ಗಂಟಾಘೋಷ
ಭಾರತದ ಆಡಳಿತಯಂತ್ರದ ಬೆನ್ನೆಲುಬು ಎಂದರೆ ನಾಗರಿಕ ಸೇವೆಗಳು. ಬ್ರಿಟಿಷರ ಕಾಲ ದಲ್ಲಿ ರೂಪುಗೊಂಡ ಆಡಳಿತ ಮಾದರಿ, ಸ್ವಾತಂತ್ರ್ಯಾನಂತರ ಭಾರತೀಯ ಸಂವಿಧಾನದ ಆವರಣದಲ್ಲಿ ಹೊಸ ರೂಪ ಪಡೆದುಕೊಂಡಿತು. ಭಾರತೀಯ ಆಡಳಿತ ಸೇವೆ, ಭಾರತೀಯ ಪೋಲೀಸ್ ಸೇವೆ, ಭಾರತೀಯ ವಿದೇಶಾಂಗ ಸೇವೆ ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ವಿವಿಧ ಸೇವೆಗಳು ದೇಶದ ನೀತಿ ರೂಪಿಸುವುದರಿಂದ ಹಿಡಿದು ಜಾರಿಗೊಳಿಸುವ ತನಕ ಪ್ರಮುಖ ಪಾತ್ರವಹಿಸುತ್ತಿವೆ.
21ನೇ ಶತಮಾನದ ಭಾರತಕ್ಕೆ 19ನೇ ಶತಮಾನದ ಆಡಳಿತ ರಚನೆ ಸಾಕ್ಷಿಯಾಗಬಹುದೇ? ಸಿವಿಲ್ ಸರ್ವೀಸ್ ರಿಫಾರ್ಮ್ ಬರೀ ಚರ್ಚೆಯ ವಿಷಯವಲ್ಲ; ಇಂದಿನ ಅವಶ್ಯಕತೆಯ ಅವಿಭಾಜ್ಯ ಅಂಗವಾಗಿದೆ. ಬ್ರಿಟಿಷರ ಕಾಲದಲ್ಲಿ ಐಸಿಎಸ್ ಅನ್ನು ಸ್ಟೀಲ್ ಫ್ರೇಮ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಉದ್ದೇಶ ಆಡಳಿತದ ನಿಯಂತ್ರಣ.
ಸ್ವಾತಂತ್ರ್ಯಾನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಾಗರಿಕ ಸೇವೆಗಳನ್ನು ರಾಷ್ಟ್ರೀಯ ಏಕತೆಯ ಸಾಧನವೆಂದು ಕರೆದರು. ಆದರೆ ಇಂದಿನ ಭಾರತದಲ್ಲಿ ಆಡಳಿತದ ಗುರಿ ನಿಯಂತ್ರಣವಲ್ಲ; ಸೇವೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ. ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆ, ನಾಗರಿಕರ ಹೆಚ್ಚಿದ ಜಾಗೃತಿ-ಇವೆಲ್ಲವೂ ಆಡಳಿತದಿಂದ ಹೊಸ ರೀತಿಯ ಕಾರ್ಯಕ್ಷಮತೆಯನ್ನು ಬೇಡುತ್ತಿವೆ.
ನಾಗರಿಕ ಸೇವೆಗಳ ಪ್ರವೇಶದ್ವಾರವಾದ ಯುನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನಡೆಸುವ ಪರೀಕ್ಷೆ ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಜ್ಞಾನ, ವಿಶ್ಲೇಷಣಾ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಪರೀಕ್ಷೆ - ಈ ಮೂರು ಹಂತಗಳ ಮೂಲಕ ಆಯ್ಕೆ ನಡೆಯುತ್ತದೆ. ಪ್ರಶ್ನೆ ಏನೆಂದರೆ, ಇಂದಿನ ಸವಾಲುಗಳಿಗೆ ಬೇಕಾದ ಕೌಶಲ್ಯಗಳು ಇದೇ ಪರೀಕ್ಷಾ ಮಾದರಿಯಿಂದ ಅಳೆಯಲ್ಪಡುತ್ತಿವೆಯೇ? ಆಡಳಿತಕ್ಕೆ ಈಗ ಬೇಕಾಗಿರುವುದು ಡೇಟಾ ವಿಶ್ಲೇಷಣೆ, ಸಾರ್ವಜನಿಕ ಹಣಕಾಸಿನ ತಿಳಿವು, ತಂತ್ರಜ್ಞಾನ ಬಳಕೆ, ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಸಂವೇದನೆ.
