ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ʼಸ್ಕಾಚ್‌ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !

ಬಾಬುರಾವ್ ಪಟೇಲ್ ಅಂದಿನ ಪ್ರಧಾನಿ ನೆಹರು ಅವರನ್ನು ಈ ಅಂಕಣದಲ್ಲಿ ಕಟುವಾಗಿ ಟೀಕಿಸು ತ್ತಿದ್ದರು. ನೆಹರು ಅದನ್ನು ತಪ್ಪದೇ ಓದುತ್ತಿದ್ದರು ಮತ್ತು ಎಂಜಾಯ್ ಮಾಡುತ್ತಿದ್ದರು. ಒಮ್ಮೆ ಇಡೀ ಸಂಚಿಕೆಯಲ್ಲಿ ಒಂದೇ ಒಂದು ಪ್ರಶ್ನೆಯೂ ನೆಹರು ಕುರಿತು ಇರಲಿಲ್ಲ. ಅದಕ್ಕೆ ನೆಹರು, ‘ಈ ತಿಂಗಳು ನಾನು ಅಪ್ರಸ್ತುತನಾಗಿದ್ದೇನೆ. ಬಾಬುರಾವ್ ಪಟೇಲ್ ಕೂಡ ನನ್ನನ್ನು ಅವರ ಅಂಕಣದಲ್ಲಿ ಪ್ರಸ್ತಾಪಿಸಿಲ್ಲ’ ಎಂದು ತಮಾಷೆಯಾಗಿ ಹೇಳಿದ್ದರು.

ʼಸ್ಕಾಚ್‌ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !

-

ನೂರೆಂಟು ವಿಶ್ವ

ನಾನು ಪ್ರತಿನಿತ್ಯ ನಮ್ಮ ಓದುಗರು ಕೇಳುವ ಹತ್ತು ಪ್ರಶ್ನೆಗಳಿಗೆ ‘ಭಟ್ಟರ ಸ್ಕಾಚ್’ ಅಂಕಣದಲ್ಲಿ ಉತ್ತರಿಸುತ್ತೇನೆ. ಓದುಗರಂತೆ ಅವರ ಪ್ರಶ್ನೆಗಳೂ ಚಿತ್ರ-ವಿಚಿತ್ರವಾಗಿರುತ್ತವೆ. ತಮ್ಮ ಹೆಸರು ಪತ್ರಿಕೆ ಯಲ್ಲಿ ಪ್ರಕಟವಾಗಬೇಕು ಎಂಬ ಆಶಯದಂತೆ, ಅವರ ಮನಸ್ಸಿನಲ್ಲಿ ಹೊಳೆಯುವ ತರಲೆ, ಕುಚೋದ್ಯ, ತಮಾಷೆಯ ಪ್ರಶ್ನೆಗಳಿಗೆ ನನ್ನಿಂದ ಉತ್ತರ ಪಡೆಯುವ, ಕಾಲೆಳೆಯುವ, ಒಂದಷ್ಟು ಖುಷಿ ಪಡುವ, ಹಂಚುವ ಆಶಯವಿರುತ್ತದೆ.

ಆ ಅಂಕಣಕ್ಕೆ ಅದಕ್ಕಿಂತ ಹೆಚ್ಚಿನ ಯಾವ ಉದ್ದೇಶವಾಗಲಿ, ದುರುದ್ದೇಶವಾಗಲಿ ಇಲ್ಲ. ನಮ್ಮ ಪತ್ರಿಕೆಯ ಸಂಪಾದಕೀಯ ಪುಟ ತುಸು ಭಾರ. ಎರಡು ಪೂರ್ತಿ ಪುಟಗಳಲ್ಲಿ ಭರ್ಜರಿ ಅಂಕಣ, ಲೇಖನಗಳಿರುವಾಗ, ಲೈಟ್ ರೀಡಿಂಗ್ ಇರಲಿ ಎಂದು ‘ಭಟ್ಟರ ಸ್ಕಾಚ್’ ಬರೆಯಲಾಗುತ್ತದೆ.

ವಾಸ್ತವವಾಗಿ, ಈ ಅಂಕಣದ ಜನಪ್ರಿಯತೆಗೆ ಅದಕ್ಕೆ ಪ್ರಶ್ನೆ ಕೇಳುವ ಓದುಗರೇ ಕಾರಣ. ಅವರ ಪ್ರಶ್ನೆ ಚುರುಕು, ತರಲೆ, ಚೋದ್ಯ, ವ್ಯಂಗ್ಯವಿದ್ದಷ್ಟೂ ಉತ್ತರ ನೀಡಲು ಒಂಥರಾ ಕಿಕ್ ಬರುತ್ತದೆ. ‘ಸ್ಕಾಚ್’ಗೆ ‘ಕಿಕ್’ ಇಲ್ಲದಿದ್ದರೆ ಹೇಗೆ? ಅದಕ್ಕೆ ಕೆಲವರು ಇದು ಸ್ಕಾಚೋ, ಐಸ್‌ಕ್ರೀಮೋ ಎಂದು ಕೇಳುವುದುಂಟು. ಇದೊಂದು ಶುದ್ಧ ಟೈಮ್‌ಪಾಸ್ ಕಳ್ಳೇಕಾಯಿ!

