ಮೂರ್ತಿಪೂಜೆ
ಕಳೆದ ವಾರ ದಿಲ್ಲಿಗೆ ಹೋಗಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಹೀಗೆ ಹೊರಟವರು ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿ ದ್ದಾರೆ.
“ಸರ್, ಕರ್ನಾಟಕದಲ್ಲಿ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಈಗ ಒಪ್ಪಂದದಂತೆ ನನಗೆ ಸಿಎಂ ಹುದ್ದೆ ಸಿಗಬೇಕು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ‘ಒಪ್ಪಂದವೇ ಆಗಿಲ್ಲ’ ಅಂತ ಹೇಳುತ್ತಿದ್ದಾರೆ. ವಿಚಿತ್ರ ಎಂದರೆ ಒಪ್ಪಂದ ಆಗಿದೆಯೋ ಇಲ್ಲವೋ ಅಂತ ವರಿಷ್ಠರು ಕೂಡಾ ಬಾಯಿ ಬಿಡುತ್ತಿಲ್ಲ. ಈಗ ಎಲ್ಲರ ಅನುಮಾನ ಎಂದರೆ, ಒಪ್ಪಂದವೇ ಅಗಿಲ್ಲ ಎಂದಾದರೆ ಸಿಎಂ ಹುದ್ದೆ ಬಿಟ್ಟುಕೊಡಬೇಕು ಅಂತ ಡಿ.ಕೆ.ಶಿವಕುಮಾರ್ ಯಾಕೆ ಪಟ್ಟು ಹಿಡಿಯುತ್ತಾರೆ? ಅದೇ ರೀತಿ ಒಪ್ಪಂದ ಆಗಿಲ್ಲ ಎಂದಾದರೆ ಹೈಕಮಾಂಡ್ ಯಾಕೆ ಸ್ಪಷ್ಟನೆ ಕೊಡುತ್ತಿಲ್ಲ? ಹೀಗಾಗಿ ಈ ವಿಷಯದಲ್ಲಿ ವರಿಷ್ಠರು ಸ್ಪಷ್ಟವಾಗಿ ಮಾತನಾಡಬೇಕು. ಇಲ್ಲದಿದ್ದರೆ ಅಧಿಕಾರ ಹಂಚಿಕೆಯ ಗೊಂದಲದಲ್ಲಿ ಮುಳುಗಿ ನಾವೆಲ್ಲ ಪರದಾಡಬೇಕಾಗುತ್ತದೆ" ಅಂತ ಚಲುವ ರಾಯಸ್ವಾಮಿಯವರು ಹೇಳಿದಾಗ ಖರ್ಗೆಯವರು ಸ್ವಲ್ಪ ಹೊತ್ತು ಮೌನವಾಗಿದ್ದ ರಂತೆ.
ಆನಂತರ ಮೆಲ್ಲಗೆ, ಆದರೆ ಖಡಕ್ಕಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, “ನೋಡಿ ಚಲುವರಾಯಸ್ವಾಮಿ, ರಾಜಕಾರಣದಲ್ಲಿ ಏನು ನಡೆಯಿತು, ಏನು ನಡೆದಿಲ್ಲ ಎಂಬುದಕ್ಕಿಂತ ತುಂಬಾ ತಾಳ್ಮೆಯಿಂದ ಹೆಜ್ಜೆ ಇಡುವುದು ಮುಖ್ಯ. ಇವತ್ತು ಡಿ.ಕೆ.ಶಿವ ಕುಮಾರ್ ಅವರನ್ನು ಸಿಎಂ ಮಾಡಬೇಕು ಅಂತ ಶಾಸಕರ ಗುಂಪು ಬಂದಿತ್ತಲ್ಲ? ಅದರಿಂದ ತುಂಬಾ ಪ್ರಯೋಜನವಿಲ್ಲ. ಯಾಕೆಂದರೆ ರಾಹುಲ್ ಗಾಂಧಿಯವರು ಇಂಥ ಒತ್ತಡಗಳಿಗೆಲ್ಲ ಬಗ್ಗುವುದಿಲ್ಲ. ಈ ಹಿಂದೆ ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ಮಧ್ಯೆ ಇದೇ ರೀತಿಯ ಬಿಕ್ಕಟ್ಟು ಉದ್ಭವಿಸಿತ್ತಲ್ಲ? ಆಗ ಸಚಿನ್ ಪೈಲಟ್ ಅವರು ಕೂಡಾ ಇದೇ ರೀತಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದರು. ಆದರೆ ಸಚಿನ್ ಪೈಲಟ್ ಅವರ ಒತ್ತಡಗಳಿಗೆ ರಾಹುಲ್ ಗಾಂಧಿ ಮಣಿಯಲಿಲ್ಲ.