ಇದನ್ನೂ ಓದಿ: Gururaj Gantihole Column: ಡಿಜಿಟಲ್ ಕಾಯ್ದೆ: ರಕ್ಷಣೆಯೋ ? ನಿಗಾನೋ ?
ಪರೀಕ್ಷಾ ಮಾದರಿಯಲ್ಲಿ ಈ ಅಂಶಗಳ ತೂಕ ಹೆಚ್ಚಬೇಕೆಂಬ ವಾದ ಇದೆ. ಒಮ್ಮೆ ಆಯ್ಕೆ ಯಾದರೆ ಜೀವನಪೂರ್ತಿ ಭದ್ರತೆ ಎಂಬ ಮನೋಭಾವವನ್ನು ಬದಲಾಯಿಸುವಂತೆ, ನಿರಂತರ ಕೌಶಲ್ಯಾಭಿವೃದ್ಧಿ ಮತ್ತು ಕಾರ್ಯಕ್ಷಮತಾ ಮೌಲ್ಯಮಾಪನ ವ್ಯವಸ್ಥೆ ಬಲವಾಗ ಬೇಕು.
ಇಂದಿನ ಮೌಲ್ಯಮಾಪನ ಪದ್ಧತಿ ಬಹುತೇಕ ಆಂತರಿಕ ವರದಿ ಆಧಾರಿತ. ಪದೋನ್ನತಿ ಹಿರಿತನ ಆಧಾರಿತವಾಗಿರುವುದು ಸಾಮಾನ್ಯ. ಫಲಿತಾಂಶದ ಆಧಾರದ ಮೇಲೆ ಮೌಲ್ಯ ಮಾಪನ (Outcome based appraisal) ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ.
ಒಂದು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಹೂಡಿಕೆ ಆಕರ್ಷಣೆ ಇವುಗಳಲ್ಲಿ ಕಂಡು ಬರುವ ಸುಧಾರಣೆಗಳಿಗೆ ಅಧಿಕಾರಿಗಳ ಕಾರ್ಯಕ್ಷಮತೆ ಮಾನದಂಡವಾಗಬೇಕು. ಇಲ್ಲದಿ ದ್ದರೆ, ಸ್ಥಾನಾಂತರವೇ ಏಕೈಕ ಪ್ರತಿಕ್ರಿಯೆಯಾಗುತ್ತದೆ. ಕೇಂದ್ರ ಸರ್ಕಾರವು ಕೆಲವು ವರ್ಷ ಗಳಿಂದ ಲ್ಯಾಟರಲ್ ಎಂಟ್ರಿ ಮೂಲಕ ಖಾಸಗಿ ಕ್ಷೇತ್ರದ ತಜ್ಞರನ್ನು ಸಂಯುಕ್ತ ಕಾರ್ಯದರ್ಶಿ ಮಟ್ಟದಲ್ಲಿ ನೇಮಕ ಮಾಡುತ್ತಿದೆ.
ಆಧುನಿಕ ನೀತಿ ನಿರ್ಮಾಣಕ್ಕೆ ತಜ್ಞ ಜ್ಞಾನ ಅಗತ್ಯ ಎಂಬುದು ಬೆಂಬಲಿಗರ ವಾದವಾಗಿದ್ದರೆ, ಇದು ಸೇವಾ ಮನೋಭಾವ ಮತ್ತು ನಿರಪೇಕ್ಷತೆಯನ್ನು ದುರ್ಬಲಗೊಳಿಸಬಹುದೇ? ವಿರೋಧಿಗಳ ಆತಂಕವಾಗಿದೆ.