ನಾನು ಕಳೆದ ಹನ್ನೊಂದು ವರ್ಷಗಳ ಅವಧಿಯಲ್ಲಿ ದಿನಕ್ಕೆ ಹತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾ ಬಂದಿದ್ದೇನೆ. ಹೀಗೆ ಉತ್ತರಿಸಿದ್ದೇ ಸುಮಾರು ಮೂವತ್ತೊಂದು ಸಾವಿರ ಆಗಿದೆ ಎಂದು ಇತ್ತೀಚೆಗೆ ಸ್ನೇಹಿತರಾದ ಕಿರಣ್ ಹೇಳಿದಾಗಲೇ ನನಗೆ ಅದರ ‘ವಾಲ್ಯೂಮ್’ ಅರಿವಿಗೆ ಬಂದಿದ್ದು.

ಇದನ್ನೂ ಓದಿ: Vishweshwar Bhat Column: ʼಸ್ಕಾಚ್‌ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !

ಇಲ್ಲಿ ತನಕ ನೀವು ‘ಭಟ್ಟರ ಸ್ಕಾಚ್’ ಅಂಕಣದಲ್ಲಿ ಪ್ರಕಟವಾದ ಪ್ರಶ್ನೋತ್ತರಗಳನ್ನು ಸೇರಿಸಿದರೆ, ಇನ್ನೂರು ಪುಟಗಳ ಹದಿನೈದು ಪುಸ್ತಕಗಳಾಗಬಹುದು ಎಂಬ ಸಣ್ಣ ಲೆಕ್ಕವನ್ನೂ ಅವರೇ ನೀಡಿದರು. ಆ ಪೈಕಿ ವೀರಪ್ಪ ಮೊಯಿಲಿ ಮತ್ತು ಕುಮಾರಸ್ವಾಮಿಯವರ ಬಗ್ಗೆ ಬರೆದಿದ್ದನ್ನು ಸೇರಿಸಿದರೇ ಎರಡು ಪ್ರತ್ಯೇಕ ಪುಸ್ತಕವಾದೀತು ಎಂದು ಹೇಳಿದ್ದು ಅವರೇ.

ಈ ಮೂವತ್ತೊಂದು ಸಾವಿರ ಪ್ಲಸ್ ಪ್ರಶ್ನೋತ್ತರಗಳ ಪೈಕಿ ಆಯ್ದ ಹತ್ತು ಪ್ರಶ್ನೋತ್ತರಗಳನ್ನು ಹೇಳಿ ಅಂದ್ರೆ ನನಗೆ ಸಾಧ್ಯವಿಲ್ಲ. ಅಸಲಿಗೆ ನಿನ್ನೆ ಬರೆದ ಉತ್ತರಗಳೇ ನೆನಪಿರುವುದಿಲ್ಲ. ಆ ಕ್ಷಣಕ್ಕೆ ಹೊಳೆದ ಉತ್ತರ ನೀಡಿ ನಾನು ಮರೆತುಬಿಡುತ್ತೇನೆ. ಓದುಗರೇ ನೆನಪಿಟ್ಟುಕೊಂಡು ಆಗಾಗ ನನಗೆ ಹೇಳುವು ದುಂಟು. ‌

ಮೊನ್ನೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಓದುಗಳೊಬ್ಬಳು, ‘ಭಟ್ಟರ ಸ್ಕಾಚ್’ನಲ್ಲಿ ಪ್ರಕಟ ವಾದ, ಅವರಿಗೆ ಇಷ್ಟವಾದ ಆರೇಳು ಪ್ರಶ್ನೋತ್ತರಗಳನ್ನು ಪಟಪಟನೆ ಹೇಳಿ ಅಚ್ಚರಿ ಮೂಡಿಸಿದರು. ಅವ್ಯಾವವೂ ನನಗೇ ನೆನಪಿರಲಿಲ್ಲ.

‘ಭಟ್ರೇ, ನಿಮಗೆ ಯಾರೋ ಜನಪ್ರಿಯತೆ ಅಂದ್ರೆ ಏನು ಅಂತ ಕೇಳಿದ್ದರು. ಅದಕ್ಕೆ ನೀವು ಕೊಟ್ಟ ಉತ್ತರ ನನಗೆ ಬಹಳ ಖುಷಿ ಕೊಟ್ಟಿತ್ತು’ ಎಂದರು. ‘ನಾನೇನು ಉತ್ತರ ಕೊಟ್ಟಿದ್ದೇ ಹೇಳಿ’ ಎಂದೆ. ಅದಕ್ಕೆ ಅವರು. ‘ಜನಪ್ರಿಯತೆ ಅಂದ್ರೆ ಅದು ಗಾಳಿಯಲ್ಲಿ ಕಟ್ಟಿದ ಗೋಪುರ, ಯಾರೋ ಒಬ್ಬರು ಜೋರಾಗಿ ಸೀನಿದರೂ ಬಿದ್ದುಹೋಗಬಹುದು ಎಂದು ಉತ್ತರಿಸಿದ್ದಿರಿ’ ಎಂದರು.

ಹಾಗೆ ಅವರು ಹೇಳಿದ ಇನ್ನೊಂದು ಪ್ರಶ್ನೆ- ‘ಭಟ್ರೇ, ನಿಮ್ಮ ಪ್ರಕಾರ ಸ್ವರ್ಗ ಎಲ್ಲಿದೆ? ಅದಕ್ಕೆ ನಾನು ನೀಡಿದ ಉತ್ತರ - ‘ತೆರಿಗೆ ಪಾವತಿಸಿದ ನಂತರ ಮನುಷ್ಯನ ಜೇಬಿನಲ್ಲಿ ಉಳಿಯುವ ಹಣದಲ್ಲಿದೆ’!.

