ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Kumar Vivekavamshi Column: ತಾಲಿಬಾನ್‌ಗೆ ಆರೆಸ್ಸೆಸ್‌ ಹೋಲಿಕೆ: ಹಿಂದೂ ದ್ವೇಷಕ್ಕೆ ಹಿಡಿದ ಕನ್ನಡಿ

ಇದು ವಿಶ್ವದ ಅತಿದೊಡ್ಡ ಸ್ವಯಂಸೇವಕ ಮತ್ತು ಸಾಂಸ್ಕೃತಿಕ ಸಂಘಟನೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ವನವಾಸಿ ಕಲ್ಯಾಣ, ವಿಪತ್ತು ನಿರ್ವಹಣೆ, ಮಹಿಳಾ ಸಬಲೀಕರಣ ಮತ್ತು ಯುವ ನಾಯಕತ್ವದಂಥ ಬಾಬತ್ತುಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆ ಗಳನ್ನು ನಡೆಸುತ್ತಿರುವ ಸಂಘಟನೆಯಿದು.

ಸೆಮೆಟಿಕ್ ರಿಲಿಜನ್‌ಗಳ ಪ್ರಭಾವಕ್ಕೆ ಒಳಗಾದವರು ಅವರು ಬಿತ್ತುವ ರಿಲಿಜನ್ನಿನ ಅಫೀಮ ನ್ನೇ ‘ಧರ್ಮ’ ಎಂದುಕೊಂಡಿದ್ದಾರೆ. ಆದರೆ ಧರ್ಮ ಎಂಬುದು ವಿಶಾಲ ವ್ಯಾಪ್ತಿ ಯನ್ನು ಹೊಂದಿರು ವಂಥದ್ದು. ಧರ್ಮ ಎಂದರೆ ಸತ್ಯ, ನ್ಯಾಯ, ಕರ್ತವ್ಯ ಮತ್ತು ನೈತಿಕ ಜೀವನದ ಮಾರ್ಗ. ವ್ಯಕ್ತಿ, ಸಮಾಜ ಹಾಗೂ ವಿಶ್ವವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ತತ್ವವೇ ‘ಧರ್ಮ’. ಹೀಗಾಗಿ ಆರೆಸ್ಸೆಸ್ ಹೇಳಿಕೊಡುವ ಧರ್ಮವು, ವ್ಯಕ್ತಿತ್ವ ನಿರ್ಮಾಣದ ಸೂತ್ರ ಎಂಬುದು ನಿತ್ಯವೂ ಆರೆಸ್ಸೆಸ್ ಶಾಖೆಗೆ ಹೋದವರಿಗಷ್ಟೇ ಅನುಭವಕ್ಕೆ ಬರುವ ಸಂಗತಿ.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸ್ಸೆಸ್) ತಾಲಿಬಾನ್‌ಗೆ ಹೋಲಿಸುವುದು ಕೆಲವರ ಚಾಳಿ. ಇದು ಅವರಲ್ಲಿ ಮಡುಗಟ್ಟಿರುವ ‘ಹಿಂದೂ ದ್ವೇಷ’ಕ್ಕೆ ಹಿಡಿದ ಕನ್ನಡಿ. ರಾಷ್ಟ್ರದ ಏಕತೆಗಾಗಿ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ನಿರಂತರ ಶ್ರಮಿಸುತ್ತಿರುವ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆಯ ಬಗೆಗಿನ ಅಂಧ ದ್ವೇಷವನ್ನು ಅದು ತೋರುತ್ತದೆ. ಆರೆಸ್ಸೆಸ್‌ನ ಸೈದ್ಧಾಂತಿಕ ವಿರೋಧಿಗಳು ತಮಗೆ ‘ರಾಜಕೀಯ ಮೈಲೇಜ್’ ಬೇಕು ಎನಿಸಿದಾಗೆಲ್ಲಾ ಆರೆಸ್ಸೆಸ್‌ಗೆ ಬೈಯುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಇಂಥವರಿಗೆ ಸಜ್ಜನ ಸಮಾಜವು ಉತ್ತರ ಕೊಡದಿದ್ದರೆ ತಪ್ಪಾದೀತು. ಹೀಗಾಗಿ ಇಂಥವರ ತಿಳಿವಳಿಕೆ ಗಾಗಿ ಮತ್ತು ಅವರೇ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಆರೆಸ್ಸೆಸ್ ಎಂದರೇನು?