ಸತ್ಯ ಏನೆಂದರೆ, ಆಡಳಿತದಲ್ಲಿ ಸಾಮಾನ್ಯಜ್ಞ (generalist) ಮತ್ತು ತಜ್ಞ (specialist)ರ ಸಮತೋಲನ ಅಗತ್ಯ. ಹವಾಮಾನ ಬದಲಾವಣೆ, ಸೈಬರ್ ಸುರಕ್ಷತೆ, ಹಣಕಾಸು ತಂತ್ರeನ ಇವುಗಳಲ್ಲಿ ತಜ್ಞತೆ ಅನಿವಾರ್ಯ. ಆದ್ದರಿಂದ ಲ್ಯಾಟರಲ್ ಎಂಟ್ರಿ ಎಂಬುದು ಪಾರದರ್ಶಕ, ಸ್ಪರ್ಧಾತ್ಮಕ ಮತ್ತು ಮೌಲ್ಯಾಧಾರಿತವಾಗಿರಬೇಕು.
ಭಾರತದ ಸಂಯುಕ್ತ ವ್ಯವಸ್ಥೆಯಲ್ಲಿ ಅಧಿಕಾರಿಗಳ ಪಾತ್ರ ರಾಜಕೀಯ ನಾಯಕರಿಗೆ ಸಲಹೆ ನೀಡುವುದು ಮತ್ತು ನೀತಿಗಳನ್ನು ಜಾರಿಗೊಳಿಸುವುದು. ಆದರೆ ಕೆಲವೊಮ್ಮೆ ರಾಜಕೀಯ ಹಸ್ತಕ್ಷೇಪದ ಆರೋಪಗಳು ಕೇಳಿಬರುತ್ತವೆ. ಪದೇ ಪದೇ ವರ್ಗಾವಣೆ, ನಿರ್ಧಾರ ಸ್ವಾತಂತ್ರ್ಯ ದ ಕೊರತೆ ಇವು ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತವೆ. ಆಡಳಿತದ ನಿರಪೇಕ್ಷತೆ ಯನ್ನು ಕಾಪಾಡಲು ನಿಶ್ಚಿತ ಅವಧಿಯ ಹುದ್ದೆಗಳು (fixed tenure) ಕಟ್ಟುನಿಟ್ಟಾಗಿ ಜಾರಿ ಯಾಗಬೇಕು.
ಡಿಜಿಟಲ್ ಇಂಡಿಯಾ ಯುಗದಲ್ಲಿ ನಾಗರಿಕ ಸೇವೆಗಳು ಕಾಗದಪತ್ರ ಆಡಳಿತದಿಂದ ಡೇಟಾ ಚಾಲಿತ ಆಡಳಿತಕ್ಕೆ ಪರಿವರ್ತನೆಗೊಳ್ಳಬೇಕು. ಸೇವಾ ವಿತರಣೆಯಲ್ಲಿ ವಿಳಂಬ, ಮಧ್ಯ ವರ್ತಿಗಳ ಪ್ರಭಾವ, ಭ್ರಷ್ಟಾಚಾರ ಇವುಗಳನ್ನು ತಂತ್ರಜ್ಞಾನದಿಂದ ಕಡಿಮೆ ಮಾಡಬಹುದು. ಆದರೆ ತಂತ್ರeನ ಬಳಸಲು ಕೌಶಲ್ಯವೂ ಅಗತ್ಯ. ಪ್ರತಿಯೊಬ್ಬ ಅಧಿಕಾರಿಗೂ ಡಿಜಿಟಲ್ ಆಡಳಿತ ತರಬೇತಿ ಕಡ್ಡಾಯವಾಗಬೇಕು.
ನಾಗರಿಕ ಸೇವೆಗಳ ಮೇಲಿನ ಸಾರ್ವಜನಿಕ ನಂಬಿಕೆ ಅವರ ನೈತಿಕತೆ ಮೇಲೆ ನಿಂತಿದೆ. ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಾಗ, ಅದು ಸಂಪೂರ್ಣ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತುತ್ತದೆ. ದಂಡಾತ್ಮಕ ಕ್ರಮಗಳ ಜೊತೆಗೆ ನೈತಿಕ ತರಬೇತಿ, ಪಾರದರ್ಶಕ ಆಸ್ತಿ ಘೋಷಣೆ ಮತ್ತು ಸಾರ್ವಜನಿಕ ಪರಿಶೀಲನೆ ವ್ಯವಸ್ಥೆ ಬಲವಾಗಬೇಕು.