‘ಇನ್ನೊಂದು ಹೇಳಲಾ?’ ಎಂದು ಕೇಳಿದರು. ‘ಖಂಡಿತವಾಗಿಯೂ ಹೇಳಿ’ ಅಂದೆ. ‘ಜೀವನದ ಗುರಿ ಯಾವುದಾಗಿರಬೇಕು?’ ಎಂಬ ಪ್ರಶ್ನೆಗೆ ನೀವು, ‘ಬೇರೆಯವರ ಜೇಬಿಗೆ ಕೈಹಾಕದೇ ನಿಮ್ಮ ಜೇಬನ್ನು ತುಂಬಿಸಿಕೊಳ್ಳುವುದು ಮತ್ತು ಬೇರೆಯವರ ನಿದ್ದೆಗೆಡಿಸದೇ ನೀವು ಶಾಂತವಾಗಿ ನಿದ್ರೆ ಮಾಡುವುದು!’ ಎಂದು ಉತ್ತರಿಸಿದ್ದಿರಿ ಎಂದರು.

ಅವರು ಇನ್ನೂ ಕೆಲವು ಪ್ರಶ್ನೋತ್ತರಗಳನ್ನು ಹೇಳಿದರು. ಈಗ ನನಗೆ ಅವು ನೆನಪಾಗುತ್ತಿಲ್ಲ. ‘ಭಟ್ಟರ ಸ್ಕಾಚ್’ ಪ್ರಶ್ನೋತ್ತರಗಳೆಂದರೆ, ಪಾತರಗಿತ್ತಿ ಇದ್ದಂತೆ. ಪಾತರಗಿತ್ತಿಯಂತೆ ಸುಂದರ, ವೈವಿಧ್ಯಮಯ. ಹಾಗೆಂದು ಅವುಗಳನ್ನು ಹಿಡಿಯಲು ಹೋದರೆ ಕೈಗೆ ಸಿಗುವುದಿಲ್ಲ. ಅದೇನು ನಿತ್ಯವೂ ಓದಲೇಬೇಕು ಅಂತೇನೂ ಇಲ್ಲ. ಓದದಿದ್ದರೆ ಕಳೆದುಕೊಳ್ಳುವುದೇನಿಲ್ಲ.

ಊಟವಾದ ಮೇಲೆ ಎಲೆ-ಅಡಕೆ ಹಾಕಿದ ಹಾಗೆ, ಲವಂಗ-ಬಡೇಸೊಪ್ಪು ಬಾಯಲ್ಲಿಟ್ಟುಕೊಂಡಂತೆ. ಅದಕ್ಕಿಂತ ಹೆಚ್ಚೂ ಅಲ್ಲ, ಕಮ್ಮಿಯೂ ಅಲ್ಲ. ಹೆಚ್ಚೆಂದರೆ, ಬಾಳೆಎಲೆ ತುದಿಯಲ್ಲಿರುವ ಉಪ್ಪು-ಉಪ್ಪಿನಕಾಯಿ ಇದ್ದಂತೆ ಎಂದು ಹೇಳಬಹುದು.

ಅವಿಲ್ಲದೆಯೂ ಊಟ ಮಾಡಬಹುದಲ್ಲ? ‘ಭಟ್ಟರ ಸ್ಕಾಚ್’ ಬರೆಯುವಾಗ ನನ್ನಲ್ಲಿ ಯಾವ ಅಜೆಂಡಾಗಳಾಗಲಿ, ಸ್ಕೀಮುಗಳಾಗಲಿ, ದ್ವೇಷ-ಮತ್ಸರವಾಗಲಿ, settling scores ಅಂತಾರಲ್ಲ ಅದಾಗಲಿ, ಯಾವುವೂ ಇರುವುದಿಲ್ಲ. ಹೆಚ್ಚೆಂದರೆ ಆಗಾಗ ಸುಮ್ಮನೆ ಕಾಲೆಳೆದಿರಬಹುದು, ಕಿಚಾಯಿಸಿರಬಹುದು. ಅದನ್ನೇ ಬೇರೆ ರೀತಿಯಲ್ಲಿ ಭಾವಿಸಿದರೆ ನಾನು ನಿರುತ್ತರ. ನಾನು ಯಾರ ಕುರಿತು ಬರೆದಿದ್ದೇನೋ, ಮರುದಿನ ಅವರೇ ಎದುರಾದಾಗ, ನಮ್ಮ ಸ್ನೇಹಕ್ಕೆ ಕುಂದುಂಟಾಗ ಬಾರದು. ಆ ರೀತಿಯ ಅನೇಕ ಅನುಭವಗಳು ನನಗೆ ಆಗಿವೆ.

ಹೆಸರು ಹೇಳಲು ಇಚ್ಛಿಸದ ನನ್ನ ಆತ್ಮೀಯ ಸ್ನೇಹಿತ ಮತ್ತು ಅವನ ಗರ್ಲ್ ಫ್ರೆಂಡ್ ಬ್ರೇಕಪ್ ಆಗಿತ್ತು. ಆತ ಬಹಳ ಖಿನ್ನಮನಸ್ಕನಾಗಿದ್ದ. ಊಟ-ತಿಂಡಿ ಸೇರೊಲ್ಲ ಅಂತ ಬೇಸರದಲ್ಲಿದ್ದ. ಈ ವಿಷಯ ವನ್ನು ನಮ್ಮಿಬ್ಬರಿಗೂ ಆತ್ಮೀಯನಾದ ಮತ್ತೊಬ್ಬ ಸ್ನೇಹಿತ ನನಗೆ ತಿಳಿಸಿದ. ಅಷ್ಟೇ ಅಲ್ಲ, ಆತೇ ಒಂದು ಪ್ರಶ್ನೆ ಹಾಕಿ, ‘ಇದಕ್ಕೆ ಭಟ್ಟರ ಸ್ಕಾಚ್ ಅಂಕಣದಲ್ಲಿ ಉತ್ತರಿಸಿ’ ಎಂಬ ಸಲಹೆಯನ್ನೂ ಕೊಟ್ಟ.

