Vishweshwar Bhat Column: ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿ ನಗರ
ಲೈಬೀರಿಯಾ ವಸಾಹತಿನ ಸ್ಥಾಪನೆಗೆ ಮತ್ತು ಕಪ್ಪು ವರ್ಣೀಯರಿಗೆ ಮರುಭೂಮಿ ನೀಡುವ ಯೋಜನೆ ಯಲ್ಲಿ ಜೇಮ್ಸ್ ಮೊನ್ರೋ ವಹಿಸಿದ ಪ್ರಮುಖ ಪಾತ್ರವನ್ನು ಗೌರವಿಸಲು, ನಗರಕ್ಕೆ ‘ಮೊನ್ರೋವಿಯಾ’ ಎಂದು ಮರುನಾಮಕರಣ ಮಾಡಲಾಯಿತು. ಮೊನ್ರೋ ಅವರ ರಾಜಕೀಯ ಹಾಗೂ ಆರ್ಥಿಕ ಬೆಂಬಲ ವಿಲ್ಲದಿದ್ದರೆ ಈ ಯೋಜನೆಯು ಸಾಕಾರಗೊಳ್ಳುತ್ತಿರಲಿಲ್ಲ ಎಂಬುದು ಅಂದಿನ ಅಮೆರಿಕನ್- ಲೈಬೀರಿಯನ್ನರ ಭಾವನೆಯಾಗಿತ್ತು.
-
ಸಂಪಾದಕೀಯ ಸದ್ಯಶೋಧನೆ
ಪಶ್ಚಿಮ ಆಫ್ರಿಕಾದ ಕರಾವಳಿ ತೀರದಲ್ಲಿರುವ ಲೈಬೀರಿಯಾ ದೇಶದ ರಾಜಧಾನಿಯಾದ ‘ಮೊನ್ರೋ ವಿಯಾ’ ಅತ್ಯಂತ ಅಪರೂಪದ ಹಾಗೂ ವಿಶೇಷ ಇತಿಹಾಸವನ್ನು ಹೊಂದಿರುವ ನಗರ. ಈ ನಗರದ ವೈಶಿಷ್ಟ್ಯ ಅಂದ್ರೆ ಅಮೆರಿಕದ ಐದನೇ ಅಧ್ಯಕ್ಷರಾಗಿದ್ದ ಜೇಮ್ಸ್ ಮೊನ್ರೋ ಅವರ ಗೌರವಾರ್ಥ ‘ಮೊನ್ರೋವಿಯಾ’ ಎಂದು ಹೆಸರಿಟ್ಟಿರುವುದು.
ಈ ಐತಿಹಾಸಿಕ ಘಟನೆಯು ಆಫ್ರಿಕಾ ಮತ್ತು ಅಮೆರಿಕ ಖಂಡಗಳ ನಡುವಿದ್ದ ಜಟಿಲ ಸಂಬಂಧಕ್ಕೆ ನಿದರ್ಶನ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಗುಲಾಮಗಿರಿಯ ವಿರುದ್ಧದ ಹೋರಾಟಗಳು ಮತ್ತು ಬದಲಾವಣೆಗಳು ಆರಂಭವಾಗಿದ್ದವು. ಆ ಸಮಯದಲ್ಲಿ, ಅಮೆರಿಕದಲ್ಲಿ ಮುಕ್ತರಾದ ಕಪ್ಪು ವರ್ಣೀಯ ಗುಲಾಮರನ್ನು ಮತ್ತೆ ಅವರ ಮೂಲ ಭೂಮಿಯಾದ ಆಫ್ರಿಕಾ ಖಂಡಕ್ಕೆ ಕಳುಹಿಸಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ‘ಅಮೆರಿಕನ್ ಕೊಲೊನೈಸೇಶನ್ ಸೊಸೈಟಿ’ (ಎಸಿಎಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಮೆರಿಕದ ಅಧ್ಯಕ್ಷರಾಗಿದ್ದ ಜೇಮ್ಸ್ ಮೊನ್ರೋ ಈ ಯೋಜನೆಗೆ ಮತ್ತು ಎಸಿಎಸ್ ಸಂಸ್ಥೆಗೆ ಭಾರಿ ಬೆಂಬಲವನ್ನು ನೀಡಿದರು.