ಭಾರತೀಯ ಸಂವಿಧಾನದ ಭಾಗ XIV ನಾಗರಿಕ ಸೇವೆಗಳ ಕುರಿತು ಸ್ಪಷ್ಟ ನಿರ್ದೇಶನ ನೀಡು ತ್ತದೆ. ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳು ಈ ವ್ಯವಸ್ಥೆಯ ಭಾಗ. ಸಂವಿಧಾನ ರಚನಾಕಾರರು ಆಡಳಿತದ ಸ್ಥಿರತೆ ಮತ್ತು ನಿರಪೇಕ್ಷತೆಯನ್ನು ಗಮನದಲ್ಲಿಟ್ಟು ಕೊಂಡಿದ್ದರು. ಆದರೆ ಮೂಲಭೂತ ರಚನೆಯ ಭಾಗವಾದ ಪ್ರಜಾಸತ್ತಾತ್ಮಕತೆ ಮತ್ತು ಹೊಣೆಗಾರಿಕೆ ಇಂದಿನ ಕಾಲದಲ್ಲಿ ಹೆಚ್ಚಿನ ಅರ್ಥ ಪಡೆದುಕೊಂಡಿವೆ. ಈ ಹಿನ್ನೆಲೆ ಯಲ್ಲಿ, ಯಾವುದೇ ಸುಧಾರಣೆಗಳು ಸಂಯುಕ್ತ ವ್ಯವಸ್ಥೆಗೆ ಧಕ್ಕೆಯಾಗದಂತೆ, ರಾಜ್ಯಗಳ ಪಾತ್ರವನ್ನು ಗೌರವಿಸುವಂತೆ ರೂಪಿಸಬೇಕು.
ಕೇಂದ್ರ ಸೇವೆಗಳು ಮತ್ತು ರಾಜ್ಯ ಸೇವೆಗಳ ನಡುವೆ ಸಮನ್ವಯ ಮತ್ತು ಗೌರವದ ಸಂಬಂಧ ಅಗತ್ಯ. ಸಿಂಗಪುರ, ಯುಕೆ, ಆಸ್ಟ್ರೇಲಿಯಾ ಇಂತಹ ದೇಶಗಳಲ್ಲಿ ನಾಗರಿಕ ಸೇವೆಗಳು ಫಲಿತಾಂಶ ಆಧಾರಿತ, ಗುರಿ ನಿರ್ದಿಷ್ಟ ಮತ್ತು ಪಾರದರ್ಶಕವಾಗಿವೆ.
ತರಬೇತಿ ನಿರಂತರ, ಕಾರ್ಯಕ್ಷಮತೆ ಅಳೆಯುವ ಮಾನದಂಡ ಸ್ಪಷ್ಟ. ಭಾರತದಲ್ಲಿ ತರಬೇತಿ ಸಂಸ್ಥೆಗಳಿದ್ದರೂ, ತರಬೇತಿಯ ನಂತರದ ನಿರಂತರ ಮೌಲ್ಯಮಾಪನ ವ್ಯವಸ್ಥೆ ದುರ್ಬಲವಾಗಿದೆ. ಇಂದಿನ ಯುವಜನತೆ ವೇಗ, ಪಾರದರ್ಶಕತೆ ಮತ್ತು ಜವಾಬ್ದಾರಿತ್ವವನ್ನು ನಿರೀಕ್ಷಿಸುತ್ತಿದೆ.
ಫೈಲ್ ಮುಂದುವರಿಯುತ್ತಿದೆ ಎಂಬ ಉತ್ತರ ಈಗ ಸಾಕಾಗುವುದಿಲ್ಲ. ಉದ್ಯಮ ಸ್ಥಾಪನೆ, ಭೂ ನೋಂದಣಿ, ಪೊಲೀಸ್ ಸೇವೆ, ಕಲ್ಯಾಣ ಯೋಜನೆ ಇವೆಲ್ಲವೂ ಸಮಯಬದ್ಧ ಸೇವೆ ಯಾಗಬೇಕು. ನಾಗರಿಕ ಸೇವೆಗಳು ಸೇವಾ ಮನೋಭಾವವನ್ನು ಪುನರುಜ್ಜೀವನ ಗೊಳಿಸ ಬೇಕು.