ಇದನ್ನೂ ಓದಿ: R T Vittalmurthy Column: ಸಿದ್ದು ಸೇಫ್ ಆಗಿದ್ದೇ ಬಿಜೆಪಿಗೆ ಚಿಂತೆ
ಇನ್ ಫ್ಯಾಕ್ಟ್, ಇಂಥ ಒತ್ತಡಗಳಿಗೆ ಮಣಿಯುವ ಜಾಯಮಾನವೇ ರಾಹುಲ್ ಗಾಂಧಿ ಅವರದಲ್ಲ. ಇನ್ನು, ಈ ಬೆಳವಣಿಗೆಗಳ ವಿಷಯದಲ್ಲಿ ಮೇಡಂ ಸೋನಿಯಾ ಗಾಂಧಿ ಯವರು ಮಧ್ಯ ಪ್ರವೇಶ ಮಾಡುವುದಿಲ್ಲ. ಈಗಾಗಲೇ ಇಂಥ ಎಲ್ಲ ವ್ಯವಹಾರಗಳನ್ನು ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಟ್ಟಿರುವುದರಿಂದ ಅವರು ಹೆಚ್ಚು ಉತ್ಸುಕತೆಯನ್ನು ತೋರುವುದೂ ಇಲ್ಲ. ಹೀಗಾಗಿ ನಾಳೆಯೇ ಸಿಎಂ ಆಗಬೇಕು ಅಂತ ಡಿ.ಕೆ. ಶಿವಕುಮಾರ್ ಅವರೇನು ಹೊರಟಿದ್ದಾರೆ, ಅದರ ಬದಲು ಸ್ವಲ್ಪ ದಿನ ಕಾಯಲಿ. ಇಂಥ ವಿಷಯಗಳಲ್ಲಿ ಏನೇ ಹೆಜ್ಜೆ ಇಡಬೇಕೆಂದರೂ ಎಲ್ಲರ ಮನವೊಲಿಸಬೇಕು.
ಇಂಥ ಮನವೊಲಿಕೆಯ ಕಾರ್ಯ ಮುಗಿಯುವವರೆಗೆ ಕಾಯಬೇಕು. ಈ ಕಾರ್ಯ ಹೊಸ ವರ್ಷದ ಹೊತ್ತಿಗಾದರೂ ಆಗಬಹುದು. ಬಜೆಟ್ ಮುಗಿದ ನಂತರವೂ ಆಗಬಹುದು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ದಿನ ತಾಳ್ಮೆಯಿಂದಿರಲಿ" ಅಂತ ಚಲುವರಾಯ ಸ್ವಾಮಿ ಅವರಿಗೆ ವಿವರಿಸಿದ್ದಾರೆ. ಅವರಾಡಿದ ಮಾತು ಕೇಳಿದ ಚಲುವರಾಯಸ್ವಾಮಿ ಅವರು, “ಏನೋ ಗೊತ್ತಿಲ್ಲ ಸರ್, ಆದರೆ ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಲಾಗಿ ಹೋದರೆ ಸಾಕು" ಅಂತ ನಿಟ್ಟುಸಿರು ಬಿಟ್ಟರಂತೆ.
‘ಡಿಕೆಸು’ ನೆತ್ತಿಗೆ ಸಿದ್ದು ಕೈ?
ಕುತೂಹಲದ ಸಂಗತಿ ಎಂದರೆ ಚಲುವರಾಯಸ್ವಾಮಿ ಅವರ ಜತೆ ವಿಮಾನದಲ್ಲಿ ಮಾತನಾಡುತ್ತಾ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ದಿನಗಳ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಬಳಿಯೂ ಇದೇ ಧಾಟಿಯಲ್ಲಿ ಮಾತನಾಡಿದ್ದರಂತೆ. ಮೂಲಗಳ ಪ್ರಕಾರ ದಿಲ್ಲಿಯಲ್ಲಿ ಖರ್ಗೆ ಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಅವರು ನ್ಯಾಯ ಪಂಚಾ ಯ್ತಿಯ ಮಾತನಾಡಿದರಂತೆ.