ಸರಕಾರದ ನಿಕಟ ಬೆಂಬಲ ಹಾಗೂ ಧನಸಹಾಯದೊಂದಿಗೆ ಆಫ್ರಿಕಾದಲ್ಲಿ ಹೊಸ ಪ್ರದೇಶವನ್ನು ಖರೀದಿಸಲು ಅವರು ದಾರಿ ಮಾಡಿಕೊಟ್ಟರು. 1821ರಲ್ಲಿ ಅಮೆರಿಕದಿಂದ ಹೊರಟ ಮೊದಲ ಗುಲಾಮರ ಗುಂಪು ಆಫ್ರಿಕಾದ ಪಶ್ಚಿಮ ಕರಾವಳಿಯ ಮೇಸುರಾಡೋ ಕಲ್ಪದ ಬಳಿ ತಲುಪಿತು. 1822ರ ಏಪ್ರಿಲ್‌ನಲ್ಲಿ ಅಧಿಕೃತವಾಗಿ ಈ ಪ್ರದೇಶದಲ್ಲಿ ವಸಾಹತೊಂದನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಈ ನಗರಕ್ಕೆ ‘ಕ್ರಿಸ್ಟೋಪೋಲಿಸ್’ ಎಂದು ಹೆಸರಿಡಲಾಗಿತ್ತು.
ಇದನ್ನೂ ಓದಿ: Vishweshwar Bhat Column: ಅವಳನ್ನು ಮರೆಯಲಿ ಹ್ಯಾಂಗ?
ಅಮೆರಿಕದಿಂದ ಬಂದು ನೆಲೆಸಿದ ಈ ಮಾಜಿ ಗುಲಾಮರಿಗೆ ತಮ್ಮದೇ ಆದ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳಲು ಹಾಗೂ ಸ್ವತಂತ್ರ ಜೀವನವನ್ನು ನಡೆಸಲು ಈ ನೆಲವು ಬಹುದೊಡ್ಡ ಆಸರೆಯಾಗಿ ಮಾರ್ಪಟ್ಟಿತು. ಕ್ರಿಸ್ಟೋಪೋಲಿಸ್ ನಗರವನ್ನು ಸ್ಥಾಪಿಸಿದ ಕೇವಲ ಎರಡು ವರ್ಷಗಳ ನಂತರ, ಅಂದರೆ 1824ರಲ್ಲಿ ಅದರ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಯಿತು.
ಲೈಬೀರಿಯಾ ವಸಾಹತಿನ ಸ್ಥಾಪನೆಗೆ ಮತ್ತು ಕಪ್ಪು ವರ್ಣೀಯರಿಗೆ ಮರುಭೂಮಿ ನೀಡುವ ಯೋಜನೆಯಲ್ಲಿ ಜೇಮ್ಸ್ ಮೊನ್ರೋ ವಹಿಸಿದ ಪ್ರಮುಖ ಪಾತ್ರವನ್ನು ಗೌರವಿಸಲು, ನಗರಕ್ಕೆ ‘ಮೊನ್ರೋವಿಯಾ’ ಎಂದು ಮರುನಾಮಕರಣ ಮಾಡಲಾಯಿತು. ಮೊನ್ರೋ ಅವರ ರಾಜಕೀಯ ಹಾಗೂ ಆರ್ಥಿಕ ಬೆಂಬಲವಿಲ್ಲದಿದ್ದರೆ ಈ ಯೋಜನೆಯು ಸಾಕಾರಗೊಳ್ಳುತ್ತಿರಲಿಲ್ಲ ಎಂಬುದು ಅಂದಿನ ಅಮೆರಿಕನ್- ಲೈಬೀರಿಯನ್ನರ ಭಾವನೆಯಾಗಿತ್ತು.