ಇದು ವಿಶ್ವದ ಅತಿದೊಡ್ಡ ಸ್ವಯಂಸೇವಕ ಮತ್ತು ಸಾಂಸ್ಕೃತಿಕ ಸಂಘಟನೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ವನವಾಸಿ ಕಲ್ಯಾಣ, ವಿಪತ್ತು ನಿರ್ವಹಣೆ, ಮಹಿಳಾ ಸಬಲೀಕರಣ ಮತ್ತು ಯುವ ನಾಯಕತ್ವದಂಥ ಬಾಬತ್ತುಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆ ಗಳನ್ನು ನಡೆಸುತ್ತಿರುವ ಸಂಘಟನೆಯಿದು.

ಇದನ್ನೂ ಓದಿ: M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

ಕಾಂಗ್ರೆಸ್ ಪಕ್ಷವು ತನ್ನ ಕುಟುಂಬದ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವಲ್ಲಿ ವ್ಯಸ್ತವಾಗಿರುವಾಗ, ಆರೆಸ್ಸೆಸ್ ವನವಾಸಿ ಮಕ್ಕಳಿಗೆ ಶಾಲೆಗಳನ್ನೂ, ದೂರದ ಹಳ್ಳಿಗಳಲ್ಲಿ ಆಸ್ಪತ್ರೆಗಳನ್ನೂ ಮತ್ತು ಬಡವರಿಗೆ ನೆರವಿನ ಶಿಬಿರಗಳನ್ನೂ ನಿರ್ಮಿಸುತ್ತಿದೆ ಎಂಬುದು ಗಮನಾರ್ಹ.

ಧರ್ಮವನ್ನು ‘ಅಫೀಮು’ ಎಂದವರಿಗೆ ಧರ್ಮದ ಮೂಲ ಅರ್ಥ ಗೊತ್ತಾ? ಎನ್ನುವುದು ಪ್ರಶ್ನೆ. ಸೆಮೆಟಿಕ್ ರಿಲಿಜನ್‌ಗಳ ಪ್ರಭಾವಕ್ಕೆ ಒಳಗಾದವರು ಅವರು ಬಿತ್ತುವ ರಿಲಿಜನ್ನಿನ ಅಫೀಮನ್ನೇ ‘ಧರ್ಮ’ ಎಂದುಕೊಂಡಿದ್ದಾರೆ. ಆದರೆ ಧರ್ಮ ಎಂಬುದು ವಿಶಾಲ ವ್ಯಾಪ್ತಿಯನ್ನು ಹೊಂದಿರು ವಂಥದ್ದು.

ಧರ್ಮ ಎಂದರೆ ಸತ್ಯ, ನ್ಯಾಯ, ಕರ್ತವ್ಯ ಮತ್ತು ನೈತಿಕ ಜೀವನದ ಮಾರ್ಗ. ಧರ್ಮ ಎಂಬ ಪದವು ಸಂಸ್ಕೃತದ ‘ಧೃ’ ಎಂಬ ಧಾತುವಿನಿಂದ ಬಂದಿರುವಂಥದ್ದು. ಇದರರ್ಥ ಹಿಡಿದಿಟ್ಟುಕೊಳ್ಳುವುದು ಅಥವಾ ಪೋಷಿಸುವುದು. ಏನನ್ನು? ವ್ಯಕ್ತಿ, ಸಮಾಜ ಹಾಗೂ ವಿಶ್ವವನ್ನು ಒಟ್ಟಿಗೆ ಹಿಡಿದಿಟ್ಟು ಕೊಳ್ಳುವ ತತ್ವವೇ ‘ಧರ್ಮ’.

RSS ok

ಹೀಗಾಗಿ ಆರೆಸ್ಸೆಸ್ ಹೇಳಿಕೊಡುವ ಧರ್ಮವು, ವ್ಯಕ್ತಿತ್ವ ನಿರ್ಮಾಣದ ಸೂತ್ರ ಎಂಬುದು ನಿತ್ಯವೂ ಆರೆಸ್ಸೆಸ್ ಶಾಖೆಗೆ ಹೋದವರಿಗಷ್ಟೇ ಅನುಭವಕ್ಕೆ ಬರುವ ಸಂಗತಿ. ಅಧಿಕಾರದ ಲಾಲಸೆಗಾಗಿ ಸುಳ್ಳು ಹೇಳುವವರಿಗೆ ಅಥವಾ ಸತ್ಯಸಂಗತಿಯನ್ನು ತಿರುಚುವವರಿಗೆ ಈ ವಿಷಯ ಹೇಗೆ ತಾನೇ ಅರ್ಥ ವಾದೀತು?!