ಮರುರಚನೆಗೆ ಮಾರ್ಗಸೂಚಿಗಳು ಪರಿಗಣಿಸಲ್ಪಟ್ಟಲ್ಲಿ; 1. ಪರಿಣಾಮ ಆಧಾರಿತ ಮೌಲ್ಯ ಮಾಪನ, ಜಿಲ್ಲಾವಾರು ಸೂಚ್ಯಂಕ ಆಧಾರದಲ್ಲಿ ಕಾರ್ಯಕ್ಷಮತೆ ಅಳೆಯುವುದು.
- ನಿಶ್ಚಿತ ಅವಧಿ ನಿಯಮ - ರಾಜಕೀಯ ಒತ್ತಡ ಕಡಿಮೆ ಮಾಡಲು.
- ಲ್ಯಾಟರಲ್ ಎಂಟ್ರಿ ಪಾರದರ್ಶಕತೆ - ಸ್ಪಷ್ಟ ಮಾನದಂಡಗಳು.
- ಡಿಜಿಟಲ್ ಕೌಶಲ್ಯ ತರಬೇತಿ - ಪ್ರತಿಯೊಬ್ಬ ಅಧಿಕಾರಿಗೂ ಕಡ್ಡಾಯ.
- ನೈತಿಕತಾ ಕೋಡ್ ಬಲಪಡಿಕೆ - ಆಸ್ತಿ ಘೋಷಣೆ, ಸಾರ್ವಜನಿಕ ಪರಿಶೀಲನೆ.
- ರಾಜ್ಯ-ಕೇಂದ್ರ ಸಮನ್ವಯ ವೇದಿಕೆ - ಸಂಯುಕ್ತ ಗೌರವ ಉಳಿಸಲು.
ನಾಗರಿಕ ಸೇವೆಗಳು ಭಾರತದ ಅಭಿವೃದ್ಧಿಯ ವೇಗವನ್ನು ನಿರ್ಧರಿಸುವ ಪ್ರಮುಖ ಅಂಶ ಗಳಾಗಿವೆ. ಸುಧಾರಣೆ ಎಂದರೆ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಲ್ಲ; ಅದನ್ನು ಕಾಲಾನುಸಾರ ಬಲಪಡಿಸುವುದು. ಸ್ಟೀಲ್ ಫ್ರೇಮ್ ಎಂಬುದು ಈಗ ಜನಕೇಂದ್ರಿತ, ಪಾರದರ್ಶಕ, ಫಲಿತಾಂಶ ಮೂಲಕ ಸರ್ವೀಸ್ ಫ್ರೇಮ್ ಆಗಬೇಕು.
ನಾವು ಇನ್ನೂ ವಸಾಹತುಶಾಹಿಯ ಆಡಳಿತ ನೆರಳಿನಲ್ಲಿ ಬದುಕಬೇಕೇ? ಅಥವಾ ನವಭಾರತದ ಆತ್ಮಕ್ಕೆ ತಕ್ಕಂತೆ ನಾಗರಿಕ ಸೇವೆಗಳನ್ನು ಮರುರಚಿಸಬೇಕೇ? ಎಂಬುದೇ ಈಗಿನ ಪ್ರಶ್ನೆಯಾಗಿದೆ. ಭಾರತೀಯ ನಾಗರಿಕ ಸೇವೆಗಳ ಮೂಲವನ್ನು ನೋಡಿದರೆ ಅದು ಬ್ರಿಟಿಷರ ಕಾಲದ ಭಾರತೀಯ ನಾಗರಿಕ ಸೇವೆ (ICS) ನಲ್ಲಿ ಕಂಡುಬರುತ್ತದೆ.