ಪ್ರಶ್ನೆ ಏನಂದರೆ - ‘ನನ್ನ ಗರ್ಲ್ ಫ್ರೆಂಡ್ ನನ್ನನ್ನು ಬಿಟ್ಟು ಹೋಗಿದ್ದಾಳೆ, ನಾನು ಈಗ ಏನು ಮಾಡಲಿ?’. ಅದಕ್ಕೆ ನಾನು ನೀಡಿದ ಉತ್ತರ - ‘ಅಯ್ಯಾ, ಲಾಟರಿ ಹೊಡೆಯದಿದ್ದಾಗ ಯಾರಾದರೂ ಅಳುತ್ತಾರೆಯೇ? ಇನ್ನೊಂದು ಟಿಕೆಟ್ ಖರೀದಿಸುತ್ತಾರೆ ಅಷ್ಟೇ! ಲಾಟರಿ ಅಂಗಡಿ ಎಲ್ಲಿದೆ ನೋಡು’ ಎಂದು ಉತ್ತರಿಸಿದ್ದೆ. ಇದನ್ನು ಮರುದಿನ ಅವನಿಗೆ ತೋರಿಸಿದಾಗ, ಆತ ಬಹಳ ಖುಷಿಪಟ್ಟನಂತೆ. ಅದಾಗಿ ಮೂರು ತಿಂಗಳ ನಂತರ ಆತ ಮತ್ತೊಬ್ಬ ಹುಡುಗಿ ಜತೆ ಅಡ್ಡಾಡಲಾರಂಭಿಸಿದ!

ಇದು ‘ಭಟ್ಟರ ಸ್ಕಾಚ್’. ಅಷ್ಟೇ. ಅದಕ್ಕೆ ಬಹಳ ತರ್ಕ-ಹಿನ್ನೆಲೆ ಇರುವುದಿಲ್ಲ. ಆ ಕ್ಷಣಕ್ಕೆ ಹೊಳೆಯುವ ತಮಾಷೆಯ ಉತ್ತರ ನೀಡುವುದಷ್ಟೇ. ಎಷ್ಟೋ ಸಲ ನಾನು ನನ್ನನ್ನೇ ಗೇಲಿ ಮಾಡಿಕೊಳ್ಳುತ್ತೇನೆ. ಇತ್ತೀಚೆಗೆ ಓದುಗರೊಬ್ಬರು, ‘ನಿಮ್ಮ ಮನೆಯಲ್ಲಿ ನಿಮ್ಮ ಮಾತು ನಡೆಯುತ್ತದೆಯೇ?’ ಎಂದು ಕೇಳಿದ್ದರು. ಅದಕ್ಕೆ, ‘ನಾನು ಹೇಳಿದ ಕೆಲಸವನ್ನು ನಾನು ಒಬ್ಬನೇ ಮಾಡಿಕೊಳ್ಳಬೇಕಾದಾಗ ಮಾತ್ರ ನನ್ನ ಮಾತು ಅಲ್ಲಿ ಚಾಚೂ ತಪ್ಪದೆ ನಡೆಯುತ್ತದೆ’ ಎಂದು ಬರೆದಿದ್ದೆ.

ಇನ್ನೊಮ್ಮೆ ಓದುಗರೊಬ್ಬರು, ‘ನಿಮ್ಮನ್ನು ನೋಡಿದರೆ ನನಗೆ ವಾಕರಿಕೆ ಬರುತ್ತದೆ, ಭಟ್ರೇ’ ಎಂದು ಬರೆದಿದ್ದರು. ಅದಕ್ಕೆ ನಾನು ಬರೆದಿದ್ದೆ - ‘ಒಳ್ಳೆಯದೇ ಆಯಿತು, ಹೊಟ್ಟೆಯಲ್ಲಿರೋ ಕೊಳೆ ಎಲ್ಲ ಹೊರಗೆ ಬರಲಿ. ನನ್ನ ಪತ್ರಿಕೆಯ ಕೆಲಸವೇ ಅದು, ಜನರ ಹೊಟ್ಟೆಯಲ್ಲಿರುವ ಮತ್ತು ತಲೆಯಲ್ಲಿ ರುವ ಕೊಳೆಯನ್ನು ಹೊರಹಾಕುವುದು!’. ಇತ್ತೀಚೆಗೆ ಓದುಗರೊಬ್ಬರು, ‘ಪತ್ರಿಕೆಯಲ್ಲಿ ಪ್ರಕಟ ವಾಗುವುದೆಲ್ಲವೂ ಸತ್ಯವಾ?’ ಎಂಬ ಪ್ರಶ್ನೆಗೆ, ನಮ್ಮನ್ನೇ ಗೇಲಿ ಮಾಡಿಕೊಳ್ಳುತ್ತಾ ತಮಾಷೆಗೆ, ‘ಪತ್ರಿಕೆಯ ಹೆಸರು, ವಾರ ಮತ್ತು ದಿನಾಂಕ ಮಾತ್ರ ಸತ್ಯ’ ಇಂದು ಉತ್ತರಿಸಿದ್ದೆ.