ಕೆಲ ಮಹಾನ್ ನಾಯಕರು ಆರೆಸ್ಸೆಸ್ ಬಗ್ಗೆ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸುವುದು ಒಳಿತು. 1934ರಲ್ಲಿ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ, “ಇಲ್ಲಿ ನನಗೆ ಅಸ್ಪೃಶ್ಯತೆ ಕಾಣುವುದಿಲ್ಲ. ಇಲ್ಲಿನ ಸಮಾನತೆ ಮತ್ತು ಸಹೋದರತ್ವದ ಭಾವನೆ ಕಂಡು ನನಗೆ ಅಚ್ಚರಿಯಾಗಿದೆ" ಎಂದಿದ್ದರು. 1939ರಲ್ಲಿ ಪುಣೆಯಲ್ಲಿ ನಡೆದ ಆರೆಸ್ಸೆಸ್ ಶಿಬಿರದಲ್ಲಿ ಭಾಗವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, “ನಿಜವಾದ ಸಾಮಾಜಿಕ ಸಮಾನತೆಯನ್ನು ನಾನು ಪ್ರಾಯೋಗಿಕವಾಗಿ ನೋಡಿದ್ದು ಇದೇ ಮೊದಲ ಬಾರಿಗೆ" ಎಂದಿದ್ದರು.

ಇನ್ನು 1975ರ ತುರ್ತುಪರಿಸ್ಥಿತಿಯ ನಂತರ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು, “ಆರೆಸ್ಸೆಸ್ ಫ್ಯಾಸಿಸ್ಟ್ ಆಗಿದ್ದರೆ, ನಾನೂ ಫ್ಯಾಸಿಸ್ಟ್" ಎಂದು ಘೋಷಿಸಿದ್ದರು. ಕಾಂಗ್ರೆಸ್‌ನ ಪರಮೋಚ್ಚ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು 1948ರಲ್ಲಿ, “ಆರೆಸ್ಸೆಸ್ ಹಿಂದೂಗಳ ಸೇವೆಗಾಗಿ ಮತ್ತು ದೇಶದ ಏಕತೆಗಾಗಿ ದುಡಿಯುತ್ತಿದೆ.

ದೇಶ ವಿಭಜನೆಯ ನಂತರ ಅದು ಶರಣಾರ್ಥಿಗಳಿಗೆ ನೀಡಿದ ಸಹಾಯ ಶ್ಲಾಘನೀಯ" ಎಂದರೆ, ಭಾರತದ ಮಾಜಿ ರಾಷ್ಟ್ರಪತಿ ಡಾ.ಝಾಕಿರ್ ಹುಸೇನ್ ಅವರು, “ಆರೆಸ್ಸೆಸ್ ವಿರುದ್ಧದ ಸಾಮುದಾ ಯಿಕತೆಯ ಆರೋಪಗಳು ನಿರಾಧಾರ. ಆರೆಸ್ಸೆಸ್ ಕಾರ್ಯಕರ್ತರು ರಾಷ್ಟ್ರಸೇವೆಗೆ ಬದ್ಧರಾದ ದೇಶಭಕ್ತರು" ಎಂದಿದ್ದಾರೆ.

ಇನ್ನು ಬಾಂಬೆ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಅವರು, “ಆರೆಸ್ಸೆಸ್‌ನ ಸೇವಾ ಚಟುವಟಿಕೆಗಳಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿರುವಂಥ ಮತ್ತೊಂದು ಸಂಘಟನೆ ಭಾರತದಲ್ಲಿ ಇಲ್ಲ" ಎಂದಿದ್ದಾರೆ. ಹೀಗೆ ಆರೆಸ್ಸೆಸ್ ಕುರಿತಾದ ಅತಿರಥ-ಮಹಾರಥರ ಅಭಿಪ್ರಾಯಗಳನ್ನು ಹೇಳುತ್ತಾ ಹೋದರೆ ಅದೊಂದು ಪುಸ್ತಕವೇ ಆದೀತು!