ಲಾರ್ಡ್ ಕರ್ಝನ್ ಕಾಲದಲ್ಲಿ ಇದನ್ನು ಸ್ಟೀಲ್ ಫ್ರೇಮ್ ಆಫ್ ಇಂಡಿಯಾ ಎಂದು ಕರೆದರು. ಇದರ ಉದ್ದೇಶ ಪ್ರಜೆಗಳ ಕಲ್ಯಾಣವಲ್ಲ; ಸಾಮ್ರಾಜ್ಯದ ಹಿತಾಸಕ್ತಿ. ಸ್ವಾತಂತ್ರ್ಯಾ ನಂತರ ಸರ್ದಾರ್ ಪಟೇಲರು ಸಂವಿಧಾನ ಸಭೆಯಲ್ಲಿ ನಾಗರಿಕ ಸೇವೆಗಳ ಮಹತ್ವವನ್ನು ವಿವರಿಸಿ, ನೀವು ಈ ಸ್ಟೀಲ್ ಫ್ರೇಮ್ ಅನ್ನು ತೆಗೆದರೆ ದೇಶವೇ ಕುಸಿಯುತ್ತದೆ ಎಂದು ಎಚ್ಚರಿಸಿದ್ದರು. ಆದರೆ ಅವರು ಕಲ್ಪಿಸಿದ ಸ್ಟೀಲ್ ಫ್ರೇಮ್ ಎಂದರೆ ರಾಷ್ಟ್ರೀಯ ಏಕತೆಯ ಸಾಧನ.
ಇಂದಿನ ಸವಾಲು ಬೇರೆ. ಆಡಳಿತದ ಗುರಿ ನಿಯಂತ್ರಣದಿಂದ ಸೇವೆಗೆ ಬದಲಾಗಬೇಕು. ಅಧಿಕಾರ ಕೇಂದ್ರಿತ ಆಡಳಿತದಿಂದ ನಾಗರಿಕ ಕೇಂದ್ರಿತ ಆಡಳಿತಕ್ಕೆ ಪರಿವರ್ತನೆ ಆಗಬೇಕಾ ಗಿದೆ. ಯುಪಿಎಸ್‌ಸಿ ನಡೆಸುವ ಪರೀಕ್ಷೆ ವಿಶ್ವದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಆದರೆ ಸದ್ಯ ಪ್ರಶ್ನೆ ಎದ್ದಿರುವುದು ಈ ಪರೀಕ್ಷೆಗಳು ಭವಿಷ್ಯದ ಆಡಳಿತ ನಾಯಕ ರನ್ನು ತಯಾರಿಸುತ್ತಿದೆಯೇ? ಎಂಬುದಾಗಿದೆ.
ಭವಿಷ್ಯದ ಅಧಿಕಾರಿಗಳು ಕೇವಲ ಪರೀಕ್ಷಾ ಚಾಂಪಿಯನ್‌ಗಳಾಗದೆ, ಸಮಸ್ಯೆ ಪರಿಹಾರಕ ರಾಗಬೇಕು. ಭಾರತೀಯ ಆಡಳಿತ ವ್ಯವಸ್ಥೆ ಸಾಮಾನ್ಯಜ್ಞರ ಮೇಲೆ ನಿರ್ಮಿತ ವಾಗಿದೆ. ಐಎಎಸ್ ಅಧಿಕಾರಿಗಳು ಕೃಷಿ ಇಲಾಖೆಯಿಂದ ಹಿಡಿದು ಹಣಕಾಸು ಇಲಾಖೆವರೆಗೆ ವರ್ಗಾವಣೆ ಆಗುತ್ತಾರೆ. ಆದರೆ ಹವಾಮಾನ ಬದಲಾವಣೆ, ಡಿಜಿಟಲ್ ಆರ್ಥಿಕತೆ, ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಇವು ತಜ್ಞತೆಯನ್ನು ಬೇಡುತ್ತವೆ.