ಕೆಲ ದಿನಗಳ ಹಿಂದೆ ಓದುಗರೊಬ್ಬರು, ‘ನೀವು ಇಷ್ಟೊಂದು ಜನರನ್ನು ಟೀಕಿಸುತ್ತೀರಲ್ಲ, ನಿಮ್ಮ ಬಗ್ಗೆ ಜನರು ಏನು ಅಂದುಕೊಳ್ಳುತ್ತಾರೆ ಎಂದು ನಿಮಗೆ ಚಿಂತೆಯಿಲ್ಲವೇ?’ ಎಂದು ಕೇಳಿದ್ದರು. ಅದಕ್ಕೆ ‘ಜನರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ಯೋಚಿಸಲು ಶುರು ಮಾಡಿದರೆ, ನಾನು ಬರೆಯುವುದನ್ನೇ ನಿಲ್ಲಿಸಬೇಕಾಗುತ್ತದೆ. ಅಷ್ಟಕ್ಕೂ, ಜನರು ನನ್ನನ್ನು ಬೈಯ್ಯದಿದ್ದರೆ ನನಗೆ ನಿದ್ದೆಯೇ ಬರುವುದಿಲ್ಲ’ ಎಂದಿದ್ದೆ.

‘ನಿಮ್ಮ ದೃಷ್ಟಿಯಲ್ಲಿ ಯಶಸ್ವಿ ಸಂಪಾದಕ ಅಂದ್ರೆ ಯಾರು?’ ಎಂಬ ಪ್ರಶ್ನೆಗೆ, ನನ್ನ ಉತ್ತರ ಹೀಗಿತ್ತು - ‘ಯಾವ ಸಂಪಾದಕನ ವಿರುದ್ಧ ಅತಿ ಹೆಚ್ಚು ಕೋರ್ಟ್ ಕೇಸುಗಳಿರುತ್ತವೋ, ಅವನೇ ಯಶಸ್ವಿ ಸಂಪಾದಕ. ಉಳಿದವರು ಪಂಚಾಂಗದ ಸಂಪಾದಕರಾಗಿರಲು ಲಾಯಕ್ಕು. ನನ್ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳಿವೆ.. ಹಾಂ..!’ ಐದಾರು ವರ್ಷಗಳ ಹಿಂದೆ, ಓದುಗರೊಬ್ಬರು ಕೇಳಿದ ಪ್ರಶ್ನೆಗೆ ನಾನು ನೀಡಿದ ಉತ್ತರ ಪ್ರತಿಭಟನೆಗೆ, ಗೇಲಿಗೆ, ಟ್ರೋಲ್ ಗೆ ಕಾರಣವಾಗಿತ್ತು.

ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಅಷ್ಟಕ್ಕೇ ನನ್ನ ವಿರುದ್ಧ ಕೋರ್ಟ್ ಕೇಸು ಕೂಡ ದಾಖಲಾ ಯಿತು. ಅಷ್ಟಕ್ಕೆಲ್ಲ ಕಾರಣವಾದ ಆ ಪ್ರಶ್ನೆ ಮತ್ತು ಉತ್ತರವನ್ನು ಹೇಳಬೇಕು. ಓದುಗರೊಬ್ಬರು ‘ಭಟ್ರೇ, ಒಂದು ಹಳ್ಳಿ ಮುಂದುವರಿದಿದೆ ಎಂಬುದನ್ನು ಅಳೆಯುವ ಮಾನದಂಡ ಯಾವುದು?’ ಎಂದು ಕೇಳಿದ್ದರು.

ಅದಕ್ಕೆ ನಾನು ತಮಾಷೆಗೆ, ‘ಯಾವ ಹಳ್ಳಿಯ ಹೆಂಗಸರೆಲ್ಲ ಬ್ರಾ ಧರಿಸುತ್ತಾರೋ, ಆ ಹಳ್ಳಿ ಮುಂದು ವರಿದಿದೆ ಎಂದು ಹೇಳಬಹುದು’ ಎಂದು ಉತ್ತರಿಸಿದ್ದೆ. ಈ ಉತ್ತರ ನೂರಾರು ಮಹಿಳಾಮಣಿಗಳ ಪಿತ್ತವನ್ನು ನೆತ್ತಿಗೇರಿಸಿತ್ತು. ಅಷ್ಟೇ ಸಾಕಾಯಿತು. ಇದೊಂದು ಪ್ರಶ್ನೋತ್ತರವನ್ನು ಇಟ್ಟುಕೊಂಡು ಪ್ರಗತಿಪರ ಲೇಖಕಿಯೊಬ್ಬಳು ರಾಯಚೂರಿನ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಅಶ್ಲೀಲ, ಸ್ತ್ರೀ ದ್ವೇಷ, ಹಳ್ಳಿ ಹೆಂಗಸರ ನಿಂದನೆ, ಮಹಿಳೆಯರ ಗೇಲಿ, ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ... ಹೀಗೆ ಏಳು ಸೆಕ್ಷನ್ ಅಡಿಯಲ್ಲಿ ನನ್ನ ವಿರುದ್ಧ ಕೇಸು ಹಾಕಿದಳು.