ಈ ನಗರದ ಅತ್ಯಂತ ಆಕರ್ಷಕ ವಿಷಯವೆಂದರೆ, ಅಮೆರಿಕ ಸಂಯುಕ್ತ ಸಂಸ್ಥಾನದ ಹೊರಗೆ, ಅಮೆರಿಕನ್ ಅಧ್ಯಕ್ಷರೊಬ್ಬರ ಹೆಸರನ್ನು ಹೊಂದಿರುವ ಜಗತ್ತಿನ ಏಕೈಕ ರಾಜಧಾನಿ ನಗರ ‘ಮೊನ್ರೋವಿಯಾ’. ಅಮೆರಿಕದ ವಾಷಿಂಗ್ಟನ್ ಡಿಸಿ ಹೊರತುಪಡಿಸಿದರೆ, ವಿಶ್ವದ ಮತ್ತಾವುದೇ ದೇಶದ ರಾಜಧಾನಿಗೂ ಅಮೆರಿಕದ ಅಧ್ಯಕ್ಷರ ಹೆಸರು ಇಡಲಾಗಿಲ್ಲ.
ಇದು ಲೈಬೀರಿಯಾದ ರಾಜಧಾನಿಗೆ ವಿಶ್ವ ಭೂಪಟದಲ್ಲಿ ಅತ್ಯಂತ ವಿಶಿಷ್ಟವಾದ ಹಾಗೂ ಅಪರೂಪ ದ ಸ್ಥಾನಮಾನವನ್ನು ತಂದುಕೊಟ್ಟಿದೆ. ಮೊನ್ರೋವಿಯಾದಲ್ಲಿ ಬಂದು ನೆಲೆಸಿದ ಜನರು ಮೂಲತಃ ಆಫ್ರಿಕನ್ನರಾಗಿದ್ದರೂ, ಅವರು ಅಮೆರಿಕದಲ್ಲಿ ದಶಕಗಳ ಕಾಲ ಬೆಳೆದಿದ್ದರಿಂದ ಅಲ್ಲಿಯ ಜೀವನ ಶೈಲಿ, ಭಾಷೆ ಮತ್ತು ಸಂಸ್ಕೃತಿಯನ್ನು ತಮ್ಮೊಂದಿಗೆ ತಂದಿದ್ದರು. ಹೀಗಾಗಿ, ಮೊನ್ರೋವಿಯಾ ನಗರದ ನಿರ್ಮಾಣ, ಅಲ್ಲಿನ ಕಟ್ಟಡಗಳ ಶೈಲಿ, ಶಾಸನ ಮತ್ತು ಆಡಳಿತ ವ್ಯವಸ್ಥೆಯು ಅಮೆರಿಕದ ಶೈಲಿಯನ್ನೇ ಹೋಲುತ್ತಿತ್ತು.
ನಗರದ ಹಳೆಯ ವಾಸ್ತುಶಿಲ್ಪಗಳು ಅಮೆರಿಕದ ದಕ್ಷಿಣ ರಾಜ್ಯಗಳ ಕಟ್ಟಡ ವಿನ್ಯಾಸವನ್ನು ಪ್ರತಿಬಿಂಬಿಸುತ್ತವೆ. 1847ರ ಜುಲೈ 26ರಂದು ಲೈಬೀರಿಯಾ ದೇಶವು ತನ್ನನ್ನು ಸ್ವತಂತ್ರ ಗಣರಾಜ್ಯ ವೆಂದು ಘೋಷಿಸಿಕೊಂಡಿತು.
ಆಫ್ರಿಕಾ ಖಂಡದ ಇತಿಹಾಸದ ಸ್ವತಂತ್ರವಾದ ಮೊದಲ ಗಣರಾಜ್ಯ ಎಂಬ ಹಿರಿಮೆಗೆ ಲೈಬೀರಿಯಾ ಪಾತ್ರವಾಯಿತು. ಈ ಹೊಸ ದೇಶದ ಆಡಳಿತಾತ್ಮಕ ಮತ್ತು ರಾಜಕೀಯ ಕೇಂದ್ರವಾಗಿ ಮೊನ್ರೋ ವಿಯಾ ನಗರವೇ ರಾಜಧಾನಿಯಾಗಿ ಮುಂದುವರಿಯಿತು. ದೇಶದ ಸಂಸತ್ತು, ಅಧ್ಯಕ್ಷರ ಭವನ ಹಾಗೂ ಸುಪ್ರೀಂ ಕೋರ್ಟ್ ಸೇರಿದಂತೆ ಮುಖ್ಯ ಸರಕಾರಿ ಕಚೇರಿಗಳು ಈ ನಗರದ ಸ್ಥಾಪನೆ ಗೊಂಡವು.