ಕೇಂದ್ರ ಸರ್ಕಾರವು ಸಂಯುಕ್ತ ಕಾರ್ಯದರ್ಶಿ ಮಟ್ಟದಲ್ಲಿ ಲ್ಯಾಟರಲ್ ಎಂಟ್ರಿ ಆರಂಭಿ ಸಿದೆ. ಇದು ವ್ಯವಸ್ಥೆಗೆ ತಜ್ಞತೆಯನ್ನು ತರಬಹುದು. ಆದರೆ ಪಾರದರ್ಶಕತೆ ಮತ್ತು ಮೌಲ್ಯಾಧಾರಿತ ಆಯ್ಕೆ ಇಲ್ಲದಿದ್ದರೆ ಅದು ವಿಶ್ವಾಸ ಕುಗ್ಗಿಸಬಹುದು. ಆದ್ದರಿಂದ, ಲ್ಯಾಟರಲ್ ನೇಮಕಾತಿಗೆ ಸಂವಿಧಾನಾತ್ಮಕ ಮೇಲ್ವಿಚಾರಣೆ, ಸ್ಪಷ್ಟ ಅರ್ಹತಾ ಮಾನ ದಂಡ, ಕಾರ್ಯಕ್ಷಮತೆ ಆಧಾರಿತ ಒಪ್ಪಂದ ನಿಯೋಜನೆ ಬಹಳ ಮುಖ್ಯ.
ಇಂದಿನ ವಾರ್ಷಿಕ ಕಾನಿಡೆನ್ಷಿಯಲ್ ವರದಿ(ACR) ಪದ್ಧತಿ ಬಹುತೇಕ ಆಂತರಿಕವಾಗಿದೆ. ಸಾರ್ವಜನಿಕ ಪರಿಶೀಲನೆ ಇಲ್ಲ. ಇದಕ್ಕೆ ಹೊಸ ದಿಕ್ಕು ನೀಡಲು, ಜಿಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಮೌಲ್ಯಮಾಪನ, ಸಮಯಬದ್ಧ ಸೇವಾ ವಿತರಣಾ ಸೂಚ್ಯಂಕ, ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿ ಸೂಚ್ಯಂಕ, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ ಮಾನದಂಡ ಇತ್ಯಾದಿಗಳು ಒಬ್ಬ ಜಿಲ್ಲಾಧಿಕಾರಿಯ ಕಾರ್ಯಕ್ಷಮತೆ ಆ ಜಿಲ್ಲೆಯ ಅಭಿವೃದ್ಧಿಯಲ್ಲಿ ಗೋಚರಿಸಬೇಕು.
ಪದೇಪದೇ ವರ್ಗಾವಣೆ ಆಡಳಿತದ ಗಂಭೀರ ಸಮಸ್ಯೆ. ಒಂದು ಅಧಿಕಾರಿಗೆ ಯೋಜನೆ ರೂಪಿಸಲು ಕನಿಷ್ಠ 2-3 ವರ್ಷ ಬೇಕು. ಆದರೆ 6 ತಿಂಗಳ ವರ್ಗಾವಣೆ ಆಗುವುದರಿಂದ ದೀರ್ಘಾವಧಿ ಯೋಜನೆ ಅಸಾಧ್ಯ. ಹಾಗಾಗಿ, ವರ್ಗಾವಣೆ ಪಾರದರ್ಶಕ ಪೋರ್ಟಲ್‌ನಂತಹ ವ್ಯವಸ್ಥೆ ಅತ್ಯಗತ್ಯ ಎನ್ನಬಹುದು.
ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಮತ್ತು ಸಿಬಿಐ ಇದ್ದರೂ, ಪ್ರಕರಣಗಳ ದೀರ್ಘಾವಧಿ ವಿಚಾರಣೆ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತದೆ. ಇದಕ್ಕಾಗಿ ಅಗತ್ಯ ಸುಧಾರಣೆ ಗಳಂತಹ ವೇಗವಾದ ದಂಡಾತ್ಮಕ ಕ್ರಮ, ಸಾರ್ವಜನಿಕ ಆಸ್ತಿ ಘೋಷಣೆ, ಡಿಜಿಟಲ್ ಟ್ರ್ಯಾಕಿಂಗ್, ಸಾಮಾಜಿಕ ಪರಿಶೀಲನೆ ಹಾಗೂ ನೈತಿಕ ತರಬೇತಿ ಕಡ್ಡಾಯವಾಗಬೇಕು.
