ಸಂಪಾದಕರ ಸದ್ಯಶೋಧನೆ
ವಿಮಾನಯಾನ ಎಂಬುದು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಮಾರ್ಗ ವಷ್ಟೇ ಅಲ್ಲ, ಅದೊಂದು ತಾಂತ್ರಿಕ ಅದ್ಭುತ. ಸಾಮಾನ್ಯವಾಗಿ, ವಿಮಾನಗಳು ವಿಮಾನ ನಿಲ್ದಾಣ ಗಳಲ್ಲಿ ಗಂಟೆಗಟ್ಟಲೆ ನಿಂತಿರುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ, ಜಗತ್ತಿನ ಕೆಲವು ವಿಮಾನ ಗಳು ಎಷ್ಟು ಕಾರ್ಯನಿರತವಾಗಿರುತ್ತವೆ ಎಂದರೆ, ಅವು ಭೂಮಿಗಿಂತ ಹೆಚ್ಚಾಗಿ ಆಕಾಶದ ತಮ್ಮ ಜೀವನವನ್ನು ಕಳೆಯುತ್ತವೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಲಂಡನ್‌ನ ಹೀಥ್ರೂ ನಿಲ್ದಾಣದಿಂದ ಅಮೆರಿಕದ ಹೂಸ್ಟನ್ ನಡುವೆ ಸಂಚರಿಸುವ ಬೋಯಿಂಗ್ 777 ವಿಮಾನ. ಈ ನಿರ್ದಿಷ್ಟ ಬೋಯಿಂಗ್ 777 ವಿಮಾನದ ವೇಳಾಪಟ್ಟಿಯನ್ನು ಗಮನಿಸಿದರೆ ಯಾರಿಗಾದರೂ ಅಚ್ಚರಿಯಾಗುವುದು ಸಹಜ.
ಲಂಡನ್‌ನಿಂದ ಹೂಸ್ಟನ್‌ಗೆ ಹೋಗಲು ಸುಮಾರು 10ರಿಂದ 11 ಗಂಟೆಗಳ ಕಾಲ ಬೇಕಾಗುತ್ತದೆ. ಅಲ್ಲಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಂದರೆ ಕೇವಲ ಇಂಧನ ತುಂಬಿಸಿ, ಸ್ವಚ್ಛಗೊಳಿಸಿ ಮತ್ತು ಪ್ರಯಾಣಿಕರನ್ನು ಬದಲಾಯಿಸಿದ ತಕ್ಷಣ, ಅದು ಮತ್ತೆ ಲಂಡನ್‌ನತ್ತ ಪ್ರಯಾಣ ಬೆಳೆಸುತ್ತದೆ. ದಿನದ 24 ಗಂಟೆಗಳಲ್ಲಿ ಸುಮಾರು 20 ಗಂಟೆಗಳ ಕಾಲ ಈ ವಿಮಾನವು ಹಾರಾಟ ನಡೆಸುತ್ತಲೇ ಇರುತ್ತದೆ. ಅಂದರೆ ಅದರ ಜೀವಿತಾವಧಿಯ ಶೇಕಡಾ 80ರಷ್ಟು ಸಮಯ ಅದು ಮೋಡಗಳ ಮೇಲೆ 35000 ಅಡಿ ಎತ್ತರದಲ್ಲಿ ಶಬ್ದದ ವೇಗದ ಹತ್ತಿರ ಚಲಿಸುತ್ತಿರುತ್ತದೆ.
ಇದನ್ನೂ ಓದಿ: Vishweshwar Bhat Column: ʼಸ್ಕಾಚ್ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !
ಬೋಯಿಂಗ್ 777 ಈ ಕಾರ್ಯಕ್ಕೆ ಯಾಕೆ ಸೂಕ್ತ? ಬೋಯಿಂಗ್ 777-300 ER ವಿಮಾನವನ್ನು ‘ಲಾಂಗ್ ಹಾಲ್’ (Long Haul) ಅಂದರೆ ಸುದೀರ್ಘ ಪ್ರಯಾಣದ ರಾಜ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣಗಳು ಹಲವು. ಎರಡು ಎಂಜಿನ್ʼಗಳನ್ನು ಹೊಂದಿದ್ದರೂ, ನಾಲ್ಕು ಎಂಜಿನ್‌ಗಳ ವಿಮಾನಕ್ಕೆ ಸಮನಾದ ಶಕ್ತಿಯನ್ನು ಇದು ನೀಡುತ್ತದೆ.