ರಾಷ್ಟ್ರನಿರ್ಮಾಣ ಮತ್ತು ಪ್ರಜಾಪ್ರಭುತ್ವ

1947ರ ದೇಶವಿಭಜನೆಯ ಸಮಯದಲ್ಲಿ, ಲಕ್ಷಾಂತರ ಶರಣಾರ್ಥಿಗಳ ಪುನರ್ವಸತಿಗಾಗಿ ಹಗಲು-ರಾತ್ರಿ ಶ್ರಮಿಸಿದವರು ಆರೆಸ್ಸೆಸ್‌ನ ಸ್ವಯಂಸೇವಕರು. 1962, 1965, 1971ರ ಯುದ್ಧಗಳು ಮತ್ತು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಆಸ್ಪತ್ರೆಗಳು, ಸರಬರಾಜು ವ್ಯವಸ್ಥೆ ಮತ್ತು ನೆರವು ಶಿಬಿರ ಗಳಲ್ಲಿ ಸೇವೆ ಸಲ್ಲಿಸಿದ್ದೂ ಇವರೇ.

ಇಂದಿಗೂ ಕ್ಷಾಮ, ಪ್ರವಾಹದಂಥ ಪ್ರಾಕೃತಿಕ ವಿಕೋಪಗಳಿಂದ ಜನರು ತತ್ತರಿಸಿದಾಗ ಸೇವೆಗೆ ಟೊಂಕ ಕಟ್ಟುವವರೂ ಇವರೇ. ಇವೆಲ್ಲದರ ಅರಿವಿದ್ದರೂ ಕೆಲವರು ಯಾರನ್ನೋ ಮೆಚ್ಚಿಸಲು ಆರೆಸ್ಸೆಸ್ ವಿರುದ್ಧ ನಾಲಿಗೆಯನ್ನು ಹರಿಬಿಡುತ್ತಾರೆ. ಇಂಥವರಿಗೆ ಆ ಹರಿಯೇ ಬುದ್ಧಿ ನೀಡಬೇಕು!

ಜಾತಿ ಮತ್ತು ಸಾಮಾಜಿಕ ಏಕತೆ

ಭಾರತದಲ್ಲಿ ಜಾತಿಭೇದ ಅಸ್ತಿತ್ವದಲ್ಲೇ ಇಲ್ಲದ ಸ್ಥಳವೆಂದರೆ ಆರೆಸ್ಸೆಸ್ ಶಾಖೆ. ಇಲ್ಲಿ ಎಲ್ಲ ಸ್ವಯಂ ಸೇವಕರೂ ಒಂದೇ ಸಾಲಿನಲ್ಲಿ ನಿಂತು ವ್ಯಾಯಾಮ ಮಾಡುತ್ತಾರೆ, ಆಡುತ್ತಾರೆ, ಜತೆಗೂಡಿ ಊಟ ಮಾಡುತ್ತಾರೆ, ಒಂದೇ ಧ್ವಜಕ್ಕೆ ಪ್ರಣಾಮ ಸಲ್ಲಿಸುತ್ತಾರೆ. ಸಮಾನತೆಯ ಬಗ್ಗೆ ಘೋಷಣೆ ಕೂಗುವ ಕೆಲ ರಾಜಕೀಯ ಪಕ್ಷಗಳು ತಮ್ಮದೇ ಸಂಘಟನೆಯಲ್ಲಿ ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲ ವಾಗಿವೆ; ಆದರೆ ಆರೆಸ್ಸೆಸ್ ಎಂದೂ ಯಾರನ್ನೂ ಜಾತಿ ಕೇಳಿಲ್ಲ. ಅಷ್ಟಕ್ಕೂ, ಬಾಯಲ್ಲಿ ಪತಿತೋ ದ್ಧಾರ, ಕೃತಿಯಲ್ಲಿ ಸ್ವಜನ ಪಕ್ಷಪಾತ ಮಾಡಿದವರಾರು ಎಂಬುದು ಇಡೀ ದೇಶಕ್ಕೇ ತಿಳಿದಿದೆ.

