ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಪ್ರತಿಭಟನೆಯಲ್ಲಿ ಸೃಜನಶೀಲತೆ

ಇಂಥದೇ ಘಟನೆ ಸರ್ಬಿಯಾ ದೇಶದಲ್ಲೂ ನಡೆದಿದೆ. ಅಲ್ಲಿನ ನೊವಿಸಾದ್ ಎಂಬ ನಗರದಲ್ಲಿ ನಡೆದ ‘ರಬ್ಬರ್ ಬಾತುಕೋಳಿಗಳ ಕ್ರಾಂತಿ’ ನಾಗರಿಕ ಸಮಾಜಕ್ಕೆ ಒಂದು ಹೊಸ ಪಾಠವನ್ನು ಕಲಿಸಿದೆ. ರಸ್ತೆಯ ಗುಂಡಿಗಳ ಬಗ್ಗೆ ಅಧಿಕಾರಿಗಳ ಮೇಲೆ ಕೂಗಾಡಿ, ಪ್ರತಿಭಟನೆ ಮಾಡುವ ಬದಲು, ಸೃಜನ ಶೀಲತೆ ಮತ್ತು ಹಾಸ್ಯದ ಮೂಲಕ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಅದು ಅದ್ಭುತ ಉದಾಹರಣೆ.

Vishweshwar Bhat Column: ಪ್ರತಿಭಟನೆಯಲ್ಲಿ ಸೃಜನಶೀಲತೆ

-

ಸಂಪಾದಕರ ಸದ್ಯಶೋಧನೆ

ರಸ್ತೆ ಗುಂಡಿಗಳನ್ನು ಕಂಡಾಗ ಜನ ಪ್ರತಿಭಟನೆ ಬದಲು ಗೇಲಿ ಮಾಡುವ ಅಭ್ಯಾಸವನ್ನು ಬೆಳೆಸಿ ಕೊಂಡಿರುವುದು ಸಾಮಾನ್ಯವಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಭತ್ತದ ನಾಟಿ ಮಾಡುವುದನ್ನು ಪ್ರತಿಪಕ್ಷಗಳಿಗೆ ಹೇಳಿಕೊಡಬೇಕಿಲ್ಲ. ಮಾಧ್ಯಮಗಳ ಫೋಟೋಗ್ರಾಫರ್‌ಗಳನ್ನು ಕರೆಯಿಸಿಕೊಂಡು ನಾಟಿ ಮಾಡುವ ಪೋಸು ಕೊಟ್ಟು ಸರಕಾರದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುವುದು ಹೊಸತೇನಲ್ಲ.

ಇಂಥದೇ ಘಟನೆ ಸರ್ಬಿಯಾ ದೇಶದಲ್ಲೂ ನಡೆದಿದೆ. ಅಲ್ಲಿನ ನೊವಿಸಾದ್ ಎಂಬ ನಗರದಲ್ಲಿ ನಡೆದ ‘ರಬ್ಬರ್ ಬಾತುಕೋಳಿಗಳ ಕ್ರಾಂತಿ’ ನಾಗರಿಕ ಸಮಾಜಕ್ಕೆ ಒಂದು ಹೊಸ ಪಾಠವನ್ನು ಕಲಿಸಿದೆ. ರಸ್ತೆಯ ಗುಂಡಿಗಳ ಬಗ್ಗೆ ಅಧಿಕಾರಿಗಳ ಮೇಲೆ ಕೂಗಾಡಿ, ಪ್ರತಿಭಟನೆ ಮಾಡುವ ಬದಲು, ಸೃಜನ ಶೀಲತೆ ಮತ್ತು ಹಾಸ್ಯದ ಮೂಲಕ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಅದು ಅದ್ಭುತ ಉದಾಹರಣೆ. ಸಾಮಾನ್ಯವಾಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದರೆ ನಾವು ಸರಕಾರಕ್ಕೆ ಶಾಪ ಹಾಕುತ್ತೇವೆ ಅಥವಾ ಅಧಿಕಾರಿಗಳ ಜತೆ ಜಗಳವಾಡುತ್ತೇವೆ. ಆದರೆ ಸರ್ಬಿಯಾದ ನಿವಾಸಿಯೊಬ್ಬ ವಿಭಿನ್ನವಾಗಿ ಯೋಚಿಸಿದ.