ಹತ್ತಾರು ಸಾವಿರ ಕಿ.ಮೀ.ಗಳ ಪ್ರಯಾಣದ ಸಮಯದಲ್ಲಿ ಇದರ ಎಂಜಿನ್‌ಗಳು (GE90) ಅತ್ಯಂತ ಸ್ಥಿರವಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಹೊತ್ತೊ ಯ್ಯುವ ಸಾಮರ್ಥ್ಯವಿರುವುದರಿಂದ, ವಿಮಾನಯಾನ ಸಂಸ್ಥೆಗಳಿಗೆ ಇದು ಲಾಭದಾಯಕ.
ಒಂದು ವಿಮಾನ ಭೂಮಿಗೆ ಇಳಿದ ತಕ್ಷಣ ಅದನ್ನು ಮತ್ತೆ ಹಾರಾಟಕ್ಕೆ ಸಿದ್ಧಪಡಿಸುವ ಪ್ರಕ್ರಿಯೆ ಯನ್ನು ‘ಟರ್ನ್ ಅರೌಂಡ್’ ಎನ್ನಲಾಗುತ್ತದೆ. ಬೋಯಿಂಗ್ 777 ಅಂಥ ಬೃಹತ್ ವಿಮಾನಕ್ಕೆ ಇದು ಸುಲಭದ ಮಾತಲ್ಲ. ನೂರಾರು ಪ್ರಯಾಣಿಕರನ್ನು ಇಳಿಸುವುದು, ವಿಮಾನದ ಒಳಾಂಗಣವನ್ನು ಸ್ವಚ್ಛಗೊಳಿಸುವುದು, ಟನ್‌ಗಟ್ಟಲೆ ಇಂಧನವನ್ನು ಮರುಪೂರಣ ಮಾಡುವುದು, ಸಾವಿರಾರು ಕೆ.ಜಿ. ತೂಕದ ಲಗೇಜ್ ಮತ್ತು ಕಾರ್ಗೋ ಬದಲಾಯಿಸುವುದು, ಮುಂದಿನ ಪ್ರಯಾಣಕ್ಕೆ ಬೇಕಾದ ಆಹಾರ ಮತ್ತು ನೀರನ್ನು ಲೋಡ್ ಮಾಡುವುದು... ಇಷ್ಟೆಲ್ಲ ಕೆಲಸಗಳನ್ನು ಕೇವಲ 2-3 ಗಂಟೆಗಳಲ್ಲಿ ಮುಗಿಸಿ, ವಿಮಾನ ಮತ್ತೆ ರನ್‌ವೇ ಮೇಲೆ ಓಡಲು ಸಿದ್ಧವಾಗುತ್ತದೆ ಎಂದರೆ ಅಲ್ಲಿನ ತಾಂತ್ರಿಕ ಸಿಬ್ಬಂದಿಯ ದಕ್ಷತೆ ಎಷ್ಟಿರಬಹುದು ಊಹಿಸಿ!
ವಿಮಾನಯಾನ ಸಂಸ್ಥೆಗಳಿಗೆ ವಿಮಾನವು ಭೂಮಿಯ ಮೇಲೆ ನಿಂತಿದ್ದರೆ ಅದು ಕೇವಲ ‘ವೆಚ್ಚ’. ಅದು ಆಕಾಶದಲ್ಲಿದ್ದಾಗ ಮಾತ್ರ ‘ಆದಾಯ’. ಒಂದು ಬೋಯಿಂಗ್ 777 ವಿಮಾನದ ಬೆಲೆ ಸಾವಿ ರಾರು ಕೋಟಿ ರುಪಾಯಿಗಳಾಗಿರುತ್ತವೆ. ಆ ಹೂಡಿಕೆಯನ್ನು ಲಾಭವಾಗಿ ಪರಿವರ್ತಿಸಬೇಕೆಂದರೆ ವಿಮಾನವು ನಿರಂತರ ಹಾರುತ್ತಿರಬೇಕು.