ನಾನು ಮೂರು ವರ್ಷಗಳ ಅವಧಿಯಲ್ಲಿ ಏಳೆಂಟು ಬಾರಿ ನ್ಯಾಯಾಲಯಕ್ಕೆ ಅಲೆದೆ. ವಿದೇಶ ಪ್ರವಾಸವೊಂದೇ ಅಲ್ಲ, ನನಗೆ ಕೋರ್ಟಿಗೆ ಅಲೆಯುವುದೂ ಅತ್ಯಂತ ಖುಷಿಯ ವಿಚಾರವೇ. ಇದು ನನಗೆ ವರದಾನವಾಗಿದ್ದು ಬೇರೆ ಮಾತು, ಇರಲಿ. ನಂತರ ನ್ಯಾಯಾಧೀಶರು, ಕೇಸು ಹಾಕಿದ ಪ್ರಗತಿ ಪರ ಲೇಖಕಿಯನ್ನು ಕೋರ್ಟಿಗೆ ಕರೆಯಿಸಿ, ‘ಆ ಪ್ರಶ್ನೋತ್ತರ ಓದಿ ನನಗೂ ನಗು ಬಂತು. ನಾನೂ ನಿತ್ಯ ‘ಭಟ್ಟರ ಸ್ಕಾಚ್’ ಓದುತ್ತೇನೆ.

ಆ ಅಂಕಣದ ಆಶಯ ಮತ್ತು ಉತ್ತರದ ಹಿಂದಿರುವ ಹಾಸ್ಯವನ್ನು ಗಮನಿಸಿ. ಹಳ್ಳಿ ಹೆಂಗಸರನ್ನು ಗೇಲಿ ಮಾಡಬೇಕು ಎಂದಿದ್ದರೆ ಲೇಖನವನ್ನೇ ಬರೆಯುತ್ತಿದ್ದರು. ಮೊಸರಲ್ಲಿ ಕಲ್ಲು ಹುಡುಕಿ, ಪರವಾಗಿಲ್ಲ. ಆದರೆ ಬಂಡೆ ಹುಡುಕುವ ಕೆಲಸ ಮಾಡಬಾರದು, ಕೋರ್ಟಿನ ಸಮಯವನ್ನು ಹಾಳು ಮಾಡಬೇಡಿ’ ಎಂದು ಆ ಕೇಸನ್ನು ವಜಾಗೊಳಿಸಿ ಫೈಲನ್ನು ಬಿಸಾಕಿಬಿಟ್ಟರು.

ಇಡೀ ಪ್ರಕರಣದಿಂದ ನನಗೆ ಹೊಸ ನಾಮಕರಣವಾಯಿತು -‘ಬ್ರಾ ಭಟ್ಟ’! ಇದು ‘ಭಟ್ಟರ ಸ್ಕಾಚ್’ ಅಸಲಿ ತಾಕತ್ತು. ನಾನು ಕೆಲವೊಮ್ಮೆ ನನ್ನ ಟೀಕಾಕಾರರಿಗೆ ಪುಟಗಟ್ಟಲೆ ಬರೆಯುವ ಬದಲು, ಈ ಅಂಕಣದಲ್ಲಿ ಒಂದು ಸಾಲಿನಲ್ಲಿ ಉತ್ತರಿಸಿದ್ದಿದೆ. ಒಂದು ಪುಟದಲ್ಲಿ ಬರೆಯುವುದಕ್ಕಿಂತ, ಐದಾರು ಪದಗಳ ಒಂದು ವಾಕ್ಯ ಹೆಚ್ಚು ಪರಿಣಾಮಕಾರಿ ಎಂಬುದು ಎಷ್ಟೋ ಸಲ ಮನವರಿಕೆಯಾಗಿದೆ.

ಹೀಗಾಗಿ ಅನೇಕ ಓದುಗರು ಮುಖಪುಟ ನೋಡಿ, ‘ಭಟ್ಟರ ಸ್ಕಾಚ್’ಗೆ ಬರುತ್ತಾರೆ. (’ನಿಮಗೂ-ಓದುಗರಿಗೂ ಏನು ವ್ಯತ್ಯಾಸ?’ ಎಂಬ ಪ್ರಶ್ನೆಗೆ ನೀಡಿದ ಉತ್ತರ - ’ನಾನು ರಾತ್ರಿ ಸ್ಕಾಚ್ ಹಾಕಿದರೆ (ಬರೆದರೆ), ಓದುಗರು ಬೆಳಗ್ಗೆ ಬೆಳಗ್ಗೆಯೇ ಹಾಕುತ್ತಾರೆ! (ಓದುತ್ತಾರೆ!) ಕನ್ನಡದಲ್ಲಿ ಬೀಚಿ, ರಾಶಿ, ಲಂಕೇಶ್, ರವಿ ಬೆಳಗೆರೆ ಮುಂತಾದ ಹಲವರು ಓದುಗರ ತರಲೆ ಪ್ರಶ್ನೆಗೆ ಕಿಚಾಯಿಸುವ ಉತ್ತರ ಬರೆಯುತ್ತಿದ್ದರು. ಅವರ ಅಂಕಣಗಳು ಬಹಳ ಪ್ರಸಿದ್ಧವಾಗಿದ್ದವು.