ಅವನು ರಸ್ತೆಯ ಗುಂಡಿಗಳೊಳಗೆ ಸಣ್ಣ ಸಣ್ಣ ಹಳದಿ ಬಣ್ಣದ ರಬ್ಬರ್ ಬಾತುಕೋಳಿಗಳನ್ನು ಇರಿಸಲು ಪ್ರಾರಂಭಿಸಿದ. ಇದು ಕೇವಲ ಒಂದು ಪ್ರತಿಭಟನೆಯಾಗಿರಲಿಲ್ಲ, ಬದಲಿಗೆ ಜನರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಒಂದು ತಮಾಷೆಯ ಮಾರ್ಗವಾಗಿತ್ತು. ಈ ಪುಟ್ಟ ಬಾತುಕೋಳಿ ಗಳು ಗುಂಡಿಗಳ ಆಳವನ್ನು ತೋರಿಸುವುದರ ಜತೆಗೆ, ರಸ್ತೆಯ ದುಸ್ಥಿತಿಯ ಬಗ್ಗೆ ಮೌನವಾಗಿ ಮಾತನಾಡುತ್ತಿದ್ದವು.

ಇದನ್ನೂ ಓದಿ: Vishweshwar Bhat Column: ಡಾ.ರಾಜಾರಾಮಣ್ಣ ಎಂಬ ನಿತ್ಯ ನೆನಪಿನ ಸ್ಥಾವರ

ಯಾವಾಗ ರಸ್ತೆಯ ಗುಂಡಿಗಳಲ್ಲಿ ಹಳದಿ ಬಾತುಕೋಳಿಗಳು ಪ್ರತ್ಯಕ್ಷವಾದವೋ, ಆಗ ಅಲ್ಲಿನ ದೃಶ್ಯವೇ ಬದಲಾಯಿತು. ಜನರು ಆ ಗುಂಡಿಗಳನ್ನು ನೋಡಿ ಮುಖ ಸಿಂಡರಿಸುವ ಬದಲು, ಅವುಗಳ ಹತ್ತಿರ ನಿಂತು ಫೋಟೋ ತೆಗೆಸಿಕೊಳ್ಳಲು ಆರಂಭಿಸಿದರು. ಶಾಲಾ ಮಕ್ಕಳು ಈ ಬಾತುಕೋಳಿಗಳ ಜತೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಆನ್‌ಲೈನ್‌ನಲ್ಲಿ ಈ ಫೋಟೋಗಳು ವೇಗವಾಗಿ ಹರಡಿದವು. ಇದರಿಂದಾಗಿ ಕೇವಲ ಒಂದು ಓಣಿಯ ಸಮಸ್ಯೆಯಾಗಿದ್ದ ರಸ್ತೆ ಗುಂಡಿ, ಇಡೀ ನಗರದ ಚರ್ಚೆಯ ವಿಷಯವಾಯಿತು. ಸಾಮಾನ್ಯವಾಗಿ ದೂರು ನೀಡಿದಾಗ ವಿಳಂಬ ಮಾಡುವ ನಗರಪಾಲಿಕೆಯ ಕಾರ್ಮಿಕರು, ಈ ಬಾತುಕೋಳಿಗಳ ಪ್ರಸಿದ್ಧಿಯನ್ನು ನೋಡಿ ತಕ್ಷಣ ಎಚ್ಚೆತ್ತುಕೊಂಡರು.

ವೈರಲ್ ಆಗುತ್ತಿರುವ ಫೋಟೋಗಳು ನಗರದ ಆಡಳಿತಕ್ಕೆ ಮುಜುಗರ ತರಬಹುದು ಎಂಬ ಆತಂಕ ಅವರಲ್ಲಿ ಮನೆಮಾಡಿತು. ಪರಿಣಾಮವಾಗಿ, ಬಾತುಕೋಳಿಗಳಿದ್ದ ಗುಂಡಿಗಳು ಇತರ ಗುಂಡಿಗಳಿ ಗಿಂತ ವೇಗವಾಗಿ ಮುಚ್ಚಲ್ಪಟ್ಟವು! ನಗರಪಾಲಿಕೆಯ ಕಾರ್ಮಿಕರು ತಮಾಷೆಯಾಗಿ ಈ ಜಾಗಗಳನ್ನು ‘ಕ್ವಾಕ್ ಜೋನ್’ (ಬಾತುಕೋಳಿ ವಲಯ) ಎಂದು ಕರೆಯಲು ಆರಂಭಿಸಿದರು.