ದುಡ್ಡುಕಾಸಿನ ಕಳಂಕವಿಲ್ಲ

ಸರಕಾರದಿಂದ ಆರೆಸ್ಸೆಸ್ ಒಂದು ಪೈಸೆ ಯನ್ನೂ ಪಡೆಯುವುದಿಲ್ಲ, ಸಮಾಜವೇ ಅದನ್ನು ನಿರ್ವ ಹಿಸುತ್ತದೆ. ಆರೆಸ್ಸೆಸ್‌ಗೆ ನೇರ ಖಾತೆ ಗಳಾಗಲೀ ಗುಪ್ತಖಾತೆಗಳಾಗಲೀ ಇಲ್ಲ. ಕೆಲವು ಮೂಲಭೂತ ವಾದಿಗಳ ಗುಪ್ತಖಾತೆಗಳಿಗೆ ಹಣ ಬಂದಂತೆ ಇಲ್ಲಿ ಯಾವುದೂ ಬರುವುದಿಲ್ಲ!

ಲೆಕ್ಕಪತ್ರವನ್ನು ಕೇಳುವವರಿಗೆ ತಿಳಿದಿರಲಿ- ಆರೆಸ್ಸೆಸ್‌ಗೆ ಖಾತೆಯೇ ಇಲ್ಲವೆಂದ ಮೇಲೆ ಹಣ ಪಡೆಯುವುದಾದರೂ ಎಲ್ಲಿಂದ? ಕೆಲ ಸಂಘಟನೆಗಳಂತೆ ಇಲ್ಲಿ ‘ವಿದೇಶಿ ಯಜಮಾನಿಕೆ’ಯೂ ಇಲ್ಲ. ಸೇವೆಯಲ್ಲಿ ಸಮಾಜದವರೇ ಭಾಗಿಯಾಗಿ ವಿನಿಯೋಗ ನೀಡುವುದರಿಂದ ಲೆಕ್ಕವನ್ನೂ ಅವರೇ ಮಾಡಿಕೊಳ್ಳುತ್ತಾರೆ. ಆರೆಸ್ಸೆಸ್‌ನ ಸ್ವಯಂಸೇವಕರು ಕೆಲ ರಾಜಕೀಯ ಪಕ್ಷಗಳ ಕಾರ್ಯಕರ್ತ ರಂತಲ್ಲ; ದುಡ್ಡಿಲ್ಲದೇ ಸೇವೆ ಮಾಡುವ ಮಾರ್ಗದ ಅರಿವು ಅವರಿಗಿದೆ. ಸಮಾಜಕ್ಕೆ ತಲುಪಿಸ ಬೇಕಾದ್ದನ್ನು ನೇರವಾಗಿ ಮುಟ್ಟಿ ಸುವ ಸರಳದಾರಿ ಅವರಿಗೆ ಸಿದ್ಧಿಸಿದೆ. ಹೀಗಾಗಿ ಕಳೆದ 100 ವರ್ಷ ಗಳಲ್ಲಿ ಸಂಘದ ಪಡಸಾಲೆಯಲ್ಲಿ ದುಡ್ಡಿನ ವಿಷಯದಲ್ಲಿ ಒಮ್ಮೆಯೂ ಗಲಾಟೆಯಾಗಿಲ್ಲ.

ಸಮಾಜದ ಅನೇಕ ಸಂಘಟನೆಗಳು ‘ಆರ್ಥಿಕ ಅಶುಚಿತ್ವ’ ದಿಂದಾಗಿ ಛಿದ್ರವಾಗಿದ್ದು ನಮ್ಮ ಕಣ್ಣ ಮುಂದಿದೆ; ಆದರೆ ಭ್ರಷ್ಟಾಚಾರದ ವಾಸನೆಯೂ ಬಡಿಯದಂತೆ ಆರೆಸ್ಸೆಸ್ ನಿರ್ಲಿಪ್ತವಾಗಿ ತನ್ನ ಕೆಲಸ ಮಾಡುತ್ತಿರುವುದರಿಂದ ಇನ್ನೂ ಸಾವಿರ ವರ್ಷ ಕಳೆದರೂ ಹೀಗೇ ಇರಲಿದೆ. ಈವರೆಗೆ ಅನೇಕರು ಆರೆಸ್ಸೆಸ್ ಅನ್ನು ಸೈದ್ಧಾಂತಿಕವಾಗಿ ವಿರೋಧಿಸಿದ್ದಿರಬಹುದು, ಆದರೆ ಆರ್ಥಿಕ ವಿಷಯದ ಬಗ್ಗೆ ಒಬ್ಬೇ ಒಬ್ಬರು ಅನುಮಾನಿಸಿಲ್ಲ. ಕಾರಣ ಆರೆಸ್ಸೆಸ್‌ನ ಆರ್ಥಿಕ ಶುಚಿತ್ವ ವಿರೋಧಿಗಳಿಗೂ ತಿಳಿದಿದೆ.