ಓದುಗರ ಪ್ರಶ್ನೆಗಳಿಗೆ ನೀಡಿದ ಉತ್ತರಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ತಂದ ಬೀಚಿಯವರ ‘ಉತ್ತರಭೂಪ’ ಈಗಲೂ ಕಚಗುಳಿಯಿಡುವ ಕೃತಿ. ರವಿ ಬೆಳಗೆರೆ ಕೂಡ ‘ಕೇಳಿ’ ಹೆಸರಿನಲ್ಲಿ ತಂದ ಕೃತಿಯೂ ಗಮನಾರ್ಹವೇ. ನನಗೆ ಆದರ್ಶ ‘ಫಿಲಂ ಇಂಡಿಯಾ’ ಮತ್ತು ‘ಮದರ್ ಇಂಡಿಯಾ’ ಪತ್ರಿಕೆಯ ನಿರ್ಭೀತ ಸಂಪಾದಕ ಬಾಬುರಾವ್ ಪಟೇಲ್. ನಾನು ಇವರನ್ನು ಕುರಿತು ‘ಮತ್ತೊಬ್ಬ ಉಕ್ಕಿನ ಮನುಷ್ಯ - ಬಾಬುರಾವ್ ಪಟೇಲ್ ಎಂಬ ಕೃತಿಯನ್ನು ಬರೆದಿದ್ದೇನೆ.

ಅವರ ಪ್ರಶ್ನೋತ್ತರ ಅಂಕಣವನ್ನು ಓದಲೆಂದೇ ಜನ ಪತ್ರಿಕೆಗಳನ್ನು ಖರೀದಿಸುತ್ತಿದ್ದರು. ಅವರು ಪ್ರತಿ ಸಂಚಿಕೆಯಲ್ಲಿ ನೂರಕ್ಕೂ ಹೆಚ್ಚು ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕೆಲವೊಮ್ಮೆ ಅವರ ಪ್ರಶ್ನೋತ್ತರ ಅಂಕಣ ಹತ್ತು ಪುಟಗಳನ್ನು ಮೀರಿ ಹೋಗುತ್ತಿತ್ತು. ಆದರೆ ಅವೆಲ್ಲವೂ highly readable !

ಬಾಬುರಾವ್ ಪಟೇಲ್ ಅಂದಿನ ಪ್ರಧಾನಿ ನೆಹರು ಅವರನ್ನು ಈ ಅಂಕಣದಲ್ಲಿ ಕಟುವಾಗಿ ಟೀಕಿಸು ತ್ತಿದ್ದರು. ನೆಹರು ಅದನ್ನು ತಪ್ಪದೇ ಓದುತ್ತಿದ್ದರು ಮತ್ತು ಎಂಜಾಯ್ ಮಾಡುತ್ತಿದ್ದರು. ಒಮ್ಮೆ ಇಡೀ ಸಂಚಿಕೆಯಲ್ಲಿ ಒಂದೇ ಒಂದು ಪ್ರಶ್ನೆಯೂ ನೆಹರು ಕುರಿತು ಇರಲಿಲ್ಲ. ಅದಕ್ಕೆ ನೆಹರು, ‘ಈ ತಿಂಗಳು ನಾನು ಅಪ್ರಸ್ತುತನಾಗಿದ್ದೇನೆ. ಬಾಬುರಾವ್ ಪಟೇಲ್ ಕೂಡ ನನ್ನನ್ನು ಅವರ ಅಂಕಣದಲ್ಲಿ ಪ್ರಸ್ತಾಪಿಸಿಲ್ಲ’ ಎಂದು ತಮಾಷೆಯಾಗಿ ಹೇಳಿದ್ದರು.

ಕೆಲವು ಪ್ರಶ್ನೋತ್ತರಗಳು : 1. ನೆಹರು ಅವರು ಯಾವಾಗಲೂ ಶಾಂತಿಯ ಬಗ್ಗೆ ಮಾತನಾಡು ತ್ತಾರಲ್ಲ, ಅದಕ್ಕೆ ನಿಮ್ಮ ಅಭಿಪ್ರಾಯವೇನು?

ಪಟೇಲ್: ನೆಹರು ಅವರ ಶಾಂತಿ ಮಂತ್ರವು ಒಬ್ಬ ಶಾಕಾಹಾರಿ ಹುಲಿಯಂತಿದೆ. ಅವರು ಜಗತ್ತಿಗೆ ಶಾಂತಿ ಬೋಧಿಸುತ್ತಾರೆ, ಆದರೆ ದೇಶದ ಗಡಿಗಳನ್ನು ರಕ್ಷಿಸಲು ಮರೆತು ಬಿಡುತ್ತಾರೆ. ಅವರ ಶಾಂತಿ ಪಾರಿವಾಳಗಳು ನಮ್ಮ ದೇಶದ ಭದ್ರತೆಯನ್ನೇ ತಿಂದು ಹಾಕುತ್ತಿವೆ!

  1. ನೆಹರು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ನಾಯಕ ಎಂದು ಕರೆಸಿಕೊಳ್ಳುತ್ತಾರಲ್ಲ?

ಉತ್ತರ: ‘ಹೌದು, ಅವರು ಭಾರತದ ಹೊರಗೆ ಅತ್ಯಂತ ಪ್ರಸಿದ್ಧ ನಾಯಕ ಮತ್ತು ಭಾರತದ ಒಳಗೆ ಅತ್ಯಂತ ಗೊಂದಲಮಯ ನಾಯಕ. ಅವರು ಜಗತ್ತನ್ನು ಸರಿಪಡಿಸಲು ಹೊರಟಿದ್ದಾರೆ, ಆದರೆ ಸ್ವಂತ ಮನೆಯಲ್ಲಿ (ದೇಶದಲ್ಲಿ) ಬೆಂಕಿ ಬಿದ್ದಿರುವುದು ಅವರಿಗೆ ಕಾಣಿಸುತ್ತಿಲ್ಲ.’