ಇದು ಯಾವುದೇ ಗಲಾಟೆ ಇಲ್ಲದೆ ನಡೆದ ಒಂದು ಮೌನಕ್ರಾಂತಿಯಾಗಿತ್ತು. ಈ ಅಭಿಯಾನವು ಕೇವಲ ಬಾತುಕೋಳಿಗಳಿಗೆ ಸೀಮಿತವಾಗಲಿಲ್ಲ. ಜನರು ಈ ಆಟದಲ್ಲಿ ಭಾಗಿಯಾದಂತೆ ಹೊಸ ಹೊಸ ಆಲೋಚನೆಗಳು ಬಂದವು. ಕೆಲವು ಬಾತುಕೋಳಿಗಳಿಗೆ ಕೂಲಿಂಗ್ ಗ್ಲಾಸ್ ಹಾಕಲಾಯಿತು. ಕೆಲವು ಗುಂಡಿಗಳಲ್ಲಿ ಪ್ಲಾಸ್ಟಿಕ್ ಜಿರಾ-ಗಳು ಮತ್ತು ಇತರ ಆಟದ ಪ್ರಾಣಿಗಳು ಕಾಣಿಸಿಕೊಂಡವು. ಇದು ಕೇವಲ ಗುಂಡಿ ಮುಚ್ಚುವ ಕೆಲಸವಾಗದೇ, ಒಂದು ಕಲಾತ್ಮಕ ಪ್ರತಿಭಟನೆಯಾಗಿ ಮಾರ್ಪ ಟ್ಟಿತು.

ಪ್ರಾದೇಶಿಕ ಮಾಧ್ಯಮಗಳು ಇದನ್ನು ‘ಯುರೋಪಿನ ಅತ್ಯಂತ ಸ್ನೇಹಪರ ಪ್ರತಿಭಟನೆ’ ಎಂದು ಬಣ್ಣಿಸಿದವು. ಈ ಕಲ್ಪನೆಯ ಹಿಂದಿದ್ದ ವ್ಯಕ್ತಿಯ ಉದ್ದೇಶ ಯಾರನ್ನೂ ದೂಷಿಸುವುದಾಗಿರಲಿಲ್ಲ. ‘ಜನರು ಗುಂಡಿಗಳನ್ನು ನಿರ್ಲಕ್ಷಿಸುತ್ತಾರೆ, ಆದರೆ ಹಳದಿ ಬಾತುಕೋಳಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂಬುದು ಅವನ ಸಿದ್ಧಾಂತವಾಗಿತ್ತು.

ಅಧಿಕಾರಿಗಳು ಕೂಡ ಇದನ್ನು ಧನಾತ್ಮಕವಾಗಿ ಸ್ವೀಕರಿಸಿದರು. ಯಾವುದೇ ಕಾನೂನು ಕ್ರಮ ಜರುಗಿ ಸುವ ಬದಲು, ಸಾರ್ವಜನಿಕರ ಸೃಜನಶೀಲತೆ ಯನ್ನು ಮೆಚ್ಚಿ ಕೆಲಸವನ್ನು ಚುರುಕುಗೊಳಿಸಿದರು. ಈ ‘ಬಾತುಕೋಳಿ ಕ್ರಾಂತಿ’ ನಮಗೆ ಒಂದು ಪ್ರಮುಖ ವಿಷಯವನ್ನು ನೆನಪಿಸುತ್ತದೆ. ಅದೇನೆಂದರೆ, ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದಕ್ಕಿಂತ, ಆ ಸಮಸ್ಯೆಯನ್ನು ಎಲ್ಲರಿಗೂ ಕಾಣುವಂತೆ ಮಾಡುವ ಕಲೆ ನಮಗೆ ತಿಳಿದಿರಬೇಕು. ಹಾಸ್ಯ ಮತ್ತು ಸೃಜನಶೀಲತೆ ಎಂಥ ಕಠಿಣ ವ್ಯವಸ್ಥೆಯನ್ನೂ ಮೃದುಗೊಳಿಸಿ ಕೆಲಸ ಮಾಡುವಂತೆ ಮಾಡಬಲ್ಲದು.