“ಸರ್, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಯ ವಿಷಯದಲ್ಲಿ ಫೈಟು ನಡೆಯಿತಲ್ಲ? ಆಗ ನೀವು, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಏನು ಮಾತುಕತೆ ನಡೆಯಿತು? ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಲಿ, ಆನಂತರ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಒಂದು ‘ಅಮೈಕಬಲ್ ಸೆಟ್ಲ್‌ಮೆಂಟ್’ ಆಗಿರಲಿಲ್ವಾ? ಈ ಮಾತುಕತೆಯ ನಂತರ ಸಿದ್ದರಾಮಯ್ಯ ಅವರು ನನ್ನ ನೆತ್ತಿಯ ಮೇಲೆ ಕೈ ಇಟ್ಟು ಏನು ಪ್ರಾಮಿಸ್ಸು ಮಾಡಿದ್ರು? ‘ಯೇ ಸುರೇಶ್, ಎರಡೂವರೆ ವರ್ಷ ಆದ ಕೂಡ್ಲೇ ಸಿಎಂ ಹುದ್ದೆ ಬಿಟ್ಟು ಕೊಡ್ತೀನಿ. ಬೇಕಿದ್ರೆ ಇನ್ನೂ ಒಂದು ವಾರ ಮುಂಚೆಯೇ ಬಿಟ್ಟು ಕೊಡ್ತೀನಿ’ ಅಂತ ಹೇಳಿರಲಿಲ್ವಾ? ಇದಾದ ನಂತರವೇ ತಾನೇ ನೀವು ಈ ಕುರಿತು ರಾಹುಲ್ ಗಾಂಧಿಯವರಿಗೆ ವಿವರಿಸಿದ್ದು? ಈ ವಿಷಯವನ್ನು ಇವತ್ತು ವರಿಷ್ಠರು ಯಾರೂ ಮಾತನಾಡದಿದ್ದರೆ ನಾವೇನು ಮಾಡಬೇಕು? ಶಿವಕುಮಾರ್ ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ ತಾನೇ? ಹೀಗಾಗಿ ಅವರಿಗೆ ನ್ಯಾಯ ಕೊಡಿಸಿ" ಎಂದು ಪಟ್ಟು ಹಿಡಿದಿದ್ದಾರೆ.
ಆಗೆಲ್ಲ ಸುರೇಶ್ ಅವರ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು, “ರೀ, ಸ್ವಲ್ಪ ದಿನ ಸುಮ್ಮನಿರ್ರೀ. ಮುಂದಿನ ತಿಂಗಳು ಸಂಸತ್ ಅಧಿವೇಶನ ಪ್ರಾರಂಭವಾಗುತ್ತದೆ. ಆಗ ಬನ್ರೀ. ಏನೇ ವಿಷಯ ಇದ್ದರೂ ರಾಹುಲ್ ಗಾಂಧಿ ಅವರ ಮುಂದೆ ಮಾತನಾಡೋಣ. ಆಗ ಸಿದ್ದರಾಮಯ್ಯ ಅವರೂ ಬರಲಿ. ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ" ಎಂದಿದ್ದಾರೆ. ಆದರೆ ಅವತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಿಂದ ಸಮಾಧಾನಗೊಳ್ಳದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಕುದಿಯುತ್ತಾ ವಾಪಸ್ಸಾಗಿದ್ದಾರೆ.
ಯಾವಾಗ ಅವರು ಕುದಿಯುತ್ತಾ ವಾಪಸ್ಸಾದರೋ, ನಂತರದಲ್ಲಿ ಅವರ ಬಣ ನಂಬರ್ ಗೇಮ್ ಆಟಕ್ಕಿಳಿದಿದೆ. ಇದರ ಭಾಗವಾಗಿ ಶಾಸಕರ ಒಂದು ತಂಡ ಮೊನ್ನೆ ದಿಲ್ಲಿಗೆ ಹೋಗಿ ಪೆರೇಡ್ ಮಾಡಿ ಬಂದಿದೆ.