ಆಡಳಿತದಲ್ಲಿ ಮಾನವೀಯತೆ ಮೇಳೈಸಬೇಕು. ಸಂಖ್ಯೆಗಳು ಮತ್ತು ಡೇಟಾ ಮುಖ್ಯ. ಆದರೆ ಆಡಳಿತದ ಹೃದಯ ಮಾನವೀಯತೆಯಾಗಿರಬೇಕಾದುದು ಇಂದಿನ ಸಮಾಜಕ್ಕೆ ಅವಶ್ಯ ವಾಗಿದೆ. ಪೌಷ್ಟಿಕತೆ ಕೊರತೆಯ ಮಗುವಿಗೆ, ಹಕ್ಕು ಸಿಗದ ರೈತನಿಗೆ, ನ್ಯಾಯಕ್ಕಾಗಿ ಕಾಯು ತ್ತಿರುವ ಮಹಿಳೆಗೆ ಆಡಳಿತ ಸ್ಪಂದಿಸಬೇಕು.
ಸುಧಾರಣೆ ಎಂದರೆ ಪರಂಪರೆಯನ್ನು ತಿರಸ್ಕರಿಸುವುದಲ್ಲ. ವ್ಯವಸ್ಥೆಯನ್ನು ಕಾಲದ ಅವಶ್ಯಕತೆಗೆ ಅನುಗುಣವಾಗಿ ಬಲಪಡಿಸುವುದು. ನಾಗರಿಕ ಸೇವೆಗಳು ಭಯದ ಆಡಳಿತ ದಿಂದ ವಿಶ್ವಾಸದ ಆಡಳಿತಕ್ಕೆ, ನಿಯಂತ್ರಣದಿಂದ ಸಹಕಾರಕ್ಕೆ, ಅಧಿಕಾರದಿಂದ ಹೊಣೆ ಗಾರಿಕೆಗೆ ರೂಪಾಂತರಗೊಳ್ಳಬೇಕು.
ಬಹುತೇಕರು ಉತ್ತರ ಭಾಗದವರೇ ಹೆಚ್ಚಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿರಲು ಕಾರಣ, ಅವರ ಬಡತನದ ಜೊತೆಗೆ, ‘ಲಾಲ್ ಬತ್ತಿ ಗಾಡಿ’ ಎಂಬ ಉಮೇದುವಾರಿಕೆ ಅವರನ್ನು ನಾಗರಿಕ ಸೇವೆಯಲ್ಲಿ ತೊಡಗುವಂತೆ ಮಾಡುತ್ತಿದೆ. ಇದು, ಸಮಾಜ ಸೇವೆಗೆ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸಕರಾತ್ಮಕವಾಗಿ ಹೊಂದಿಕೊಳ್ಳಬೇಕು.
ಇಲ್ಲವಾದಲ್ಲಿ, ಯಾರನ್ನೋ ಮೆಚ್ಚಿಸಲೋ, ಸಮಾಜದಲ್ಲಿ ಪ್ರತಿಷ್ಠೆ ಗಳಿಸಲು, ಸರ್ಕಾರಿ ಸೌಲಭ್ಯ ಸಿಗುತ್ತದೆಯೆಂದಷ್ಟೇ ಐಎಎಸ್, ಐಪಿಎಸ್‌ಗಳನ್ನು ಪಾಸು ಮಾಡುತ್ತಿದ್ದರೆ, ಇದರ ನೈಜ ಕಾರಣವೇ ಸತ್ತುಹೋಗುತ್ತದೆ. ಸೇವಾಕಾರಕವೆಂಬುದು ಆತ್ಮವಿಲ್ಲದ ನೌಕರಿ ಯಂತಾಗುತ್ತದೆ. ಹಾಗಾಗಿ, ಇಂದಿನ ಯುವಜನತೆ ಇದನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಉತ್ತೇಜಿತರಾಗಬೇಕು. ವ್ಯವಸ್ಥೆಯೂ ಬದಲಾಗಲಿ, ಕಾಲಕ್ಕೆ ತಕ್ಕಂತೆ ಪರಿವರ್ತನೆ ಈ ಜಗದ ನಿಯಮವಾಗಿದ್ದು, ನಾವೂ ಹೊಸತನ್ನು ಅಪ್ಪಿಕೊಳ್ಳಲು ಮುಕ್ತವಾಗಿರೋಣ.