್ತಾನೆ ಹೂ.
ಹದಿನಾಲ್ಕು ಚಿಹ್ನೆಗಳಿಂದಷ್ಟೇ ರಚನೆಯಾದ ಈ ಕಾದಂಬರಿಯನ್ನು ಸರಿಯಾಗಿ ಡಿಕೋಡ್ ಮಾಡಿ ದವರಿಗೆ ಚಿಹ್ನೆಯೊಂದಕ್ಕೆ ಹತ್ತುಸಾವಿರದಂತೆ ಒಟ್ಟು ಒಂದುಲಕ್ಷ ನಲ್ವತ್ತು ಸಾವಿರ ಯುವಾನ್‌ಗಳ ಆಕರ್ಷಕ ಬಹುಮಾನವನ್ನೂ ಹೂ ಘೋಷಿಸಿದ್ದಾನಂತೆ. ಹೂ ವಿಲ್ ವಿನ್ ದ ಪ್ರೈಜ್? ಇ- ನೋವನ್ ವಿನ್ಸ್, ಹೂ ವಿಲ್ ಕೀಪ್ ದ ಪ್ರೈಜ್ ಹಿಮ್‌ಸೆಲ್. ಅಂದಹಾಗೆ ಈವತ್ತಿನ ಅಂಕಣದ ಆರಂಭದಲ್ಲಿ ಉಲ್ಲೇಖಗೊಂಡ ‘ಹೂ’ವಾಡಗಿತ್ತಿ ಇದೇ ಹೂ-ವೆನ್-ಲಿಯಾಂಗ್‌ನ ಅಪರಾವತಾರ ಇರಬಹುದು. ಆತ ಬರೀ ವಿರಾಮ ಚಿಹ್ನೆಗಳಿಂದಲೇ ಕಾದಂಬರಿ ಬರೆದರೆ ಈಕೆ ವಿರಾಮಚಿಹ್ನೆ ಗಳಿಲ್ಲದೆಯೇ (ಕಾಮ ಸಹ ಇಲ್ಲದೆಯೇ) ತರುಣನೊಬ್ಬ ನಿವೇದಿಸಿದ ಪ್ರೇಮಕಾದಂಬರಿ ಕೇಳಿಸಿಕೊಂಡು ಸಂತೃಪ್ತಳಾದಳು!