ಸಿದ್ದು ಪಾಳಯದ ಲೇಟೆಸ್ಟು ಸುದ್ದಿ
ಯಾವಾಗ ಡಿಕೆಶಿ ಬಣ ನಂಬರ್ ಗೇಮ್ ಆಟಕ್ಕಿಳಿಯಿತೋ, ಆಗ ಸಿಎಂ ಸಿದ್ದರಾಮಯ್ಯ ಅವರ ಬಣ ದಿಢೀರನೇ ಎಚ್ವೆತ್ತುಕೊಂಡಿದೆ. ಅಷ್ಟೇ ಅಲ್ಲ, ಈ ನಂಬರ್ ಗೇಮ್ ಆಟದ ವಿವರವನ್ನು ಗಮನಿಸುತ್ತಾ ಕುಳಿತಿದೆ. ಅದಕ್ಕಿರುವ ಸದ್ಯದ ಮಾಹಿತಿಯ ಪ್ರಕಾರ ಡಿಕೆಶಿ ಕ್ಯಾಂಪಿನಲ್ಲಿ ಇಪ್ಪತ್ತಾರು ಶಾಸಕರಿದ್ದಾರೆ. ನಾಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಡಿಕೆಶಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದರೆ ಇಪ್ಪತ್ತಾರು ಶಾಸಕರ ಪೈಕಿ, ಹದಿಮೂರು ಮಂದಿ ಮಾತ್ರ ಡಿಕೆಶಿಯವರ ಹಿಂದೆ ಹೋಗುತ್ತಾರೆ. ಹೀಗಾಗಿ ಡಿಕೆಶಿ ವಿಷಯದಲ್ಲಿ ಯಾವ ಆತಂಕದ ಅಗತ್ಯವೂ ಇಲ್ಲ. ನಾಳೆ ರಾಹುಲ್ ಗಾಂಧಿಯವರು ಕರೆಸಿ ಕೇಳಿದರೆ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದರಾಯಿತು.
ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವ ಬದಲಾವಣೆಯಂಥ ವಿಷಯ ಪ್ರಸ್ತಾಪವಾದರೆ ಈ ಕುರಿತು ವಿವರಿಸಿದರಾಯಿತು. ನಂತರ ಡಿಕೆಶಿ ಮುಖ್ಯವೋ? ಸರಕಾರ ಮುಖ್ಯವೋ? ಅಂತ ಅವರೇ ತೀರ್ಮಾನಿಸಲಿ ಎಂಬ ತೀರ್ಮಾನಕ್ಕೆ ಬಂದಿದೆ. ಕಳೆದ ಶನಿವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕೂಡಾ ಇದೇ ಧಾಟಿಯಲ್ಲಿ ತಮ್ಮ ಅಭಿಪ್ರಾಯ ಹೇಳಿದರಂತೆ.
ಆಗೆಲ್ಲ ಖರ್ಗೆಯವರು, “ಈ ವಿಷಯದಲ್ಲಿ ಹೆಚ್ಚು ಯೋಚಿಸಿ ಮುಂದುವರಿಯೋಣ. ನೀವು ಮಾತ್ರ ಹೈಕಮಾಂಡ್ ಗಮನಕ್ಕೆ ತರದೆ ಯಾವ ನಿರ್ಧಾರನ್ನೂ ತೆಗೆದುಕೊಳ್ಳಬೇಡಿ" ಎಂದಿ ದ್ದಾರೆ ಎಂಬುದು ಸದ್ಯದ ಸುದ್ದಿ.
ಪ್ರಧಾನಿ ಪಾಳಯಕ್ಕೆ ತಲುಪಿದ್ದೇನು?
ಹೀಗೆ ಡಿಕೆಶಿ ಕ್ಯಾಂಪಿನ ನಂಬರ್ ಗೇಮ್ ಶುರುವಾದ ನಂತರ ಸಿದ್ದರಾಮಯ್ಯ ಅವರ ಪಾಳಯಕ್ಕೆ ಒಂದು ಮೆಸೇಜ್ ಹೋಗಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಂದು ಮೆಸೇಜು ತಲುಪಿದೆ.
ಅದರ ಪ್ರಕಾರ, ಸಿಎಂ ಹುದ್ದೆಗೆ ಪಟ್ಟು ಹಿಡಿದು ಕುಳಿತಿರುವ ಡಿ.ಕೆ.ಶಿವಕುಮಾರ್ ಅವರ ಜತೆ ಸದ್ಯಕ್ಕೆ ೩೨ ಶಾಸಕರಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರ ಹಿಂದೆ ೬೦ ಶಾಸಕ ರಿದ್ದಾರೆ. ಹೀಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪಾಳಯದಲ್ಲಿರುವ ಶಾಸಕರನ್ನು ಹೊರತುಪಡಿಸಿಯೂ ನಲವತ್ತು ಮಂದಿ ಶಾಸಕರಿದ್ದಾರಲ್ಲ? ಈ ಪೈಕಿ ಹತ್ತು ಮಂದಿ ಶಾಸಕರನ್ನು ಡಿಕೆಶಿ ತಮ್ಮ ಕಡೆ ಸೆಳೆದುಕೊಂಡರಾಯಿತು.