ಲಂಡನ್-ಹೂಸ್ಟನ್ ಮಾರ್ಗವು ವ್ಯಾಪಾರ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಜನನಿಬಿಡ ಮಾರ್ಗ. ಹೀಗಾಗಿ, ಇಲ್ಲಿ ವಿಮಾನವನ್ನು ಹೆಚ್ಚು ಸಮಯ ನಿಲ್ಲಿಸುವುದು ಆರ್ಥಿಕವಾಗಿ ನಷ್ಟ. ವಿಮಾನದ ನಿರ್ವಹಣೆ (Maintenance) ಹೇಗೆ ನಡೆಯುತ್ತದೆ? ವಿಮಾನ ನಿಲ್ಲುವುದೇ ಇಲ್ಲ ವೆಂದಾದರೆ ಅದಕ್ಕೆ ರಿಪೇರಿ ಬೇಡವೇ? ಎಂಬ ಪ್ರಶ್ನೆ ಕಾಡುವುದು ಸಹಜ.
ವಿಮಾನಯಾನದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ. ಪ್ರತಿ ಬಾರಿ ವಿಮಾನ ಇಳಿದಾಗ ಎಂಜಿನಿಯರ್ ಗಳು ಎಂಜಿನ್, ಟೈರ್ ಮತ್ತು ಇತರ ಪ್ರಮುಖ ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಕೆಲವು ವಾರಗಳಿಗೊಮ್ಮೆ ವಿಮಾನವನ್ನು ಹಾರಾಟದಿಂದ ಹೊರಗಿಟ್ಟು ಸಂಪೂರ್ಣ ತಪಾಸಣೆ ಮಾಡಲಾ ಗುತ್ತದೆ.
ಆಧುನಿಕ ಬೋಯಿಂಗ್ ವಿಮಾನಗಳಲ್ಲಿ ಸಾವಿರಾರು ಸೆನ್ಸರ್‌ಗಳಿರುತ್ತವೆ. ಇವು ವಿಮಾನ ಹಾರು ತ್ತಿರುವಾಗಲೇ ಅದರ ಆರೋಗ್ಯದ ಬಗ್ಗೆ ನೆಲದ ಮೇಲಿರುವ ಎಂಜಿನಿಯರ್‌ಗಳಿಗೆ ಮಾಹಿತಿ ನೀಡು ತ್ತಿರುತ್ತವೆ. ವಿಮಾನವು ವಿಶ್ರಾಂತಿ ಇಲ್ಲದೇ ಹಾರಬಹುದು, ಆದರೆ ಮನುಷ್ಯರಿಗೆ ವಿಶ್ರಾಂತಿ ಬೇಕು. ಇಂಥ ಸುದೀರ್ಘ ಹಾರಾಟಗಳಲ್ಲಿ ಪೈಲಟ್ʼಗಳ ತಂಡವನ್ನು ಬದಲಾಯಿಸಲಾಗುತ್ತದೆ.
ಸಾಮಾನ್ಯವಾಗಿ ಲಂಡನ್‌ನಿಂದ ಹೂಸ್ಟನ್‌ಗೆ ಹೋದ ಪೈಲಟ್‌ಗಳು ಅಲ್ಲಿ ವಿಶ್ರಾಂತಿ ಪಡೆದು, ಮತ್ತೊಂದು ದಿನ ಅದೇ ಮಾರ್ಗದ ವಿಮಾನದಲ್ಲಿ ಮರಳುತ್ತಾರೆ. ವಿಮಾನವು ಮಾತ್ರ ಯಂತ್ರದಂತೆ ಸತತವಾಗಿ ಕೆಲಸ ಮಾಡುತ್ತದೆ.