  1. ಪಂಡಿತ್ ನೆಹರು ಅವರು ಭಾರತಕ್ಕೆ ನೀಡಿದ ಅತಿದೊಡ್ಡ ಕೊಡುಗೆ ಏನು?

ಉತ್ತರ: ತಮ್ಮ ಶೇರ್ವಾನಿ ಮತ್ತು ಗುಲಾಬಿ ಹೂವಿನ ಮೂಲಕ ಭಾರತದ ಬಡತನವನ್ನು ಬಹಳ ‘ಸ್ಟೈಲಿಶ್’ ಆಗಿ ಜಗತ್ತಿಗೆ ತೋರಿಸಿದ್ದು!

  1. ನೆಹರು ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯೇ?

ಉತ್ತರ: ಖಂಡಿತ ಇದೆ, ಎಲ್ಲಿಯವರೆಗೆ ಜನರೆಲ್ಲರೂ ಅವರ ಮಾತನ್ನು ಒಪ್ಪುತ್ತಾರೋ ಅಲ್ಲಿಯವರೆಗೆ ಮಾತ್ರ ಅವರಿಗೆ ಪ್ರಜಾಪ್ರಭುತ್ವದ ಮೇಲೆ ಅಪಾರ ನಂಬಿಕೆ!

5.ನೆಹರು ಅವರು ತಾವೊಬ್ಬ ಶ್ರೇಷ್ಠ ಇತಿಹಾಸಕಾರ ಎಂದು ಭಾವಿಸುತ್ತಾರಲ್ಲ?

ಉತ್ತರ: ‘ಹೌದು, ಅವರು ಇತಿಹಾಸವನ್ನು ಬರೆಯುವುದರಲ್ಲಿ ಮತ್ತು ಓದುವುದರಲ್ಲಿ ಎಷ್ಟು ನಿಪುಣರೋ, ಅಷ್ಟೇ ವೇಗವಾಗಿ ಇತಿಹಾಸದಿಂದ ಪಾಠ ಕಲಿಯುವುದನ್ನು ಮರೆತು ಬಿಡುವುದರಲ್ಲಿ ಯೂ ನಿಪುಣರು!

ನೆಹರು ಅವರು ಬಾಬುರಾವ್ ಪಟೇಲ್ ಅವರನ್ನು ದ್ವೇಷಿಸಲಿಲ್ಲ. ಅವರ ಬಗ್ಗೆ ಕೋಪಿಸಿಕೊಳ್ಳಲು ಇಲ್ಲ. ಒಮ್ಮೆ ಸಂಸತ್ತಿನ ಮೊಗಸಾಲೆಯಲ್ಲಿ ಪಟೇಲ್ ಎದುರಾದಾಗ ಅವರನ್ನು ಆಲಂಗಿಸಿ ಕೊಂಡರು. ಅದಕ್ಕೆ ಪಟೇಲ್, ‘ನಿಮ್ಮನ್ನು ಆಲಂಗಿಸಿಕೊಳ್ಳುವುದರಲ್ಲಿ ಸಂತೋಷವೂ ಇದೆ, ಆತಂಕವೂ ಇದೆ’ ಎಂದರು. ಅದಕ್ಕೆ ನೆಹರು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಪಟೇಲ್ ಹೇಳಿದ್ದು - ‘ಪ್ರಧಾನಿ ಆಲಂಗಿಸಿದ್ದಕ್ಕೆ ಸಂತೋಷ, ನಿಮ್ಮ ಕಿಸೆಯಲ್ಲಿರುವ ಗುಲಾಬಿ ಚುಚ್ಚಬಹುದೇನೋ ಎಂಬ ಆತಂಕ!’ ಅದನ್ನು ಕೇಳಿ ನೆಹರು ಬಾಯ್ತುಂಬಾ ನಕ್ಕಿದ್ದರು.

ಮೊನ್ನೆ ನಾನು ‘ಭಟ್ಟರ ಸ್ಕಾಚ್’ನಲ್ಲಿ ತಾಳಮದ್ದಳೆ ಅರ್ಥಧಾರಿಯೊಬ್ಬರ ಬಗ್ಗೆ ಬರೆದ ಬರೀ ನಾಲ್ಕು ಪದಗಳ ಉತ್ತರ ಎಷ್ಟೆಲ್ಲ ಚರ್ಚೆಗೆ ಕಾರಣವಾಯಿತಲ್ಲ? ತಮ್ಮನ್ನು ಯಾರೂ ತಮಾಷೆ ಮಾಡಬಾರದು, ಕಾಲೆಳೆಯಬಾರದು, ತಮ್ಮನ್ನು ಜಗದ್ಗುರುಗಳಂತೆ ಸಂಬೋಧಿಸಬೇಕು ಎಂಬ ಯೋಚನೆಯೇ ನಮ್ಮ ಸುತ್ತ ಆವರಿಸಿರುವ ಭಯಾನಕತೆಯನ್ನು ತೋರಿಸುತ್ತದೆ.

ಯಾರಾದರೂ ತಮಾಷೆಗೆ ಕಾಲೆಳೆದಾಗ, ಕೂದಲು (ಜುಟ್ಟು) ಎಳೆಯಲು ಮುಂದಾಗಬಾರದಷ್ಟೇ. ಒಂದು ಖುಷಿ, ಸಂತಸ ಹತ್ತಾಗಲಿ, ಇಪ್ಪತ್ತು ಇಪ್ಪತ್ತಾರು (2026) ಆಗಲಿ!