ಅಲ್ಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಕತೆ ಮುಗಿಸಲು ಅಗತ್ಯವಾದ ಆಟ ಶುರು ವಾಗುತ್ತದೆ. ಅರ್ಥಾತ್, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ವರಿಷ್ಠರು ಒಪ್ಪದಿದ್ದರೆ ಡಿ.ಕೆ.ಶಿವಕುಮಾರ್ ಪಕ್ಷ ತೊರೆಯುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಕೊಡಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದರೆ ಸಿದ್ದರಾಮಯ್ಯ ಬೆಂಬಲಿಗರ ಪಡೆ ಪಕ್ಷ ತೊರೆಯುತ್ತದೆ.
ಹೀಗೆ ಡಿಕೆಶಿ ಕ್ಯಾಂಪೇ ಆಗಲೀ, ಸಿದ್ದರಾಮಯ್ಯ ಕ್ಯಾಂಪೇನ್ ಆಗಲಿ ಹೊರಬಂದರೆ ಆಟ ಶುರುವಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಕತೆ ಖಲಾಸ್ ಆಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿರುವ ಸಂದೇಶ.
ಲಾಸ್ಟ್ ಸಿಪ್: ಅಂದ ಹಾಗೆ, ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಗಾಗಿ ಕದನ ಆರಂಭವಾಗಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಕ್ಯಾಂಪಿನ ಕಣ್ಣು ‘ಜೀಸಿ-ಜಫ್ರು’ ಜೋಡಿ ಯ ಮೇಲೆ ಬಿದ್ದಿದೆ. ಅಂದ ಹಾಗೆ, ಡಿಕೆಶಿ ಕ್ಯಾಂಪಿನಲ್ಲಿ ಇವತ್ತೇನು ನಡೆಯುತ್ತಿದೆ? ಇದಕ್ಕೆ ಹೈಪು ಕೊಡುತ್ತಿರುವುದೇ ದಿಲ್ಲಿಯಲ್ಲಿರುವ ‘ಜೀಸಿ-ಜಫ್ರು’ ಜೋಡಿ ಎಂಬುದು ಸಿದ್ದರಾಮ ಯ್ಯ ಕ್ಯಾಂಪಿನ ಸಿಟ್ಟು. ದಿಲ್ಲಿಯನೇ ನಡೆಯಲಿ, ಈ ‘ಜೀಸಿ-ಜಫ್ರು’ ಜೋಡಿ ಡಿ.ಕೆ.ಶಿವಕು ಮಾರ್ ಅವರಿಗೆ ಮೆಸೇಜು ಕೊಡುತ್ತಾ, “ಅಣ್ಣಾ, ಇಲ್ಲಿ ದಿಲ್ಲಿಯಲ್ಲಿ ಎಲ್ಲ ಸೆಟ್ಲಾಗಿದೆ.
ಪಕ್ಷದ ವರಿಷ್ಠರು ನಿಮ್ಮ ಪರವಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ ಅಧಿಕಾರ ತ್ಯಾಗಕ್ಕೆ ಸಿದ್ಧರಾಗಿ ಎಂದು ಹೇಳಲು ಟೈಮು ಕಾಯುತ್ತಿದ್ದಾರೆ. ಹಾಗಂತ ನಾವು ಸುಮ್ಮನಿರಬಾರದಲ್ಲ? ಹೀಗಾಗಿ ಈಗಿನಿಂದಲೇ ಒತ್ತಡ ಬಿಲ್ಡ ಮಾಡೋಣ" ಅಂತ ಕುಮ್ಮಕ್ಕು ಕೊಡುತ್ತಿರುವುದೇ ಈ ಜೋಡಿ. ಇಲ್ಲಿ ಡಿಕೆಶಿ ಕ್ಯಾಂಪಿನ ಸುದ್ದಿ ಹೈಫಾಗಲೂ ಇದೇ ಜೋಡಿ ಕಾರಣ ಎಂಬುದು ಸಿಎಂ ಸಿದ್ದರಾಮಯ್ಯ ಕ್ಯಾಂಪಿನ ಅನುಮಾನ.