ಯಾವುದು ಸತ್ಯ?

ಆರೆಸ್ಸೆಸ್ ಅನ್ನು ‘ಅಪಾಯಕಾರಿ’ ಎಂದು ಕರೆಯುವವರು ಅದರ ಶಿಸ್ತು, ಚರಿತ್ರೆ ಮತ್ತು ನಿಸ್ವಾರ್ಥ ಸೇವೆಗೆ ಭಯಗೊಂಡವರೇ ಹೊರತು, ಆರೆಸ್ಸೆಸ್‌ನ ಆಳ-ಅಗಲ-ವಿಸ್ತೀರ್ಣವನ್ನು ಬಲ್ಲವರಲ್ಲ.

ಆರೆಸ್ಸೆಸ್‌ನ ಶಕ್ತಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲದ ಕಾರಣ ಅವರು ಬೈಯುತ್ತಾರೆ, ಆರೆಸ್ಸೆಸ್‌ನ ಸೇವೆಗೆ ಸಮನಾದ ಸೇವೆ ನೀಡಲಾಗದ ಕಾರಣಕ್ಕೆ ಸುಳ್ಳುಸುದ್ದಿಯನ್ನು ಹರಡುತ್ತಾರೆ. ನಮ್ಮ ದೇಶ, ಧರ್ಮ, ಸಂಸ್ಕೃತಿ, ಪರಂಪರೆ, ಇತಿಹಾಸಗಳ ಕುರಿತು ಹೇಳುವ ಸಂಘಟನೆಯೊಂದು ‘ಅಪಾಯಕಾರಿ’ ಹೇಗಾದೀತು? ಹಾಗೊಂದು ವೇಳೆ ಈ ಎಲ್ಲ ಅಂಶಗಳು ಅಪಾಯಕಾರಿ ಎಂದಾದರೆ, ದೇಶವನ್ನು ಯಾವ ಕಥನಗಳ ಆಧಾರದಲ್ಲಿ ಕಟ್ಟಬೇಕೆಂದು ಈ ವಿರೋಧಿಗಳು ನಿರ್ಧರಿಸಿದ್ದಾರೆ? ಇದನ್ನು ಅವರೇ ಹೇಳಬೇಕು!

ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ದೀನದಯಾಳ್ ಉಪಾಧ್ಯಾಯ, ನರೇಂದ್ರ ಮೋದಿ ಯವರು ಸೇರಿದಂತೆ ಅಸಂಖ್ಯಾತ ಮುತ್ಸದ್ದಿಗಳು ಹಾಗೂ ಸಮಾಜ ಸುಧಾರಕರನ್ನು ದೇಶಕ್ಕೆ ನೀಡಿದ ಶಕ್ತಿ ಆರೆಸ್ಸೆಸ್. ತುರ್ತುಪರಿಸ್ಥಿತಿಯ ಕರಾಳದಿನಗಳಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ, ಇಂದು ಭಾರತದ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಬೆನ್ನೆಲುಬಾಗಿ ನಿಂತಿರುವ ಏಕೈಕ ಸಂಘಟನೆ ಆರೆಸ್ಸೆಸ್. ಈ ನಿಟ್ಟಿನಲ್ಲಿನ ಸಂಘದ ಬದ್ಧತೆಯನ್ನು ಪ್ರಶ್ನಿಸುವ ಕೆಲ ರಾಜಕಾರಣಿಗಳಿಗೆ ಒಂದು ಕಿವಿಮಾತು: ನಿಮ್ಮ ರಾಜಕೀಯ ಮಾಯವಾಗಬಹುದು, ಭಾಷಣಗಳು ಮರೆತುಹೋಗಬಹುದು, ಆದರೆ ಆರೆಸ್ಸೆಸ್ ನ ಚಿಂತನೆ ಉಳಿಯುತ್ತದೆ. 100 ವರ್ಷಗಳಿಂದ ಅದು ಮಾಡುತ್ತಿರುವ ರಾಷ್ಟ್ರ ಸೇವೆಯು ಹಾಗೆಯೇ ಮುಂದುವರಿಯುತ್ತದೆ- ಶಾಂತವಾಗಿ, ನಿರ್ಭಯವಾಗಿ ಮತ್ತು ಶ್ರದ್ಧೆಯಿಂದ...

(ಲೇಖಕರು ಯುವ ಚಿಂತಕರು)